ಸೇನೆಗೆ ಸೋಲದ ಸಾಮ್ರಾಟ ಬಾಲೆಗೆ ಸೋತ part 2

ashoka

ಕಳಿಂಗ ಯುದ್ಧದಲ್ಲಿ ಕಂಡ ಅಪಾರ ಸಾವು-ನೋವು, ರಕ್ತಪಾತ ಸಾಮ್ರಾಟ್ ಅಶೋಕನ ಕಣ್ತೆರೆಸಿತು. ಇನ್ನು ಮುಂದೆ ನಾನು ಯುದ್ಧ ಮಾಡುವುದಿಲ್ಲ ಎಂದು ಆತ ಅಂದೇ ಘೋಷಿಸಿದ. ಹಾಗೆಯೇ ನಡೆದುಕೊಂಡು- ದೇವನಾಂಪ್ರಿಯ ರಾಜನಾಂಪ್ರಿಯ ಪ್ರಿಯದರ್ಶಿ (ದೇವತೆಗಳಿಗೂ, ರಾಜರುಗಳಿಗೂ ಪ್ರಿಯನಾದವನು) ಎಂದು ಕರೆಸಿಕೊಂಡ. ಇದು ನಮಗೆಲ್ಲ ಗೊತ್ತಿರುವ ಕತೆ.
ಆದರೆ, ಅಶೋಕ ಚಕ್ರವರ್ತಿಯ ಮನ ಪರಿವರ್ತನೆಗೆ ಮುಖ್ಯ ಕಾರಣವಾದಾಕೆ, ಕಳಿಂಗದ ಯುವರಾಣಿ, ಏಳು ವರ್ಷದ ಬಾಲೆ ಅಮಿತಾ ಎಂಬುದು ಬಹುಮಂದಿಗೆ ಗೊತ್ತಿಲ್ಲದ ಕಥೆ…

(ಕಳೆದ ವಾರ ಓದಿದ್ದು)
(ಭರತ ಖಂಡವನ್ನೇ ಗೆಲ್ಲಬೇಕೆಂಬ ಮಹದಾಸೆ ಹೊಂದಿದ್ದ ಮಗಧ ಸಾಮ್ರಾಟ ಅಶೋಕ, ನೆರೆ ರಾಜ್ಯವಾದ ಕಳಿಂಗದ ಮೇಲೆ ಯುದ್ಧ ಸಾರುತ್ತಾನೆ. ಈ ಸಂದರ್ಭದಲ್ಲಿ, ಯುದ್ಧ ಮತ್ತು ಆಡಳಿತದಲ್ಲಿ ನನಗೆ ಆಸಕ್ತಿಯಿಲ್ಲ ಎನ್ನುವ ಕಳಿಂಗದ ಮಹಾರಾಣಿ ನಂದಾ, ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಲು ದೇಗುಲಕ್ಕೆ ಹೋಗಿಬಿಡುತ್ತಾಳೆ. ಪರಿಣಾಮ, ರಾಜಕುಮಾರಿ, ಏಳು ವರ್ಷದ ಬಾಲೆ ಅಮಿತಾಳಿಗೆ ಯುವರಾಣಿಯ ಪಟ್ಟ ಕಟ್ಟಲಾಗುತ್ತದೆ. ಯುದ್ಧ ಆರಂಭವಾಗಿ, ಅಶೋಕನ ಸೇನೆಗೆ ಗೆಲುವಾಗುತ್ತದೆ. ಅಂತಃಪುರದಲ್ಲಿರುವ ರಾಣಿಯನ್ನು ಸೆರೆಹಿಡಿಯಲೆಂದು ಬಂದ ಅಶೋಕನ ಸೇನಾನಿ ಗೋಪಾಲನಿಗೆ- `ಯಾರೂ ಹೆದರಬೇಡಿ. ಕ್ರೂರಿ ಅಶೋಕನನ್ನು ನಾನು ಸೆರೆಹಿಡಿಯುತ್ತೇನೆ’ ಎಂಬ ಧೀರ-ಗಂಭೀರ ವಾಣಿಯೊಂದು ಕೇಳಿಸುತ್ತದೆ.)
`ಕಳಿಂಗದ ಮಹಾರಾಣಿ ಕ್ರೂರಿ ಸಾಮ್ರಾಟ ಅಶೋಕನನ್ನು ಸರಪಳಿಯಿಂದ ಬಂಧಿಸುವಳು’ ಎಂಬ ಗಂಭೀರವಾಣಿ ಕೇಳಿ, ಸೋಲರಿಯದ ಸೇನಾನಿ ಎಂದೇ ಹೆಸರಾಗಿದ್ದ ಗೋಪಾಲ ಕೂಡ ಒಂದರೆಕ್ಷಣ ಬೆಚ್ಚಿದ. ತನ್ನ ನಡಿಗೆಯನ್ನು ಛಕ್ಕನೆ ನಿಲ್ಲಿಸಿ ಹಾಗೇ ಯೋಚಿಸಿದ: ಕಳಿಂಗದ ಸೇನಾನಿ ಭದ್ರಕೀರ್ತಿ ಈಗಾಗಲೇ ಸೆರೆಸಿಕ್ಕಿದ್ದಾನೆ. ಇನ್ನೊಂದು ಕಡೆಯಲ್ಲಿ ಕಳಿಂಗದ ಸೇನೆಯೂ ಧೂಳೀಪಟವಾಗಿದೆ. ಕಳಿಂಗ ಪಟ್ಟಣ ಈಗಾಗಲೇ ಮಗಧದ ಸೈನಿಕರ ವಶವಾಗಿದೆ. ಅಂದ ಮೇಲೆ ಕಳಿಂಗ ರಾಜ್ಯ ಇಡಿಯಾಗಿ ಸಾಮ್ರಾಟ್ ಅಶೋಕನ ಕೈ ಸೇರಿದೆ ಎಂದೇ ಅರ್ಥ. ಹಾಗಿದ್ದರೂ; ಒಂದು ಹಿಂಡು ಸಶಸ್ತ್ರ ಸೇನೆಯೊಂದಿಗೆ ಅಶೋಕನೇ ಅಂತಃಪುರದೆಡೆಗೆ ಬರುತ್ತಿದ್ದಾನೆ ಎಂದು ಗೊತ್ತಾದ ನಂತರವೂ- `ಮಗಧದ ಸಾಮ್ರಾಟನನ್ನು ಸೆರೆಹಿಡಿಯುತ್ತೇನೆ ‘ ಅನ್ನಬೇಕಾದರೆ, ಇದರಲ್ಲೇನೋ ಷಡ್ಯಂತ್ರವಿರಲೇಬೇಕು…
ಹೀಗೆಲ್ಲ ಯೋಚಿಸಿದ ಗೋಪಾಲನಿಗೆ- ಕಳಿಂಗದವರು ಮಾಟ-ಮಂತ್ರ ಮಾಡಿಸಿರಬಾರದೇಕೆ? ಅಂತಃಪುರದೊಳಗೆ ಅಷ್ಟದಿಗ್ಬಂಧನದ ತಂತ್ರ ಬಳಸಿರಬಾರದೇಕೆ? ಇಲ್ಲವಾದರೆ, ಅಶೋಕನ ಸೇನಾನಿಯ ಎದುರೇ ಹೀಗೆಲ್ಲ ಮಾತಾಡಲು ಕಳಿಂಗದ ಮಹಾರಾಣಿಗೆ ತಲೆ ಕೆಟ್ಟಿಲ್ಲವಷ್ಟೆ… ಅಂತಃಪುರದೊಳಕ್ಕೆ ಬಂದ ಸಾಮ್ರಾಟ ಅಶೋಕ, ತನ್ನ ಇಡೀ ಸೇನೆಯ ಸಮೇತ ಅಷ್ಟದಿಗ್ಬಂಧನದ ಮೋಡಿಯಲ್ಲಿ ಮಾತು ಹೊರಡದೆ ಶಿಲೆಯಂತೆ ನಿಂತುಬಿಟ್ಟಾಗ, ಆತನನ್ನೇ ಸೆರೆಹಿಡಿದು ಬಿಡುವ ಹುನ್ನಾರವನ್ನು ಕಳಿಂಗದ ಮಹಾರಾಣಿ ನಂದಾ ಮಾಡಿರಬಾರದೇಕೆ? ಆಕೆಯ ಮಹಾಮಂತ್ರಿ ಸುಕಂಠನೇ ಹಿಂದೆ ನಿಂತು ಹೀಗೆಲ್ಲ ಮಾಡಿಸಿದ್ದಾನೋ ಏನೋ…?
ಇಂಥದೊಂದು ಯೋಚನೆ ಬಂದಾಕ್ಷಣ, ಸೇನಾಧಿಪತಿ ಗೋಪಾಲ ಬಿಟ್ಟ ಬಾಣದಂತೆ ಅಶೋಕನಿದ್ದೆಡೆಗೆ ದೌಡಾಯಿಸಿದ. ಆ ವೇಳೆಗೆ ಅಶೋಕನ ಪಟ್ಟದಾನೆ ಅರಮನೆಯ ದ್ವಾರಕ್ಕೆ ಆಗಮಿಸಿತ್ತು. ಎರಡೂ ಬದಿಗೆ ಸಶಸ್ತ್ರ ಸೈನಿಕರಿದ್ದರು. ಗೆಲುವಿನ ಹಮ್ಮಿನಲ್ಲಿದ್ದ ಅಶೋಕ, ಆನೆಯಿಂದ ಕೆಳಗಿಳಿಯಲು ಅಣಿಯಾಗಿದ್ದ.
ಓಡೋಡಿ ಬಂದ ಗೋಪಾಲನನ್ನು ಕಂಡು ಅಶೋಕನಿಗೂ ವಿಸ್ಮಯವಾಯಿತು. ಆತ ಪ್ರಶ್ನಿಸುವ ಮೊದಲೇ, ನಮಸ್ಕರಿಸಿ, ತಡವರಿಸಿ, ತಡವರಿಸಿಯೇ ಗೋಪಾಲ ಹೀಗೆಂದ: `ಮಹಾಪ್ರಭುಗಳು ಕ್ಷಮಿಸಬೇಕು. ಅರಮನೆಯಲ್ಲಿ ಅಪಾಯ ಉಂಟು. ದಯವಿಟ್ಟು ತಡೆಯಬೇಕು ಪ್ರಭೂ…’
ಅಶೋಕ ಹುಬ್ಬು ಗಂಟಿಕ್ಕಿ, ಕ್ರೋಧದಿಂದ ಕೇಳಿದ: `ಏನು? ಅಜೇಯ ಸಾಮ್ರಾಟ ಅಶೋಕನಿಗೆ ಅಪಾಯವೇ?’
ಈ ಮಾತಿಗೆ ಬೆವರುತ್ತಲೇ, ಗೋಪಾಲ ಅದೇ ತಡವರಿಕೆಯ ದನಿಯಲ್ಲಿ ಹೇಳಿದ: `ಕ್ರೂರಿ ಅಶೋಕನನ್ನು ಸರಪಳಿಯಿಂದ ಬಂಧಿಸುತ್ತೇನೆ’ ಎಂದು ಅಂತಃಪುರದಲ್ಲಿ ಕಳಿಂಗದ ರಾಣಿ ಮೇಲಿಂದ ಮೇಲೆ ಹೇಳುತ್ತಿದ್ದಾಳೆ. ಅವರು ಮಾಟ-ಮಂತ್ರ ಮಾಡಿಸಿದ್ದಾರೆಂಬ ಶಂಕೆ ನನ್ನದು. ಮಹಾಪ್ರಭುಗಳಿಗೆ ತೊಂದರೆಯಾದರೆ…?
ಅಶೋಕ ಕಟಕಟನೆ ಹಲ್ಲು ಕಡಿದು ಹೇಳಿದ: `ಹಾಗೋ… ಕಳಿಂಗದ ಮಹಾರಾಣಿಗೆ ಇನ್ನೂ ಬುದ್ಧಿ ಬಂದಿಲ್ಲವೆ? ಇರಲಿ. ಯಾರು ಯಾರನ್ನು ಸೆರೆ ಹಿಡಿಯುವರೋ ತೋರಿಸುತ್ತೇನೆ. ನನಗೆ ಮಂತ್ರ-ತಂತ್ರದ ಭೀತಿಯಿಲ್ಲ ಸೇನಾನಿಗಳೇ. ಹುಂ, ದಾರಿ ತೋರಿಸಿ…’
ಅಶೋಕ ಅರಮನೆಯನ್ನು ಪ್ರವೇಶಿಸುತ್ತಿದ್ದಂತೆಯೇ ಆತನ ಸೇನೆ ಕೊಂಬು-ಕಹಳೆ ಊದುತ್ತ, ನಗಾರಿ ಬಾರಿಸುತ್ತ `ಸಾಮ್ರಾಟ್ ಅಶೋಕನಿಗೆ ಜಯವಾಗಲಿ’ ಎಂದು ಘೋಷಿಸಿತು. ಅಶೋಕ-ಖಡ್ಗದ ಹಿಡಿಯ ಮೇಲೆ ಕೈ ಇರಿಸಿಯೇ, ಅಂಗರಕ್ಷಕರು ಹಾಗೂ ಸಾಮಂತರೊಂದಿಗೆ ಅಂತಃಪುರದತ್ತ ನಡೆದುಬಂದ.
***
ಅಮಿತಾಳನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಗೋಪಾಲನ ಮುಖ ಪರಿಚಯವಿತ್ತು. ಅಂತಃಪುರದ ಒಳಾಂಗಣದಲ್ಲಿ ಅವನನ್ನೂ, ಹಿಂದೆಯೇ ಬರುತ್ತಿದ್ದ ಸಾಮ್ರಾಟ್ ಅಶೋಕನನ್ನೂ ಕಂಡ ಕಳಿಂಗದ ಜನತೆ ನಿಂತಲ್ಲೇ ನಡುಗಿ ಹೋದರು. ಅಶೋಕನ ಸೇನೆ, ಯುವರಾಣಿಯನ್ನು ಸೆರೆಹಿಡಿಯುವುದನ್ನು ಭಗವಂತನೂ ತಪ್ಪಿಸಲಾರ ಎಂಬುದು ಎಲ್ಲರಿಗೂ ಖಚಿತವಾಗಿ ಹೋಯಿತು. ಆದರೆ, ಅಮಿತಾ ಇದ್ಯಾವುದರ ಪರಿವೆಯೇ ಇಲ್ಲದೆ ನಾಯಿ ಕಟ್ಟುವ ಸರಪಳಿಯೊಂದಿಗೆ ಸರಭರನೆ ಬಂದಳು. ಆಕೆಗೆ ಅಂಟಿದಂತೆಯೇ ಆಕೆಯ ಮುದ್ದಿನ ನಾಯಿ ಬಭ್ರು ಇತ್ತು. ಹಾಗೆ ಬಂದವಳು .ಅಪರಿಚಿತ ಗೋಪಾಲನನ್ನು ಕಂಡು ಕೇಳಿದಳು: `ಯಾರಯ್ಯಾ ನೀನು?’
ಕಂಚಿಗೆ ಕಂಚು ತಾಕಿದಂತಿದ್ದ ಈ ಮಾತು ಕೇಳಿ ಅಂಥ ಅಶೋಕನೂ ಅತ್ಯಾಶ್ಚರ್ಯದಿಂದ ಹೆಜ್ಜೆ ಎತ್ತಿಡುವುದನ್ನೂ ಮರೆತು ನಿಂತುಬಿಟ್ಟ. ಚೋಟುದ್ದದ ಹುಡುಗಿಯ ಈ ಪ್ರಶ್ನೆಗೆ, ಉತ್ತರಿಸದೇ, ಅವಳನ್ನೇ ತಿಂದು ಬಿಡುವಂತೆ ನೋಡಿದ ಗೋಪಾಲ. ಅಮಿತಾ, ಅದಕ್ಕೆ ಒಂದಿಷ್ಟೂ ಹೆದರದೆ ಹೇಳಿದಳು: `ನೀನು ಸೈ ನಿಕನಂತೆ ಕಾಣುತ್ತೀಯ. ಬಾ ನನ್ನ ಜತೆ. ದುಷ್ಟ ಅಶೋಕನನ್ನು ಬಂಧಿಸೋಣ…’
ಬೇರೆ ಯಾರಾದರೂ ಈ ಮಾತಾಡಿದ್ದರೆ ಆ ಕ್ಷಣವೇ ಅವರ ರುಂಡ ಹಾರಿಸುತ್ತಿದ್ದನೇನೋ ಗೋಪಾಲ. ಆದರೆ ಆ ಬಾಲೆಯ ಎದುರು ಮಾತಾಡುವುದೇ ಆತನಿಗೆ ಕಷ್ಟವಾಗಿತ್ತು. ಆತ ಮೌನವಾಗಿ ನಿಂತದ್ದು ಕಂಡು ಅಮಿತಾ ಮತ್ತೆ ಹೇಳಿದಳು: `ಯಾಕೆ ಸುಮ್ಮನೆ ನಿಂತೆ? ಗೊತ್ತಾಗಲಿಲ್ಲವೇ? ನಾನು ಕಳಿಂಗದ ರಾಣಿ. ನನ್ನ ಆದೇಶವನ್ನು ಎಲ್ಲರೂ ಪಾಲಿಸಬೇಕು. ನನ್ನೊಂದಿಗೆ ಬಾ. ನಾವಿಬ್ಬರೂ ಸೇರಿ ಅಶೋಕನನ್ನು ಕಟ್ಟಿ ಹಾಕೋಣ…
ಮಗಧದ ಸೇನಾನಿ, ವಿಸ್ಮಯದಿಂದ ಮೈಮರೆತು ಉದ್ಗರಿಸಿದ: `ನೀನು, ನೀನಾ… ಕಳಿಂಗದ ರಾಣಿ?’
`ಹೌದು ನಾನೇ ಕಳಿಂಗದ ರಾಣಿ’ ಎಂದು ಹೆಮ್ಮೆಯಿಂದ ಹೇಳಿದ ಅಮಿತಾ ಮುಂದುವರಿದಳು- `ಬಾ. ನಾವಿಬ್ಬರೂ ಸೇರಿ ಕ್ರೂರಿ ಅಶೋಕನನ್ನು ಕಟ್ಟಿ ಹಾಕೋಣ. ಆತ ನಮ್ಮ ಜನರಿಗೆ ಹೊಡೆದು, ಬಡಿದು ತೊಂದರೆ ಕೊಡುತ್ತಿದ್ದಾನಂತೆ…’
ಎದುರಿಗಿರುವಾತ ಮಗಧದ ಸೇನಾನಿ ಎಂದು ಗೊತ್ತಿಲ್ಲದೆ ಅಥವಾ ಗೊತ್ತಿದ್ದೂ ಲೆಕ್ಕಿಸದೆ ಹೀಗೆ ಮಾತಾಡಿದ ಬಾಲೆಯ ಬಗ್ಗೆ ಅಶೋಕನಿಗೂ ಹೆಮ್ಮೆಯೆನಿಸಿತು. ಆತ ಶಿಲೆಯಂತೆ, ನಿಂತಲ್ಲೇ ನಿಂತು ಈ ಸಂಭಾಷಣೆಯನ್ನು ಕೇಳುತ್ತಿದ್ದ. ಇತ್ತ, ಗೋಪಾಲ ಮತ್ತೆ ಮೌನವಾಗಿ ನಿಂತದ್ದು ಕಂಡು ನಾಲ್ಕು ಹೆಜ್ಜೆ ಮುಂದೆ ಬಂದ ಅಮಿತಾ, ಮತ್ತೊಬ್ಬ ಅಪರಿಚಿತನನ್ನು ಕಂಡು ಮತ್ತೆ ಕೇಳಿದಳು: `ಯಾರಯ್ಯಾ ನೀನು?’
ಮಂತ್ರಮುಗ್ಧನಾದವನಂತೆ ಅಶೋಕ ಉತ್ತರಿಸಿದ: `ನಾನು ಸಾಮ್ರಾಟ ಅಶೋಕ’.
ಈ ಉತ್ತರದಿಂದ ಬೆಕ್ಕಸಬೆರಗಾದ ಅಮಿತಾ ಉದ್ಗರಿಸಿದಳು: ನೀನು… ನೀನಾ ಅಶೋಕ? ಎಷ್ಟೊಂದು ಸುಂದರವಾಗಿದ್ದೀಯೆ; ನನ್ನ ತಂದೆಯಂತೆ! ನಿನ್ನ ಬಳಿ ಚಿನ್ನವಿದೆ. ಕತ್ತಿ-ಗುರಾಣಿಗಳಿವೆ. ಒಳ್ಳೆಯ ವಸ್ತ್ರವೂ ಇದೆ. ಹಾಗಿದ್ದೂ ನೀನು ಜನರನ್ನು ಹೊಡೆದು ಬಡಿದು ಹಿಂಸಿಸುವುದೇಕೆ? ಹೇಳು, ನಿನಗೆ ಬೇಕಿರುವುದೇನು?
ಅಶೋಕ, ಏನು ಹೇಳಲೂ ತೋಚದೆ ಮೂಕನಂತೆ ನಿಂತೇ ಇದ್ದ. ತಕ್ಷಣವೇ ಆತನ ಕೈ ಹಿಡಿದು ಸಭಾಭವನಕ್ಕೆ ಕರೆತಂದಳು ಅಮಿತಾ. ಯಾವುದೋ ಮೋಡಿಗೆ ಒಳಗಾದವನಂತೆ ಜತೆಗೇ ಬಂದ ಅಶೋಕನಿಗೆ ಅಲ್ಲಿದ್ದ ಅಷ್ಟೂ ಸಂಪತ್ತು ತೋರಿಸಿ ಹೇಳಿದಳು: `ನೋಡು, ಇಲ್ಲಿ ಧನ-ಕನಕದ ರಾಶಿಯಿದೆ. ಬೆಲೆ ಬಾಳುವ ವಸ್ತ್ರಗಳಿವೆ. ನಿನಗೇನು ಬೇಕೋ, ಎಷ್ಟು ಬೇಕೋ ತಗೋ. ಆದರೆ, ನೀನು ಯಾರಿಂದಲೂ ಕದಿಯಬಾರದು. ಯಾರನ್ನೂ ಬೆದರಿಸಬಾರದು. ಯಾರನ್ನೂ ಹೊಡೆಯಕೂಡದು. ಕೊಲ್ಲಕೂಡದು. ಹೇಳು, ನಿನಗೇನು ಬೇಕು?’
ಇಡೀ ಭರತ ಖಂಡವನ್ನೇ ಗೆಲ್ಲುವುದಾಗಿ ಶಪಥ ಮಾಡಿದ್ದ ಅಶೋಕ, ಅಮಿತಾಳ ಮುಂದೆ ಅಸಹಾಯಕನಾಗಿ, ದಿಗ್ಭ್ರಾಂತನಾಗಿ ನಿಂತಿದ್ದ. ಆ ಕ್ಷಣದಲ್ಲೇ ಅವನಿಗೆ ತನ್ನ ಸೇನಾನಿ ಗೋಪಾಲ ಹೇಳಿದ ಮಾಟ-ಮಂತ್ರದ ಮಾತು ನೆನಪಾದವು. ಅದೇ ನಿಜವಿರಬೇಕು. ಆದರೆ, ಇದಕ್ಕೆಲ್ಲ ನಾನು ಸೋಲಬಾರದು ಅಂದುಕೊಂಡು ಒಂದೆರಡು ಕ್ಷಣಗಳ ನಂತರ ತಲೆಕೊಡವಿ, ನೆಟ್ಟ ನೋಟದಿಂದ ಅಮಿತಾಳನ್ನೇ ನೋಡುತ್ತ ಕೇಳಿದ: `ನನಗೆ ಕಳಿಂಗದ ರಾಜ ಸಿಂಹಾಸನ ಬೇಕು…’
ಅದೊಂದು ದೊಡ್ಡ ವಿಷಯವೇ ಅಲ್ಲವೆಂಬಂತೆ ಅಮಿತಾ ಹೇಳಿದಳು: `ಅಷ್ಟೇನಾ. ನೋಡು… ಇಲ್ಲಿ ಕಾಣ್ತಿದೆಯಲ್ಲ? ಅದೇ ಸಿಂಹಾಸನ. ಅದನ್ನು ತಗೊಂಡು ಹೋಗು. ನಾನು ಬೇರೆಯದು ಮಾಡಿಸಿಕೊಳ್ತೀನಿ…’
ತಮ್ಮ ಯುವರಾಣಿಯ ನಿಷ್ಕಪಟ ಮನಸ್ಸು ಹಾಗೂ ಉದಾರತೆ ಕಂಡು ಕಳಿಂಗದ ಜನರ ಹೃದಯ ತುಂಬಿ ಬಂತು. ಎದುರಿಗೆ ಅಶೋಕ ಇರುವುದನ್ನೂ ಮರೆತು; ತಾವು ಮಗಧದ ಸೇನೆಗೆ ಸೋತಿರುವುದನ್ನೂ ಮರೆತು ಅವರೆಲ್ಲ `ಕಳಿಂಗದ ಯುವರಾಣಿಗೆ ಜಯವಾಗಲಿ’ ಎಂದರು.
ಇತ್ತ, ಅಶೋಕ ಮೂಕನಾಗಿದ್ದ. ಲಕ್ಷಾಂತರ ಸೈನಿಕರ ಸಾವು ಕಂಡಾಗಲೂ ಕರಗದಿದ್ದ ಆತನ ಕಲ್ಲೆದೆ, ಅಮಿತಾಳ ಅಮ್ಮನಂಥ ಮಾತಿಗೆ ಕರಗತೊಡಗಿತ್ತು. ಇದೇನೂ ಗೊತ್ತಿಲ್ಲದ ಅಮಿತಾ- `ಹುಂ, ನಿನಗೆ ಸಿಂಹಾಸನ ಬೇಕು ತಾನೆ? ಕೊಡ್ತೀನಿ ಬಾ’ ಎಂದು ಎರಡನೇ ಬಾರಿಗೆ ಕೈ ಜಗ್ಗುವುದಕ್ಕೂ; ಅಮಿತಾಳ ಅಂತಃಕರಣ ಕಂಡು ಗದ್ಗದನಾದ ಅಶೋಕನ ಕಂಗಳಿಂದ ಜಾರಿದ ಕಂಬನಿ ಯುವರಾಣಿಗೆ ಕೈ ಮೇಲೆ ಬೀಳುವುದಕ್ಕೂ ಸರಿಹೋಯಿತು.
ಅಮಿತಾ, ಸಾಮ್ರಾಟನನ್ನೇ ಒಮ್ಮೆ ವಿಸ್ಮಯದಿಂದ ನೋಡಿದಳು. ಮರುಕ್ಷಣವೇ ಅಶೋಕ, ತನ್ನ ಖಡ್ಗವನ್ನು ನೆಲಕ್ಕಿಟ್ಟು ತನ್ನ ಬಾಹುಗಳಿಂದ ಅಮಿತಾಳನ್ನು ಎತ್ತಿಕೊಂಡು ಹೇಳಿದ: `ಕಳಿಂಗದ ರಾಣಿ, ಇವತ್ತು ಸಾಮ್ರಾಟ್ ಅಶೋಕ ಸೋತು ಹೋದ. ಈ ವಿಜಯ ನಿನ್ನದು. ಹುಂ, ಸರಪಳಿ ತಗೊ. ಈ ಕ್ರೂರಿ ಅಶೋಕನನ್ನು ಕಟ್ಟಿ ಹಾಕು…’ ಹೀಗೆಂದವನೇ ಆಕೆಯಲ್ಲಿದ್ದ ಸರಪಳಿಯನ್ನು ತನ್ನ ಎರಡೂ ಕೈಗಳಿಗೆ ಸುತ್ತಿಕೊಂಡು ಹೇಳಿದ: `ರಾಜಕುಮಾರಿ, ಅಶೋಕ ಸೆರೆಸಿಕ್ಕಿದ್ದಾನೆ. ನಿನಗೇನು ಬೇಕು ಹೇಳು…’
ಅಮಿತಾ ಸರಸರನೆ ಸರಪಳಿಯಿಂದ ಅವನ ಕೈ ಬಿಡಿಸಿ ಹೇಳಿದಳು: `ಹಾಗೆಲ್ಲ ಮಾಡ್ಕೋಬಾರದು. ನಿನ್ನ ಕೈಗೆ ನೋವಾಗುತ್ತೆ. ನನಗೇನೂ ಬೇಡ. ನನ್ನಲ್ಲಿ ಎಲ್ಲವೂ ಇದೆ’.
ಜಾರಿ ಬೀಳುತ್ತಿದ್ದ ಕಂಬನಿಯನ್ನು ಒರೆಸುವುದನ್ನೂ ಮರೆತು, ಒಂದೆರಡು ನಿಮಿಷ ಯೋಚಿಸಿದ ಸಾಮ್ರಾಟ ಹೀಗೆಂದ: `ಅದೂ ನಿಜ. ಆದರೂ ಬಂಧಿಯಾಗಿರುವ ದುಷ್ಟ ಅಶೋಕನಿಗೆ ಯುವರಾಣಿಯವರು ಏನಾದರೂ ಆದೇಶಿಸಬೇಕು…’
ಅಮಿತಾ ಈಗ ಗೆಲುವಿನಿಂದ ಹೇಳಿದಳು: `ನೀನು ಯಾರಿಗೂ ಹೊಡೆಯಕೂಡದು. ಯಾರನ್ನು ಹಿಂಸಿಸಕೂಡದು, ಬೆದರಿಸಕೂಡದು. ಇದು ನನ್ನ ಆಜ್ಞೆ’.
ಅಶೋಕ, ತಲೆಬಾಗಿ ಸಮ್ಮತಿಸಿ ಘೋಷಿಸಿದ: `ಸರಿ ಯುವರಾಣಿಯವರೆ, ಇಂದಿನಿಂದ ಸಾಮ್ರಾಟ ಅಶೋಕ ಯುದ್ಧ ಮಾಡುವುದಿಲ್ಲ. ಯಾರನ್ನೂ ಹಿಂಸಿಸುವುದಿಲ್ಲ. ಕಳಿಂಗದ ಯುವರಾಣಿ ಅಮಿತಾ ಕುಮಾರಿಯಂತೆ, ನಿಸ್ವಾರ್ಥ ಪ್ರೇಮದಿಂದಲೇ ಆತ ಎಲ್ಲರ ಹೃದಯ ಗೆಲ್ಲಲು ಪ್ರಯತ್ನಿಸುತ್ತಾನೆ…
***
ಮುಂದೆ, ಅಶೋಕ ಹೇಳಿದಂತೆಯೇ ನಡೆದುಕೊಂಡು ದೇವನಾಂಪ್ರಿಯ ರಾಜನಾಂಪ್ರಿಯ ಪ್ರಿಯದರ್ಶಿ ಎಂದು ಹೆಸರಾದ.

Advertisements

8 Comments »

 1. 1

  ಶಸ್ತ್ರಗಳಿಂದ ಗೆಲ್ಲಲಾಗದಿದ್ದದ್ದನ್ನು ಅಮಿತಾದೇವಿ ಕೇವಲ ತನ್ನ ಮುಗ್ಧತೆಯಿಂದ ಗೆದ್ದಿದ್ದನ್ನು ಓದುತ್ತಾ ಆದಂತೆ ಕಣ್ಣಲ್ಲಿ ಹನಿ ಮೂಡಿತು.. ಮಕ್ಕಳು ದೇವರಂತೆ ಎನ್ನುವುದು ಸುಳ್ಳಲ್ಲ…

 2. 2
  sandesh Says:

  sir…nijakku namgella ee kathe gotte irlillla..che che yenta olle kathe na miss madkondu bittidvi:)

  thanks mani dear

 3. 3
  sameer Says:

  thank u mani sir..namge edella gotte irlilla…

  thank u

 4. 4
  sharda nayak Says:

  manikanth ji.. naan kooda history techr..nodi viparyasa ndre nanagene gottirlilla inta ondu kathe ide antha…nimge hege thanks helbeku gotagta illa….

 5. 5
  savitha Says:

  thanks manikant sir…super ide kathe

 6. 6
  narasimha nayak Says:

  manikanth avare…nimge ondu dodda thanks

 7. 7
  armanikanth Says:

  Akkareya Harish,sandesh,sameer,sharada nayak,savitha,narasimha nayak avare…nimma preetiya maatugalige Runi…

 8. 8

  Thank you very much sir,even in our school days nobody told us regarding this beautiful and heart touching event which turns the bad to good.
  Heartfull of thanx


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: