ಈ ಹಾಡಿನ ಹಿಂದಿನದ್ದು ಮಾತ್ರವಲ್ಲ, ಆನಂತರದ ಕಥೆಯೂ ರೋಚಕ !

siddalingayya

ಚಿತ್ರ: ಧರಣಿ ಮಂಡಲ ಮಧ್ಯದೊಳಗೆ.
ಗೀತೆರಚನೆ: ಡಾ. ಸಿದ್ಧಲಿಂಗಯ್ಯ, ಸಂಗೀತ : ವಿಜಯ ಭಾಸ್ಕರ್
ಗಾಯನ : ಎಸ್.ಪಿ. ಬಾಲಸುಬ್ರಹ್ಮಣ್ಯಂ.

ಗೆಳತಿ ಓ ಗೆಳತಿ
ಅಪ್ಪಿಕೋ ಎನ್ನ ಅಪ್ಪಿಕೋ
ಬಾಳೆಲ್ಲ ಎನ್ನ ತಬ್ಬಿಕೋ ಐಐಪಐಐ

ಜಗದ ಗೊಂದಲ ಬೇಡ ನಿನಗೆ
ಎದೆಯ ಹಾಡು ನೀನು ನನಗೆ
ನಿನ್ನ ಮಾತೇ ಜೇನು ನನಗೆ
ನಿನ್ನ ಜೊತೆಯೇ ಸಾಕು ಎನಗೆ ಐಐ೧ಐಐ

ಮೇಲು ಕೀಳಿನ ಬೇಲಿ ಜಿಗಿದು
ಪ್ರೇಮ ಲೋಕದಿ ನಿನ್ನ ಬಿಗಿದು
ನೂರು ಮುತ್ತನು ಒತ್ತಿ ನಿನಗೆ
ನಾನು ಆಗುವೆ ಕಣ್ಣು ನಿನಗೆ

ಫೆಬ್ರವರಿ ಹದಿನಾಲ್ಕರಂದು ಹೇಳಿ ಕೇಳಿ ಪ್ರೇಮಿಗಳ ದಿನ. ಆ ಸಂದರ್ಭವನ್ನೇ ನೆಪಮಾಡಿಕೊಂಡು ಒಂದು ಪ್ರೇಮಗೀತೆಯ ಬಗೆಗೇ ಬರೆಯಬಾರದೇಕೆ ಎಂದುಕೊಂಡಾಗ ತಕ್ಷಣ ನೆನಪಿಗೆ ಬಂದದ್ದು ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ‘ಗೆಳತಿ ಓ ಗೆಳತಿ’ ಹಾಡು. ಈ ಹಾಡು ಕೇಳಿದ ಪ್ರೇಮಿಗಳೆಲ್ಲ ಇದು ‘ನಮ್ಮೆದೆಯ ಹಾಡು’ ಎಂದು ಖುಷಿಯಾಗುತ್ತಾರೆ. ಪ್ರಿಯತಮೆಗೆ ನಾವು ಹೇಳಬೇಕಿದ್ದುದೆಲ್ಲಾ ಈ ಹಾಡಲ್ಲೇ ಇದೆ ಎಂದು ಸಂಭ್ರಮಿಸುತ್ತಾರೆ. ಅಷ್ಟೇ ಅಲ್ಲ, ಈ ಹಾಡುಗಳ ಸಾಲುಗಳನ್ನೇ ಗ್ರೀಟಿಂಗ್ ಕಾರ್ಡುಗಳಲ್ಲಿ ಬರೆದು, ಇದೆಲ್ಲ ನನ್ನದೇ (ನಾನೇ ಬರೆದ) ಸಾಲು ಎಂದು ಒಂದೆರಡು ನಿಮಿಷ ಹೆಮ್ಮೆಪಟ್ಟು, ಕೆಳಗೆ ತನ್ನ ಸಹಿಯನ್ನೂ ಹಾಕಿಬಿಡುತ್ತಾನೆ.
ಹೀಗೆ-ಮನುಕುಲದ ಸಮಸ್ತ ಪ್ರೇಮಿಗಳ ಎದೆಯ ರಾಗವನ್ನು ಒಂದು ಹಾಡಲ್ಲಿ ಕಟ್ಟಿಕೊಟ್ಟದ್ದು ದಲಿತಕವಿ ಸಿದ್ಧಲಿಂಗಯ್ಯ ಅವರ ಹೆಚ್ಚುಗಾರಿಕೆ. ಈ ಹಾಡು ಬರೆದಾಗ ಸಿದ್ಧಲಿಂಗಯ್ಯ ‘ಯಂಗ್ ಬಾಯ್’ ಆಗಿದ್ದರು. ಅವರಿಗೆ ಈ ರೋಮ್ಯಾಂಟಿಕ್ ಹಾಡು ಬರೆಯಲು ಸಾಧ್ಯವಾದದ್ದು ಹೇಗೆ? ಈ ಹಾಡಿನ ಸಾಲು ಅವರಿಗೆ ಹೊಳೆದದ್ದು ಹೇಗೆ? ಈ ಕುತೂಹಲದ ಪ್ರಶ್ನೆಗಳಿಗೆ ಸಿದ್ಧಲಿಂಗಯ್ಯನವರು ಉತ್ತರಿಸಿದ್ದು ಹೀಗೆ;
ಅದು ೧೯೮೨ರ ಸಂದರ್ಭ, ನಾನು ಆಗಷ್ಟೇ ಬಂಡಾಯ ಕವಿಯಾಗಿ ಹೆಸರು ಮಾಡಿದ್ದೆ. ಅದೇ ಸಂದರ್ಭದಲ್ಲಿ ಪುಟ್ಟಣ್ಣ ಕಣಗಾಲ್ ಅವರು ತಮ್ಮ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ನನ್ನಿಂದ ಹಾಡು ಬರೆಸಲು ನಿರ್ಧರಿಸಿದ್ದರು. ಆ ವಿಷಯವನ್ನು ತಮ್ಮ ಶಿಷ್ಯ, ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ನನ್ನ ಪ್ರಿಯ ಮಿತ್ರ ಟಿ.ಎನ್. ಸೀತಾರಾಂ ಕೈಲಿ ಹೇಳಿ ಕಳಿಸಿದರು. ಸಿನಿಮಾಕ್ಕೆ ಹಾಡು ಬರೆದರೆ ಕವಿಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬ ಒಂದು ನಂಬಿಕೆಯೇ ಆಗ ಚಾಲ್ತಿಯಲ್ಲಿತ್ತು. ಈ ಕಾರಣದಿಂದಲೇ ನಾನು ಹಿಂಜರಿದೆ. ಸೀತಾರಾಂ ಮಾತಿಗೆ ಆಯ್ತು, ನೋಡೋಣ ಎಂಬ ಹಾರಿಕೆಯ ಉತ್ತರ ಕೊಡುತ್ತಾ ದಿನ ತಳ್ಳಿದೆ. ಆದರೆ, ಅದೊಂದು ದಿನ ಬಂದ ಸೀತಾರಾಂ, ‘ನಾಳೆ ಬೆಳಗ್ಗೆಯೇ ನೀವು ಪುಟ್ಟಣ್ಣ ಕಣಗಾಲ್ಅವರ ಮನೆಗೆ ಬರಬೇಕು. ಬರಲೇಬೇಕು. ಅಲ್ಲಿಗೆ ಸಂಗೀತ ನಿರ್ದೇಶಕರೂ ಬರ್ತಾರೆ. ಟ್ಯೂನ್ ಕೇಳಿಸ್ತಾರೆ. ಅದಕ್ಕೆ ನೀವು ಹಾಡು ಬರೆಯಲೇಬೇಕು’ ಎಂದರು.
ಆಗ ನಾನು ವಾಸವಿದ್ದುದು ಕೆಂಗೇರಿ ಉಪನಗರದಲ್ಲಿ. ಪುಟ್ಟಣ್ಣ ಅವರಿದ್ದುದು ಜಯನಗರದಲ್ಲಿ. ಬೆಳಗ್ಗೆ ಎಂಟಕ್ಕೇ ಅವರ ಮನೆಗೆ ಹೋಗಬೇಕಿತ್ತು. ಆ ದಿನಗಳಲ್ಲಿ ಕೆಂಗೇರಿಯಿಂದ ಜಯನಗರಕ್ಕೆ ಬಸ್ಗಳಿರಲಿಲ್ಲ. ಹಾಗಾಗಿ, ನಾನು ಅವತ್ತು ರೂಂಗೆ ಹೋಗದೆ, ರಾಜಾಜಿನಗರದಲ್ಲಿದ್ದ ಸಿ.ಜಿ.ಕೆ. ಅವರ ಮನೆಯಲ್ಲೇ ಉಳಿದುಕೊಂಡೆ. ರಾತ್ರಿ ಊಟದ ನಂತರ ಸಿ.ಜಿ.ಕೆ. ಅವರಿಗೆ ಎಲ್ಲ ವಿಷಯ ತಿಳಿಸಿದೆ.
ಬೆಳಗ್ಗೆ, ಸ್ನಾನ-ತಿಂಡಿ ಮುಗಿಸಿ ಹೊರಟು ನಿಂತಾಗ, ಒಂದು ಪೆನ್ನು-ಪ್ಯಾಡ್ ಕೊಟ್ಟ ಸಿ.ಜಿ.ಕೆ.ಯವರು ‘ಇದರಲ್ಲೇ ಹಾಡು ಬರೀರಿ. ನಿಮ್ಗೆ ಒಳ್ಳೆಯದಾಗಲಿ’ ಎಂದರು. ಜಯನಗರದಲ್ಲಿದ್ದ ಪುಟ್ಟಣ್ಣ ಅವರ ಮನೆ ‘ಹೆಡ್ಡನ ಹಟ್ಟಿ’ಗೆ ಸೀತಾರಾಂ ಅವರೊಂದಿಗೆ ಹೋದೆ. ಆ ವೇಳೆಗಾಗಲೇ ವಿಜಯ ಭಾಸ್ಕರ್ ಬಂದಿದ್ರು. ಆ ಸಂದರ್ಭದಲ್ಲಿ ಪುಟ್ಟಣ್ಣ ಕಣಗಾಲ್ ಪೂಜೆಯಲ್ಲಿದ್ರು. ಜೋರಾಗಿ ಸಂಸ್ಕೃತ ಶ್ಲೋಕ ಹೇಳ್ತಿದ್ರು. ಕೆಲ ನಿಮಿಷದ ನಂತರ, ಹಣೆಗೆ ಕುಂಕುಮ ಧರಿಸಿದ್ಧ ಗಡ್ಡದಾರಿ ಪುಟ್ಟಣ್ಣ ಹೊರಬಂದರು. ಆ ಕ್ಷಣಕ್ಕೆ ಅವರು ಥೇಟ್ ಋಷಿಯಂತೆಯೇ ಕಾಣಿಸಿದರು.
ನಂತರ ಒಂದು ರೂಂನಲ್ಲಿ ಪುಟ್ಟಣ್ಣ, ಸೀತಾರಾಂ, ವಿಜಯಭಾಸ್ಕರ್ ಮತ್ತು ನಾನು ಕುಳಿತೆವು. ಮೊದಲು ಪುಟ್ಟಣ್ಣ ಕಥೆ ಹೇಳಿದರು. ನಂತರ, ಯಾವ ಸನ್ನಿವೇಶಕ್ಕೆ ಹಾಡು ಬೇಕು ಎಂದು ವಿವರಿಸಿದರು. ಕಥೆ ಹೇಳುವಾಗಿನ ಅವರ ಭಾವಾವೇಶ, ಸಿನಿಮಾದ ಮೇಲಿನ ವ್ಯಾಮೋಹ, ಬದುಕಿನ ಪ್ರತಿಯೊಂದು ಕ್ಷಣವನ್ನೂ ಪ್ರೀತಿಸುತ್ತಿದ್ದ ರೀತಿ ಕಂಡು ನಾನು ಮೈಮರೆತೆ. ಪುಟ್ಟಣ್ಣ ಅವರನ್ನೇ ಒಂದು ಕ್ಷಣ ಆವಾಹಿಸಿಕೊಂಡೆ. ಪುಟ್ಟಣ್ಣ ಸಂದರ್ಭ ವಿವರಿಸಿದ ನಂತರ ವಿಜಯಭಾಸ್ಕರ್-ಲಲಲಾ ಲಲಾ ಲಲ್ಲಲ್ಲ ಎಂಬ ಟ್ಯೂನ್ ಕೇಳಿಸಿದರು. ವಾದ್ಯಗಳ ಹಿನ್ನೆಲೆಯಲ್ಲಿ ಟ್ಯೂನ್ ಕೇಳಿದ ಆ ಕ್ಷಣದ ರೋಮಾಂಚನವನ್ನು ಪದಗಳಲ್ಲಿ ವಿವರಿಸಲು ಆಗೋದಿಲ್ಲ. ಟ್ಯೂನ್ ಅದೆಷ್ಟು ಅದ್ಭುತವಾಗಿತ್ತು ಅಂದರೆ, ನಂತರದ ಎರಡೇ ನಿಮಿಷದಲ್ಲಿ ನನ್ನೊಳಗೆ ಹೊಸ ಹಾಡಿನ ಸಾಲು ಸೃಷ್ಟಿಯಾಯಿತು. ಆಗಿನ್ನೂ ಬ್ರಹ್ಮಚಾರಿಯಾಗಿದ್ದ ನಾನು, ಕಾಣದ ಸುಂದರಿಯನ್ನು ಮನದಲ್ಲೇ ಕಲ್ಪಿಸಿಕೊಂಡು ‘ಗೆಳತಿ ಓ ಗೆಳತಿ, ಅಪ್ಪಿಕೋ ಎನ್ನ ಅಪ್ಪಿಕೋ…’ ಎಂದು ಬರೆದುಬಿಟ್ಟೆ. ನಂತರ, ಸ್ವಲ್ಪ ಹಿಂಜರಿಕೆಯಿಂದಲೇ ಅದನ್ನು ಪುಟ್ಟಣ್ಣ ಅವರಿಗೆ ತೋರಿಸಿದೆ.
ಹಾಡು ನೋಡಿ ಪುಟ್ಟಣ್ಣ ಥ್ರಿಲ್ಲಾಗಿ ಹೋದರು. ತುಂಬ ಸಂಭ್ರಮದಿಂದ ದೊಡ್ಡ ದನಿಯಲ್ಲಿ ‘ಇದೇ, ಇದೇ ನನಗೆ ಬೇಕಾಗಿದ್ದು. ತುಂಬ ಚನ್ನಾಗಿದೆ ಕವಿಗಳೇ’ ಅಂದ್ರು. ಒಂದೊಂದು ಹೊಸ ಸಾಲು ಬರೆದಾಗಲೂ ಪುಟ್ಟಣ್ಣ ಸಂತೋಷಪಟ್ಟರು. ಹುರಿದುಂಬಿಸಿದ್ರು. ವಿಪರೀತ ಹೊಗಳಿದ್ರು. ಅಷ್ಟೇ ಅಲ್ಲ, ಒಂದು ಹಾಡು ಬರೆದರೆ ಸಾಕು ಎಂದಿದ್ದವರು, ಒಟ್ಟು ಮೂರು ಹಾಡು ಬರೆಸಿದ್ರು !
ಈ ಮಧ್ಯೆ ‘ವಾರಪತ್ರಿಕೆಯೊಂದರಲ್ಲಿ’ನಾನು ಸಿನಿಮಾಕ್ಕೆ ಹಾಡು ಬರೆಯಲು ಒಪ್ಪಿದ ಸುದ್ದಿಬಂತು. ಅವರು-ಈವರೆಗೂ ಬಂಡಾಯ ಕವಿ, ಕ್ರಾಂತಿಕವಿ ಎಂದೆಲ್ಲ ಕರೆಸಿಕೊಂಡಿದ್ದ ಸಿದ್ಧಲಿಂಗಯ್ಯನವರು, ಈಗ ಸಿನಿಮಾದವರ ಬಳಿ ಹೊಸೆಯುತ್ತಾ ನಿಂತಿದ್ದಾರೆ’ ಅಂತಾನೇ ಬರೆದುಬಿಟ್ರು. ಕವಿಯಾಗಿ ಆಗತಾನೇ ಹೆಸರು ಮಾಡುತ್ತಿದ್ದ ನನಗೆ, ಪತ್ರಿಕೆಯ ವರದಿಯಿಂದ ಭವಿಷ್ಯಕ್ಕೆ ತೊಂದರೆ ಆಗ್ತದೇನೋ ಎಂಬ ಆತಂಕ ಶುರುವಾಯಿತು. ತಕ್ಷಣವೇ ಹಾಡು ಬರೆದವರ ಹೆಸರನ್ನು ‘ಆದಿತ್ಯ’ ಎಂದು ಬದಲಿಸಿಬಿಟ್ಟೆ. ನಂತರದ ದಿನಗಳಲ್ಲಿ ‘ಸಿದ್ದಲಿಂಗಯ್ಯ’ ಅವರ ಬದಲಿಗೆ ಆದಿತ್ಯ ಎಂಬಾತ ಹಾಡು ಬರೆಯುತ್ತಿದ್ದಾರೆ ಎಂದೂ ಪತ್ರಿಕೆಗಳಲ್ಲಿ ಸುದ್ದಿ ಬಂತು. ಅದಿತ್ಯ ಎಂದರೆ ಬೇರೆ ಯಾರೋ ಎಂದು ಭಾವಿಸಿದವಾರ ಪತ್ರಿಕೆಯವರು ನಮ್ಮ ವರದಿ ಕಂಡು ಸಿದ್ಧಲಿಂಗಯ್ಯ ಬೆಚ್ಚಿ, ಹಿಂದೆ ಸರಿದಿದ್ದಾರೆ ಅಂದುಕೊಂಡರು. ಚಿತ್ರ ಬಿಡುಗಡೆಯಾದ ನಂತರ ಕೂಡ, ಹಾಡು ಬರೆದದ್ದು ನಾನೇ ಎಂದು ಯಾರಿಗೂ ಗೊತ್ತಾಗಲಿಲ್ಲ.
ಆದರೆ, ೧೯೮೩ರಲ್ಲಿ ಧರಣಿಮಂಡಲ ಮದ್ಯದೊಳಗೆ ಚಿತ್ರದ ‘ಕಾಸನು ತೂರಿ ಬಲವಿನ ಬೆಲೆಯನು…. ಹಾಡಿಗೆ ಶ್ರೇಷ್ಠ ಗೀತ ರಚನೆಕಾರ ಪ್ರಶಸ್ತಿ ಬಂದು ಬಿಡಬೇಕೆ? ಆಗ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಾನು ಹೋಗಲೇಬೇಕಾಯಿತು. ಅದಿತ್ಯ ಎಂದರೆ ಸಿದ್ದಲಿಂಗಯ್ಯ ಎಂದು ಆಗ ಎಲ್ಲರಿಗೂ ಗೊತ್ತಾಯಿತು.
ಹಾಡು ಬರೆದದ್ದು ನಾನೇ ಎಂದು ಖಚಿತವಾದ ನಂತರ ಮತ್ತೆ, ಟೀಕೆಗಳು ಶುರುವಾದವು. ಕೆಲವೇ ವರ್ಷಗಳ ಹಿಂದೆ ‘ಇಕ್ರಲಾ ವದೀಲ್ಲಾ’ ‘ಗುಡಿಸಲುಗಳು ಗುಡುಗುತಿವೆ, ಬಂಗಲೆಗಳು ನಡುಗುತಿವೆ’ ಎಂದು ಬರೆದ ಸಿದ್ಧಲಿಂಗಯ್ಯ, ಈಗ ‘ಚಿತ್ರರಂಗದ ಕರೆ ಬಂತು ಎಂದಾಕ್ಷಣ -‘ ಜಗದ ಗೊಂದಲ ಬೇಡ ನನಗೆ’ ಎಂದು ಬರೆದದ್ದು ಸರಿಯೆ’ ಎಂದೆಲ್ಲ ಟೀಕೆ ಎದುರಾಯಿತು. ಆಗ- ಮೊದಲಿಗೆ ನಾನೊಬ್ಬ ಮನುಷ್ಯ. ನಂತರ ಕವಿ, ಆನಂತರ ಬಂಡಾಯ ಕವಿ, ಭಾವನೆಗಳಿಗೆ ನಾನೂ ಹೊರತಲ್ಲ’ ಎಂದು ವಿವರಿಸಬೇಕಾಯಿತು.
ಸಿದ್ಧಲಿಂಗಯ್ಯನವರು ಮಾತು ನಿಲ್ಲಿಸಿದರು. ಅವರು ಹೇಳಿದ್ದನ್ನೆಲ್ಲ ಕೇಳಿದ ನಂತರ ಈ ಹಾಡಿನ ಹಿಂದಿನದ್ದು ಮಾತ್ರವಲ್ಲ, ನಂತರದ ಕಥೆಯೂ ರೋಚಕವಾಗೇ ಇದೆ ಅನ್ನಿಸಿತು.
***
ಪ್ರೇಮಿಗಳ ದಿನದ ನೆಪದಲ್ಲಿ ಒಂದು ತುಂಟ ಮಾತನ್ನೂ ಇಲ್ಲಿ ಹೇಳಿಬಿಡಬೇಕು. ಗೆಳತಿ ಓ ಗೆಳತಿಯಲ್ಲಿ ‘ಎದೆಯ ಹಾಡು ನೀನು ನನಗೆ’ ಎಂಬ ಸಾಲಿದೆ. ಅದನ್ನು ತುಂಟರು ‘ಎದೆಯ ಹಾಲು ನೀಡು ನನಗೆ’ ಎಂದು ಹೇಳುವುದುಂಟು !

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: