`ಗುಂಡಣ್ಣರಿಗೆ’ ಹೇಳಿದ ಕಿವಿಮಾತೂ ಗಮ್ಮತ್ತಿನ ಹಾಡಾಗಬೇಕೆ?

spb

ಗುಂಡಿನ ಮತ್ತೇ ಗಮ್ಮತ್ತು….
ಚಿತ್ರ ಎಡಕಲ್ಲು ಗುಡ್ಡದ ಮೇಲೆ, ಗೀತೆರಚನೆ: ಎಂ. ನರೇಂದ್ರಬಾಬು
ಸಂಗೀತ: ಎಂ. ರಂಗರಾವ್, ಗಾಯನ: ಎಸ್ಪಿ

ಗುಂಡಿನ ಮತ್ತೇ ಗಮ್ಮತ್ತು
ಅಳತೆ ಮೀರಿದರೆ ಆಪತ್ತು
ಕುಡುಕನಿಗೇ ಇರೋದು ನಿಯತ್ತು
ಇದೇ ಬಾಟಲಿ ಮಹತ್ತು ||ಪ||

ಹೆಣ್ಣಿನ ಮತ್ತು ದೇಹಕೆ ಮೂಲ
ಹೊನ್ನಿನ ಮತ್ತು ಪ್ರೀತಿಗೆ ಮೂಲ
ಮಣ್ಣಿನ ಮತ್ತು ಹಳ್ಳಕೆ ಮೂಲ
ಪದವಿಯ ಮತ್ತು ಪ್ರಾಣಕೆ ಮೂಲ ||೧||

ವಿದ್ಯೆಯ ಮತ್ತು ಗರ್ವಕೆ ಮೂಲ
ರೂಪಿನ ಮತ್ತು ಶೀಲಕೆ ಮೂಲ
ಶೌರ್ಯದ ಮತ್ತು ಹೇಡಿಗೆ ಮೂಲ
ಕೀರ್ತಿಯ ಮತ್ತು ಪತನಕೆ ಮೂಲ ||೨||

ಬಾಯಿಗೆ ಘಾಟಾದರೂ ಬ್ರೈನಿಗೆ ಸ್ವೀಟು
ಮಾನಿನಿಯರ ಸ್ನೇಹಕೆ ಸುಲಭದ ರೂಟು
ಭಕ್ತ ಜನ ಹೆಚ್ಚಿರಲು ಏರಿದೆ ರೇಟು
ಆದರೂ ಬಾರ್‌ಗಳು ಓಪನ್ ಡೇ ಅಂಡ್ ನೈಟು ||೩||

ಹಳೆಯ ತಲೆಮಾರಿನ ಚಿತ್ರಸಾಹಿತಿಗಳ ಪೈಕಿ ಪ್ರಚಾರ ಮತ್ತು ಅವಕಾಶಗಳಿಲ್ಲದೆ ತೆರೆಮರೆಯಲ್ಲೇ ಉಳಿದವರ ಪೈಕಿ ಎಂ. ನರೇಂದ್ರಬಾಬು ಪ್ರಮುಖರು. `ಎಡಕಲ್ಲು ಗುಡ್ಡದ ಮೇಲೆ’ ಚಿತ್ರಕ್ಕೆ `ಗುಂಡಿನ ಮತ್ತೇ ಗಮ್ಮತ್ತು ಮತ್ತು `ಧರ್ಮ ದಾರಿ ತಪ್ಪಿತು’ ಸಿನಿಮಾಕ್ಕೆ `ಜಾಣೆಯಾಗಿರು ನನ್ನ ಮಲ್ಲಿಗೆ/ನೀ ಹೆಣ್ಣಾಗಿ ಬಂದಿರುವೆ ಇಲ್ಲಿಗೆ….’ ಸೇರಿದಂತೆ ಹಲವಾರು ಸೂಪರ್ ಹಿಟ್ ಗೀತೆಗಳನ್ನು ಬರೆದ ನರೇಂದ್ರಬಾಬು, ೧೯೪೫ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯಲ್ಲಿ ಬಿ.ಎಂ.ಶ್ರೀ ಚಿನ್ನದ ಪದಕ ಪಡೆದ ಬುದ್ಧಿವಂತ. ಇಂಥ ಪ್ರತಿಭಾವಂತನನ್ನು ಅದ್ಯಾವ ಮಾಯೆ ಚಿತ್ರರಂಗಕ್ಕೆ ಎಳೆದು ತಂದಿತೋ ಗೊತ್ತಿಲ್ಲ.
೧೯೪೯ರಲ್ಲಿ ತೆರೆಕಂಡ `ಭಾರತಿ’ ಚಿತ್ರಕ್ಕೆ ಕಥೆ-ಸಂಭಾಷಣೆ, ಹಾಡುಗಳನ್ನು ಬರೆಯುವ ಮೂಲಕ ಚಿತ್ರರಂಗ ಪ್ರವೇಶಿಸಿದ ನರೇಂದ್ರಬಾಬು ಅವರ ಪ್ರತಿಭೆಯನ್ನು ಉಳಿದೆಲ್ಲರಿಗಿಂತ ಮೊದಲೇ ಗುರುತಿಸಿದ ಪುಟ್ಟಣ್ಣ, ಭಾರತೀಸುತ ಅವರ ಕಾದಂಬರಿ `ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಸಂಭಾಷಣೆ ಬರೆಯುವಂತೆ ಆಹ್ವಾನಿಸಿದರು. ಆ ಚಿತ್ರಕ್ಕೆ `ಗುಂಡಿನ ಮತ್ತೇ ಗಮ್ಮತ್ತು’ ಹಾಡನ್ನು ನರೇಂದ್ರ ಬಾಬು ಅವರು ಬರೆದದ್ದು ತೀರಾ ಆಕಸ್ಮಿಕ ಸನ್ನಿವೇಶದಲ್ಲಿ….
ಅವು ಪುಟ್ಟಣ್ಣ ಕಣಗಾಲ್ ಅವರ ವೈಭವದ ದಿನಗಳು. ಆಗ ಪುಟ್ಟಣ್ಣ, ಸ್ಟಾರ್ ನಿರ್ದೇಶಕ ಅನ್ನಿಸಿಕೊಂಡಿದ್ದರು. ಪ್ರತಿಯೊಂದು ಚಿತ್ರದಲ್ಲೂ ಏನಾದರೂ ವಿಶೇಷ ತೋರಿಸುವ ಮೂಲಕ ಒಂದು ಕ್ರೇಜ್ ಸೃಷ್ಟಿಸಿದ್ದರು. ಈ ಕಾರಣದಿಂದಲೇ ಪುಟ್ಟಣ್ಣ ಕಣಗಾಲರ ಸಿನಿಮಾದ ಪತ್ರಿಕಾಗೋಷ್ಠಿಗಳು ಯಾವಾಗಲೂ ಹೌಸ್‌ಫುಲ್ ಆಗಿರುತ್ತಿದ್ದವು.
ಮೊದಲಿನಿಂದಲೂ ಪುಟ್ಟಣ್ಣ ಅವರಿಗೆ ಗೆಳೆಯ ವಿಜಯ ನಾರಸಿಂಹ ಅವರ ಮೇಲೆ ತುಂಬಾ ಪ್ರೀತಿ-ವಿಶ್ವಾಸ. ಕಣಗಾಲ್ ಅವರ ಎಲ್ಲ ಸಿನಿಮಾಗಳಲ್ಲೂ ವಿಜಯನಾರಸಿಂಹರ ಹಾಡು ಇದ್ದೇ ಇರುತ್ತಿದ್ದವು. ಜತೆಗೆ ಪ್ರಭಾಕರ ಶಾಸ್ತ್ರಿ, ಆರ್.ಎನ್. ಜಯಗೋಪಾಲ್‌ರಿಂದಲೂ ಹಾಡು ಬರೆಸುತ್ತಿದ್ದರು ಪುಟ್ಟಣ್ಣ. `ಎಡಕಲ್ಲು ಗುಡ್ಡದ ಮೇಲೆ’ ಚಿತ್ರಕ್ಕೆ ಕುಡುಕನೊಬ್ಬ ಹಾಡುವ ಗೀತೆಯನ್ನು ಬರೆಸಬೇಕಿತ್ತು. ಅದನ್ನು ವಿಜಯನಾರಸಿಂಹ, ಆರ್.ಎನ್.ಜೆ ಬದಲು ಬೇರೆಯವರಿಂದ ಬರೆಸಬೇಕು ಅನ್ನಿಸಿತಲ್ಲ? ಆಗ ಪುಟ್ಟಣ್ಣನವರ ದೃಷ್ಟಿಗೆ ಬಿದ್ದವರೇ ನರೇಂದ್ರಬಾಬು. ಅವರನ್ನು ಹತ್ತಿರ ಕರೆದ ಪುಟ್ಟಣ್ಣ `ಹೇಗಿದ್ರೂ ಸಂಭಾಷಣೆ ಬರೆದಿದ್ದೀರಲ್ಲ, ನಿಮಗೆ ಕಥೆ-ಸನ್ನಿವೇಶ ಎರಡೂ ಗೊತ್ತಿದೆ. ಈ ಸಿನಿಮಾದ ಸೆಕೆಂಡ್ ಹೀರೊ ಚಂದ್ರಶೇಖರ್‌ನ ಅಂಕಲ್ ಪಾತ್ರಧಾರಿ ಶಿವರಾಂ, ಗುಂಡು ಹಾಕಿಕೊಂಡು ಹಾಡುವಂತೆ ಒಂದು ಸಾಂಗ್ ಬರೀರಿ’ ಅಂದರಂತೆ. ನಂತರ, ತಮ್ಮ ಸಿನಿಮಾ ಕುರಿತು ವಿವರಣೆ ನೀಡಲು ಅಶೋಕ ಹೋಟೆಲಿನಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಬಾಬು ಅವರನ್ನು ಕರೆತಂದರಂತೆ.
ಪತ್ರಿಕಾಗೋಷ್ಠಿಯಲ್ಲಿ ಔಪಚಾರಿಕವಾಗಿ ಎಲ್ಲ ಮಾಹಿತಿ ನೀಡಿದ್ದಾಯಿತು. ಪ್ರಶ್ನೋತ್ತರವೂ ಮುಗಿಯಿತು. `ಈ ಚಿತ್ರದಲ್ಲಿ ನರೇಂದ್ರಬಾಬು ಸಂಭಾಷಣೆಯ ಜತೆಗೆ ಒಂದು ಹಾಡನ್ನೂ ಬರೆಯುತ್ತಾರೆ. ಅದೇ ವಿಶೇಷ ಸುದ್ದಿ’ ಎಂಬ ಪುಟ್ಟಣ್ಣ ಕಣಗಾಲರ ಮಾತಿನೊಂದಿಗೆ ಪತ್ರಿಕಾಗೋಷ್ಠಿಯೂ ಮುಗಿಯಿತು.
ನಂತರ ಶುರುವಾದದ್ದೇ ಗುಂಡು ಪಾರ್ಟಿ. ಒಂದೊಂದು ಪೆಗ್ ಖಾಲಿಯಾಗುತ್ತ ಹೋದಂತೆಲ್ಲ ಪಾರ್ಟಿ ರಂಗೇರತೊಡಗಿತು. ಅದುವರೆಗೂ `ಮೂಗು ಬಸವಣ್ಣಗಳಂತಿದ್ದ’ ಪತ್ರಕರ್ತರು ಕಿಕ್ ಏರಿದ ನಂತರ ಯದ್ವಾ ತದ್ವಾ ಮಾತಾಡತೊಡಗಿದರು. ಆಫ್ ದಿ ರೆಕಾರ್ಡ್ ಎಂಬಂಥ ವಿಷಯಗಳೆಲ್ಲ ಅಲ್ಲಿ ಬಂದು ಹೋದವು. ಮಾತಿನ ವರಸೆ ತಾರಕಕ್ಕೆ ತಲುಪಿತು. ಆಗ ಮಧ್ಯೆ ಪ್ರವೇಶಿಸಿದ ನರೇಂದ್ರಬಾಬು, ಗುಂಡು ಹಾಕುತ್ತಾ ಕುಳಿತಿದ್ದ ಎಲ್ಲರನ್ನೂ ಉದ್ದೇಶಿಸಿ ಹೇಳಿದರಂತೆ: `ಸಾರ್, ಹುಶಾರಾಗಿರಿ. ಈ ಗುಂಪಿನ ಮತ್ತು ಬಲು ಗಮ್ಮತ್ತು. ಆದರೆ ಅಳತೆ ಮೀರಿದರೆ ತುಂಬಾ ಆಪತ್ತು…’
ಜತೆಗೇ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ ಪುಟ್ಟಣ್ಣ ಕಣಗಾಲ್ ಅವರಿಗೆ ಈ ಮಾತುಗಳು ಬಹಳ ಹಿಡಿಸಿದವು. ಅವರು ತಕ್ಷಣವೇ `ಬಾಬೂ, ಈ ಸಾಲುಗಳನ್ನು ಇಟ್ಕೊಂಡೇ ಒಂದು ಒಳ್ಳೆಯ ಹಾಡು ಬರೀರಿ. ಅದನ್ನೇ ಬಳಸಿಕೊಳ್ತೇನೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದವರು, ಪ್ರೀತಿಯ ಹೊಳೆಗೆ ಬಿದ್ದ ಹುಡುಗರು, ವಿದ್ಯಾರ್ಥಿಗಳು, ಶ್ರೀಮಂತರು, ಬಡವರು… ಹೀಗೆ ಎಲ್ಲರೂ ತಮ್ಮದೇ ಆದ ಕಾರಣಗಳಣ್ನು ಮುಂದಿಟ್ಟುಕೊಂಡು ಸಮೂಹ ಸನ್ನಿಗೆ ಒಳಗಾದವರಂತೆ ಮದ್ಯದ ದಾಸರಾಗುತ್ತಿದ್ದಾರೆ. ಈ ಹಾಡು ಅವರಿಗೆಲ್ಲ ಒಂದು ಎಚ್ಚರಿಕೆಯ ಪಾಠದಂತಿರಲಿ. ಹಾಗೆಯೇ ಗುಂಡು ಹಾಕಿದವರು ಹೇಗೆಲ್ಲ ವರ್ತಿಸ್ತಾರೆ ಎಂಬ ವಿವರಣೆ ಕೂಡ ಹಾಡಿನಲ್ಲಿ ಬರಲಿ’ ಎಂದರಂತೆ.
ಗುಂಡು ಹಾಕಿದವರ ಆಟಾಟೋಪ ಹೇಗಿರುತ್ತದೆ ಎಂದು ಪ್ರತ್ಯಕ್ಷ ಕಂಡಿದ್ದರಲ್ಲ, ಅದನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಂಡು ಒಂದೇ ಒಂದು ಹನಿಯಷ್ಟೂ ಗುಂಡು ಹಾಕದೆ, `ಗುಂಡಿನ ಮತ್ತೇ ಗಮ್ಮತ್ತು’ ಎಂಬ ಹಾಡು ಬರೆದೇಬಿಟ್ಟರು ನರೇಂದ್ರಬಾಬು. ಮುಂದೆ ಅದನ್ನು ನಟ ಶಿವರಾಂ ಅವರ ಅಭಿನಯದಲ್ಲಿ ಬೊಂಬಾಟ್ ಎಂಬಂತೆ ಚಿತ್ರೀಕರಿಸಿಕೊಳ್ಳಲಾಯಿತು. ಆ ಹಾಡು ವಿಪರೀತ ಎಂಬಷ್ಟು ಜನಪ್ರಿಯವಾಯಿತು. ಗುಂಡು ಹಾಕುವವರು ಈ ಹಾಡು ಗುನುಗುತ್ತಲೇ ಒಂದೊಂದೇ ಪೆಗ್ ಖಾಲಿ ಮಾಡಿದರೆ, ಗುಂಡು ಹಾಕದವರು-ತಮ್ಮ ಗೆಳೆಯರನ್ನು ಎಚ್ಚರಿಸಲು, ಕಿಚಾಯಿಸಲು ಈ ಹಾಡು ಹೇಳುತ್ತಿದ್ದರು. ಗುಂಡು ಹಾಕುವವರನ್ನು ಎಚ್ಚರಿಸಲೆಂದೇ ಪುಟ್ಟಣ್ಣ ಈ ಹಾಡು ಬರೆಸಿದರು ನಿಜ. ಆದರೆ, ಸಿನಿಮಾ ಬಿಡುಗಡೆಯಾದ ನಂತರ ಅವರ ಲೆಕ್ಕಾಚಾರ ಒಂದರ್ಥದಲ್ಲಿ ಉಲ್ಟಾ ಆಯಿತು. ಏಕೆಂದರೆ, ಬಾರ್-ಕ್ಲಬ್‌ಗಳ ಮಾಲೀಕರು ಗ್ರಾಹಕರಿಗೆ ಈ ಹಾಡು ಕೇಳಿಸುತ್ತಲೇ ತಮ್ಮ ವ್ಯಾಪಾರ ಹೆಚ್ಚಿಸಿಕೊಂಡರು!
ಈಗ ಹೇಳಿ, ಎಲ್ಲರನ್ನೂ ಒಂದು ರಾಗವಾಗಿ, ಒಂದು ಗುಂಗಾಗಿ ಆವರಿಸಿಕೊಳ್ಳುವ ಹಾಡುಗಳ ಮಧುರ ಲೋಕ ತೆರೆದಿಡುವ ಅಚ್ಚರಿಗಳಿಗೆ ಕೊನೆಮೊದಲುಂಟೆ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: