ಆ ಎನ್ನಾರೈ ನೂರೈವತ್ತು ಮಂದಿಯ ಜೀವ ಉಳಿಸಿದ!

deepak

ಇದು, ಸಾಮಾನ್ಯನೊಬ್ಬನ ಅಪ್ರತಿಮ ಸಾಹಸದ ಕಥೆ. ಸೋಲು ಕಣ್ಣೆದುರೇ ಇದೆ ಎಂದು ಗೊತ್ತಾದ ನಂತರವೂ `ಪಾಸಿಟಿವ್’ ಆಗಿ ಯೋಚಿಸಿದರೆ ಗೆಲುವು ನಮ್ಮ ಕೈ ಹಿಡಿಯುತ್ತದೆ ಎಂಬುದಕ್ಕೆ ಸಾಕ್ಷಿಯಾಗುವ ಕಥೆ. ಸಾವಿನ ಭಯ, ಅಳ್ಳೆದೆಯವರಿಂದಲೂ ದೊಡ್ಡ ಸಾಹಸವನ್ನೇ ಮಾಡಿಸಿಬಿಡುತ್ತದೆ ಎಂಬ ಮಾತಿಗೆ ಕನ್ನಡಿ ಹಿಡಿಯುವ ಕಥೆ. ರಾಂಗೋಪಾಲ್ ವರ್ಮಾನ ಸಿನಿಮಾಗಳ ರೋಮಾಂಚನವನ್ನೂ ಮೀರಿಸುವಂಥ ರೋಮಾಂಚನದ ಕಥೆ.
ಈ ಕಥೆಯ ಹೀರೋ-ದೀಪಕ್ ಕುಂತಾವಾಲಾ. ಈತ, ಗುಜರಾತ್ ಮೂಲದ ಅನಿವಾಸಿ ಭಾರತೀಯ. `ನಾನು ಲಕ್ಷಾಧಿಪತಿ’ ಎಂದು ಭಿಡೆಯಿಲ್ಲದೆ ಹೇಳಿಕೊಳ್ಳುವ ದೀಪಕ್, ಇಂಗ್ಲೆಂಡಿನಲ್ಲಿ ಬಿಜಿನೆಸ್‌ಮನ್. ಮೊನ್ನೆ, ನವೆಂಬರ್ ೨೬ರಂದು ಮುಂಬಯಿಯ ತಾಜ್ ಹೋಟೆಲ್‌ಗೆ ಯಮಧೂತರಂತೆ ನುಗ್ಗಿ ಬಂದ ಪಾಕಿಸ್ತಾನದ ಉಗ್ರರು ಯದ್ವಾತದ್ವಾ ಗುಂಡು ಹಾರಿಸಿ ಅಮಾಯಕರನ್ನು ಕೊಂದು ಹಾಕಿದರಲ್ಲ? ಆ ಸಂದರ್ಭದಲ್ಲಿ ಈ ದೀಪಕ್ ಕುಂತಾವಾಲಾ, ತನ್ನ ೬೦ ವರ್ಷದ ವೃದ್ಧ ತಂದೆಯೊಂದಿಗೆ ಅದೇ ಹೋಟೆಲಿನಲ್ಲಿದ್ದ. ಉಗ್ರರ ಅಟಾಟೋಪವನ್ನು ಕಣ್ಣಾರೆ ಕಂಡ. ತಮ್ಮಿಂದ ಕೇವಲ ಹತ್ತು ಮೀಟರ್ ದೂರದ ಇನ್ನೊಂದು ರೂಂನಲ್ಲಿದ್ದ ಉಗ್ರರು ಯಾವ ಸಂದರ್ಭದಲ್ಲಾದರೂ ನುಗ್ಗಿ ಬಂದು ಗುಂಡು ಹಾರಿಸಬಹುದು; ಯಾವ ಕ್ಷಣದಲ್ಲಿ ಬೇಕಾದರೂ ನಮ್ಮ ಪ್ರಾಣ ಹೋಗಬಹುದು ಎಂದು, ಉಗ್ರರ ದಾಳಿ ಶುರುವಾದ ಕೆಲವೇ ಕ್ಷಣಗಳಲ್ಲಿ ದೀಪಕ್‌ಗೆ ಅರ್ಥವಾಗಿ ಹೋಗಿತ್ತು.
ಸಂತೋಷದ, ಹೆಮ್ಮೆಯ ಸಂಗತಿಯೆಂದರೆ, ಸಾವು ಕಣ್ಣೆದುರಿಗೇ ಇದೆ ಎಂದು ಅರ್ಥವಾದ ನಂತರ ಕೂಡ ದೀಪಕ್ ಕುಂತಾವಾಲಾ, ಧೈರ್ಯ ಕಳೆದುಕೊಳ್ಳಲಿಲ್ಲ. ಜತೆಗಿದ್ದ ೧೫೦ ಮಂದಿಗಿಂತ ಮುಂಚಿತವಾಗಿಯೇ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಆತ ಅರ್ಥಮಾಡಿಕೊಂಡ. ಈ ಕ್ಷಣದ ಮಟ್ಟಿಗೆ, ಇಲ್ಲಿರುವ ೧೫೦ ಮಂದಿಯನ್ನೂ ನಾನು ಕಾಪಾಡಬೇಕು. ಅವರ ಪಾಲಿಗೆ ನಾನೇ ಲೀಡರ್ ಆಗಬೇಕು ಎಂದು ನಿರ್ಧರಿಸಿಬಿಟ್ಟ. ನಂತರ, ತಾವು ಉಳಿದುಕೊಂಡಿದ್ದ, ತಾಜ್ ಹೋಟೆಲಿನ ಮೊದಲ ಮಹಡಿಯ ರೂಂನಲ್ಲಿದ್ದ ಅಷ್ಟೂ ಕರ್ಟನ್‌ಗಳನ್ನು ಬಿಚ್ಚಿಕೊಂಡು, ಅವುಗಳನ್ನು ಒಂದಕ್ಕೊಂದು ಗಂಟು ಹಾಕಿ, ಹಗ್ಗದಂತೆ ಮಾಡಿದ.
ನಂತರ, ಅದೇ ರೂಂನ ಕಿಟಕಿಯೊಂದನ್ನು ಒಡೆದು ಹಾಕಿ, ಕರ್ಟನ್ ಕಂ ಹಗ್ಗವನ್ನು ಕಿಟಕಿಯಿಂದ ಇಳಿಬಿಟ್ಟ. `ಕರ್ಟನ್ ಹಿಡಿದುಕೊಂಡು ಸಿನಿಮಾದ ಹೀರೋಗಳ ಥರಾನೇ ಇಳಿದು, ಇಪ್ಪತ್ತೈದು ಅಡಿ ಕೆಳಗಿರುವ ನೆಲ ತಲುಪಿಕೊಳ್ಳಿ. ಬದುಕಬೇಕು ಅನ್ನುವುದಾದರೆ ಉಳಿದಿರುವುದು ಅದೊಂದೇ ದಾರಿ’ ಎಂದು ಘೋಷಿಸಿದ. ಅಷ್ಟೇ ಅಲ್ಲ, ಮೊದಲಿಗೆ ತನ್ನ ವೃದ್ಧ ತಂದೆಯನ್ನೇ ಕೆಳಗಿಳಿಸಿಬಿಟ್ಟ. (ಮಗನ ಸಾಹಸದ ಪರೀಕ್ಷೆಗೆ ಅಪ್ಪನೇ ಬಲಿಪಶು!) ಆ ಮೂಲಕ ಜತೆಗಿದ್ದ ಎಲ್ಲರಿಗೂ ಧೈರ್ಯವಾಗಿ ಕೆಳಗಿಳಿಯಬಹುದು ಎಂದು ತೋರಿಸಿಕೊಟ್ಟ. ಕಡೆಗೆ, ಎಲ್ಲ ೧೫೦ ಮಂದಿಯ ಪ್ರಾಣ ಉಳಿಸಿಬಿಟ್ಟ. ಇಂಥದೊಂದು ಸಾಹಸಕ್ಕೆ ಆತ ಮಾನಸಿಕವಾಗಿ ಸಿದ್ಧವಾದದ್ದು ಹೇಗೆ? ಎಂಬ ಪ್ರಶ್ನೆಗೆ ಇಲ್ಲಿ ದೀಪಕ್‌ನ ಮಾತುಗಳಲ್ಲಿಯೇ ವಿವರಣೆಯಿದೆ. ಓದಿಕೊಳ್ಳಿ:
***
`ನನ್ನ ತಂದೆಯ ಹೆಸರು ವಿನಯ್. ಅವರು ಗುಜರಾತ್‌ನಲ್ಲಿ ಸರಕಾರಿ ನೌಕರಿಯಲ್ಲಿದ್ದರು. ಎರಡು ವರ್ಷದ ಹಿಂದಷ್ಟೇ ಅವರಿಗೆ ನಿವೃತ್ತಿಯಾಗಿತ್ತು. ನಮಗೋಸ್ಕರ ದಶಕಗಳ ಕಾಲ ದುಡಿದರಲ್ಲ ಅಪ್ಪ? ಆ ಕಾರಣಕ್ಕೆ ಅವರನ್ನು ಅಭಿನಂದಿಸುವ; ಅದೇ ನೆಪದಲ್ಲಿ ಗೆಳೆಯರು-ಬಂಧುಗಳಿಗೆ ಒಂದು ಪಾರ್ಟಿ ಕೊಡುವ ಮಹದಾಸೆ ನನ್ನದಿತ್ತು. ಬಂಧುಗಳೆಲ್ಲ ಹೊಟ್ಟೆಪಾಡಿನ ನೆಪದಲ್ಲಿ ಮುಂಬಯಿ ಸುತ್ತ ಮುತ್ತಲೇ ಉಳಿದುಕೊಂಡಿದ್ದರು. ಆ ಕಾರಣಕ್ಕೇ ತಾಜ್ ಹೋಟೆಲಿನಲ್ಲಿ ಪಾರ್ಟಿ ಇಟ್ಟುಕೊಂಡಿದ್ದೆ. ನವೆಂಬರ್ ೨೫ರಂದು ಅದ್ಧೂರಿಯಾಗಿ ಪಾರ್ಟಿ ನಡೆಸಿದ್ದೂ ಆಯಿತು. ಮರುದಿನ, ಅಂದರೆ ನವೆಂಬರ್ ೨೬ ರಂದು ನಾನು ಇಂಗ್ಲೆಂಡಿಗೆ ಹೋಗುವುದಿತ್ತು. `ಒಂದು ದಿನ ಇದೇ ಹೋಟೆಲಿನಲ್ಲಿದ್ದು ಬಿಡೋಣ. ನಂತರ ನಮ್ಮ ನಮ್ಮ ಹಾದಿ ಹಿಡಿಯೋಣ ಅಂದೆ’. ಅಪ್ಪ ಒಪ್ಪಿಕೊಂಡ.
ನೋಡ ನೋಡುತ್ತಲೇ ಸಮಯ ಕಳೆದುಹೋಯಿತು. ತಾಜ್ ಹೋಟೆಲಿನಿಂದ ಸೀದಾ ಮುಂಬಯಿಯ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ತಲುಪಿಕೊಂಡು, ಅಲ್ಲಿಂದ ಇಂಗ್ಲೆಂಡಿಗೆ ಹೋಗಲು ನಾನು ಸಿದ್ಧನಾದೆ. ನಮ್ಮ ಲಗೇಜನ್ನು ರೂಂ ಬಾಯ್ ಎತ್ತಿಕೊಂಡು ಹೋದ. ಆದರೆ, ನಾವು ಹೊರಟು ನಿಂತ ಕ್ಷಣಕ್ಕೇ ನನ್ನ ಎಡಗಣ್ಣು ಒಂದೇ ಸಮನೆ ಬಡಿದುಕೊಳ್ಳತೊಡಗಿತು. ನಾನು ಬಿಜಿನೆಸ್‌ಮನ್ ನೋಡಿ; ಅದೇ ಕಾರಣಕ್ಕೆ ಶಕುನವನ್ನು ಒಂದಷ್ಟು ಜಾಸ್ತಿಯೇ ನಂಬ್ತೇನೆ. `ಎಡಗಣ್ಣು ಹೊಡ್ಕೊಳ್ತಾ ಇದೆ ಅಂದರೆ ಅದು ಅಪಶಕುನ. ಹಾಗಾಗಿ ಅರ್ಧಗಂಟೆಯ ನಂತರ ಹೊರಡೋಣ’ ಎಂದು ನಿರ್ಧರಿಸಿ ಮೊದಲ ಮಹಡಿಯ ರೂಂನಲ್ಲೇ ಉಳಿದೆ. ಐದಾರು ನಿಮಿಷದ ನಂತರ ಬೇಜಾರಾಗಿ, ಸುಮ್ಮನೇ ತಿರುಗಾಡಲು ಲಾಂಜ್‌ಗೆ ಬಂದೆ.
ನಾಲ್ಕು ಹೆಜ್ಜೆ ಇಟ್ಟಿದ್ದೇನೋ ಇಲ್ಲವೋ, ಇದ್ದಕ್ಕಿದ್ದಂತೆಯೇ ಕೆಳಗೆ ಗುಂಡಿನ ಸದ್ದು ಕೇಳಿಸಿತು. ಗಾಬರಿ-ಕುತೂಹಲದಿಂದ ಬಗ್ಗಿ ನೋಡಿದೆ. ಕಪ್ಪು ದಿರಿಸಿನಲ್ಲಿದ್ದ ಇಬ್ಬರು ಯದ್ವಾತದ್ವಾ ಗುಂಡು ಹಾರಿಸುತ್ತಿದ್ದರು. ಮುಂಬಯಿ ಅಂಡರ್ ವರ್ಲ್ಡ್ ಬಗ್ಗೆ; ಅವರ ಆಕ್ರಮಣದ ಬಗ್ಗೆ ಮೊದಲೇ ಕೇಳಿದ್ದೆನಲ್ಲ? ಅದೇ ಕಾರಣದಿಂದ ಇದೂ ಗ್ಯಾಂಗ್‌ವಾರ್ ಇರಬಹುದು ಅಂದುಕೊಂಡೆ. ಆದರೆ ಮುಂದಿನ ಒಂದೆರಡು ನಿಮಿಷದಲ್ಲಿ ಚೀರಾಟ, ಗ್ರೆನೇಡ್ ಸಿಡಿದ ಸದ್ದು, ಮೇಲಿಂದ ಮೇಲೆ ಗುಂಡು ಹಾರುತ್ತಲೇ ಇರುವ ಸದ್ದು ಕೇಳಿಸಿದಾಗ, ಇದು ಉಗ್ರರ ದಾಳಿ ಎಂದು ಅರ್ಥವಾಗಿ ಹೋಯಿತು.
ಈ ವೇಳೆಗೆ ಗುಂಡು ಹಾರಿದ ಸದ್ದು ಕೇಳಿ ಗಾಬರಿಗೊಂಡ ಅಕ್ಕಪಕ್ಕದ ರೂಂಗಳಲ್ಲಿದ್ದ ೧೫೦ ಮಂದಿ ದಡಬಡಿಸಿ ಬಂದರು. ಮುಂದಿನ ಕೆಲವೇ ನಿಮಿಷಗಳಲ್ಲಿ ಏನಾಗಿದೆ ಎಂದು ಎಲ್ಲರಿಗೂ ಅರ್ಥವಾಗಿ ಹೋಯಿತು. ಮರುಕ್ಷಣವೇ ಕೆಲವರು ಬಿಕ್ಕಳಿಸಿ ಅಳತೊಗಿದರು. ಕೆಲವರು `ಹೆಲ್ಪ್ ಹೆಲ್ಪ್ ‘ ಎಂದು ಚೀರಿಕೊಂಡರು. ಆ ವೇಳೆಗೆ, ಉಗ್ರರು ಒಂದೊಂದೇ ರೂಂಗೆ ನುಗ್ಗಿ, ಅಲ್ಲಿದ್ದವರ ಮೇಲೆ ಗುಂಡು ಹಾರಿಸುತ್ತಿರುವುದೂ ನಮಗೆ ಕಾಣಿಸಿತು. ಆಗ ಶುರುವಾದದ್ದೇ ಜೀವಭಯ.
ನಾನಾದರೂ ಹಾಗೇಕೆ ಮಾಡಿದೆನೋ ಕಾಣೆ. ತಕ್ಷಣವೇ ಎಲ್ಲ ೧೫೦ ಮಂದಿಯನ್ನೂ ದಬ್ಬಿಕೊಂಡು ಪಕ್ಕದಲ್ಲಿದ್ದ ಮಿನಿ ಪಾರ್ಟಿ ಹಾಲ್ ತಲುಪಿಕೊಂಡೆ. `ರೂಂಗಳಿಗೆ ಹೋಗುವುದೇ ಬೇಡ. ಸಾಯುವುದಿದ್ದರೆ ಎಲ್ಲರೂ ಒಟ್ಟಿಗೇ ಸಾಯೋಣ’ ಎಂದೆ. ಎಲ್ಲರೂ ಒಪ್ಪಿದರು. ಒಳಗಿಂದ ಪಾರ್ಟಿ ಹಾಲ್‌ಗೆ ಲಾಕ್ ಮಾಡಿದೆವು. ಉಗ್ರರಿಗೆ ಅನುಮಾನ ಬಾರದಿರಲೆಂದು ದೀಪ ಆರಿಸಿದೆವು. ಆ ಕತ್ತಲಲ್ಲಿ ಎಲ್ಲರೂ ಆಗೊಮ್ಮೆ ಈಗೊಮ್ಮೆ ಮೊಬೈಲ್ ದೀಪ ಉರಿಸಿ ಪಿಸುಗುಡುತ್ತಿದ್ದರು. ಉಗ್ರರು ಯಾವಾಗ ನುಗ್ಗಿ ಬಂದಾರೋ ಎಂದು ಕಲ್ಪಿಸಿಕೊಂಡು ನಿಂತಲ್ಲೇ ನಡುಗುತ್ತಿದ್ದರು. ನನಗೆ ಮೇಲಿಂದ ಮೇಲೆ ಬರುತ್ತಿದ್ದ ಯೋಚನೆ ಒಂದೇ: ಇಷ್ಟೊಂದು ಜನರನ್ನು ಪಾರು ಮಾಡುವುದು ಹೇಗೆ? ಹೇಗೆ? ಹೇಗೆ?
ಬಿಜಿನೆಸ್‌ನಲ್ಲಿ ವಿಪರೀತ ಲಾಸ್ ಆದಾಗ, ಮಾನಸಿಕವಾಗಿ ಧೈರ್ಯ ತಂದುಕೊಳ್ಳಲು ಮೆಡಿಟೇಶನ್ ಕೂರುತ್ತಿದ್ದವ ನಾನು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೂ ಧ್ಯಾನದ ಮೊರೆ ಹೋಗೋಣ ಅನ್ನಿಸಿತು. ಉಳಿದವರೆಲ್ಲ ಜೀವ ಭಯದಿಂದ ನಡುಗುತ್ತಿದ್ದಾಗಲೇ ಒಂದು ಮೂಲೆಯಲ್ಲಿ ನಾಲ್ಕು ನಿಮಿಷದ ಮಟ್ಟಿಗೆ ಧ್ಯಾನದಲ್ಲಿ ತೊಡಗಿಕೊಂಡೆ. ಇದನ್ನು ನೀವು ದೈವಲೀಲೆ ಅನ್ನುತ್ತೀರೋ, ಮಿರಾಕಲ್ ಎಂದು ಕರೆಯುತ್ತೀರೋ ಗೊತ್ತಿಲ್ಲ. ಆದರೆ, ಧ್ಯಾನಕ್ಕೆ ಕೂತ ಮರುಕ್ಷಣವೇ ಈ ಸಾವಿನ ಮನೆಯಿಂದ ಪಾರಾಗುವುದು ಹೇಗೆಂದು ನನಗೆ ಐಡಿಯಾ ಬಂತು. ತಕ್ಷಣವೇ ಕಣ್ತೆರೆದು ಜತೆಗಿದ್ದವರನ್ನು ಉದ್ದೇಶಿಸಿ ಪಿಸುಮಾತಲ್ಲೇ ಹೇಳಿದೆ: `ಫ್ರೆಂಡ್ಸ್, ಜೀವ ಉಳಿಸಿಕೊಳ್ಳಲು ಒಂದು ದಾರಿಯಿದೆ. ಉಗ್ರರಿಗೆ ನಮ್ಮ ಮುಖ ಕಂಡರೂ ಗುಂಡು ಹಾರಬಹುದು. ಹಾಗಾಗಿ ತಕ್ಷಣವೇ ಎಲ್ಲರೂ ಮಲಗಿಬಿಡಿ. ಕೂಗಬೇಡಿ. ಚೀರಬೇಡಿ. ಬಿಕ್ಕಳಿಸಬೇಡಿ. ಮಾತಾಡಬೇಡಿ, ಈಗ ನಮ್ಮಲ್ಲೇ ನಾಲ್ಕು ಜನ ಸೇರಿ ಒಂದು ಕಿಟಕಿ ಒಡೆದು ಹಾಕ್ತೇವೆ. ಉಳಿದವರು, ಇಲ್ಲಿರುವ ಎಲ್ಲ ಕರ್ಟನ್‌ಗಳನ್ನೂ ಕಿತ್ತುಕೊಂಡು ಒಂದಕ್ಕೊಂದು ಗಂಟು ಹಾಕಿ. ಅದನ್ನು ಹಗ್ಗದಂತೆ ಮಾಡಿ ಕಿಟಕಿಯಿಂದ ಇಳಿಬಿಡೋಣ. ಆ ಬದಿಗಿರುವ ಅಗ್ನಿಶಾಮಕ ದಳದವರಿಗೆ ಹೇಗಾದರೂ ಮಾಡಿ ನಾನು ವಿಷಯ ತಿಳಿಸ್ತೇನೆ. ನಂತರ ಒಬ್ಬೊಬ್ಬರಾಗಿ ಹಗ್ಗದಂತಿರುವ ಕರ್ಟನ್ ಹಿಡಿದುಕೊಂಡು ೨೫ ಅಡಿ ಕೆಳಗಿರುವ ಭೂಮಿ ತಲುಪಿಕೊಳ್ಳಿ. ಇಳಿಯುವಾಗ ಜಾರಿ ಬಿದ್ದರೆ, ಕೈಯೋ, ಕಾಲೋ ಮುರಿಯಬಹುದು. ಆದರೆ ಜೀವವಂತೂ ಉಳಿಯುತ್ತದೆ…’
ನಂತರದ ಐದಾರು ನಿಮಿಷಗಳಲ್ಲಿ ಹೊರಗೆ ಗುಂಡಿನ ಸದ್ದು ಕೇಳುತ್ತಿದ್ದ ಸಂದರ್ಭದಲ್ಲೇ ನಾವು ಒಂದು ಕಿಟಕಿ ಒಡೆಯುವಲ್ಲಿ ಯಶಸ್ವಿಯಾದೆವು. ಆ ವೇಳೆಗೆ ಹತ್ತಾರು ಕರ್ಟನ್‌ಗಳನ್ನು ಗಂಟು ಹಾಕಿದ್ದ ಹಗ್ಗವೂ ರೆಡಿಯಾಗಿತ್ತು. `ಮೊದಲು ವೃದ್ಧರು ಮತ್ತು ಮಹಿಳೆಯರನ್ನು ಇಳಿಸೋಣ. ಆಮೇಲೆ ಉಳಿದವರು’ ಅಂದೆ. ಅಷ್ಟರೊಳಗೆ ಹೋಟೆಲಿನಲ್ಲಿದ್ದವರನ್ನು ರಕ್ಷಿಸಲು ಬಂದಿದ್ದ; ಅಗ್ನಿಶಾಮಕ ದಳದ ಸಿಬ್ಬಂದಿಗೂ `ಸಂಜ್ಞೆ’ಯ ಮೂಲಕವೇ ಹೇಳಿಕೊಂಡಿದ್ದೆ. ನಂತರ `ಹೂಂ, ಇಳೀರಿ’ ಅಂದೆ.
ಉಹುಂ, ಯಾರೊಬ್ಬರೂ ಮುಂದೆ ಬರಲಿಲ್ಲ. ಮೊದಲಿಗರಾಗಿ ಇಳಿಯಬೇಕಲ್ಲ ಎಂಬ ಆತಂಕ ಎಲ್ಲರಿಗೂ ಇತ್ತು. ಕರ್ಟನ್‌ಗಳ ಕರ್ಟನ್ ಹಗ್ಗ ಯಾವಾಗ ಬೇಕಾದರೂ ತುಂಡಾಗಬಹುದಿತ್ತು. ಹಾಗೆಂದೇ ಎಲ್ಲರೂ ಹಿಂಜರಿದರು. ತಕ್ಷಣವೇ ನನಗೆ ಅಪ್ಪ ಕಾಣಿಸಿದ. ಆತನಿಗೆ ಬಿಪಿ, ಶುಗರ್, ಹೃದಯದ ತೊಂದರೆ ಇತ್ತು. ಅದೆಲ್ಲ ಗೊತ್ತಿದ್ದೂ `ಅಪ್ಪಾ, ನೀನೇ ಮೊದಲು ಇಳಿ, ಉಗ್ರರಿಂದ ಗುಂಡೇಟು ತಿಂದು ಸಾಯುವ ಬದಲು ಹೀಗೆ ಸಾಯುವುದೇ ಮೇಲು’ ಅಂದೇ ಬಿಟ್ಟೆ. ೬೦ ವರ್ಷದ ಅಪ್ಪ ಎರಡನೇ ಮಾತೇ ಆಡಲಿಲ್ಲ. `ಸರಿ’ ಎಂದವನೇ ಕಿಟಕಿಯ ಮೇಲೆ ಹತ್ತಿ, ಕರ್ಟನ್‌ನ ಹಗ್ಗ ಹಿಡಿದುಕೊಂಡು ಸರಸರನೆ ಕೆಳಗಿಳಿಯತೊಡಗಿದ.
ಈ ವೇಳೆಗೆ ಅಗ್ನಿಶಾಮಕ ದಳದವರಿಗೂ ನಮ್ಮ ತಂತ್ರ ಅರ್ಥವಾಗಿತ್ತು. ಒಣಗಿರುವ ಕರ್ಟನ್ ಕೈ ಜಾರದಿರಲಿ. ಅದು ಸ್ವಲ್ಪ ಒದ್ದೆಯಾಗಿ ಸ್ವಲ್ಪ ಬಿಗಿ ಸಿಗಲಿ ಎಂಬ ಉದ್ದೇಶದಿಂದ ಅವರು ಕರ್ಟನ್ ಹಗ್ಗಕ್ಕೆ ನೀರು ನುಗ್ಗಿಸಿದರು.
ಫೈರ್ ಎಂಜಿನ್‌ನಿಂದ ನೀರು ನುಗ್ಗಿ ಬಂದಾಗ ಗಾಬರಿಯಾದ ಅಪ್ಪ, ಆ ಗಾಬರಿಯಲ್ಲೇ ಕೈ ಬಿಟ್ಟುಬಿಟ್ಟ. ಅಷ್ಟೆ, ಆತ ಧಬಾರನೆ ಕೆಳಗೆ ಬಿದ್ದದ್ದು ನನಗೆ ಸ್ಪಷ್ಟವಾಗಿ ಕಾಣಿಸಿತು. ಹೇಳಿ ಕೇಳಿ ಹಾರ್ಟ್ ಪೇಷಂಟ್. ಈ ಶಾಕ್‌ಗೇ ಆತನ ಜೀವ ಹೋಗಿರುತ್ತೆ ಅನ್ನಿಸಿತು. `ಅಪ್ಪಾ’ ಎಂದು ಚೀರೋಣ ಅಂದುಕೊಂಡೆ. `ಉಹುಂ, ಅಳುವುದಕ್ಕೆ ಇದು ಕಾಲವಲ್ಲ’ ಎಂದಿತು ಒಳಮನಸ್ಸು. ತಕ್ಷಣವೇ ಉಳಿದವರತ್ತ ತಿರುಗಿ, ಹಗ್ಗ ಈಗ ಸ್ವಲ್ಪ ಗಟ್ಟಿಯಾಗಿದೆ. ನಮ್ಮ ತಂದೆಯ ಬಗ್ಗೆ ಯೋಚಿಸಬೇಡಿ. ಆತನದು ಬ್ಯಾಡ್ ಲಕ್, ಅಷ್ಟೆ. ಎಲ್ಲರೂ ಧೈರ್ಯದಿಂದ ಇಳಿಯಿರಿ, ಕೆಳಗೆ ಅಗ್ನಿಶಾಮಕದಳದವರು, ಪೊಲೀಸರು, ನಾಗರಿಕರು, ವೈದ್ಯರುಗಳ ಹಿಂಡೇ ಇದೆ. ಅವರೆಲ್ಲ ನಮ್ಮನ್ನು ರಕ್ಷಿಸುತ್ತಾರೆ ಅಂದೆ. ನನಗೇ ಬೆರಗಾಗುವಂತೆ ಎಲ್ಲರೂ ಅಂಗೈಲಿ ಜೀವ ಹಿಡಿದುಕೊಂಡೇ ಇಳಿದುಬಿಟ್ಟರು. ಈ ಸಂದರ್ಭದಲ್ಲಿ ಅಗ್ನಿಶಾಮಕದಳದ ಅಧಿಕಾರಿಗಳು ನೀಡಿದ ಸಹಕಾರವನ್ನು ಮರೆಯುವಂತೆಯೇ ಇಲ್ಲ. ಕಡೆಯವನಾಗಿ ಅದೇ ಕರ್ಟನ್‌ನ ಹಗ್ಗ ಹಿಡಿದುಕೊಂಡು ಸರಸರನೆ ನಾನೂ ಸುರಕ್ಷಿತವಾಗಿ ಇಳಿದುಬಂದೆನಲ್ಲ? ಆಗ ನನ್ನೊಂದಿಗಿದ್ದ ಎಲ್ಲ ೧೪೮ ಮಂದಿಯೂ ಒಟ್ಟಾಗಿ `ದೀಪಕ್ ಕುಂತಾ ವಾಲಾಕೀ ಜೈ’ ಅಂದರು. ಅವರ ಪ್ರೀತಿ, ಕೃತಜ್ಞತೆಯ ನಡುವೆಯೇ ಅಪ್ಪನ ನೆನಪಾಗಿ ಕಣ್ತುಂಬಿ ಬಂತು. ನಾನು `ಭಾರತ್ ಮಾತಾಕೀ ಜೈ’ ಎಂದು ಮೌನವಾದೆ.
**
ಮೇಲಿಂದ ಬಿದ್ದ ಮರುಕ್ಷಣವೇ ಅಪ್ಪ ಸತ್ತು ಹೋಗಿರುತ್ತಾನೆ ಎಂದು ನಂಬಿದ್ದೆನಲ್ಲ, ಅದೇ ಕಾರಣಕ್ಕೆ ಐದಾರು ಗಂಟೆಗಳ ಬಳಿಕ ಜತೆಗಿದ್ದ ಅಗ್ನಿಶಾಮಕದಳದ ಅಧಿಕಾರಿಗೆ `ಮೊದಲಿಗೆ ಆಯತಪ್ಪಿ ಬಿದ್ದನಲ್ಲ? ಆತ ನನ್ನ ತಂದೆ, ಆತನ ಶವ ಎಲ್ಲಿದೆ? ಎಂದು ಕೇಳಿದೆ. ಆ ಅಧಿಕಾರಿ ಕೆನ್ನೆ ಕೆನ್ನೆ ಬಡಿದುಕೊಂಡು – `ಛೆ, ಬಿಡ್ತು ಅನ್ನಿ ಸಾರ್. ನಿಮ್ಮ ತಂದೆಗೆ ಕಾಲು ಮುರಿದಿದೆ ಅಷ್ಟೆ. ಹೋಟೆಲಿನ ಹೊರಗಡೆ ಇರುವ ಆಂಬ್ಯುಲೆನ್ಸ್‌ನಲ್ಲಿ ಅವರು ಆರಾಮಾಗಿದ್ದಾರೆ’ ಅಂದರು. ನಾನು ನಂಬದ ಪವಾಡ ನನ್ನ ಕಣ್ಣೆದುರೇ ನಡೆದುಹೋಗಿತ್ತು. ಇಪ್ಪತ್ತೆರಡು ಅಡಿ ಎತ್ತರದಿಂದ ಬಿದ್ದ ನಂತರವೂ ನನ್ನ ಅಪ್ಪ ಬದುಕಿದ್ದ. ಸಾವಿಗೆ ಸವಾಲು ಹಾಕಿ ನಕ್ಕಿದ್ದ…
***
ಇಷ್ಟು ಹೇಳಿ ಮೌನವಾಗುತ್ತಾನೆ ದೀಪಕ್. ಹಿಂದೆಯೇ `ನಿಜವಾದ ಹೀರೋಗಳು ಅಂದ್ರೆ ನಮ್ಮ ದೇಶದ ಯೋಧರು. ಅವರ ಮುಂದೆ ನಾನು ಏನೇನೂ ಅಲ್ಲ. ಮೊನ್ನೆ, ಭಂಡ ಧೈರ್ಯದಿಂದ ಗೆದ್ದೆ ಅಷ್ಟೆ’ ಅನ್ನುತ್ತಾನೆ. ಅವನ ಧೈರ್ಯ, ಸಾಹಸ, ರಿಸ್ಕ್ ತೆಗೆದುಕೊಂಡ ಸಂದರ್ಭವನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಂಡರೆ `ದೀಪಕ್‌ಗೆ ಲಾಲ್ ಸಲಾಂ’ ಎಂದು ಚೀರುವ ಆಸೆಯಾಗುತ್ತದೆ. ನಿಜ ಬದುಕಿನ ಇಂಥ ಹೀರೋಗಳ ಕಥೆ ಕೇಳಿದಾಗೆಲ್ಲ `ಭಂಡಧೈರ್ಯವಿದ್ದರೆ ಭೂಮಂಡಲವನ್ನೇ ಜಯಿಸಬಹುದು’ ಎಂಬ ಮಾತು ಬಿಡದೆ ನೆನಪಾಗುತ್ತದೆ ಅಲ್ಲವೆ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: