ಬೆರಳಲ್ಲಿ ಇಲ್ಲದ ಚಿನ್ನದುಂಗುರ ಬಂಗಾರದಂಥ ಹಾಡು ಬರೆಸಿತು !

rnj

ಚಿತ್ರ: ಬೇಡಿ ಬಂದವಳು. ಗೀತೆ ರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ಆರ್ ಸುದರ್ಶನಂ. ಗಾಯನ : ಪಿ.ಬಿ. ಶ್ರೀನಿವಾಸ್-ಪಿ. ಸುಶೀಲ

ನೀರಿನಲ್ಲಿ ಅಲೆಯ ಉಂಗುರ….
ನೀರಿನಲ್ಲಿ ಅಲೆಯ ಉಂಗುರ
ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದಾ ನಲ್ಲ….. ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ ಐಐಪಐಐ

ಅಂದಿಗೆಯು ಕಾಲಿನುಂಗುರ
ಅದರ ದನಿ ಎಷ್ಟು ಸುಂದರ
ತರುವು ಲತೆಯೂ ಸೇರಿದ ಕಥೆಯು
ತನುವ ಬಳಸಿ ತೋಳಿನುಂಗುರ ಐಐ೧ಐಐ

ಮಣ್ಣಿನಲ್ಲಿ ಕಂಡ ಉಂಗುರ
ಹೆಣ್ಣು ನಾಚಿ ಗೀರಿದುಂಗುರ
ಬೆರಳಿನಿಂದ ತೀಡಿದುಂಗುರ
ಕಣ್ಣ ಸೆಳೆದ ಕರುಳ ಉಂಗುರ ಐಐ೨ಐಐ

ಆಗೆ ನಿನ್ನ ಕೈಯ ಸಂಚರ
ಎನ್ನ ಹೃದಯವೊಂದು ಡಂಗುರ
ನಾನೂ ನುಡಿಯೆ ಕಿವಿಯೊಳಿಂಚರ
ಹಣೆಯ ಮೇಲೆ ಬೆವರಿನುಂಗುರ ಐಐ೩ಐಐ

‘ಬೇಡಿ ಬಂದವಳು’ ಚಿತ್ರದ ನಿರ್ಮಾಣ ಕಾರ್ಯ ಆರಂಭವಾಗಿತ್ತು. ನಾಯಕ-ನಾಯಕಿಯಾಗಿ ಕಲ್ಯಾಣ್ ಕುಮಾರ್-ಚಂದ್ರಕಲಾ ಆಯ್ಕೆಯಾಗಿದ್ದರು. ಗೀತೆ ರಚನೆಯ ಹೊಣೆ ಆರ್.ಎನ್. ಜಯಗೋಪಾಲ್ ಅವರ ಹೆಗಲೇರಿತ್ತು. ಅವರನ್ನು ಮದ್ರಾಸಿನ ವಾಹಿನಿ ಸ್ಟುಡಿಯೋಗೆ ಕರೆಸಿಕೊಂಡ ನಿರ್ದೇಶಕರು ಹೇಳಿದರಂತೆ: ‘ ನೋಡಿ ಜಯಗೋಪಾಲ್, ನಾಯಕ-ನಾಯಕಿ ಇಬ್ಬರೂ ಪರಸ್ಪರ ಮೋಹಕ್ಕೆ ಒಳಗಾಗಿರುತ್ತಾರೆ. ಈ ಸನ್ನಿವೇಶದ ತೀವ್ರತೆಯನ್ನು ಹೆಚ್ಚಿಸುವಂಥ ಒಂದು ಡ್ಯುಯೆಟ್ ಸಾಂಗ್ ಬೇಕು…’
‘ಸರಿ. ಬರೆದು ಕೊಡ್ತೇನೆ’ ಎಂದ ಜಯಗೋಪಾಲ್, ಪಲ್ಲವಿಯನ್ನು ಹೇಗೆ ಶುರುಮಾಡುವುದು ಎಂದು ಐದಾರು ನಿಮಿಷ ನಿಂತಲ್ಲೇ ಯೋಚಿಸಿದರು. ಯಾಕೋ ಒಂ.ದು ಪದವೂ ಹೊಳೆಯಲಿಲ್ಲ. ಯಾವುದಾದರೂ ಒಂದು ವಿಷಯವಾಗಿ ಯೋಚಿಸುತ್ತಿರುವಾಗ ಉಂಗುರವನ್ನು ಎಡಗೈನಿಂದ ತಿರುವುವುದು ಆರ್.ಎನ್.ಜೆ. ಅವರಿಗೆ ರೂಢಿಯಾಗಿತ್ತು. ಅವತ್ತೂ ಹಾಗೆಯೇ ಅಭ್ಯಾಸಬಲದಿಂದ ಉಂಗುರದ ಬೆರಳು ಮುಟ್ಟಿ ನೋಡಿಕೊಂಡರು: ತಕ್ಷಣವೇ ಗಾಬರಿಯಾಯಿತು. ಏಕೆಂದರೆ-ಬೆರಳಲ್ಲಿ ಉಂಗುರವಿರಲಿಲ್ಲ !
ಅಯ್ಯಯ್ಯೋ, ಉಂಗುರ ಎಲ್ಲಿ ಹೋಯಿತು? ಎಂದು ಒಂದೇ ಸಮನೆ ಚಿಂತೆಗೆ ಬಿದ್ದರು ಆರ್ಎನ್ಜೆ. ಆಗಲೇ ಅವರಿಗೆ, ತಾವು ಉಳಿದುಕೊಂಡಿದ್ದ ಪಾಮ್ಗ್ರೂವ್ ಹೋಟೆಲಿನಲ್ಲಿ, ಬೆಳಗ್ಗೆ ಸ್ನಾನಕ್ಕೆ ಹೋಗುವ ಮುನ್ನ ಟೇಬಲ್ನ ಮೇಲೆ ಬಿಚ್ಚಿಟ್ಟಿದ್ದು ನೆನಪಿಗೆ ಬಂತು. ಆಗಲೇ, ಹಾಗೆ ಉಂಗುರವನ್ನು ಬಿಚ್ಚಿಡುವ ಸಂದರ್ಭದಲ್ಲಿ, ಅದು ಸ್ವಲ್ಪ ಕೈ ಜಾರಿದಂತೆ ಆದದ್ದು, ಹಾಗೆ ಕೈ ಜಾರಿದ ಉಂಗುರ ಅಲ್ಲಿದ್ದ ನೀರಿನ ಲೋಟದೊಳಕ್ಕೆ ಬೀಳಬಹುದೆಂದು ತಾವು ಗಲಿಬಿಲಿಗೊಂಡದ್ದು ಕೂಡ ನೆನಪಾಯಿತು. ಇದೆಲ್ಲ ನೆನಪಾಗುತ್ತಲೇ-‘ಓಹ್, ಉಂಗುರ ಹೋಟೆಲಿನಲ್ಲಿಯೇ ಉಳಿದುಹೋಗಿದೆ’ ಎಂದು ಸಮಾಧಾನ ಮಾಡಿಕೊಂಡ ಜಯಗೋಪಾಲ್ ಮತ್ತೆ ಸ್ವಗತದಲ್ಲಿ ತೇಲಿಹೋಗಿ ಹೀಗೆ ಯೋಚಿಸಿದರು: ‘ಒಂದು ವೇಳೆ ಬೆಳಗ್ಗೆ ಉಂಗುರ ಕೈ ಜಾರಿ ನೀರಿನ ಲೋಟದೊಳಕ್ಕೆ ಬಿದ್ದಿದ್ದರೆ- ಮುಂದೇನಾಗುತ್ತಿತ್ತು? ಉಂಗುರ ಬಿದ್ದ ಕಾರಣದಿಂದಲೇ ನೀರೊಳಗೆ ಅಲೆಗಳು ಕಾಣಿಸಿಕೊಳ್ಳುತ್ತಿದ್ದವು….’
ಹೀಗೆ ಯೋಚಿಸಿದ ಮರುಕ್ಷಣವೇ ಮಿಂಚಿನಂಥ ಸಾಲೊಂದು ಆರ್ಎನ್ಜೆಯವರ ಕೈ ಹಿಡಿಯಿತು. ಅವರು ಹಾಳೆ ತೆಗೆದುಕೊಂಡು ಸರಸರನೆ ಬರೆದೇಬಿಟ್ಟರು : ‘ನೀರಿನಲ್ಲಿ ಅಲೆಯ ಉಂಗುರಾ…..‘
ಮುಂದಿನ ಸಾಲು ಹೇಗಿರಬೇಕು ಎಂಬುದನ್ನು ಮನದಲ್ಲಿಯೇ ಲೆಕ್ಕ ಹಾಕಿದರು ಆರ್.ಎನ್.ಜೆ. ತಕ್ಷಣವೇ ಅವರಿಗೆ ಹೀಗನ್ನಿಸಿತು. ಅವಳಿಗೆ ಇಷ್ಟವಾಗುತ್ತೆ’ ಎಂಬ ಕಾರಣದಿಂದಲೇ ಪ್ರಿಯತಮ ಒಂದು ಉಂಗುರ ಮಾಡಿಸಿಕೊಂಡು ಬಂದಿದ್ದಾನೆ. ಅದನ್ನು ‘ಅವಳಿಗೆ’ ತೋರಿಸಿದ್ದಾನೆ. ಅವಳು ತುಂಬ ಖುಷಿಯಿಂದ ‘ವಾಹ್… ತುಂಬಾ ಚೆನ್ನಾಗಿದೆ’ ಎಂದು ಖುಷಿಪಡುತ್ತಾ ತಲೆದೂಗುತ್ತಾಳೆ. ಆ ಸಂದರ್ಭದಲ್ಲಿ ಅವಳ ಮುಡಿಯಿಂದ ಒಂದು ಮಲ್ಲಿಗೆ ಹೂವು ಜಾರಿ ನೆಲಕ್ಕೆ ಬಿದ್ದುಬಿಡುತ್ತದೆ.
ಹಾಗೆ ಬಿದ್ದ ಹೂವೂ ಸಹ ನೆಲದಲ್ಲಿ ತನ್ನ ಮುದ್ರೆ ಒತ್ತುತ್ತದೆ. ಇಷ್ಟಾದ ಮೇಲೆ ಅವನು ಸುಮ್ಮನಿರುತ್ತಾನಾ? ಏನೋ ಗುಟ್ಟು ಹೇಳುವವನಂತೆ ಹತ್ತಿರ ಕರೆದು ಕೆನ್ನೆಗೆ ‘ಪ್ಚ್’ ಎಂದು ಸದ್ದಾಗಿಯೂ ಸದ್ದಾಗದಂತೆ ಮುತ್ತಿಟ್ಟು ಬಿಡುತ್ತಾನೆ. ಪರಿಣಾಮ, ಬೆರಳಿನ ಸುತ್ತ ಉಂಗುರ ಮಾಡುವ ಗುರುತಿನಂತೆಯೇ ಕೆನ್ನೆಯ ಮೇಲೆ ಅವನ ತುಟಿಯ ಗುರುತೂ ಮೂಡಿರುತ್ತದೆ !’
ಇಂಥದೊಂದು ಕಲ್ಪನೆ ಹಿಡಿದ ನಂತರ ಆರ್ಎನ್ಜೆ ತಡಮಾಡಲಿಲ್ಲ. ಹಾಗೆ ಅನಿಸಿದ್ದನ್ನೆಲ್ಲ ಬರೆದೇ ಬಿಟ್ಟರು. ನೋಡನೋಡುತ್ತಲೇ ‘ಅತಿಮಧುರಾ’ ಎಂದು ಉದ್ಗರಿಸುವಂಥ ಪಲ್ಲವಿ ಸೃಷ್ಟಿಯಾಗಿ ಯೋಯಿತು. ಅದೇ ಲಹರಿಯಲ್ಲಿ ಯೋಚಿಸುತ್ತ ಹೋದವರಿಗೆ ಪ್ರೀತಿಯಲ್ಲಿ ಬಿದ್ದ ಹುಡುಗಿ, ಗೆಳೆಯನ ಮುಂದೆ ಕೂತಾಗ ಒಂದು ನಗುವಿನಲ್ಲಿ, ಒಂದು ಸನ್ನೆಯಲ್ಲಿ ಎಲ್ಲವನ್ನೂ ಹೇಳಿಬಿಡುತ್ತಾಳೆ. ಹಾಗೆ ಮುಖಾಮುಖಿಯಾದ ಸಂದರ್ಭದಲ್ಲಿ ನೆಲದ ಮೇಲೆ ಬೆರಳಿಂದ ಏನೇನೋ ಬರೆಯುತ್ತಾಳೆ. ಕೂತಲ್ಲೇ ನಾಚಿಕೊಳ್ಳುತ್ತಾಳೆ. ಹಾಗೆ ನಾಚುತ್ತಲೇ ತನ್ನ ಮನವನ್ನು ತೆರೆದಿಡುತ್ತಾಳೆ’ ಅನ್ನಿಸಿತು. ಅದನ್ನೇ ನೆಪಮಾಡಿಕೊಂಡು-‘ಮಣ್ಣಿನಲ್ಲಿ ಕಂಡ ಉಂಗುರಐ ಹೆಣ್ಣು ನಾಚಿ ಗೀರಿದುಂಗುರ…’ ಎಂಬಂಥ ಸಾಲುಗಳನ್ನು ಬರೆದರು.
ಹೀಗೆ ಹಾಡು ಬರೆಯುತ್ತಲೇ ಮೈಮರೆತಿದ್ದ ಜಯಗೋಪಾಲ್ಗೆ, ಇಡೀ ಹಾಡಿಗೆ, ಸೂಪರ್ಬ್ ಎಂಬಂಥ ಮುಕ್ತಾಯ ನೀಡಬೇಕು. ಕಡೆಕಡೆಯ ಸಾಲುಗಳಲ್ಲಿ ನಾಯಕಿಯ ನಿರೀಕ್ಷೆ, ತಳಮಳ, ರೋಮಾಂಚನ, ಪುಳಕ, ಹೆದರಿಕೆಯಂಥ ಭಾವವನ್ನೆಲ್ಲ ತೆರೆದಿಡಬೇಕು ಅನ್ನಿಸಿತು. ಆಗ ಮತ್ತೆ ಪ್ರೇಮಿಗಳ ಏಕಾಂತದ ಮಾತುಗಳನ್ನು ಹಾಗೇ ಸುಮ್ಮನೆ ಕಲ್ಪಿಸಿಕೊಂಡರು ಜಯಗೋಪಾಲ್. ಪ್ರಿಯತಮ ದಿಢೀರನೆ ಕೈ ಹಿಡಿದಾಗ ಅವಳ ಎದೆಬಡಿತ ಡಂಗುರದ ಸದ್ದಿನಂತೆ ಕೇಳತೊಡಗುತ್ತದೆ. ಇವಳು, ಮಾತೇ ಹೊರಡದೆ ನಿಂತಿದ್ದಾಗಲೇ ಅವನು ಕಿವಿಯ ಬಳಿ ಬಂದು ‘ಐ ಲವ್ ಯೂ’ ಅಂದುಬಿಟ್ಟರೆ, ಆ ಕ್ಷಣದ ಗಾಬರಿಗೆ ಹಣೆಯ ಮೇಲೆ ಬೆವರು ಸಾಲುಗಟ್ಟಿರುತ್ತದೆ…. ! ಹೀಗೆಲ್ಲ ಲೆಕ್ಕ ಹಾಕಿಕೊಂಡು ; ಇದನ್ನೇ ಪ್ರೇಮಿಗಳಿಬ್ಬರೂ ಹಾಡಾಗಿಸಿ ಖುಷಿಪಡುತ್ತಾರೆ ಎಂದು ಅಂದಾಜು ಮಾಡಿಕೊಂಡು- ‘ಆಗೆ ನಿನ್ನ ಕೈಯ ಸಂಚರಐ ಎನ್ನ ಹೃದಯವೊಂದು ಡಂಗುರಐ ನಾನೂ ನುಡಿಯೆ ಕಿವಿಯೊಳಿಂಚರಐ ಹಣೆಯ ಮೇಲೆ ಬೆವರಿನುಂಗುರ…’ ಎಂದು ಬರೆದರು ಜಯಗೋಪಾಲ್.
***
ಬೆರಳಲ್ಲಿ ಇಲ್ಲದಿದ್ದ ಉಂಗುರದ ನೆನಪಿನಲ್ಲೇ ಹಾಡು ಬರೆದ ಜಯಗೋಪಾಲ್, ನಂತರ ತರಾತುರಿಯಿಂದ ಹೋಟೇಲಿಗೆ ಹೋಗಿ ನೋಡಿದರೆ -ಟೇಬಲ್ನ ಮೇಲೆ ಉಂಗುರವಿರಲಿಲ್ಲ. ಪಕ್ಕದಲ್ಲಿದ್ದ ನೀರಿನ ಲೋಟದಲ್ಲೂ ಅದು ಕಾಣಿಸಲಿಲ್ಲ. ಕಡೆಗೆ ಆ ಉಂಗುರ ಸಿಗಲೇ ಇಲ್ಲವಂತೆ. ಮುಂದೊಂದು ದಿನ ಈ ಸಂಗತಿಯನ್ನೇ ತಮ್ಮ ಪರಮಾಪ್ತರಾದ ಎನ್.ಎಸ್. ಶ್ರೀಧರಮೂರ್ತಿಯವರಿಗೆ ಹೇಳಿಕೊಂಡರಂತೆ ಜಯಗೋಪಾಲ್. ಅದಕ್ಕೆ ಶ್ರೀಧರಮೂರ್ತಿಯವರು-ನಿಮ್ಮ ಉಂಗುರ ಕಳೆದು ಹೋದರೇನಂತೆ ? ಆ ನೆಪದಲ್ಲಿ ಕನ್ನಡಿಗರಿಗೆ ಚಿನ್ನದ ಉಂಗುರಕ್ಕಿಂತ ಮಿಗಿಲಾದ ಹಾಡಿ ಸಿಕ್ಕಿದೆ. ಆ ಮಟ್ಟಿಗಿನ ಧನ್ಯತೆ ನಮ್ಮದು’ ಎಂದರಂತೆ…
ಅಲ್ಲ; ಈ ಕಾಡುವ ಹಾಡುಗಳ ಹಿಂದೆಲ್ಲಾ ಒಂದೊಂದು ಕಾಡುವ ಕಥೆ ಇರ್ತದಲ್ಲ…. ಯಾಕೋ…

Advertisements

2 Comments »

  1. 1

    ಇದನ್ನು ವಿಜಯ ಕರ್ನಾಟಕದಲ್ಲಿ ಓದಿದ್ದೆ 🙂

    ಈ ಹಾಡು ನನ್ನ ನೆಚ್ಚಿನ ಹಾಡುಗಳಲ್ಲೊಂದು

  2. 2
    ವಸಂತ್ Says:

    ಅದು “ಕಣ್ಣು ಸೆಳೆವ ಕುರುಳು ಗುಂಗುರ” ಅಂತಿರಬೇಕು ಅಲ್ವಾ?


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: