ಮೂರು ದಿನಗಳಲ್ಲೂ ಹೊಳೆಯದ ಹಾಡು ಮೂರೇ ನಿಮಿಷದಲ್ಲಿ ಬರೆಸಿಕೊಂಡಿತು!

sat1

ಚಿತ್ರ: ಓಹಿಲೇಶ್ವರ. ಗೀತೆ ರಚನೆ: ವಿಜಯನಾರಸಿಂಹ.
ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ : ಘಂಟಸಾಲ

ಹೇ ಶಂಕರಾ…. ದಯಾನಿಧೇ…
ಈ ದೇಹದಿಂದ ದೂರನಾದೆ ಏಕೆ ಆತ್ಮನೇ
ಈ ಸಾವು ನ್ಯಾಯವೇ… ಈ ಸಾವು ನ್ಯಾಯವೇ
ಆಧಾರ ನೀನೆಂದು ಈ ಲೋಕ ನಂಬಿದೇ ಐಐಪಐಐ

ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೇ?
ಕಾವದೇವ ಸಾವುತರಲು ಎಲ್ಲಿ ರಕ್ಷಣೇ
ಯಾವ ಪಾಪಕೇ-ಸಾವು ಕಾಡಿತೋ
ಪರಮಾತ್ಮ ನ್ಯಾಯ ಬೇಡವೆ?
ಈ ಸಾವು ನ್ಯಾಯವೆ, ಈ ಸಾವು ನ್ಯಾಯವೆ? ಐಐ೧ಐಐ

ಸೇವೆಗಾಗಿ ಕಾದ ಹೂವು ಕಸವ ಸೇರಿತೇ
ಬಾಳಿನಾಸೆ ಚಿಗುರಿನಲ್ಲೆ ಬಾಡಿಹೋಯಿತೇ
ಏನು ತಪ್ಪಿದೆ-ಹೇಳಬಾರದೆ
ಸರಿಯೇನು-ಮೌನವೇಕಿದು?
ಈ ಸಾವು ನ್ಯಾಯವೆ, ಈ ಸಾವು ನ್ಯಾಯವೆ? ಐಐ೨ಐಐ

ಶಿವನಾಮ ಮಂತ್ರವೊಂದೆ ಅಮರದೀವಿಗೇ
ಪರಮೇಶ ಪ್ರಾಣಜ್ಯೋತಿ ಮರಳಿ ತಾರೆಯಾ
ಮರಳಿ ತಾರೆಯಾ… ಮರಳಿ ತಾರೆಯಾ
ಈ ಸಾವು ನ್ಯಾಯವೇ, ಈ ಸಾವು ನ್ಯಾಯವೆ? ಐಐ೩ಐಐ

ಮೊದಲ ಯತ್ನದಲ್ಲೇ ಯಶಸ್ಸು ಪಡೆಯುವುದು, ಜನಪ್ರಿಯತೆ ಗಳಿಸುವುದು ಬಹುಕಷ್ಟ. ಅಷ್ಟೇ ಅಲ್ಲ, ಹಾಗೆ ಪಡೆದ ಯಶಸ್ಸಿಗೆ ಜವಾಬ್ದಾರಿ ಹೆಚ್ಚು. ಮುಂದಿನ ಸಾಹಸಕ್ಕೆ ಕೈ ಹಾಕಲು ಹಿಂದಿನ ಯಶಸ್ಸು ಸೂರ್ತಿ ಕೊಡುವಂತೆಯೇ ಹೊರೆಯನ್ನೂ ಹೆಚ್ಚಿಸುತ್ತದೆ. ಹೀಗಾಗಿ ಪಡೆದ ಯಶಸ್ಸನ್ನು ಕಾಪಾಡಿಕೊಳ್ಳುವುದು ತುಂಬಾ ಪರಿಶ್ರಮದ ಕಾರ್ಯ. ಇದೊಂದು ರೀತಿಯಲ್ಲಿ-ಪ್ರೇಮಿಸುವುದು ಸುಲಭ, ಅದನ್ನು ಉಳಿಸಿಕೊಳ್ಳುವುದು ಕಠಿಣ! ಗಳಿಸಿದ್ದು ಹೆಚ್ಚಲ್ಲ, ಅದನ್ನು ಉಳಿಸಿಕೊಳ್ಳುವುದೇ ಹೆಚ್ಚು ಎಂಬ ಮಾತಿನಂತೆ !
ಬರೆದ ಮೊದಲ ಹಾಡಿನಿಂದಲೇ (ಅದೇ ಈ ಅಂಕಣದಲ್ಲಿ ಪ್ರಸ್ತಾಪವಾಗಿರುವ `ಈ ದೇಹದಿಂದ ದೂರನಾದೆ ಏಕೆ ಆತ್ಮನೆ’…) ಯಶಸ್ಸಿನ ರುಚಿ ಕಂಡ ವ್ಯಕ್ತಿ ವಿಜಯನಾರಸಿಂಹ. ಈತ, ಮಂಡ್ಯ ಜಿಲ್ಲೆ, ಮೇಲುಕೋಟೆ ಸಮೀಪದ ಹಳೇಬೀಡು ಎಂಬ ಹಳ್ಳಿಯವರು. ಚಿಕ್ಕಂದಿನಿಂದಲೇ ನಾಟಕ-ಕಾದಂಬರಿ ಬರೆವ ಗೀಳು ಅಂಟಿಸಿಕೊಂಡ ವಿಜಯನಾರಸಿಂಹ, ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿದ್ದ ಪು.ತಿ.ನ ಗೋಪಾಲ ಕೃಷ್ಣ ಅಡಿಗರಂಥ ಸಾಹಿತಿಗಳ ನಿಕಟವರ್ತಿಯಾಗಿದ್ದವರು. ಕೆಲವು ಕಾಲ ಪತ್ರ ಕರ್ತರಾಗಿಯೂ ದುಡಿದದ್ದು ಅವರ ಹೆಚ್ಚುಗಾರಿಕೆ. ಭಕ್ತಿಗೀತೆಗಳಲ್ಲಿ ಇವತ್ತಿಗೂ ನಂಬರ್ಒನ್ ಎನಿಸಿಕೊಂಡಿರುವ `ಗಜಮುಖನೆ ಗಣಪತಿಯೆ ನಿನಗೆ ವಂದನೆ’ಯನ್ನು ಬರೆದವರು ಇದೇ ವಿಜಯನಾರಸಿಂಹ.
೧೯೫೬ರಲ್ಲಿ, ಅಂದರೆ ೫೩ವರ್ಷಗಳ ಹಿಂದೆ `ಓಹಿಲೇಶ್ವರ’ ಚಿತ್ರಕ್ಕೆ ಹಾಡು ಬರೆಯುವ ಮೂಲಕ ಚಿತ್ರರಂಗಕ್ಕೆ ಬಂದವರು ವಿಜಯನಾರಸಿಂಹ. ಅವರನ್ನು ಕರೆತಂದು ಹಾಡು ಬರೆಯಲು ಕೂರಿಸಿದವರು-ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್. ವಿಜಯನಾರಸಿಂಹರ ಚೊಚ್ಚಲು ಗೀತೆಯಾದ `ಈ ದೇಹದಿಂದ ದೂರನಾದೆ ಏಕೆ ಆತ್ಮನೆ’ ಹಾಡು ಅಪಾರ ಜನಪ್ರಿಯತೆ ಪಡೆಯಿತು. ಇಂದಿಗೂ ಈ ಹಾಡು ಆಕಾಶವಾಣಿಯ ಮೆಚ್ಚಿನ ಚಿತ್ರಗೀತೆಯಾಗಿ ಪ್ರಸಾರವಾಗುವುದು ಮಾತ್ರವಲ್ಲದೆ, ಬಸ್ಸ್ಟ್ಯಾಂಡ್ಗಳಲ್ಲಿ ಹೊಸ ತಲೆಮಾರಿನ ಭಿಕ್ಷುಕರ ಕಂಠದಿಂದಲೂ ಹೊಮ್ಮುವುದು ಅದರ ಜನಪ್ರಿಯತೆಯನ್ನು ತಿಳಿಸುತ್ತದೆ.
`ಓಹಿಲೇಶ್ವರ’ದ ನಂತರ ವಿಜಯನಾರಸಿಂಹ ಹಿಂತಿರುಗಿ ನೋಡಲಿಲ್ಲ. ಅದರಲ್ಲೂ ಪುಟ್ಟಣ್ಣ ಕಣಗಾಲ್ ಅವರ ಎಲ್ಲ ಚಿತ್ರಗಳಲ್ಲೂ ವಿಜಯನಾರಸಿಂಹ ಕಡ್ಡಾಯ ಎಂಬಂತೆ ಹಾಡು ಬರೆದರು. ನಾಗರಹಾವು ಚಿತ್ರದ-`ಹಾವಿನ ದ್ವೇಷ ಹನ್ನೆರಡು ವರುಷ,’ `ಬಾರೇ ಬಾರೇ ಚೆಂದದ ಚೆಲುವಿನ ತಾರೆ,’ `ಶರಪಂಜರ’ದ `ಹದಿನಾಲ್ಕು ವರ್ಷ ವನವಾಸದಿಂದ’ `ಸಂದೇಶ ಮೇಘ ಸಂದೇಶ’ `ಗೆಜ್ಜೆಪೂಜೆ’ಯ ` ಪಂಚಮವೇದ ಪ್ರೇಮದ ನಾದ’; ಎಡಕಲ್ಲು ಗುಡ್ಡದ ಮೇಲೆ ಚಿತ್ರದ `ವಿರಹಾ ನೂರು ನೂರು ತರಹಾ’ `ನಿಲ್ಲು ನಿಲ್ಲೇ ಪತಂಗ’ `ಧರ್ಮಸೆರೆ’ಯ `ಈ ಸಂಭಾಷಣೆ, ನಮ್ಮ ಈ ಪ್ರೇಮ ಸಂಭಾಷಣೆ…` ` ಬಿಳೀ ಹೆಂಡ್ತಿಯ ` ಆ ದೇವರೆ ನುಡಿದಾ ಮೊದಲ ನುಡಿ` `ಉಪಾಸನೆ’ಯ `ಭಾರತ ಭೂಶಿರ ಮಂದಿರ ಸುಂದರಿ….’ ಹೀಗೆ, ವಿಜಯನಾರಸಿಂಹ ಸೃಷ್ಟಿಸಿದ ಜನಪ್ರಿಯ ಹಾಡುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
***
ಇಂಥ ಹಿನ್ನೆಲೆಯ ವಿಜಯ ನಾರಸಿಂಹ, ಓಹಿಲೇಶ್ವರ ಚಿತ್ರಕ್ಕೆ ` ಈ ದೇಹದಿಂದ ದೂರನಾದೆ ಏಕೆ ಆತ್ಮನೆ` ಹಾಡು ಬರೆದವರಲ್ಲ? ಆ ಹಾಡಿನ ಸೃಷ್ಟಿಗೆ ಕಾರಣವಾದ ಸಂದರ್ಭದ್ದೇ ಒಂದು ಚೆಂದದ ಕಥೆ.
ಆ ಚಿತ್ರದಲ್ಲಿ ನಾಯಕ ಶಿವಭಕ್ತ. ಆತನ ತಂಗಿ, ಚಿಕ್ಕ ವಯಸ್ಸಿನಲ್ಲೇ ಆಕಸ್ಮಿಕವಾಗಿ, ಅದೂ ಕಾಡಿನಲ್ಲಿ ಸತ್ತುಹೋಗುತ್ತಾಳೆ. ಆಕೆಯ ಶವವನ್ನು ಎರಡೂ ಕೈಗಳಲ್ಲಿ ಎತ್ತಿಕೊಂಡು ಆ ಕಾಡಲ್ಲಿದ್ದ ಶಿವ ದೇವಾಲಯದ ಮುಂದೆ ನಿಂತು `ನನ್ನ ತಂಗಿಯ ಪ್ರಾಣವನ್ನು ಇಷ್ಟು ಬೇಗ ಏಕೆ ಕೊಂಡೊಯ್ದೆ ಭಗವಂತಾ’ ಎಂದು ನಾಯಕ ಸಂಕಟದಿಂದ ಹಾಡಬೇಕು… ಈ ಸನ್ನಿವೇಶಕ್ಕೆ ಹೊಂದುವಂಥ ಹಾಡು ಬೇಕು…
ಈ ಸಂದರ್ಭ ವಿವರಿಸಿದ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್, ಒಂದು ಟ್ಯೂನ್ ಕೇಳಿಸಿ `ವಿಜಯ ನಾರಸಿಂಹಾ, ಈ ಟ್ಯೂನ್ಗೆ ಹೊಂದುವಂಥ ಹಾಡು ಬರೆದುಕೊಡಯ್ಯಾ’ ಎಂದರು. ಹಾಡು ಬರೆಯುವ ಉದ್ದೇಶದಿಂದಲೇ ಮದ್ರಾಸಿನ ಹೋಟೆಲೊಂದರಲ್ಲಿ ರೂಂ ಮಾಡಿದ್ದೂ ಆಯಿತು.
ಹೇಳಿ ಕೇಳಿ ಮೊದಲ ಸಿನಿಮಾ. ಮೊದಲ ಹಾಡು. ಅದೇ ಕಾರಣಕ್ಕೋ ಏನೋ ವಿಜಯನಾರಸಿಂಹ ಅವರಿಗೆ, ತಕ್ಷಣಕ್ಕೆ ಹಾಡು ಹೊಳೆಯಲೇ ಇಲ್ಲ. ಹೀಗೇ ಮೂರು ದಿನಗಳು ಕಳೆದು ಹೋದವು. ನಾಲ್ಕನೇ ದಿನ ಪಟ್ಟಾಗಿ ತಿಂಡಿ ತಿಂದದ್ದಾಯಿತು. ನಂತರ ಹಾಡು ಬರೆಯಲು ಕೂತರೆ, ಆಗಲೂ ಹಾಡು ಹೊಳೆಯಲಿಲ್ಲ.
ತಕ್ಷಣ ಮೇಲೆದ್ದ ಜಿ.ಕೆ. ವೆಂಕಟೇಶ್-`ನಾನು ಒಂದು ಸಿಗರೇಟ್ ಸೇದಿಕೊಂಡು ಐದು ನಿಮಿಷ ಅಡ್ಡಾಡಿಕೊಂಡು ಬರ್ತೇನೆ. ನೀನು ಹಾಡು ಬರೀತಾ ಇರು’ ಎಂದು ಹೇಳಿ ಹೊರಗೆ ಬಂದರು. ಇತ್ತ, ಏನು ಬರೆಯಲಿ ಎಂದು ಯೋಚಿಸುತ್ತ ಕುಳಿತ ವಿಜಯನಾರಸಿಂಹ ಅವರಿಗೆ, ಕುಳಿತಲ್ಲೇ ನಿದ್ರೆ ಆವರಿಸಿತು. ತಿರುಗಿ ಬಂದ ಜಿ.ಕೆ. ವೆಂಕಟೇಶ್,-`ವಿಜಯಾ, ಏನೋ ಇದೂ ?’ ಎಂದರು. ಇವರಿಗೆ ಎಚ್ಚರವಾಗಲಿಲ್ಲ. ತಕ್ಷಣವೇ ಮೈಮುಟ್ಟಿ, ಮೆಲ್ಲಗೆ ತಟ್ಟಿ ಎಬ್ಬಿಸಿದ ವೆಂಕಟೇಶ್-`ಏನೋ ಇದೂ? ಒಳ್ಳೇ ಹೆಣ ಬಿದ್ದಂಗೆ ಬಿದ್ದದೀಯಲ್ಲೋ’ ಎಂದು ಛೇಡಿಸಿದರು. ಹಿಂದೆಯೇ -`ನಿನ್ನ ದೇಹ ಮಾತ್ರ ಇಲ್ಲಿದೆ. ಒಳಗಿನ ಚೈತನ್ಯ ಎಲ್ಲಿಗೆ ಹೋಯ್ತಯ್ಯಾ’ ಎಂದು ಪ್ರಶ್ನಿಸಿದರು.
ಕಡೆಯ ಮಾತು ಕೇಳುತ್ತಿದ್ದಂತೆಯೇ ವಿಜಯ ನಾರಸಿಂಹ ಅವರ ಕಂಗಳು ಮಿನುಗಿದವು. ಅವರು ಸಡಗರದಿಂದ ಪ್ಯಾಡ್ ಎತ್ತಿಕೊಂಡು-`ಸಾರ್, ಹಾಡಿನ ಸಾಲು ಹೊಳೆಯಿತು. ಮೂರು ನಿಮಿಷ ತಡೀರಿ, ಬರೆದು ಬಿಡ್ತೀನಿ’ ಎಂದವರೇ `ದೇಹ ಮಾತ್ರ ಇಲ್ಲಿದೆ, ಒಳಗಿನ ಚೈತನ್ಯ ಎಲ್ಲಿಗೆ ಹೋಯ್ತೋ’ ಎಂಬ ಸಾಲನ್ನೇ ಬೇಸ್ ಮಾಡಿಕೊಂಡು ` ಈ ದೇಹದಿಂದ ದೂರನಾದೆ ಏಕೆ ಆತ್ಮನೆ…’ ಹಾಡನ್ನು ಕೇವಲ ಮೂರೇ ನಿಮಿಷಗಳಲ್ಲಿ ಬರೆದು ಬಿಟ್ಟರು ! ಬರೆದೇ ಬಿಟ್ಟರು; ಕೇವಲ ಮೂರೇ ನಿಮಿಷಗಳಲ್ಲಿ !
ಅದಕ್ಕೇ ಹೇಳಿದ್ದು: ಪ್ರತಿಯೊಂದು ಮಧುರಗೀತೆಯ ಹಿಂದೆ ಅಷ್ಟೇ ಮಧುರವಾದ ಒಂದು ಕಥೆಯಿರುತ್ತದೆ. ಈ ಮಾತು ಎಷ್ಟೊಂದು ಸತ್ಯ, ಅಲ್ಲವೆ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: