ಈ ಮಧುರ ಭಾವಗೀತೆ ಪ್ರಿಯಕರನನ್ನಲ್ಲ, ಸೂರ್ಯನನ್ನು ಕುರಿತದ್ದು !

chi__udayashankar

ಚಿತ್ರ :ಗಾಳಿಮಾತು, ಗೀತೆರಚನೆ : ಚಿ. ಉದಯಶಂಕರ್.
ಸಂಗೀತ : ರಾಜನ್-ನಾಗೇಂದ್ರ, ಗಾಯನ : ಎಸ್. ಜಾನಕಿ
ಒಮ್ಮೆ ನಿನ್ನನ್ನು ಕಣ್ತುಂಬಾ…….
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೆ… ಐಐ ಒಮ್ಮೆ ನಿನ್ನನ್ನು…ಐಐ

ಅರಳಿರುವ ಹೂವಿನಲ್ಲಿ ನಿನ್ನ ನೋಟವ
ಹರಿಯುತಿಹ ನೀರಿನಲ್ಲಿ ನಿನ್ನ ಓಟವ
ಇಂಪಾದ ಗಾನದಲ್ಲೀ ನಿನ್ನ ಮನದ ಭಾವವಾ
ಮಳೆಬಿಲ್ಲ ಬಣ್ಣದಲ್ಲಿ ನಿನ್ನ ಅಂದವ
ನವಿಲಾಡೊ ನಾಟ್ಯದಲ್ಲಿ ನಿನ್ನ ಚೆಂದವ
ತಂಪಾದ ಗಾಳಿಯಲ್ಲೀ ನೀನಾಡೋ ಆಟವ
ದಿನವೆಲ್ಲ ನಾ ಕಂಡೆ ನಾ ಕಂಡು ಬೆರಗಾದೆ ಐಐ ೧ಐಐ

ಮಿನುಗುತಿಹ ತಾರೆಯೆಲ್ಲಾ ನಿನ್ನ ಕಂಗಳೋ
ನಗುತಿರಲು ಭೂಮಿಯೆಲ್ಲಾ ಬೆಳದಿಂಗಳೋ
ಆ ಬೆಳ್ಳಿ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚೆಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲಾ ನೀ ನಡೆಯೋ ಹಾದಿಯೋ
ನಿನ್ನಂತೆ ಯಾರಿಲ್ಲ ನಿನ್ನಲ್ಲೇ ಮನಸೆಲ್ಲಾ ಐಐ ೨ ಐಐ

ಸಿನಿಮಾ ಶುರುವಾದ ಹದಿನೈದನೇ ನಿಮಿಷಕ್ಕೆ ಒಂದು ಹಾಡು. ಮೂವತ್ತೆರಡನೇ ನಿಮಿಷಕ್ಕೆ ಇನ್ನೊಂದು ಹಾಡು. ಇಂಟರ್ವೆಲ್ಗೆ ಒಂಭತ್ತು ನಿಮಿಷ ಬಾಕಿಯಿರುವಾಗ ಮೂರನೇ ಹಾಡು. ಇಂಟರ್ವೆಲ್ನಂತರದ ನಲವತ್ತನೇ ನಿಮಿಷಕ್ಕೆ ನಾಲ್ಕನೇ ಹಾಡು ! ಇವತ್ತು ನಮ್ಮ ಚಿತ್ರ ನಿರ್ಮಾಪಕ-ನಿರ್ದೇಶಕರೆಲ್ಲ ಯೋಚಿಸುವುದೇ ಹೀಗೆ. ಒಂದು ಹಾಡಿನ ಮೂಲಕ ಆ ಸಂದರ್ಭದ ತೀವ್ರತೆಯನ್ನು ಹೆಚ್ಚಿಸಬೇಕು, ನೂರು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲದ್ದನ್ನು ಒಂದು ಹಾಡಿನ ಮೂಲಕ ಹೇಳಿಬಿಡಬೇಕು. ಸಿನಿಮಾ ನೋಡಿದ ನಂತರದ ಅದೆಷ್ಟೋ ವರ್ಷಗಳ ನಂತರ ಕೂಡ ಹಾಡೆಂಬುದು ಒಂದು ರಾಗವಾಗಿ, ನಾದವಾಗಿ, ಆಪ್ತ ಭಾವವಾಗಿ ಎಲ್ಲರನ್ನೂ ಕಾಡುವಂತೆ ಮಾಡಬೇಕು ಎಂದು ಉಹುಂ- ಗಾಂಧಿನಗರದ ಯಾವೊಬ್ಬ ಭೂಪತಿಯೂ ಇವತ್ತು ಹಾಗೆ ಯೋಚಿಸುವುದಿಲ್ಲ. ಯೋಚಿಸುವುದಿಲ್ಲ, ಮತ್ತು ಯೋಚಿಸುವುದೇ ಇಲ್ಲ.
ಆದರೆ, ೮೦ರ ದಶಕದಲ್ಲಿ ನಮ್ಮ ನಿರ್ಮಾಪಕ-ನಿರ್ದೇಶಕ, ಗೀತೆ ರಚನೆಕಾರರಲ್ಲಿ ಅಂಥದೊಂದು ಕಮಿಟ್ಮೆಂಟ್ ಇತ್ತು. ಹಾಡನ್ನು ಕೇಳಲಿಕ್ಕೆಂದೇ ಜನರನ್ನು ಚಿತ್ರಮಂದಿರಕ್ಕೆ ಕರೆತರಬೇಕೆಂಬ ಮತ್ತು ಕರೆ ತರುತ್ತೇವೆಂಬ ಹುಚ್ಚು ಹಟವಿತ್ತು. ಇದನ್ನೆಲ್ಲ ನೆನಪು ಮಾಡಿಕೊಂಡಾಗ ತಕ್ಷಣ ನೆನಪಾಗುವುದು ದೊರೆ-ಭಗವಾನ್ ನಿರ್ದೇಶನದ `ಗಾಳಿ ಮಾತು’ ಸಿನಿಮಾ. ಜೈ ಜಗದೀಶ್-ಲಕ್ಷ್ಮಿ-ಕೋಕಿಲಾ ಮೋಹನ್ ತಾರಾಗಣದ ಆ ಸಿನಿಮಾದಲ್ಲಿ ಕೆಲವೇ ಸೆಕೆಂಡುಗಳ ಅಂತರದಲ್ಲಿ ಸೂಪರ್ ಹಿಟ್ ಹಾಡುಗಳೆಂದೇ ಹೆಸರಾಗಿರುವ `ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲ್ಲಿ’ ಹಾಗೂ `ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೆ’ ಗೀತೆಗಳು ಬಂದು ಹೋಗುತ್ತವೆ.
ಹಾಡು ಶುರುವಾಯ್ತು ಅಂದರೆ ಸಾಕು-ನಮ್ಮ ಜನ ಥಿಯೇಟರಿನಿಂದ ಆಚೆಹೋಗ್ತಾರೆ ಎಂಬ ನಂಬಿಕೆ ಈಗಲೂ ಇದೆ. ಹಿಂದೆಯೂ ಇತ್ತು ! ಇದು ಗೊತ್ತಿದ್ದರೂ, ಒಂದರ ಹಿಂದೆ ಒಂದರಂತೆ ಎರಡು ಹಾಡು ಹಾಕಿದಿರಲ್ಲ? ಅದೆಂಥ ಧೈರ್ಯ ನಿಮ್ದು? ಈ ಹಾಡುಗಳ ಸಂದರ್ಭದಲ್ಲಿ ಜನ ಥಿಯೇಟರಿನಿಂದ ಎದ್ದು ಹೋದರೆ ಗತಿ ಏನು ಎಂಬ ಭಯ ನಿಮ್ಮನ್ನು ಕಾಡಲಿಲ್ವ ಎಂದರೆ ನಿರ್ದೇಶಕ ಭಗವಾನ್ ಒಂದೇ ಮಾತಲ್ಲಿ ಹೇಳಿದ್ದಿಷ್ಟು: `ನಾವು ಬೇಕೂಂತ ಹಾಗೆ ಮಾಡಿಲ್ಲ. ಆ ಸಂದರ್ಭಕ್ಕೆ ಒಂದರ ಹಿಂದೆ ಒಂದರಂತೆ ಹಾಡುಗಳ ಅಗತ್ಯವಿತ್ತು. ಒಂದು ಬಿಂದಾಸ್ ಹುಡುಗ ಹೇಳುವುದು. ಇನ್ನೊಂದು ಅಮಾಯಕ ನಾಯಕಿ ಹೇಳುವುದು ! ಅದನ್ನೇ ಗೀತರಚನೆಕಾರ ಚಿ. ಉದಯಶಂಕರ್ಗೆ ಹೇಳಿದ್ವಿ. ತಕ್ಷಣವೇ ಅವರು `ಎರಡೂ ಹಾಡು ಸೂಪರ್ ಹಿಟ್ ಆಗೋ ಥರ ಬರೆದು ಕೊಡ್ತೀನಿ’ ಅಂದರು. ಹೇಳಿದಂತೆಯೇ ಮಾಡಿದ್ರು. ಈಗ ಅದೆಲ್ಲ ಇತಿಹಾಸ.

****
ಒಂದೇ ಮಾತಿನಲ್ಲಿ ಹೇಳಬೇಕೆಂದರೆ-`ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ…’ ಹಾಡು ಮುಂದಿನ ಐವತ್ತು ವರ್ಷಗಳ ನಂತರ ಕೂಡ ಸೂಪರ್ಹಿಟ್ ಹಾಡಾಗಿಯೇ ಉಳಿಯಬಲ್ಲಂಥ ಅಮರಾ ಮಧುರಾ ಗೀತೆ. ಆ ಹಾಡು ಮೈಮನದ ತುಂಬಾ ಒಲವನ್ನೇ ತುಂಬಿಕೊಂಡಂಥ ಹುಡುಗಿಯೊಬ್ಬಳು ತಾನು ಪ್ರೀತಿಸಿದ ಹುಡುಗನೊಬ್ಬನಿಗೆ ಹೇಳುವಂತೆಯೇ ಇದೆ. ಆಕೆ `ಅರಳಿರುವ ಹೂವಿನಲ್ಲಿ ನಿನ್ನ ನೋಟವ/ ಹರಿಯುತಿಹ ನೀರಿನಲ್ಲಿ ನಿನ್ನ ಓಟವಾ…’ ಎಂದು ಶುರುಮಾಡಿ `ಮಿನುಗುತಿಹ ತಾರೆಯೆಲ್ಲಾ ನಿನ್ನ ಕಂಗಳೋ/ ನಗುತಿರಲು ಭೂಮಿಯೆಲ್ಲಾ ಬೆಳದಿಂಗಳೋ…’ ಎಂದೆಲ್ಲ ಹಾಡಿದಾಗ ಎಲ್ಲ ಹುಡುಗರಿಗೂ ಪುಳಕವಾಗುತ್ತದೆ. ಖುಷಿಯಾಗುತ್ತದೆ ತಮ್ಮ ಬಗ್ಗೆ ಹೆಮ್ಮೆಯಾಗುತ್ತದೆ. ಆದರೆ, ಮುಂದುವರಿದ ಆಕೆ- `ಮೂಡಣದ ಅಂಚಿನಿಂದ ನಿನ್ನ ಪಯಣವೋ / ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ…’ ಎಂದಾಗ ಮಾತ್ರ ಇದು ಪ್ರಿಯತಮನನ್ನು ಕುರಿತದ್ದಲ್ಲ; ಸೂರ್ಯನನ್ನು ಕುರಿತ ಹಾಡು ಎಂಬುದು ಅರ್ಥವಾಗಿಬಿಡುತ್ತದೆ. ಈ ಸಾಲು ಕೇಳಿದಾಕ್ಷಣ, ಹಿಂದೆ ಕೇಳಿದ ಸಾಲುಗಳೆಲ್ಲ ಹೊಸ ಅರ್ಥ ಹೊಳೆಯಿಸುತ್ತವೆ !
ಏಕಕಾಲಕ್ಕೆ ಪ್ರೇಮಗೀತೆ, ಭಾವಗೀತೆ, ವಿರಹಗೀತೆ ಮತ್ತು ಪ್ರಕೃತಿಗೀತೆ ಆಗುವಂಥ ಈ ಹಾಡನ್ನು ಚಿ. ಉದಯ ಶಂಕರ್ ಹೇಗೆ ಬರೆದರು? ಒಗಟಿನಂಥ ಈ ಹಾಡು ಬರೆದ ಸಂದರ್ಭದಲ್ಲಿ ಅವರ ಮನಸ್ಥಿತಿ ಹೇಗಿತ್ತು? ಎಂದರೆ ಭಗವಾನ್ ಹೀಗೆ ವಿವರಿಸುತ್ತಾರೆ: `ಗಾಳಿ ಮಾತು` ಸಿನಿಮಾದ ಕಥೆಯೇ ಹಾಗಿತ್ತು. ಕಥಾನಾಯಕಿ ಸುಂದರಿ, ಆದರೆ ಸಂಪ್ರದಾಯದ ಮಧ್ಯೆಯೇ ಬೆಳೆದ ಆಕೆ, ಅಪ್ಪ- ಅಮ್ಮ ತೋರಿಸಿದವನನ್ನೇ ಮದುವೆಯಾಗ್ತೇನೆ ಎಂದು ನಿರ್ಧರಿಸಿರುತ್ತಾಳೆ. ಅಂಥ ಅಮಾಯಕಿಯನ್ನು ಕಾಲೇಜಿನ ಅಷ್ಟೂ ಹುಡುಗರು ಪ್ರೀತಿಸುತ್ತಿರುತ್ತಾರೆ. ಅಷ್ಟು ಸಾಲದೆಂಬಂತೆ, ಆಕೆಯನ್ನು ಮದುವೆಯಾಗುವ ಉದ್ದೇಶದಿಂದಲೇ ಪಕ್ಕದೂರಿನ ಶ್ರೀಮಂತರ ಮಗನೂ ಬಂದಿರುತ್ತಾನೆ. ಇಷ್ಟೆಲ್ಲ ಜನರ ಮುಂದೆ- ಕಾಲೇಜಿನ ವಾರ್ಷಿಕೋತ್ಸವದ ದಿನ ಆಕೆ ಹಾಡು ಹೇಳಬೇಕು. ಈ ಸಂದರ್ಭವನ್ನು ಉದಯಶಂಕರ್ಗೆ ವಿವರಿಸಿ, ಇದಕ್ಕೆ ಹೊಂದುವಂತೆ ಒಂದು ಹಾಡು ಬರೀರಿ ಸಾರ್ ‘ ಎಂದೆವು.
ಇದೆಲ್ಲ ನಡೆದದ್ದು ಚೆನ್ನೈನ ಸ್ವಾಗತ್ ಹೋಟೆಲಿನ ರೂಮ್ ಒಂದರಲ್ಲಿ. ಸಿನಿಮಾದ ಒಟ್ಟು ಕಥೆ ಗೊತ್ತಿತ್ತಲ್ಲ- ಅದನ್ನೇ ಒಮ್ಮೆ ನೆನಪು ಮಾಡಿಕೊಂಡ ಉದಯ ಶಂಕರ್ ಹೇಳಿದರು: ಸರಿ, ಈ ಸಂದರ್ಭಕ್ಕೆ ಒಂದು ಒಗಟಿನಂಥ ಹಾಡು ಬರೆದುಕೊಡ್ತೇನೆ. ಅದು ಏಕಕಾಲಕ್ಕೆ ಭಾವಗೀತೆಯೂ ಆಗಬೇಕು, ಪ್ರೇಮಗೀತೆಯೂ ಆಗಬೇಕು . ಇವೆರಡೂ ಅಲ್ಲದ ಇನ್ನೊಂದು ಅರ್ಥ ಕೂಡ ಈ ಹಾಡಲ್ಲಿರಲಿ. ಕಾಲೇಜು ವಾರ್ಷಿಕೋತ್ಸವ ಅಂದ ಮೇಲೆ ಮುಸ್ಸಂಜೆಯ ಹೊತ್ತು ಶುರುವಾಗುತ್ತದೆ ತಾನೆ? ಆ ಸಂದರ್ಭಕ್ಕೆ ಹೊಂದಿಕೆಯಾಗುವಂಥ ಹಾಡು ಬರೆದು ಕೊಡ್ತೇನೆ ‘ ಎಂದರು. ನಂತರದ ಹತ್ತು ನಿಮಿಷದಲ್ಲಿ ಯಾವುದೋ ಧ್ಯಾನದಲ್ಲಿ ಮುಳುಗಿದವರಂತೆ ಕೂತು ಹಾಡು ಬರೆದೇ ಬಿಟ್ಟರು !
ಸುಮ್ಮನೇ ನೆನಪು ಮಾಡಿಕೊಳ್ಳಿ: ೮೦ರ ದಶಕದ ಸಂದರ್ಭದಲ್ಲಿ ಹುಡುಗಿಯರು ಇದ್ದುದೇ ಹಾಗೆ; ಅವರಿಗೂ `ಅವನನ್ನು’ ನೋಡಬೇಕೆಂಬ ಆಸೆಯಿರುತ್ತಿತ್ತು. ಆದರೆ `ಅವನು’ ಕದ್ದು ನೋಡಲಿಕ್ಕೂ ಸಿಗುತ್ತಿರಲಿಲ್ಲ. ಮಾತಾಡಿಸಬೇಕೆಂಬ ತುಡಿತವಿರುತ್ತಿತ್ತು. ಆದರೆ ಹಾಗೆಲ್ಲ ಮುಂದುವರಿಯಲು `ಸಂಪ್ರದಾಯ’ ಬಿಡುತ್ತಲೇ ಇರಲಿಲ್ಲ. ಅವನ ಮುಂದೆ ಛಕ್ಕನೆ ಹೋಗಿ ನಿಂತು ಸುಮ್ಮನೇ ಒಮ್ಮೆ ನಾಚಿಕೊಳ್ಳುವ ಆಸೆ ಕೂಡ ಹುಡುಗಿಯರಿಗೆ ಇರುತ್ತಿತ್ತು. ಆದರೆ ಆ ಸಂದರ್ಭವೂ ಒದಗಿ ಬರುತ್ತಿರಲಿಲ್ಲ. ಹೀಗಿದ್ದಾಗಲೇ- ಕನಸಲ್ಲಿ ಬಂದಿದ್ದ ಹುಡುಗ, ಕಣ್ಮುಂದೆಯೇ ಬಂದು ಕೂತಿದ್ದರೆ- ಮಲ್ಲಿಗೆಯಂಥ ನಗುವಿನ; ಸಂಪಿಗೆಯಂಥ ಮೈ ಬಣ್ಣದ ಆ ಬೆಡಗಿ ಇಷ್ಟಿಷ್ಟೇ ನಾಚಿಕೊಂಡು, ಏಕಕಾಲಕ್ಕೆ ಹುಡುಗನನ್ನು ಪರವಶಗೊಳಿಸುವ ಹಾಗೂ ತಬ್ಬಿಬ್ಬು ಮಾಡುವಂಥ ಹಾಡೊಂದನ್ನು ಹೀಗೂ ಹಾಡಬಹುದು ಎಂದು ತೋರಿಸಿಕೊಟ್ಟರಲ್ಲ ಉದಯಶಂಕರ್?
ಅವರಿಗೆ ನಮಸ್ಕಾರ.

Advertisements

2 Comments »

 1. 1
  Mallikarjuna Says:

  Thank you.
  Chi UdayaShankar, is worth his weight in gold. My Dad, Myself & my 11 year old nephew, all love this song so much.

  Manikanth,
  I didn’t know your web-presence.
  You’ve won a regular visitor. You rock.

 2. 2
  Nagaraj Says:

  ಸಾರ್ ನಿಮ್ಮ ಬರಹ ಎಂದಿನಂತೆ ಆಸಕ್ತಿದಾಯಕ ಹಾಗೂ ಸಂಗ್ರಹಯೋಗ್ಯ ಮಾಹಿತಿಯನ್ನೊಳಗೊಂಡಿದೆ. ತುಂಬಾ ಚೆನ್ನಾಗಿ ಬರೀತೀರಿ ಸಾರ್.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: