‘ವೈದೇಹಿ ಏನಾದಳು…’ ಗೀತೆಯ ಹಿಂದೆ ಟೆಲಿಗ್ರಾಂ ಕೊಟ್ಟವನ ಕೈಚಳಕವಿತ್ತು!

ll1

ಚಿತ್ರ: ದಶಾವತಾರ. ಗೀತೆ ರಚನೆ: ಜಿ.ವಿ. ಅಯ್ಯರ್.
ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ : ಪಿ.ಬಿ. ಶ್ರೀನಿವಾಸ್.

ಗೋದಾವರೀ ದೇವಿ ಮೌನವಾಂತಿಹೆ ಏಕೆ
ವೈದೇಹಿ ಏನಾದಳೂ ವೈದೇಹಿ ಏನಾದಳೂ ?
ಪ್ರೀತಿ ಅಮೃತವನೆರೆದು ಜೀವ ಜ್ಯೋತಿಯ ಬೆಳಗಿ
ನೀತಿ ನೇಹದ ದಾರಿ ತೋರಿದವಳು
ವೈದೇಹಿ ಏನಾದಳೂ, ವೈದೇಹಿ ಏನಾದಳೂ?
*
ಮಾಮರದ ಮರೆಯಲ್ಲಿ ಕುಳಿತಿರುವ ಕೋಗಿಲೆಯೆ
ನಿನ್ನ ದನಿ ಜೊತೆಯಲ್ಲೆ ತನ್ನ ದನಿ ಸೇರಿಸುತ
ಪ್ರೇಮಗಾನದ ಸುಧೆಯ ಹರಿಸಿದವಳೂ..
ವೈದೇಹಿ ಏನಾದಳೂ, ವೈದೇಹಿ ಏನಾದಳೂ?
*
ಮಲ್ಲೆ ಮಲ್ಲಿಗೆ ಜಾಜಿ ಸಂಪಿಗೆಯ ಹೂಗಳೇ
ಎಲ್ಲ ನಗು ಮೊಗವೆಲ್ಲ ತನ್ನೊಡನೆ ನಗಲೆಂದು
ಶಿರದಲ್ಲಿ ಧರಿಸಿದವಳೂ….
ವೈದೇಹಿ ಏನಾದಳೂ, ವೈದೇಹಿ ಏನಾದಳೂ?
*
ಮಸಣ ಮೌನದೆ ಸುಳಿವಾ ವಿಪಿನವಾಸಿಗಳೇ
ನೀವು ಧರಣಿ ಜಾತೆಯ ಕಾಣಿರಾ
ನೇಸರನೆ ನೀನೇಕೆ ಮೋರೆ ಮರೆ ಮಾಡುತಿಹೆ
ಸೀತೆ ಇರುವನು ತೋರೆಯಾ….
ವೈದೇಹಿ ಏನಾದಳೂ ವೈದೇಹಿ ಏನಾದಳೂ?

ಕನ್ನಡ ಚಿತ್ರರಂಗಕ್ಕೆ ಕೋಡು ಮೂಡಿಸಿದವರು ಜಿ.ವಿ. ಅಯ್ಯರ್ ಆತ, ಕನ್ನಡ ಚಿತ್ರರಂಗದುದ್ದಕ್ಕೂ ಚಾಚಿನಿಂತ ವ್ಯಕ್ತಿ. ೧೯೪೩ರಲ್ಲಿ, ಅಂದರೆ ರಾಜ್ಕುಮಾರ್ ಚಿತ್ರರಂಗ ಪ್ರವೇಶಿಸುವುದಕ್ಕೆ ೧೫ ವರ್ಷಗಳ ಹಿಂದೆಯೇ ‘ರಾಧಾರಮಣ’ ಚಿತ್ರದ ಮೂಲಕ ನಟನಾಗಿ ಬೆಳ್ಳಿತೆರೆಗೆ ಬಂದವರು ಅಯ್ಯರ್. ಇಂಥ ಅಯ್ಯರ್ಗೆ ದೊಡ್ಡದೊಂದು ಬ್ರೇಕ್ ಸಿಕ್ಕಿದ್ದು ರಾಜ್ಕುಮಾರ್ ಅಭಿನಯದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ದ ಹಿರಿಯ ಪೂಜಾರಿಯ ಪಾತ್ರದಿಂದ.
ಮುಂದೆ -ಹರಿಭಕ್ತ, ಮಹಾಕವಿ ಕಾಳಿದಾಸ, ಓಹಿಲೇಶ್ವರ, ಜಗಜ್ಯೋತಿ ಬಸವೇಶ್ವರ, ಸದಾರಮೆ ಮುಂತಾದ ಚಿತ್ರಗಳಲ್ಲಿ ಅಯ್ಯರ್ ಅಭಿನಯಿಸಿದರು. ೧೯೫೬ರಲ್ಲಿ ತೆರೆಕಂಡ ‘ಓಹಿಲೇಶ್ವರ’ಕ್ಕೆ ಸಂಭಾಷಣೆ ಬರೆದ ಅಯ್ಯರ್, ಅದಾಗಿ ನಾಲ್ಕು ವರ್ಷಗಳ ನಂತರ-ಅಂದರೆ ೧೯೬೦ರಲ್ಲಿ ತೆರೆಕಂಡ ‘ರಣಧೀರ ಕಂಠೀರವ’ಕ್ಕೆ ಹಾಡು ಬರೆದರು. ಅಂದರೆ, ಚಿತ್ರರಂಗ ಪ್ರವೇಶಿಸಿದ ೧೭ ವರ್ಷಗಳ ನಂತರ ಅಯ್ಯರ್ ಗೀತ ರಚನೆಕಾರರಾದರು.
ಕಡೆಕಡೆಯ ದಿನಗಳಲ್ಲಿ ಶಂಕರಾಚಾರ್ಯ, ಮಧ್ವಾಚಾರ್ಯ, ವಿವೇಕಾನಂದ ಎಂಬ ಸಂಸ್ಕೃತ ಚಿತ್ರಗಳನ್ನು ತೆಗೆದು, ಯಾರಿಗೂ ಅರ್ಥವಾಗದೇ ಹೋದ ಅಯ್ಯರ್-‘ಬಾ ತಾಯೆ ಭಾರತಿಯೆ, ಭಾವ ಭಾಗೀರಥಿಯೆ’ ‘ಕನ್ನಡದಾ ಮಕ್ಕಳೆಲ್ಲ ಒಂದಾಗಿ ಬನ್ನಿ’, ‘ನಂಬಿದೆ ನಿನ್ನ ನಾದದೇವತೆಯೆ’, ‘ ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ….’ ಮುಂತಾದ ಗೀತೆಗಳನ್ನೂ ರಚಿಸಿದವರು ಎಂದರೆ ಹಲವರಿಗೆ ಅಚ್ಚರಿಯಾಗಬಹುದು. ಆದರೆ ಅದು ನಿಜ.
ಇಂಥ ಚೆಂದದ ಹಿನ್ನೆಲೆಯ ಅಯ್ಯರ್ರ ಅತ್ಯುತ್ತಮ ಗೀತೆ-‘ವೈದೇಹಿ ಏನಾದಳೊ…’ ದಶಾವತಾರ ಚಿತ್ರದ ಈ ಗೀತೆ ಸೀತೆಯನ್ನ ಕಳೆದುಕೊಂಡ ರಾಮನ ಅಳಲನ್ನು ಅರ್ಥವತ್ತಾಗಿ ಹೇಳುತ್ತದೆ. ಇಡೀ ಹಾಡು, ತನ್ನ ಪ್ರೀತಿಪಾತ್ರಳನ್ನು ಕಳೆದುಕೊಂಡ ಹುಲು ಮಾನವನೊಬ್ಬ ಎದೆ ಒಡೆದುಕೊಂಡು ಕೇಳುವಂತಿದೆ. ‘ವೈದೇಹಿ ಏನಾದಳೂ…..?’ ಅವಳು ಎಂಥವಳು: ‘ಪ್ರೀತಿ ಅಮೃತವನೆರೆದು ಐ ಜೀವ ಜ್ಯೋತಿಯ ಬೆಳಗಿ ಐ ನೀತಿ ನೇಹದ ಹಾದಿ ತೋರಿದವಳೂ… ಐ
ಅದಕ್ಕೆಂದೇ, ಇಂಥ ಬಾಳ ಗೆಳತಿಯನ್ನು ಕಳೆದುಕೊಂಡ ಶ್ರೀರಾಮನಿಗೆ, ಗೋದಾವರಿಯ ಜುಳುಜುಳು ನಿನಾದ ಕೂಡ ಕೇಳುತ್ತಿಲ್ಲ; ಆಕೆ ಮೌನವಾಗಿರುವಂತೆ ತೋರುತ್ತಿದೆ. ಅಂತೆಯೇ- ನೇಸರನೆ ನೀನೇಕೆ ಮೋರೆ ಮರೆ ಮಾಡುತಿಹೆ, ಸೀತೆ ಇರವನು ತೊರೆಯಾ ಎಂಬ ಮಾತಲ್ಲಿರುವ ಅರ್ತತೆ ಪ್ರೇಮಿಯೊಬ್ಬನ ಮನದ ಸಂಕಟವನ್ನು ಅರ್ಥವತ್ತಾಗಿ ತೆರೆದಿಟ್ಟಿದೆ.
****
ಸಾರ್ವಕಾಲಿಕ ಹಿಟ್ ಎಂದೇ ಕರೆಸಿಕೊಳ್ಳುವ ಇಂಥ ಮಧುರ ಗೀತೆ ಸೃಷ್ಟಿಯಾದದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರವಾಗಿ ಒಂದು ಚೆಂದ ಚೆಂದದ ಕತೆಯೇ ಇದೆ. ಅದು ಹೀಗೆ: ತಮ್ಮ ‘ವಿಕ್ರಂ ಪ್ರೊಡಕ್ಷನ್ಸ್ ‘ ಬ್ಯಾನರ್ನಲ್ಲಿ ‘ದಶಾವತಾರ’ ಚಿತ್ರ ನಿರ್ಮಿಸುವ ತರಾತುರಿಯಲ್ಲಿ ಬಿ.ಎಸ್. ರಂಗಾ ಅವರಿದ್ದರು. ಪೌರಾಣಿಕ ಚಿತ್ರಗಳ ನಿರ್ದೇಶನದಲ್ಲಿ ದೊಡ್ಡ ಹೆಸರು ಮಾಡಿದ್ದ ತೆಲುಗಿನ ಮೋಹನ್ ಎಂಬುವವರಿಗೆ ನಿರ್ದೇಶನದ ಹೊಣೆ ಹೊರಿಸಲಾಗಿತ್ತು. ಚಿತ್ರಕಥೆ-ಸಂಭಾಷಣೆ-ಹಾಡುಗಳನ್ನು ಬರೆಯುವುದರೊಂದಿಗೆ, ಸಹ ನಿರ್ದೇಶನದ ಜವಾಬ್ಧಾರಿಯೂ ಜಿ.ವಿ. ಅಯ್ಯರ್ರ ಹೆಗಲೇರಿತ್ತು. ಸೀತೆಯ ಪಾತ್ರವನ್ನು ತೆಲುಗಿನ ಪ್ರಖ್ಯಾತ ತಾರೆ ‘ ಜಮುನಾ’ ಅವರಿಂದ ಮಾಡಿಸಬೇಕೆಂಬ ಆಸೆ ರಂಗಾ ಅವರಿಗಿತ್ತು. ಏಕೆಂದರೆ, ಕೆಲ ದಿನಗಳ ಹಿಂದಷ್ಟೇ ತೆರೆಕಂಡಿದ್ದ ‘ಸಂಪೂರ್ಣ ರಾಮಾಯಣ’ ಚಿತ್ರದಲ್ಲಿ ಜಮುನಾ ಸೀತೆಯಾಗಿ ಮಿಂಚಿದ್ದರು. ಕನ್ನಡದಲ್ಲೂ ಆಕೆ ಮತ್ತೆ ಸೀತೆಯಾಗಿ ಕಾಣಿಸಿಕೊಂಡರೆ, ಸಿನಿಮಾ ಯಶಸ್ಸಿಗೆ ಅನುಕೂಲ ಎಂದೇ ರಂಗಾ ಲೆಕ್ಕ ಹಾಕಿದ್ದರು.
ಆದರೆ, ‘ದಶಾವತಾರ’ ಚಿತ್ರದಲ್ಲಿ ರಾಮಾಯಣದ ಕಥಾ ಭಾಗ ಚಿಕ್ಕದಿತ್ತು. ಹಾಗಾಗಿ ಚಿಕ್ಕ ಪಾತ್ರವನ್ನು ಪ್ರಖ್ಯಾತ ನಟಿ ಜಮುನಾ ಒಪ್ಪುತ್ತಾರಾ ಎಂಬ ಸಹಜ ಆತಂಕವೂ ರಂಗಾ ಅವರಿಗಿತ್ತು. ಆದದ್ದಾಗಲಿ, ಒಂದು ಕೈ ನೋಡಿಯೇ ಬಿಡೋಣ ಎಂದುಕೊಂಡು, ಈ ಕುರಿತು ಮಾತುಕತೆಗೆಂದು ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರನ್ನು ರಾಯಭಾರಕ್ಕಾಗಿ ಹೈದರಾಬಾದ್ಗೆ ಕಳಿಸಿದರು ರಂಗಾ. ಇತ್ತ ಕ್ಷಣ ಕ್ಷಣದ ಬೆಳವಣಿಗೆ ತಿಳಿಯುವ ಕೆಲಸವನ್ನು ಸಹ ನಿರ್ದೇಶಕ ಜಿ.ವಿ. ಅಯ್ಯರ್ಗೆ ವಹಿಸಿದ್ದರು. ಆಗ ಈಗಿನಂತೆ ಎಸ್ಟಿಡಿ ಅಥವಾ ಮೊಬೈಲ್ ಸೌಲಭ್ಯ ಇರಲಿಲ್ಲ. ಟ್ರಂಕ್ಕಾಲ್ ಬುಕ್ ಮಾಡಿ ಗಂಟೆಗಟ್ಟಲೆ ಕಾಯಬೇಕಿತ್ತು. ಟ್ರಂಕ್ ಕಾಲ್ ಬಿಟ್ಟರೆ, ತುರ್ತು ಸುದ್ದಿ ಕಳಿಸಲು ಇದ್ದ ಮಾರ್ಗವೆಂದರೆ ಟೆಲಿಗ್ರಾಂ.
ಒಂದೆರಡು ದಿನ ಕಳೆದರೂ ಜಿ.ಕೆ. ವೆಂಕಟೇಶ್ ಕಡೆಯಿಂದ ಫೋನ್ ಬರಲೇ ಇಲ್ಲ. ಕಾತರ ತಡೆಯಲಾಗದ ಅಯ್ಯರ್, ಸಮೀಪದ ಅಂಚೆ ಕಚೇರಿಗೆ ಹೋಗಿ ‘ ಜಮುನಾ ಒಪ್ಪಿದ್ದಾಳಾ?’ ಎಂದು ಟೆಲಿಗ್ರಾಂ ಹಾಳೆಯ ಮೇಲೆ ಬರೆದರು. ಮರುಕ್ಷಣವೇ-ಈ ವಾಕ್ಯ ನೋಡಿ ಟೆಲಿಗ್ರಾಂ ಕಳಿಸುವಾತ ಅಪಾರ್ಥ ಮಾಡಿಕೊಂಡರೆ ಕಷ್ಟ ಅನ್ನಿಸಿತು. (ಜಮುನಾ ಒಪ್ಪಿದಳಾ ಎಂದರೆ ಏನರ್ಥ?) ತಕ್ಷಣವೇ, ‘ವೈದೇಹಿ ಏನಾದಳು’ ಎಂದು ಬರೆದು ಕೊಟ್ಟೇಬಿಟ್ಟರು.
ಅದನ್ನು ಕೈಗೆತ್ತಿಕೊಂಡ ಅಂಚೆ ಗುಮಾಸ್ತ ‘ಇದೇನು? ಇಷ್ಟು ಚಿಕ್ಕ ವಾಕ್ಯ ಇದೆಯಲ್ಲ ಅಂದುಕೊಂಡು, ಅದನ್ನೇ ಎರಡೆರಡುಬಾರಿ ಮುದ್ರಿಸಿ ‘ವೈದೇಹಿ ಏನಾದಳು, ವೈದೇಹಿ ಏನಾದಳು? ಎಂದು ಟೆಲಿಗ್ರಾಂ ಕಳುಹಿಸಿಬಿಟ್ಟ ! ವೈದೇಹಿ ಅಂದರೆ ಸೀತೆ ಎಂದು ಜಿ.ಕೆ. ವೆಂಕಟೇಶ್ಗೆ ಗೊತ್ತಿತ್ತು. ಈ ಅಂದಾಜಿನಿಂದಲೇ ಅಯ್ಯರ್ ಹಾಗೆ ಬರೆದಿದ್ದರು.
ಮದ್ರಾಸಿನಿಂದ ಬಂದ ಈ ಟೆಲಿಗ್ರಾಂ ನೋಡುತ್ತಿದ್ದಂತೆಯೇ ಜಿ.ಕೆ. ವೆಂಕಟೇಶ್ ನಸುನಕ್ಕರು. ಆಗಲೇ ಅವರಿಗೆ ಒಂದು ಹೊಸ ಟ್ಯೂನ್ ಹೊಳೆಯಿತು. ತಕ್ಷಣವೇ ಅವರು -‘ಸೀತೆಯ ಪಾತ್ರ ಮಾಡಲು ಜಮುನಾ ಸಿಗುತ್ತಾಳೋ ಇಲ್ಲವೋ ಕಾಣೆ. ಆದರೆ ನನಗೆ ಒಂದು ಹೊಸ ಟ್ಯೂನ್ ಹಾಗೂ ಹಾಡಿನ ಸಾಲು ಸಿಕ್ಕಿತು’ ಎಂದು ಮಾರುದ್ದದ ಟೆಲಿಗ್ರಾಂ ಬಿಟ್ಟರು.
ಮುಂದೆ ಸೀತೆಯ ಪಾತ್ರಕ್ಕೆ ಜಮುನಾ ಸಿಗಲಿಲ್ಲ. ಆ ಪಾತ್ರವನ್ನು ಆದವಾನಿ ಲಕ್ಷ್ಮಿದೇವಿ ನಿರ್ವಹಿಸಿದರು. ಈ ಕಡೆ, ವೆಂಕಟೇಶ್ ಅವರ ಟ್ಯೂನ್ ಕೇಳಿಸಿಕೊಂಡು ಟೆಲಿಗ್ರಾಂ ಕಳಿಸಲು ಬಳಸಿದ್ದ ಸಾಲನ್ನು ಇಟ್ಟುಕೊಂಡೇ ಜಿ.ವಿ. ಅಯ್ಯರ್ ಹಾಡು ಬರೆದು ಬಿಟ್ಟರು. ನಾಯಕಿಯನ್ನು ಹುಡುಕಲು ಹೊರಟಾಗ ಹೊಳೆದ ಹಾಡನ್ನು, ಬೆಳ್ಳಿ ತೆರೆಯ ಮೇಲೆ ಕೂಡ ನಾಯಕಿಯನ್ನು ಹುಡುಕುತ್ತ ಹೊರಟ ಸಂದರ್ಭಕ್ಕೇ ಬಳಸಿಕೊಳ್ಳಲಾಯಿತು.
ಅದಲ್ಲವೇ ಸ್ವಾರಸ್ಯ?

Advertisements

1 Comment »

 1. 1
  shivu. Says:

  ಮಣಿಕಾಂತ್ ಸರ್,

  ನಿಮ್ಮ ಬ್ಲಾಗಿಗೆ ಮೊದಲಿಗೆ ಬರುತ್ತಿದ್ದೇನೆ…..ಜಿ.ವಿ ಅಯ್ಯರ್ ಬರೆದ ಹಾಡು ನನಗೆ ತುಂಬಾ ಇಷ್ಟ…ಅವರ ಬಗ್ಗೆ ಚೆನ್ನಾಗಿ ಬರೆದಿದ್ದೀರಿ…….ನಿಮ್ಮ ಬ್ಲಾಗನ್ನು ಲಿಂಕಿಸಿಕೊಂಡಿದ್ದೇನೆ….ದಿನವೂ ಬರುತ್ತೇನೆ…….

  ನೀವೊಮ್ಮೆ ನನ್ನ ಬ್ಲಾಗಿಗೆ ಬನ್ನಿ….ಛಾಯಾಗ್ರಹಕನಾದ್ದರಿಂದ ಅಲ್ಲಿ ಫೋಟೊ ಸಹಿತ ಲೇಖನಗಳಿವೆ….ಕೆಲವು ನಡೆದ ಘಟನೆಗಳ ವಿಚಾರಗಳಿವೆ…..ನಿಮಗಿಷ್ಟವಾಗಬಹುದು……

  ಮತ್ತೆ ನಿಮ್ಮ ಗೆಳೆಯ ವೀರೇಶ್ ಅಮ್ಮ ಹೇಳಿದ ಎಂಟು ಸುಳ್ಳೂಗಳು ಪುಸ್ತಕಕ್ಕೆ ನನ್ನನ್ನು ಫೋಟೊ ಕೇಳಿದ್ದರು….ನಾನು ಕಳುಹಿಸಿದ್ದೆ….


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: