ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ

puttanna

ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ
ಏನೆಂದು ಕೇಳಲು ಹೇಳಿತು ಜೇನಂಥ ಸಿಹಿನುಡಿಯಾ ಐಐಪಐಐ

ಕಾವೇರಿ ಸೀಮೆಯ ಕನ್ಯೆಯು ನಾನು
ಬೇಲೂರ ಬಾಲೆಯ ಪ್ರತಿಮೆಯು ನಾನು
ತುಂಗೆಯ ಭದ್ರೆಯ ತವರಿನ ಹೂವು ನಾನು ಐಐ೧ಐಐ

ಸೂರ್ಯ ಕಾಂತಿಯ ಸುಂದರಿ ನಾನು
ತಿಂಗಳ ಬೆಳಕಿನ ಸಂಜೆಯು ನಾನು
ಪ್ರೇಮದ ಕಾವ್ಯಕೆ ಪೂಜೆಯ ಹೂವು ನಾನು ಐಐ೨ಐಐ

ಅರಿಸಿನ ಕುಂಕುಮ ಶೋಭಿತೆ ನಾನು
ವಧುವಿನ ಶೃಂಗಾರ ಭೂಷಿತೆ ನಾನು
ಮಂಗಳ ಸೂತ್ರವ ಬೇಡುವ ಹೂವು ನಾನು ಐಐ೩ಐಐ

ಹೂವೊಂದು ಬಳಿಬಂದು….
ಚಿತ್ರ: ಶುಭಮಂಗಳ, ಗೀತೆ ರಚನೆ: ಚಿ. ಉದಯ ಶಂಕರ್, ಗಾಯನ : ಎನ್.ಆರ್. ಸುದರ್ಶನ್, ಸಂಗೀತ : ಎಂ. ರಂಗರಾವ್
ಇವನು ಅವಳನ್ನು ಪ್ರೀತಿಸುತ್ತಿದ್ದ. ಆರಾಧಿಸುತ್ತಿದ್ದ. `ಐಲವ್‌ಯೂ’ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದ. ಇಷ್ಟಾದರೂ ಏನೊಂದೂ ಉತ್ತರ ಹೇಳದೆ ಮೌನವಾಗಿದ್ದ; ಕೈತಪ್ಪಿ ಹೋಗುವ ಕಳವಳವನ್ನೂ ಉಂಟು ಮಾಡಿದ್ದ ಆ ಹುಡುಗಿ ಕಡೆಗೊಮ್ಮೆ ಇವನ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ. ಅದಕ್ಕೆ ಸಾಕ್ಷಿ ಎಂಬಂತೆ ನೂರಾರು ಮಂದಿಯ ಸಮ್ಮುಖದಲ್ಲಿ ಒಂದು ಗುಲಾಬಿ ಹೂವಿನ ಕಾಣಿಕೆ ನೀಡಿದ್ದಾಳೆ! ಆ ಸಂಭ್ರಮವನ್ನು ಹುಡುಗ ಎಲ್ಲರೊಂದಿಗೆ ಹಂಚಿಕೊಳ್ಳಬೇಕು…
ಹೌದಲ್ಲವಾ? ಇಂಥದೊಂದು ಸಂದರ್ಭವನ್ನು ಕಲ್ಪಿಸಿಕೊಂಡ ತಕ್ಷಣ ನೆನಪಾಗುವುದು `ಶುಭಮಂಗಳ’ ಚಿತ್ರದ `ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ’ ಹಾಡು. ಪ್ರೇಮ ಪಲ್ಲವಿಸಿದ ಕ್ಷಣದಲ್ಲಿ ಹುಡುಗನ ಮನದಲ್ಲಿ ರಿಂಗಣಿಸುವ ಭಾವನೆಗಳನ್ನು ಆಪುವಾಗಿ ತೆರೆದಿಡುವ ಈ ಗೀತೆ ಸೃಷ್ಟಿಯಾದದ್ದು ತೀರಾ ಆಕಸ್ಮಿಕ ಸಂದರ್ಭದಲ್ಲಿ. ಈ ಹಾಡಿಗೆ ಗಾಯಕ ಸಿಕ್ಕಿದ್ದೂ ಕೂಡ ಆಕಸ್ಮಿಕವಾಗಿ ! ಅದಕ್ಕಿಂತ ಹೆಚ್ಚಿನ ಸ್ವಾರಸ್ಯವೆಂದರೆ- `ಇವತ್ತಿಗೂ ಸೂಪರ್‌ಹಿಟ್ ಸಾಂಗ್ ಎಂದೇ ಹೆಸರಾಗಿರುವ ಈ ಗೀತೆ, ಶುಭಮಂಗಳ ಚಿತ್ರಕ್ಕೆ `ಬಲವಂತವಾಗಿ ತುರುಕಲ್ಪಟ್ಟದ್ದು !’ ಈ ಸಂಬಂಧದ ವಿವರಣೆ ಸ್ವಲ್ಪ ದೀರ್ಘವಾಗಿಯೇ ಇದೆ. ಅದು ಹೀಗೆ :
ಚಿತ್ರ ನಿರ್ದೇಶಕರಾಗುವ ಮೊದಲು ಬಿ.ಆರ್. ಪಂತಲು ಅವರಿಗೆ ಅಸಿಸ್ಟೆಂಟ್ ಆಗಿದ್ದರು ಪುಟ್ಟಣ ಕಣಗಾಲ್. ಅವು ಗೀತರಚನೆಕಾರರಾದ ಚಿ. ಸದಾಶಿವಯ್ಯ, ಕು.ರಾ.ಸೀ., ಸೋರಟ್ ಅಶ್ವಥ್, ಹುಣಸೂರು ಕೃಷ್ಣಮೂರ್ತಿ, ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ವೈಭವದ ದಿನಗಳು. ಆಗಿನ್ನೂ ಚಿ. ಉದಯಶಂಕರ್ ಗೀತೆರಚನೆಕಾರರಾಗಿರಲಿಲ್ಲ. ಆ ದಿನಗಳಿಂದಲೂ ಪುಟ್ಟಣ್ಣ-ಚಿ.ಉ. ಗೆಳೆಯರು ಆಗಿಂದಾಗ್ಗೆ ಇಬ್ಬರೂ ಚೆನ್ನೈನ ಬೀಚ್‌ನಲ್ಲಿ ಜತೆಯಲ್ಲೇ ವಾಕಿಂಗ್ ಹೋಗುತ್ತಿದ್ದವರು.
ಮುಂದೆ, ಕಾಲ ಬದಲಾಯಿತು. ಪುಟ್ಟಣ್ಣ ಕಣಗಾಲ್ ಸ್ಟಾರ್ ನಿರ್ದೇಶಕ ಅನ್ನಿಸಿಕೊಂಡರೆ, ಅದೇ ವೇಳೆಗೆ ಉದಯಶಂಕರ್ ಸ್ಟಾರ್ ಗೀತೆ ರಚನೆಕಾರ ಎನ್ನಿಸಿಕೊಂಡರು. (ಆದರೂ ಪುಟ್ಟಣ್ಣನವರ ಚಿತ್ರಗಳಿಗೆ ಉದಯ ಶಂಕರ್ ಹೆಚ್ಚಾಗಿ ಹಾಡುಗಳನ್ನು ಬರೆಯಲಿಲ್ಲ !) ಹೀಗಿರುವಾಗಲೇ `ಶುಭಮಂಗಳ’ ಚಿತ್ರದ ಪೂರ್ವತಯಾರಿ ನಡೆದಿತ್ತು. ಉದಯಶಂಕರ್ ಹಾಗೂ ವಿಜಯನಾರಸಿಂಹ ಅವರಿಂದ ತಲಾ ಒಂದು; ಕವಿ ವ್ಯಾಸರಾವ್ ಅವರಿಂದ ಎರಡು ಹಾಡುಗಳನ್ನು ಬರೆಸಿ, ಅವುಗಳಿಗೆ ಎಂ. ರಂಗರಾವ್ ಅವರಿಂದ ಸಂಗೀತ ಸಂಯೋಜನೆ ಮಾಡಿಸಿ ಆಗಿತ್ತು. ಹಾಡುಗಳ ರೆಕಾರ್ಡಿಂಗ್‌ಗೆಂದು ಚೆನ್ನೈನ ವಾಹಿನಿ ಸ್ಟುಡಿಯೊಗೆ ಬಂದರು ಪುಟ್ಟಣ್ಣ. ಅದೇ ಸಂದರ್ಭಕ್ಕೆ ಯಾವುದೇ ಚಿತ್ರಕ್ಕೆ ಹಾಡು ಬರೆಯಲೆಂದೋ ಅಥವಾ ಹಾಡುಗಳ ಧ್ವನಿಮುದ್ರಣ ಕ್ಕೆಂದೋ ಉದಯ ಶಂಕರ್ ಕೂಡ ಅಲ್ಲಿಗೆ ಬಂದರು. ಸ್ಟುಡಿಯೋದ ಮೆಟ್ಟಿಲಿನ ಬಳಿ ಮುಖಾಮುಖಿಯಾದಾಗ, ಹಳೆಯ ಗೆಳೆತನದ ಸಲಿಗೆ ಇತ್ತಲ್ಲ? ಅದನ್ನೇ ಜತೆಗಿಟ್ಟುಕೊಂಡು ಉದಯಶಂಕರ್ ತಮಾಷೆಯಾಗಿ ಕೇಳಿದರಂತೆ: ` ಪುಟ್ಟಣ್ಣಾ, ನಂಗೆ ಇನ್ನೊಂದು ಹಾಡು ಬರೆಯಲು ಅವಕಾಶ ಕೊಡಪ್ಪಾ….’
ಅದಕ್ಕೆ ಉತ್ತರವಾಗಿ-‘ಇಲ್ಲ ಸಾರ್. ನಿಮಗೇ ಗೊತ್ತಿರುವಂತೆ `ಶುಭಮಂಗಳ’ಕ್ಕೆ ಈಗಾಗಲೇ ಹಾಡು ಬರೆಸಿ ಆಗಿದೆ. ರೆಕಾಡಿಂಗ್ ನಡೆಯುತ್ತಿದೆ. ಮುಂದಿನ ಸಿನಿಮಾದಲ್ಲಿ ನೋಡೋಣ’ ಎಂದವರೇ ರೆಕಾರ್ಡಿಂಗ್ ರೂಂಗೆ ಹೋಗಿಬಿಟ್ಟರು ಪುಟ್ಟಣ್ಣ. ಅವರು ಆರಾಮ ಕುರ್ಚಿಯಲ್ಲಿ ಕುಳಿತ ಐದೇ ನಿಮಿಷಕ್ಕೆ ಸ್ಟುಡಿಯೋದ ಹುಡುಗನೊಬ್ಬ ಕಾಫಿ ಹಾಗೂ ಟಿಶ್ಯೂಪೇಪರ್ ತಂದು ಕೊಟ್ಟ. ನಂತರ ಆತ ಹೊರಡಲು ಅವಸರಿಸಿದಾಗ `ಈಗ ಎಲ್ಲಿಗೆ ಹೋಗ್ತಿಯಪ್ಪಾ ` ಎಂದು ಸುಮ್ಮನೆ ಕೇಳಿದರು ಪುಟ್ಟಣ್ಣ. ಅದಕ್ಕೆ ಆ ಹುಡುಗ-` ಪಕ್ಕದ ಫ್ಲೋರ್‌ನಲ್ಲಿ ಚಿ. ಉದಯಶಂಕರ್ ಇದ್ದಾರೆ ಸಾರ್. ಅವರಿಗೂ ಕಾಫಿ ಕೊಡಬೇಕು. ಅಲ್ಲಿಗೆ ಹೋಗ್ತಾ ಇದೀನಿ’ ಅಂದನಂತೆ.
ಈ ಮಾತು ಕೇಳಿದಾಕ್ಷಣ `ಒಂದು ನಿಮಿಷ ನಂತ್ಕೊ. ಈ ಚೀಟೀನ ಉದಯ ಶಂಕರ್‌ಗೆ ಕೊಟ್ಟು ಬಿಡು’ ಎಂದ ಪುಟ್ಟಣ್ಣ- ಆ ಟಿಶ್ಯೂಪೇಪರಿನ ಮೇಲೆ `ಈಗಲೇ ಒಂದು ಹಾಡು ಬರೆದುಕೊಟ್ಟರೆ ಅದನ್ನು ‘ಶುಭಮಂಗಳ’ದಲ್ಲಿ ಬಳಸಿಕೊಳ್ಳುತ್ತೇನೆ’ ಎಂದು ಬರೆದರು. ಅಷ್ಟಕ್ಕೇ ಸುಮ್ಮನಾಗದೆ ಒಂದು ಗುಲಾಬಿಯನ್ನು ಆ ಟಿಶ್ಯೂ ಪೇಪರ್‌ಗೆ ಫಿಕ್ಸ್ ಮಾಡಿ ` ಇದಿಷ್ಟನ್ನೂ ಉದಯಶಂಕರ್‌ಗೆ ಕೊಡು’ ಅಂದರು. ಕಾಫಿಯ ಹುಡುಗ ಹಾಗೆಯೇ ಮಾಡಿದ.
ಪತ್ರ ಬಿಡಿಸಿ ನೋಡಿದ ಉದಯಶಂಕರ್ ಸಹಜವಾಗಿಯೇ ಖುಷಿಯಾದರು. ಪತ್ರದ ಜತೆಗಿದ್ದ ಗುಲಾಬಿಯನ್ನೇ ಒಮ್ಮೆ ಸಂಭ್ರಮದಿಂದ ನೋಡಿದರು. ನಂತರ ತಮ್ಮ ಆಗಿನ ಮನಃಸ್ಥಿತಿ ಮತ್ತು ಆ ಕ್ಷಣದ ಸನ್ನಿವೇಶವನ್ನೇ ಜತೆಗಿಟ್ಟುಕೊಂಡು ಕ್ಷಣ ಮೈಮರೆತು ` ಹೂವೊಂದು ಬಳಿ ಬಂತು ತಾಕಿತು ಎನ್ನೆದೆಯಾ ! ಏನೆಂದು ಕೇಳಲು ಹೇಳಿತು ಜೇನಂಥ ಸಿಹಿನುಡಿಯಾ….’ ಎಂದು ಪಲ್ಲವಿ ಬರೆದೇ ಬಿಟ್ಟರು ! ನಂತರದ ಹತ್ತು ನಿಮಿಷದಲ್ಲಿ ಪೂರ್ತಿ ಹಾಡನ್ನೇ ಸಿದ್ಧ ಪಡಿಸಿ ಪುಟ್ಟಣ್ಣ ಕಣಗಾಲರಿಗೆ ತಲುಪಿಸಿಯೂಬಿಟ್ಟರು !
ಹಾಡು ಕಂಡು ಅಕ್ಷರಶಃ ಕುಣಿದಾಡಿಬಿಟ್ಟರಂತೆ ಪುಟ್ಟಣ್ಣ ಕಣಗಾಲ್. ನಂತರ ಸಂಗೀತ ನಿರ್ದೇಶಕ
ಎಂ. ರಂಗರಾವ್ ಅವರಿಗೆ ಹಾಡು ಕೊಟ್ಟು `ಇದಕ್ಕೆ ಒಂದು ಟ್ಯೂನ್ ಹಾಕಿ ಸಾರ್’ ಎಂದರಂತೆ. ಮುಂದಿನ ಹದಿನೈದು ನಿಮಿಷದಲ್ಲಿ ಟ್ಯೂನ್ ಕೂಡಾ ರೆಡಿಯಾಯಿತು. ಆದರೆ ಹಾಡಲು ಎಸ್ಪಿ ಇಲ್ಲ ! ಅವರು ಬೆಳಗ್ಗೆಯೇ ಹಾಡುಗಳ ರೆಕಾರ್ಡಿಂಗ್ ಮುಗಿಸಿ ಹೋಗಿಬಿಟ್ಟಿದ್ದರು. ಆ ದಿನಗಳಲ್ಲಿ ವಿಪರೀತ ಬ್ಯುಸಿಯಾಗಿದ್ದ ಎಸ್ಪಿ ಮುಂದಿನ ಹದಿನೆಂಟಿಪ್ಪತ್ತು ದಿನ ಕೈಗೆ ಸಿಗುವುದಿಲ್ಲ ಎಂದು ಪುಟ್ಟಣ್ಣ ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು. ಎಸ್ಪಿ ಸಿಗುವುದಿಲ್ಲ ಎಂಬ ಒಂದೇ ಕಾರಣಕ್ಕೆ ಈ ಮಧುರ ಗೀತೆಯನ್ನು ಕೈ ಬಿಡಲು ಪುಟ್ಟಣ್ಣನ ಮನಸ್ಸು ಒಪ್ಪಲಿಲ್ಲ. ಯಾರಿಂದ ಹಾಡಿಸುವುದು ಎಂದು ಅವರು ಮತ್ತು ರಂಗರಾವ್ ತಲೆಕೆಡಿಸಿಕೊಂಡಿದ್ದಾಗಲೇ- ಪಕ್ಕದ ಸೆಟ್‌ನಲ್ಲಿ ` ಸೀತೆಯಲ್ಲ ಸಾವಿತ್ರಿ’ ಚಿತ್ರದ ಶೂಟಿಂಗ್‌ನಲ್ಲಿ ಆರ್.ಎನ್. ಸುದರ್ಶನ್ ಇದ್ದಾರೆ ಎಂದು ತಿಳಿದು ಬಂತು.
ಆರ್. ಎನ್. ಜಯಗೋಪಾಲ್ ಅವರ ಸೋದರನಾದ ಸುದರ್ಶನ್ ಕೂಡ ಅಪರೂಪದ ಗಾಯಕ. ತಕ್ಷಣವೇ ಅವರನ್ನು ಕರೆಸಿಕೊಂಡ ಪುಟ್ಟಣ್ಣ- `ತಮ್ಮಯ್ಯಾ, ಈ ಹಾಡಿಗೆ ನಿನ್ನ ಧ್ವನಿ ಹೊಂದಿಕೆಯಾಗುತ್ತೆ. ಹಾಡಿಬಿಡು ಮೈ ಲಾರ್ಡ್’ ಎಂದರಂತೆ. ಪುಟ್ಟಣ್ಣನ ಬಗ್ಗೆ ತುಂಬ ಅಭಿಮಾನ ಹೊಂದಿದ್ದ ಸುದರ್ಶನ್ ಎರಡನೇ ಮಾತಾಡದೆ ಅದ್ಭುತ, ಪರಮಾದ್ಭುತ ಎಂಬಂತೆ, ಕಥಾನಾಯಕ ಶ್ರೀನಾಥರ ಕಂಠವನ್ನೇ ಆವಾಹಿಸಿಕೊಂಡು `ಹೂವೊಂದು ಬಳಿ ಬಂದು…’ ಗೀತೆಯನ್ನು ಹಾಡಿಯೇಬಿಟ್ಟರು.
ಆ ವೇಳೆಗೆ- ಚಿತ್ರದಲ್ಲಿ ಎಲ್ಲೆಲ್ಲಿ ಹಾಡು ಬರಬೇಕು ಎಂಬುದು ನಿರ್ಧಾರವಾಗಿ ಹೋಗಿತ್ತು. ಈ ಹೊಸ ಹಾಡಿಗೆ `ಶುಭಮಂಗಳ’ದಲ್ಲಿ ಜಾಗವೇ ಇರಲಿಲ್ಲ. ಇದಕ್ಕೆ ಹೊಂದಿಕೆಯಾಗುವಂಥ ಸಂದರ್ಭ -ಸನ್ನಿವೇಶಗಳೂ ಇರಲಿಲ್ಲ. ಆಗ ತಲೆ ಓಡಿಸಿದ ಪುಟ್ಟಣ್ಣ -ಕಥಾನಾಯಕ ಶ್ರೀನಾಥ್‌ನ ಹುಟ್ಟು ಹಬ್ಬದ ಸಂದರ್ಭದಲ್ಲಿ ನಾಯಕಿ ಅವನಿಗೆ ಗುಲಾಬಿ ಹೂವೊಂದನ್ನು ಕಾಣಿಕೆಯಾಗಿ ಕೊಡುವ ಸಂದರ್ಭವನ್ನು `ಸೃಷ್ಟಿಸಿ’ ಅಲ್ಲಿ ಈ ಹಾಡನ್ನು ಹಾಕುವುದೆಂದು ನಿರ್ಧರಿಸಿದರು.
ಪರಿಣಾಮ, ಆಕಸ್ಮಿಕವಾಗಿ ಹುಟ್ಟಿ, ಆಕಸ್ಮಿಕವಾಗಿ ಸೇರ್ಪಡೆಗೊಂಡ ಹಾಡು ತನ್ಮೂಲಕ `ಶುಭಮಂಗಳ’ದ ಜನಪ್ರಿಯತೆ ಹೆಚ್ಚಿಸಿತು. ಆ ಚಿತ್ರಕ್ಕೆ ಒಂದು ವಿಶಿಷ್ಟ ಕಾಂತಿ ನೀಡಿತು.
ಹಾಡುಗಳ ಮಧುರ ಲೋಕದಲ್ಲಿ ಅಡಗಿರುವ ಇಂಥ ಸ್ಮರಣೀಯ ಪ್ರಸಂಗಗಳು ನೀಡುವ ಕೌತುಕಕ್ಕೆ ಎಣೆಯುಂಟೆ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: