ಬೇರೆ ಏನೂ ಬೇಡ ಎಂದಿಗೂ ನೀನು ನನ್ನವಳಾಗು!

udayashankar_raj

ಚಿತ್ರ: ಹಾವಿನ ಹೆಡೆ, ಗೀತೆರಚನೆ: ಚಿ. ಉದಯಶಂಕರ್
ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ: ಡಾ. ರಾಜ್ಕುಮಾರ್, ವಾಣಿ ಜಯರಾಂ

ಬೇರೆ ಏನೂ ಬೇಡ ಎಂದಿಗೂ
ನೀನು ನನ್ನವಳಾಗು
ಇನ್ನೇನನೂ ನಾ ಕೇಳೆನು
ಚಿನ್ನಾ ನಾ ಕೇಳೆನು ||ಪ||

ಸೌಂದರ್ಯವೆಲ್ಲಾ ಒಂದಾಗಿ ಸೇರಿ
ನನಗಾಗಿ ಹೀಗೆ ಹೆಣ್ಣಾಯಿತೇನೊ
ಬಾನಲ್ಲಿ ಓಡೋ ಮಿಂಚೊಂದು ಜಾರಿ
ನಿನ ಕಣ್ಣ ಸೇರಿ ನನ್ನ ಕೂಡಿತೇನೋ
ನಿನ್ನ ನಾನು ನೋಡಿದಾಗಲೆ
ನನ್ನ ಮನವು ಹೇಳಿತಾಗಲೆ
ಬಿಡಬೇಡವೋ ಈ ಹೆಣ್ಣನು

ಈ ನಿನ್ನ ಸ್ನೇಹ ತಂಗಾಳಿಯಂತೆ
ಒಂದೊಂದು ಮಾತೂ ಬಂಗಾರದಂತೆ
ಒಲವಿಂದ ಹೀಗೆ ಬಳಿಸೇರಿದಾಗ
ಉರಿಬಿಸಿಲು ಕೂಡ ಬೆಳದಿಂಗಳಂತೆ
ನಿನ್ನ ಸೇರಿ ಜೀವ ನಲಿಯಿತು
ಎಲ್ಲಾ ಚಿಂತೆ ದೂರವಾಯಿತು
ಹಿತವಾಗಿದೇ ಹಾಯಾಗಿದೆ ||೨||

`ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೂ…’ `ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು’ `ಯಾರೇ ಕೂಗಾಡಲಿ ಊರೇ ಹೋರಾಡಲಿ….’ `ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು’ `ಎಲ್ಲಿ ಮರೆಯಾದೇ ವಿಠಲಾ ಏಕೆ ದೂರಾದೆ?’ `ನಾದಮಯ ಈ ಲೋಕವೆಲ್ಲಾ…’ `ಮಲೆನಾಡ ಹೆಣ್ಣ ಮೈಬಣ್ಣ, ಬಲು ಚೆನ್ನ ಹಾ… ನಡುಸಣ್ಣ…..’ `ಹಾಲುಜೇನು ಒಂದಾದ ಹಾಗೆ…’ ಇಂಥವೇ ನೂರಾರು ಸೂಪರ್ ಹಿಟ್ ಗೀತೆಗಳಿಗೆ ರಾಗ ಸಂಯೋಜಿಸಿ, ಸಂಗೀತ ನೀಡಿದವರು ಜಿ.ಕೆ. ವೆಂಕಟೇಶ್. `ಕಸ್ತೂರಿ ನಿವಾಸ’ ಚಿತ್ರದಲ್ಲಿ ಕಡೆಗೆ `ಆಡಿಸಿದಾತ ಬೇಸರಗೊಂಡು ಆಟ ಮುಗಿಸಿದಾ, ಸೂತ್ರವ ಹರಿದು ಗೊಂಬೆಯ ಮುರಿದು ಮಣ್ಣಾಗಿಸಿದ’ ಎಂದು ಕಲ್ಲೂ ಕರಗುವಂತೆ ಹಾಡಿದವರು ಇದೇ ಜಿ.ಕೆ. ವೆಂಕಟೇಶ್. ಅಷ್ಟೇ ಅಲ್ಲ, ಇಂದು ಭಾರತೀಯ ಚಿತ್ರರಂಗದ ನಂಬರ್ ಒನ್ ಸಂಗೀತ ನಿರ್ದೇಶಕ ಎನ್ನಿಸಿಕೊಂಡಿರುವ ಇಳಯರಾಜ ಅವರ ಗುರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಕೂಡ ಇದೇ ಜಿ.ಕೆ. ವೆಂಕಟೇಶ್.
ಇಂಥ ಹಿನ್ನಲೆಯ ಜಿ.ಕೆ. ವೆಂಕಟೇಶ್ ಅವರಿಗೆ ಒಂದು ವಿಚಿತ್ರ ಅಭ್ಯಾಸವಿತ್ತು. ಏನೆಂದರೆ, ಯಾವುದೇ ಸಿನಿಮಾ ತಯಾರಿಕೆ ಕುರಿತ ಮಾತುಕತೆಯ ಸಂದರ್ಭವಾಗಿರಲಿ; ಹಾಡುಗಳಿಗೆ ಟ್ಯೂನ್ ಮಾಡಬೇಕಾದ ಸಂದರ್ಭವೇ ಆಗಿರಲಿ-ಆಗೆಲ್ಲ ತಾವು ಇರುವುದು ಯಾವ ಜಾಗ ಎಂಬುದನ್ನೂ ಮರೆತು; ತಮ್ಮ ಜತೆಗಿರುವ ಹಿರಿಯರು-ಕಿರಿಯರು ಏನೆಂದುಕೊಂಡಾರೋ ಎಂದು ತಮಾಷೆಗೂ ಯೋಚಿಸದೆ ಉಪಹಾರ/ಊಟ ಮುಗಿದ ನಂತರ ಚಾಪೆ ಹಾಸಿಕೊಂಡು ಹತ್ತಿಪ್ಪತ್ತು ನಿಮಿಷದವರೆಗೆ ಆರಾಮಾಗಿ ಮಲಗಿ ಬಿಡುತ್ತಿದ್ದರು ಜಿ.ಕೆ. ವೆಂಕಟೇಶ್.
ಸ್ವಾರಸ್ಯವೆಂದರೆ, ಹೀಗೆ ನಿದ್ರೆಗೆ ಜಾರಿಹೋದ ಕೆಲವೇ ಸಮಯದಲ್ಲಿ ಅವರಿಗೆ ಕನಸು ಬೀಳುತ್ತಿತ್ತು. ಮುಂದಿನ ತಮಾಷೆ ಕೇಳಿ; ಈ ಕನಸಿನಲ್ಲಿಯೇ ಅವರಿಗೆ ಫೈನ್ ಫೈನ್ ಎಂಬಂಥ ಟ್ಯೂನ್ ಹೊಳೆಯುತ್ತಿತ್ತು. ತಕ್ಷಣವೇ ಎದ್ದು ಕೂರುತ್ತಿದ್ದ ಜಿ.ಕೆ. ವೆಂಕಟೇಶ್, ಜತೆಗಿರುತ್ತಿದ್ದ ಸಹಾಯಕರಿಗೆ ಈ ಟ್ಯೂನ್ ಕೇಳಿಸಿಕೊಳ್ರೀ ಎಂದು ಹೇಳುತ್ತಿದ್ದರು. ನಂತರ ಅಲ್ಲಿರುತ್ತಿದ್ದ ಗೀತೆರಚನೆಕಾರರಿಗೂ ಕನಸಲ್ಲಿ ಹೊಳೆದ ಟ್ಯೂನ್ ಬಗ್ಗೆ ಹೇಳಿ ಇದಕ್ಕೆ ಹೊಂದಿಕೆಯಾಗುವಂಥ ಹಾಡು ಬರೆದು ಕೊಡಿ ಎಂದು ವಿನಂತಿಸುತ್ತಿದ್ದರು. ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನದ ಅದೆಷ್ಟೋ ಸೂಪರ್ ಹಿಟ್ ಹಾಡುಗಳ ಟ್ಯೂನ್ಗಳು ಅವರಿಗೆ ಕನಸಿನಲ್ಲಿಯೇ ಹೊಳೆದಂಥವು ಅಂದರೆ ಅಚ್ಚರಿಪಡಬೇಡಿ.
ಈಗ ಹೇಳಲು ಹೊರಟಿರುವುದು `ಹಾವಿನ ಹೆಡೆ’ ಚಿತ್ರದ `ಬೇರೆ ಏನೂ ಬೇಡ ಎಂದಿಗೂ ನೀನು ನನ್ನವಳಾಗು’ ಹಾಡು ಹುಟ್ಟಿದ ಸಂದರ್ಭ. ಆ ಚಿತ್ರ ನಿರ್ಮಾಣ, ಕತೆ, ಎಲ್ಲೆಲ್ಲಿ ಹಾಡುಗಳಿರಬೇಕು ಎಂಬ ವಿಷಯವಾಗಿ ಚರ್ಚೆ ನಡೆಯುತ್ತಿತ್ತು. ಅಭ್ಯಾಸ ಬಲದಂತೆ, ಊಟ ಮುಗಿದ ನಂತರ ಚಾಪೆ ಹಾಸಿಕೊಂಡು ಹಾಗೆ ನಿದ್ರೆಗೆ ಜಾರಿಯೇಬಿಟ್ಟರು. ಜಿ.ಕೆ. ವೆಂಕಟೇಶ್. ಹದಿನೈದು ನಿಮಿಷದ ನಂತರ ಅವರಿಗೆ ಕನಸಿನಲ್ಲಿ ಯಾವುದೋ ಒಂದು ಟ್ಯೂನ್ ಕೈ ಹಿಡಿಯಿತು. ತಕ್ಷಣ ಮೇಲೆದ್ದವರೇ, ಅಲ್ಲಿದ್ದ ಚಿ. ಉದಯಶಂಕರ್ಗೆ ಟ್ಯೂನ್ ಕೇಳಿಸಿ-`ಶಂಕರ್, ಇದಕ್ಕೆ ಹೊಂದಿಕೆಯಾಗುವಂತೆ ಒಂದು ಡ್ಯೂಯೆಟ್ ಸಾಂಗ್ ಬರೆದುಕೊಡಿ’ ಎಂದರು.
`ಸರಿ’ ಎಂದ ಉದಯಶಂಕರ್, ಮತ್ತೊಮ್ಮೆ ಟ್ಯೂನ್ ಕೇಳಿಸಿಕೊಂಡು ಒಂದು ಹಾಡು ಬರೆದುಕೊಟ್ಟರು. ಅದನ್ನು ಒಮ್ಮೆ ಮೇಲಿಂದ ಕೆಳಕ್ಕೆ ನೋಡಿದ ಜಿ.ಕೆ.ವಿ- `ಇದು ಸುಮಾರಾಗಿದೆ ಕಣ್ರಿ. ಬೇರೊಂದು ಕೊಡಿ’ ಅಂದರಂತೆ. ಆಗಲೂ `ಸರಿ’ ಎಂದ ಉದಯಶಂಕರ್-ಇನ್ನೊಂದು ಹಾಡು ಬರೆದುಕೊಟ್ಟರು. ಉಹುಂ, ಅದೂ ಕೂಡ ಜಿ.ಕೆ. ವೆಂಟಕೇಶ್ಗೆ ಒಪ್ಪಿಗೆಯಾಗಲಿಲ್ಲ. ಅವರು `ಮತ್ತೊಂದು ಬೇಕು’ ಅಂದರು. ಕಡೆಗೆ ಉದಯಶಂಕರ್ ಐದು ಹಾಡುಗಳನ್ನು ಬರೆದಿಟ್ಟು, ನಿಮಗೆ ಇಷ್ಟವಾದದ್ದು ಬಳಸಿಕೊಳ್ಳಿ ಸಾರ್ ಎಂದರಂತೆ. ಸ್ವಾರಸ್ಯವೆಂದರೆ -ಐದು ಹಾಡುಗಳನ್ನೂ ಜಿ.ಕೆ. ವೆಂಕಟೇಶ್ ಒಪ್ಪಲಿಲ್ಲವಂತೆ. ಆಗ ಉದಯಶಂಕರ್ ತಮಾಷೆಯಾಗಿ-`ಇದ್ಯಾಕೋ ಸರಿ ಹೋಗ್ತಾ ಇಲ್ಲ. ಅಲ್ಲ ಸಾರ್, ನಿಮಗೆ ಆ ಟ್ಯೂನ್ ಕನಸಿನಲ್ಲಿ ಹೊಳೆದದ್ದು ತಾನೆ? ಅದಕ್ಕೆ ಹೊಂದಿಕೆಯಾಗಬೇಕು ಅಂದ್ರೆ ನನಗೆ ಹಾಡು ಕೂಡ ಕನಸಿನಲ್ಲೇ ಹೊಳೆಯಬೇಕು. ಆದ್ರೆ ಹಾಗೆ ಆಗೋದಿಲ್ಲ. ನಾನೇನಾದ್ರೂ ಮಲಗಿದ್ರೆ ಮೊದಲು ನಿದ್ರೆ ಬರುತ್ತೆ. ಆಮೇಲೆ ಗೊರಕೆ ಬರುತ್ತೆ’ ಎಂದು ನಕ್ಕರಂತೆ.
ಈ ಮಾತು ಕೇಳಿದ ನಂತರ ಕೂಡ ಜಿ.ಕೆ. ವೆಂಕಟೇಶ್ದು ಅದೇ ಹಳೆಯ ರಾಗ. ಈಗ ಬರೆದಿರುವ ಹಾಡುಗಳ ಬಗ್ಗೆ ನಂಗೆ ಸಮಾಧಾನ ಇಲ್ಲ. ಬೇರೆಯದು ಬರೆದುಕೊಡಿ ಸ್ವಾಮಿ….’
ಈ ಮಾತು ಕೇಳಿ ಜಿ.ಕೆ. ವೆಂಕಟೇಶ್ ಅವರು ಒಪ್ಪುವಂತಹ ಹಾಡು ಬರೆಯುವುದು ಹೇಗೆ ಎಂಬ ಯೋಚನೆಗೆ ಬಿದ್ದ ಉದಯಶಂಕರ್, ತಮ್ಮ ಎಂದಿನ ತಮಾಷೆ ಧಾಟಿಯಲ್ಲೇ-`ಅಮ್ಮಾ ಶಾರದಾಂಬೆ, ಈ ಕ್ಷಣದ ಮಟ್ಟಿಗೆ ನನಗೆ ಬೇರೇನೂ ಬೇಡ. ಸ್ವಲ್ಪ ಹೊತ್ತು ನೀನು ನನ್ನೊಂದಿಗಿದ್ದರೆ ಅಷ್ಟೇ ಸಾಕು’ ಅಂದರಂತೆ. ಹೀಗೆ ದೇವರನ್ನು ತಮಾಷೆಯಾಗಿ ಪ್ರಾರ್ಥಿಸಿಕೊಂಡ ಒಂದೆರಡು ನಿಮಿಷದ ನಂತರ-ಅರೆ, ಈಗ ಪ್ರಾರ್ಥಿಸಿದ ಸಾಲು ಬಳಸಿಕೊಂಡೇ ಒಂದು ಡ್ಯೂಯೆಟ್ ಸಾಂಗ್ ಬರೆಯಬಹುದಲ್ಲ ಅನ್ನಿಸಿತಂತೆ. ತಕ್ಷಣವೇ `ಬೇರೆ ಏನೂ ಬೇಡ ಎಂದಿಗೂ ನೀನು ನನ್ನವಳಾಗು…’ ಎಂದು ಬರೆದುಬಿಟ್ಟರು ಉದಯಶಂಕರ್. ನಂತರ ಅದಕ್ಕೆ `ಚಿನ್ನಾ ನಾ ಕೇಳೆನು’ ಎಂದು ಟ್ವಿಸ್ಟ್ ನೀಡಿ- `ಹೊಸಾ ಪಲ್ಲವಿ ರೆಡಿಯಾಗಿದೆ ತಗೊಳ್ಳಿ ಸಾರ್’ ಎಂದು ಕೊಟ್ಟೇಬಿಟ್ಟರು.
ಹೊಸ ಪಲ್ಲವಿ ನೋಡಿದ್ದೇ ಜಿ.ಕೆ. ವೆಂಕಟೇಶ್ರ ಕಂಗಳು ಮಿನುಗಿದವು. `ವೆರಿಗುಡ್. `ಇದು ಬಹಳ ಚೆನ್ನಾಗಿದೆ’ ಎಂದವರೇ, ಈ ಹಿಂದೆ ಉದಯಶಂಕರ್ ಬರೆದುಕೊಟ್ಟಿದ್ದ ಐದು ಹಾಡುಗಳಿಂದ ಕೆಲವೊಂದು ಸಾಲುಗಳನ್ನು ಆಯ್ದುಕೊಂಡು ಅಲ್ಪ ಸ್ವಲ್ಪ ಬದಲಾಯಿಸಿ ಒಂದು ಹಾಡಿಗೆ ಸಾಕಾಗುವಷ್ಟು ಸಾಲುಗಳನ್ನು ಹೊಂದಿಸಿಯೇಬಿಟ್ಟರು. ಉದಯಶಂಕರ್ ಕೂಡ ಈ ಬದಲಾವಣೆಗೆ ಒಪ್ಪಿದರು. ಆ ಹಾಡನ್ನು ಡಾ.ರಾಜ್ಕುಮಾರ್-ಸುಲಕ್ಷಣರ ಅಭಿನಯದಲ್ಲಿ ಚಿತ್ರಿಸಲಾಯಿತು. ರಾಜ್ಕುಮಾರ್-ವಾಣಿಜಯರಾಂರ ಮಧುರ ಕಂಠದಲ್ಲಿ ಆ ಹಾಡು ಸೂಪರ್ ಹಿಟ್ ಗೀತೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತು. ಹೌದು. ಕಾಡುವ ಹಾಡುಗಳೇ ಹಾಗೆ. ಅವು ಗೀತೆರಚನೆಕಾರರ ಪ್ರತಿಭೆಯನ್ನು ಮಾತ್ರವಲ್ಲ; ಸಂಗೀತ ನಿರ್ದೇಶಕರ ವ್ಯಕ್ತಿತ್ವದ ಸ್ವಾರಸ್ಯವನ್ನೂ ಹೇಳಿಬಿಡುತ್ತವೆ-ಮಕ್ಕಳಂಥ ಮುದ್ ಮುದ್ದು ಭಾಷೆಯಲ್ಲಿ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: