ಒಂದು ಸೋಲು, ಒಂದು ಅಪಮಾನ, ಒಂದು ನಿರಾಸೆ, ಒಂದು ಸಂಕಟ, ಏನನ್ನೋ ಕಳೆದುಕೊಂಡ ದುಃಖ ಜತೆಯಾದಾಗ ಅಪ್ಪ ನೆನಪಾಗಿಬಿಡುತ್ತಾನೆ. ಇಂಥ ಸಂದರ್ಭದಲ್ಲೆಲ್ಲ ಮಕ್ಕಳು, ಬಿಟ್ಟ ಬಾಣದಂತೆ ಓಡಿ ಹೋಗಿ ಅಪ್ಪನನ್ನ ತಬ್ಬಿಕೊಳ್ಳುತ್ತವೆ. ಎಂಥ ನೋವೇ ಸಮಸ್ಯೆಯೇ ಇದ್ದರೂ ಅದಕ್ಕೆಲ್ಲ ಅಪ್ಪ ಒಂದು ಪರಿಹಾರ ಹೇಳಿಯೇ ತೀರುತ್ತಾನೆ ಎಂಬ ನಂಬಿಕೆಯೇ ಮಕ್ಕಳ ಇಂಥ ವರ್ತನೆಗೆ ಕಾರಣವಾಗಿರುತ್ತದೆ.
ಇದೇ ಸಂದರ್ಭದಲ್ಲಿ ಅಪ್ಪಂದಿರ ಸ್ಥಿತಿಯನ್ನೂ ಹೇಳಿಬಿಡಬೇಕು. ಮಗ / ಮಗಳು ಓಡಿಬಂದು ತಬ್ಬಿಕೊಂಡು ಬಿಕ್ಕಳಿಸುತ್ತಿರುವುದು-ಅಜ್ಜಿ ಯ ಸಾವಿಗೋ ಅಮ್ಮನ ಪ್ರಜ್ಞಾ ಹೀನ ಸ್ಥಿತಿಗೋ; ಮುದ್ದಿನ ನಾಯಿ ಸತ್ತು ಹೋಗಿದ್ದಕ್ಕೋ ಆಗಿರಬಹುದು. ಇಂಥ ಸಂದರ್ಭದಲ್ಲೆಲ್ಲ ಮಕ್ಕಳಿಗೆ ಆಗಿರುತ್ತದೆ ನೋಡಿ; ಅಷ್ಟೇ -ಅಥವಾ ಅದಕ್ಕಿಂತ ಹೆಚ್ಚಿನ ನೋವು ಅಪ್ಪನಿಗೂ ಆಗಿರುತ್ತದೆ. ಆದರೆ, ಆತ ಮಕ್ಕಳ ಮುಂದೆ ಅಳುವಂತಿಲ್ಲ. ಬಿಕ್ಕಳಿಸುವಂತಿಲ್ಲ. ಕುಸಿದು ಬೀಳುವಂತಿಲ್ಲ. ಕಾಣದ ದೇವರನ್ನು ಶಪಿಸುವಂತೆಯೂ ಇಲ್ಲ. ಯಾಕೆಂದರೆ-ಅಪ್ಪ ಅನ್ನಿಸಿಕೊಂಡವನೇ ಅಳಲು ನಿಂತರೆ ಮಕ್ಕಳ ಧೈರ್ಯದ ಕೋಟೆಯೇ ಕುಸಿದು ಬೀಳುತ್ತದೆ. ಹಾಗಾಗಿ ಎಲ್ಲ ಮನೆಯ ಅಪ್ಪಂದಿರೂ ಮಕ್ಕಳ ಮುಂದೆ, ಎಂಥ ಸಂಕಟದ ಸಂದರ್ಭದಲ್ಲೂ ತುಟಿಕಚ್ಚಿ ಅಳುನುಂಗಿಕೊಂಡೇ ಬದುಕುತ್ತಾರೆ. ಆದರೆ, ಮನೆಮಂದಿಯೆಲ್ಲ ಕೆಲವೇ ನಿಮಿಷದ ಮಟ್ಟಿಗೆ ತಮ್ಮಿಂದ ಹತ್ತು ಹೆಜ್ಜೆ ದೂರ ಹೋದರೆ….
****
ಸಂಕಟದ ಸಂದರ್ಭದಲ್ಲಿ ಅಪ್ಪ-ಮಕ್ಕಳು ಹೇಗಿರುತ್ತಾರೆ ಎಂಬುದಕ್ಕೆ ಪುಟ್ಟ ಸಾಕ್ಷಿಯಾಗಿ ಈ ಚಿತ್ರ -ಭಾರತದ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅಂಗರಕ್ಷಕರ ಗುಂಡೇಟಿಗೆ ಬಲಿಯಾದರಲ್ಲ? ಆ ನಂತರದಲ್ಲಿ ಪುಟ್ಟ ಬಾಲಕ ರಾಹುಲ್ ಗಾಂಧಿ, ಸುಯ್ಯನೆ ಓಡಿ ಬಂದು ಅಪ್ಪ ರಾಜೀವ್‌ಗಾಂಧಿಯನ್ನು ತಬ್ಬಿಹಿಡಿದು ಬಿಕ್ಕಳಿಸುತ್ತಿದ್ದಾನೆ. ರಾಜೀವ್, ತುಂಬ ಕಷ್ಟದಿಂದ ಅಳುವನ್ನು ತಡೆ ಹಿಡಿದು ಮಗನನ್ನು ಸಂತೈಸುತ್ತಿದ್ದಾರೆ.
ಬಿಡಿ, ಈ ಚಿತ್ರದಲ್ಲಿ ಕಾಣುತ್ತಿರುವ ಭಾವನೆಗಳನ್ನು ವಿವರಿಸಲು ಪದಗಳಿಲ್ಲ…..
ನಿಮ್ಮದೊಂದು ಉತ್ತರ