ಅವಳ ಕತೆ ಕಾಡಿನಂತೆ, ಹಾಡಿನಂತೆ

kate

ಹೆಣ್ಣು ಮಗು ಕಣಪ್ಪಾ ..ಅನ್ನುತ್ತಾ ಹೊರಬಂದಳು ಸೂಲಗಿತ್ತಿ.
ಅವಳ ಮಾತಲ್ಲಿ ಕಂಡೂ ಕಾಣದಂತಿದ್ದ `ಥತ್ತೇರಿಕೆ’ ಎಂಬ ಭಾವವನ್ನು ತಿರಸ್ಕಾರದಿಂದ ನೋಡಿದ ಬನಿಕಾಂತ, ಅವಸರದಿಂದಲೇ ಒಳಕೋಣೆಗೆ ಹೋದ. ಆ ಕ್ಷಣಕ್ಕೇ ಕಾದಿದ್ದಂತೆ- ಅಮ್ಮನ ಮಡಿಲಲ್ಲಿದ್ದ ಆ ಮಗು ಇಷ್ಟಗಲ ಕಣ್ಬಿಟ್ಟು ಮೆಲ್ಲನೆ ನಕ್ಕಿತು. ಬನಿಕಾಂತ ಹೆಂಡತಿಯತ್ತ ಸಂತೃಪ್ತಿಯಿಂದ ನೋಡಿದ. ಅವಳ ಮೊಗದಲ್ಲಿ ಆ ಕ್ಷಣಕ್ಕೆ ಬೆಳದಿಂಗಳಿತ್ತು. ಇವನು ಮತ್ತೆ ಅದೇ ಖುಷಿಯಿಂದ ಜಿಬಜಿಬ ಎನ್ನುತ್ತಿದ್ದ ಆ ಕಂದಮ್ಮನ ಕೆನ್ನೆ ತಟ್ಟಿದ. ಕೈ ಮುಟ್ಟಿದ. ನೈಸ್ ನೈಸ್ ಎಂಬಂತಿದ್ದ ಅಂಗಾಲುಗಳನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಂಡ. ಬನಿಕಾಂತನ ಈ ವರ್ತನೆಯಿಂದ ಖುಷಿಯಾಯ್ತು ಎಂಬಂತೆ ಆ ಕಂದಮ್ಮ ಬೊಚ್ಚು ಬಾಯಲ್ಲಿ ಮತ್ತೆ ಮತ್ತೆ ನಕ್ಕಿತು. ಅವನು ಸುಮ್ಮನೇ ಒಮ್ಮೆ ಚಿಟಿಕೆ ಹೊಡೆದರೂ ಸಾಕು-ಮಗು, ತಿರುತಿರುಗಿ ನೋಡುತ್ತಿತ್ತು. ಅಚ್ಚರಿಯೆಂಬಂತೆ, ತಮಾಷೆಗೂ ಆ ಮಗು ಕಿರ್ರೋ… ಎಂದು ಅಳಲಿಲ್ಲ. ಕಣ್ಣಲ್ಲೇ ಮಾತಾಡುವ ಆ ಮಗುವಿಗೆ ಮೊದಲೇ ನಿರ್ಧರಿಸಿದ್ದಂತೆ-ಬನಿಕಾಂತ, ಸಭಾಷಿಣಿ ಎಂದು ಹೆಸರಿಟ್ಟ! `ಸು’ ಎಂಬ ಅಕ್ಷರದಿಂದ ಶುರುವಾಗುವ ಹೆಸರುಗಳ ಮೇಲೆ ಅವನಿಗೆ ಅದೇನೋ ಮೋಹವಿತ್ತು. ಹಾಗೆಂದೇ ಸುಭಾಷಿಣಿಗಿಂತ ದೊಡ್ಡವರಿಗೆ ಸುಕೇಶಿನಿ, ಸುಹಾಸಿನಿ ಎಂದಾತ ಹೆಸರಿಟ್ಟಿದ್ದ.
ಮುಂದೆ-ಸುಭಾಷಿಣಿ ಎಂಬುದು ಮನೆ ಮಂದಿಯ ಬಾಯಲ್ಲಿ `ಸುಭಾ’ ಎಂದಾಯಿತು. ಸುಭಾಷಿಣಿ ಎಂದರೆ- ಸುಮಧುರವಾದ ಕಂಠಸಿರಿ ಹೊಂದಿದವಳು. ಸುಲಲಿತವಾಗಿ, ಸುಂದರವಾಗಿ ಮಾತಾಡುವವಳು ಎಂದರ್ಥ. ಆದರೆ ಈ `ಸುಭಾ’ಳ ಹಣೆಯಲ್ಲಿ ವಿಧಿ ಮಾತುಗಳನ್ನೇ ಬರೆದಿರಲಿಲ್ಲ. ಅವಳು ಹುಟ್ಟಾ ಮೂಕಿ. ಮಗಳು ಮೂಗಿ ಎಂದು ತಿಳಿದಾಕ್ಷಣ ಬನಿಕಾಂತನ ಹೆಂಡತಿ ತತ್ತರಿಸಿ ಹೋದಳು. ಮಗಳೇನೋ ಬೊಂಬೆ, ಬೊಂಬೆಗಿಂತ ಸುಂದರವಾಗಿದ್ದಾಳೆ. ಆದರೆ ಮಾತೇ ಬರುವುದಿಲ್ಲ ಅಂದ ಮೇಲೆ ಸೌಂದರ್ಯವಿದ್ದು ಏನುಪಯೋಗ ಎಂಬುದು ಅವಳ ಲೆಕ್ಕಾಚಾರ. ಈ ಕಾರಣದಿಂದಲೇ ಸುಭಾಳಿಗೆ ಹೆತ್ತಮ್ಮನೇ ಮೊದಲ ಶತ್ರುವಾದಳು. ಒಂದು ಸಂತೋಷವೆಂದರೆ- ಈ ಮೂಗಿ ಮಗಳನ್ನು ಬನಿಕಾಂತ ವಿಪರೀತ ಹಚ್ಚಿಕೊಂಡಿದ್ದ. ತನ್ನ ಜೀವಕ್ಕಿಂತ ಮಿಗಿಲಾಗಿ ಅವಳನ್ನು ಪ್ರೀತಿಸುತ್ತಿದ್ದ.
ಬನಿಕಾಂತನಿದ್ದುದು ಕೋಲ್ಕತ್ತಾಗೆ ಸಮೀಪದ ಒಂದು ಹಳ್ಳಿಯಲ್ಲಿ. ಮೀನು ಹಿಡಿಯುವುದು ಅವನ ಕಸುಬಾಗಿತ್ತು. ಅವನು ಮನೆಯಿಂದ ಹೊರಬಿದ್ದ ತಕ್ಷಣವೇ ಅಮ್ಮನ ಚುಚ್ಚುಮಾತು ಶುರುವಾಗುತ್ತಿತ್ತು. ಅದಕ್ಕೆ ಸುಹಾಸಿನಿ, ಸುಕೇಶಿನಿಯರೂ ಸಾಥ್ ನೀಡುತ್ತಿದ್ದರು. ಮನೆ ಮಂದಿಯ ಈ ವರ್ತನೆಯಿಂದ ಬೇಸತ್ತು ಈ ಸುಭಾಷಿಣಿ ಹೊರಗೆ ಬಂದರೆ-ಊರಿನ ಮಂದಿಯ ಈಟಿಯಂಥ ನೋಟ, ಚುಚ್ಚು ಮಾತುಗಳು ಇದಿರಾಗುತ್ತಿದ್ದವು. ತಾವು ಹೇಗೆಲ್ಲ ಟೀಕಿಸಿದರೂ ಈ ಹುಡುಗಿ ತಿರುಗಿ ಮಾತಾಡುವುದಿಲ್ಲ ಎಂದು ಗೊತ್ತಾದ ಮೇಲಂತೂ ಆ ಜನ ಲಂಗುಲಗಾಮಿಲ್ಲದೆ ಮಾತಾಡಲು ಶುರು ಮಾಡಿದರು. ಕೆಲವರು ಇವಳ ದುರಾದೃಷ್ಟದ ಬದುಕನ್ನು ಹತ್ತೂರಿಗೂ ಕೇಳಿಸುವಂತೆ ವರ್ಣಿಸಿ ಕಡೆಗೊಮ್ಮೆ- `ಪಾಪಕಣ್ರೀ’ ಎಂದು ಲೊಚಗುಡುತ್ತಿದ್ದರು. ಇನ್ನು ಕೆಲವರು- `ಹಿಂದಿನ ಜನ್ಮದಲ್ಲಿ ಏನೋ ಮಾಡಬಾರದ್ದು ಮಾಡಿದಾಳೆ ಕಣ್ರೀ ಇವಳೂ… ಅದಕ್ಕೇ ದೇವರು ಈ ಜನ್ಮದಲ್ಲಿ ಶಿಕ್ಷೆ ಕೊಟ್ಟಿದ್ದಾನೆ’ ಎನ್ನುತ್ತಾ ಅವಳ ಸಂಕಟದ ಬದುಕಿಗೆ ಜನ್ಮಾಂತರದ ಕಾರಣ ಹೇಳಿಬಿಡುತ್ತಿದ್ದರು.
ಇಂಥ ಅಸಡ್ಡೆಯ ಮಾತು ಕೇಳಿದಾಗಲೆಲ್ಲ ಸುಭಾಷಿಣಿಗೆ ದುಃಖ ಉಮ್ಮಳಿಸಿ ಬರುತ್ತಿತ್ತು. ಆಗೆಲ್ಲ ಅವಳು ಸೀದಾ ದನಕರುಗಳಿದ್ದ ಕೊಠಡಿಗೆ ಬಂದು ಬಿಡುತ್ತಿದ್ದಳು. ಅಲ್ಲಿ ಸೊಕ್ಕಿನ ಟಗರಿತ್ತು. ಚಂಗಚಂಗನೆ ಜಿಗಿಯುವ ಕುರಿ, ಮೇಕೆಗಳಿದ್ದವು. ಮಗುವಿನ ಅಂಗಾಲಿನಷ್ಟೇ ನುಣುಪಿನ ಆಕಳ ಕರುವಿತ್ತು. ಸ್ವಾರಸ್ಯವೆಂದರೆ ಬನಿಕಾಂತನ ಮನೆಯ ನಾಯಿ-ಬೆಕ್ಕುಗಳೂ ಈ ಜಾನುವಾರುಗಳೊಂದಿಗೇ ಠಿಕಾಣಿ ಹೂಡುತ್ತಿದ್ದವು. ಒಂದ ಹಿಡಿ ಸಂತೋಷವಾದರೆ; ಹಾಗೆಯೇ ದುಃಖವಾದರೆ ಕೂಡ-ಸುಭಾಷಿಣಿ ಈ ಮೂಕ ಪ್ರಾಣಿಗಳಿದ್ದಲ್ಲಿಗೆ ಓಡಿ ಬರುತ್ತಿದ್ದಳು. ಇವುಗಳನ್ನು ಕಂಡದ್ದೇ ಆಕೆಯ ಕಂಗಳು ತುಂಬಿಕೊಳ್ಳುತ್ತಿದ್ದವು. ಅಷ್ಟೆ, ನೀನು ಅಳಬಾರದು ಗೆಳತೀ ಎನ್ನುವಂತೆ, ತಕ್ಷಣವೇ ಅಷ್ಟೂ ಮೂಕ ಪ್ರಾಣಿಗಳು ಸುಭಾಷಿಣಿಯ ಸುತ್ತ ಸೇರುತ್ತಿದ್ದವು. ಆಕಳ ಕರುವಂತೂ ಆಕೆಯ ಕಂಬನಿ ಕೆನ್ನೆಗಿಳಿಯುವ ಮೊದಲೇ ಅದನ್ನು ನೆಕ್ಕಿಕೊಂಡು ಬಿಡುತ್ತಿತ್ತು. ಬೆಕ್ಕು, ನಾಯಿಗಳು ಅವಳ ಕೊರಳಿಗೆ ಮುಖವುಜ್ಜುತ್ತ ತಾವೂ ಕಣ್ತುಂಬಿಕೊಳ್ಳುತ್ತಿದ್ದವು. ಆಕಳಂತೂ ಸುಭಾಳ ಕಂಬನಿ ಕಂಡಾಕ್ಷಣ `ಅಂಬಾ’ ಎನ್ನುತ್ತಾ ತಾನೂ ಕಂಬನಿ ಮಿಡಿಯುತ್ತಿತ್ತು. ಒಂದೇ ಮಾತಲ್ಲಿ ಹೇಳುವುದಾದರೆ, ಇವಳ ಮೌನ ಭಾಷೆಯ ದುಃಖಕ್ಕೆ ಆ ಪ್ರಾಣಿಗಳೆಲ್ಲ ತಮ್ಮದೇ ಭಾಷೆಯಲ್ಲಿ ಸಾಂತ್ವನ ಹೇಳುತ್ತಿದ್ದವು.
***
ಈ ಮಧ್ಯೆ ಸುಭಾ ದೊಡ್ಡವಳಾದಳು. ಮೊದಲೇ ಸುಂದರಿ. ಪ್ರಾಯದ ಕಾರಣದಿಂದಾಗಿ ಈಗ ಮೊದಲಿಗಿಂತ ಹತ್ತು ಪಟ್ಟು ಮುದ್ದಾಗಿ ಕಾಣತೊಡಗಿದ್ದಳು. ಆ ವೇಳೆಗೆ, ಇದ್ದ ಆಸ್ತಿಯನ್ನೆಲ್ಲ ಮಾರಿ, ಒಂದಿಷ್ಟು ಸಾಲವನ್ನೂ ಮಾಡಿ ಬನಿಕಾಂತ ಇಬ್ಬರು ಹೆಣ್ಣು ಮಕ್ಕಳ ಮದುವೆ ಮುಗಿಸಿದ್ದ. ಉಳಿದಿದ್ದವಳು ಸುಭಾಷಿಣಿ. ಅವಳು ಮೂಗಿಯೆಂಬುದು ಸುತ್ತಲಿನ ಹತ್ತೂರಿಗೂ ಗೊತ್ತಿದ್ದರಿಂದ ಹೆಣ್ಣು ಕೇಳಲು ಯಾರೊಬ್ಬರೂ ಬರಲಿಲ್ಲ. ಇಂಥ ಸಂದರ್ಭದಲ್ಲಿ ಬನಿಕಾಂತನ ಹೆಂಡತಿ, ಮಗಳ ಮೇಲೆ ಮೇಲಿಂದ ಮೇಲೆ ಕೆಂಡ ಕಾರುತ್ತಿದ್ದಳು. `ಯಾಕಾದ್ರೂ ಹುಟ್ಟಿದೆಯೋ ನಮ್ಮ ಮನೇಲಿ? ನೀನೊಂದು ದೊಡ್ಡ ಭಾರ ನಮಗೆ’ ಎಂದು ಚುಚ್ಚಿ ಮಾತಾಡುತ್ತಿದ್ದಳು. ಇಂಥ ಸಂದರ್ಭದಲ್ಲೆಲ್ಲ ಬನಿಕಾಂತ ಮಗಳನ್ನು ಬಾಚಿ ತಬ್ಬಿಕೊಂಡು ನೀನು ನನ್ನ ದೇವರು ಕಂದಾ. ಅವಳ ಮಾತಿಗೆ ಚಿಂತಿಸಬೇಡ. ತುಟಿಯ ಅಲುಗಾಟದಲ್ಲಿಯೇ ಏನೇನೋ ಹೇಳುತ್ತಿದ್ದ ಮಗಳನ್ನೇ ಆರ್ದ್ರವಾಗಿ ನೋಡುತ್ತಾ ಕಂಬನಿ ಮಿಡಿಯುತ್ತಿದ್ದ.
ಮನೆಯಲ್ಲಿದ್ದರೆ, ಅಮ್ಮನ ಕೆಟ್ಟ ಮಾತು ಕೇಳಬೇಕಾಗುತ್ತೆ ಅನ್ನಿಸಿದಾಗ ಸುಭಾಷಿಣಿ ಜಾನುವಾರುಗಳೊಂದಿಗೆ ನದೀ ತೀರಕ್ಕೆ ಹೋಗಿ ಬಿಡುತ್ತಿದ್ದಳು. ಆ ಮೂಕ ಪ್ರಾಣಿಗಳೊಂದಿಗೆ ಇಡೀ ದಿನ ಕಣ್ಣಲ್ಲೇ ಮಾತಾಡುತ್ತಿದ್ದಳು. ಈ ಸಂದರ್ಭದಲ್ಲೇ ಅದೊಂದು ಮಧ್ಯಾಹ್ನ ಮೀನು ಹಿಡಿಯಲೆಂದು ಬಂದಿದ್ದ ಪಕ್ಕದೂರಿನ ಆ ಸುಂದರಾಂಗ ಪರಿಚಯವಾದ. ಅವನ ಹೆಸರು ಪ್ರತಾಪ್.
ಮೊದಲ ಭೇಟಿಯಲ್ಲೇ ಸುಭಾಷಿಣಿಯ ಒಳ್ಳೆಯತನ, ಅವಳ ದೌರ್ಬಲ್ಯಗಳೆರಡೂ ಪ್ರತಾಪನಿಗೆ ತಿಳಿದುಹೋದವು. ಆಕೆ ಅಮಾಯಕಿ ಮತ್ತು ಅಸಹಾಯಕಿ ಎಂಬುದನ್ನು ಆತ ಬೇಗನೆ ಅರ್ಥಮಾಡಿಕೊಂಡ. ಆಕೆಗೆ ಸಮಾಧಾನ ಹೇಳಿದ. ಸಂತೈಸಿದ. ನಂತರ-ಇನ್ಮೇಲೆ ಒಂದು ದಿನವೂ ತಪ್ಪದೇ ಇದೇ ನದೀ ತೀರಕ್ಕೆ ಬರುತ್ತೇನೆ. ನಿನ್ನ ಬೆಳದಿಂಗಳಂಥ ನಗೆ ನೋಡಲಿಕ್ಕೆ ಅಂದ. ಹಾಗೆಯೇ ನಡೆದುಕೊಂಡ. ಈ ಹುಡುಗಿ ಸುಭಾಷಿಣಿ, ಪ್ರತಿ ಮಧ್ಯಾಹ್ನವೂ ಆಗಸದೆಡೆಗೆ ಕೈ ಜೋಡಿಸಿ- `ನಮ್ಮ ಪ್ರತಾಪನಿಗೆ ಜಾಸ್ತಿ ಮೀನು ಸಿಗಲಿ ಭಗವಂತಾ’ ಎಂದು ಬೇಡುತ್ತಿದ್ದಳು. ಕಾಕತಾಳೀಯವೆಂಬಂತೆ, ಅವಳು ಕೈ ಜೋಡಿಸಿದ ಮರುಕ್ಷಣವೇ ಇವನ ಬಲೆಯ ತುಂಬ ಮೀನು ಬಿದ್ದಿರುತ್ತಿದ್ದವು. ಈ ಹುಡುಗಿಯ ಮೇಲೆ ಪ್ರತಾಪ ಅದೆಂಥ ಪ್ರೀತಿ ಇಟ್ಟಿದ್ದನೆಂದರೆ- ಉಳಿದಂತೆ ತಾನೂ `ಸುಭಾ’ ಎಂದರೆ ಅದರಲ್ಲಿ ವಿಶೇಷವೇನಿದೆ ಅನ್ನಿಸಿ, ತನ್ನದೇ ಭಾಷೆಯಲ್ಲಿ ಅವಳನ್ನು `ಸು’ ಎಂದಷ್ಟೇ ಕರೆಯುತ್ತಿದ್ದ. ದಿನ ದಿನವೂ ಅವರ ಮಧ್ಯೆ ಮೌನವೆಂಬುದು ಮಾತಾಗಿ ಹರಿಯುತ್ತಿತ್ತು; ಝರಿಯಂತೆ!
ಹೀಗಿರುವಾಗಲೇ ಬನಿಕಾಂತನ ಬಳಿ ಬಂದ ಒಂದಿಬ್ಬರು -ಬೆಳೆದ ಮಗಳನ್ನು ಅದೆಷ್ಟು ದಿನ ಅಂತ ಮನೇಲಿ ಇಟ್ಕೋತೀಯ? ಸುತ್ತಲಿನ ಜನರಂತೂ ಇವಳನ್ನು ಮದುವೆಯಾಗಲ್ಲ. ಒಂದು ಕೆಲಸ ಮಾಡು. ಸೀದಾ ಕೋಲ್ಕತ್ತೆಗೆ ಹೋಗು. ಅಲ್ಲಿ ಯಾರಾದ್ರೂ ಗಂಡುಗಳು ಸಿಗಬಹುದು ಎಂದು `ಬುದ್ಧಿ’ ಹೇಳಿದರು. ಮಗಳನ್ನು, ಕಾಣದ ಊರಲ್ಲಿ ಬಿಟ್ಟು ಬರಲು ಬನಿಕಾಂತ ಒಪ್ಪಲಿಲ್ಲ. ಆದರೆ ಅವನ ಹೆಂಡತಿ ಬಿಡಲಿಲ್ಲ.
ಕಡೆಗೊಮ್ಮೆ, ಬೆಳದಿಂಗಳನ್ನೂ ನಾಚಿಸುವಂಥ `ಸುಭಾ’ ಎಂಬ ಹುಡುಗಿ ಅಪ್ಪ-ಅಮ್ಮನೊಂದಿಗೆ ಕೋಲ್ಕತ್ತಾಗೆ ಹೊರಟು ನಿಂತಳು. ಆಗ, ಅದೇ ನದೀ ದಡದ ಬಂಡೆಯ ಮರೆಯಲ್ಲಿ ನಿಂತು `ಹೋಗುವ ಮುನ್ನ ನನಗೆ ವಿದಾಯದ ಒಂದು ಮಾತನ್ನೂ ಹೇಳುವುದಿಲ್ಲವೇ?’ ಎಂಬಂತೆ ನೋಡುತ್ತಾ ಪ್ರತಾಪ, ಮೆಲುದನಿಯಲ್ಲಿ ಕೂಗಿದ. ಅವಳು ಏನೆಂದು ಹೇಳಿಯಾಳು? ವೇದನಾಪೂರ್ವಕ ನೋಟವೊಂದನ್ನು ಅವನೆಡೆಗೆ ಬೀರಿದಳು. ಅವನು, ನೀರಿನಿಂದ ಹೊರಬಿದ್ದ ಪುಟ್ಟ ಮೀನಿನಂತೆ ಲಟಪಟಿಸಿ ಹೋದ. ಇದನ್ನು ಕಂಡವಳು ದೊಡ್ಡ ಸಂಕಟದಿಂದ ಚೀರಬೇಕು- ಅಷ್ಟರಲ್ಲೇ ಓಡೋಡಿ ಬಂದ ಆಕಳ ಕರು, ಅಂಬಾ ಎಂದು ಚೀರಿ, ಅವಳುದ್ದಕ್ಕೂ ನಿಂತು, ಕೆನ್ನೆ ಮೇಲಿನ ಕಂಬನಿಯನ್ನು ಸಿಕ್ಕಿಕೊಂಡು ಅಲ್ಲೇ ನಿಂತಿತು; ಟಾಟಾ ಮಾಡುವ ಕಂದಮ್ಮನಂತೆ!
***
ಕೋಲ್ಕತ್ತೆಯ ಬಂಧುಗಳ ಮನೆಯಲ್ಲಿ ಠಿಕಾಣಿ ಹೂಡಿ ವಾರವೂ ಕಳೆದಿರಲಿಲ್ಲ. `ಗಂಡು’ ಎಂಬುವನೊಬ್ಬ ಬಂದ. ಅವನಿಗೆ ವಿದೇಶದಲ್ಲಿ ನೌಕರಿಯಿತ್ತು. ಸುಭಾಷಿಣಿಯನ್ನು ಕಂಡವನೇ-ಯಾರೊಬ್ಬರಿಗೂ ಎರಡನೇ ಮಾತಾಡಲು ಬಿಡದೆ- `ಹುಡುಗಿ ನನಗೆ ಒಪ್ಪಿಗೆಯಾಗಿದ್ದಾಳೆ. ವಾರದೊಳಗೆ ಮದುವೆ ಮಾಡಿಕೊಡಿ’ ಅಂದೇಬಿಟ್ಟ. ಸುಭಾಷಿಣಿಯ ಅಪ್ಪನೂ, ಬಂಧುವೂ ಏನೋ ಹೇಳಲು ಹೋದರೆ- `ಯಾರೂ ಏನೂ ಹೇಳೋದು ಬೇಡಾ. ಒಂದು ವೇಳೆ ಈ ಹುಡುಗಿಯಲ್ಲಿ ಒಂದಿಷ್ಟು ತೊಂದರೆ ಇದ್ದರೂ ನಾನು ಕೇರ್ ಮಾಡೋದಿಲ್ಲ. ನಂಗೆ ಒಪ್ಪಿಗೆಯಾಗಿದೆ. ಡೌರಿ ಗಿವ್ರಿ ಬೇಕಿಲ್ಲ. ಬೇಗ ಮದುವೆ ಮಾಡಿಕೊಡಿ. ಇವಳನ್ನು ವಿದೇಶಕ್ಕೆ ಕರ್ಕೊಂಡು ಹೋಗ್ತೀನಿ’ ಅಂದ ಆ ಪುಣ್ಯಾತ್ಮ.
ವಾಸ್ತವ ಏನೆಂದರೆ- ಅಪ್ಸರೆಯನ್ನೂ ನಾಚಿಸುವಂತಿದ್ದ ಸುಭಾಷಿಣಿಯ ಚೆಲುವು, ಅವಳ ಮೌನ, ಏನೇನೋ ಹೇಳುತ್ತಿದ್ದ ಅವಳ ಕಣ್ಣ ಭಾಷೆ- ಆ ಮದುಮಗನನ್ನು ಮರುಳು ಮಾಡಿತ್ತು. ಅಂಥ ಅನುರೂಪದ ಸುಂದರಿಯೊಂದಿಗೆ ಬೇಗ ಏಕಾಂತದ ಜಾಗಕ್ಕೆ ಹಾರಿಹೋಗಬೇಕು. ಅಲ್ಲಿ, ಇಡೀ ದಿನ, ಇಡೀ ತಿಂಗಳು, ಇಡೀ ವರ್ಷ ಮಾತಾಡುತ್ತ, ನಗುತ್ತ, ನಗಿಸುತ್ತ, ಅವಳನ್ನು ಪ್ರೀತಿಸುತ್ತ, ಮೋಹಿಸುತ್ತ, ಆರಾಧಿಸುತ್ತ ಕಾಲ ಕಳೆದು ಬಿಡಬೇಕು- ಎಂದಾತ ಲೆಕ್ಕ ಹಾಕಿದ್ದ.
ನೋಡನೋಡುತ್ತಲೇ ಆ ಸಿರಿವಂತ- ಸುಭಾಷಿಣಿಯ ಮದುವೆ ನಡೆದೇ ಹೋಯಿತು. ವಿದೇಶಕ್ಕೆ ಹೋಗುವ ಮುನ್ನ ಈ ಸುಭಾ ಓಡೋಡಿ ಬಂದು ಅಪ್ಪನ ತೆಕ್ಕೆಗೆ ಬಿದ್ದಳು ನೋಡಿ- ಆಗಂತೂ ಈ ಬನಿಕಾಂತ, ಅಮ್ಮನನ್ನೇ ಕಳೆದುಕೊಂಡವನಂತೆ ಗೋಳಾಡಿಬಿಟ್ಟ. ಆ ಘಳಿಗೆಯಲ್ಲಿ ಸುಭಾಷಿಣಿಯ ಅಮ್ಮನ ಕಂಗಳಲ್ಲೂ ನೀರಾಡಿದವು.
ಮದುವೆಯ ಖುಷಿ ಸುಭಾಷಿಣಿಯೊಂದಿಗೆ ತುಂಬ ದಿನ ಇರಲಿಲ್ಲ. ಹೆಂಡತಿಯೊಂದಿಗೆ ವಿದೇಶಕ್ಕೆ ಹೋದ ಹುಡುಗನಿಗೆ ತನ್ನ ಕನಸಿನ ಕನ್ಯೆ ಮೂಗಿ ಎಂದು ತಿಳಿದಾಗ ಭ್ರಮ ನಿರಸನವಾಯಿತು. ಆತ ಹೋದಷ್ಟೇ ಬೇಗ ಮರಳಿಬಂದ. ಸುಭಾಷಿಣಿಯ ತಂದೆಯನ್ನೂ, ಬಂಧುವನ್ನೂ ಒಮ್ಮೆ ಕೆಕ್ಕರಿಸಿ ನೋಡಿ `ಮೂಗೀನ ಕೊಟ್ಟು ಮೋಸ ಮಾಡ್ತೀರೇನ್ರೋ…’ ಎಂದೆಲ್ಲ ಹಾರಾಡಿ ಹೋದ. ನಂತರದ ನಾಲ್ಕೇ ದಿನಗಳಲ್ಲಿ ಆತ ಇನ್ನೊಬ್ಬಳನ್ನು ಮದುವೆಯಾದ ಸುದ್ದಿ ಬಂತು!
ಇಷ್ಟಾದ ಮೇಲೆ ಮಾಡುವುದೇನು? ಸುಭಾ ಮತ್ತೆ ತನ್ನೂರಿಗೆ ಮರಳಿ ಬರುತ್ತಾಳೆ. `ಸುಭಾ’ಳ ಮದುವೆಯಾಯ್ತು ಎಂದು ತಿಳಿದಾಕ್ಷಣವೇ ಪ್ರತಾಪನೂ ಊರು ಬಿಟ್ಟು ಅದೆಲ್ಲೋ ಹೋಗಿಬಿಟ್ಟಿದ್ದಾನೆ. ಪರಿಣಾಮ, ಇವಳೆದೆಯ ತುಂಬಾ ಸಂಕಟವಿದೆ. ಆದರೆ ಸಮಾಧಾನ ಹೇಳುವವನೇ ಇಲ್ಲ. ಅದು ಗೊತ್ತಾದ ಮೇಲೆ ತನ್ನ ದುಃಖವನ್ನು ಮೌನ ಭಾಷೆಯಲ್ಲಿ ದಿನವೂ ಹೇಳುತ್ತಾಳೆ- ತನ್ನ ಪ್ರೀತಿಯ ಬೆಕ್ಕಿಗೆ, ನಾಯಿಗೆ, ಟಗರಿಗೆ, ಆಕಳಿಗೆ ಮತ್ತು ನೀರೊಳಗಿನ ಮೀನಿಗೆ… ಇವಳ ಸದ್ದಿಲ್ಲದ ಮಾತು ಕೇಳಿ ಅವೂ ಕಂಬನಿ ಮಿಡಿಯುತ್ತವೆ. ಅವಳ ಕೊರಳಿಗೆ ಮುಖ ಉಜ್ಜುತ್ತ ಸಮಾಧಾನ ಹೇಳುತ್ತವೆ.
***
ಇದು, ವಿಶ್ವಕವಿ ರವೀಂದ್ರನಾಥ ಟ್ಯಾಗೋರರ `ಸುಭಾಷಿಣಿ’ ಕತೆಯ ಭಾವಾನುವಾದ. ಈ ಕತೆಯ ಬಗ್ಗೆ ಗಮನ ಸೆಳೆದವನು ಕವಿಮಿತ್ರ ಚಿದಾನಂದ ಸಾಲಿ. ಅವನಿಗೆ ನಮಸ್ಕಾರ. ಟ್ಯಾಗೋರರಿಗೂ….

5 Comments »

 1. 1
  ಬಿ, ಕಟ್ಟಿಮನಿ 45E Says:

  ಪ್ರಿಯ ಮಣಿಕಾಂತ್ ಸರ್.

  ಇದೊಂದು ಅನುಪಮ ಭಾವಾನುವಾದ. 8thರಲ್ಲೋ 9thರಲ್ಲೋ ನಮ್ಮ ಇಂಗ್ಲೀಷ್ ಅಧ್ಯಾದಲ್ಲಿ ಓದಿದ ನೆನಪು. ಠಾಗೂರರೆಂದರೆ ಗೀತಾಂಜಲಿಮಾತ್ರ.ಅದು ಇಂಗ್ಲೀಷರ ಸ್ತುತಿಯೆಂಬ ಭ್ರಮೆಯಲ್ಲಿ ಬದುಕುತಿದ್ದವನಿಗೆ ಅವರೆಡೆಗೆ ಹೆಮ್ಮೆ ಮೂಡುಂತಾಗಿದೆ. ಠಾಗೂರರ ಗಧ್ಯದ ಕನ್ನಡಾನುವಾದದ ಬಗ್ಗೆ ಸಾದ್ಯವಾದರೆ ತಿಳಿಸಿ,ಅನುವಾದ ಪ್ರಕಾರದಲ್ಲಿ ಮೂಲ ಆಶಯಕ್ಕೆ ಭ್ರಮನಿರಸವಾದದ್ದೆ ಹೆಚ್ಚು,ಯಂಡಮೂರಿ ಕನ್ನಡಕ್ಕೆಬಂದು ಬೆಳಗೆರೆ,ವಂಶಿ,ಸರಿತಾ.ರಾಜ ಚಂಡೂರ್, ಆರ್,ವಿ ಕಟ್ಟಿಮನಿ. ಇವರಲ್ಲಿಯೇ ಭಿನ್ನತೆಯನ್ನು ಕಾಣಬಹುದು, ಅವಸರದಲ್ಲೆ ಜನ್ಮತಾಳಿದರಂತೆ ಬದುಕುತ್ತಿರುವ ನಮಗೆ ‘ಗೀತಾಂಜಲಿ’ಮೂಲಓದಿಗಾಗಿ ಪಾ.ವೇಂ.ಆಚಾರ್ಯರರು ಬಂಗಾಳಿ ಕಲಿತಿದ್ದರಂತೆ!!! ನಮಗೆ ಸಾದ್ಯವಾ ಸರ್, ಮನದಲ್ಲಿ ಮಸುಕು ಮಸುಕಾಗಿದ್ದ ಸುಭಾಷಣಿ ಚಿತ್ರಕ್ಕೆ ಹೊಚ್ಚ ಹೊಸ ಫ್ರೇಮ್ ತೊಡಿಸಿದ್ದಕ್ಕೆ ಧನ್ಯವಾದ. ಪುಸ್ತಕಮಾಡಿದ್ದಾದರೆ ಸುಭಾಷಣಿಯು ಅದರಲ್ಲಿರಲಿ..

  ನಿಮ್ಮ ಕಟ್ಟಿಮನಿ 45E

 2. 2

  Akkareya Kattimani,
  nimma abhimanada maatugalige thanx.
  manikanth.

 3. 3

  ನನಗೂ ಅಷ್ಟೆ.. ಎಲ್ಲೋ ಓದಿದಂತೆ ಭಾಸವಾಯಿತು.. ಈಗ ಕಟ್ಟಿಮನಿ ಅವರು ಹೇಳಿದ ಮೇಲೆಯೇ ನೆನಪಾಗಿದ್ದು ಪ್ರುಧಶಾಲೆಯಲ್ಲಿ ಓದಿದ್ದು ಎಂದು!
  ಚೆನ್ನಾಗಿ ಅನುವಾದಿಸಿದ್ದೀರಿ, ಅಭಿನಂದನೆಗಳು 🙂

 4. 4

  ಪ್ರೌಢಶಾಲೆ — ಬೆರಳಚ್ಚು ದೋಷ 🙂

 5. 5

  ಪ್ರೌಢಶಾಲೆ — ಬೆರಳಚ್ಚು ದೋಷ 🙂


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: