ಸ್ವಲ್ಪ ಚೆನ್ನಾಗಿದೀನಿ ಸ್ವಲ್ಪ ಚೆನ್ನಾಗಿಲ್ಲ!

rose

ಒಲವಿನ ದೀಪ ರಂಗೋಲಿ,

ದಿನ ಕಳೆದಂತೆಲ್ಲ ಚಳಿ ಏರುತ್ತಿದೆ. ಕಿಟಕಿಗಳು, ಕರ್ಟನ್ನುಗಳು ಮುಚ್ಚಿಕೊಳ್ಳುತ್ತಿವೆ. ಫ್ಯಾನುಗಳು ದೀರ್ಘಕಾಲದ ರಜೆಗೆ ಹೋಗಲು ರೆಡಿಯಾಗುತ್ತಿವೆ. ಬೆಳಗಿನ ಜಾವದ ಚುಮುಚುಮು ಚಳಿ ಈಗ ಹಿತ ಅನ್ನಿಸುತ್ತಿಲ್ಲ. ಇಡೀ ದಿನವನ್ನು ಚಳಿಯೇಆವರಿಸಿಕೊಳ್ಳುತ್ತಿದೆ. ಚಳಿಯ ನೆಪದಲ್ಲಿ ಎಲ್ಲರೂ ಬಿಗಿ ಉಡುಪುಗಳ ಮೊರೆ ಹೋಗಿದ್ದಾರೆ. ತರ್‍ಲಾಂಟಿ ತರ್‍ಲೆ ಎಂದು ಈಗಾಗಲೇ ಬೆಂಗಳೂರಿನ ತುಂಬಾ `ವರ್ಲ್ಡ್ ಫೇಮಸ್’ ಆಗಿರುವ ನನಗೆ ಈ ಚಳಿಚಳಿಯಲ್ಲೇ ಯಾಕಿಂಥ ದುಷ್ಪ ಯೋಚನೆ ಬಂತು? ಗೊತ್ತಿಲ್ಲ. ಬೆಡಗಿಯರ ಮೋಹದಲ್ಲಿ ನಾನು ಇಷ್ಟಿಷ್ಟೇ ಕರಗಿ ಹೋಗ್ತಾ ಇದೀನಾ? ಅರ್ಥವಾಗ್ತಾ ಇಲ್ಲ… ಆದ್ರೆ ಮೀನಾ-
ಈ ಚಳಿಗಾಲದಲ್ಲೂ ಎಲ್ರೂ ಸಡಿಲ ಡ್ರೆಸ್ ಹಾಕ್ಕೊಳ್ತಾರಲ್ಲ, ಆ ದೊಗಲೆ ಬಟ್ಟೆಯಲ್ಲಿ ಚೆಲುವೆಯರ, ಅದೂ ಎಂ.ಜಿ. ರೋಡಿನ ಟೀ-ಶರ್ಟ್ ಬೆಡಗಿಯರ ತುಂಬ ಸೌಂದರ್ಯವನ್ನು ಕಣ್ತುಂಬ ನೋಡಬಹುದು. ನೋಡಬಾರದ್ದು ನೋಡಿ ಬೆಚ್ಚಿ ಬೀಳಬಹುದು. ಹಿಂದೆಯೇ ಒಂದಷ್ಟು ಬೆಚ್ಚಗಾಗಬಹುದು. ಕೈ ಮುಟ್ಟಿ ಕೆರಳಬಹುದು. ಕಾಲ್ತುಳಿದು `ಸಾರಿ’ ಅನ್ನಬಹುದು. ಛಾನ್ಸು ಸಿಕ್ಕರೆ ಕಣ್ಣು ಹೊಡೆಯಬಹುದು. ನನ್ನ ಅದೃಷ್ಟಕ್ಕೆ ಆ ಎಂ.ಜಿ. ರಸ್ತೆಯಲ್ಲಿ ಟೈಂಪಾಸ್ ಬೆಡಗಿಯರೇ ಸಿಕ್ಕಿಬಿಟ್ಟರೆ- ಮೂರ್‍ನಾಲ್ಕು ಗಂಟೆಗಳ ಕಾಲ ಅವರ ಹಿಂದೆ ಹಿಂದೆಯೇ ಸುತ್ತಿ ಕಣ್ತಂಪು ಮಾಡಿಕೋಬಹುದು… ಇಂಥ ಲೆಕ್ಕಾಚಾರದಲ್ಲೇ ನಾನು ಎಂ.ಜಿ. ರಸ್ತೆಗೆ ಹೋದರೆ-
ಅಲ್ಲಿ ಅವಳಿದ್ದಳು!
ಮೀನಾ ಡಿಯರ್, ಒಬ್ಬ ಸುಂದರಿಯನ್ನು ಇನ್ನೊಬ್ಬ ಸುಂದರಿ ಎದುರು ವರ್ಣಿಸಬಾರದು ಅನ್ನುತ್ತಾರೆ. ಆದರೂ ಹೇಳುತ್ತಿದ್ದೇನೆ. ಅವಳು, ಕೈ ತೊಳೆದು ಮುಟ್ಟಬೇಕು-ಅಂಥ ರೂಪಸಿ. ತೆಳ್ಳಗಿದ್ದಳು. ಬೆಳ್ಳಗಿದ್ದಳು. ನಾಚಿಕೊಂಡಾಗ ರವಷ್ಟು ಕೆಂಪಾದಳು! ಅವಳ ಮೂಗು, ಕೆನ್ನೆ, ಕಣ್ಣುಗಳ ಸೈಜಿನ ಬಗ್ಗೆ ಮಾಹಿತಿ ಬೇಡ. ಅದನ್ನೆಲ್ಲ ನಾನು ವರ್ಣಿಸಿದ ನಂತರ ಅವಳಿಗೆ ದೃಷ್ಟಿ ಆಗಿಬಿಟ್ರೆ… ಅವಳ ಸೌಂದರ್ಯ ಹುಚ್ಚು ಹಿಡಿಸುವಂತಿತ್ತು. ಅವಳನ್ನು ಪ್ರೀತಿಯಿಂದ, ಮೋಹದಿಂದ, ಸ್ನೇಹದಿಂದ, ಇನ್ನಿಲ್ಲದ ಮಮಕಾರದಿಂದ ನೋಡುತ್ತಾ ನಿಂತುಬಿಟ್ಟೆ. ನನ್ನ ಮನಸ್ಸು ಅವಳಿಗೂ ಅರ್ಥವಾಯಿತೇನೋ? ಒಮ್ಮೆ ನನ್ನತ್ತ ನೋಡಿದವಳು-ಖಿಲ್ಲನೆ ನಕ್ಕಳು. ಮರುಕ್ಷಣವೇ ಸ್ಲೋ ಮೋಷನ್‌ನಲ್ಲಿ ನಡೆದು ಬಂದಳು!
ಸರಳ ಉಡುಗೆಯ, ನಿರಾಭರಣೆ ಆದ ಅವಳಲ್ಲಿ- ಲಜ್ಜೆ, ಸೌಂದರ್ಯ, ವಿದ್ಯೆ, ಸಂಸ್ಕೃತಿ, ಸಜ್ಜನಿಕೆ ಮುಂತಾದ ನಾನಾ ಆಭರಣಗಳಿದ್ದವು. ಹತ್ತಿರ ಬಂದವಳು ನಸುನಕ್ಕಳು. `ಚೆಂದ ಕಾಣ್ತೀರ ನೀವು’ ಎಂದು ಸುಳ್ ಸುಳ್ಳೇ ಹೊಗಳಿದಳು. ಕಾಫಿಗೆ ಕರೆದೆ, ಕೈ ಹಿಡಿದೇ ಬಂದುಬಿಟ್ಟಳು. ಆನಂತರದ ಅಖಂಡ ಎರಡೂವರೆ ಗಂಟೆ ಜತೆಗಿದ್ದಳು. ಆ ಕ್ಷಣದಲ್ಲಿ ಈ ಬೆಂಗಳೂರು, ಈ ದರಿದ್ರ ಕೆಲಸ, ಟೆನ್ಷನ್ನು, ಜಗಳವಾಡುವ ಗೆಳತಿಯರು, ಕೈ ಕೊಡುವ ಗೆಳೆಯರು… ಎಲ್ಲರನ್ನೂ ಕಾರವಾರದ ಕಡಲಿಗೆ ಒಗೆದು ಇವಳ ಸೆರಗು ಹಿಡಿದು ಹೋಗಿಬಿಡೋಣ ಅನ್ನಿಸಿತು! ನಾನು ಇದನ್ನೆಲ್ಲ ಹೇಳಿಕೊಂಡರೆ- ಆಕೆ ಮೋಹಕವಾಗಿ ನಕ್ಕಳು, ಬೆಳದಿಂಗಳಿನಂತೆ!
ಅವಳ ಜತೆಗಿದ್ದೆನಲ್ಲ- ಅಷ್ಟೂ ಹೊತ್ತು ಇದು ಬೆಂಗಳೂರಿನಂತೆ ಕಾಣಲೇ ಇಲ್ಲ. ನಾನು ಗಂಧರ್ವ ಲೋಕದಲ್ಲಿ ಅಡ್ಡಾಡುತ್ತಿದ್ದೆ. ಗಂಧರ್ವನ ಥರಾನೇ ನಡೆದು ಹೋಗುತ್ತಿದ್ದೆ. ಈ ಬೆಡಗಿಯ ಜತೆ ನಾನಿರುವಾಗ ಕಾಲವೆಂಬುದು ನಿಂತು ಹೋಗಬಾರದೇ ಅಂದುಕೊಂಡೆ. ಅವಳಿಗೆ `ಐ ಲವ್ ಯೂ’ ಹೇಳಲು ಹ್ಯಂಗೆಂಗೋ ಟ್ರೈ ಮಾಡಿದೆ! ಅಷ್ಟರಲ್ಲಾಗಲೇ ಸಂಜೆಯಾಗಿತ್ತು. ಆ ಬೆಡಗಿ- ಕೈ ಬಿಡಿಸಿಕೊಂಡು- `ಥ್ಯಾಂಕ್ಸ್ ಫಾರ್ ದ ನೈಸ್ ಕಂಪನಿ. ನಾಳೆ ಸಿಗೋಣ. ಇಲ್ಲೇ, ಇದೇ ಹೊತ್ತಿಗೇ’ ಅಂದಳು! ಆಮೇಲೆ – ನಾನು ಅವಳಿಗೆ ಏನೂ ಅಲ್ಲ ಅನ್ನುವಂತೆ- ನಡೆದೇಬಿಟ್ಟಳು. ದೂರ ದೂರ ದೂರ…
ಅವಳ ಮೋಹ ಮೈ ತುಂಬಿತ್ತಲ್ಲ- ಅದೇ ಖುಷಿಯಲ್ಲಿ ನಾನು ಇನ್ನೊಮ್ಮೆ ಅಡ್ಡಾಡಿದೆ. ಅರ್ಧಗಂಟೆ ಬಿಟ್ಟು ಅದೇ ಹಾದಿಯಲ್ಲಿ ನಡೆದು ಬಂದರೆ ನನ್ನ ಮನಗೆದ್ದ ಹುಡುಗಿ-ಇನ್ನೊಬ್ಬನ ತೆಕ್ಕೆಯಲ್ಲಿದ್ದಳು! ಹೌದು ಕಣೇ, ಅದನ್ನು ನೋಡಿದ ದಿನದಿಂದ- ನಾನು ಸ್ವಲ್ಪ ಚೆನ್ನಾಗಿದೀನಿ. ಸ್ವಲ್ಪ ಚೆನ್ನಾಗಿಲ್ಲ!
ನಿನ್ನನ್ನ ನೋಡಬೇಕು ಅನ್ನಿಸ್ತಿದೆ. ಪ್ಲೀಸ್, ಬಂದು ಹೋಗು.
-ಮಹೀ

Advertisements

1 Comment »

  1. 1

    ಹಿಹ್ಹಿಹ್ಹಿ!!ಮತ್ತೆ ಮರುದಿನ ಹೋಗೋ ಸಾಹಸ ಮಾಡಿದ್ರಾ?


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: