ಕನಸುಗಳಿದ್ದವು, ಕಾಸಿರಲಿಲ್ಲ!

naraynmurthy

‘ಇದು ೭೦ ದಶಕದ ಮಾತು.
ಆಗಷ್ಟೇ ನನ್ನ ಡಿಗ್ರಿ ಮುಗಿದಿತ್ತು. ಹಿಂದೆಯೇ, ಪುಣೆಯ ಟೆಲ್ಕೋ ಕಂಪನಿಯಲ್ಲಿ ನೌಕರಿಯೂ ಸಿಕ್ಕಿತ್ತು. ಆ ದಿನಗಳಲ್ಲಿ ನನ್ನ ಸಹೋದ್ಯೋಗಿಯಾಗಿದ್ದವರು ಪ್ರಸನ್ನ. ಅವರು ಈಗ ವಿಪ್ರೋ ಸಂಸ್ಥೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಸಹೋದ್ಯೋಗಿ ಪ್ರಸನ್ನ, ಎರಡೆರಡು ದಿನಕ್ಕೆ ಒಂದೊಂದು ಹೊಸ ಪುಸ್ತಕಗಳನ್ನು ನನಗೆ ಓದಲೆಂದು ತಂದುಕೊಡುತ್ತಿದ್ದರು. ಸ್ವಾರಸ್ಯವೆಂದರೆ, ಆ ಎಲ್ಲಾ ಪುಸ್ತಕಗಳ ಮೇಲೆ ‘ನಾರಾಯಣ ಮೂರ್ತಿ’ ಎಂಬ ಹೆಸರಿರುತ್ತಿತ್ತು.
ಮೂರ್ತಿಯವರು ಆಗ ಪುಣೆಯಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಆಗಲೇ ವಿದೇಶ ಪ್ರವಾಸವನ್ನೂ ಮಾಡಿದ್ದರು. ಕುಶಲೋಪರಿಗೆ ನಿಂತಾಗ, ಪ್ರಸನ್ನ ಮೇಲಿಂದ ಮೇಲೆ ನಾರಾಯಣಮೂರ್ತಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳ್ತಾನೇ ಇರ್ತಿದ್ರು. ಈ ಕಾರಣದಿಂದ ಮೂರ್ತಿಯವರನ್ನು ಪ್ರತ್ಯಕ್ಷ ನೋಡುವ ಮೋದಲೇ- ‘ಅವರು ಹೀಗಿರಬಹುದೇನೋ ಎಂಬ ಅಂದಾಜು ನನಗಿತ್ತು. ಅವರ ಪ್ರಖರ ಚಿಂತನೆ, ಬುದ್ಧಿವಂತಿಕೆ ಕುರಿತು ಮೆಚ್ಚುಗೆ, ಅಭಿಮಾನಗಳೂ ಜತೆಯಾಗಿದ್ದವು.
ಹೀಗಿದ್ದಾಗಲೇ ಅದೊಂದು ದಿನ ರಾತ್ರಿ ಊಟಕ್ಕೆ ಪುಣೆಯ ಗ್ರೀನ್ಫೀಲ್ಡ್ಸ್ ಹೋಟೆಲಿಗೆ ಬರುವಂತೆ, ಪ್ರಸನ್ನ ಅವರ ಮೂಲಕ ಮೂರ್ತಿ ನನಗೆ ಆಹ್ವಾನ ಕಳಿಸಿದರು. ಒಮ್ಮೆಯೂ ಭೇಟಿಯಾಗದಿದ್ದರೂ ಹೋಟೆಲಿಗೆ ಊಟಕ್ಕೆ ಕರೆದ ಮೂರ್ತಿಯವರ ವರ್ತನೆ ಖಿoo muಛಿh ಅನಿಸಿದ್ದು ಸುಳ್ಳಲ್ಲ. ಹಾಗೆಯೇ ಅವರು ಆಹ್ವಾನಿಸಿದ್ದವರ ಪಟ್ಟಿಯಲ್ಲಿ ನನ್ನನ್ನು ಬಿಟ್ಟರೆ, ಒಬ್ಬರೂ ಮಹಿಳೆಯರಿರಲಿಲ್ಲ. ಈ ಕಾರಣದಿಂದಲೇ ನಾನು ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದೆ. ಆದರೆ, ಮೂರ್ತಿ ಬಿಡಲಿಲ್ಲ. ಮತ್ತೆ ಆಹ್ವಾನಿಸಿದರು. ಬರಲೇಬೇಕು ಅಂದರು. ಅಷ್ಟೇ ಅಲ್ಲ, ಸಂಜೆ ೭.೩೦ಕ್ಕೆ ಹೋಟೆಲಿನಲ್ಲಿ ಭೇಟಿಯಾಗೋಣ ಎಂದೂ ಸಂದೇಶ ಕಳಿಸಿದರು.
ಅವರು, ಅಷ್ಟೆಲ್ಲ ಹೇಳಿದ ನಂತರವೂ ಹೋಗದೇ ಇದ್ರೆ ಚೆನ್ನಾಗಿರೊಲ್ಲ ಅನ್ನಿಸ್ತು. ‘ಸರಿ. ಬರ್ತೀನಿ’ ಅಂದೆ. ಎಲ್ಲರೂ ಊಟಕ್ಕೆ ಸೇರುವ ದಿನವೂ ನಿಗದಿಯಾಯಿತು. ಆ ಹೋಟೆಲಿನ ಸಮೀಪವೇ ಇದ್ದ ಟೈಲರ್ ಅಂಗಡಿಗೆ ಒಂದಷ್ಟು ಬಟ್ಟೆ ಕೊಡುವುದಿತ್ತು. ಆ ಕೆಲಸ ಮುಗಿಸಿಕೊಂಡು ಊಟಕ್ಕೆ ಹೋಗೋಣ ಎಂದು ನಿರ್ಧರಿಸಿ, ಏಳು ಗಂಟೆಗೇ ಅತ್ತ ನಡೆದೆ. ಅದೇ ವೇಳೆಗೆ, ನಾರಾಯಣಮೂರ್ತಿಯವರು ಹೋಟೆಲಿನ ಮುಂದೆ ನಿಂತು ಉಳಿದವರಿಗಾಗಿ ಕಾಯುತ್ತಿದ್ದರು. ಅವರ ಟೈಂ ಸೆನ್ಸ್ ನನಗೆ ವಿಪರೀತ ಇಷ್ಟವಾಯಿತು.
ಉಹುಂ, ಮೊದಲ ಭೇಟಿಯಲ್ಲಿ ಅಂಥ ವಿಶೇಷವೇನೂ ಜರುಗಲಿಲ್ಲ. ಬರೀ ಹಲೋ ಹಲೋ ಅಷ್ಟೆ. ಆದರೆ ನಂತರ ನಾವು ಮೇಲಿಂದ ಮೇಲೆ ಭೇಟಿಯಾಗತೊಡಗಿದೆವು. ಪ್ರತಿ ಭೇಟಿಯ ಸಂದರ್ಭದಲ್ಲೂ ತಾವು ಓದಿದ ಹೊಸ ಪುಸ್ತಕಗಳ ಬಗ್ಗೆ ಹಾಗೂ ವಿದೇಶದಲ್ಲಿ ತಮಗೆ ಆದ ಅನುಭವದ ಬಗ್ಗೆ ಹೇಳಿದ್ರು. ಅವತ್ತಿಗೆ ಅವರು ಉಗ್ರ ಮಾರ್ಕ್ಸ್ವಾದಿಯಾಗಿದ್ರು. ಕಮ್ಯುನಿಸ್ಟ್ ಪಕ್ಷ ಸೇರಿ ರಾಜಕಾರಣಿ ಆಗ್ತೀನಿ ಅಂತಿದ್ರು. ಅವರು ನನ್ನೊಂದಿಗೆ ಮುಕ್ತವಾಗಿ ಮಾತಾಡ್ತಾ ಇದ್ದುದು ನೋಡಿ ನಮ್ಮ ಗೆಳೆಯರ ಗುಂಪಲ್ಲಿ ಗುಸುಗುಸು ಶುರುವಾಯ್ತು. ‘ನಿಮ್ಮ ಮಧ್ಯೆ ಏನೋ ಇದೆ’ ಅಂತ ಅವರೆಲ್ಲ ಹೇಳಿದ್ರು. ಅದನ್ನೆಲ್ಲ ನಾನು ನಿರಾಕರಿಸಿದೆ.
ಹೀಗಿದ್ದಾಗಲೇ ಅದೊಂದು ದಿನ ಹೋಟೆಲಿಗೆ, ಊಟಕ್ಕೆ ಆಹ್ವಾನಿಸಿದ ಮೂರ್ತಿ, ಊಟದ ನಂತರ ನೇರವಾಗಿ ಹೇಳಿದ್ರು: ‘ಸುಧಾ, ಮೊದಲೇ ಹೇಳ್ತಾ ಇದೀನಿ. ನಾನು ಬಡವರ ಮನೆಯಿಂದ ಬಂದವನು. ಅಂಥ ರೂಪುವಂತನಲ್ಲ. ಜೇಬಲ್ಲಿ ದುಡ್ಡೂ ಇಲ್ಲ. ಸದ್ಯಕ್ಕೆ ಒಂದೊಳ್ಳೆಯ ನೌಕರಿಯಿಲ್ಲ. ಮುಂದೊಂದು ದಿನ ಕೋಟ್ಯಾಧಿಪತಿ ಆಗ್ತೇನೆ ಎಂಬ ನಂಬಿಕೆ ಕೂಡ ನನಗಿಲ್ಲ. ಹಾಗೆ ನೋಡಿದರೆ, ನೀನು ಸುಂದರಿ. ಬುದ್ಧಿವಂತೆ. ಶ್ರೀಮಂತೆ. ನಿನ್ನನ್ನು ಮದುವೆಯಾಗಲು ನೂರಾರು ಮಂದಿ ಕಾದು ನಿಲ್ತಾರೆ. ಇಷ್ಟೆಲ್ಲ ಗೊತ್ತಿದ್ರೂ ಕೇಳ್ತಾ ಇದೀನಿ. ನನ್ನನ್ನು ಮದುವೆಯಾಗ್ತೀಯಾ? ನನ್ನಲ್ಲಿ ಹಣವಿಲ್ಲ. ಶ್ರೀಮಂತಿಕೆಯಲ್ಲ. ಆದರೆ, ಕನಸುಗಳಿವೆ. ಅವುಗಳನ್ನು ನಿನ್ನೊಂದಿಗೆ ಹಂಚ್ಕೋಬೇಕು ಅಂತೆ ಆಸೆಯಿದೆ’ ಅಂದರು. ಅವರ ನೇರಮಾತು, ತಮ್ಮ ಬದುಕಿನ ನೆಗೆಟಿವ್ ಅಂಶಗಳನ್ನು ಮುಚ್ಚು ಮರೆಯಿಲ್ಲದೆ ಹೇಳಿಕೊಂಡ ರೀತಿ ನನಗೆ ವಿಪರೀತ ಇಷ್ಟವಾಯಿತು. ಸ್ವಲ್ಪ ದಿನ ಟೈಂ ಕೊಡಿ. ಅಪ್ಪ-ಅಮ್ಮನ ಜತೆ ಮಾತಾಡಿ ಹೇಳ್ತೀನಿ ಅಂದೆ.
ಆಗ ನಮ್ಮ ತಂದೆ-ತಾಯಿ ಹುಬ್ಬಳ್ಳಿಯಲ್ಲಿದ್ದರು. ಒಮ್ಮೆ ರಜೆಗೆ ಬಂದಾಗ ವಿಷಯ ತಿಳಿಸಿದೆ. ಅಮ್ಮ ತಕ್ಷಣವೇ- ‘ಮದುವೆ ಮಾಡ್ಕೋತೀನಿ ಅನ್ನು’ ಎಂದರು. ಆದರೆ ಅಪ್ಪ-ಹುಡುಗನ ಹಿನ್ನೆಲೆ, ವಿದ್ಯಾರ್ಹತೆ, ಸಂಬಳ, ನೌಕರಿಯ ಬಗ್ಗೆ ಕೇಳಿದ್ರು. ನಿಜ ಹೇಳಬೇಕೆಂದರೆ, ಅವತ್ತು ಮೂರ್ತಿಯವರ ಸಂಬಳ ನನಗಿಂತ ಕಡಿಮೆಯಿತ್ತು. ಕಾಯಂ ನೌಕರಿಯಿರಲಿಲ್ಲ. ಹೀಗೆಂದರೆ, ಅಪ್ಪ ‘ನೋ’ ಎಂದುಬಿಟ್ಟಾರೆಂದು ಯೋಚಿಸಿ, ಒಂದಿಷ್ಟು ಸುಳ್ಳು ಹೇಳಿದೆ. ಅಪ್ಪ- ‘ನಾನು ಅವರೊಂದಿಗೆ ಒಮ್ಮೆ ಮಾತಾಡ್ತೇನೆ. ಅವರ ಮಾತು, ವರ್ತನೆ ಎರಡೂ ಇಷ್ಟವಾದರೆ ಮದುವೆ ಮಾಡ್ತೇನೆ. ಒಮ್ಮೆ ಭೇಟಿ ಮಾಡಿಸು’ ಎಂದರು.
ಪುಣೆಯ ಒಂದು ಹೋಟೆಲಿನಲ್ಲಿ ಭಾವೀ ಮಾವ-ಅತ್ತೆಯನ್ನು ಭೇಟಿಯಾಗಲು ನಾರಾಯಣಮೂರ್ತಿ ಒಪ್ಪಿದರು. ಒಂದು ನಿಗದಿತ ದಿನ ಹೇಳಿ, ಬೆಳಗ್ಗೆ ಸರಿಯಾಗಿ ೧೦ ಗಂಟೆಗೆ ಬರ್ತೇನೆ ಎಂದರು. ಅವತ್ತು ನಾವು ೯.೩೦ಕ್ಕೇ ಹೋಟೆಲಿಗೆ ಹೋದೆವು. ೧೦ ಗಂಟೆಯಾಯ್ತು. ಮೂರ್ತಿ ಬರಲಿಲ್ಲ. ಹನ್ನೊಂದು ಹೊಡೆಯಿತು. ಆಗಲೂ ಆಸಾಮಿಯ ಪತ್ತೆಯಿಲ್ಲ. ಹನ್ನೊಂದೂವರೆ ದಾಟಿದಾಗ ಮಾತ್ರ ನಮ್ಮ ತಂದೆ ತಾಳ್ಮೆ ಕಳೆದುಕೊಂಡು- ‘ಮಾತಿಗೆ ತಪ್ಪುವವರಿಗೆ, ಟೈಂ ಸೆನ್ಸ್ ಇಲ್ಲದವರಿಗೆ ಹೇಗಮ್ಮಾ ನಿನ್ನನ್ನು ಮದುವೆ ಮಾಡಿಕೊಡಲಿ’ ಅಂದರು.
ಹನ್ನೆರಡು ಗಂಟೆ ಆಯ್ತು ನೋಡಿ, ಆಗ ರಕ್ತಗೆಂಪು ಬಣ್ಣದ ಹೊಸ ಷರ್ಟ್ ಧರಿಸಿದ್ದ ನಾರಾಯಣಮೂರ್ತಿ ಅವರಸರದಿಂದ ಬಂದರು. ಮೊದಲು ‘ಸಾರಿ’ ಕೇಳಿದರು. ‘ಕಚೇರಿ ಕೆಲಸದ ನಿಮಿತ್ತ ಬಾಂಬೆಗೆ ಹೋಗಿದ್ದೆ. ಬರುವಾಗ ಟ್ರಾಫಿಕ್ ಜಾಂ ಆಗಿಬಿಡ್ತು. ಬಸ್ಸಲ್ಲೇ ಹೋದರೆ ತುಂಬಾ ತಡವಾಗುತ್ತೆ ಅಂದುಕೊಂಡು, ಮಾರ್ಗ ಮಧ್ಯೆಯೇ ಬಸ್ ಇಳಿದು ಟ್ಯಾಕ್ಸಿ ಮಾಡಿಕೊಂಡು ಬಂದೆ. ಆದ್ರೂ ಲೇಟಾಯ್ತು. ಸಾರಿ’ ಅಂದರು.
ಈ ವಿವರಣೆ ಕೇಳಿದ ತಿಳಿದ ನಂತರವೂ ನಮ್ಮ ತಂದೆ ಪ್ರಸನ್ನರಾಗಲಿಲ್ಲ. ಅವರು ನೇರವಾಗಿ ಮೂರ್ತಿಯವರನ್ನೇ ಕೇಳಿದರು: ‘ಜೀವನದಲ್ಲಿ ಏನಾಗಬೇಕೆಂದು ನಿರ್ಧರಿಸಿದ್ದೀರಿ?’
ಮೂರ್ತಿ ತಕ್ಷಣವೇ ಹೇಳಿಬಿಟ್ಟರು. ಕಮ್ಯುನಿಸ್ಟ್ ಪಕ್ಷ ಸೇರಿ ರಾಜಕಾರಣಿ ಆಗಬೇಕು. ನಂತರ ಒಂದು ಅನಾಥಾಶ್ರಮ ಆರಂಭಿಸಬೇಕು ಅಂತಿದೀನಿ.
‘ಕ್ಷಮಿಸಿ. ಕಮ್ಯುನಿಸ್ಟರು ದೇಶದ ಉದ್ಧಾರ ಮಾಡಲು ಹೋಗಿ ತಮ್ಮ ಸಂಸಾರವನ್ನೇ ಮರೆತುಬಿಡ್ತಾರೆ ಅನ್ನೋದು ನನ್ನ ನಂಬಿಕೆ, ಅನುಭವ. ಜತೆಗೆ ನೀವು ಅನಾಥಾಶ್ರಮ ಶುರು ಮಾಡ್ತೀನಿ, ರಾಜಕೀಯ ಸೇರ್ತೀನಿ ಎಂದೆಲ್ಲ ಹೇಳ್ತಾ ಇದೀರ. ಇದೇ ನಿಜವಾದರೆ, ನನ್ನ ಮಗಳನ್ನು ನಿಮಗೆ ಕೊಡಲಾರೆ. ಒಂದು ಒಳ್ಳೆಯ ನೌಕರಿ ಹಿಡಿಯಿರಿ. ಆರ್ಥಿಕವಾಗಿ ಸೆಟ್ಲಾಗಿ. ಆಗ ಖಂಡಿತ ಮದುವೆ ಮಾಡಿಕೊಡ್ತೇನೆ’ ಅಂದರು ಅಪ್ಪ.
ಆ ಮಾತಿಗೆ ಮೂರ್ತಿ ಒಪ್ಪಲಿಲ್ಲ. ಅತ್ತ ನಮ್ಮ ತಂದೆಯೂ ಸೋಲಲಿಲ್ಲ. ಹೀಗೇ ಮೂರು ವರ್ಷ ಕಳೆಯಿತು. ಒಂದು ಖುಷಿಯೆಂದರೆ, ನಮ್ಮ ಗೆಳೆತನಕ್ಕೆ ಆಗಲೂ ಚನ್ನಾಗೇ ಇತ್ತು. ಈ ಮಧ್ಯೆ ಮತ್ತೆ ಊರಿಗೆ ಬಂದಾಗ ಅಪ್ಪನಿಗೆ ಹೇಳಿದ್ದೆ: ‘ನಾನು ನಿನ್ನ ಆಶೀರ್ವಾದ ಪಡೆಯದೆ ಮದುವೆಯಾಗಲ್ಲ ಕಣಪ್ಪಾ. ಯೋಚಿಸಬೇಡ…’
ಅಪ್ಪ, ತಕ್ಷಣವೇ ಹೇಳಿದ್ರು: ‘ಮೂರ್ತಿಯವರಿಗೆ ಒಂದು ಕೆಲಸ ಹುಡುಕಿಕೊಳ್ಳಲು ಹೇಳು. ಆಗ ನಾನೇ ನಿಂತು ಮದುವೆ ಮಾಡಿಕೊಡ್ತೇನೆ…’
ಅಂತೂ, ೧೯೭೭ರಲ್ಲಿ ಬಾಂಬೆಯ ಪಾಟ್ನಿ ಕಂಪ್ಯೂಟರ್ಸ್ ಸಂಸ್ಥೆಯಲ್ಲಿ ಜನರಲ್ಲಿ ಮ್ಯಾನೇಜರ್ ಹುದ್ದೆಗೆ ಮೂರ್ತಿ ಸೇರಿಕೊಂಡರು. ಕೆಲವೇ ತಿಂಗಳುಗಳ ನಂತರ ಅವರನ್ನು ತರಬೇತಿಗಾಗಿ ಅಮೆರಿಕಕ್ಕೆ ಕಳಿಸಲು ಕಂಪನಿ ನಿರ್ಧರಿಸಿತ್ತು. ‘ಬೇಗ ಮದುವೆಯಾಗೋಣ. ಇಬ್ಬರೂ ಅಮೆರಿಕಕ್ಕೆ ಹೋಗೋಣ ಎಂದರು ಮೂರ್ತಿ. ಆ ವೇಳೆಗೆ ನಮ್ಮ ತಂದೆ ಕೂಡ ಮನಸ್ಸು ಬದಲಿಸಿ, ಮದುವೆಗೆ ಸಮ್ಮತಿಸಿದ್ದರು. (ಮೂರ್ತಿಗೆ ಕೆಲಸ ಸಿಕ್ಕಿತ್ತಲ್ಲ?) ೧೯೭೮ರ ಫೆಬ್ರವರಿ ೧೦ರಂದು, ಬೆಂಗಳೂರಿನ ಜಯನಗರದಲ್ಲಿದ್ದ ನಾರಾಯಣಮೂರ್ತಿ ಅವರ ಮನೆಯಲ್ಲಿ ನಮ್ಮ ಮದುವೆ ಆಗೇ ಹೋಯ್ತು. ಜೀವನದಲ್ಲಿ ಮೊತ್ತಮೊದಲಿಗೆ ನಾನು ರೇಷ್ಮೆ ಸೀರೆ ಉಟ್ಟಿದ್ದೇ ಆಗ. ಮದುವೆಗೆ ತಗುಲಿದ ಒಟ್ಟು ಖರ್ಚು ಎಷ್ಟು ಗೊತ್ತೆ? ೮೦೦ ರೂಪಾಯಿ. ನಾನು-ಮೂರ್ತಿ, ತಲಾ ೪೦೦ ರೂ. ಹಾಕಿ ಈ ಖರ್ಚು ಹಂಚಿಕೊಂಡೆವು. ಆ ಮೂಲಕ ಹೊಸ ಬದುಕಿನಲ್ಲಿ ಕನಸು ಹಂಚಿಕೊಳ್ಳುವ ಕಾಯಕಕ್ಕೆ ಚಾಲನೆ ನೀಡೆದೆವು.
ಅಮೆರಿಕಾದಿಂದ ಮರಳಿ ಬರುವ ವೇಳೆಗೆ ಭಾರತದಲ್ಲಿ ಕಂಪ್ಯೂಟರ್ ಕ್ರಾಂತಿ ಆರಂಭವಾಗಿತ್ತು. ಇದನ್ನು ಗಮನಿಸಿದ ನಾರಾಯಣಮೂರ್ತಿ, ೧೯೮೧ರಲ್ಲಿ ತಮ್ಮ ನೌಕರಿಗೆ ರಾಜೀನಾಮೆ ನೀಡಿ, ಇನ್ಫೋಸಿಸ್ ಹೆಸರಿನ ಸಂಸ್ಥೆ ಹುಟ್ಟು ಹಾಕಿದರು. ಆಗ ಕೂಡ ಮೂರ್ತಿಯ ತಲೆ ತುಂಬ ಐಡಿಯಾಗಳಿದ್ದವೇ ಹೊರತು ಬಂಡವಾಳ ಹೂಡಲು ಹಣವಿರಲಿಲ್ಲ. ಯಾವುದೇ ವ್ಯವಹಾರ ಮಾಡಿದ ಅನುಭವವೂ ಇರಲಿಲ್ಲ. ಆದರೆ, ಮೂರ್ತಿ ಗೆದ್ದೇ ಗೆಲ್ತಾರೆ ಎಂದು ನನ್ನ ಒಳ ಮನಸ್ಸು ಹೇಳ್ತಾನೇ ಇತ್ತು. ತಕ್ಷಣವೇ, ಸಂಕಟದ ಸಂದರ್ಭಕ್ಕೆ ಇರಲಿ ಎಂದು ಕೂಡಿಟ್ಟಿದ್ದ ೧೦೦೦೦ ರೂ. ಗಳನ್ನು ಮೂರ್ತಿಯ ಕೈಗಿಟ್ಟು- ‘ಇದು ಬಂಡವಾಳ ಅಂದುಕೊಳ್ಳಿ. ನಿಮ್ಮ ಕನಸುಗಳೆಲ್ಲ ನನಸಾಗಲಿ. ಶ್ರದ್ಧೆಯಿಂದ ಕೆಲಸ ಮಾಡ್ತಾ ಹೋಗಿ. ಖಂಡಿತ ಒಳ್ಳೇದಾಗುತ್ತೆ’ ಅಂದೆ.
ಆರು ಮಂದಿ ಸಮಾನ ಮನಸ್ಕರು ಹಾಗೂ ಸಮಾನ ವಯಸ್ಕರೊಂದಿಗೆ ಮೂರ್ತಿ ಕೆಲಸ ಆರಂಭಿಸಿದರು. ಅವತ್ತಿಗೆ ಪುಣೆಯಲ್ಲಿ ನಾವು ವಾಸವಿದ್ದ ಪುಟ್ಟ ಬಾಡಿಗೆ ಮನೆಯೇ ‘ಇನ್ಫೋಸಿಸ್’ನ ಹೆಡ್ಡಾಫೀಸು. ಮುಂದೆ ೧೯೮೨ರಲ್ಲಿ ನಾನು ಟೆಲ್ಕೋದ ನೌಕರಿಗೆ ರಾಜೀನಾಮೆ ನೀಡಿ, ಇನ್ಫೋಸಿಸ್ ಬಳಗ ಸೇರಿದೆ. ನಾನು ಅಲ್ಲಿ ಕ್ಲರ್ಕ್ ಕಂ ಕುಕ್ ಕಂ ಪ್ರೋಗ್ರಾಮರ್ ಕಂ ಹೆಲ್ಪರ್ ಆಗಿ ಕೆಲಸ ಮಾಡಬೇಕಿತ್ತು! ಅದು, ಉತ್ಸಾಹದ ವಯಸ್ಸು. ಹಗಲಿರುಳೆನ್ನದೆ ಎಲ್ಲರೂ ದುಡಿದರು. ಪರಿಣಾಮ, ೧೯೮೩ರಲ್ಲಿ ಬೆಂಗಳೂರಿನ ಮೈಕೋ ಫ್ಯಾಕ್ಟರಿಗೆ ಒಂದಷ್ಟು ಬಿಡಿಭಾಗಗಳನ್ನು ಒದಗಿಸುವ ಕಾಂಟ್ರಾಕ್ಟ್ ಸಿಕ್ಕಿತು. ಈ ಬೆಳವಣಿಗೆಯಿಂದ ಖುಷಿಯಾದ ನಮ್ಮ ತಂದೆ-ಮೂರ್ತಿಯವರಿಗೆ ಒಂದು ಸ್ಕೂಟರನ್ನು ಕಾಣಿಕೆಯಾಗಿ ನೀಡಿದರು.
ಮುಂದೆ, ಇನ್ಫೋಸಿಸ್ಗೆ ದೊಡ್ಡ ಮಟ್ಟದ ಲಾಭ ಬರುವವರೆಗೂ ಪುಣೆಯಲ್ಲಿದ್ದ ನಮ್ಮ ಮನೆಯೇ ಇನ್ಫೋಸಿಸ್ನ ಹೆಡ್ಡಾಫೀಸ್ ಆಗಿತ್ತು. ಆ ಕಚೇರಿ ಬೇರೆಡೆಗೆ ಸ್ಥಳಾಂತರವಾಗುವವರೆಗೂ ನಾನು ಕ್ಲರ್ಕ್ ಕಂ ಕುಕ್ ಕಂ ಪ್ರೋಗ್ರಾಮರ್ ಕಂ ಹೆಲ್ಪರ್ ಆಗಿ ದುಡಿದೆ. ಮುಂದೆ ಯಶಸ್ಸಿನ ಒಂದೊಂದೇ ಮೆಟ್ಟಿಲು ಹತ್ತಿದ ನಂತರ-ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದ ನಂದನ್ ನೀಲೇಕಣಿ, ‘ಕಂಪನಿಯ ಯಶಸ್ಸಿಗೆ ಸುಧಾಮೂರ್ತಿಯವರ ಕೊಡುಗೆ ದೊಡ್ಡದು. ಅವರನ್ನೂ ಕಂಪನಿಯ ನಿರ್ದೇಶಕರೆಂದು ಸೇರಿಸಿಕೊಳ್ಳೋಣ’ ಎಂದರು.
ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ನಾರಾಯಣಮೂರ್ತಿ -‘ಸಾರಿ. ಅದಕ್ಕೆ ನನ್ನ ವಿರೋಧವಿದೆ. ಯಾವುದೇ ಕಂಪನಿಯಾಗಲಿ, ಅಲ್ಲಿ ಗಂಡ-ಹೆಂಡತಿ ಇಬ್ರೂ ದೊಡ್ಡ ಹುದ್ದೆಗಳಲ್ಲಿ ಇರಬಾರದು ಅಂದುಬಿಟ್ಟರು. ಈ ಮಾತಿಂದ ನನಗೆ ಶಾಕ್ ಆಯ್ತು, ಏಕೆಂದರೆ, ಕಂಪನಿಯ ಆರಂಭಕ್ಕೆ ಅಗತ್ಯವಿದ್ದ ಬಂಡವಾಳ ಹಾಕಿದ್ದವಳೇ ನಾನು. ಅಂಥ ನನಗೇ ಕಂಪನಿಯಲ್ಲಿ ಪ್ರವೇಶವಿಲ್ಲ ಅಂದರೆ…
ನಾನು ಹೀಗೆ ಯೋಚಿಸ್ತಾ ಇದ್ದಾಗಲೇ ಬಳಿ ಬಂದ ಮೂರ್ತಿ ಹೇಳಿದ್ರು: ‘ಹೌದು ಸುಧಾ. ನಾನು ಹೇಳಿರೋದು ಸರಿಯಾಗೇ ಇದೆ. ಕಂಪನಿಗೆ ಸೇರಿದವರಿಂದ ನಾನು ಶೆ. ೧೦೦ ರಷ್ಟು ಶ್ರಮ ಬಯಸ್ತೇನೆ. ನಾವಿಬ್ರೂ ಒಂದೇ ಕಂಪನೀಲಿದ್ರೆ -‘ಅಯ್ಯೋ, ನನ್ನ ಗಂಡ ಮಾಡ್ತಾರೆ ಬಿಡು ಅಂತ ನೀನು; ನನ್ನ ಹೆಂಡ್ತಿ ನೋಡ್ಕೋತಾಳೆ ಅಂತ ನಾನು ಉಡಾಫೆ ಮಾಡಬಹುದು. ಹಾಗಾದಾಗ ಕಂಪನಿ ಬೆಳೆಯೋದಿಲ್ಲ. ನನ್ನ ಮಾತಿಂದ ನಿಂಗೆ ಬೇಜಾರಾಗುತ್ತೆ ಅಂತ ಗೊತ್ತು. ಆದ್ರೂ ಸಾರಿ’ ಅಂದರು. ನಂತರ ಯೋಚಿಸಿದಾಗ ಅವರ ನಿರ್ಧಾರ ಸರಿ ಅನ್ನಿಸ್ತು…’
***
ಪ್ರಿಯ ಓದುಗಾ, ಇದು ಸುಧಾಮೂರ್ತಿ-ನಾರಾಯಣಮೂರ್ತಿಯವರ ಲವ್ಸ್ಟೋರಿ. ಇವತ್ತು ಸುಧಾಮೂರ್ತಿ-ನಾರಾಯಣಮೂರ್ತಿಯವರನ್ನು ಆರಾಧಿಸುವವರಿದ್ದಾರೆ. ವಿರೋಧಿಸುವವರೂ ಇದ್ದಾರೆ. ಅದು ಅತ್ಲಾಗಿರಲಿ. ಆದರೆ, ದೇಶವೇ ಹೆಮ್ಮೆ ಪಡುವಂಥ ಸಂಸ್ಥೆ ಕಟ್ಟುವ ಮುನ್ನ ಅವರೂ ನಮ್ಮ ನಿಮ್ಮಂತೆಯೇ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದರು. ನಮ್ಮ-ನಿಮ್ಮಂತೆಯೇ ಹಗಲು ಗನಸು ಕಂಡರು. ಸಂಕಟದಲ್ಲಿ ಬೆಂದರು, ಸಂತೋಷದಲ್ಲಿ ಮಿಂದರು ಮುಂದೆ, ಅದೆಷ್ಟೋ ವರ್ಷಗಳ ನಂತರ ಎಂದು ವಿವರಿಸುವ; ಕಷ್ಟಪಟ್ಟರೆ ಏನನ್ನೂ ಸಾಧಿಸಬಹುದು ಎಂದು ಹೇಳುವ ಸಲುವಾಗಿ ಸುಧಾಮೂರ್ತಿಯವರ ಆತ್ಮಚರಿತ್ರೆಯಲ್ಲಿದ್ದ ಈ ವಿವರಣೆ ನೀಡಬೇಕಾಯಿತು. ಸ್ಟೋರಿ ಇಷ್ಟವಾಯ್ತು?

Advertisements

2 Comments »

 1. 1
  roopa Says:

  Excelent … article.. please tell me the name of the book.. i read many sudha moorhti’s book.. each book is tell’s how to lead the life
  thanks for the article… 🙂 continue like this … to good…

 2. 2
  Santhosh kumar A B Says:

  sudha murtiyavare nimage nanna namanagalu. neevu jeevanavanna bahala sarlavagi & sundravaagi arta madikondiddira. ishta aitu naavu nimmante haglu sadyavideye? hagadre naavu enu madabeku pls tilstira


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: