ಮುಗಿಲೆತ್ತರದ ಈ ಕಂಬವನ್ನು ನಿಲ್ಲಿಸಿದ್ದು ದೇವತೆಗಳಂತೆ!

soma

ಮೇಲುಕೋಟೆ, ಚೆಲುವರಾಯಸ್ವಾಮಿಯ ನೆಲೆವೀಡು. ಈ ಪುಣ್ಯಕ್ಷೇತ್ರದಲ್ಲಿ ತಪ್ಪದೇ ನೋಡಬೇಕಾದ ಸ್ಥಳಗಳೆಂದರೆ-ರಾಯಗೋಪುರ, ಅಕ್ಕ-ತಂಗಿಯರ ಕೊಳ ಮತ್ತು ಧನುಷ್ಕೋಟಿ. ಈ ಪೈಕಿ ಆಕಾಶಕ್ಕೆ ಎಟುಕುವಂತಿರುವ ಎರಡು ಭಾರೀ ಕಂಬಗಳ ರಾಯಗೋಪುರವಂತೂ ವಿಸ್ಮಯಗಳ ಆಗರವೇ ಸರಿ.(ವರನಟ ರಾಜ್‌ಕುಮಾರ್, ಮಣಿರತ್ನಂ, ರಜನಿಕಾಂತ್‌ರ ಬಹುಪಾಲು ಸಿನಿಮಾಗಳಲ್ಲಿ ರಾಯಗೋಪುರ ಬಳಿ ಹಾಡಿನ; ಮಹತ್ವದ ಸನ್ನಿವೇಶಗಳ ಚಿತ್ರೀಕರಣ ಕಡ್ಡಾಯ ಎಂಬಂತೆ ನಡೆದಿದೆ) ಏಕೆಂದರೆ, ಎರಡು ಕಂಬಗಳ ಪೈಕಿ ಒಂದನ್ನು ಗುಂಡಿ ತೋಡಿ, ಬಂದೋಬಸ್ತು ಮಾಡಿ ನಿಲ್ಲಿಸಲಾಗಿದೆ. ಆದರೆ ಇನ್ನೊಂದನ್ನು ಸುಮ್ಮನೆ ನಿಲ್ಲಿಸಲಾಗಿದೆ, ಅಷ್ಟೆ! ಮಣ್ಣೊಳಗೆ ಅದು ಬೆರಳ ಉದ್ದದಷ್ಟೂ ಜಾಗದಲ್ಲೂ ಹೂತುಕೊಂಡಿಲ್ಲ! ಅದಕ್ಕೆ ಆಧಾರವೇ ಇಲ್ಲ. ಮೇಲುಕೋಟೆ ಸೀಮೆಯ ಜನರು ಹಾಗೂ ಚಲುವರಾಯಸ್ವಾಮಿಯ ಭಕ್ತರು ಹೇಳುವುದನ್ನೇ ನಂಬುವುದಾದರೆ, ಆಧಾರವೇ ಇಲ್ಲದೆ ನಿಂತಿರುವ ಗೋಪುರದ ಕಳೆಗೆ ಗರಿಗರಿಯಾಗಿರುವ ಕರ್ಚೀಫನ್ನು ಈ ಕಡೆಯಿಂದ ತೂರಿಸಿ ಆ ಕಡೆಯಿಂದ ತೆಗೆದುಕೊಳ್ಳಬಹುದಂತೆ! ಗೋಪುರ ಆಧಾರವಿಲ್ಲದೆ ನಿಂತಿದೆ ಎಂಬುದನ್ನು ಪರೀಕ್ಷಿಸುವುದು ಹೇಗೆ ಎಂಬುದಕ್ಕೆ ಜನ ಈಗಲೂ ಕರ್ಚೀಫಿನ ಪ್ರಸಂಗ ಹೇಳುವುದುಂಟು.
ಮೇಲುಕೋಟೆಯ ನರಸಿಂಹಸ್ವಾಮಿ ಎಡಗಡೆಗೆ ಸ್ವಲ್ಪ ವಾಲಿಕೊಂಡಿರುವುದೇಕೆ ಎಂಬುದಕ್ಕೆ ಇರುವ ಐತಿಹ್ಯದಂತೆಯೇ, ರಾಯಗೋಪುರ ಆಧಾರವಿಲ್ಲದೆ ನಿಂತಿದ್ದೇಕೆ ಎಂಬುದಕ್ಕೂ ಒಂದು ಐತಿಹ್ಯದ ಕತೆ ಇದೆ. ಅದು ಹೀಗೆ:
ಚೆಲುವರಾಯಸ್ವಾಮಿ ಮೇಲುಕೋಟೆಗೆ ಬಂದು ನೆಲೆಸಿದನಲ್ಲ? ಆಗ ದೇವಲೋಕದಲ್ಲಿ ಒಂದು ಸಭೆ ನಡೆಯಿತಂತೆ. ಆಗ ದೇವೇಂದ್ರ ಹೇಳಿದನಂತೆ: `ಭಗವಂತ ಭೂಲೋಕದಲ್ಲಿ ಅವತಾರವೆತ್ತಿದ್ದಾನೆ. ಕಲಿಯುಗ ಕೊನೆಯಾಗುವವರೆಗೂ ಆತ ಅಲ್ಲಿಯೇ ಇರತ್ತಾನೆ. ಆತ ನೆಲೆಗೊಂಡಿರುವ ಸ್ಥಳದಲ್ಲಿ ನಾವು ಒಂದು ಗೋಪುರ ನಿರ್ಮಿಸೋಣ. ಭೂಲೋಕದ ಜನರೆಲ್ಲ ನಿದ್ರಿಸುತ್ತಿರುವಾಗ, ಅಂದರೆ ರಾತ್ರಿ ಕಳೆದು ಬೆಳಗಾಗುವುದರೊಳಗೆ ಗೋಪುರ ನಿಲ್ಲಿಸಿ ಬಂದುಬಿಡೋಣ. ಇದು ಭಗವಂತನಿಗೆ ನಮ್ಮ ಪ್ರೀತಿಯ ಕಾಣಿಕೆಯಾಗಲಿ’ ಎಂದನಂತೆ. ಈ ಮಾತಿಗೆ ಎಲ್ಲರೂ ಒಪ್ಪಿಕೊಂಡರಂತೆ.
ಸರಿ, ಮೊದಲೇ ನಿರ್ಧರಿಸಿದಂತೆ ಅದೊಂದು ರಾತ್ರಿ ದೇವೇಂದ್ರನ ನೇತೃತ್ವದಲ್ಲಿ ದೇವತೆಗಳ ಹಿಂಡು ಮೇಲುಕೋಟೆಗೆ ಬಂತು. ಎಲ್ಲರೂ ಸೇರಿ ಒಂದು ಗುಂಡಿ ತೋಡಿ ಮುಗಿಲನ್ನೇ ಚುಂಬಿಸುವಂತಿದ್ದ ಒಂದು ಕಂಬವನ್ನು ನಿಲ್ಲಿಸಿದ ಸಂದರ್ಭದಲ್ಲಿಯೇ, ಈ ಚೆಲುವರಾಯಸ್ವಾಮಿಗೆ ಸ್ವಲ್ಪ ತಮಾಷೆ ಮಾಡಬೇಕು ಅನ್ನಿಸಿತಂತೆ. ಇದು ತಕ್ಷಣವೇ ಹುಂಜನ ವೇಷ ಧರಿಸಿ, ಆ ನಡುರಾತ್ರಿಯಲ್ಲಿಯೇ ದೇವತೆಗಳಿದ್ದ ಜಾಗಕ್ಕೆ ಹೋಗಿ `ಕೊಕ್ಕೊ ಕೋ ಕೋ’ ಎಂದು ಎರಡೆರಡು ಬಾರಿ ಕೂಗಿಬಿಟ್ಟಿತಂತೆ.
ಕೋಳಿ ಕೂಗಿದ್ದನ್ನು ಕೇಳಿಸಿಕೊಂಡ ದೇವತೆಗಳು-`ಓಹ್, ಕೋಳಿ ಕೂಗಿತು ಅಂದರೆ ಹಗಲು ಶುರುವಾಯಿತು ಎಂದೇ ಅರ್ಥ. ಮುಂದಿನ ಕೆಲವೇ ನಿಮಿಷಗಳಲ್ಲಿ ನರಮನುಷ್ಯರು ತಮ್ಮ ದೈನಂದಿನ ಕೆಲಸ ಆರಂಭಿಸಲು ಈ ಕಡೆ ಬರುತ್ತಾರೆ. ಅವರಿಗೆ ನಾವ್ಯಾರೂ ಕಾಣಿಸಿಕೊಳ್ಳುವುದು ಬೇಡ’ ಎಂದು ನಿರ್ಧರಿಸಿ, ಎರಡನೇ ಕಂಬ ಹೂಳಲು ಗುಂಡಿ ತೆಗೆಯುವುದನ್ನೂ ಮರೆತು, ಅದನ್ನು ತರಾತುರಿಯಿಂದಲೇ ಎತ್ತಿ, ಹಾಗೇ ಸುಮ್ಮನೆ ನಿಲ್ಲಿಸಿ ಮಾಯವಾಗಿಬಿಟ್ಟರಂತೆ!
ಅಂದಿನಿಂದ ಇಂದಿನವರೆಗೂ ಆ ರಾಯಗೋಪುರದ ಒಂದು ಕಂಬ ಆಧಾರವಿಲ್ಲದೆಯೇ ನಿಂತಿದೆಯಂತೆ!!
***
ಇದು ಮೇಲುಕೋಟೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಾಲ್ತಿಯಲ್ಲಿರುವ ಕಥೆ. ಆದರೆ ನಾಸ್ತಿಕರು ಇದನ್ನು ಒಪ್ಪುವುದಿಲ್ಲ. ದೇವೇಂದ್ರ ಮತ್ತು ಇತರರೂ ದೇವತೆಗಳ ಗುಂಪಿಗೇ ಸೇರಿದವರು ತಾನೆ? ಹಾಗಿರುವಾಗ ಚೆಲುವರಾಯಸ್ವಾಮಿ ಕೋಳಿಯಂತೆ ಕೂಗಿದ್ದು, ಅವರಿಗೆ ಗೊತ್ತಾಗಲಿಲ್ಲವಾ? ಒಂದು ವೇಳೆ, ಗೊತ್ತಾಗಲಿಲ್ಲ ಎಂದೇ ಇಟ್ಟುಕೊಂಡರೂ, ತಳಪಾಯ ಹಾಕದೇ ನಿಲ್ಲಿಸಿದ ಕಂಬ; ಗುಂಡಿಯ ಆಧಾರದೊಂದಿಗೆ ನಿಂತಿರುವ ಇನ್ನೊಂದು ಕಂಬದಷ್ಟೇ ಎತ್ತರಕ್ಕಿದೆಯಲ್ಲ? ಇದು ಸಾಧ್ಯವಾದದ್ದು ಹೇಗೆ? ಹೀಗೆಲ್ಲ ಆಗಬಹುದು ಎಂದು ದೇವತೆಗಳಿಗೆ ಮೊದಲೇ ಗೊತ್ತಿತ್ತಾ? ಎತ್ತರಕ್ಕಿರುವ ಒಂದು, ಸ್ವಲ್ಪ ಚಿಕ್ಕದಿರುವ ಇನ್ನೊಂದು ಕಂಬವನ್ನೇ ಅವರು ತಂದಿದ್ರಾ?
ಇಂಥ ಕುತೂಹಲದ, ಕಾಲೆಳಿಯುವ ಪ್ರಶ್ನೆಗಳನ್ನು ಕೇಳಬಾರದು, ಕೇಳಬಾರದು ಮತ್ತು ಕೇಳಬಾರದು. ಏಕೆಂದರೆ ಇಂಥ ಅತೀ ಕುತೂಹಲದ ಪ್ರಶ್ನೆಗಳಿಂದ ಐತಿಹ್ಯಗಳಿರುವ ಸ್ವಾರಸ್ಯವೇ ಹೋಗಿಬಿಡುತ್ತದೆ; ಏನಂತೀರಿ?

5 Comments »

 1. 1

  ಇಂಥ ಎಷ್ಟೊಂದು ದಂತಕಥೆಗಳಿವೆ… ಕೆಲವು ನಂಬಲಸಾಧ್ಯವಾದರೂ ಸ್ವಾರಸ್ಯಕರವಾಗಿರುತ್ತವೆ.

 2. 2
  rajani Says:

  heegu unta manikanth ji? yesht chanda ide nim blog thank u olle blog kottidke

 3. 3
  sandesh Says:

  super sir….ond sala allige beti kodbeku anta annistide

 4. ನೀವು ಹೀಗೆಲ್ಲಾ ದೇವರಹಸ್ಯಗಳನ್ನು ತಿಳಿಸಬಾರದು.ಇಂದಿನ ರಾಜಕಾರಣಿಗಳ ನಾಟಕದ ಎಷ್ಟೋ ಶಿಲಾನ್ಯಾಸಗಳು,ಅರೆಬರೆ ಕಟ್ಟಡಗಳು,ರಸ್ತೆಗಳು, ಸೇತುವೆಗಳಿಗೆ ಮುಂದೆ ಈ ರೀತಿಯ ದಂತಕಥೆಗಳು ಹುಟ್ಟುತ್ತವೆ ಎಂಬ ಭಯ ನನ್ನದು.
  ಅಶೋಕ ಉಚ್ಚಂಗಿ
  http://mysoremallige01.blogspot.com/

 5. 5
  shivu. Says:

  ಮಣಿಕಾಂತ್ ಸಾರ್,
  ನಿಮ್ಮ ಬ್ಲಾಗಿಗೆ ಗಿರಿಜಕ್ಕ [ನೀಲಗಿರಿ]ಕೊಟ್ಟ ಲಿಂಕಿನಿಂದ ಬಂದೆ. ಮೇಲು ಕೋಟೆಯ ರಾಯಗೋಪುರದ ವಿವರಣೆ ಚೆನ್ನಾಗಿದೆ. ಫೋಟೋಗಳು. ಚೆನ್ನಾಗಿದೆ. ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ. ನೀವು ನನ್ನ ಬ್ಲಾಗುಗಳಿಗೆ ಬನ್ನಿ ಅಲ್ಲಿರುವ ಫೋಟೊಗಳು ಮತ್ತು ಲೇಖನಗಳು ನಿಮಗಿಷ್ಟವಾಗಬಹುದು.
  ನನ್ನ ಬ್ಲಾಗ್ ವಿಳಾಸ :http://chaayakannadi.blogspot.com/
  ಮತ್ತೊಂದು ವಿಭಿನ್ನ ಬರವಣಿಗೆಗಾಗಿ :
  http://camerahindhe.blogspot.com/


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: