ಸಿರಿಬಾಲ್ಯದ ಅನುಭವವೆಲ್ಲಾ ಹಾಡಾಗಿ ಅರಳಿತು ನೋಡಾ…

chinnarimutta

ಚಿತ್ರ: ಚಿನ್ನಾರಿ ಮುತ್ತ. ಗೀತೆರಚನೆ : ಎಚ್.ಎಸ್. ವೆಂಕಟೇಶಮೂರ್ತಿ
ಸಂಗೀತ: ಸಿ. ಅಶ್ವತ್ಥ್, ಗಾಯನ : ರೇಖಾ
ರೆಕ್ಕೆ ಇದ್ದರೆ ಸಾಕೇ
ಹಕ್ಕಿಗೆ ಬೇಕು ಬಾನು
ಬಯಲಲಿ ತೇಲುತ ತಾನು
ಮ್ಯಾಲೆ ಹಾರೋಕೆ
ಕಾಲೊಂದಿದ್ದರೆ ಸಾಕೇ
ಚಿಗರೆಗೆ ಬೇಕು ಕಾನು
ಗಾಳಿಯ ಮೇಲೆ ತಾನು
ಜಿಗಿದು ಓಡೋಕೆ // ಪ //

ಹೂವೊಂದಿದ್ದರೆ ಸಾಕೇ
ಬ್ಯಾಡವೆ ಗಾಳಿ
ನೀವೇ ಹೇಳಿ
ತಂಪಬೀರೋಕೆ
ಮುಖವೊಂದಿದ್ದರೆ ಸಾಕೇ
ದುಂಬಿಯ ತಾವ
ಬ್ಯಾಡವೆ ಹೂವ
ಜೇನು ಹೀರೋಕೆ ? // ೧ //

ನೀರೊಂದಿದ್ದರೆ ಸಾಕೇ
ಬ್ಯಾಡವೆ ಹಳ್ಳ
ಬಲ್ಲವ ಬಲ್ಲ
ತೊರೆಯು ಹರಿಯೋಕೆ
ಮೋಡ ಇದ್ದರೆ ಸಾಕೆ
ಬ್ಯಾಡವೆ ಭೂಮಿ
ಹೇಳಿ ಸ್ವಾಮಿ,
ಮಳೆಯು ಸುರಿಯೋಕೆ // ೨ //

ಕಣ್ಣೊಂದಿದ್ದರೆ ಸಾಕೇ
ಬ್ಯಾಡವೆ ಮಂದಿ
ಕಣ್ಣಿನ ಮುಂದೆ
ನಿಮಗೆ ಕಾಣೋಕೆ
ಕೊರಳೊಂದಿದ್ದರೆ ಸಾಕೆ
ಬ್ಯಾಡವೆ ಹಾಡು,
ಎಲ್ಲರ ಜೋಡು
ಕೂಡಿ ಹಾಡೋಕೆ // ೩ //
ಪದ್ಯ ಬರೆಯುವುದು ಸುಲಭ. ಆದರೆ ಮಕ್ಕಳ ಪದ್ಯ ಬರೆಯುವುದು ಕಷ್ಟ. ಹಾಗೆಯೇ, ಪ್ರಯತ್ನ ಮಾಡಿದರೆ ಸಿನಿಮಾಗಳಿಗೆ ಡ್ಯುಯೆಟ್ ಸಾಂಗ್ ಬರೀಬಹುದು. ಆದರೆ, ಮಕ್ಕಳ ಹಾಡು ಬರೆಯುವುದು ಸಖತ್ ಕಷ್ಟ ; ಇಂಥದೊಂದು ಮಾತು-ಸಾಹಿತ್ಯ ಹಾಗೂ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ. ಆದರೆ, ಅಂಥ ನಂಬಿಕೆಗಳೆಲ್ಲ ಸುಳ್ಳು ಎಂದು ತೋರಿಸಿಕೊಟ್ಟವರು ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ. ೧೯೯೦ರ ದಶಕದಲ್ಲಿ `ಚಿನ್ನಾರಿಮುತ್ತ’ ಚಿತ್ರಕ್ಕೆ ಅವರು ಬರೆದ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದ್ದವು. ಅಷ್ಟೇ ಅಲ್ಲ, ಪ್ಲಾಟಿನಂ ಡಿಸ್ಕ್ ಗೌರವ ಕೂಡ `ಚಿನ್ನಾರಿಮುತ್ತ’ದ ಹಾಡುಗಳಿಗೆ ಲಭಿಸಿತು. ಆ ಸಿನಿಮಾದ `ರೆಕ್ಕೆ ಇದ್ದರೆ ಸಾಕೆ/ ಹಕ್ಕಿಗೆ ಬೇಕು ಬಾನು/ ಬಯಲಲಿ ತೇಲುತ ತಾನು/ ಮ್ಯಾಲೆ ಹಾರೋಕೆ’ ಎಂಬ ಗೀತೆಗೆ ಕುಣಿಯದ ಮಗುವಿದ್ದರೆ; ತಲೆದೂಗದ ಪ್ರೇಕ್ಷಕನಿದ್ದರೆ ತೋರಿಸಿ ನೋಡೋಣ?
ಎಲ್ಲರಿಗೂ ಗೊತ್ತಿರುವಂತೆ, ಚಿನ್ನಾರಿ ಮುತ್ತ ಸಿನಿಮಾಕ್ಕೆ ಹಾಡು ಬರೆಯುವ ವೇಳೆಗಾಗಲೇ ಎಚ್.ಎಸ್.ವಿ ಕವಿಯಾಗಿ ದೊಡ್ಡ ಹೆಸರು ಮಾಡಿದ್ದರು. ಹಾಗಿರುವಾಗ, ದಿಢೀರನೆ ಕ್ಷೇತ್ರ ಬದಲಿಸಿ ಸಿನಿಮಾದ ಹಾಡು ಬರೆಯಲು ಸಮಸ್ಯೆಯಾಗಲಿಲ್ಲವೆ? `ಚಿನ್ನಾರಿ ಮುತ್ತ’- ಸಂಪೂರ್ಣವಾಗಿ ಹಳ್ಳಿಯಲ್ಲಿ ನಡೆಯುವ ಕಥೆ. ಅಂಥ ಸಿನಿಮಾದ ಸನ್ನಿವೇಶಕ್ಕೆ ಈ ಬೆಂಗಳೂರಿನಲ್ಲೇ ಕುಳಿತು ಹಾಡು ಬರೆದರೂ ನೇಟಿವಿಟಿ ಉಳಿಸಿಕೊಳ್ಳಲು ಎಚ್.ಎಸ್.ವಿ ಯವರಿಗೆ ಹೇಗೆ ಸಾಧ್ಯವಾಯಿತು? `ಮುತ್ತ’ನಂಥ ಹುಡುಗನನ್ನು, ಅವರು ಹೇಗೆ ಕಲ್ಪಿಸಿಕೊಂಡರು? ಅವನ ಹಾಡು-ಮಾತು ಹೀಗೇ ಇರುತ್ತೆ ಎಂದು ಹೇಗೆ ಅಂದಾಜು ಮಾಡಿಕೊಂಡರು? ಇಂಥದೇನೂ ನಡೆಯಲೇ ಇಲ್ಲ ಎಂದಾದರೆ, ಅಂಥ ಚೆಂದಚೆಂದದ ಹಾಡುಗಳನ್ನು ಅವರು ಬರೆದದ್ದಾದರೂ ಹೇಗೆ? ಇಂಥವೇ ಪ್ರಶ್ನೆಗಳೊಂದಿಗೆ ಎದುರು ನಿಂತಾಗ ಎಚ್.ಎಸ್.ವಿ ಒಮ್ಮೆ ಮೆಲುವಾಗಿ ನಕ್ಕು ಹೇಳಿದರು:
ಮೊದಲು, ನಿರ್ದೇಶಕ ನಾಗಾಭರಣ `ಚಿನ್ನಾರಿಮುತ್ತ’ದ ಕಥೆ ಹೇಳಿದರು. ನಂತರ, ಚಿತ್ರಕಥೆ -ಸಂಭಾಷಣೆ, ಹಾಡುಗಳು ನಿಮ್ಮ ಜವಾಬ್ದಾರಿ ಸಾರ್. ಬರೆದುಕೊಡಿ’ ಅಂದರು. ಒಪ್ಪಿಕೊಂಡೆ. ಮುಂದೆ, ಹಾಡುಗಳು ಯಾವ ಯಾವ ಸಂದರ್ಭದಲ್ಲಿ ಬರಬೇಕು ಎಂಬುದರ ಚರ್ಚೆ ಶುರುವಾಯ್ತು. ಜತೆಯಲ್ಲಿ ನಾಗಾಭರಣ, ಸಂಗೀತ ನಿರ್ದೇಶಕ ಅಶ್ವತ್ಥ್ ಇದ್ದರು.
`ಚಿನ್ನಾರಿ ಮುತ್ತ’ ಹಳ್ಳೀರಿರ್‍ತಾನೆ. ಅವನ ಜತೆಗೆ ಚಿಕ್ಕ ಮಕ್ಕಳ ಗುಂಪಿರುತ್ತೆ. ಅವರೆಲ್ಲ ಖುಷಿಯಿಂದ ಆಟವಾಡಿಕೊಂಡು ನದೀತೀರದ ಬಳಿ ಬರುತ್ತಾರೆ. ಅಲ್ಲಿ ಹಕ್ಕಿಗಳ ಚಿಲಿಪಿಲಿ, ನದಿಯ ಜುಳುಜುಳು ಕೇಳಿಸುತ್ತೆ ಅದೇ ಕಾರಣಕ್ಕೆ ಮಕ್ಕಳ ಖುಷಿ ದುಪ್ಪಟ್ಟಾಗುತ್ತದೆ. ಮುಂದೆ ಅವೇ ಮಕ್ಕಳು ಹಸುಗಳನ್ನು ಹೊಡೆದುಕೊಂಡು ಬೆಟ್ಟಕ್ಕೆ ಹೋಗ್ತಾರೆ. ಅವರೆಲ್ಲ ತಲೆ ಮೇಲೆ ಕುಪ್ಪೆ ಹಾಕ್ಕೊಂಡು, ಕೈಲಿ ಒಂದು ಕೋಲು ಹಿಡ್ಕೊಂಡು ಹೋಗುವ ಸಂದರ್ಭದಲ್ಲಿ ಹಾಡು ಬರಬೇಕು…’
ಹೀಗೆ ಸಂದರ್ಭ ವಿವರಿಸಿದರು ಸಿ. ಅಶ್ವತ್ಥ್-ನಾಗಾಭರಣ- ಈ ಸಂದರ್ಭಕ್ಕೆ ಹಾಡು ಬರೀಬೇಕು ಎಂದುಕೊಂಡಾಗ ನನ್ನ ಸಿರಿ ಬಾಲ್ಯವೇ ಕಣ್ಮುಂದೆ ಬಂತು. ಈಗ ದಾವಣಗೆರೆ ಜಿಲ್ಲೆಯಲ್ಲಿರುವ ಹೊದಿಗೆರೆ ನಮ್ಮೂರು. ಚಿಕ್ಕಂದಿನಲ್ಲಿ ನಾನೂ ಕೆರೆಯ ಬಯಲಿನ ತನಕ ಹಸುಗಳನ್ನ ಹೊಡೆದುಕೊಂಡು ಹೋಗ್ತಿದ್ದೆ. ನಂತರ, ದನ ಮೇಯಿಸಲು ಇದ್ದ ಜನ ಅವುಗಳನ್ನು ಕಾಡಿಗೆ ಹೊಡ್ಕೊಂಡು ಹೋಗ್ತಿದ್ರು. ಸಂಜೆ ಮತ್ತೆ ಕೆರೆ ಬಯಲಿಗೆ ಹೋಗಿ ಹಸುಗಳನ್ನು ಮನೆಗೆ ಹೊಡ್ಕೊಂಡು ಬರ್‍ತಿದ್ದೆ. ನನ್ನ ಜೊತೆಗೆ ನನ್ನದೇ ವಾರಿಗೆಯ ಹುಡುಗರಿರ್‍ತಾ ಇದ್ರು. ಆಗ ದಾರಿಯುದ್ದಕ್ಕೂ ಕಾಣುತ್ತಿದ್ದ ಕೆರೆ, ಬೆಟ್ಟ, ಹಕ್ಕಿ, ಹಳ್ಳ ಎಲ್ಲವೂ ನಮಗೆ ದೊಡ್ಡ ಬೆರಗೇ ಆಗಿದ್ದವು. ನಾವು ಆಗ ಎಲ್ಲವನ್ನೂ ಮರೆತು ಥೈಥೈಥೈ ಕುಣಿಯುತ್ತಿದ್ದೆವು.
ಹಾಡು ಬರೆಯಲು ಕುಳಿತಾಗ ಈ ನನ್ನ ಮಧುರ ಬಾಲ್ಯವೇ ಜತೆಯಾಯಿತು. ಬರೀತಾ ಬರೀತಾ ನಾನೇ ಚಿನ್ನಾರಿ ಮುತ್ತ ಆಗಿಬಿಟ್ಟೆ.
ನನ್ನ ಅನುಭವವನ್ನೇ, ಬಾಲ್ಯದ ನನ್ನ ಸಂತೋಷವನ್ನೇ ಹಾಡಿನ ರೂಪದಲ್ಲಿ ಬರೆದೆ. ಅದೇ ಸಂದರ್ಭಕ್ಕೆ, ಗ್ರಾಮೀಣ ಭಾಗದಿಂದ ದಿಢೀರನೆ ನಗರಕ್ಕೆ ಬರುವ ಮಕ್ಕಳು ಪುಟ್ಟ ಹಕ್ಕಿಗಳಿದ್ದ ಹಾಗೆ. ಅವರ ಪ್ರತಿಭಾ ವಿಕಾಸಕ್ಕೆ ಒಂದು ವೇದಿಕೆ ಒದಗಿಸಿಕೊಡಬೇಕು. ಆಗ ಮಾತ್ರ ಅವರ ಪ್ರತಿಭೆ ಬೆಳಕಿಗೆ ಬರುತ್ತೆ ಅನ್ನೋದನ್ನು ಹೇಳಬೇಕು ಅನ್ನಿಸ್ತು. `ಹಕ್ಕಿ’ ಅಂದಾಕ್ಷಣ ಮಕ್ಕಳ ಮನಸ್ಸಿಗೆ ತುಂಬ ಖುಷಿಯಾಗುತ್ತೆ ನೋಡಿ; ಅದನ್ನೇ ಹಳ್ಳಿ ಮಕ್ಕಳು ಎಂಬ ರೂಪಕವಾಗಿ ಇಟ್ಟುಕೊಂಡು ಹಾಡು ಬರೆದ್ರೆ ಚನ್ನಾಗಿರುತ್ತೆ ಅನ್ನಿಸ್ತು….
ಹೀಗೆಲ್ಲ ಯೋಚಿಸ್ತಾ ಇದ್ದಾಗಲೇ-ಮಕ್ಕಳಿಗೆ ಪ್ರತಿಯೊಂದು ಸಂದರ್ಭದಲ್ಲೂ ಪ್ರಶ್ನೆ ಕೇಳಿ; ತಾವೇ ಉತ್ತರವನ್ನೂ ಹೇಳಿ ಅಭ್ಯಾಸ ವಿರ್‍ತದಲ್ಲ? ಆ ಪ್ರಶ್ನೋತ್ತರದ ಧಾಟಿಯಲ್ಲೇ ಹಾಡು ಬರೆಯೋಣ ಅನ್ನಿಸ್ತು. ಈ ನೆಪದಲ್ಲೇ- ಹಾರಬೇಕು ಅಂದರೆ ರೆಕ್ಕೆ ಇದ್ದರೆ ಮಾತ್ರ ಸಾಲದು; ಆಕಾಶ ಕೂಡ ಇರಬೇಕು. ತಂಪುಬೀರಲು ಹೂವಿದ್ದರೆ ಸಾಲದು, ಜತೆಗೆ ಗಾಳಿಯೂ ಇರಬೇಕು…. ಅಂದರೆ, ಬರಿಯ ಪ್ರತಿಭೆ ಇದ್ದರೆ ಮಾತ್ರ ಸಾಲದು, ಅದನ್ನು ಬೆಳಕಿಗೆ ತರುವ ಸೌಕರ್ಯಗಳನ್ನೂ ಒದಗಿಸಬೇಕು ಎಂದು ಬರೀತಾ ಹೋದೆ. ನಾನೇ ಚಿನ್ನಾರಿ ಮುತ್ತನಾಗಿದ್ದೆ ಅಂದೆನಲ್ಲ? ಹಾಗಾಗಿ ಹಾಡೆಂಬೋ ಹಾಡು ಕೈ ಹಿಡಿದು ಬರೆಸಿಕೊಂಡಿತು. ಈಗ ನೋಡಿದರೆ, ನನ್ನನ್ನೂ ಮೀರಿ ಅದು ಜನಪ್ರಿಯವಾಗಿಬಿಟ್ಟಿದೆ…’ ಎಂದು ಮಾತು ನಿಲ್ಲಿಸಿದರು ಎಚ್.ಎಸ್.ವಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: