ಹಾಡಿನಲ್ಲಿ ಇರುವವರೆಲ್ಲ ರಾತ್ರಿಯ ಕನಸಿಗೇ ಬಂದಿದ್ದರು!

ಚಿತ್ರ: ತಾಯಿಯ ಮಡಿಲಲ್ಲಿ
ಗಾಯನ: ಎಸ್.ಪಿ.ಬಿ. ಮತ್ತು ಎಸ್. ಜಾನಕಿ
ರಚನೆ: ಸಿ.ವಿ. ಶಿವಶಂಕರ್
ಸಂಗೀತ: ಸತ್ಯಂ

ಕನ್ನಡದಾ ರವಿ ಮೂಡಿಬಂದ
ಕನ್ನಡದಾ ರವಿ ಮೂಡಿಬಂದಾ
ಮುನ್ನಡೆವ ಬೆಳಕನ್ನು ತಂದಾ
ರಾಜ್ಯೋತ್ಸವ, ನಮ್ಮ ರಾಜ್ಯೋತ್ಸವ ||ಪ||

ನಮ್ಮ ನಾಡ ಹಿರಿಯರ ಪೌರುಷದ ತ್ಯಾಗದಿಂದ
ಕೀರ್ತಿ ಶಿಖರ ಮುಟ್ಟಿತು ಕನ್ನಡಿಗರ ಸಂತಸ
ಚಿಕ್ಕ ಚಿಕ್ಕ ಭಾಗವಾಗಿ ಚೆದುರಿದ್ದ ನಾಡಿದು
ಒಂದಾಗಿ ಕೂಡಿತು ಕರ್ನಾಟಕವಾಯಿತು ||ಕನ್ನಡದಾ||

ವೀರರೆಲ್ಲ ವೀರಗೀತೆ ಹಾಡಿದಂಥ ನಾಡಿದು
ಸಿರಿತಂದಾ ಅರಸರು ಮೆರೆದಂಥಾ ನಾಡಿದು
ಶ್ರೀಗಂಧಾ ಸೌಗಂಧಾ ತುಂಬಿರುವಾ ಬೀಡಿದು
ಶಿಲ್ಪಕಲೆಯ ಜೀವಂತ ಸ್ವರ್ಗವಾದ ಗೂಡಿದು ||ಕನ್ನಡದಾ||

ನಾಟ್ಯರಾಣಿ ಶಾಂತಲೆಯ ಕೀರ್ತಿ ಕಂಡ ಕನ್ನಡ
ವೀರರಾಣಿ ಚೆನ್ನಮ್ಮನ ನೆನಪು ಕೊಡುವ ಕನ್ನಡ
ರನ್ನ ಪಂಪ ಕವಿಗಳ ಭವ್ಯ ಕಾವ್ಯ ಕನ್ನಡ
ಜೀವನದಿ ನಲಿಯುತಿಹ ಪುಣ್ಯಭೂಮಿ ಕನ್ನಡ ||ಕನ್ನಡದಾ||

ಬೀದರ್‌ನ ಕುಗ್ರಾಮದಿಂದ ಹಿಡಿದು ಬೆಂಗಳೂರಿನ ಡಾಲರ್‍ಸ್ ಕಾಲನಿಯವರೆಗೆ; ಮಂಗಳೂರಿನ ಮೀನು ಮಾರ್ಕೆಟ್‌ನಿಂದ ಆರಂಭಿಸಿ ಆಂಧ್ರದ ಗಡಿಯೊಂದಿಗೆ ಸೇರಿಹೋಗಿರುವ ರಾಯದುರ್ಗದ ಪುಟ್ಟ ಹಳ್ಳಿಯವರೆಗೆ ಇವತ್ತು ಎಲ್ಲಿಯೇ ರಾಜ್ಯೋತ್ಸವ ಕಾರ್ಯಕ್ರಮ ನಡೆದರೂ, ಅಲ್ಲೆಲ್ಲ ಆರ್ಕೆಸ್ಟ್ರಾದವರು ಕಡ್ಡಾಯ ಎಂಬಂತೆ ಹಾಡುವ ಮೊದಲ ಗೀತೆ-`ಕನ್ನಡದಾ ರವಿ ಮೂಡಿ ಬಂದಾ, ಮುನ್ನೆಡೆವಾ ಬೆಳಕನ್ನು ತಂದಾ…’ ಈ ಗೀತೆಯನ್ನು ಒಳಗೊಂಡಿರುವ ತಾಯಿಯ ಮಡಿಲಲ್ಲಿ ಸಿನಿಮಾ ತೆರೆಕಂಡು ಈಗಾಗಲೇ ೨೮ ವರ್ಷಗಳೇ ಕಳೆದುಹೋಗಿವೆ. ಆದರೆ ಈ ರಾಜ್ಯೋತ್ಸವ ಗೀತೆ ನಿತ್ಯನೂತನ ಎಂಬಂತೆ ಉಳಿದುಕೊಂಡಿದೆ. ಯುಗಾದಿಯಂದು `ಯುಗಾದಿಯುಗಾದಿ ಕಳೆದರೂ….’ ಗೀತೆಯನ್ನು; ಗಣೇಶ ಚತುರ್ಥಿಯಂದು’ `ಜಯಗಣೇಶ, ಜಯಗಣೇಶ….’ ಹಾಡನ್ನು, ದೀಪಾವಳಿಯಂದು `ನಂದಾದೀಪ’ ಚಿತ್ರಗೀತೆಯನ್ನು ಶ್ರದ್ಧೆ-ಉತ್ಸಾಹದಿಂದ ಪ್ರಸಾರ ಮಾಡುವ ಆಕಾಶವಾಣಿಯವರು ರಾಜ್ಯೋತ್ಸವದಂದು ಕನಿಷ್ಠ ಹದಿನೈದು ಬಾರಿಯಾದರೂ `ಕನ್ನಡದಾ ರವಿ ಮೂಡಿಬಂದಾ’ ಹಾಡನ್ನು ಕೇಳಿಸುತ್ತಾರೆ.
ಈ ಅನುಪಮ ಗೀತೆಯನ್ನು ಬರೆದವರು ಸಿ.ವಿ. ರವಿಶಂಕರ್. ಕನ್ನಡನಾಡಿನ ಇತಿಹಾಸ, ಸಂಸ್ಕೃತಿ ಪರಿಚಯ, ಪ್ರಾಕೃತಿಕ ವೈಭವವನ್ನು ತುಂಬಾ ಆಪ್ತವಾಗಿ ಹೇಳಿರುವುದು ಈ ಗೀತೆಯ ಹೆಚ್ಚುಗಾರಿಕೆ. ಈ ಹಾಡು ಅವರೊಳಗೆ ಸೃಷ್ಟಿಯಾದದ್ದು ಹೇಗೆ? ಅವರು ಈ ಗೀತೆ ರಚಿಸಿದ ಸಂದರ್ಭವಾದರೂ ಎಂಥದಿತ್ತು? ಈ ಹಾಡು ಬರೆಯುವಾಗ ಶಿವಶಂಕರ್ ಎದುರಿಸಿದ ಸವಾಲುಗಳಾದರೂ ಎಂಥವು? ಇಂಥವೇ ಕುತೂಹಲಕರ ಪ್ರಶ್ನೆಗಳೊಂದಿಗೆ ಎದುರು ನಿಂತರೆ, ಶಿವಶಂಕರ್ ಮಾರುದ್ದದ ಉತ್ತರವನ್ನೇ ನೀಡಿದರು. ಅದನ್ನು ಅವರ ಮಾತಿನಲ್ಲೇ ಕೇಳೋಣ ಬನ್ನಿ:
ಅಬ್ಬಾಯಿ ನಾಯ್ಡು ನಿರ್ಮಾಣದ `ತಾಯಿಯ ಮಡಿಲಲ್ಲಿ’ ಚಿತ್ರ ತಯಾರಿಕೆಯ ಹಂತದಲ್ಲಿತ್ತು. ಲೀಲಾವತಿ-ಬಾಲಕೃಷ್ಣ-ಅಶೋಕ್-ಆರತಿ ತಾರಾಗಣವೆಂದೂ, ಬಿ. ಸುಬ್ಬರಾವ್ ನಿರ್ದೇಶಕರೆಂದೂ, ಸತ್ಯಂ ಅವರ ಸಂಗೀತ ನಿರ್ದೇಶನವೆಂದೂ ನಿರ್ಧಾರವಾಗಿತ್ತು. ಚಿ. ಉದಯಶಂಕರ್ ಅವರಿಂದ ಮೂರು ಹಾಡುಗಳನ್ನೂ ಬರೆಸಿ ಆಗಿತ್ತು. ಹೀಗಿದ್ದಾಗಲೇ ಅಬ್ಬಾಯಿನಾಯ್ಡು ಕರೆ ಕಳುಹಿಸಿದರು. ಹೋದೆ. `ಕಾಲೇಜು ವಾರ್ಷಿಕೋತ್ಸವದಲ್ಲಿ ಹೀರೋ-ಹೀರೋಯಿನ್ ಹಾಡುವಂಥ ಒಂದು ಸಾಂಗ್ ಬೇಕಲ್ಲ ಸಾರ್. ಅದೇ ಸಿನಿಮಾದ ಹೈಲೈಟ್ ಆಗುವಂತಿರಬೇಕು’ ಅಂದರು ಅಬ್ಬಾಯಿ. ನನಗೆ ಮೊದಲಿಂದಲೂ ಕನ್ನಡ ನಾಡು, ನುಡಿ ಅಂದರೆ ವಿಪರೀತ ಅಭಿಮಾನ. ಕಾಲೇಜು ವಾರ್ಷಿಕೋತ್ಸವಕ್ಕೆ ಕನ್ನಡದ ಹಿರಿಮೆ ಸಾರುವಂಥ ಹಾಡನ್ನೇ ಬರೆಯಬಾರದೇಕೆ ಎಂದು ಯೋಚಿಸಿದೆ. ಅದನ್ನೇ ಅಬ್ಬಾಯಿ ನಾಯ್ಡುಗೂ ಹೇಳಿದೆ. ಒಳ್ಳೇ ಐಡಿಯಾ ಸಾರ್. ಹಾಗೇ ಮಾಡಿ ಅಂದರು.
ಸರಿ, ಎಂದು ಮನೆಗೆ ಬಂದೆ. ಆ ಚಿತ್ರಕ್ಕೆ ಈಗಾಗಲೇ ಚಿ. ಉದಯಶಂಕರ್ ಮೂರು ಹಾಡು ಬರೆದಿರುವುದರಿಂದ ಅವರಿಗಿಂತ ಅಥವಾ ಅವರಷ್ಟೇ ಚೆನ್ನಾಗಿ ಬರೆಯಬೇಕು ಅನ್ನೋ ಹಠ ಬಂದುಬಿಡ್ತು. ಆದರೆ ಏನು ಬರೆಯಲಿ? ಹೇಗೆ ಬರೆಯಲಿ ಅನ್ನೋದೇ ಗೊತ್ತಾಗಲಿಲ್ಲ. ಇದೇ ಯೋಚನೆಯಲ್ಲಿ ರಾತ್ರಿ ಮಲಗುವಾಗ ಕಾಲೇಜಿನ ಹುಡುಗ-ಹುಡುಗಿ ಹಾಡುವ ಹಾಡು ಅಂದಮೇಲೆ ಅವರ ವಯೋಮಾನಕ್ಕೆ ತಕ್ಕಂತೆ ಕನ್ನಡ ನಾಡಿನ ವೈಭವ ಸಾರುವ ಹಾಡೇ ಆಗಿರಬೇಕು ಅಂದುಕೊಂಡೆ. ಈ ಹಾಡಿನಲ್ಲಿ ಯಾವ ಯಾವ ರಾಜರು, ರಾಣಿಯರು, ಕವಿಗಳ ಹೆಸರು ಬಳಸಬಹುದು ಎಂದೆಲ್ಲ ಲೆಕ್ಕಹಾಕುತ್ತಲೇ ನಿದ್ರೆಗೆ ಜಾರಿದೆ.
ಅವತ್ತು ರಾತ್ರಿ ನನಗೆ ದೊಡ್ಡ ಕನಸು. ಕನಸಿಗೆ ಬಂದದ್ದಾದರೂ ಯಾರ್‍ಯಾರು ಅಂತೀರಿ? ನಾಟ್ಯರಾಣಿ ಶಾಂತಲೆ, ರಾಣಿ ಚೆನ್ನಮ್ಮಾಜಿ, ಮೈಸೂರಿನ ಅರಸರು, ಜೀವನದಿಗಳಾದ ಕಾವೇರಿ, ಕೃಷ್ಣಾ, ಶರಾವತಿ, ರನ್ನ, ಪಂಪ…ನಮ್ಮ ಕನ್ನಡ ನಾಡಿನ ವೈಭವ… ಹೀಗೇ… ಈ ಕನಸನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಂಡೇ ಹಾಡು ಬರೆಯಲು ಕುಳಿತೆ. ಮೊದಲ ಚರಣದಲ್ಲಿ ಕನ್ನಡ ಚಳವಳಿ, ಅವರ ಹೋರಾಟದ ಸಾಲು ಹಾಡಿನ ರೂಪ ಪಡೆದುಕೊಂಡಿತು. ಕರುನಾಡಿನ ಪ್ರಕೃತಿ ವೈಭವ ಎರಡನೇ ಚರಣದಲ್ಲಿ ಸೇರಿಕೊಂಡಿತು. ಮೂರನೇ ಚರಣದಲ್ಲಿ ರಾಣಿಯರು, ಕವಿಗಳು, ನದಿಗಳೆಲ್ಲ ಜಾಗ ಪಡೆದುಕೊಂಡು ರಾಜ್ಯೋತ್ಸವ ಹಾಡು ಸೃಷ್ಟಿಯಾಗಿಯೇ ಹೋಯಿತು.
ರೆಕಾರ್ಡಿಂಗ್‌ಗೆ ಹೋದಾಗ ಹಾಡು ಕಂಡು ಅಬ್ಬಾಯಿ ನಾಯ್ಡು ಖುಷಿಯಾದರು. ಆದರೆ ನಿರ್ದೇಶಕ ಬಿ. ಸುಬ್ಬರಾವ್-` ಇದೇನ್ರಿ, ಕನ್ನಡದಾ ರವಿ ಮೂಡಿ ಬಂದಾ’ ಅಂತ ಬರೆದಿದ್ದೀರಿ! ಕನ್ನಡದ ರವಿ ತೆಲುಗು ರವಿ ಅಂತೆಲ್ಲ ಇರ್‍ತದಾ? ಇದ್ಯಾಕೋ ಸರಿ ಹೋಗ್ತಾ ಇಲ್ಲ ಅಂದರು. ತಕ್ಷಣವೇ ನಾನು- `ನಿಮಗೆ ಅದೆಲ್ಲ ಗೊತ್ತಾಗಲ್ಲ ಸುಮ್ನಿರಿ ಸಾರ್. ಕನ್ನಡದ ರವಿ ಮೂಡಿ ಬಂದಾ ಎಂದು ಬರೆದರೆ, ಆ ಹಾಡಿಗೆ ಒಂದು ಸೆಂಟಿಮೆಂಟಲ್ ವ್ಯಾಲ್ಯೂ ಬರುತ್ತೆ’ ಎಂದೆ. ಅವರು ಎರಡನೇ ಮಾತಾಡಲಿಲ್ಲ…
ಇದಿಷ್ಟೂ ಹಾಡು ಬರೆದಾಗಿನ ಕಥೆ. ಮುಂದೆ ಅದರ ರೆಕಾರ್ಡಿಂಗ್ ಸಂದರ್ಭದಲ್ಲಿ ಒಂದು ಸ್ವಾರಸ್ಯ ನಡೀತು. ಅವತ್ತಿಗೆ ಎಸ್ಪಿ ಬಾಲಸುಬ್ರಹ್ಮಣ್ಯಂ ತುಂಬಾ ಬೇಡಿಕೆಯಲ್ಲಿದ್ದ ಗಾಯಕ-ದಿನಕ್ಕೆ ಅವರು ಹದಿನೈದು ಹಾಡು ಹೇಳ್ತಾರೆ ಅನ್ನೋ ಮಾತು ಚಾಲ್ತಿಯಲ್ಲಿತ್ತು. ಅದೊಂದು ದಿನ ಹಾಡಲು ನಿಂತೇಬಿಟ್ಟರು ಎಸ್ಪಿ. ಎರಡನೇ ಚರಣದ ಮೊದಲ ಸಾಲು-`ವೀರರೆಲ್ಲ ವೀರಗೀತೆ ಹಾಡಿದಂಥ ನಾಡಿದು’ ಎಂಬುದನ್ನು ಎಸ್ಪಿ, ಲೋ ಪಿಚ್‌ನಲ್ಲಿ (ಕೆಳಸ್ವರದಲ್ಲಿ) ಹಾಡಿದ್ರು. ಸಂಗೀತ ನಿರ್ದೇಶಕ ಸತ್ಯಂ -`ಓಕೆ’ ಅಂದೇಬಿಟ್ಟರು. ಈ ಹಾಡು ಹೇಳಿದ ನಂತರ ಹೈದರಾಬಾದ್‌ಗೆ ಹೋಗಲು ಎಸ್ಪಿ ಆಗಲೇ ವಿಮಾನದ ಟಿಕೆಟ್ ರಿಸರ್ವ್ ಮಾಡಿಸಿದ್ದರು. ಅವರು ಕೆಳಸ್ವರದಲ್ಲಿ ಹಾಡಿದ್ದು ನನಗೆ ಸರಿ ಕಾಣಲಿಲ್ಲ. ತಕ್ಷಣವೇ ಮಧ್ಯೆ ಪ್ರವೇಶಿಸಿ-`ಸಾರ್, ಇದು ಕನ್ನಡ ನಾಡಿನ ಹಿರಿಮೆ ಸಾರುವ ಹಾಡು. ಇದನ್ನು ಲೋ ಪಿಚ್‌ನಲ್ಲಿ ಹಾಡಿದರೆ ಸರಿಯಾಗುವುದಿಲ್ಲ. ದಯವಿಟ್ಟು ಸ್ವಲ್ಪ ಎತ್ತರದ ಧ್ವನಿಯಲ್ಲಿ ಹಾಡಿ’ ಎಂದು ವಿನಂತಿಸಿದೆ.
ಎಸ್ಪಿ ಅವರಿಗೆ ನನ್ನ ಮಾತು, ಅದರ ಹಿಂದಿರುವ ಕಾಳಜಿ ಅರ್ಥವಾಯಿತು’. ಹೌದು, ನೀವು ಹೇಳೋದು ಸರಿ’ ಎಂದವರೇ ವಿಮಾನದ ಟಿಕೆಟ್ ಹರಿದು ಹಾಕಿ ಪ್ರಯಾಣ ರದ್ದು ಮಾಡಿದರು. ನಂತರ ಇದೇ ಹಾಡನ್ನು ಎರಡನೇ ಬಾರಿಗೆ ಹಾಡಿದರು. ಈಗ ನಾವು-ನೀವೆಲ್ಲ ಕೇಳ್ತಾ ಇರೋದು ಅದೇ ಹಾಡು…’
***
ಇಷ್ಟು ಹೇಳಿ ಸುಮ್ಮನಾದರು ಶಿವಶಂಕರ್. ಆ ಮೂಲಕ ಒಂದೊಂದು ಹಾಡಿನ ಹಿಂದೆಯೂ ಒಂದೊಂದು ಚೆಂದದ ಕತೆ ಇರುತ್ತದೆ ಎಂಬ ಮಾತಿಗೆ ಸಾಕ್ಷಿಯನ್ನೂ ಒದಗಿಸಿದರು.
ಅದಕ್ಕೇ ಹೇಳಿದ್ದು: ಕಾಡುವ ಹಾಡುಗಳ ಕಥೆ ಅಂದ್ರೆ ಸುಮ್ನೇನಾ?

Advertisements

1 Comment »

  1. ಅದ್ಭುತವಾದ ಹಾಡು ಸೃಷ್ಟಿಯಾಗಲು ಇಬ್ಬರು ಪರ್ಫೆಕ್ಷನಿಸ್ಟ್ ಗಳು ಹೇಗೆ ಕಾರಣರಾದರು ಎಂದು ತುಂಬಾ ಆತ್ಮೀಯವಾಗಿ ತಿಳಿಸಿಕೊಟ್ಟಿದ್ದೀರಿ. ಅವರಿಗೂ, ನಿಮಗೂ ಅನಂತ ಧನ್ಯವಾದಗಳು.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: