ಅವನೇ ನನ್ನ ಗಂಡ ಎಂದಳಾಕೆ

untitled2

ಮದುವೆಯ ಐದನೇ ವಾರ್ಷಿಕೋತ್ಸವಕ್ಕೆ ಇನ್ನು ಒಂದೇ ವಾರ ಬಾಕಿಯಿತ್ತು. ಅದೇ ಖುಷಿಯಲ್ಲಿದ್ದ ಹೆಂಡತಿ-ಗಂಡನಿಗೆ ಏನಾದರೂ ಸರ್‌ಪ್ರೈಜ್ ಗಿಫ್ಟ್ ನೀಡುವ ನಿರ್ಧಾರಕ್ಕೆ ಬಂದಳು. ಪತಿದೇವರಿಗೆ ಯಾವ ಉಡುಗೊರೆ ಕೊಟ್ಟರೆ ಚೆಂದ ಎಂದು ಇಡೀ ದಿನ ಯೋಚಿಸಿ ಹಣ್ಣಾದವಳಿಗೆ-ವಿಶೇಷವಾಗಿ ವಿನ್ಯಾಸ ಮಾಡಿಸಿದ ಕುರ್ತಾ- ಪೈಜಾಮ ಕೊಡುವುದೇ ಸರಿ ಅನ್ನಿಸಿತು.
ತಕ್ಷಣವೇ ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್‌ಗೆ ಬಂದು ನಲವತ್ತೆಂಟು ಷೋರೂಮ್‌ಗಳಲ್ಲಿ ಹುಡುಕಿ ಕಡೆಗೂ ಒಂದು ಲಕಲಕಲಕ ಎಂಬಂಥ ಡ್ರೆಸ್ ತಗೊಂಡೇಬಿಟ್ಟಳು ಸುಂದರಾಂಗಿ. ಅದನ್ನು ಜಂಭದಿಂದಲೇ ಹತ್ತಾರು ಮನೆಯವರಿಗೆ ತೋರಿಸಿದಾಗ- ಅದಕ್ಕೆ ಫಳಫಳ ಎನ್ನುವ ಆರೇಳು ಗುಂಡಿಗಳನ್ನು ಮತ್ತೆ ಹಾಕಿದರೆ- ಡ್ರೆಸ್‌ನ ಚೆಲುವು ಇಮ್ಮಡಿಯಾಗುತ್ತೆ ಎಂಬ ಸಲಹೆ ಬಂತು.
ಸರಿ, ಮರುದಿನವೇ ತೋಟದ ಮನೆಯ ಬಾವಿಯ ಪಕ್ಕ ಕೂತು ಇವಳು ಆ ಕುರ್ತಾಕ್ಕೆ ಗುಂಡಿ ಹಾಕುತ್ತಿದ್ದಾಗಲೇ ಅನಾಹುತ ನಡೆದು ಹೋಯಿತು. ಇವಳು ಯಾವುದೋ ಲಹರಿಗೆ ಬಿದ್ದು ಆಕಾಶ ನೋಡಿಕೊಂಡು ಗುಂಡಿ ಹಾಕುತ್ತಿರುವಾಗ, ಅಕಸ್ಮಾತ್ ಕೈ ಜಾರಿ, ಅಷ್ಟೂ ಗುಂಡಿಗಳು ಕುರ್ತಾದ ಸಮೇತ ಬಾವಿಗೆ ಬಿದ್ದು ಹೋದವು.
ತಕ್ಷಣವೇ ಇವಳು ಭೂಮಿ-ಆಕಾಶ ಒಂದಾಗುವಂತೆ ಬೊಬ್ಬೆ ಹಾಕಿದಳು. ಯಾರಾದ್ರೂ ಬಂದು ಸಹಾಯ ಮಾಡೀ… ಎಂದು ಚೀರಿಕೊಂಡಳು. ನಂತರದ ನಿಮಿಷದಲ್ಲಿ ಪವಾಡ ನಡೆದೇ ಹೋಯಿತು. ಕೈ ಕೊಡವಿ ಹೋದವಳು ದಿಢೀರನೆ ಮನಸ್ಸು ಬದಲಿಸಿ ಬರ್‍ತಾಳಲ್ಲ? ಹಾಗೆ ಅವಳ ಮುಂದೆ ದೇವರು ಪ್ರತ್ಯಕ್ಷನಾಗಿದ್ದ. `ನಾನು ಸಹಾಯ ಮಾಡ್ತೀನಿ. ನಿನ್ನ ಕಷ್ಟವೇನು ಹೇಳಮ್ಮಾ’ ಅಂದ.
ಇವಳು ನಡೆದದ್ದನ್ನೆಲ್ಲ ಹೇಳಿದಳು. ತಕ್ಷಣವೇ ನೀರೊಳಗೆ ಕೈಹಾಕಿ ಮಾಯ ಮಂತ್ರ ಮಾಡಿದ ದೇವರು ನಂತರ ಮುಷ್ಟಿ ಬಿಡಿಸಿದರೆ-ಅಲ್ಲಿ ಕುರ್ತಾ ಇತ್ತು. ಜತೆಗೆ ೨೪ ಕ್ಯಾರೆಟ್ ಚಿನ್ನದಿಂದ ತಯಾರಾದ ಗುಂಡಿಗಳೂ ಇದ್ದವು. `ತಗೋಮ್ಮಾ’ ಅಂದ ದೇವರು.
`ಉಹುಂ, ನಾನು ಬೀಳಿಸಿದ ಡ್ರೆಸ್ಸು-ಗುಂಡಿಗಳು ಇವಲ್ಲ’ ಅಂದಳೀಕೆ.
ಹೌದಾ? ಎಂದ ದೇವರು, ಮತ್ತೆ ಬಾವಿಯೊಳಗೆ ಕೈ ಮುಳುಗಿಸಿ ಮುಷ್ಟಿ ಬಿಡಿಸಿದ: ಅಲ್ಲಿ ಆಕರ್ಷಕ ವಿನ್ಯಾಸದ ಕುರ್ತಾದೊಂದಿಗೆ ಪ್ಯೂರ್ ಬೆಳ್ಳಿಯ ಗುಂಡಿಗಳಿದ್ದವು.
`ಉಹುಂ, ಇದೂ ಇಲ್ಲ’ ಅಂದಳೀಕೆ.
`ಹೌದಾ? ಎಂದು ಬೆರಗಿನಿಂದ ಕೇಳಿದ ದೇವರು – ಮತ್ತೆ ನೀರೊಳಗೆ ಕೈ ಹಾಕಿ ಮುಷ್ಟಿ ಬಿಡಿಸಿದರೆ-ಅಲ್ಲಿ ಅವಳು ತಂದಿದ್ದ ಕುರ್ತಾ ಹಾಗೂ ಗಾಜಿನ ಗುಂಡಿಗಳಿದ್ದವು.
ಅವುಗಳನ್ನು ಕಂಡದ್ದೇ ಅವಳ ಕಣ್ಣು ಅರಳಿದವು. `ಹೌದು ಭಗವಂತಾ. ನಾನು ಬೀಳಿಸಿದ್ದು ಇದೇ ಇದೇ’ ಎಂದು ಅಕ್ಷರಶಃ ಚೀರಿಯೇ ಬಿಟ್ಟಳು.
ದೇವರಿಗೆ ಅವಳ ಪ್ರಾಮಾಣಿಕತೆ ಇಷ್ಟವಾಯಿತು. ಆಕೆಗೆ ಚಿನ್ನ, ಬೆಳ್ಳಿಯ ಗುಂಡಿಗಳಿದ್ದ ಕುರ್ತಾಗಳನ್ನೂ ಉಡುಗೊರೆಯಾಗಿ ನೀಡಿ-ನಿನ್ನ ಪ್ರಾಮಾಣಿಕತೆಗೆ ಇದು ಉಡುಗೊರೆ. ತಗೊಂಡು ಹೋಗು, ಖುಷಿಯಾಗಿರು’ ಅಂದ.
***
ಮದುವೆಯ ವಾರ್ಷಿಕೋತ್ಸವ ಮುಗಿದು ಮೂರು ದಿನ ಕಳೆದಿತ್ತು. ಇವಳು ಗಂಡನೊಂದಿಗೆ ಹರಟುತ್ತಾ ಅದೇ ತೋಟದ ಮನೆಯ ಬಾವಿ ಬಳಿ ಬಂದಳು. ಆಗಲೇ ಮತ್ತೊಂದು ಅನಾಹುತ ನಡೆದೇಹೋಯಿತು. ಇವಳು ಹೇಳಿದ ಯಾವುದೋ ಜೋಕ್‌ಗೆ ಗಹಗಹಿಸಿ ನಗುತ್ತಿದ್ದ ಪತಿರಾಯ ಅಕಸ್ಮಾತ್ ಕಾಲು ಜಾರಿ ಬಾವಿಗೆ ಬಿದ್ದು ಮುಳುಗೇ ಹೋದ.
ತಕ್ಷಣವೇ ಈಕೆ ಬೊಬ್ಬೆ ಹಾಕಿದಳು. ಆಶ್ಚರ್ಯವೆಂಬಂತೆ ಆಗಲೂ ದೇವರು ಪ್ರತ್ಯಕ್ಷನಾದ. ಇವಳ ಗೋಳಾಟಕ್ಕೆ ಕಾರಣ ಕೇಳಿ- ಹೆದರಬೇಡ, ನಾನಿದ್ದೇನೆ ಎಂದವನೇ ಮಣಮಣಮಣ ಮಂತ್ರ ಹೇಳಿ ಬಾವಿಯೊಳಗೆ ಕೈ ಹಾಕಿ ತೆಗೆದರೆ- ಬಂದವನು ಸಲ್ಮಾನ್‌ಖಾನ್! ಅವನನ್ನು ತೋರಿಸಿದ ದೇವರು `ಇವನಾ ನಿನ್ನ ಗಂಡ’ ಎಂದು ಪ್ರಶ್ನಿಸಿದ. ಈ ಹೆಂಗಸು ಖುಷಿಯಿಂದ `ಹೌದು ಭಗವಂತಾ, ಇವನೇ. ಇವನೇ ನನ್ನ ಗಂಡ’ ಅಂದೇಬಿಟ್ಟಳು!
ಈ ಮಾತು ಕೇಳಿದ್ದೇ-ದೇವರಿಗೆ ಸಖತ್ತಂದ್ರೆ ಸಖತ್ ಸಿಟ್ಟು ಬಂತು. ಆ ಹೆಂಗಸನ್ನೇ ಕೆಕ್ಕರಿಸಿ ನೋಡುತ್ತಾ ದೇವರು ಹೀಗೆಂದ: `ಎಲ ಎಲಾ ಹೆಂಗಸೇ, ಇದೆಂಥ ದುರಾಸೆ ನಿನ್ನದು? ಇವನು ನೋಡಿದರೆ ಸಲ್ಮಾನ್‌ಖಾನ್. ಇವನನ್ನೇ ನನ್ನ ಗಂಡ ಅಂತಿದೀಯಲ್ಲ…’
ದೇವರು ಇನ್ನೂ ಅದೇನೇನು ಬೈಯುತ್ತಿದ್ದನೋ ಕಾಣೆ. ಅದಕ್ಕೂ ಮೊದಲೇ ಈ ಹೆಂಗಸು ಕೈ ಮುಗಿದು ಹೀಗೆಂದಳು: ಭಗವಂತಾ, ಒಂದು ನಿಮಿಷ ನಾನು ಹೇಳೋದು ಕೇಳು. ಒಂದು ವೇಳೆ ನಾನು ಸಲ್ಮಾನ್‌ಖಾನ್‌ನನ್ನು- ಇವ ನನ್ನ ಗಂಡ ಅಲ್ಲ ಅಂದಿದ್ರೆ, ನೀನು ಏನ್ಮಾಡ್ತಿದ್ದೆ ಹೇಳು? ಇನ್ನೊಮ್ಮೆ ಬಾವಿಯೊಳಗೆ ಕೈ ಹಾಕಿ ಅಮೀರ್‌ಖಾನ್‌ನನ್ನು ತೆಗೀತಿದ್ದೆ. ಅವನನ್ನೂ ನಾನು ನಿರಾಕರಿಸಿದ ನಂತರವಷ್ಟೇ ನನ್ನ ಒರಿಜಿನಲ್ ಗಂಡನನ್ನು ತೋರಿಸ್ತಿದ್ದೆ. ನಾನು ಆಗ ಖುಷಿಯಿಂದ- `ಹೌದ್ ಹೌದೂ, ಇವ್ನೆ, ಇವ್ನೇ ನನ್ನ ಗಂಡ ಅಂದಿದ್ರೆ-ಭೇಷ್ ಮಗಳೇ, ನಿನ್ನ ಪ್ರಾಮಾಣಿಕತೆಗೆ ಮೆಚ್ಚಿದೆ. ನಿನ್ನ ಗಂಡನ ಜತೆಗೆ ಈ ಇಬ್ಬರನ್ನೂ ನಿನಗೇ ಕೊಡ್ತಾ ಇದೀನಿ. ಕರ್ಕೊಂಡು ಹೋಗು’ ಅಂದೇಬಿಡ್ತಿದ್ದೆ. ಆದ್ರೆ ಭಗವಂತಾ, ನಾನು ಒಬ್ಬನನ್ನು ಸಂಭಾಳಿಸೋದೇ ಕಷ್ಟ. ಹಾಗಿರುವಾಗ ಈ ಮೂವರನ್ನೂ ಕಟ್ಕೊಂಡು ಹೇಗಪ್ಪಾ ಹೆಣಗಲಿ? ಹಾಗೇನೂ ಆಗದಿರಲಿ ಅಂತಾನೇ ಸಲ್ಮಾನ್‌ಖಾನೇ ನನ್ನ ಗಂಡ ಅಂದೇಬಿಟ್ಟೆ. ಈಗ ಹೇಳು, ನಾನು ಹೇಳಿದ್ದರಲ್ಲಿ ತಪ್ಪಿದೆಯಾ ಅಂದಳು.
ದೇವರು, ತಕ್ಷಣವೇ ಅವಳ ಒರಿಜಿನಲ್ ಗಂಡನನ್ನು ಬಾವಿಯಿಂದ ತೆಗೆದು ನಿಲ್ಲಿಸಿ, ಸಲ್ಮಾನ್‌ಖಾನ್ ಸಮೇತ ಮಾಯವಾದ!

2 Comments »

 1. hi manikanth,
  chikka vaysinalli kelida adbutha annabahudaada kathegalannu remake maduvalli neevu siddahastharu.nimma kathanavaligalu heege saagali endu haaraisuve.kathe remake maaduva badalu nimmade swantha kathegalige pramukhyathe kodi. nimma baravanige bahala super aagide. naannu nimma fan aagi hode.innashtu niriksheyondige kayuthene….
  free idre nanna blog annu nodi..
  http://pushpaknada.blogspot.com
  have a good day.

 2. 2

  ನಾನೂ ಇದೆ ಥರ ಒಂದು ರಿಮೇಕ್ ಕಥೆ ಕೇಳಿದ್ದೆ.. ಏನು ಅಂತ ಮರ್ತು ಹೋಗಿದೆ 😦
  ನೀವು ಬರೆದಿರುವುದು ಸಖತ್ತಾಗಿದೆ 🙂


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: