ನಮ್ಮ ನಿಮ್ಮೊಳಗೊಬ್ಬ…ಒಬಾಮಾ

barack_obama

ಯಾರೂ ನಂಬಲಾಗದಂಥ ಪವಾಡವೊಂದು ಅಮೆರಿಕದಲ್ಲಿ ನಡೆದು ಹೋಗಿದೆ. ಅಲ್ಲಿನ ಅಧಿಕಾರದ ಕೇಂದ್ರವಾದ ಶ್ವೇತಭವನದ ೨೩೪ ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕಪ್ಪು ಬಣ್ಣದ ಅಧ್ಯಕ್ಷರೊಬ್ಬರು ಯಜಮಾನರಾಗಿ ಪ್ರವೇಶಿಸುತ್ತಿದ್ದಾರೆ. ಆ ವ್ಯಕ್ತಿಯ ಹೆಸರು ಈಗ ಜಗತ್ತಿಗೇ ಚಿರಪರಿಚಿತವಾದ ಬರಾಕ್ ಹುಸೇನ್ ಒಬಾಮಾ.
ಹೆಸರು ಕೇಳಿದಾಕ್ಷಣ ಈತ ಕ್ರಿಶ್ಚಿಯನ್‌ನೋ ಅಥವಾ ಮುಸ್ಲಿಮನೋ ಎಂದು ಯೋಚಿಸುವಂತೆ ಮಾಡುವ ಬರಾಕ್ ಹುಸೇನ್ ಒಬಾಮಾ ಹುಟ್ಟಿದ್ದು ೧೯೬೧ರಲ್ಲಿ, ಹವಾಯ್ ದ್ವೀಪ ಸಮೂಹದಲ್ಲಿ. ಈತನ ತಂದೆ ಒಬ್ಬ ಮುಸ್ಲಿಮ್. ತಾಯಿ, ಜಕಾರ್ತಾದ ಬೆಡಗಿ. ಕೀನ್ಯಾದಿಂದ ಅಮೆರಿಕಕ್ಕೆ ಒಂದು ವಿದ್ಯಾರ್ಥಿ- ಅಧ್ಯಾಪಕ ವಿನಿಮಯ ಕಾರ್ಯಕ್ರಮದ ಸಂದರ್ಭದಲ್ಲಿ ಈ ಬಿಳೀ ಹುಡುಗಿಗೆ, ಹುಸೇನ್ ಪರಿಚಯವಾದ. ಅದು ಕೆಲವೇ ದಿನಗಳಲ್ಲಿ ಪ್ರಣಯವಾಗಿ, ಪರಿಣಾಮವಾಗಿ ಬದಲಾಯಿತು. ಅದರ ಫಲಿತಾಂಶವೇ ಬರಾಕ್ ಹುಸೇನ್ ಒಬಾಮಾ.
ವಿಷಾದವೆಂದರೆ ಒಬಾಮಾನ ಜನನದ ನಂತರ ಆ ದಂಪತಿಯ ಬದುಕಿನಲ್ಲಿ. ಯುಗಳ ಗೀತೆ ಎಂಬುದು ತುಂಬ ದಿನ ಇರಲಿಲ್ಲ. ಇವನಿಗೆ ಇನ್ನೂ ಎರಡು ವರ್ಷವಿದ್ದಾಗಲೇ ಆ ದಂಪತಿ ಬೇರೆ ಬೇರೆಯಾದರು. ನಂತರದ ಕೆಲವೇ ದಿನಗಳಲ್ಲಿ ಇಬ್ಬರೂ ಎರಡನೇ ಮದುವೆಯಾದರು. ಸಾಮಾನ್ಯವಾಗಿ ಇಂಥ ಕೌಟುಂಬಿಕ ಹಿನ್ನೆಲೆಯಲ್ಲಿ ಬೆಳೆದ ಮಕ್ಕಳು, ಹದಗೆಟ್ಟ ಸಂಬಂಧಗಳ ಮಧ್ಯೆಯೇ ಬೆಳೆಯುವುದರಿಂದ ಓದಿನಲ್ಲಿ ಹಿಂದೆ ಬೀಳುತ್ತಾರೆ. ಅಥವಾ ಈ ಬದುಕು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಕಲ್ಪಿಸಿಕೊಂಡು, ಪ್ರತಿಯೊಂದನ್ನೂ ವಿರೋಧಿಸುವ ಆಸಾಮಿಗಳಾಗಿ ಬದಲಾಗಿಬಿಡುತ್ತಾರೆ. ಅಥವಾ ಈ ಜಗತ್ತು ಬರೀ ನೋವಿನಿಂದ, ಅಸಮಾನತೆಯಿಂದ, ಮೋಸಗಾರರಿಂದ ತುಂಬಿ ಹೋಗಿದೆ. ಇದು ಎಂದೆಂದೂ ಬದಲಾಗುವುದೇ ಇಲ್ಲ ಎಂದು ವಾದಿಸುವ ಟಿಪಿಕಲ್ ಭಾರತೀಯ ಪ್ರಜೆಗಳ ಥರಾ ಆಗಿಬಿಡುತ್ತಾರೆ. ಕೌಟುಂಬಿಕ ಹಿನ್ನೆಲೆಯನ್ನೇ ಗಮನದಲ್ಲಿಟ್ಟುಕೊಂಡು ನೋಡಿದರೆ ಬರಾಕ್ ಒಬಾಮಾ ಕೂಡಾ ಹೀಗೆಯೇ ಆಗಬೇಕಿತ್ತು. ಆದರೆ ಆತ ಯಾರೆಂದರೆ ಯಾರೂ ನಿರೀಕ್ಷಿಸಿರದ ಎತ್ತರಕ್ಕೆ ಬೆಳೆದುಬಿಟ್ಟಿದ್ದಾನೆ. ಯಶಸ್ಸಿನ ಗೌರಿಶಂಕರದ ತುತ್ತತುದಿಯಲ್ಲಿ ನಿಂತು ಕೊಂಡಿದ್ದಾನೆ.
ಒಂದು ಸಂತೋಷವೆಂದರೆ ಜಗತ್ತಿನ ಹಿರಿಯಣ್ಣ ಅನ್ನಿಸಿಕೊಂಡ ನಂತರ ಕೂಡ ಒಬಾಮಾ ಬದಲಾಗಿಲ್ಲ. ಆತನ ಮೊಗದಲ್ಲಿದ್ದ ಅಮಾಯಕತೆ ಮಾಯವಾಗಿಲ್ಲ. ಮಾತಿನಲ್ಲಿ `ಪೆಡಸುತನ’ ಸೇರಿಕೊಂಡಿಲ್ಲ. ನಾಳೆಯಿಂದ ಎಲ್ರೂ ನಾನು ಹೇಳಿದಂಗೇ ಕೇಳಬೇಕ್ ಎಂಬ ಹಟವಾಗಲಿ; ನಾನು ಯಾವತ್ತೂ ತಪ್ಪೇ ಮಾಡಲ್ಲ. ಒಂದು ವೇಳೆ ನಾನು ತಪ್ಪು ಮಾಡಿದ್ರೂ ಅದನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂಬ ನಿರಂಕುಶ ಭಾವವಾಗಲಿ ಕಾಣಿಸಿಕೊಂಡಿಲ್ಲ. ಬದಲಿಗೆ ಎಲ್ಲರ ನಿರೀಕ್ಷೆ ಮೀರಿ ಭಾರೀ ಗೆಲುವು ಪಡೆದ ನಂತರ ಕೂಡ ಆತ ತುಂಬ ಸಮಚಿತ್ತದಿಂದ ವರ್ತಿಸಿದ್ದಾನೆ. `ನಾನೂ ನಿಮ್ಮೆಲ್ಲರಂತೆಯೇ ಮನುಷ್ಯ. ನನ್ನಲ್ಲಿ ಒಂದಿಷ್ಟು ಕನಸುಗಳಿವೆ. ಅವುಗಳನ್ನು ನನಸು ಮಾಡುವುದು, ಆ ಮೂಲಕ ಅಮೆರಿಕವನ್ನು, ಅದರೊಂದಿಗೆ ಇಡೀ ವಿಶ್ವವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುವುದು ನನ್ನ ಗುರಿ. ನನ್ನ ಕೆಲವೊಂದು ನಿಲುವು-ನಿರ್ಣಯಗಳು ಬಹುಮಂದಿಗೆ ಇಷ್ಟವಾಗುವುದಿಲ್ಲ ಎಂಬುದೂ ನನಗೆ ಗೊತ್ತು. ಅಂಥ ಸಂದರ್ಭದಲ್ಲಿ ಆಕ್ಷೇಪಗಳನ್ನು ಆಲಿಸುವವರ ಸಾಲಿನಲ್ಲಿ ನಾನು ಎಂದೆಂದೂ ಮೊದಲ ಸಾಲಿನಲ್ಲಿ ಮೊದಲಿಗನಾಗಿರುತ್ತೇನೆ’ ಎನ್ನುವ ಮೂಲಕ ಎಲ್ಲರ ಮನಕ್ಕೂ ಇನ್ನಷ್ಟು ಹತ್ತಿರಾಗಿದ್ದಾನೆ.
`ಬಿಳಿಯರ ದೌಲತ್ತಿನ ನಾಡು’ ಎಂದೇ ಹೆಸರಾಗಿರುವ ಅಮೆರಿಕದಲ್ಲಿ ಆಫ್ರಿಕಾ ಮೂಲದ ನೀಗ್ರೋ ಹುಡುಗನೊಬ್ಬ ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದು, ಅಮೆರಿಕ ಶತಮಾನದಿಂದಲೂ ಅನುಸರಿಸಿಕೊಂಡು ಬಂದಿರುವ `ಹೊಡಿ, ಬಡಿ, ಕೊಲ್ಲು, ಆಳು’ ಎಂಬ ನೀತಿಗೆ ಸಂಪೂರ್ಣ ವಿರುದ್ಧವಾಗಿ- `ಶಾಂತಿಯಿಂದ ಬದುಕೋಣ. ನೆಮ್ಮದಿಯನ್ನು ಅರಸೋಣ’ ಎಂದು ಹೇಳುವುದಿದೆಯಲ್ಲ? ಹಾಗೆ ಹೇಳುವ ಸಂದರ್ಭದಲ್ಲಿ ಜಗತ್ತಿಗೇ ಶಾಂತಿ ಮಂತ್ರಿ ಬೋಧಿಸಿದ; ಅಹಿಂಸೆ, ಉಪವಾಸ, ಚಳವಳಿ ಎಂಬ ಪದಗಳಿಂದಲೇ ಇಡೀ ಬ್ರಿಟಿಷ್ ಚಕ್ರಾಧಿಪತ್ಯವನ್ನು ಗಡಗಡ ನಡುಗಿಸಿದ ಗಾಂಧೀಜಿಯ ನೆನಪು ಮಾಡಿಕೊಂಡು `ಆ ಮಹಾತ್ಮನೇ ನನ್ನ ಆದರ್ಶ ಎಂದು ಉದ್ಗರಿಸುವುದಿದೆಯಲ್ಲ? ಅದು, ಸುಮ್ಮನೆ ಮಾತಲ್ಲ. ಹೀಗೆಲ್ಲಾ ಮಾತಾಡಿದ ನಂತರವೂ ಅಮೆರಿಕನ್ನರ ಮನ ಗೆಲ್ಲಬೇಕು ಅಂದರೆ- ಅವನಲ್ಲಿ Someಣhiಟಿg sಠಿeಛಿiಚಿಟ ಅಂತಾರಲ್ಲ? ಅಂಥ ಗುಣವಿರಬೇಕು.
ತಕ್ಷಣ ನೋಡಿದರೆ ಎದುರು ಬೀದಿಯ ಅಂಕಲ್ ಥರಾ ಕಾಣಿಸುವ, ಮೊದಲ ನೋಟಕ್ಕೇ ಯಾಕೋ ಇಷ್ಟವಾಗುವ ಬರಾಕ್ ಒಬಾಮಾನಲ್ಲಿ Someಣhiಟಿg sಠಿeಛಿiಚಿಟ ಎಂಬಂಥ ಯಾವುದಾದರೂ ಚುಂಬಕ ಶಕ್ತಿ ಇದೆಯಾ? ಗೊತ್ತಿಲ್ಲ. ಆದರೆ, ಅಮೆರಿಕದ ಅಧ್ಯಕ್ಷನಾಗುವ ಹಿಂದಿನದಿನದವರೆಗೂ ಒಬಾಮಾ ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದ. ಆತ ಹೈಸ್ಕೂಲಿನಲ್ಲಿ, ಕಾಲೇಜಿನಲ್ಲಿ ಕೂಡ ರ್‍ಯಾಂಕು ಬರಲಿಲ್ಲ. ರಾಜಕೀಯಕ್ಕೆ ಬಂದವನು ಉಲ್ಕೆಯ ಥರಾ ಛಕಛಕನೆ ಒಂದು ಬಾರಿಗೆ ಇಪ್ಪತ್ತಿಪ್ಪತ್ತು ಮೆಟ್ಟಿಲು ಹತ್ತಲಿಲ್ಲ. ಅಮೆರಿಕದ ಸೆನೆಟ್ ಸಭೆಯಲ್ಲಿ ಸಾವಿರಾರು ಮಂದಿ ನಿಬ್ಬೆರಗಾಗುವಂತೆ ಭಾಷಣ ಬಿಗಿಯಲೂ ಇಲ್ಲ. ಅಷ್ಟೇ ಅಲ್ಲ, ಬರೀ ನಾಲ್ಕು ವರ್ಷಗಳ ಹಿಂದೆ ಅಮೆರಿಕದಲ್ಲೇ ಅವನ ಹೆಸರು ಹೆಚ್ಚು ಮಂದಿಗೆ ಗೊತ್ತಿರಲೂ ಇಲ್ಲ. ಇಷ್ಟೆಲ್ಲ ನೆಗೆಟಿವ್ ಸಂಗತಿಗಳ ಮಧ್ಯೆ ಕೂಡ ಆತ ಗೆದ್ದಿದ್ದಾನೆ. ಆ ಮೂಲಕ, ಪವಾಡಗಳನ್ನು ಯಾವತ್ತೂ ನಂಬದೆ ಅಮೆರಿಕದಲ್ಲೂ ಕೂಡ ಪವಾಡ ನಡೆಯಬಹುದು ಎಂಬ ಮಾತಿಗೆ ಸಾಕ್ಷಿ ಒದಗಿಸಿದ್ದಾನೆ.
***
ಅಂದ ಹಾಗೆ, ಈ ಒಬಾಮಾ ಮೇಲಿಂದ ಮೇಲೆ ನಮ್ಮ ನಿಮ್ಮೆಲ್ಲರ ಮನಸುಗಳ ಪ್ರತಿನಿಧಿ ಎನ್ನಿಸುವುದೇಕೆ ಎಂಬ ಕುತೂಹಲದ ಪ್ರಶ್ನೆಗೆ ಇಲ್ಲಿ ಉತ್ತರಗಳಿವೆ.
ಒಂದು ರೀತಿಯಲ್ಲಿ ಒಬಾಮಾ ಏಕಾಂಗಿ ಹೋರಾಟಗಾರ. ಆತನಿಗೆ ಶ್ರೀಮಂತ ಹಿನ್ನೆಲೆ ಇರಲಿಲ್ಲ. ರಾಜಕೀಯದಲ್ಲಿ ಗಾಡ್‌ಫಾದರ್‌ಗಳೂ ಇರಲಿಲ್ಲ. ಮೊನ್ನೆ ಮೊನ್ನೆಯವರೆಗೂ ವಕೀಲಿ ವೃತ್ತಿ ಮಾಡಿಕೊಂಡಿದ್ದನಲ್ಲ? ಅಲ್ಲಿ ಕೂಡ ಅಂಥ ದೊಡ್ಡ ಹೆಸರು ಖಂಡಿತ ಇರಲಿಲ್ಲ. ಎರಡು ವರ್ಷದ ಹಿಂದೆಯೇ ಜಾರ್ಜ್ ಬುಷ್ ನಂತರ ಅಮೆರಿಕದ ಅಧ್ಯಕ್ಷ ಪದವಿಗೆ ಸ್ಪರ್ಧಿಸುವವರು ಯಾರು ಎಂಬ ಪ್ರಶ್ನೆಗೆ- ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿ, ಮೊದಲಿಗೆ-ಒಬಾಮಾ ಆಗಿರಲೇ ಇಲ್ಲ. ಆಗ ಎಲ್ಲರ ಚಿತ್ತವೂ ಪ್ರಭಾವಿ ಮಹಿಳೆ ಹಿಲರಿಕ್ಲಿಂಟನ್ ಮೇಲಿತ್ತು. ಅಮೆರಿಕದ ಅಧ್ಯಕ್ಷನಾಗಿ ದೊಡ್ಡ ಹೆಸರು ಮಾಡಿದ ಕ್ಲಿಂಟನ್‌ನ ಪತ್ನಿ, ಆತನ ಎಲ್ಲ ರಾಜಕೀಯ ನಿರ್ಣಯಗಳ ಸಲಹೆಗಾರ್ತಿ ಎಂಬ ಹೆಗ್ಗಳಿಕೆ ಹಿಲರಿಗಿತ್ತು. ಈ ತುರುಸಿನ ಸ್ಪರ್ಧೆಯಲ್ಲಿ-ಒಂದೇ ಒಂದು ಅವಧಿಗೆ ಮಾತ್ರ ಇಲಿನಾಯ್ಸ್ ರಾಜ್ಯದ ರಾಜ್ಯಪಾಲನಾಗಿ ಆಯ್ಕೆಆಗಿದ್ದ; ಆ ಸಂದರ್ಭ ಅಸಹಾಯಕರು ಹಾಗೂ ನೊಂದವರ ಪರವಾಗಿ ಮಾತನಾಡಿ ಎಲ್ಲರ ಗಮನ ಸೆಳೆದಿದ್ದ ಒಬಾಮಾ ಕಡೆಗೊಮ್ಮೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ನಾಮಕರಣಗೊಂಡೇ ಬಿಟ್ಟ. ಅದು ಪವಾಡ ನಂಬರ್ ಒನ್.
ಮೊನ್ನೆ, ನವೆಂಬರ್ ೫ರ ಬುಧವಾರ ಬೆಳಗ್ಗೆ ಇಡೀ ಜಗತ್ತು ಅಮೆರಿಕದ ಹೊಸ ಅಧ್ಯಕ್ಷ ಯಾರು ಎಂಬ ಕುತೂಹಲಕ್ಕೆ ಮುಖ ಒಡ್ಡಿದ್ದ ಸಂದರ್ಭದಲ್ಲಿಯೇ, ಅತ್ತ ಚಿಕಾಗೋದ ತಮ್ಮ ಮನೆಯಂಗಳದ ಮೈದಾನದಲ್ಲಿ ಗೆಳೆಯರೊಂದಿಗೆ ಒಬಾಮಾ ಬಾಸ್ಕೆಟ್ ಬಾಲ್ ಆಡುತ್ತಿದ್ದ. ಆ ಮೂಲಕ ಒಂದು ಸೋಲಿಗೆ ಅಥವಾ ಗೆಲುವಿಗೆ ಮಾನಸಿಕವಾಗಿ ತಮ್ಮನ್ನು ಒಗ್ಗಿಸಿಕೊಳ್ಳುತ್ತಿದ್ದ. ಫಲಿತಾಂಶ ಪ್ರಕಟವಾದ ನಂತರ ಇದನ್ನೇ ಬೆರಗಿನಿಂದ ಪ್ರಸ್ತಾಪಿಸಿದ ವರದಿಗಾರರಿಗೆ- `ಬದುಕಿನ ಅತ್ಯಂತ ಮಹತ್ವದ ಸಂದರ್ಭಗಳಲ್ಲಿ ಬಾಸ್ಕೆಟ್‌ಬಾಲ್ ಆಡುವುದು ನನ್ನ ಹವ್ಯಾಸ. ಬೇಕಿದ್ದರೆ ಅದನ್ನು ಕೆಟ್ಟ ಚಟ ಎಂದೇ ಅರ್ಥಮಾಡಿಕೊಳ್ಳಿ’ ಎಂದು ತಮಾಷೆ ಮಾಡಿದ. ಜಗತ್ತಿನ ದೊಡ್ಡಣ್ಣ ಅನ್ನಿಸಿಕೊಂಡ ನಂತರ ಕೂಡ ಆತ ಇಷ್ಟೊಂದು ಸಿಂಪಲ್ ಸಿಂಪಲ್ಲಾಗಿ ಮಾತಾಡಿದನಲ್ಲ- ಅದು ಪವಾಡ ನಂಬರ್ ಟೂ.
ಮೊನ್ನೆ, ಫಲಿತಾಂಶ ಪ್ರಕಟವಾದ ನಂತರ ಚಿಕಾಗೋ ನಗರದ ಗಾರ್ಡನ್ ಪಾರ್ಕ್‌ನಲ್ಲಿ ಒಬಾಮಾ ಮಾಡಿದ ಭಾಷಣ ಕೇಳಿದವರೆಲ್ಲ ಅವನನ್ನು ಒಬ್ಬ ಯೋಗಿ ಎಂದರು. ಮೆಡಿಟೇಷನ್ ಗುರು ಎಂದು ಹೊಗಳಿದರು. ಮಾತಿನ ಮಾಂತ್ರಿಕ ಎಂದು ಕರೆದು ಸಂಭ್ರಮಿಸಿದರು. ಆದರೆ, ವಾಸ್ತವ ಏನೆಂದರೆ- ಬರಾಕ್ ಒಬಾಮಾ ಮೊನ್ನೆ ಹೇಳಿದನಲ್ಲ? ಅದಷ್ಟೂ ಆತನ ಸೆಕ್ರೆಟರಿ ಜಾನ್‌ಫಾವ್‌ವ್ಯೂ ಬರೆದುಕೊಟ್ಟ ಭಾಷಣ! ಒಂದೇ ಒಂದು ಮಾತೂ ಆಡದೆ ಕೇವಲ ಮುಗುಳ್ನಗೆಯಿಂದ ಎದುರಿಗಿರುವ ಲಕ್ಷಾಂತರ ಮನಸ್ಸುಗಳನ್ನು ಗೆಲ್ಲಬಲ್ಲ ಬರಾಕ್‌ಗೆ ಸಿದ್ಧಪ್ರತಿಯಿಲ್ಲದೆ ಭಾಷಣ ಮಾಡಲು ಬರುವುದಿಲ್ಲ! ಈ ಸಂಗತಿಯನ್ನು ಕೂಡ ಮೊನ್ನೆ, ತನ್ನ ಗೆಲುವಿನ ಸಂಭ್ರಮದ ಮಧ್ಯೆಯೇ ಸಂಕೋಚವಿಲ್ಲದೆ ಒಬಾಮಾ ಹೇಳಿಕೊಂಡನಲ್ಲ?- ಯೆಸ್, ಅದು ಪವಾಡ ನಂಬರ್ ಥ್ರೀ.
ಮೊದಲೇ ಹೇಳಿದಂತೆ ಒಬಾಮಾ ಕಾಲೇಜಿನಲ್ಲಿ ಮಹಾನ್ ಮೇಧಾವಿಯೋ, ಚಿನ್ನದ ಪದಕದ ವಿದ್ಯಾರ್ಥಿಯೋ, ಅಪ್ರತಿಮ ನಟನೋ, ಭಾಷಣಕಾರನೋ ಆಗಿರಲಿಲ್ಲ. ಸಾಮಾನ್ಯ ವರ್ಗದ ಹುಡುಗರಂತೆಯೇ ಬೆಳೆದ ಅವನಿಗೆ ಆ ದಿನಗಳಲ್ಲಿ ಪುಂಡರೊಂದಿಗೆ ಗೆಳೆತನವಿತ್ತು. ಅದೇ ಕಾರಣದಿಂದ ಆತ ಒಂದಷ್ಟು ದಿನ ಮಾದಕ ವ್ಯಸನಿ ಕೂಡ ಆಗಿದ್ದ. ಆ ವಿಷ ವ್ಯೂಹದಿಂದ ತುಂಬ ಬೇಗನೆ ವಾಪಸ್ ಬಂದ. ಇದನ್ನೆಲ್ಲ ಬಹಿರಂಗವಾಗಿಯೇ ಹೇಳಿಕೊಂಡ. ರಾಜಕೀಯಕ್ಕೆ ಕಾಲಿಟ್ಟ ನಂತರವಂತೂ ಹತ್ತು ಮಂದಿಗೆ ಒಳ್ಳೆಯದು ಮಾಡುವುದೇ ನನ್ನ ಗುರಿ ಎಂಬಂತೆ ಬದುಕಿಬಿಟ್ಟ. ಈ ಕಾರಣದಿಂದಲೇ ಪ್ರತಿಸ್ಪರ್ಧಿಯಾಗಿದ್ದ ಜಾನ್ ಮೆಕೇನ್-ಒಬಾಮಾ ಒಬ್ಬ ಡ್ರಗ್ ಆಡಿಕ್ಟು ಕಣ್ರೀ. ಆತ ಸಲಿಂಗ ಕಾಮಿ ಕಣ್ರೀ. ಆತನ ಇತಿಹಾಸ ಅಷ್ಟೇನೂ ಚೆನ್ನಾಗಿಲ್ಲ ಕಣ್ರೀ. ಹೇಳಿ ಕೇಳಿ ಅವನು ಕರಿಯ. ಈ ಅಮೆರಿಕಕ್ಕೆ ಅವನಿಂದ ಏನಾದ್ರೂ ಬದಲಾವಣೆ ಸಾಧ್ಯವೇನ್ರೀ ಎಂದೆಲ್ಲ ದೂರುತ್ತ ನಿಂತರೂ ಒಬಾಮಾನ ಜನಪ್ರಿಯತೆಯ ಎದುರು ನಿಲ್ಲಲು ಸಾಧ್ಯವಾಗಲೇ ಇಲ್ಲ. ಈ ಒಂದು ವಿಷಯದಲ್ಲಿ ಜಗತ್ತಿನ ಅಷ್ಟೂ ಕರಿಯರೂ ನಾಚುವಂತೆ ಅಮೆರಿಕದ ಬಿಳಿಯರು ನಡೆದುಕೊಂಡರು. ಒಬಾಮಾನ ಬಣ್ಣ, ಹಿನ್ನೆಲೆ, ಜಾತಿ, ಧರ್ಮ, ಅವನೊಳಗೂ ಇರಬಹುದಾದ ಸಣ್ಣತನವನ್ನು ತಮಾಷೆಗೂ ಗಮನಿಸದೆ ಅಧ್ಯಕ್ಷ ಪಟ್ಟದಲ್ಲಿ ಕೂರಿಸಿಬಿಟ್ಟರು.
****
ಒಬಾಮನಿಗೆ ಈಗಷ್ಟೇ ೪೭. ಈ ವಯಸ್ಸಿನಲ್ಲಿ ಭಾರತದ, ರಾಜಕಾರಣಿಯೊಬ್ಬ ಒಂದು ತಾಲೂಕು ಬೋರ್ಡಿನ ಅಧ್ಯಕ್ಷ ಮಾತ್ರ ಆಗಿರುತ್ತಾನೆ. ಒಬ್ಬನನ್ನು ಮಂತ್ರಿ ಮಾಡಬೇಕು ಅಂದರೂ ಆತ ಈಗಾಗಲೇ ಐದಾರು ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾನಾ? ನಲವತ್ತೈದು ವರ್ಷ ದಾಟಿದ್ದಾನಾ? ಅವನದು ಪ್ರಬಲ ಜಾತಿಯಾ? ಕ್ಯಾರೆಕ್ಟರು ಚೆನ್ನಾಗಿದೆಯಾ? ಎಂದೆಲ್ಲಾ ಲೆಕ್ಕ ಹಾಕಲಾಗುತ್ತದೆ. ಆದರೆ, ಒಂದೇ ಒಂದು ಅವಧಿಗೂ ಮಂತ್ರಿ ಕೂಡ ಆಗದ ಒಬಾಮಾ ಏಕ್‌ದಂ ಅಮೆರಿಕದ ಅಧ್ಯಕ್ಷನಾಗುವ ಮೂಲಕ ಒಂದು ಪರಿವರ್ತನೆಗೆ ನಾಂದಿ ಹಾಡಿದ್ದಾನೆ. ಇನ್ನು ಮುಂದೆ ಚೀನಾದಲ್ಲಿ ಒಮ್ಮೆ ಭೂಕಂಪವಾದರೂ; ಇಸ್ರೇಲ್‌ನಲ್ಲಿ ತೈಲದ ಬೆಲೆ ದಿಢೀರನೆ ಹೆಚ್ಚಿದರೂ; ಭಾರತ-ಪಾಕಿಸ್ತಾನದ ಮಧ್ಯೆ ಯುದ್ಧದ ಕಾವು ಶುರುವಾದರೂ; ಶ್ರೀಲಂಕಾದಲ್ಲಿ ಜನಾಂಗೀಯ ದ್ವೇಷ ಅತಿಯಾದರೂ ಇಡೀ ಜಗತ್ತು ಒಮ್ಮೆ ಒಬಾಮಾನ ಮಾತುಗಳಿಗಾಗಿ ಕಾಯುತ್ತಿರುತ್ತದೆ. ಆತನ ಒಂದೇ ಒಂದು ಮಾತು ಯುದ್ಧವನ್ನು ಆರಂಭಿಸಬಲ್ಲದು. ನಿಲ್ಲಿಸಲೂಬಲ್ಲದು. ಆತನ ಸಹಾಯಹಸ್ತ ಒಂದಿಡೀ ರಾಷ್ಟ್ರದ ಬಡತನ ನೀಗಬಲ್ಲದು. ಒಂದು ದೇಶದ ನಕಾಶೆಯನ್ನೂ ಈಗಿತ್ತು, ಈಗಿಲ್ಲ ಎಂಬಂತೆ ಬದಲಿಸಬಲ್ಲದು!
ಸಾಮಾನ್ಯರ ಮನೆಯ ಹುಡುಗನೊಬ್ಬ ; ನೋವು- ಬಡತನದ ಮಧ್ಯೆಯೇ ಬೆಳೆದು ಬಂದವನೊಬ್ಬ; ಜನ ಸಾಮಾನ್ಯರು, ಕೂಲಿಯವರು, ಕೆಳ ವರ್ಗದ ನೌಕರರು ಉದಾರವಾಗಿ ನೀಡಿದ ಐದು ಡಾಲರ್, ಹತ್ತು ಡಾಲರ್ ಕಾಣಿಕೆ ಹಣದಿಂದಲೇ ಚುನಾವಣೆ ಪ್ರಚಾರ ನಿಭಾಯಿಸಿದವನೊಬ್ಬ ಅಮೆರಿಕದ ಅಧ್ಯಕ್ಷನಾಗಿ ಕೂತನಲ್ಲ? ಆ ಮೂಲಕ ಎಲ್ಲ ವರ್ಗದ ಬಡವರೂ ಪರಿಶ್ರಮದಿಂದ ದೊಡ್ಡ ಎತ್ತರವನ್ನು ತಲುಪಿಕೊಳ್ಳಬಹುದು ಎಂದು ತೋರಿಸಿಕೊಟ್ಟನಲ್ಲ?
ಹೆಮ್ಮೆಯ ವಿಷಯವೆಂದರೆ ಅದೇ ಅಲ್ಲವೇ?

Advertisements

4 Comments »

 1. 1
  Pramod Says:

  ಆದ್ರೆ ನಮ್ಮ ಭಾರತಕ್ಕೆ ಇ೦ತಹ ಸಮರ್ಪಣಾ ಮನೋಭಾವದ ನಾಯಕನ ಕೊರತೆ ಇದೆ, ಇಚ್ಛಾಶಕ್ತಿಯ ಕೊರತೆ ಇದೆ, ಎಲ್ಲರೂ ಭ್ರಷ್ಟಾಚಾರ,ಜಾತಿ ರಾಜಕಾರಣ ಮಾಡ್ಕೊ೦ಡು ಇದ್ದಾರೆ. ಜನರಿಗೆ ಯಾವಾಗ ಬುದ್ಧಿ ಬರುತ್ತದೋ..:(

 2. 2

  Bega buddi barali anta maatra aashisabahudu..aste..

 3. 3
  ಕುಮಾರಸ್ವಾಮಿ. ಕಡಾಕೊಳ್ಳ Says:

  @@@
  ಇದು ಎಂದೆಂದೂ ಬದಲಾಗುವುದೇ ಇಲ್ಲ ಎಂದು ವಾದಿಸುವ ಟಿಪಿಕಲ್ ಭಾರತೀಯ ಪ್ರಜೆಗಳ ಥರಾ ಆಗಿಬಿಡುತ್ತಾರೆ.

  @@@

  ಒಬಾಮನನ್ನು ಒಗಳುವ ಬರಾಟೆಯಲ್ಲಿ ಅಂತು ಭಾರತಿಯರನ್ನು ಬೈಯ್ಯುವುದನ್ನಂತು ಬಿಡಲಿಲ್ಲವಲ್ಲ. ಯಾಕ್ರೀ ನಿಮಗೆ ಇಶ್ಟು ಕೀಳರಿಮೆ? ನಿಮ್ಮವರ ಬಗ್ಗೆ ನಿಮಗೇ ಇಶ್ಟು ಕೀಳರಿಮೆ ಇರುವಾಗ… ಅಸಯ್ಯ. ಇಂತಹ ಜನಗಳು ಇರುವುದು ಬರಿ ಬಾರತದಲ್ಲೊಂದೇ ಅಲ್ಲ ಎಲ್ಲೆಲ್ಲು ಇರುತ್ತಾರೆ ಅನ್ನುವುದು ಮರೆಯ ಬೇಡಿ. ನೀವು ಒಬ್ಬ ಭಾರತೀಯ ಅನ್ನುವುದು ಮರೆಯ ಬೇಡಿ. ಕೊಂಚವಾದರು ನಿಮ್ಮತನ ಇಟ್ಟುಕೊಳ್ಳು ಬದುಕು ಚನ್ನಾಗಿ ಇರುತ್ತೆ.

 4. 4
  Pramod Says:

  @ಕುಮಾರಸ್ವಾಮಿ. ಕಡಾಕೊಳ್ಳ,
  ಮೊದಲು ನಿಮ್ಮ ಕನ್ನಡ ಸರಿ ಮಾಡ್ಕೊಲ್ಲಿ, ನೀವು ಉದ್ಧಾರ ಆಗಿ, ಆಮೇಲೆ ದೇಶ ಉದ್ಧಾರ ಮಾಡೋ ಕೆಲ್ಸ ಮಾಡಿ 🙂
  ಉದಾಹರಣೆಗಾಗಿ: ಒಗಳುವ, ಬರಾಟೆಯಲ್ಲಿ, ಇಶ್ಟು , ಅಸಯ್ಯ, ಬಾರತದಲ್ಲೊಂದೇ, ಚನ್ನಾಗಿ


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: