ಶ್ರೀರಾಮುಲು ಅವರಿಗೆ, ಪ್ರೀತಿ-ಆಗ್ರಹದಿಂದ…!

null

ಶ್ರೀರಾಮುಲು ಅವರಿಗೆ, ಪ್ರೀತಿ-ಆಗ್ರಹದಿಂದ…
ಆರೋಗ್ಯ ಇಲಾಖೆ ಸಚಿವರಾದ ಮಾನ್ಯ ಶ್ರೀರಾಮುಲು ಅವರಿಗೆ-ನಮಸ್ಕಾರ.
ಸರ್, ನೀವೀಗ ಬೆಳಗಾವಿಯ ಅವೇಶನದಲ್ಲಿ ಬ್ಯುಸಿಯಾಗಿದ್ದೀರಿ. ಸರಕಾರದ ಮೇಲೆ ಪದೇ ಪದೆ ಹರಿಹಾಯುತ್ತಿರುವ ವಿರೋಧ ಪಕ್ಷಗಳ ನಾಯಕರಿಗೆ ಪ್ರತ್ಯುತ್ತರ ಕೊಡುವುದು ಹೇಗೆ? ಅವೇ ಪಕ್ಷಗಳಿಂದ ಶಾಸಕರನ್ನು ‘ಹಾರಿಸಿಕೊಂಡು’ ಬರುವುದು ಹೇಗೆ? ಬಳ್ಳಾರಿಯಲ್ಲಿ ಗಣಿ ಸಾಮ್ರಾಜ್ಯವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವುದು ಹೇಗೆ? ಅದೇ ಬಳ್ಳಾರಿಯ ಮತದಾರರಿಂದ, ಕರ್ನಾಟಕದ ಅದೆಷ್ಟೋ ಮಂದಿ ಹಿರಿಯರಿಂದ ಭೇಷ್ ಭೇಷ್ ಅನ್ನಿಸಿಕೊಳ್ಳುವುದು ಹೇಗೆ ಎಂದೆಲ್ಲಾ ಯೋಚನೆ ಮಾಡ್ತಾ ಕುಳಿತುಬಿಟ್ಟಿದ್ದೀರ…
ಈ ಹೊತ್ತಿನಲ್ಲೇ ಏನಾಗಿದೆ ಅಂದರೆ- ಕರ್ನಾಟಕಕ್ಕೆ ಕುಲಾಂತರಿ ಆಹಾರ ಬರುತ್ತಿದೆ ಎಂಬ ಹುಯಿಲೆದ್ದಿದೆ. ನಮ್ಮ ರೈತಾಪಿ ಜನರು ತುಂಬ ಕಡಿಮೆ ಖರ್ಚಿನಲ್ಲಿ ಬೆಳೆಯುವ; ಎಲ್ಲ ಜಾತಿಯ, ವರ್ಗದ ಜನರೂ ತಪ್ಪದೇ ಬಳಸುವ ಬದನೆಕಾಯಿ-ಕುಲಾಂತರಿ ತಳಿ ಪ್ರಯೋಗಕ್ಕೆ ಮೊದಲ ಬಲಿಪಶುವಾಗಲಿದೆ ಎಂದೂ ಹೇಳಲಾಗಿದೆ. ನಮ್ಮ ಪರಿಸರ ತಜ್ಞರು, ರೈತರು ಹಾಗೂ ಬಿ.ಟಿ. ತಳಿಗಳಿಂದ ಆಗುವ ಅಪಾಯದ ಬಗ್ಗೆ ಗೊತ್ತಿರುವವರೆಲ್ಲ- ‘ಕುಲಾಂತರಿ ಆಹಾರ ಕರ್ನಾಟಕಕ್ಕೆ ಬೇಡವೇ ಬೇಡ’ ಎಂದು ಗಟ್ಟಿ ದನಿಯಲ್ಲಿ ಹೇಳಿದ್ದಾರೆ.
I ಚಿm ಟಿoಣ ಟಚಿb ಡಿಚಿಣ ಎಂಬ ಆಂದೋಲನ ಆರಂಭಿಸಿದ್ದಾರೆ. ಕುಲಾಂತರಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಿಮ್ಮ ಮನೆಯ ಮುಂದೆ, ವಿಧಾನಸೌಧದ ಮುಂದೆ ಕುಲಾಂತರಿ ಆಹಾರದ ಶವ ಯಾತ್ರೆ ನಡೆಸಿದ್ದಾರೆ. ‘ಕುಲಾಂತರಿ ಆಹಾರ ನಿಷೇಸಿ ಆರೊಗ್ಯ ಸಚಿ ವರು ತಕ್ಷಣವೇ ಹೇಳಿಕೆ ನೀಡಬೇಕೂ…’ ಎಂದು ಒತ್ತಾಯಿಸಿದ್ದಾರೆ.
ಆದರೆ ಸರ್, ಇಷ್ಟೆಲ್ಲ ಆಗುತ್ತಿದ್ದರೂ ನೀವು ಒಂದೇ ಒಂದು ಮಾತನ್ನೂ ಆಡದೆ ಗಪ್ಚುಪ್ಪಾಗಿ ಉಳಿದುಬಿಟ್ಟಿದ್ದೀರಿ. ಬಹುಶಃ ನಿಮಗೆ ಕುಲಾಂತರಿ ಆಹಾರ ಉಂಟು ಮಾಡಬಹುದಾದ ಅಪಾಯದ ಬಗ್ಗೆ ಗೊತ್ತಿಲ್ಲ ಅನಿಸುತ್ತೆ ಅಥವಾ ಎಲ್ಲ ಗೊತ್ತಿದ್ದೂ ರೈತರ ಬದುಕು ಹಾಳಾದರೆ ನನಗೇನು? ಕುಲಾಂತರಿ ಆಹಾರ ಪೂರೈಸುವ ಅಮೆರಿಕದಂಥ ರಾಷ್ಟ್ರಗಳ ಜನರನ್ನು ಖುಷಿಪಡಿಸುವುದಷ್ಟೇ; ಅವರು ಕೇಳಿದ ಎಲ್ಲ ಅನುಕೂಲಗಳನ್ನೂ ಮಾಡಿಕೊಡುವುದಷ್ಟೇ ನನ್ನ ಗುರಿ ಎಂದು ನೀವು ಭಾವಿಸಿರುವಂತೆ ಕಾಣಿಸುತ್ತಿದೆ.
ಇಂಥ ಸಂದರ್ಭದಲ್ಲಿಯೇ ಕುಲಾಂತರಿ ಎಂದರೆ ಏನು? ಆ ಬೆಳೆಯಿಂದ; ಆಹಾರದಿಂದ ಯಾರಿಗೆ ಲಾಭವಾಗುತ್ತದೆ? ಯಾರ್ಯಾರಿಗೆ ನಷ್ಟವಾಗುತ್ತದೆ. ಅದನ್ನು ಬೆಳೆಯುವುದರಿಂದ ಬರುವ ಕಾಯಿಲೆಗಳು ಎಂಥವು? ಅವು ಬೀರುವ ಅಡ್ಡಪರಿಣಾಮ ಏನು? ಈಗ ಎಲ್ಲ ಮನೆಯ ಪರ್ಮನೆಂಟ್ ತರಕಾರಿ ಎನಿಸಿಕೊಂಡಿರುವ ಬದನೆಕಾಯಿಗೆ ಬಂದಿರುವ ಗಂಡಾಂತರವಾದರೂ ಏನು? ಎಂಬುದನ್ನೆಲ್ಲ ಆದಷ್ಟೂ ಸರಳವಾಗಿ ವಿವರಿಸ್ತಾ ಹೋಗ್ತೇನೆ. ಇದನ್ನೆಲ್ಲ ಓದಿದ ನಂತರವಾದರೂ ನೀವು ಕುಲಾಂತರಿ ಆಹಾರದ ವಿರುದ್ಧ ಮಾತಾಡ್ತೀರಿ ಅನ್ನೋದು ನಮ್ಮ ನಿರೀಕ್ಷೆ. ಮಾತಾಡಲೇಬೇಕು ಅನ್ನೋದು ಆಗ್ರಹ.
* * *
ನಿಮಗೇ ಗೊತ್ತಿರುವ ಹಾಗೆ, ಈ ಹಿಂದೆ ಎಲ್ಲ ರೈತರೂ ಹತ್ತಾರು ವೆರೈಟಿಯ ಬದನೆಕಾಯಿ ಬೆಳೀತಿದ್ರು. ಅಮ್ಮಂದಿರಂತೂ ತುಂಬಾ ಎಳೆಯದಾದ ಉದ್ದ ಬದನೆಕಾಯಿ ಕಂಡರೆ ಅದನ್ನು ವಾಂಗೀಭಾತ್ಗೆ; ಸ್ವಲ್ಪ ಬಲಿತಿದ್ದರೆ ಅದನ್ನು ಸಾಂಬಾರ್ಗೆ, ಒಂದಿಷ್ಟು ಜಾಸ್ತಿ ಬಲಿತಿದ್ದರೆ ಅದನ್ನು ಪಲ್ಯಕ್ಕೆ, ಗೊಜ್ಜಿಗೆ ಅಂತೆಲ್ಲಾ ವಿಂಗಡಿಸಿಬಿಡ್ತಿದ್ರು. ಕೋಳಿಮೊಟ್ಟೆಯ ಆಕಾರದ ಬದನೆಕಾಯಿ-ಎಣ್ಣೆಗಾಯಿ ಪಲ್ಯಕ್ಕೆ ಬಳಕೆಯಾಗ್ತಾ ಇತ್ತು. ಹಬ್ಬದ ನೆಪ, ಬರಗಾಲದ ನೆಪ, ಆರ್ಥಿಕ ಸಂಕಷ್ಟದ ನೆಪದಲ್ಲಿ ಎಲ್ಲ ತರಕಾರಿಗಳ ಬೆಲೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಿದ್ದ ಸಂದರ್ಭದಲ್ಲಿ ಕೂಡ ಬದನೆಕಾಯಿ ಬೆಲೆ ‘ನಾರ್ಮಲ್’ ಎಂಬಂತೆಯೇ ಇರ್ತಾ ಇತ್ತು. ಅಷ್ಟೇ ಅಲ್ಲ, ಗಿಡನೆಟ್ಟ ನಂತರದ ಎರಡೂವರೆ ತಿಂಗಳಲ್ಲಿಯೇ ಬದನೆಗಿಡ, ಕಾಯಿ ಕೊಡುತ್ತಿತ್ತಲ್ಲ; ಹಾಗಾಗಿ- ‘ತುಂಬ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ತರಕಾರಿ’ ಎಂಬ ಹೆಗ್ಗಳಿಕೆ ಕೂಡ ಬದನೆಗೆ ದಕ್ಕಿತ್ತು.
ಈಗ ಏನಾಗಿದೆ ಗೊತ್ತ ಸಾರ್? ಕುಲಾಂತರಿ ಆಹಾರ ಸೃಷ್ಟಿಸ್ತೇವೆ. ಅದರ ಮೂಲಕ ಸಮಸ್ತ ಭಾರತೀಯರ ಹಸಿವು ಕಳೆದು ಬಿಡ್ತೀವಿ ಎಂದು ಪುಂಗಿ ಊದಿಕೊಂಡು ಬಂದಿರುವ ಜನ ಈ ಬದನೆಕಾಯಿಯ ಮೇಲೆ ಕಣ್ಣು ಹಾಕಿದ್ದಾರೆ. ಅದರ ಮೇಲೆ ಸಂಶೋಧನೆ ನಡೆಸ್ತೇವೆ. ಹಾಗೆ ಸೃಷ್ಟಿಯಾಗುವ ಹೊಸ ಬೆಳೆಯನ್ನು ಕರ್ನಾಟಕದಲ್ಲೇ ಬೆಳೆದು ತೋರಿಸ್ತೇವೆ, ಒಪ್ಪಿಗೆ ಕೊಡಿ ಅಂತಿದ್ದಾರೆ. ನೆನಪಿರಲಿ: ಈ ಬಣ್ಣದ ಮಾತಿಗೇನಾದ್ರೂ ಒಪ್ಪಿಕೊಂಡರೆ-ಅದು ಹುಲಿಯ ಬಾಯೊಳಗೆ ತಲೆಯಿಟ್ಟು ಕೂತಂತಾಗುತ್ತದೆ…
ಅಂದ ಹಾಗೆ, ಬದನೆಕಾಯಿಯ ಮೇಲೆ ಸಂಶೋಧನೆ ಮಾಡ್ತೀವಿ ಅಂತಿದಾರಲ್ಲ? ಅವರಾದ್ರೂ ಯಾರು ಹೇಳಿ? ಅದೇ ಅಮೆರಿಕದ ಜನ. ಈ ಪ್ರಯೋಗವನ್ನು ಅವರು ಅಮೆರಿಕದಲ್ಲೇ ಮಾಡಬಹುದು. ಆದರೆ ಮಾಡ್ತಾ ಇಲ್ಲ. ಯಾಕೆ ಅಂದ್ರೆ-ಈ ಪ್ರಯೋಗದಿಂದ ಪರಿಸರ ಮಾಲಿನ್ಯ ಉಂಟಾಗುತ್ತೆ. ಭೂಮಿಯ ಫಲವತ್ತು ಕಡಿಮೆಯಾಗುತ್ತೆ. ನೂರಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಆಹಾರ ಬೆಳೆಗಳ ಮೇಲೂ ಅಡ್ಡ ಪರಿಣಾಮ ಆಗುತ್ತೆ. ಪರಿಣಾಮವಾಗಿ, ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತೆ. ಇದೆಲ್ಲ ಗೊತ್ತಿರುವುದರಿಂದಲೇ ಆ ಜನ ಭಾರೀ ಗಂಟು ಹಿಡಿದುಕೊಂಡೇ ಇಲ್ಲಿಗೆ ಬಂದಿದ್ದಾರೆ. ಕಾಸು ಸಿಗುತ್ತೆ ಅನ್ನುವುದಾದರೆ ಚರಂಡಿ ನೀರನ್ನೂ ಕುಡಿಯಲು ಸಿದ್ಧರಿರುವ ಸರಕಾರಿ ಅಕಾರಿಗಳು; ಫಂಡ್ ಸಿಗುತ್ತೆ ಎಂಬ ಕಾರಣಕ್ಕೆ ಸುಳ್ಳು ಸುಳ್ಳೇ ಸಂಶೋಧನಾ ವರದಿ ಸಿದ್ಧಪಡಿಸುವ ಪ್ರತಿಭಾವಂತರು ಸೇರಿಕೊಂಡು ‘ಕುಲಾಂತರಿ ಆಹಾರದಿಂದ ಏನೂ ತೊಂದರೆಯಿಲ್ಲ’ ಎಂದು ಹೇಳಲು ಮೂರನ್ನೂ ಬಿಟ್ಟು ನಿಂತಿದ್ದಾರೆ. ಆದರೆ ಮಾನ್ಯ ಶ್ರೀರಾಮುಲು ಸಾಹೇಬರೇ, ಸತ್ಯ ಸಂಗತಿ ಬೇರೆಯೇ ಇದೆ.
‘ಕುಲಾಂತರಿ ಆಹಾರ ಬೆಳೆಯುತ್ತೇವೆ’ ಎಂದು ಗಂಟೆ ಹೊಡ್ಕೊಂಡು ಬಂದಿರೋ ಅಮೆರಿಕದ ಜನ ಯಾಕೆ ಹೀಗೆ ಮಾಡ್ತಾ ಇದಾರೆ ಅಂದ್ರೆ- ಆ ದೇಶದ ಕೃಷಿ ಆರ್ಥಿಕ ವ್ಯವಸ್ಥೆ- ರಫ್ತು ಮಾರುಕಟ್ಟೆಯ ಮೇಲೇ ನಿಂತಿದೆ. ಅಂದರೆ, ಅಮೆರಿಕದವರು ಬೆಳೆದ ಬೆಳೆಯನ್ನು ಉಳಿದ ಎಲ್ಲ ದೇಶಗಳೂ ಖರೀದಿಸುವಂತಾಗಬೇಕು. ಹಾಗೆ ಆಗಬೇಕಾದರೆ, ಆ ಆಹಾರ ಎಲ್ಲರೂ ದಿನದಿನವೂ ಬಳಸುವಂಥಾದ್ದೇ ಆಗಿರಬೇಕು. ಅಂಥ ಬೆಳೆಯ ಮೇಲೆ ಮೊದಲು ಸಂಶೋಧನೆ ನಡೆಸುವುದು; ಅದನ್ನು ಕುಲಾಂತರಿಯಾಗಿ ಪರಿವರ್ತಿಸುವುದು; ನಂತರ ಸಂಶೋಧನೆ ನಡೆದ ಜಾಗದಲ್ಲೇ ಗುತ್ತಿಗೆದಾರರ ನೆರವಿನಿಂದ ಬೆಳೆ ತೆಗೆಯುವುದು, ಅದನ್ನು ಲಾಭದ ಬೆಲೆಗೆ ಮಾರಿ, ಅಷ್ಟೂ ದುಡ್ಡನ್ನು ಅಮೆರಿಕಕ್ಕೆ ಸಾಗಿಸುವುದು! ಇದು, ಕುಲಾಂತರಿ ಆಹಾರ ಸೃಷ್ಟಿಸಲು ಹೊರಟಿರುವ ಪುಣ್ಯಾತ್ಮರ ಒನ್ಲೈನ್ ಅಜೆಂಡಾ.
ಈಗ, ಬದನೆಕಾಯಿಯ ಮೇಲೆ ಸಂಶೋಧನೆ ಮಾಡ್ತೀವಿ ಅಂತಿದಾರಲ್ಲ ಸಾರ್, ಅವರು ಏನ್ಮಾಡ್ತಾರೆ ಗೊತ್ತ? ನಮ್ಮ ತಾತ-ಅಪ್ಪನ ಕಾಲದಿಂದಲೂ ಇರುವ ಬದನೆಗೆ- ವೈರಸ್, ಬ್ಯಾಕ್ಟೀರಿಯಾ, ಚೇಳು, ಜೇಡ, ಮೀನು ಮುಂತಾದ ಜೀವಿಗಳ ಜೀನ್ ತೆಗೆದು ಸೇರಿಸಿಬಿಡ್ತಾರೆ. ಪರಿಣಾಮವಾಗಿ ಬಿಟಿ ಬದನೆ ತಳಿ ಸೃಷ್ಟಿಯಾಗುತ್ತದೆ. ಮುಂದೆ, ಅದೇ ಅಮೆರಿಕದ ಜನ-ಇದೇ ಶ್ರೇಷ್ಠ, ಇದೇ ಶ್ರೇಷ್ಠ’ ಎಂದು ಮೇಲಿಂದ ಮೇಲೆ ತುತ್ತೂರಿ ಊದಿ, ಬದನೆಯ ಪೇಟೆಂಟ್ ಪಡೆದೇ ಬಿಡ್ತಾರೆ. ಬಿಟಿ ಬದನೆಯ ಗಿಡಗಳನ್ನೇ ಎಲ್ಲರಿಗೂ ಕೊಡ್ತಾರೆ. ‘ಎಲ್ರೂ ಇದನ್ನೇ ಬೆಳೀಬೇಕೂ’ ಎಂದು ಒತ್ತಾಯ ಹೇರ್ತಾರೆ. ನಮ್ಮ ರೈತರೇನಾದ್ರೂ ಉಲ್ಟಾ ಮಾತಾಡಿದ್ರೆ ಅಮೆರಿಕದ ಅಧ್ಯಕ್ಷನ ಕಡೆಯಿಂದಲೇ ಫೋನ್ ಮಾಡಿಸಿ, ರೈತರ ಬಾಯಿ ಮುಚ್ಚಿಸ್ತಾರೆ!
ಒಂದೆರಡು ನಿಮಿಷ ಇದನ್ನೆಲ್ಲ ಮರೆತು-ಕುಲಾಂತರಿ ಬದನೆ ಹೇಗಿರ್ತದೆ ಅಂತ ನೋಡೋಣ: ಕೇಳಿ ಸಾರ್, ಚೇಳು, ಮೀನು ಮುಂತಾದ ಪ್ರಾಣಿಗಳ ಜೀನ್ ಸೇರಿಸಿರ್ತಾರೆ ನೋಡಿ; ಆ ಕಾರಣದಿಂದಲೇ ಬಿಟಿ ಬದನೆಗೆ ಒಂದೇ ಒಂದು ಸಣ್ಣ ರೋಗ ಕೂಡ ಬರೋದಿಲ್ಲ. ಇದನ್ನೇ ಮುಂದಿಟ್ಟುಕೊಳ್ಳುವ ಅಮೆರಿಕದ ಜನ ‘ಎಂಥ ಮಹಾನ್’ ಸಂಶೋಧನೆ ನೋಡ್ರೀ. ಈ ಬೆಳೆಗೆ ರೋಗಾನೇ ಇಲ್ಲ. ಅಂದ ಮೇಲೆ ಇದಕ್ಕೆ ಔಷ ಹೊಡೀಬೇಕಿಲ್ಲ. ಬೆಳೆಗಾರನಿಗೆ ಲಾಭ ಬಂತಲ್ವ ಎಂದು ಕಾಗೆ ಹಾರಿಸುತ್ತಾರೆ. ಆದರೆ ಸಾರ್, ಈ ಬಿಟಿ ಬದನೆಯ ಒಡಲೊಳಗೇ ವಿಷ ಸೇರಿರುತ್ತೆ ನೋಡಿ; ಆ ಕಾರಣ ದಿಂದಲೇ ಅದನ್ನು ತಿಂದ ಮನುಷ್ಯರಿಗೂ ಕೆಲವೇ ವರ್ಷಗಳ ನಂತರ ಯಾವ್ಯಾವುದೋ ರೋಗ ಬಂದೇ ಬರುತ್ತೆ. ಒಂದು ವೇಳೆ ಬಿಟಿ ಬದನೆಯನ್ನು ಗರ್ಭಿಣಿಯರು ತಿಂದರೆ, ಅವರಿಗೆ ಹುಟ್ಟುವ ಮಕ್ಕಳು ಹಲವು ರೋಗಗಳಿಗೆ ಈಡಾಗುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲ, ಬಿಟಿ ಬದನೆ ಸೇವನೆಯಿಂದ ಸಂತಾನಶಕ್ತಿಯೇ ಕ್ಷೀಣಿಸುತ್ತೆ! ಮೆದುಳು, ಮೂತ್ರಪಿಂಡ, ಶ್ವಾಸಕೋಶದ ಸಾಮರ್ಥ್ಯವೂ ಕಡಿಮೆಯಾಗುತ್ತೆ. ಇನ್ನೂ ಒಂದು ಮುಖ್ಯ ವಿಚಾರ ಏನೆಂದರೆ- ಈ ಹೊಸ ಆಹಾರದಿಂದ ಬರಬಹುದಾದ ರೋಗ ಯಾವುದೆಂಬ ಅಂದಾಜು ಕೂಡ ಯಾರಿಗೂ ಇಲ್ಲದಿರುವುದರಿಂದ ಅದಕ್ಕೆ ಔಷಧ ಕಂಡು ಹಿಡಿಯುವ ವೇಳೆಗೆ ಅದೆಷ್ಟೋ ಸಾವಿರ ಜೀವಗಳು ಕೈಲಾಸ ಸೇರಿಕೊಂಡಿರುತ್ತವೆ!
ಅಂದಹಾಗೆ, ಇದೆಲ್ಲ ಸುಮ್ಮನೇ ಅಂದಾಜು ಮಾಡಿಕೊಂಡು ಬರೆದದ್ದಲ್ಲ. ಇದೆಲ್ಲ- ‘ಕುಲಾಂತರಿ ಆಹಾರದ ಅಡ್ಡ ಪರಿಣಾಮಗಳು’ ಎಂಬ ಬಗ್ಗೆ ಆಸ್ಟ್ರಿಯಾ ಹಾಗೂ ಮೆಕ್ಸಿಕೋದ ವಿಜ್ಞಾನಿಗಳು ಬರೆದ, ನ್ಯೂಸೈಂಟಿಸ್ಟ್ ಪತ್ರಿಕೆ ಪ್ರಕಟಿಸಿದ ಲೇಖನ ಆಧರಿಸಿದ ಮಾಹಿತಿ.
ಇಷ್ಟೆಲ್ಲ ಓದಿದ ನಂತರ ನೀವು- ‘ಓಹ್, ಸಮಸ್ಯೆ ತೀರಾ ಗಂಭೀರವಾಗಿದೆ ಅಂದುಕೊಂಡು- ‘ಆ ಬಿಟಿ ಬದನೇನ ತಿನ್ನದೇ ಇದ್ರಾಯ್ತು ಬಿಡ್ರೀ’ ಅನ್ನಬಹುದು. ಆದರೆ ಹಾಗೆ ಮಾಡೋಕೆ ಸಾಧ್ಯವೇ ಇಲ್ಲ ಸಾರ್. ಯಾಕೆಂದರೆ, ಒಂದು ವೇಳೆ ಬಿಟಿ ಬದನೆ ಸೃಷ್ಟಿಯಾಗಿ ಬಿಟ್ಟರೆ- ಅದು ಸೇಮ್ ನಮ್ಮ ಹಿತ್ತಲಲ್ಲಿ ಬೆಳೆದಿರ್ತೀವಿ ನೋಡಿ; ಹಾಗೇ ಇರ್ತದೆ. ಅದೇ ಬಣ್ಣ. ಅದೇ ಗಾತ್ರ. ಅದೇ ರುಚಿ. ಆದರೆ ಪರಿಣಾಮ ಮಾತ್ರ ಬೇರೆ!
ಮುಂದೊಂದು ದಿನ ಎಲ್ಲರಿಗೂ ಬಿಟಿ ಬದನೆಯಿಂದ ಅನಾಹುತದ ಬಗ್ಗೆ ಅರ್ಥವಾಯ್ತು ಅಂದುಕೊಳ್ಳಿ: ಆಗ ತಕ್ಷಣವೇ ಅದನ್ನು ನಾಶ ಮಾಡೋಕೂ ಆಗೋದಿಲ್ಲ. ಏಕೆಂದರೆ, ಅಷ್ಟು ಹೊತ್ತಿಗೆ ಸಿಗರೇಟಿನ ಚಟದ ಹಾಗೆ ಅದೇ ನಮಗೆ ಒಗ್ಗಿ ಹೋಗಿರುತ್ತೆ. ಇನ್ನೊಂದು ಕಡೆ, ವಿಷದ ತಳಿಯನ್ನೇ ವರ್ಷ ವರ್ಷವೂ ಬೆಳೆದ ಕಾರಣ ಮಣ್ಣಿನ ಸತ್ವವೂ ಕಡಿಮೆಯಾಗಿರುತ್ತೆ. ಒಂದು ವರ್ಷದ ಮಟ್ಟಿಗೆ ಬಿಟಿ ಬದನೆ ಬೆಳೆಯುತ್ತಿದ್ದ ಜಾಗಕ್ಕೆ ರಾಗಿಯನ್ನೋ, ಭತ್ತವನ್ನೋ ಹಾಕಿದರೆ- ಆ ಬೆಳೆ ಕೂಡ ವಿಷದ ಬೆಳೆಯಾಗಿ ಬದಲಾಗಿಬಿಡುತ್ತೆ. ಪರಿಣಾಮ- ಬಿಟಿ ತಳಿಗೆ ಪ್ರಾಣಿಗಳ ಜೀನ್ ಸೇರಿಸುವುದರಿಂದ ತರಕಾರಿ ತಿಂದವನೂ ಕೂಡ ಮಾಂಸಾಹಾರಿಯಾಗುತ್ತಾನೆ! ಅರವತ್ತು ವರ್ಷ ಆಯಸ್ಸು ಎಂದು ಯಮರಾಯನಿಂದಲೇ ಬರೆಸಿಕೊಂಡು ಬಂದ ಆಸಾಮಿ ಕೂಡ ನಲವತ್ತೆರಡಕ್ಕೇ ಗೊಟಕ್ ಅನ್ನುತ್ತಾನೆ!
* * *
ಮಾನ್ಯ ಶ್ರೀರಾಮುಲು ಸಾಹೇಬರೆ, ಕುಲಾಂತರಿ ಆಹಾರದ ಅಡ್ಡ ಪರಿಣಾಮದ ಬಗ್ಗೆ ಇನ್ನೂ ವಿವರಿಸುವ ಅಗತ್ಯವಿಲ್ಲ ಅನಿಸುತ್ತದೆ. ಇಷ್ಟಕ್ಕೂ ಭಾರತೀಯರಿಗೆ ಆಹಾರ ಧಾನ್ಯ ಬೆಳೆಯುವ ಶಕ್ತಿ ಇಲ್ಲ ಅಂದಾಗ ಮಾತ್ರ ಇನ್ನೊಂದು ರಾಷ್ಟ್ರದ ಮುಂದೆ ನಾವು ಕೈ ಚಾಚಬೇಕು. ಹೌದು ತಾನೆ? ಈಗ ಅಂಥ ಪರಿಸ್ಥಿತಿಯಾದರೂ ಎಲ್ಲಿದೆ ಸಾರ್? ಅಮೆರಿಕದಂಥ ಬಲಾಢ್ಯ ರಾಷ್ಟ್ರಗಳ ತೆವಲಿಗೆ ಕರ್ನಾಟಕದ ಅಮಾಯಕ ರೈತರ ಬದುಕು, ಜಮೀನು ಮತ್ತು ಎಲ್ಲರ ಅಡುಗೆ ಮನೆಯ ಸದಸ್ಯನಾಗಿರುವ ಬದನೆಕಾಯಿ ಯಾಕೆ ಬಲಿಪಶುವಾಗಬೇಕು ಸಾರ್? ಕುಲಾಂತರಿ ಆಹಾರ ತಯಾರಿಗೆ, ಸಂಶೋಧನೆಗೆ ನಾನು ಅವಕಾಶ ನೀಡುವುದಿಲ್ಲ ಎಂದು ಈಗಾಗಲೇ ಕೇಂದ್ರ ಸಚಿವರೇ ಘೋಷಿಸಿದ್ದಾರೆ. ಆದರೆ, ನೀವು ಮಾತ್ರ ಏನೆಂದರೆ ಏನೂ ಮಾತಾಡದೆ ಗಪ್ಚುಪ್ ಆಗಿ ಉಳಿದುಬಿಟ್ಟಿದ್ದೀರಿ.

ಹೌದು. ಕುಲಾಂತರಿ ತಳಿಗೆ/ಆಹಾರಕ್ಕೆ ಕ್ಕಾರ ಎಂಬ ನಿಮ್ಮ ಒಂದೇ ಒಂದು ಮಾತು ನಮ್ಮ ರೈತರ ಬದುಕು ಹಾಗೂ ಇಡೀ ನಾಡಿನ ಪ್ರಜೆಗಳ ಆರೋಗ್ಯವನ್ನು ಕಾಪಾಡಬಲ್ಲ ಸಾಮರ್ಥ್ಯ ಹೊಂದಿದೆ. ಹಾಗಾಗಿ, ಕುಲಾಂತರಿ ಆಹಾರದ ವಿರುದ್ಧವಾಗಿ ತಕ್ಷಣವೇ ಮಾತಾಡಿ. ಈ ಸಂಬಂಧವಾಗಿ ಒಂದು ಕಾನೂನನ್ನೂ ತಕ್ಷಣವೇ ಜಾರಿಗೆ ತನ್ನಿ ಎಂಬ ಪ್ರೀತಿಯ ಒತ್ತಾಯದೊಂದಿಗೆ – ನಮಸ್ಕಾರ.

Advertisements

1 Comment »

  1. 1
    nagtalwar Says:

    ಸಾರ್, ಆ ಯಪ್ಪಗೇನು ಗೊತ್ತು..ಬದನೆ ಕಾಯಿ, ಬರೀ ” ಮುಂಬರು ದಿನಗಳಲ್ಲಿ …ಮುಂಬರುವ ದಿನಗಳಲ್ಲಿ..” ಅಂತ ಭಾಷಣದುದ್ದಕ್ಕೂ ಹೇಳ್ತಾನೇ ಇರುತ್ತೆ ..ಹಸಿರು ಸೇನೆಯವರಿಗೆ, ಕೇಸರಿ ಅಂಗಿಯವರಿಗೆ ಒಂಚೂರು ಸಂಘಟನೆ ಅಂತ ಒಡಾಡೋರಿಗೆ ಇದನ್ನ ಬಿಡಿಸಿ ಹೇಳೀದ್ರ ಅಲ್ಲಲ್ಲಿ ಕೂಗಾಡಿ ಮಣ್ಣ ಮಾರಿಕೊಂಡು ತಿಂಬವಕ ತಿವದು-ಪವುದು ಹೇಳಿದ್ರೂ.. ಹೇಳಬಹುದು. ಆಗ ಈ ಯಪ್ಪ ಇಂಥವಕ್ಕ ಗಮನ ಕೊಡುತೈತೇನೋ…?(ಬರಹ ನಿಜಕ್ಕೂ ನಮ್ಮಂತಹ ರೈತರಿಗೆ ದಾರಿ ದೀಪವಾಗಲಿದೆ)
    ನಾಗು, ತಳವಾರ್.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: