ಈ ಹಾಡು ಬರೆದವನಿಗೆ ತಲೆ ಕೆಟ್ಟಿದೆ ಅಂದಿದ್ದರು !

nagendraprasad

ಚಿತ್ರ: ದುನಿಯಾ. ಗೀತೆರಚನೆ : ಡಾ. ನಾಗೇಂದ್ರಪ್ರಸಾದ್
ಸಂಗೀತ: ವಿ. ಮನೋಹರ್. ಗಾಯನ: ರಾಜೇಶ್ ಕೃಷ್ಣನ್-ನಂದಿತಾ
ಹೆಣ್ಣು: ಕರಿಯಾ ಐ ಲವ್ ಯೂ
ಕರುನಾಡ ಮೇಲಾಣೆ
ಗಂಡು: ಬೆಳ್ಳಿ ಐ ಲವ್ ಯೂ
ಬಿಳಿ ಮೋಡದಾ ಆಣೆ
ಹೆಣ್ಣು: ನಿನಗೊಂದು ಪ್ರೇಮದ ಪತ್ರ s
ಬರೆಯೋದು ನನಗಾಸೆ
ಗಂಡು: ನಾನೇ ಇರುವೆ ಹತ್ರ
ಬಿಡು ಆಸೆ ಓಕೂಸೆ ಐಐಪಐಐ

ಓದು ಬರಹ ಬರದುಐ ಬರಿ ಆಡು ಭಾಷೆ ನನದು
ತಬ್ಬಲಿ ನಾನು ತಾಯಿಯು ನೀನು ಐಏಳು ಜನ್ಮದ ಬಂಧು
ನಿನ್ನ ಪ್ರೀತಿ ಎದುರುಐ ನಾ ಇನ್ನು ಕೊನೆಯಾದರೂ
ಸಾರ್ಥಕವಾಯ್ತು ನನ್ನಾ ಬಾಳುಐ ನಾವು ಒಂದೇ ಉಸಿರು ಐಐ೧ಐಐ

ಯಾರು ಏನೇ ಅನಲಿಐ ಊರಿಗೆ ಊರೇ ಬರಲಿ
ಜೀವವು ನಿನದೆ ಜೀವನ ನಿನದೆಐ ನಿನ್ನಾ ಪ್ರೀತಿ ಸಿಗಲಿ
ಬಾರೇ ಬಾರೇ ಜಮುನಐ ಊರ್ಮೇಲ್ ಯಾಕೇ ಗಮನ
ಒಲವೇ ಜೀವನ ಸಾಕ್ಞಾತ್ಕಾರ ಐ ಜೀವ ಕೊಡ್ತೀನ್ ಚಿನ್ನ ಐಐ೨ಐಐ

ಈಚಿನ ದಿನಗಳ ಬ್ಯುಸಿ ಗೀತೆರಚನೆಕಾರರ ಪೈಕಿ ನಾಗೇಂದ್ರಪ್ರಸಾದ್ ಕೂಡ ಒಬ್ಬರು. `ಎಕ್ಸ್ಕ್ಯೂಸ್ಮಿ’ ಚಿತ್ರದ ಎಲ್ಲ ಹಾಡುಗಳು, `ಜೊತೆ ಜೊತೆಯಲಿ` ಚಿತ್ರದ `ಓ ಗುಣವಂತ ನೀನಿಂದು ನನ ಸ್ವಂತ’ `ಮಿಲನ’ದ `ಕದ್ದು ಕದ್ದು ನೋಡೋ ಕಳ್ಳ ಯಾರೋ…’ `ಸ್ವಾತಿಮುತ್ತು’ವಿನ `ಶ್ರೀ ಚಕ್ರಧಾರಿಗೆ ಶಿರಬಾಗಿ ಲಾಲಿ….’ `ಆಪ್ತಮಿತ್ರ’ ಚಿತ್ರದ `ಪಟ ಪಟ ಗಾಳಿಪಟ’ `ಪಯಣ’ದ `ಮೋಡದ ಒಳಗೆ ಹನಿಗಳ ಬಳಗ…’ ಈ ಮಧುರ ಗೀತೆಗಳೆಲ್ಲ ನಾಗೇಂದ್ರ ಪ್ರಸಾದ್ ರಚನೆಗಳೇ.
ನನ್ನ ಹಾಡುಗಳ ಹಿಂದೆ ವರಕವಿ ಬೇಂದ್ರೆಯವರ ಪ್ರಭಾವವಿದೆ. ಮೆಲೋಡಿ ಸಾಂಗ್ ಬರೆಯೋದು ಅಂದ್ರೆ ನನಗಿಷ್ಟ ಎನ್ನುವ ನಾಗೇಂದ್ರಪ್ರಸಾದ್, ಪಡ್ಡೆ ಹುಡುಗರ ಪಾಲಿನ ರಾಷ್ಟ್ರಗೀತೆಗಳು ಎಂದೇ ಹೆಸರಾಗಿರುವ `ಕೆಂಚಾಲೋ ಮಂಚಾಲೋ ಹೆಂಗವ್ರ್ಲಾ ನಿಮ್ಮ ಡವ್ಗಳೂ…’ ` ಸೊಂಟದ ವಿಷ್ಯ ಬ್ಯಾಡವೊ ಶಿಷ್ಯ’ `ಈ ಟಚ್ಚಲಿ ಏನೋ ಇದೆ…` ` ಐತಲಕ್ಕಡಿ ಜಲಜಲ ಜಲ ಜಲಜಾಕ್ಷಿ, ಕಮಕಮಕಮ ಕಮಲಾಕ್ಷಿ, ಮಿಣಮಿಣಮಿಣ ಮೀನಾಕ್ಷಿ….’ ಯಂಥ ಹಾಡುಗಳನ್ನೂ ಬರೆದಿದ್ದಾರೆ ಎಂದರೆ ಆಶ್ಚರ್ಯವೂ, ಸಂತೋಷವೂ, ಸಂಕೋಚವೂ ಒಟ್ಟೊಟ್ಟಿಗೇ ಆಗುತ್ತದೆ.
ನಾಗೇಂದ್ರ ಪ್ರಸಾದ್ರ ಪೂರ್ವಜರು ಆಂಧ್ರಮೂಲದವರು. ಅಲ್ಲಿಂದ ವಲಸೆ ಬಂದವರು ನೆಲೆ ನಿಂತದ್ದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಈ ಕಾರಣದಿಂದಲೇ, ನಾನು ನಾಗಮಂಗಲದವನು ಸಾರ್ ಎಂದು ನಾಗೇಂದ್ರಪ್ರಸಾದ್ ಹೆಮ್ಮೆಯಿಂದ, ಸಂಭ್ರಮದಿಂದ ಹೇಳಿಕೊಳ್ಳುತ್ತಾರೆ. ಬಾಲ್ಯವನ್ನು ನಾಗಮಂಗಲದಲ್ಲಿ ಕಳೆದ ನಾಗೇಂದ್ರಪ್ರಸಾದ್, ನಂತರ ಬಂದದ್ದು ಬೆಂಗಳೂರಿನ ಶ್ರೀರಾಂಪುರಕ್ಕೆ. ಕಾಲೇಜು ವ್ಯಾಸಂಗವನ್ನು ಶ್ರೀರಾಂಪುರದಲ್ಲಿ ಇದ್ದಾಗಲೇ ಮುಗಿಸಿದ ನಾಗೇಂದ್ರಪ್ರಸಾದ್, ಆ ಸಂದರ್ಭದಲ್ಲಿ ರೌಡಿಗಳ ಮೆರೆದಾಟವನ್ನು ತುಂಬ ಹತ್ತಿರದಿಂದ ಕಂಡರು. ಈ `ಅನುಭವ’ ಮುಂದೆ `ಕರಿಯ’ ಚಿತ್ರಕ್ಕಾಗಿ `ಕೆಂಚಾಲೋ ಮಂಚಾಲೋ…’ ಹಾಡು ಬರೆವ ಸಂದರ್ಭದಲ್ಲಿ ಅನುಕೂಲಕ್ಕೆ ಬಂತು.
ಸ್ವಾರಸ್ಯದ ಸಂಗತಿಯೆಂದರೆ, ನಾಗೇಂದ್ರಪ್ರಸಾದ್ ಹೆಸರಿನ ಹಿಂದೆ `ಡಾಕ್ಟರ್’ ಎಂಬ ವಿಶೇಷಣವಿದೆ. ಅದನ್ನು ಕಂಡವರು ಕುತೂಹಲದಿಂದ `ನೀವು ಪಿ.ಎಚ್ಡಿ ಮಾಡಿದ್ದೀರಾ’ ಎಂದರೆ- ಇಲ್ಲ, ಇಲ್ಲ. ನಾನು ಪಿ.ಎಚ್ಡಿ. ಡಾಕ್ಟರ್ ಅಲ್ಲ. ನಾನು ಆಯುರ್ವೇದಿಕ್ ಡಾಕ್ಟರ್. ಚಿತ್ರರಂಗಕ್ಕೆ ಬರುವ ಮುನ್ನ ಬೆಂಗಳೂರಿನ ಕುರುಬರಹಳ್ಳಿಯಲ್ಲಿ `ಭಾವನಾ ಆಯುರ್ವೇದಿಕ್ ಸೆಂಟರ್’ ನಡೆಸ್ತಾ ಇದ್ದೆ ಸಾರ್. ಈಗ್ಗ, ಹತ್ತು ವರ್ಷಗಳ ಹಿಂದೆ, ಅಂದರೆ ೧೯೯೯ ರಲ್ಲಿ ಕೆ.ವಿ. ಜಯರಾಂ ನಿರ್ದೇಶನದ ‘ಗಾಜಿನ ಮನೆ’ ಚಿತ್ರಕ್ಕೆ `ಬೇವು ಬೆಲ್ಲ ಹಂಚಿಕೊಂಡೆ’ ಎಂಬ ಹಾಡು ಬರೆಯುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ. ಮುಂದೆ, ೨೦೦೪ರಲ್ಲಿ `ಅಮ್ಮ’ ಎಂಬ ಆಲ್ಬಂ ಹೊರತಂದೆ. ಅದರಲ್ಲಿ ನನ್ನ ರಚನೆಯ ಎಂಟು ಹಾಡುಗಳಿದ್ದವು. ಒಂದೊಂದು ಹಾಡಿಗೆ ಒಬ್ಬೊಬ್ಬರಂತೆ, ಎಂಟು ಮಂದಿ ಹೆಸರಾಂತ ಸಂಗೀತ ನಿರ್ದೇಶಕರು ಸಂಗೀತ ಒದಗಿಸಿದರು. ಇಂಥದೊಂದು ಪ್ರಯತ್ನ ಕನ್ನಡಕ್ಕಂತೂ ಹೊಸದು ಎನ್ನುತ್ತಾರೆ ನಾಗೇಂದ್ರಪ್ರಸಾದ್.
ಇಂಥ ಜಬರ್ದಸ್ತ್ ಹಿನ್ನೆಲೆಯ ನಾಗೇಂದ್ರ ಪ್ರಸಾದ್, ದುನಿಯಾ ಚಿತ್ರಕ್ಕಾಗಿ `ಕರಿಯಾ ಐ ಲವ್ಯೂ’ ಹಾಡು ಬರೆದರಲ್ಲ? ಹೇಳಿದರೆ, ಆ ಸಂದರ್ಭದ್ದೇ ಒಂದು ಸ್ವಾರಸ್ಯಕರ ಕಥೆ. ಅದನ್ನು ಅವರಿಂದಲೇ ಕೇಳೋಣ. ಓವರ್ ಟು ನಾಗೇಂದ್ರಪ್ರಸಾದ್:
ಅದುವರೆಗೂ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ತಾ ಇದ್ದ ವಿಜಿ, ಅದೇ ಮೊದಲ ಬಾರಿಗೆ ಹೀರೋ ಆಗಿದ್ದ. ಚಿತ್ರದ ಹೆಸರು: ದುನಿಯಾ. ಅವನಿಗೆ ಒಂದು ಡ್ಯುಯೆಟ್ ಬರೆಯಲು ಹೇಳಿದರು ನಿರ್ದೇಶಕ ಸೂರಿ, ಸಂದರ್ಭವನ್ನೂ ಹೇಳಿದರು. ಅದು ಹೀಗೆ: `ಹೀರೋ ಸಾಧಾರಣ ಸುಂದರಾಂಗ. ಸಿಂಪಲ್ಲಾಗಿ ಹೇಳಬೇಕೆಂದರೆ ಆತ ಕರಿಯ ! ಅಂಥವನೂ ಕೂಡ ಲವ್ನಲ್ಲಿ ಬಿದ್ದಿರ್ತಾನೆ. ಅದನ್ನು ಹುಡುಗಿಗೆ ಹೇಳ್ಕೋಬೇಕು… ಇವನು ಹೇಳಿದ್ದು ಕೇಳಿ ಅವಳೂ ಖುಷಿಯಿಂದ ಹಾಡಬೇಕು. ಆದರೆ- ನಾನು ಪ್ರೀತೀಲಿ ಬಿದ್ದಿದ್ದೀನಿ ಎಂದು ಹೇಳೋಕೆ ಅವನಿಗೆ ಏನೋ ಸಂಕೋಚ….’
ಈ ಸಂದರ್ಭಕ್ಕೆ ನೀಡಿದ ಸಂಗೀತ ನಿರ್ದೇಶಕ ವಿ. ಮನೋಹರ್-`ತನನ ತಾನಾ ನಾ….’ ಎಂಬ ಟ್ಯೂನ್ ಕೊಟ್ಟರು. ಸೂರಿ ಹೇಳಿದ್ದರಲ್ಲ, ಆ ಮಾತನ್ನೇ ಮತ್ತೆ ಮತ್ತೆ ನೆನಪು ಮಾಡಿಕೊಂಡೆ. `ಹೀರೋ ಕಪ್ಪಗಿರ್ತಾನೆ. ಹಾಗಿದ್ದೂ ಲವ್ಗೆ ಬೀಳ್ತಾನೆ. ಅವನನ್ನು ನಾಯಕಿ ತುಂಬಾ ಇಷ್ಟಪಡ್ತಾ ಇರ್ತಾಳೆ…, ಎಂಬ ಸಂದರ್ಭ ನೆನಪಾದ ತಕ್ಷಣ `ಕರಿಯಾ ಐ ಲವ್ ಯೂ’ ಎಂದೇ ಬರೆಯಬಾರದೇಕೆ ಅನ್ನಿಸಿತು. ಮುಂದಿನ ಎರಡೇ ನಿಮಿಷದಲ್ಲಿ ಹಾಡು ಬರೆದು, ಕೊಟ್ಟೆ. ಅದನ್ನು ನೋಡಿ ವಿ. ಮನೋಹರ್,ರೆಕಾರ್ಡಿಮಗ್ ಸ್ಟುಡಿಯೋದಲ್ಲಿದ್ದ ಸೌಂಡ್ ಎಂಜಿನಿಯರ್, ಗಾಯಕರಾದ ರಾಜೇಶ್ ಕೃಷ್ಣನ್, ನಂದಿತಾ…. ಎಲ್ಲರೂ ಗೊಳ್ಳನೆ ನಕ್ಕರು.`ಕರಿಯಾ ಐ ಲವ್ ಯೂ’ ಅಂತ ಬರೆದಿದ್ದೀರಲ್ರೀ ನಾಗೇಂದ್ರ ಪ್ರಸಾದ್? ನಿಮಗೆ ತಲೆ ಕೊಟ್ಟಿದೆ ಎಂದು ಹಾಸ್ಯ ಮಾಡಿದರು. ಬೇರೆ ಹಾಡು ಬರೆಸಿ ಸಾರ್ ಎಂದು ಸೂರಿಗೆ ಹೇಳಿ, ಎಲ್ಲರೂ ಹೊರಗೆ ಹೋದರು.
ಆದರೆ, ನನಗೆ ಈ ಹಾಡಿನ ಬಗ್ಗೆ ಕಾನ್ಫಿಡೆನ್ಸ್ ಇತ್ತು. ಅದು ಖಂಡಿತ ಹಿಟ್ ಆಗುತ್ತೆ ಎಂಬ ನಂಬಿಕೆಯೂ ಇತ್ತು. ಅದನ್ನೇ ನಿರ್ದೇಶಕ ಸೂರಿಗೂ ಹೇಳಿದೆ. ಒಂದು ವೇಳೆ ಈ ಹಾಡನ್ನು ನೀವು ಬಳಸಿಕೊಳ್ಳದೇ ಹೋದರೆ, ಬೇರೊಂದು ಸಿನಿಮಾಕ್ಕೆ ನಾನು ಬಳಸಿಕೊಳ್ತೇನೆ. ನಿಜ ಹೇಳಿ, ನಿಮಗೆ ಹಾಡು ಇಷ್ಟವಾಗಲಿಲ್ವ ಎಂದು ನಿರ್ದೇಶಕ ಸೂರಿಯನ್ನು ಕೇಳಿದೆ. ನಂಗೆ ಖಂಡಿತ ಇಷ್ಟವಾಗಿದೆ ಅಂದರು ಸೂರಿ. ಹಾಗಿದ್ದ ಮೇಲೆ ಹಿಂಜರಿಯೋದು ಯಾಕೆ ಸಾರ್? ಮುಲಾಜಿಲ್ಲದೆ ಹಾಡಿಸಿ ಎಂದು ಒತ್ತಾಯಿಸಿದೆ. ಕಡೆಗೆ, ಸಂಗೀತ ನಿರ್ದೇಶಕರನ್ನು ಅವಾಯ್ಡ್ ಮಾಡಿ, ಹಾಡುಗಾರರನ್ನು ಕರೆಸಿ ಹಾಡಿಸಿದ್ದಾಯಿತು.
ಮುಂದೆ `ಕರಿಯಾ ಐ ಲವ್ ಯೂ’ ಹಾಡಿನ ಪರಿಣಾಮ ಎಂಥದೆಂದು ಎಲ್ಲರಿಗೂ ಗೊತ್ತಿದೆ. ಮೊದಲು ಆ ಹಾಡು ನೋಡಿ ನಾಗೇಂದ್ರ ಪ್ರಸಾದ್ಗೆ ತಲೆ ಕೆಟ್ಟಿದೆ ಅಂದವರೆಲ್ಲ, ಅದೇ ಹಾಡು ಗುನುಗಲು ಶುರುಮಾಡಿದ್ದಾರೆ. ಮೊದಲು-ಇದೆಂಥ ಹಾಡು ಸಾರ್ ಎಂದು ಗೇಲಿ ಮಾಡಿದ್ದ ನಂದಿತಾ, ಅದೇ ಹಾಡಿಗೆ ಶ್ರೇಷ್ಠ ಗಾಯಕಿ ಪ್ರಶಸ್ತಿ ಪಡೆದು ಸಂಭ್ರಮಿಸಿದ್ದಾರೆ……
ಇಷ್ಟು ಹೇಳಿ ಮೌನವಾದರು ನಾಗೇಂದ್ರ ಪ್ರಸಾದ್. ಅದೇ ವೇಳೆಗೆ ಅವರ ಆಫೀಸಿನ ಎದುರಿಗಿದ್ದ ಬಸ್ ನಿಲ್ದಾಣದಲ್ಲಿ ಮುನಿದಿದ್ದ ಹುಡುಗನ ಎದುರು ನಿಂತ ಹುಡುಗಿಯೊಬ್ಬಳು ಅವನಿಗಷ್ಟೇ ಕೇಳಿಸುವಂತೆ ಹಾಡಿಯೇಬಿಟ್ಟಳು: ಕರಿಯಾ ಐ ಲವ್ ಯೂ……
ಹೇಳಿ, ಈ ಹಾಡುಗಳು ಕೊಡುವ ಸಂಭ್ರಮಕ್ಕೆ ಕೊನೆಮೊದಲುಂಟೆ?

Advertisements

1 Comment »

  1. 1

    ಇಂಥ ಘಟನೆಗಳೂ ನಡೆಯುತ್ತವೆ ಅಂತ ತಿಳಿದು ಆಶ್ಚರ್ಯವಾಯ್ತು!


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: