ತಪ್ಪು ಮಾಡದವ್ರ್ ಯಾರವ್ರೆ? ಯ ಹಿಂದೆ ಹೋಟೆಲಿನ ಹುಡುಗನಿದ್ದ!

eddelu-manjunatha-movie-launch7

ಚಿತ್ರ: ಮಠ
ಸಾಹಿತ್ಯ- ಸಂಗೀತ-ವಿ. ಮನೋಹರ್
ಗಾಯಕ-ಸಿ. ಅಶ್ವಥ್

ತಪ್ಪು ಮಾಡದೋರ್ ಯಾರವ್ರೆ?
ತಪ್ಪೇ ಮಾಡದೋರ್ ಎಲ್ಲವ್ರೇ?
ಅಪ್ಪಿ ತಪ್ಪಿ ತಪ್ಪಾಗತ್ತೆ
ಬಾಳೆ ಕೂಡ ಕಪ್ಪಾಗತ್ತೆ
ತಿದ್ದಿಕೊಳ್ಳೋದಕ್ಕೆ ದಾರಿ ಐತೇ /ಪ/

ಘಮಘಮ ತಂಪು ತರೋ ಗಾಳಿ ಕೂಡ
ಗಬ್ಬುನಾತ ತರೋದಿಲ್ವಾ?
ಪರಮ ಪಾವನ ಗಂಗೆಯಲ್ಲೂ ಕೂಡ
ಹೆಣಗಳು ತೇಲೋದಿಲ್ವಾ
ಕಳ್ರನ್ನೆಲ್ಲಾ ಜೈಲಿಗೆ ಹಾಕೋದಾದ್ರೆ
ಭೂಮಿಗೆ ಬೇಲಿ ಹಾಕಬೇಕಲ್ವಾ
ತೀರ್ಥ ಕುಡಿದ್ರೂ ಶೀತವಾಗಲ್ವಾ?
ಮಂಗಳಾರತಿನೂ ಸುಡೋದಿಲ್ವಾ?
ದೇವ್ರುಗಳೇ ತಪ್ ಮಾಡಿಲ್ವಾ? /೧/

ಹೆಣ್ಣು ಹೊನ್ನು ಮಣ್ಣು ಮೂರ್ರಿಂದಲೇ
ಎಲ್ಲಾ ರೀತಿ ಎಡವಟ್ಟು
ನಿನ್ ಪಾಡಿಗೆ ನೀನು ಇರೋದ್ ಬಿಟ್ಟು
ಪರರ ಸ್ವತ್ತಿಗೆ ಯಾಕೆ ಪಟ್ಟು?
ಮೆಳ್ಗಣ್ಣು ಇದ್ರೂ ತಪ್ಪಿಲ್ಲ
ಕಳ್ಗಣ್ಣು ಇರಬಾರದು
ಕಲಿಯೋದಾದ್ರೆ ವಿದ್ಯೆ ಕಲಿ
ತೊರೆದುಬಿಡು ಕೇಡುಬುದ್ಧಿ
ಲದ್ದಿ ಬುದ್ಧಿ ಮಾಡು ಶುದ್ಧಿ /೨/

ತಪ್ಪು ಮಾಡದೋರ್ ಯಾರವ್ರೆ?
ತಪ್ಪೇ ಮಾಡದೋರ್ ಎಲ್ಲವ್ರೇ?
ನಾನು ನೀನು ಎಲ್ರೂ ಒಂದೇ
ತಪ್ಪು ಮಾಡೋ ಕುರಿ ಮಂದೆ
ತಿದ್ದಿಕೊಳ್ಳೋಕೆ ದಾರಿ ಐತೆ ಮುಂದೇ /೩/

ಅನುಮಾನವೇ ಬೇಡ. ಜನಪ್ರಿಯ ಚಿತ್ರಗೀತೆಗಳ ಪೈಕಿ ಹೆಚ್ಚಿನವು ತೀರಾ ಆಕಸ್ಮಿಕ ಸಂದರ್ಭದಲ್ಲಿ ಸೃಷ್ಟಿಯಾದಂಥವು. ನಿದ್ರಿಸುತ್ತಿರುವ ಕಂದ, ಆ ನಿದ್ದೆಗಣ್ಣಿನಲ್ಲೇ ತನ್ನಷ್ಟಕ್ಕೆ ತಾನೇ ನಗುತ್ತದಲ್ಲ? ತನಗೇ ಗೊತ್ತಿಲ್ಲದೆ ಎದುರು ಕೂತವರ ಕಿರುಬೆರಳು ಹಿಡಿದಿರುತ್ತದಲ್ಲ? ಹಾಗೆ ಈ ಹಾಡುಗಳು ಹೊತ್ತಲ್ಲದ ಹೊತ್ತಿನಲ್ಲಿ; ಸಂದರ್ಭವಲ್ಲದ ಸಂದರ್ಭದಲ್ಲಿ ಜತೆಯಾಗಿ ಬಿಡುತ್ತವೆ. ನಂತರ ಒಂದು ರಾಗವಾಗಿ, ತಾಳವಾಗಿ, ಗುಂಗಾಗಿ, ಕಡೆಗೆ ಪಲ್ಲವಿಯಾಗಿ ಜತೆಗೇ ಇದ್ದು ಬಿಡುತ್ತವೆ. ನಂತರದಲ್ಲಿ ಮೇಲಿಂದ ಮೇಲೆ ಮನಸ್ಸಿಗೆ ಬರುತ್ತಲೇ ಇರುತ್ತವೆ.
ಜಾಣ ಗೀತರಚನೆಕಾರ, ಈ ಪದಗಳ ಮಣಿಸರವನ್ನು ಒಂದೆಡೆ ಎತ್ತಿಟ್ಟಿರುತ್ತಾನೆ. ಮುಂದೊಂದು ದಿನ, ಸಂದರ್ಭ ಬಂದಾಗ ಕಿವಿಯೊಳಗೋ, ತಲೆಯೊಳಗೋ ರಿಂಗಣಿಸುತ್ತಿದ್ದ ಪದಗಳನ್ನೆಲ್ಲ ಕೂಡಿ, ಕಳೆದು, ಗುಣಿಸಿ, ಭಾಗಿಸಿ ಒಂದು ಮಧುರ ಗೀತೆಯನ್ನಾಗಿ ಮಾಡಿ ಬಿಡುತ್ತಾನೆ. ಆ ಮೂಲಕ ಚಿತ್ರದ ಸನ್ನಿವೇಶವನ್ನು ಮತ್ತಷ್ಟು ತೀವ್ರಗೊಳಿಸಿ ಪ್ರೇಕ್ಷಕರ ಮುಂದಿಡುತ್ತಾನೆ.
ಹೀಗೆಲ್ಲ ಅಂದುಕೊಂಡಾಗಲೇ ನೆನಪಾಗುವವರು ಗೀತ ರಚನೆಕಾರ, ಸಂಗೀತ ನಿರ್ದೇಶಕ ವಿ. ಮನೋಹರ್.
೧೯೮೪ರಲ್ಲಿ ಕಾಶೀನಾಥ್ ಅವರ `ಅನುಭವ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು ಮನೋಹರ್. ಆ ಸಿನಿಮಾದ `ಹೋದೆಯ ದೂರ ಓ ಜತೆಗಾರ’ ಗೀತೆ ಅವರನ್ನು ಏಕ್‌ದಂ ಸ್ಟಾರ್ ಗೀತೆರಚನೆಕಾರನನ್ನಾಗಿ ಮಾಡಿತು. ಆನಂತರದ ದಿನಗಳಲ್ಲಿ `ಅನುರಾಗ ಸಂಗಮ’ಕ್ಕೆ ಬರೆದ `ಓಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೆ ಸದಾ ಸದಾ` ಗೀತೆ, ಓಮಲ್ಲಿಗೆ ಚಿತ್ರದ `ಮಲಗು ಮಲಗೇ ಚಾರುಲತೆ; ಜೋಡಿಹಕ್ಕಿ ಚಿತ್ರದ `ಓ ಚಂದಮಾಮ ಬೆಳದಿಂಗಳ ಬೇಡಿದಾಗ….’ ಗೀತೆಗಳು ಮನೋಹರ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟವು. ಇಂಥ ಹಿನ್ನೆಲೆಯ ಮನೋಹರ್, ಮೂರು ವರ್ಷದ ಹಿಂದೆ ಪಡ್ಡೆ ಹುಡುಗರ ಪಾಲಿನ ರಾಷ್ಟ್ರಗೀತೆಯಂತಿದ್ದ `ತಪ್ಪು ಮಾಡದವ್ರು ಯಾರವ್ರೆ’ ಹಾಡನ್ನು `ಮಠ’ ಸಿನಿಮಾಕ್ಕಾಗಿ ಬರೆದರು. ಈ ಹಾಡು ಸೃಷ್ಟಿಯಾದ ಸಂದರ್ಭದ ವಿವರಣೆಯನ್ನು ಮನೋಹರ್ ಅವರಿಂದಲೇ ಕೇಳೋಣ. ಓವರ್ ಟು. ವಿ. ಮನೋಹರ್….
***
`ಜಗ್ಗೇಶ್ ಅಭಿನಯ, ಗುರುಪ್ರಸಾದ್ ನಿರ್ದೇಶನದ `ಮಠ’ ಚಿತ್ರದ ಪೂರ್ವ ಸಿದ್ಧತೆ ಅಶ್ವಿನಿ ಸ್ಟುಡಿಯೋದಲ್ಲಿ ನಡೆದಿತ್ತು. ಗೀತೆರಚನೆ ಮತ್ತು ಟ್ಯೂನ್ ಕಂಪೋಸಿಂಗ್ ವಿಷಯವಾಗಿ ಚರ್ಚಿಸಲು ಅದೊಂದು ದಿನ ಸ್ಟುಡಿಯೋಗೆ ಹೋಗಿದ್ದೆ. ಮಾತುಕತೆ ಆರಂಭವಾಗುವ ಮೊದಲು ಕಾಫಿ ಕುಡಿಯಲು ಎಲ್ರೂ ಸ್ಟುಡಿಯೋದ ಮೇಲಿದ್ದ ಕ್ಯಾಂಟೀನ್‌ಗೆ ಹೋದ್ವಿ. ಕಾಫಿ ಸಮಾರಾಧನೆ ಆಯಿತು.
ನಾವು ಎದ್ದೇಳುವ ಮೊದಲೇ ಅಲ್ಲಿಗೆ ಬಂದ ಟೇಬಲ್ ಕ್ಲೀನ್ ಮಾಡುವ ಹುಡುಗ, ಅವಸರದಿಂದಲೇ ಕ್ಲೀನ್ ಮಾಡುತ್ತಾ, ಅಲ್ಲಿದ್ದ ನೀರಿನ ಲೋಟವನ್ನು ನನ್ನ ಬಟ್ಟೆಯ ಮೇಲೆ ಆಕಸ್ಮಿಕವಾಗಿ ಬೀಳಿಸಿಬಿಟ್ಟ. ಸಾಮಾನ್ಯವಾಗಿ ಕೋಪ ಮಾಡಿಕೊಳ್ಳದ ನಾನು ಅವತ್ತು ತಾಳ್ಮೆ ಕಳೆದುಕೊಂಡೆ. ಆ ಹುಡುಗನ ಮೇಲೆ ರೇಗಾಡಿದೆ. ಗದರಿಸಿದೆ. ಆ ಹುಡುಗ ಹೆದರಿ ಕಂಗಾಲಾಗಿ-`ತಪ್ಪಾಯ್ತು. ಸಾರಿ ಸಾರ್’ ಅಂದ.
ಒಂದೆರಡು ನಿಮಿಷದ ನಂತರ ಸ್ಟುಡಿಯೋಗೆ ಬಂದು ಮಾತುಕತೆಗೆ ಕುಳಿತ್ವಿ. ಆಗ ನಿರ್ದೇಶಕ ಗುರುಪ್ರಸಾದ್ ಹೇಳಿದ್ರು: ` ಈ ಚಿತ್ರದಲ್ಲಿ ಮಠದ ಸ್ವಾಮೀಜಿಯನ್ನು ಕರೆಸಿ ಕೈದಿಗಳಿಗೆ ಹಿತವಚನ ಹೇಳಿಸುವ ಒಂದು ದೃಶ್ಯ ಇರುತ್ತೆ. ಸ್ವಾರಸ್ಯ ಅಂದರೆ, ಆ ಮಠದಲ್ಲಿ ಅಸಲಿಗೆ ಸ್ವಾಮೀಜಿಯೇ ಇರುವುದಿಲ್ಲ. ಅವರ ಜಾಗದಲ್ಲಿ ಟ್ರೈನಿಂಗ್‌ಗೆ ಎಂದು ಬಂದ ಸ್ವಾಮಿಗಳಿರುತ್ತಾರೆ. ಉಪದೇಶ ಹೇಳಲು ಯಾರಾದರೇನು ಎಂದುಕೊಂಡು ಅವರನ್ನೇ ಕರೆಸಲಾಗುತ್ತೆ. ಅವರಿಗೆ ವೇದ, ಉಪನಿಷತ್, ಭಗವದ್ಗೀತೆ… ಈ ಯಾವುದೂ ಗೊತ್ತಿರುವುದಿಲ್ಲ. ಆದರೂ ಅವರು ಒಂದು ಹಾಡಿನ ಮೂಲಕ ಕೈದಿಗಳಿಗೆ ಸಂದೇಶ ಕೊಡಬೇಕು….’ ಇಷ್ಟು ಹೇಳಿ ಮೌನವಾದ ಗುರುಪ್ರಸಾದ್, ಒಂದೆರಡು ನಿಮಿಷದ ನಂತರ – `ಈ ಸಂದರ್ಭಕ್ಕೆ ತಕ್ಕಂತೆ ಒಂದು ಹಾಡು ಬೇಕು’ ಅಂದರು.
`ಸರಿ’ ಎಂದವನೇ ಸ್ವಲ್ಪ ಹೊತ್ತು ಆ ಸನ್ನಿವೇಶದ ಬಗೆಗೇ ಯೋಚಿಸಿದೆ. ಉಪದೇಶ ಕೇಳಿಸಿಕೊಳ್ಳುವವರು ಕೈದಿಗಳು. ಉಪದೇಶ ಕೊಡುವವರು ಅಪಾಪೋಲಿಗಳ ಥರಾ ಇರುವವರು ! ಅದೂ ಜಗ್ಗೇಶ್ ಅಭಿನಯದಲ್ಲಿ ಇಂಥ ಜನರ ಮಧ್ಯೆ ಬಂದು ಹೋಗುವ ಹಾಡು ತಮಾಷೆಯಿಂದ ಕೂಡಿದ್ರೆ ಚನ್ನಾಗಿರುತ್ತೆ ಅನ್ನಿಸ್ತು. ಹಿಂದೆಯೇ, ಕೈದಿಗಳಿಗೆ ತಾವು ತಪ್ಪು ಮಾಡಿದೆವೆಂಬ ಅಪರಾಧಿಪ್ರಜ್ಞೆಯೂ, ಪಡ್ಡೆಗಳಿಗೆ ತಪ್ಪು ಮಾಡುವುದು ತಮ್ಮ ಹಕ್ಕು ಎಂಬ ಭಂಡತನವೂ ಇರುತ್ತದೆ. ಅದನ್ನೇ ಹಾಡಾಗಿಸಬೇಕು ಅನ್ನಿಸ್ತು. ಈ ಹಾಡಿನ ಪದಗಳಿಗಾಗಿ ಯೋಚಿಸುತ್ತಿದ್ದಾಗಲೇ ಸ್ಟುಡಿಯೋದ ಮೇಲಿನ ಕ್ಯಾಂಟೀನ್‌ನಲ್ಲಿ ಆ ಹುಡುಗ ನನ್ನ ಮೇಲೆ ಕಾಫಿ ಲೋಟ ಬೀಳಿಸಿದ್ದು, ನಾನು ರೇಗಿದ್ದು, ಆತ ಕ್ಷಮೆ ಕೇಳಿದ್ದು…. ಇದೆಲ್ಲ ನೆನಪಾಗಿಬಿಡ್ತು. ಆ ಹುಡುಗನ ಮೇಲೆ ರೇಗುವ ಬದಲು ತಪ್ಪು ಮಾಡದವ್ರು ಯಾರವ್ರೆ ಎಂದು ಸಮಾಧಾನ ಮಾಡಿದ್ರೆ ಚನ್ನಾಗಿತ್ತು ಅನ್ನಿಸ್ತು.
ತಕ್ಷಣವೇ ಒಂದೆಡೆ ಕೂತು, ಆ ಸಾಲುಗಳನ್ನೇ ಇಟ್ಟುಕೊಂಡು ತಪ್ಪು ಮಾಡದವ್ರು ಯಾರವ್ರೆ? `ತಪ್ಪೇ ಮಾಡದೋರ್ ಎಲ್ಲವ್ರೆ?’ ಎಂದು ಪಲ್ಲವಿ ಬರೆದುಕೊಟ್ಟೆ. ಅದು ಎಲ್ಲರಿಗೂ ಹಿಡಿಸಿತು. ನಂತರದ ಕೆಲವೇ ನಿಮಿಷದಲ್ಲಿ ಹಾಡೂ ಸಿದ್ಧವಾಯಿತು. ಹಾಡು ಎಲ್ಲರಿಗೂ ಹಿಡಿಸಿತು. ಮುಂದೆ ಗಾಯಕ ಸಿ. ಅಶ್ವತ್ಥ್ ಅದನ್ನು ಪಡ್ಡೆಗಳ ಪಾಲಿನ ರಾಷ್ಟ್ರಗೀತೆಯಾಗುವಂತೆ ಹಾಡಿಬಿಟ್ಟರು….
ಇಷ್ಟು ಹೇಳಿ ಮಾತು ನಿಲ್ಲಿಸಿದರು ಮನೋಹರ್.
-ಅಲ್ಲಿಗೆ, ಪ್ರತಿ ಹಾಡಿನ ಹಿಂದೆಯೂ ಒಂದು ಚೆಂದದ ಕತೆಯಿರುತ್ತೆ
ಎಂಬುದು ಮತ್ತೊಮ್ಮೆ ನಿಜವಾಯಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: