ಪಶ್ಚಿಮವಾಹಿನಿಯಲ್ಲಿ ಹೊಳೆದ ಸಾಲೇ `ಕೋಟಿಗೊಬ್ಬ’ನ ಪ್ರೇಮಗೀತೆ!

 

 

ಕಾವೇರಿಗೆ ಕಾಲುಂಗರ ತೊಡಿಸಿ….
ಚಿತ್ರ ಕೋಟಿಗೊಬ್ಬ, ಗೀತರಚನೆ: ಕೆ. ಕಲ್ಯಾಣ್
ಸಂಗೀತ: ದೇವಾ, ಗಾಯನ: ಎಸ್ಪೀಬಿ, ಚಿತ್ರಾ

ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆ ಕೊಡಿಸಿ
ಮಲೆನಾಡಿಗೆ ಮಲ್ಲೆಯನು ಮುಡಿಸಿ
ಪ್ರೀತಿಸುವೆನು ಈ ಜೀವ ಬೆರೆಸಿ
ಓ ಕನ್ನಡದ ಹೆಣ್ಣೇ ನಿನಗೆ ಕೋಟಿನಮನ
ನಮ್ಮ ಪ್ರೀತಿಗೆರಡೇ ಅಕ್ಷರ ಅದರಾಳ ಗೌರಿಶಂಕರ ||ಪ||

ಜಾರೋ ಜಾರೋ ಜಾರೋ ಜೋಗದ ಜಡೆಯಲಿ ಜಾರಲೆ
ಚಿನ್ನಾ ನಿನ್ನ ಕಣ್ಣ ಕೊಡಗಿನ ಕೊಡೆಯಲಿ ಕೂರಲೆ
ನೀನು ನಿಂತಾಗ ಬೇಲೂರಿನಾ ಬೊಂಬೆಯು
ಮೆಲ್ಲ ನಡೆವಾಗ ಮೈ ನೆನೆದ ಆಗುಂಬೆಯು ||೧||

ನಿನ್ನ ಬಣ್ಣಾನೆ ಬಾದಾಮಿ ಚಿತ್ರಾವಳಿ
ನಿನ್ನ ಕಣ್ಣೋಟ ಕಣ್ಸೆಳೆಯೋ ಕರಾವಳಿ
ಪ್ರತಿ ಜನ್ಮ ಪ್ರೀತಿಗಾಗಿ, ಹುಟ್ಟಿ ಬರುವೆ ನನ್ನವನಾಗಿ
ಪ್ರತಿ ಜನ್ಮ ಆಸರೆಯಾಗಿ ಹುಟ್ಟಿ ಬರುವೆ ಹಾಯಾಗಿ
ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ
ನಮ್ಮ ಪ್ರೀತಿಗೆರಡೇ ಅಕ್ಷರ ಅದರಾಳ ಗೌರಿಶಂಕರ ||೨||

ಕಾಡುವ ಹಾಡುಗಳ ಕಥೆಯೇ ಅಷ್ಟು: ಅವು, ಯಾವುದೋ ಸಂದರ್ಭದಲ್ಲಿ, ಹೊತ್ತಲ್ಲದ ಹೊತ್ತಿನಲ್ಲಿ ದಿಢೀರನೆ ಕೈ ಹಿಡಿಯುತ್ತವೆ-ಗೆಳತಿಯ ನೆನಪುಗಳಂತೆ! ನಂತರ ಜತೆಯಲ್ಲೇ ಉಳಿದುಬಿಡುತ್ತವೆ-ಒಂದು ಹಾರೈಕೆಯಂತೆ. ಆಮೇಲೆ ಬಿಟ್ಟೂ ಬಿಡದೆ ನೆನಪಾಗುತ್ತವೆ- ಅವಳ ಮೈಮೇಲಿನ ಮಚ್ಚೆಗಳಂತೆ!
ಒಂದು ಸ್ವಾರಸ್ಯವೆಂದರೆ-ಹೀಗೆ ಅಚಾನಕ್ಕಾಗಿ ಸೃಷ್ಟಿಯಾದ ಹಾಡುಗಳು, ಮುಂದೊಂದು ಸಂದರ್ಭದಲ್ಲಿ ಒಂದು ಸಿನಿಮಾದ ಸನ್ನಿವೇಶಕ್ಕೆ `ಖಡಕ್’ ಎಂಬಂತೆ ಹೊಂದಿಕೊಳ್ಳುತ್ತವೆ. ಆ ಮೂಲಕ, ಇದು ಆಕಸ್ಮಿಕವಾಗಿ ಹುಟ್ಟಿದ ಹಾಡು ಎಂಬ ಸತ್ಯವನ್ನೇ ಸುಳ್ಳಾಗಿಸಿಬಿಡುತ್ತವೆ.
ಹೀಗೆಲ್ಲ ಅಂದುಕೊಂಡು ಹಾಡುಗಳ ಮೋದಕ್ಕೆ ಬೆರಗಾದ ಸಂದರ್ಭದಲ್ಲಿಯೇ ಆಕಸ್ಮಿಕವಾಗಿ ಕೇಳಿಬಂದದ್ದು-`ಕಾವೇರಿಗೆ ಕಾಲುಂಗುರ ತೊಡಿಸಿ…’ ಎಂಬ ಹಾಡು. ಅರೆ, ಈ ಮಧುರ ಹಾಡಿಗೂ ಒಂದು ಹಿನ್ನೆಲೆ ಇದೆಯಾ? ಇದೂ ಒಂದು ಅನಿರೀಕ್ಷಿತ ಸಂದರ್ಭದಲ್ಲೇ ಹುಟ್ಟಿದ್ದಾ? ಅಥವಾ ಕೋಟಿಗೊಬ್ಬ ಚಿತ್ರದ ನಾಯಕಿ `ಪ್ರಿಯಾಂಕ’ರ ಚೆಲುವನ್ನು ಕಣ್ಣಲ್ಲಿ ತುಂಬಿಕೊಂಡೇ ಕಲ್ಯಾಣ್ ಈ ಹಾಡು ಬರೆದ್ರಾ? `ಕೋಟಿಗೊಬ್ಬ’ ಚಿತ್ರದ ನಾಯಕಿಯ ಹೆಸರು ಕಾವೇರಿ ಅಲ್ಲ. ಪ್ರಿಯಾಂಕಾಗೆ ಕಾವೇರಿ ಎಂಬ ಸರ್ನೇಮ್ ಕೂಡ ಇದ್ದಂತಿಲ್ಲ. ಆದರೂ, ಈ ಕಲ್ಯಾಣ್ `ಕಾವೇರಿಗೆ ಕಾಲುಂಗುರ ತೊಡಿಸಿ…’ ಅಂತ ಬರೆದಿದ್ದಾರಲ್ಲ? ಯಾಕೆ? ಕಾವೇರಿ ಅನ್ನೋರು ಕಲ್ಯಾಣ್ ಫ್ರೆಂಡಾ? ಗರ್ಲ್ ಫ್ರೆಂಡಾ?
ಇಂಥದೊಂದು ತುಂಟ ಪ್ರಶ್ನೆಯನ್ನು ಕಲ್ಯಾಣ್ಗೇ ಕೇಳಿದಾಗ ಅವರು ಜೋರಾಗಿ ನಕ್ಕರು. ನಂತರ-`ನಂಗೆ ಅಂಥ ಫ್ರೆಂಡ್ಸು ದೇವರಾಣೆಗೂ ಇಲ್ಲ ಸಾರ್. ಆದರೆ ಈ ಹಾಡಿನ ಹಿಂದೆ ಒಂದು ಕತೆಯಿದೆ. ಅಂದವರೇ ಶುರುಮಾಡಿಯೇ ಬಿಟ್ಟರು. ಆ ಕತೆ ಎಂಥಾದ್ದು ಎಂಬುದನ್ನು ಅವರ ಮಾತಲ್ಲೇ ಕೇಳೋಣವಾಗಲಿ. `ಓವರ್ ಟು ಕಲ್ಯಾಣ್:
***
`ಅದೊಮ್ಮೆ ನಾವು ಗೆಳೆಯರೆಲ್ಲ ಶ್ರೀರಂಗಪಟ್ಟಣಕ್ಕೆ ಜಾಲಿ ಟ್ರಿಪ್ ಹೋಗಿದ್ವಿ. ಪಶ್ವಿಮವಾಹಿನಿ ತಲುಪುವುದರೊಳಗೇ ಎಲ್ಲರಿಗೂ ಒಂಥರಾ ಸುಸ್ತಾಗಿತ್ತು. ಅಲ್ಲಿ ಜುಳು ಜುಳು ಹರಿವ ನೀರು ಕಂಡದ್ದೇ, ಎಲ್ಲರೂ ಖುಷಿಯಾದರು. ಕೆಲವರು ಈಜಿಗಿಳಿದರು. ಕೆಲವರು ಕೈ ಕಾಲು ತೊಳೆದುಕೊಳ್ಳಲು ಮುಂದಾದರು. ಉಳಿದವರು ಹಾಗೇ ಸುಮ್ಮನೆ ಅದೂ ಇದೂ ಮಾತಾಡ್ತಾ ಟೈಮ ಪಾಸ್ ಮಾಡುತ್ತಿದ್ದರು. ಜುಳುಜುಳನೆ ಹರಿಯುತ್ತಿದ್ದ, ಯಾರ ಹಿಡಿತಕ್ಕೂ ಸಿಗದೆ ಹೋಗಿಬಿಡುತ್ತಿದ್ದ ಕಾವೇರಿಯನ್ನು ಕಂಡೊಡನೆ ಈ ನದಿ ನೀರಿಗೆ ಒಂದು ಕಾಲುಂಗುರ ತೊಡಿಸಿದರೆ ಹೇಗೆ ಎಂಬ ಹುಚ್ಚುಚ್ಚು ಯೋಚನೆಯೊಂದು ಬಂತು. ಅದನ್ನೇ ಜತೆಗಿದ್ದ ಗೆಳೆಯರಿಗೆ ಹೇಳಿದೆ.
ನನ್ನ ಮಾತು ಕೇಳಿ ಅವರೆಲ್ಲಾ ಹೊಟ್ಟೆ ತುಂಬಾ ನಕ್ಕು- `ಕಲ್ಪನೆಗೂ ಒಂದು ಮಿತಿ ಬೇಡಾ’ ಎಂದು ಚುಚ್ಚಿದರು. ನಂತರ-` ಈ ಕವಿಗಳ ಸಹವಾಸವೇ ಇಷ್ಟು ಕಣೋ. ಅವರು ಏನೇನೋ ಕಲ್ಪಿಸಿಕೊಳ್ತಾರೆ. ಹೇಗೆ ಎಲ್ಲೋ ಅರ್ಥಮಾಡ್ಕೋತಾರೆ’ ಅಂದರು. ನಂತರ- ಇರಲಿ. ಒಂದು ಪ್ರಶ್ನೆ ಕೇಳ್ತೀವಿ, ಉತ್ತರ ಹೇಳು: ಕಾವೇರಿಗೆ ಕಾಲುಂಗುರ ಹಾಕ್ತೀಯ ಅಂತಾನೇ ಇಟ್ಕೊ. ಬಳೇನ ಯಾರಿಗೆ ಕೊಡಿಸ್ತಿ? ಅಂದರು. ಪ್ರಶ್ನೆ ಛಾಲೆಂಜಿಂಗ್ ಅನ್ನಿಸ್ತು. ತಕ್ಷಣವೇ- `ಕೊಡಚಾದ್ರಿಗೆ ಬಳೆ ತೊಡಿಸ್ತೀನಿ’ ಕಣ್ರೋ ಅಂದುಬಿಟ್ಟೆ.
ತಕ್ಷಣವೇ ಅವರೆಲ್ಲ ಒಂದೇ ಸ್ವರದಲ್ಲಿ-`ಸರಿ ಸರಿ, ಹಂಗೇ ಮಾಡ್ಕೊ ಮಾರಾಯ. ಆದ್ರೆ, ಹೂ ಮುಡಿಸಬೇಕು ಅನ್ನಿಸಿದ್ರೆ ಮಾತ್ರ ನಮ್ಮ ಕಿವಿ ಹುಡುಕಿಕೊಂಡು ಬರಬೇಡ’ ಎಂದು ಕಾಲೆಳೆದರು. ನಾನು ತಕ್ಷಣ- ಇಲ್ಲ. `ನಿಮ್ಮ ತಂಟೆಗೇ ಬರಲ್ಲ. ನಾನು ಮಲೆನಾಡಿಗೆ ಮಲ್ಲೆಯನ್ನು ಮುಡಿಸುತ್ತೇನೆ’ ಅಂದೆ. ಹತ್ತಾರು ನಿಮಿಷದ ನಂತರ ಅದನ್ನೆಲ್ಲ ಮರೆತೂ ಬಿಟ್ಟೆ.
ಪುನಃ ಬೆಂಗಳೂರಿಗೆ ಹಿಂದಿರುಗುವ ಮೊದಲೇ ಗೆಳೆಯರೆಲ್ಲ ಕಲ್ಯಾಣ್-`ಕಾವೇರಿಗೆ ಕಾಲುಂಗುರ ತೊಡಿಸಿ…’ ಅಂದ್ಯಲ್ಲ? ಅದನ್ನೆಲ್ಲ ಇನ್ನೊಂದ್ಸಲ ಹೇಳು ಅಂದರು. ಹೇಳಿದೆ. ಎಲ್ಲರೂ ಒಟ್ಟಾಗಿ- `ಅದ್ಭುತ ಕಲ್ಪನೆ ಕಣೋ. ಸಖತ್ತಾಗಿದೆ’ ಅಂದರು. ತಕ್ಷಣವೇ ಅದನ್ನು ಬರೆದಿಟ್ಟುಕೊಂಡೆ. ಬೆಂಗಳೂರು ತಲುಪಿದ ಮೇಲೆ ಅದಕ್ಕೆ ಒಂದು ರೂಪು ಕೊಟ್ಟೆ. ಹಾಡು ನನ್ನೊಳಗಿತ್ತು. ಗೆಳತಿ ನೆನಪಿನ ಥರಾ….
ಮುಂದೆ `ಕೋಟಿಗೊಬ್ಬ’ ಚಿತ್ರ ಶುರುವಾಯಿತಲ್ಲ? ಅದರ ಗೀತರಚನೆಯ ಹೊಣೆ ನನ್ನ ಪಾಲಿಗೆ ಬಂತು. ಸಂಗೀತ ನಿರ್ದೇಶನ ದೇವಾ ಅವರದು. ಒಂದು ಡ್ಯುಯೆಟ್ ಹಾಡಿಗೆ ಟ್ಯೂನ್ ಕಂಪೋಸ್ ಮಾಡುವ ಉದ್ದೇಶದಿಂದ, ಬೆಂಗಳೂರಿನ ರೇಸ್ ವ್ಯೂ ಹೋಟೆಲಿನಲ್ಲಿ ನಟ ವಿಷ್ಣುವರ್ಧನ್, ನಿರ್ದೇಶಕ ಸೂರಪ್ಪಬಾಬು ಸಂಗೀತ ನಿರ್ದೇಶಕ ದೇವಾ ಒಂದೆಡೆ ಸೇರಿದ್ದರು. ನಾನೂ ಅಲ್ಲಿದ್ದೆ. ಆ ಸಂದರ್ಭದಲ್ಲಿ ದೇವಾ, ಒಂದೆರಡಲ್ಲ ಐದಾರು ಟ್ಯೂನ್ ಕೇಳಿಸಿದರು. ವಿಷ್ಣುವರ್ಧನ್ ಅವರಿಗೆ ಯಾವುದೂ ಒಪ್ಪಿಗೆಯಾಗಲಿಲ್ಲ. ಅವರು-`ಬೇರೆಯದು ಇದ್ರೆ ಹೇಳಿ. ಇದು ಯಾಕೋ ಇಷ್ಟವಾಗಲಿಲ್ಲ’ ಅನ್ನುತ್ತಿದ್ದರು.
ಯಾವ ಟ್ಯೂನ್ ಕೂಡ ಓ.ಕೆ. ಆಗದ್ದರಿಂದ ಬೇಸರಗೊಂಡ ದೇವಾ, ಸ್ವಲ್ಪ ಬ್ರೇಕ್ ತಗೊಳ್ಳೋಣ ಅಂದರು. ನಂತರ- ಒಂದು ಸಿಗರೇಟ್ ಸೇದ್ತೀನಿ ಕಲ್ಯಾಣ್. ಯಾವುದಾದ್ರೂ ಹೊಸ ಟ್ಯೂನ್ ಹೊಳೆಯುತ್ತಾ ನೋಡೋಣ’ ಅಂದರು. ತಕ್ಷಣವೇ ನಾನು-ಸರ್, ಒಂದು ಐಡಿಯಾ ಕೊಡ್ಲಾ?’ ಅಂದೆ. `ಧಾರಾಳವಾಗಿ ಹೇಳಪ್ಪಾ’ ಅಂದರು ದೇವಾ. ಮರುಕ್ಷಣವೇ ಅವರಿಗೆ ಕಾವೇರಿಗೆ ಕಾಲುಂಗುರ ತೊಡಿಸಿ/ಕೊಡಚಾದ್ರಿಗೆ ಕೈ ಬಳೆ ತೊಡಿಸಿ’ಯನ್ನು ಕೇಳಿಸಿದೆ. ಖುಷಿಯಾದ ದೇವಾ, ತಮ್ಮ ಸಹಾಯಕರನ್ನು ಕರೆದು `ಈ ಹಾಡು ಬರ್ಕೋ’ ಅಂದರು.
ನಂತರ ಎಲ್ಲರೂ ವಿಷ್ಣುವರ್ಧನ್ ಬಳಿಗೆ ಹೋದೆವು. ದೇವಾ ಅವರೇ ಮಾತು ಶುರುಮಾಡಿ-ಒಂದು ಹೊಸಾ ಟ್ಯೂನ್ ಮತ್ತು ಹಾಡಿದ ಸಾಲು ರೆಡಿಯಿದೆ’ ಅಂದರು. ಹಿಂದೆಯೇ `ಕಾವೇರಿಗೆ ಕಾಲುಂಗುರ ತೊಡಿಸಿ…’ಎಂದು ಹಾಡಿದರು. ಅದನ್ನು ಕೇಳಿದ್ದೇ ವಿಷ್ಣುವರ್ಧನ್ರ ಮುಖ ಅರಳಿತು. ಗುಡ್. ಚೆನ್ನಾಗಿದೆ. ಮುಂದೆ? ಅಂದರು. ಕೊಡಚಾದ್ರಿಗೆ ಕೈ ಬಳೆ ಕೊಡಿಸಿ…’ ಎಂದಾಗ `ವೆರಿಗುಡ್. ಮುಂದೆ?’ ಅಂದರು ವಿಷ್ಣು. `…ಮಲೆನಾಡಿಗೆ ಮಲ್ಲೆಯನು ಮುಡಿಸಿ’ ಎಂದು ಹೇಳಿದಾಕ್ಷಣ ಖುಷಿಯಾದ ವಿಷ್ಣುವರ್ಧನ್, ಹಾಡು ಮತ್ತು ಟ್ಯೂನ್ ಎರಡೂ ಅದ್ಭುತ ಎಂದರು. ನಂತರ, ಯಾವುದೋ ಲಹರಿಯಲ್ಲಿ ತೇಲಿಹೋಗಿ ಇದು ಲವ್ಸಾಂಗ್ ತಾನೆ? ಪಲ್ಲವಿಯಲ್ಲಿ `ನನ್ನ ಪ್ರೀತಿಗೆರಡೇ ಅಕ್ಷರ/ ಅದರಾಳ ಗೌರಿಶಂಕರ’ ಎಂದು ಸೇರಿಸಿ.ಪ್ರೀತಿಯ ಅರ್ಥ ಗೌರಿಶಂಕರ ಪರ್ವತದ ಎತ್ತರಕ್ಕಿಂತಲೂ ಮಿಗಿಲಾದದ್ದು ತಾನೆ? ಎಂದರು. ಹಾಗೇ ಮಾಡಿದ್ದಾಯಿತು.
ನೋಡನೋಡುತ್ತಿದ್ದಂತೆಯೇ ಹಾಡು ಸಿದ್ಧವಾಯಿತು. ಎಸ್ಪಿ ಬಾಲಸುಬ್ರಹ್ಮಣ್ಯಂ ಅದನ್ನು ಹಾಡಿದ್ದೂ ಆಯಿತು. ಇಡೀ ಹಾಡಿಗೆ ಒಂದು ಅರ್ಥ ನೀಡುವ, ಸನ್ನಿವೇಶದ ತೀವ್ರತೆ ಹೆಚ್ಚಿಸುವ ನಾಯಕಿಯಿಂದಲೂ ಒಂದು ಸಾಲು ಹೇಳಿಸಿದರೆ ಚೆನ್ನಾಗಿರುತ್ತೆ’ ಎಂಬ ಯೋಚನೆ ಕಡೆಯಲ್ಲಿ ಬಂತು. `ತಕ್ಷಣವೇ-`ನಿನ್ನ ಹೃದಯ ಕರ್ನಾಟಕದ ಭೂಪಟ’ ಎಂದು ಸೇರಿಸಿ, ಅದನ್ನು ಚಿತ್ರಾರಿಂದ ಹಾಡಿಸಿದ್ದಾಯಿತು…..
***
ಇಷ್ಟು ಹೇಳಿ ಮಾತು ನಿಲ್ಲಿಸಿದರು ಕಲ್ಯಾಣ್. ಅಲ್ಲಿಗೆ, ಕಾವೇರಿ ಅಂದರೆ ಕಲ್ಯಾಣ್ ಗೆಳತಿಯಲ್ಲ ಎಂಬುದು ಗ್ಯಾರಂಟಿಯಾಗಿತ್ತು. ಹಿಂದೆಯೇ ಕಾಡುವ ಹಾಡುಗಳ ಹಿಂದೆ ಒಂದೊಂದು ಚೆಂದದ ಕಥೆ ಇದ್ದೇ ಇರುತ್ತೆ ಎಂಬ ಮಾತು ನೂರಾ ಒಂದನೇ ಬಾರಿಗೂ ನಿಜವಾಗಿತ್ತು.

Advertisements

1 Comment »

  1. 1
    ಬಿ.ಕಟ್ಟಿಮನಿ 45E Says:

    ಪ್ರಿಯಮಣಿಕಾಂತ್ ಸರ್.
    ಮತ್ತೊಂದು ಹಾಡಿನ ಜಾಡನ್ನು ಬಿಡಿಸಿದ್ದಿರಿ, ನನ್ನ ದ್ರುಷ್ಟಿಯಲ್ಲಿ ಈ ಅಂಕಣ ಓಪೆಡ್ ಪುಟಕ್ಕಿಂತ ಸಾಪ್ತಾಯಿಕ ವಿಜಯಕ್ಕೆ ಸೂಕ್ತವೆನಿಸುತ್ತದೆ.ರಾಜ್ಯದ ಎಲ್ಲ ಆವೃತಿಗಳಲ್ಲಿ ಪ್ರಕಟವಾದರೆ ಉಪಯುಕ್ತವಾಗುತ್ತದೆ..

    ಬಿ.ಕಟ್ಟೀಮನಿ 45E


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: