ಆ ಯೋಧ ಡಿಕ್ಟೇಷನ್ ಕೊಟ್ಟ,ಅಮೆರಿಕದ ಅಧ್ಯಕ್ಷರು ಬರೆದುಕೊಂಡರು!

john-f-kennedy1

ಇದು, ೧೯೬೦ರ ಮಾತು. ಆಗ ಅಮೆರಿಕದ ಅಧ್ಯಕ್ಷರಾಗಿದ್ದವರು ಜಾನ್ ಎಫ್. ಕೆನಡಿ. ಬಡವರು, ಹಿಂದುಳಿದವರು, ಅಸಹಾಯಕರು, ಜನಾಂಗೀಯ ದ್ವೇಷದಿಂದ ನಲುಗಿಹೋಗಿದ್ದ ಕರಿಯರು ಹಾಗೂ ಭವಿಷ್ಯದ ಬಗ್ಗೆ ಕ್ಷಣ ಕ್ಷಣವೂ ಯೋಚಿಸುತ್ತಿದ್ದ ಕಾರ್ಮಿಕರ ಪಾಲಿಗೆ ಹಿರಿಯಣ್ಣ ನಂತಿದ್ದುದು; ತನ್ನ ಆಕಾರದ ಅವಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಪ್ರಯತ್ನಿಸಿದ್ದು; ಬಡಜನರ ಬದುಕಿಗೆ ಅನುಕೂಲವಾಗುವಂಥ ಕಾನೂನುಗಳನ್ನು ಜಾರಿಗೆ ತಂದದ್ದು ಜಾನ್ ಕೆನಡಿಯವರ ಹೆಚ್ಚುಗಾರಿಕೆ. ಈ ಕಾರಣದಿಂದಲೇ ಈವರೆಗೂ ಆಗಿಹೋದ ಅಮೆರಿಕದ ಅಧ್ಯಕ್ಷರುಗಳ ಪೈಕಿ ಯಾರು ಗ್ರೇಟ್ ಎಂಬ ಪ್ರಶ್ನೆಗೆ `ಜಾನ್ ಕೆನಡಿ’ ಎಂಬುದೇ ಉತ್ತರವಾಗುತ್ತದೆ. (ಜೊತೆಗೆ, ಇನ್ನೊಬ್ಬ ಮಹಾನಾಯಕ ಅಬ್ರಹಾಂ ಲಿಂಕನ್‌ನ ಹೆಸರೂ ಕೇಳಿಬರುತ್ತದೆ).

ಕೆನಡಿ ಅಮೆರಿಕದ ಅಧ್ಯಕ್ಷನಾಗಿದ್ದ ಅವಯಲ್ಲಿಯೇ ಪುಟ್ಟ ರಾಷ್ಟ್ರ ಎಂದೇ ಹೆಸರಾಗಿದ್ದ ವಿಯಟ್ನಾಂನೊಂದಿಗೆ ರಾಜತಾಂತ್ರಿಕ ಸಂಬಂಧ ಹಳಸಿಕೊಂಡಿತು. ಪರಿಣಾಮ, ಎರಡೂ ರಾಷ್ಟ್ರಗಳು ತಮ್ಮ ತಮ್ಮ ವಿದೇಶಾಂಗ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡವು. ನಂತರದಲ್ಲಿ ವಿಯಟ್ನಾಂನ ಅಧ್ಯಕ್ಷರು, ಅಮೆರಿಕ ಮತ್ತು ಅಲ್ಲಿನ ಅಧ್ಯಕ್ಷರ ಕುರಿತು ಲಘುವಾಗಿ ಮಾತನಾಡಿದರು. ಅದು ಎಲ್ಲ ಪತ್ರಿಕೆಗಳಲ್ಲೂ ವರದಿಯೂ ಆಯಿತು.
ವಿಯಟ್ನಾಂ ಅಧ್ಯಕ್ಷರ ಮಾತಿನಿಂದ ತನ್ನ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟಾಗಿದೆ ಎಂದು ಭಾವಿಸಿದ ಅಮೆರಿಕ, ಡಿಢೀರನೆ ಯುದ್ಧ ಘೋಷಿಸಿಬಿಟ್ಟಿತು. ಹೇಳಿ ಕೇಳಿ ಪುಟ್ಟ ರಾಷ್ಟ್ರವಲ್ಲವೆ ವಿಯಟ್ನಾಂ?ಅದನ್ನು ಸೋಲಿಸಲು ಹೆಚ್ಚೆಂದರೆ ಮೂರು ದಿನಗಳ ಕಾಲ ಸಾಕು ಎಂದೇ ನಂಬಿದ್ದರು ಜಾನ್ ಕೆನಡಿ. ಕೆನಡಿ ಮಾತ್ರವಲ್ಲ, ಇಡೀ ಜಗತ್ತೇ ಹಾಗೆ ಭಾವಿಸಿತ್ತು. ಆದರೆ ಯುದ್ಧ ಶುರುವಾದ ಕೆಲವೇ ದಿನಗಳಲ್ಲಿ, ವಿಯಟ್ನಾಂನ ತಾಕತ್ತು ಏನೆಂದು ಎಲ್ಲರಿಗೂ ಅರ್ಥವಾಗಿ ಹೋಯಿತು. ಏಕೆಂದರೆ, ಇಂಥದೊಂದು ಬೆಳವಣಿಗೆಯನ್ನು; ಮಹಾಸಮರವನ್ನು ಮೊದಲೇ ನಿರೀಕ್ಷಿಸಿದ್ದಂತೆ ವಿಯಟ್ನಾಂನ ಯೋಧರು ಅವಡುಗಚ್ಚಿ ಹೋರಾಟಕ್ಕೆ ನಿಂತುಬಿಟ್ಟರು. ಪರಿಣಾಮ, ಮೂರೇ ದಿನಗಳಲ್ಲಿ ಮುಗಿದುಹೋಗುತ್ತದೆ ಎಂದು ಭಾವಿಸಲಾಗಿದ್ದ ವಿಯಟ್ನಾಂ ಕದನ, ಮೂರು ತಿಂಗಳಾದರೂ ಮುಗಿಯಲಿಲ್ಲ. ಕಡೆಗೂ ಅದೊಂದು ದಿನ ಯುದ್ಧ ಮುಗಿದಾಗ, ಮೂರು ವರ್ಷಗಳೇ ಕಳೆದುಹೋಗಿದ್ದವು. ಅಮೆರಿಕದಂಥ ಬಲಾಢ್ಯ ರಾಷ್ಟ್ರ ಸಾವಿರಾರು ಯೋಧರನ್ನು ಕಳೆದುಕೊಂಡಿತ್ತು.

ಈಗ ಹೇಳಲಿರುವುದು ವಿಯಟ್ನಾಂ ಕದನ ನಡೆಯುತ್ತಿದ್ದ ಸಂದರ್ಭದಲ್ಲಿ ಜರುಗಿದ ಘಟನೆ. ಯುದ್ಧರಂಗದಲ್ಲಿ- ಗೆಲುವೊಂದೇ ನಮ್ಮ ಗುರಿ ಎಂದುಕೊಂಡು ಹೋರಾಡುತ್ತಿದ್ದ ಅಮೆರಿಕನ್ ಸೈನಿಕರುಗಳ ಪೈಕಿ ದಿನವೂ ನೂರಾರು ಗಾಯಾಳುಗಳು ಮಿಲಿಟರಿ ಆಸ್ಪತ್ರೆ ಸೇರುತ್ತಿದ್ದರು. ಇಂಥ ಸಂಕಟದ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಹೋಗಿ ಯೋಧರ ಸುಖ-ದುಃಖ ವಿಚಾರಿಸುವುದು, ಅವರಿಗೆ ಧೈರ್ಯ ಹೇಳುವುದು, ಅವರ ಹೋರಾಟದ ಮನೋಭಾವಕ್ಕೆ ಶಹಭಾಷ್‌ಗಿರಿ ಕೊಡುವುದು ತಮ್ಮ ಕರ್ತವ್ಯ ಎಂದೇ ಭಾವಿಸಿದ ಜಾನ್ ಕೆನಡಿ, ತಮ್ಮ ಬಿಡುವಿರದ ಕಾರ್‍ಯಕ್ರಮಗಳ ಮಧ್ಯೆಯೂ ಒಂದೆರಡು ಗಂಟೆಗಳ ಕಾಲ ಬಿಡುವು ಮಾಡಿಕೊಂಡರು. ಆ ಅವಯಲ್ಲಿ, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯೋಧರನ್ನು ಭೇಟಿ ಮಾಡಿ, ಅವರ ಯೋಗಕ್ಷೇಮ ವಿಚಾರಿಸಬೇಕೆಂಬುದು ಕೆನಡಿಯವರ ಆಸೆಯಾಗಿತ್ತು.
ಈ ಸಂದರ್ಭದಲ್ಲಿಯೇ ಇಪ್ಪತೈದರ ಹರೆಯದ ಯೋಧನೊಬ್ಬ ತೀವ್ರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ. ಆತನಿದ್ದ ಸೇನಾ ಕ್ಯಾಂಪ್ ಮೇಲೆ ಶತ್ರು ಸೈನಿಕರು ಗ್ರೆನೇಡ್ ಎಸೆದಿದ್ದರು. ಪರಿಣಾಮ, ಈತನ ಎರಡೂ ಕಣ್ಣುಗಳಿಗೆ ತೀವ್ರ ಪೆಟ್ಟಾಗಿತ್ತು. ಆತನಿಗೆ ದೃಷ್ಟಿ ಹೋಗುವ ಸಾಧ್ಯತೆಯೂ ಹೆಚ್ಚಿತ್ತು. ಪ್ರಾಣಾಪಾಯದ ಸಾಧ್ಯತೆ ಕೂಡ ಇತ್ತು. ಆದರೂ ಅತ್ಯುತ್ತಮ ಚಿಕಿತ್ಸೆಗೆ ಸರಕಾರ ವ್ಯವಸ್ಥೆ ಮಾಡಿದ್ದರಿಂದ ಅವನನ್ನು ಉಳಿಸಿಕೊಳ್ಳುವ ನಂಬಿಕೆ ವೈದ್ಯರಿಗಿತ್ತು.

ಯೋಧನಿಗೆ ಇದನ್ನೆಲ್ಲ ವಿವರಿಸಿದ್ದ ವೈದ್ಯರು- `ನಿಮ್ಮ ಕಣ್ಣುಗಳಿಗೆ ತುಂಬಾ ಪೆಟ್ಟು ಬಿದ್ದಿದೆ. ಈಗ ದೃಷ್ಟಿ ಮರಳಿಸುವ ಶಸ್ತ್ರಚಿಕಿತ್ಸೆ, ಔಷಧೋಪಚಾರ ಆರಂಭಿಸಿದ್ದೇವೆ. ನೀವು ಒಂದು ದಿನದಲ್ಲಿ ಹತ್ತು ನಿಮಿಷದ ಅವ ಮಾತ್ರ ಕಣ್ತೆರೆಯಬಹುದು. ಉಳಿದ ಅವಯಲ್ಲಿ ಕಣ್ಣು ಮುಚ್ಚಿರಲೇಬೇಕು. ಇಲ್ಲವಾದರೆ ಸೋಂಕು ತಗುಲಿ ದೃಷ್ಟಿ ಹೋಗಿಬಿಡುವ ಅಪಾಯವಿದೆ’ ಎಂದು ಎಚ್ಚರಿಸಿದ್ದರು. ಈ ಮಾತಿಗೆ ಯೋಧನೂ ಸಮ್ಮತಿ ಸೂಚಿಸಿದ್ದ. ಇಡೀ ದಿನದಲ್ಲಿ ಕೇವಲ ಹತ್ತೇ ನಿಮಿಷ ಕಣ್ತೆರೆದುಕೊಂಡಿದ್ದು, ಬಾಕಿ ಅವಯಲ್ಲಿ ಕಣ್ಮುಚ್ಚಿಕೊಂಡೇ ಬದುಕುವುದನ್ನು ಅಭ್ಯಾಸ ಮಾಡಿಕೊಂಡಿದ್ದ.
ಅದೊಂದು ದಿನ, ಈ ಯೋಧನಿದ್ದ ಆಸ್ಪತ್ರೆಗೆ ಬಂದರು ಜಾನ್ ಕೆನಡಿ. ಅಮೆರಿಕದ ಅಧ್ಯಕ್ಷರು ಅಂದ ಮೇಲೆ ಕೇಳಬೇಕೆ? ಅವರ ಹಿಂದೆ ಹತ್ತಾರು ಮಂದಿ ಅಕಾರಿಗಳು, ಸೆಕ್ಯುರಿಟಿ ಸಿಬ್ಬಂದಿ ಕೂಡ ಬಂದರು. ಅವರನ್ನೆಲ್ಲ ಆಸ್ಪತ್ರೆಯ ವಾರ್ಡ್‌ನ ಬಾಗಿಲಲ್ಲೇ ನಿಲ್ಲಿಸಿದ ಜಾನ್ ಕೆನಡಿ, ನೇರವಾಗಿ ಆ ಯೋಧನಿದ್ದ ಬೆಡ್ ಬಳಿ ಬಂದರು. ಆತನಿಗೆ ಆಗಿರುವ ಗಾಯದ ಪ್ರಮಾಣ, ನೀಡುತ್ತಿರುವ ಚಿಕಿತ್ಸೆ, ಆತನ ಪರಿಸ್ಥಿತಿಯ ಬಗ್ಗೆ ಅಲ್ಲಿದ್ದ PZಠಿಜಿಛ್ಞಿಠಿo eZಠಿ ನಿಂದ ತಿಳಿದುಕೊಂಡರು. ನಂತರ, ಯಾತನೆಯಿಂದ ನರಳುತ್ತಿದ್ದ ಆತನ ಮುಂದೆ ನಿಂತು- `ಗೆಳೆಯಾ, ನನ್ನಿಂದ ನಿನಗೆ ಏನಾದರು ಸಹಾಯವಾದೀತೆ?’ ಎಂದು ಕೇಳಿದರು.

ಪಾಪ, ಬದುಕುವ ಆಸೆಯನ್ನೇ ಬಿಟ್ಟಿದ್ದ ಆ ಯುವಕನಿಗೆ ಸ್ವತಃ ರಾಷ್ಟ್ರಾಧ್ಯಕ್ಷರೇ ಬಂದು ತನ್ನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಎಂದು ಹೇಗೆ ಅರ್ಥವಾಗಬೇಕು? ಆತ ನರಳುತ್ತಲೇ ಹೇಳಿದ- `ಸ್ವಾಮಿ ಊರಿನಲ್ಲಿರುವ ಅಮ್ಮನಿಗೆ ನಾನೊಂದು ಪತ್ರ ಬರೆಯಬೇಕು. ಆದರೆ, ನಾನೀಗ ಬರೆಯುವ ಸ್ಥಿತಿಯಲ್ಲಿ ಇಲ್ಲ. ದಯವಿಟ್ಟು ನಾನು ಹೇಳಿದಷ್ಟು ಬರೆದುಕೊಡಿ. ಕಡೆಯಲ್ಲಿ `ಪತ್ರ ಬರೆದವರು’ ಎಂಬ ಶೀರ್ಷಿಕೆಯಲ್ಲಿ ನಿಮ್ಮ ಹೆಸರನ್ನೂ ಹಾಕಿಬಿಡಿ…’
`ಆಗಲಿ’ ಎಂದವರೇ ಪಕ್ಕದಲ್ಲಿಯೇ ಇದ್ದ ಸ್ಟೂಲ್ ಎಳೆದುಕೊಂಡು ಬರೆಯಲು ಕುಳಿತೇಬಿಟ್ಟರು ಕೆನಡಿ. ಅದನ್ನು ಕಂಡಿದ್ದೇ, ಅವರ ನೆರವಿಗೆ ಧಾವಿಸಲು ಬಾಗಿಲಲ್ಲಿದ್ದ ಅಕಾರಿಗಳು ಪ್ರಯತ್ನಿಸಿದಾಗ ಅವರನ್ನು ಕಣ್ಣಿನಲ್ಲೇ ತಡೆದರು. ಇದೇನನ್ನೂ ತಿಳಿಯದ ಯೋಧ ಡಿಕ್ಟೇಷನ್ ಕೊಡುವವನಂತೆ ಮಾತು ಆರಂಭಿಸಿದ.

`ಪ್ರೀತಿಯ ಅಮ್ಮ, ದೇಶಕ್ಕಾಗಿ ಹೋರಾಡುವಾಗ ನನಗೆ ತುಂಬಾ ಪೆಟ್ಟುಬಿದ್ದಿದೆ. ಸದ್ಯಕ್ಕೆ ದೃಷ್ಟಿ ಹೋಗಿಬಿಟ್ಟಿದೆ ಅನಿಸುತ್ತೆ. ದಿನಕ್ಕೆ ಬರೀ ಹತ್ತು ನಿಮಿಷ ಮಾತ್ರ ಕಣ್ತೆರೆಯಬೇಕು ಎಂದು ವೈದ್ಯರು ಕಟ್ಟಪ್ಪಣೆ ಮಾಡಿದ್ದಾರೆ. ಇನ್ನೊಂದು ಕಡೆಯಲ್ಲಿ ಕೈ-ಕಾಲು ತಲೆಗೂ ಚೇತರಿಸಿಕೊಳ್ಳಲಾರದಂಥ ಪೆಟ್ಟುಬಿದ್ದಿದೆ. ನಾನು ಬದುಕುವ-ಸಾಯುವ ಎರಡೂ ಸಾಧ್ಯತೆಗಳು ಫಿಫ್ಟಿ-ಫಿಫ್ಟಿ ಎಂಬಂತಿವೆ. ಒಂದು ಸಂತೋಷವೆಂದರೆ ದೇಶಕ್ಕಾಗಿ ಹೋರಾಡಿದ ಹೆಮ್ಮೆ ನನ್ನ ಜತೆಗಿದೆ. ನಾನು ಯಾವ ತಪ್ಪನ್ನೂ ಮಾಡಿಲ್ಲವಾದ್ದರಿಂದ; ಶತ್ರುವಿಗೆ ಬೆನ್ನು ತೋರಿ ಓಡಿಬಂದಿಲ್ಲವಾದ್ದರಿಂದ ನನಗೆ ಯಾವ ದುಃಖವೂ ಆಗುತ್ತಿಲ್ಲ. ಆದರೆ, ಈ ಸಂಕಟದ ಸಂದರ್ಭದಲ್ಲಿ ಸಾಯುವ ಮೊದಲು ನಿನ್ನನ್ನು ಹಾಗೂ ಮಡದಿ-ಮಕ್ಕಳನ್ನು ನೋಡಲು ಸಾಧ್ಯವಾಗುತ್ತಿಲ್ಲವಲ್ಲ; ಅದೇ ಕೊರಗು…

ಇಷ್ಟು ಹೇಳುವುದರೊಳಗೇ ಆತನಿಗೆ ಗಂಟುಲುಬ್ಬಿ ಬಂತು. ಮುಚ್ಚಿದ್ದ ಕಂಗಳ ಅಂಚಿನಲ್ಲೂ ನೀರ ಪೊರೆ. ತಮ್ಮ ಕರವಸ್ತ್ರದಿಂದ ಆತನ ಕಂಬನಿ ಒರೆಸಿದ ಕೆನಡಿ ಕ್ಷಣ ಮೌನವಾದರು. ಆ ಯೋಧ, ಮರುಕ್ಷಣವೇ ಚೇತರಿಸಿಕೊಂಡು ಮುಂದುವರಿದ: ಅಮ್ಮಾ, ನನ್ನ ಈ ಸ್ಥಿತಿಗೆ ನೀನು ದುಃಖಿಸಬಾರದು. ಅಳುತ್ತಾ ಕೂರಬಾರದು. ಬದುಕಿನಲ್ಲಿ ಆಸಕ್ತಿ ಕಳೆದುಕೊಳ್ಳಬಾರದು. ಮಗ ನನ್ನ ಜತೆಗಿಲ್ಲ ಎಂದು ಕೊರಗಬಾರದು. ನಿನ್ನ ಮೊಮ್ಮಕ್ಕಳ ರೂಪದಲ್ಲೇ ನಾನಿದ್ದೇನೆ. ಹೌದಮ್ಮ, ನಾನು ನಿಮ್ಮೆಲ್ಲರನ್ನೂ ತುಂಬ ಪ್ರೀತಿಸುತ್ತೇನೆ. ಮಕ್ಕಳಿಬ್ಬರಿಗೂ ನನ್ನ ಕೊನೆಯ ಮುತ್ತುಗಳು. ನಿನ್ನ ಸೊಸೆಗೆ ನೀನೇ ಧೈರ್ಯ ಹೇಳಮ್ಮಾ, ಒಂದು ವೇಳೆ ನಾನು ಸತ್ತುಹೋದರೆ ಮುಂದೆ ನನ್ನ ಮಕ್ಕಳನ್ನೂ ಸೈನ್ಯಕ್ಕೆ ಸೇರಿಸಮ್ಮಾ… ಇದು ನನ್ನ ಕಡೆಯ ಆಸೆ’ ಇಷ್ಟು ಹೇಳಿ ಆತ ನಿಲ್ಲಿಸಿದ,ಅದೇ ರೀತಿ ಬರೆದುಮುಗಿಸಿದ ಕೆನಡಿ, ಕೊನೆಯಲ್ಲಿ ಪತ್ರ ಬರೆದುಕೊಟ್ಟವರು- `ಜಾನ್ ಎಫ್. ಕೆನಡಿ, ಅಧ್ಯಕ್ಷರು, ಅಮೆರಿಕ ಸಂಯುಕ್ತ ಸಂಸ್ಥಾನ’ ಎಂದು ನಮೂದಿಸಿದರು. ನಂತರ ಪತ್ರದ ಮೇಲೆ ವಿಳಾಸ ಬರೆದು `ಗೆಳೆಯಾ, ಇದನ್ನು ನಾನೇ ಪೋಸ್ಟ್ ಮಾಡ್ತೇನೆ. ಸರಿಯಾ?’ ಎಂದರು.
`ಸ್ವಾಮಿ, ಪತ್ರವನ್ನು ಅಂಚೆಗೆ ಹಾಕುವ ಮುನ್ನ ಒಮ್ಮೆ ಓದಿಬಿಡಲೆ? ಹೇಗಿದ್ದರೂ ಹತ್ತು ನಿಮಿಷ ಕಣ್ತೆರೆಯಬಹುದಲ್ಲ? ಒಂದು ವೇಳೆ ಏನಾದರೂ ಬಿಟ್ಟುಹೋಗಿದ್ದರೆ ಅದನ್ನೂ ಹೇಳಿಬಿಡ್ತೀನಿ’ ಅಂದ ಆ ಯೋಧ. ಕೆನಡಿ ಒಪ್ಪಿದರು. ಪ್ರಯಾಸದಿಂದ ಕಣ್ತೆರೆದ ಆತ, ಪ್ರಯಾಸದಿಂದಲೇ ಓದಿ ಮುಗಿಸಿದ. ಕಡೆಯ ಟಿಪ್ಪಣಿ ನೋಡಿದ್ದೆ, ಗಾಬರಿಯಾಗಿ- ಸ್ವಾಮಿ ನೀವು, ನೀವು ನಮ್ಮ ಅಧ್ಯಕ್ಷರೇ ಎಂದು ಉದ್ಗರಿಸಿ, ಗೌರವದಿಂದ ಮಿಲಿಟರಿ ಸೆಲ್ಯೂಟ್ ಹೊಡೆಯಲು ಹೋದ. ತಕ್ಷಣವೇ ಅವನನ್ನು ತಡೆದ ಕೆನಡಿ, `ಹೌದು ಗೆಳೆಯಾ. ನಾನು ಜಾನ್ ಕೆನಡಿ. ಇವತ್ತು ಸೆಲ್ಯೂಟ್ ಹೊಡೆಯಬೇಕಿರುವುದು ನೀನಲ್ಲ, ನಾನು ಎನ್ನುತ್ತಾ ಆತನ ಕೈಗೆ ಹೂ ಮುತ್ತುಕೊಟ್ಟರು. ಸಂಕಟದ ಸಂದರ್ಭದಲ್ಲಿ ನಿನ್ನ ಸೇವೆ ಮಾಡಿದೆನಲ್ಲ? ನನ್ನ ಬದುಕು ಸಾರ್ಥಕವಾಯಿತು. ನಿನ್ನಂಥ ರನನ್ನು ಪಡೆದ ಧನ್ಯತೆ ಅಮೆರಿಕದ್ದು ಎಂದು ಹೇಳುತ್ತಾ ಭಾವಪರವಶರಾದರು.
ಇದನ್ನೆಲ್ಲ ಮೌನವಾಗಿ ವೀಕ್ಷಿಸಿದ ಕೆನಡಿಯವರ ಸಹಾಯಕರ ಕಂಗಳಲ್ಲಿ ನೀರಿದ್ದವು…
*************
ಒಬ್ಬ ಯೋಧನಿಗೆ ಹತ್ತು ನಿಮಿಷದ ಮಟ್ಟಿಗೆ ಸಹಾಯ ಮಾಡಿ ಇವತ್ತು ನನ್ನ ಬದುಕು ಸಾರ್ಥಕವಾಯ್ತು ಎಂದು ಜಾನ್ ಕೆನಡಿ ಉದ್ಗರಿಸಿದ್ದನ್ನು ಓದಿದ ಮರುಕ್ಷಣವೇ ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್ ನೆನಪಾಗುತ್ತಾನೆ. ಮೊನ್ನೆ ಮೊನ್ನೆ ಮುಂಬಯಿಯ ತಾಜ್ ಹೊಟೇಲಿನಲ್ಲಿ ನಡೆದ ಉಗ್ರರ ವಿರುದ್ಧದ ಕಾರ್‍ಯಾಚರಣೆಯಲ್ಲಿ ಸಂದೀಪ್ ವೀರಮರಣ ಹೊಂದಿದಾಗ, ನಮ್ಮ ರಾಜಕಾರಣಿಗಳು ಅಸಹ್ಯ ಎಂಬಂತೆ ವರ್ತಿಸಿದರು. ಈ ಸಂದರ್ಭದಲ್ಲಿ ನಮಗೆ ಪ್ರೈವೇಸಿ ಬೇಕು. ನನ್ನ ಮಗನ ಸಾವು ರಾಜಕಾರಣಿಗಳ ಮಾತಿಗೆ, ರಾಜಕೀಯಕ್ಕೆ ಒಂದು ವಸ್ತುವಾಗುವುದು ನನಗೆ ಇಷ್ಟವಿಲ್ಲ. ದಯವಿಟ್ಟು ಸಾಂತ್ವನ ಹೇಳುವ ನೆಪದಲ್ಲಿ ಯಾರೂ ಬರಬೇಡಿ…’
ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಸ್ಪಷ್ಟ ಮಾತುಗಳಲ್ಲಿ ಹೀಗೆ ಮನವಿ ಮಾಡಿಕೊಂಡಿದ್ದರು. ಹಾಗಿದ್ದರೂ ಕೇರಳದಿಂದ ಬೆಂಗಳೂರಿನ ಯಲಹಂಕಕ್ಕೆ ಬಂದವರು ಅಲ್ಲಿನ ಮುಖ್ಯಮಂತ್ರಿ ಅಚ್ಯುತಾನಂದನ್. ಸಂದೀಪ್ ಮನೆಗೆ ಹೋದ ಅವರಿಗೆ ಸರಿಯಾಗಿಯೇ ಮಂಗಳಾರತಿಯಾಯಿತು. ಆ ನಂತರದಲ್ಲಿ ಅಚ್ಯುತಾನಂದನ್ ತಲೆಕೆಟ್ಟ ಆಸಾಮಿಯಂತೆ ಮಾತಾಡುತ್ತಾ- `ಅದು ಸಂದೀಪ್ ಅವರ ಮನೆಯಲ್ಲದಿದ್ದರೆ ಅದನ್ನು ಒಂದು ನಾಯಿ ಕೂಡ ಮೂಸಿ ನೋಡುತ್ತಿರಲಿಲ್ಲ’ ಎಂದುಬಿಟ್ಟರು. ಆ ಮೂಲಕ ತಮ್ಮ ಲೆವೆಲ್ ಏನು ಎಂಬುದನ್ನೂ ತೋರಿಸಿಬಿಟ್ಟರು. ಅವರ ಮಾತಿಗೆ ಖಾರವಾಗಿ ಪ್ರತಿಕ್ರಿಯಿಸಿದ ಯೋಧನೊಬ್ಬ ಹೇಳಿದ್ದು ಒಂದೇ ಮಾತು. `ಅದ್ಸರಿ, ಈ ನಾಯಿ ಕೇರಳದಿಂದ ಯಾಕೆ ಬಂದಿತ್ತಂತೆ?…
ಯೋಧ ಹೇಳಿದ್ದನ್ನೆಲ್ಲ ಡಿಕ್ಟೇಷನ್ ಬರೆದುಕೊಂಡ ಜಾನ್ ಕೆನಡಿ ಪ್ರಸಗದಿಂದ ನಾವು-ನಮ್ಮ ರಾಜಕಾರಣಿಗಳು ಕಲಿಯಬೇಕಾದದ್ದು ಎಷ್ಟೊಂದಿದೆಯಲ್ಲವೆ?

Advertisements

3 Comments »

 1. 1

  ಕೆನಡಿಯವರ ಬಗ್ಗೆ ಸಾಕಷ್ಟು ಕೇಳಿದ್ದರೂ ಈ ಘಟನೆ ತಿಳಿದಿರಲಿಲ್ಲ. ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

 2. 2
  Ravikumar.G.K Says:

  namm rajakaarinigalige istondu valle manasu barok saadyane illa bidi….
  tumba chennagi baredidiraa…. thank u

 3. 3
  Rajendra M.E Says:

  Superb article sir…………………..


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: