ಕೈಗಳಿಲ್ಲದ ಹುಡುಗಿ ಕಾರು ಓಡಿಸುತಾಳೆ. ವಿಮಾನ ಹಾರಿಸುತ್ತಾಳೆ !

2uesinl

ಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ.
ಈಕೆಯ ಹೆಸರು ಜೆಸ್ಸಿಕಾ ಕಾಕ್ಸ್. ಅಮೆರಿಕದ ಅರಿಜೋನಾದಲ್ಲಿರುವ ಜೆಸ್ಸಿಕಾಗೆ ಈಗ ೨೫ ವರ್ಷ. ನಮ್ಮ ಬಾಲಿವುಡ್ ಬೆಡಗಿಯರಿಗೇ ಸೈಡು ಹೊಡೆಯುವಂಥ ರೂಪಸಿಯಾಗಿರುವ ಜೆಸ್ಸಿಕಾಗೆ ಎರಡೂ ಕೈಗಳಿಲ್ಲ! ಸ್ವಾರಸ್ಯವಿರುವುದೇ ಇಲ್ಲಿ; ಏನೆಂದರೆ, ಎರಡೂ ಕೈಗಳಿಲ್ಲದ ಈ ಬೆಡಗಿ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾಳೆ. ರಾಷ್ಟ್ರೀಯ ಈಜು ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದ್ದಾಳೆ. ಸಂಗೀತ ಲೋಕದ ದಿಗ್ಗಜರೇ ವಾಹ್ ಎಂದು ಉದ್ಗರಿಸುವಂತೆ ಹಾರ್‍ಮೋನಿಯಂ ಬಾರಿಸುತ್ತಾಳೆ. ಕಾಲ್ಬೆರಳುಗಳ ನೆರವಿನಿಂದಲೇ ನಿಮಿಷಕ್ಕೆ ೨೫ ಪದಗಳನ್ನು ಟೈಪು ಮಾಡುತ್ತಾಳೆ. ಕಾಲುಗಳಿಂದಲೇ ನೋಟ್ಸ್ ಬರೆದುಕೊಂಡು, ಪರೀಕ್ಷೆಯನ್ನೂ ಬರೆದು ಸೈಕಾಲಜಿಯಲ್ಲಿ ಡಿಗ್ರಿ ಪಡೆದಿದ್ದಾಳೆ. ಗಂಟೆಗೆ ಎಂಬತ್ತು ಕಿಲೋಮೀಟರ್ ಸ್ಪೀಡಿನಲ್ಲಿ ಕಾರು ಓಡಿಸುತ್ತಾಳೆ. ಮತ್ತು ಈಗ ವಿಮಾನವನ್ನೂ ಹಾರಿಸಿದ್ದಾಳೆ! ಆ ಮೂಲಕ ಕಾಲುಗಳಿಂದಲೇ ವಿಮಾನ ಹಾರಿಸಿದ ಜಗತ್ತಿನ ಮೊಟ್ಟಮೊದಲ ಪೈಲಟ್ ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಇಡೀ ಜಗತ್ತಿಗೇ ಸಾರಿ ಹೇಳಿದ್ದಾಳೆ.
ಹಾಗೆ ನೋಡಿದರೆ, ಕೈಗಳಿಲ್ಲದೆ ಬದುಕುವುದು ಕಷ್ಟ ಅಂದರೆ ಕಷ್ಟ. ನಮ್ಮ ದಿನನಿತ್ಯದ ಪ್ರತಿಯೊಂದು ಕೆಲಸಕ್ಕೂ ಕೈಗಳು ಬೇಕೇ ಬೇಕು. ಶಾಲೆ, ಕಾಲೇಜು, ಮನೆ ಅಥವಾ ಒಂದು ಸಮಾರಂಭದಲ್ಲಿ ಹತ್ತು ಮಂದಿಯ ಮಧ್ಯೆ ಕೈಗಳಿಲ್ಲದ ಒಬ್ಬ ವ್ಯಕ್ತಿ ಇದ್ದರೆ, ಆತನನ್ನು ಬೆರಗಿನಿಂದ, ಅನುಕಂಪದಿಂದ, ವ್ಯಂಗ್ಯದಿಂದ, ತಾತ್ಸಾರದಿಂದ, ನೋಡುವವರೇ ಜಾಸ್ತಿ. ಮೇಲಿಂದ ಮೇಲೆ ಇಂಥ ಅನುಭವಗಳಾದರೆ, ಅದೇ ಕೊರಗಿನಿಂದ ಅಂಗವಿಕಲರು, ಬದುಕಿಗೇ ಗುಡ್‌ಬೈ ಹೇಳುವಂಥ ಕಠೋರ ನಿರ್ಧಾರಕ್ಕೂ ಬಂದುಬಿಡುವುದುಂಟು. ಆದರೆ, ಕೈಗಳೇ ಇಲ್ಲ ಎಂದು ಗೊತ್ತಾದ ಮೇಲೂ ಮಹಾನ್ ಸಾಧಕಿಯಾಗಿ ರೂಪುಗೊಳ್ಳುವುದು ಜೆಸ್ಸಿಕಾ ಕಾಕ್ಸ್‌ಗೆ ಹೇಗೆ ಸಾಧ್ಯವಾಯಿತು? ಸಾಧನೆಯ ಒಂದೊಂದೇ ಮೆಟ್ಟಿಲೇರುವ ಹಾದಿಯಲ್ಲಿ ಆಕೆ ಎದುರಿಸಿದ ಸವಾಲುಗಳೆಂಥವು? ಕ್ಷಣ ಕ್ಷಣವೂ ಆಕೆಯ ಜತೆಗೇ ಇದ್ದು- `ಹೆದರಬೇಡ, ಮುನ್ನುಗ್ಗು’ ಎಂದು ಧೈರ್ಯ ತುಂಬಿದವರು ಯಾರು? ಕಾಲುಗಳಿಂದಲೇ ಕಾರುಓಡಿಸುವಾಗ ಆಕೆಗೆ ಭಯವಾಗಲಿಲ್ಲವಾ? ಅವೇ ಕಾಲುಗಳಿಂದ ವಿಮಾನ ಹಾರಿಸುವುದು ಕಷ್ಟವಾಗಲಿಲ್ಲವಾ?
ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿ ಸ್ವಲ್ಪ ದೀರ್ಘ ವಿವರಣೆಯೇ ಇದೆ.
***
ಜೆಸ್ಸಿಕಾಳ ತಂದೆ-ತಾಯಿಯ ಹೆಸರು ವಿಲಿಯಂ ಹಾಗೂ ಇನೆಜ್ ಕಾಕ್ಸ್. ಇಪ್ಪತ್ತಾರು ವರ್ಷಗಳ ಹಿಂದೆ, ಅಂದರೆ ೧೯೮೨ರ ಒಂದು ದಿನ, ನಾನು ಗರ್ಭಿಣಿ ಎಂದು ಇನೆಜ್ ಕಾಕ್ಸ್ ಘೋಷಿಸಿದಾಗ ಎಲ್ಲ ಗಂಡಂದಿರಂತೆಯೇ ವಿಲಿಯಂ ಕೂಡ ಕುಣಿದು, ಕುಪ್ಪಳಿಸಿದ. ನಂತರ ಹೆಂಡತಿಯನ್ನು ಮೇಲಿಂದ ಮೇಲೆ ಚೆಕಪ್‌ಗೆ ಕರೆದುಕೊಂಡು ಹೋದ. ಡಾಕ್ಟರ್‌ಗಳು ಹೇಳಿದ ಎಲ್ಲ ಔಷಧಿ ಕೊಡಿಸಿದ. ಹೆಂಡತಿಯನ್ನು ಮಗುವಿಗಿಂತ ಹೆಚ್ಚಾಗಿ ನೋಡಿಕೊಂಡ. ವಿಪರ್‍ಯಾಸವೆಂದರೆ, ಇನೆಜ್ ಕಾಕ್ಸ್‌ಳನ್ನು ರೂಟೀನ್ ಚೆಕಪ್‌ಗೆ ಒಳಪಡಿಸಿದ ಯಾವ ವೈದ್ಯರಿಗೂ ಆಕೆಯ ಹೊಟ್ಟೆಯೊಳಗೆ ಕೈಗಳೇ ಇಲ್ಲದ ಮಗು ಬೆಳೆಯುತ್ತಿದೆ ಎಂದು ಗೊತ್ತಾಗಲೇ ಇಲ್ಲ. ಅವರು ಪ್ರತಿ ಸಂದರ್ಭದಲ್ಲೂ `ಮಗು ಚೆನ್ನಾಗಿ ಬೆಳೆಯುತ್ತಿದೆ’ ಎಂದೇ ರಿಪೋರ್ಟ್ ಕೊಡುತ್ತಾ ಬಂದರು. ಆದರೆ, ೧೯೮೩ರ ಮಾರ್ಚ್ ೨ರಂದು ಹೆರಿಗೆಯಾಯಿತಲ್ಲ? ಆಗ ವಿಲಿಯಂ-ಇನೆಜ್ ಕಾಕ್ಸ್ ದಂಪತಿಗೆ ಆಘಾತ ಕಾದಿತ್ತು. ಅಪ್ಸರೆಯರನ್ನೂ ಮೀರಿಸುವಷ್ಟು ಮುದ್ದಾಗಿದ್ದ ಅವರ ಮಗುವಿಗೆ ಕೈಗಳೇ ಇರಲಿಲ್ಲ!
ಮಗುವಿಗೆ, ಅದರಲ್ಲೂ ಹೆಣ್ಣು ಮಗುವಿಗೆ ಕೈಗಳೇ ಇಲ್ಲ ಎಂದು ತಿಳಿದಾಗ, ಭಾರತದ ತಂದೆ-ತಾಯಿಗಳಾಗಿದ್ದರೆ- ಮೊದಲು ದೇವರಿಗೆ ಹರಕೆ ಕಟ್ಟುತ್ತಿದ್ದರು. ಅಥವಾ ಅಪ್ಪನೋ ಅಮ್ಮನೋ ಮಾಡಿದ ಯಾವುದೋ ಪಾದಕ್ಕೆ ದೇವರು ಹೀಗೆ ಶಿಕ್ಷೆ ಕೊಟ್ಟಿದ್ದಾನೆ ಎಂದು ನಂಬುತ್ತಿದ್ದರು. ಕೈಗಳೇ ಇಲ್ಲದ ಮೇಲೆ ಆ ಮಗುವಿನ ಬದುಕು ರೂಪಿಸುವುದು ಕಷ್ಟ ಎಂದು ಯೋಚಿಸಿ, ಮಗುವನ್ನು ಶಾಲೆಯಿಂದ ದೂರವೇ ಉಳಿಸಿ, ಬದುಕಿಡೀ ಅದು ಸುತ್ತಮುತ್ತಲಿನವರ ಅನುಕಂಪದ ಮಧ್ಯೆಯೇ ಬದುಕಿಯೂ ಸಾಯುವಂತೆ ಮಾಡಿಬಿಡುತ್ತಿದ್ದರು.
ಆದರೆ, ಜೆಸ್ಸಿಕಾಳ ತಂದೆ-ತಾಯಿ ಹಾಗೆ ಮಾಡಲಿಲ್ಲ! ಕೈಗಳಿಲ್ಲದಿದ್ದರೆ ಕತ್ತೆ ಬಾಲ. ಕಾಲುಗಳಿವೆಯಲ್ಲ? ಅವುಗಳಿಂದಲೇ ತಲೆ ಬಾಚಿಕೊಳ್ಳುವ, ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವ, ಕೆನ್ನೆಗೆ ರಂಗು ಬಳಿದುಕೊಳ್ಳುವ ತರಬೇತಿ ನೀಡಬಾರದೇಕೆ ಎಂದು ಯೋಚಿಸಿದರು. ಹಾಗೆಯೇ ಮಾಡಿದರೆ. ಮಗಳ ಜತೆಗಿದ್ದ ಸಂದರ್ಭದಲ್ಲೆಲ್ಲ ಅಂಗವೈಕಲ್ಯವನ್ನು ಮೆಟ್ಟಿ ನಿಂತ ಧೀರರ ಕಥೆಗಳನ್ನೇ ಹೇಳಲು ತೊಡಗಿದರು. ಅಂಥ ಸಾಧಕರ ಕತೆಯನ್ನೇ ಪದೇ ಪದೆ ಕೇಳಿದ್ದರ ಪರಿಣಾಮ, ನಾನೂ ಏನಾದರೂ ಸಾಧಿಸಬೇಕು ಎಂಬ ಛಲ ಜೆಸ್ಸಿಕಾ ಕಾಕ್ಸ್‌ಗೆ ಬಂತು. ಈಕೆ ಸಡಗರದಿಂದಲೇ ಕಾಲ್ಬೆರಳಿಗೆ ಪೆನ್ಸಿಲ್ ಸಿಕ್ಕಿಸಿಕೊಂಡು ಬರೆಯಲು ಕಲಿತಳು. ಓದಿನಲ್ಲಿದ್ದ ಶ್ರದ್ಧೆ, ಈಕೆಯನ್ನು ಶಿಕ್ಷಕಿಯರ ಪಾಲಿನ ಡಾರ್ಲಿಂಗ್ ಆಗುವಂತೆ ಮಾಡಿತು.ಈ ಮಧ್ಯೆ ಮಗಳು ಹೆಚ್ಚಿನ ಸಮಯ ಮನೆಯಲ್ಲಿಯೇ ಇದ್ದರೆ ಡಿಪ್ರೆಷನ್‌ಗೆ ಈಡಾಗಬಹುದು ಎಂದು ಯೋಚಿಸಿದ ವಿಲಿಯಂ-ಇನೆಜ್ ಕಾಕ್ಸ್ ದಂಪತಿ, ಅವಳನ್ನು ಈಜು ಕಲಿಯಲು ಕಳಿಸಿದರು. `ಹಾರ್‍ಮೋನಿಯಂ ನುಡಿಸಲು ಕಲಿಯಬಹುದಲ್ಲ ಮಗಳೇ’ ಎಂದು ಆಸೆ ಹುಟ್ಟಿಸಿದರು. ಅವಳ ಒಂದೊಂದು ಚಿಕ್ಕ ಗೆಲುವನ್ನೂ ಹಬ್ಬದಂತೆ ಆಚರಿಸಿ ‘ತಿe ಚಿಡಿe ಠಿಡಿouಜ oಜಿ ಥಿou’ ಎಂದು ಕಣ್ತುಂಬಿಕೊಂಡರು.
ಪರಿಣಾಮ ಏನಾಯಿತೆಂದರೆ, ತನ್ನ ಅಂಗವೈಕಲ್ಯದ ಮೇಲೆ ಸೇಡು ತೀರಿಸಿಕೊಳ್ಳುವಂತೆ ಬದುಕಲು ಜೆಸ್ಸಿಕಾ ನಿರ್ಧರಿಸಿದಳು. ತನ್ನ ಗೆಲುವಿನ ಕಥೆಯನ್ನು ಅವಳೇ ಸಂಕ್ಷಿಪ್ತವಾಗಿ ವಿವರಿಸುವುದು ಹೀಗೆ: `ಹಾರ್‍ಮೋನಿಯಂ ಬಾರಿಸುವುದನ್ನೇನೋ ತುಂಬ ಬೇಗನೆ ಕಲಿತೆ. ಆದರೆ ಈಜು ಕೊಳಕ್ಕೆ ಇಳಿದಾಗ ತುಂಬ ಕಷ್ಟವಾಯಿತು. ಮೊದಲು, ಹರಿವ ನೀರನ್ನು ಎರಡೂ ಕೈಗಳಿಂದ ಹಿಂದೆ ತಳ್ಳಬೇಕು. ನಂತರ ಕಾಲು ಬಡಿಯಬೇಕು. ಇದು ಈಜು ಕಲಿಕಾ ವಿಧಾನದ ಮೊದಲ ಪಾಠ. ಆದರೆ ನೀರನ್ನು ಹಿಂದಿಕ್ಕಲು ನನಗೆ ಕೈಗಳೇ ಇರಲಿಲ್ಲ. ಅದನ್ನು ನೆನಪು ಮಾಡಿಕೊಂಡಾಗ-ಓಹ್, ನಾನು ಮುಳುಗಿ ಹೋಗ್ತೀನಿ ಅಂದುಕೊಂಡೆ. ಆದರೆ, ಎರಡೇ ಎರಡು ರೆಕ್ಕೆಗಳಿಂದ (?!) ಈಜುವ ಮೀನು ಕಂಡಾಗ, ನಾನೂ ಹೀಗೆ ಮಾಡಬಹುದಲ್ಲ ಅನ್ನಿಸ್ತು. ಪ್ರಯತ್ನ ಪಟ್ಟರೆ ಮೀನೂ ನಾಚುವಂತೆ ಈಜಬಲ್ಲೆ ಅನ್ನಿಸ್ತು. ಮುಂದೆ ಈಜುತ್ತ ಈಜುತ್ತ ಹೋದಂತೆಲ್ಲ ಮೀನಿಗೇ ಸೈಡು ಹೊಡೆದೇ ಬಿಟ್ಟೆ !
ಅದೊಮ್ಮೆ ಈಜಿನಲ್ಲಿ ಬಹುಮಾನ ತಗೊಂಡ ಸಂದರ್ಭದಲ್ಲೇ, ನನ್ನೆದುರು ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದ ಹುಡುಗಿಯೊಬ್ಬಳ ಸಾಹಸವನ್ನೂ ನೋಡಿದೆ. ಅವತ್ತೇ ನನಗೂ ಬ್ಲಾಕ್ ಬೆಲ್ಟ್ ಚಾಂಪಿಯನ್ ಆಗಬೇಕು ಅನ್ನಿಸ್ತು. ಅಪ್ಪ-ಅಮ್ಮನ ಮುಂದೆ ನನ್ನ ಆಸೆ ತೋಡಿಕೊಂಡೆ. ಅವರು ಕಣ್ತುಂಬಿಕೊಂಡು- `ನೀನು ಏನೇ ಕಲಿತರೂ ನಮಗೆ ಸಂತೋಷ ಮಗಳೇ’ ಎಂದರು. ಮೊದಲಿಗೆ `ಕೈಗಳಿಲ್ಲದ ಹುಡುಗಿ’ ಎಂಬ ಕಾರಣಕ್ಕೇ ಕರಾಟೆ ಕಲಿಸಲು ಹಿಂಜರಿದ ಅಧ್ಯಾಪಕರು ನನ್ನ ವಿಪರೀತದ ಬೇಡಿಕೆಗೆ ಕಡೆಗೂ ಕರಗಿದರು. ಕೈಗಳೇ ಇಲ್ಲದಿದ್ದಾಗ ಎದುರಾಳಿಯ ಹೊಡೆತದಿಂದ ಹೇಗೆ ತಪ್ಪಿಸಿಕೊಳ್ಳಬೇಕು? ಫೈಟಿಂಗಿನ ಸಂದರ್ಭದಲ್ಲಿ ಸರ್ರಕ್ಕನೆ ಹೇಗೆ ಜಿಗಿಯಬೇಕು? ಹೇಗೆ ಲ್ಯಾಂಡ್ ಆಗಬೇಕು ಎಂದೆಲ್ಲ ಹೇಳಿಕೊಟ್ಟರು. ಪರಿಣಾಮ ಏನಾಯಿತೆಂದರೆ, ಎರಡೇ ವರ್ಷಗಳ ನಂತರ ಅದೇ ಅರಿಜೋನಾದಲ್ಲಿ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಪ್ರಶಸ್ತಿ ನನ್ನದಾಯಿತು.
ಈ ವೇಳೆಗೆ ಕಾಲೇಜು ಶಿಕ್ಷಣವನ್ನೂ ಮುಗಿಸಿದ್ದೆ. ನನ್ನ ಲಿಮಿಟ್ಸ್ ಏನೆಂದು ನನಗೆ ಚೆನ್ನಾಗಿ ಅರ್ಥವಾಗಿತ್ತು. ಹಾಗಾಗಿ ಪ್ರೀತಿ-ಪ್ರೇಮ-ರೊಮಾನ್ಸ್ ಎಂಬ ವಿಚಾರವನ್ನು ಮನಸ್ಸಿನಿಂದ ಕಿತ್ತು ಹಾಕಿದ್ದೆ. ಆಧ್ಯಾತ್ಮದತ್ತ ವಾಲಿಕೊಂಡಿದ್ದೆ. ಈ ಸಂದರ್ಭದಲ್ಲಿಯೇ ಕಾರ್ ಓಡಿಸುವುದನ್ನು ಕಲಿಯಬೇಕು ಅನ್ನಿಸ್ತು. ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಹಾಕಿದೆ. ಕೈಗಳಿಲ್ಲದ ಹುಡುಗಿ ಡಿ.ಎಲ್. ಕೇಳಿದಳು ಎಂದು ಅದೂ ದೊಡ್ಡ ಸುದ್ದಿಯಾಯಿತು. ಇದೇ ಸಂದರ್ಭದಲ್ಲಿ ಅಮೆರಿಕದ ಫೋರ್ಡ್ ಕಾರು ತಯಾರಿಕಾ ಕಂಪನಿ, ನನಗಾಗಿ ವಿಶೇಷ ಅನುಕೂಲಗಳಿದ್ದ ಕಾರು ತಯಾರಿಸುವುದಾಗಿ ಹೇಳಿತು. ಅಂಥ ಕಾರ್ ಓಡಿಸುವುದು ನನ್ನ ಟ್ಯಾಲೆಂಟ್‌ಗೆ ನಾನೇ ಮಾಡಿಕೋಳ್ಳುವ ಅವಮಾನ ಅನ್ನಿಸಿದ ತಕ್ಷಣವೇ- `ಎಲ್ಲರೂ ಓಡಿಸುವಂಥ ಕಾರನ್ನೇ ನಾನೂ ಓಡಿಸುತ್ತೇನೆ. ಯಾವ ವಿಶೇಷ ಸವಲತ್ತೂ ನನಗೆ ಬೇಡ. ಹಾಗೆಯೇ ಅನುಕಂಪವೂ ಬೇಕಿಲ್ಲ’ ಎಂದು ನಿಷ್ಠುರವಾಗಿ ಹೇಳಿದೆ. ಕಡೆಗೊಂದು ದಿನ ನನ್ನ ಪ್ರಯತ್ನದಲ್ಲಿ ಗೆದ್ದೂ ಬಿಟ್ಟೆ…’
ಹೀಗೆನ್ನುವ ಜೆಸ್ಸಿಕಾ ಕಾಕ್ಸ್ ಅದೇ ಸಂದರ್ಭದಲ್ಲಿ ಇನ್ನೆರಡು ಮಾತುಗಳನ್ನೂ ಸೇರಿಸುತ್ತಾಳೆ: ಎಲ್ಲ ಪ್ರಯತ್ನಗಳಲ್ಲೂ ನಾನು ಗೆದ್ದಿದೀನಿ ನಿಜ. ಆದರೆ, ಅದಕ್ಕೆಲ್ಲ ವಿಪರೀತ ಟೈಮ್ ತಗೊಂಡಿದೀನಿ. ಕರಾಟೆ ಕಲಿಯುವಾಗ ಎದುರಾಳಿಯ ಹೊಡೆತ ತಿಂದು ಕಾಲು ಮುರಿದುಕೊಂಡಿದ್ದೀನಿ. ಈಜುವ ಸಂದರ್ಭದಲ್ಲಿ ಅದೆಷ್ಟೋ ಬಾರಿ ನೀರು ಕುಡಿದು ಕಂಗಾಲಾಗಿದ್ದೇನೆ. ತಪ್ಪಾಗಿ ಹಾರ್‍ಮೋನಿಯಂ ನುಡಿಸಿ ಗುರುಗಳ ಟೀಕೆಗೆ ಗುರಿಯಾಗಿದ್ದೇನೆ. ಐದಾರು ಸಂದರ್ಭಗಳಲ್ಲಿ ಕೂದಲೆಳೆಯ ಅಂತರದಲ್ಲಿ ಕಾರ್ ಅಪಘಾತಗಳಿಂದ ಪಾರಾಗಿದ್ದೇನೆ. ಈ ಸಂದರ್ಭಗಳಲ್ಲೆಲ್ಲ ನನಗೆ ನೋವಾಗಿದೆ ನಿಜ. ಆದರೆ ಸೋತು ಹೋದೆ ಎಂಬ ಭಾವ ಉಹುಂ-ಒಂದೇ ಒಂದು ಕ್ಷಣದ ಮಟ್ಟಿಗೂ ಬಂದಿಲ್ಲ. ಸೋಲು ಎಂಬ ಪದಕ್ಕೆ ನನ್ನ ಬದುಕೆಂಬ ಡಿಕ್ಷನರಿಯಲ್ಲಿ ಅರ್ಥವಿಲ್ಲ. ಜಾಗವೂ ಇಲ್ಲ…
***
ಇಂಥ ಅಪರೂಪದ ಹಿನ್ನೆಲೆಯ ಜೆಸ್ಸಿಕಾ ಕಾಕ್ಸ್, ಮೊನ್ನೆ ಅಕ್ಟೋಬರ್ ೧೦ರಂದು ಅವೇ ಕಾಲುಗಳ, ಕಾಲ್ಬೆರಳುಗಳ ಸಹಾಯದಿಂದ ವಿಮಾನವನ್ನೂ ಹಾರಿಸುವ ಮೂಲಕ ಹೊಸದೊಂದು ಚರಿತ್ರೆಯನ್ನೇ ನಿರ್ಮಿಸಿಬಿಟ್ಟಿದ್ದಾಳೆ. ಈ ಅಂಗವಿಕಲ ಬಾಲಕಿಯ ಸಾಹಸ ಕಂಡು ಅಮೆರಿಕ ಮಾತ್ರವಲ್ಲ, ಜಗತ್ತೇ ಬೆರಗಾಗಿ ಹೋಗಿದೆ. ಅರಿಜೋನಾದ ಸರಕಾರ, ಈ ಬಾಲೆಯನ್ನು ಕರೆದು ಪೈಲಟ್ ಕೆಲಸ ಕೊಟ್ಟಿದೆ. `ನಿಂಗೆ ಎಷ್ಟು ದಿನ ಕೆಲಸ ಮಾಡಬೇಕು ಅನಿಸುತ್ತೋ ಅಷ್ಟು ದಿನ ಮಾತ್ರ ಕೆಲಸ ಮಾಡು. ಎಷ್ಟು ಬೇಕಾದ್ರೂ ರಜೆ ತಗೋ. ನಿನ್ನಂಥವರಿಗೆ ಕೆಲಸ ಕೊಟ್ಟಿದೀವಿ ಅನ್ನೋದೇ ನಮ್ಮ ಹೆಮ್ಮೆ’ ಎಂದು ಹೇಳಿದೆ. ಇದೇ ಸಂದರ್ಭದಲ್ಲಿ ಜೆಸ್ಸಿಕಾಗೆ ಪೈಲಟ್ ತರಬೇತಿ ನೀಡಿದ ಟೆರ್ರಿ ಬ್ರ್ಯಾಂಡ್- `ಪೈಲಟ್ ಲೈಸೆನ್ಸ್ ಪಡೆಯುವ ಮುನ್ನ ವಿಮಾನ ಹಾರಿಸಬೇಕು. ಜೆಸ್ಸಿಕಾಗೆ ಪರೀಕ್ಷೆ ಇದ್ದ ದಿನ ಭಾರೀ ಬಿರುಗಾಳಿ ಇತ್ತು. ಈ ಹುಡುಗಿ ಅದಕ್ಕೆ ಕಿಂಚಿತ್ತೂ ಹೆದರದೆ, ಆ ಬಿರುಗಾಳಿಗೆ ಹಾಗೇ ಒಂದು ಕಿಕ್ ನೀಡಿ, ವಿಮಾನ ಹಾರಿಸಿಯೇ ಬಿಟ್ಟಳು. ಇಂಥವಳ ಗುರು ಅನ್ನಿಸಿಕೊಳ್ಳಲಿಕ್ಕೆ ನಾನು ಪುಣ್ಯ ಮಾಡಿದ್ದೆ’ ಎಂದು ಉದ್ಗರಿಸಿದ್ದಾನೆ.
ಇಷ್ಟೆಲ್ಲ ಆದ ನಮತರವೂ, ತನ್ನ ಸಾಧನೆಗೆ ಇಡೀ ಜಗತ್ತೇ ಸೆಲ್ಯೂಟ್ ಹೊಡೆಯುತ್ತಿದ್ದರೂ ಜೆಸ್ಸಿಕಾ ಬದಲಾಗಿಲ್ಲ. ಅಹಮಿಕೆಗೆ ಬಲಿಯಾಗಿಲ್ಲ. ಅವಳು ಈಗಲೂ ಅದೇ ಹಳೆಯ ಜೆಸ್ಸಿಕಾ ಆಗಿಯೇ, ನಮ್ಮ ಪಕ್ಕದ ಮನೆಯ ಹುಡುಗಿಯ ಥರಾನೇ ಉಳಿದುಬಿಟ್ಟಿದ್ದಾಳೆ. ಸಾವಿರಾರು ಮಂದಿಯ ಮುಂದೆ ನಿಂತು ತನ್ನ ಯಶೋಗಾಥೆ ಹೇಳಿಕೊಳ್ಳುತ್ತಾಳೆ. ಅಂಗವೈಕಲ್ಯ ಶಾಪವಲ್ಲ, ಅದು ಕೊರತೆಯೂ ಅಲ್ಲ ಎಂದು ವಿವರಿಸುತ್ತಾಳೆ. ನೊಂದವರ ಸಂಕಟ ಆಲಿಸುತ್ತಾಳೆ. ಅಳುವವರ ಕಂಬನಿ ಒರೆಸಿ- ಜತೆಗೆ ನಾನಿಲ್ವಾ… ಎಂದು ಸಂತೈಸುತ್ತಾಳೆ. ಈ ಮಧ್ಯೆ! ಯಾರಾದರೂ `ನೀನು ವಿಮಾನ ಹಾರಿಸಿದ್ಯಂತೆ?’ ಎಂದು ಕೇಳಿದರೆ- ಬೇರೆಯವರು ಆರು ತಿಂಗಳಲ್ಲಿ ಮುಗಿಸುವ ಆ ಕೋರ್ಸ್‌ಗೆ ನಾನು ಮೂರು ವರ್ಷ ತಗೊಂಡೆ ಗೊತ್ತಾ?’ ಎಂದು ಅಮಾಯಕಿಯಂತೆ ಉತ್ತರಿಸುತ್ತಾಳೆ. ಹಿಂದೆಯೇ, ಚಿಕ್ಕಂದಿನಲ್ಲಿ ಕೈಗಳಿಲ್ಲದೆಯೂ ಗಗನದಲ್ಲಿ ಹಕ್ಕಿಗಿಂತ ವೇಗವಾಗಿ ಹಾರಬೇಕಿತ್ತು ಅಂದುಕೊಂಡಿದ್ದೆ. ಆ ಕನಸು ಈಗ ನನಸಾಗಿದೆ. ನನ್ನ ಈ ಯಶಸ್ಸಿನ ಹಿಂದೆ ಅಪ್ಪ-ಅಮ್ಮನ ಪ್ರೀತಿ, ಬಂಧುಗಳ ಹಾರೈಕೆ, ಗುರುಗಳ ಆಶೀರ್ವಾದ ಇದೆ. ನಾನು ಎಲ್ಲರಿಗೂ ಋಣಿ ಎನ್ನುತ್ತಾ ಕಣ್ತುಂಬಿಕೊಳ್ಳುತ್ತಾಳೆ.
***
ಜೆಸ್ಸಿಕಾಳ ಯಶೋಗಾಥೆ ಓದಿದ ಎಲ್ಲರಿಗೂ ಇದೆಲ್ಲ ನಿಜವಾ ಎಂಬ ಅನುಮಾನ ಬರುವುದು ಸಹಜವೇ. ಅಂಥವರು ಇಂಟರ್‌ನೆಟ್‌ಗೆ ಹೋಗಿ ಎessiಛಿಚಿ ಛಿox ಎಂದು ಸರ್ಚ್ ಮಾಡಿ. ಅಲ್ಲಿ ಈ ಜೆಸ್ಸಿಕಾ ಈಜು ಹೊಡೆಯುವ, ಕಾರು ಓಡಿಸುವ, ವಿಮಾನ ಹಾರಿಸುವ, ಹಾರ್‍ಮೋನಿಯಂ ಬಾರಿಸುವ, ಕರಾಟೆ ಕಿಕ್ ಕೊಡುವ, ಇ-ಮೇಲ್ ಕಳಿಸುವ ದೃಶ್ಯಗಳು ಕಾಣಸಿಗುತ್ತವೆ. ಆಕೆಯ ಆಟೊಗ್ರಾಫ್ ಬೇಕು ಎಂದಾದರೆ- “ಎessiಛಿಚಿ ಛಿox, Iಟಿಣeಡಿಟಿಚಿಣioಟಿಚಿಟ moviಣಚಿಣioಟಿಚಿಟ sಠಿeಚಿಞeಡಿ. Pಔ box ೩೫೮೦೭, ಖಿuಛಿsoಟಿ ಂZ ೮೫೭೪೦. ‘ ಇಲ್ಲಿಗೆ ಬರೆಯಿರಿ. ಅದೃಷ್ಟ ನಿಮ್ಮದಿದ್ದರೆ ಖಂಡಿತವಾಗಿಯೂ ಉತ್ತರ ಬರುತ್ತದೆ.
ಹೇಳಿ, ಇದನ್ನೆಲ್ಲ ಕೇಳಿದ ಮೇಲೆ ಜೆಸ್ಸಿಕಾ ನಮ್ಮ ಅಕ್ಕ-ತಂಗಿಯೋ, ಮನೆ ಮಗಳೋ ಆಗಬೇಕಿತ್ತು ಅನಿಸುವುದಿಲ್ಲವೇ? ಆಕೆಯ ಸಾಧನೆಗೆ ನೊಬೆಲ್ ಪ್ರಶಸ್ತಿ ಕೂಡ ಸಣ್ಣದು ಅನ್ನಿಸುವುದಿಲ್ಲವೆ ?

Advertisements

4 Comments »

 1. ಹೇಳಿ, ಇದನ್ನೆಲ್ಲ ಕೇಳಿದ ಮೇಲೆ ಜೆಸ್ಸಿಕಾ ನಮ್ಮ ಅಕ್ಕ-ತಂಗಿಯೋ, ಮನೆ ಮಗಳೋ ಆಗಬೇಕಿತ್ತು ಅನಿಸುವುದಿಲ್ಲವೇ?

  ನಿಜ ಮಣಿಕಾಂತ್..

  ಪ್ರೀತಿಯಿರಲಿ

  ಶೆಟ್ಟರು

 2. 2
  ಬಿ. ಕಟ್ಟಿಮನಿ 45 E Says:

  ಪ್ರಿಯ ಮನಿಕಾಂತ್ ಸರ್.

  ತೀರ ಸಣ್ಣ ಕಾಂಪ್ಲೆಕ್ಸ್ ಗಳಿಗೆಲ್ಲ ಕುಸಿಯುವ ನಮಗೆ ಜೆಸ್ಸಿಕಾಳ ಜೀವನೋತ್ಸಾಹ ಬೆರಗುಮುಡಿಸುವಂತದ್ದು. ಮನುಷ್ಯ ಸ್ವಭಾವದಆಳ-ಅಗಲವನ್ನು ಅನಾವರಣ ಗೊಳಿಸುವದರ ಜೊತೆಗೆ ದೌರ್ಬಲ್ಯಗಳನ್ನು ಮೆಟ್ಟಿನಿಂತು ವಿಜಯಿಯಾದವರ ಕುರಿತು ಆಪ್ತತೆಯನ್ನೆ ಮೈದೆತ್ತಂತೆ ಬರೆಯುತಿದ್ದಿರಿ, ನನ್ನ ಮನಸ್ಸಿನ ಸಂಸ್ಕಾರಕ್ಕೆ ಬೇಕಾದನ್ನು ಈ ಅಂಕಣದ ಮುಲಕ ಪಡೆಯುತಿದ್ದೇನೆ.ಹೊಸ ವರ್ಷದಲ್ಲಿ ಈ ಅಂಕಣದ ಲೇಖನಗಳು ಪುಸ್ತಕರೂಪವಾಗಲಿ ನಿಮಗೆ ಒಳಿತಾಗಲಿ.ಧನ್ಯವಾದಗಳು

  ಬಿ. ಕಟ್ಟಿಮನಿ 45 E

 3. 3

  ಮಣಿಕಾಂತ್ ಅವರೇ.. ಆಕೆಯ ವಿಷಯವನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು

 4. 4
  Manaswi Says:

  ಜೆಸ್ಸಿಕಾ ಬಗ್ಗೆ ಎಲ್ಲೋ ಅಂತರ್ಜಾಲದಲ್ಲಿ ಓದಿದ ನೆನಪು.. ನೀವು ಆಕೆಯ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: