ಕಣ್ವರ ದೂರದೃಷ್ಟಿಗೆ ಕಷ್ಟವೇಕೆ ಕಾಣಿಸಲಿಲ್ಲ?

ಪುರಾಣದಲ್ಲಿ ಬರುವ ಋಷಿಗಳನ್ನಾಗಲಿ, ದೇವತೆಗಳನ್ನಾಗಲಿ ಪ್ರತ್ಯಕ್ಷ ಕಂಡವರಿಲ್ಲ. ಆದರೆ, ಋಷಿ ಮುನಿಗಳು ಹಾಗೂ ದೇವತೆಗಳಿಗೆ ದೂರದೃಷ್ಟಿ ಇತ್ತು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಹೀಗಿದ್ದರೂ, ಅದೆಷ್ಟೋ ಸಂದರ್ಭದಲ್ಲಿ ಋಷಿಗಳು ಮತ್ತು ದೇವತೆಗಳು ನಮ್ಮ ನಿಮ್ಮಂತೆಯೇ ವರ್ತಿಸುವುದು ಏಕೆ? ತಿಳಿವವರಿಗೆ ತಿಳಿದವರು ಹೇಳಲಿ…
…………… …………… …………… …………… …………… ……………

ವಿಶ್ವಾಮಿತ್ರ, ಋಷಿಯಾಗುವ ಮೊದಲು ರಾಜನಾಗಿದ್ದ. ಅವನಿಗೆ ಕೌಶಿಕ ದೊರೆ ಎಂದೇ ಹೆಸರಿತ್ತು. ದೊರೆಯ ಆಸ್ಥಾನಕ್ಕೆ ಒಮ್ಮೆ ವಶಿಷ್ಠ ಮಹರ್ಷಿಗಳು ಬಂದಿದ್ದರು. ಅವರ ಬಳಿ ಕೇಳಿದ್ದನ್ನೆಲ್ಲ ಕೊಡುವ ಕಾಮಧೇನುವಿತ್ತು. ಕೌಶಿಕ ದೊರೆ ಅದನ್ನೇ ಬಯಸಿದ. ವಶಿಷ್ಠರು ನಿರಾಕರಿಸಿದರು. ಇದರಿಂದ ಅಪಮಾನಿತನಾದ ದೊರೆ, ವಶಿಷ್ಠರಂತೆಯೇ ಋಷಿಯಾಗಬಯಸಿದ. ರಾಜ್ಯ ತೊರೆದ. ತಪಸ್ಸಿಗೆ ಕೂತ. ಕಡೆಗೆ ವಶಿಷ್ಠ ಮಹರ್ಷಿಗಳಿಂದಲೇ ವಿಶ್ವಾಮಿತ್ರ ಅನ್ನಿಸಿಕೊಂಡ.
ಆನಂತರವೂ ವಿಶ್ವಾಮಿತ್ರ ಆಗಿಂದಾಗ್ಗೆ ತಪಸ್ಸಿಗೆ ಕೂರುತ್ತಲೇ ಇದ್ದ. ಈ ಋಷಿಯ ತಪಸ್ಸಿನಿಂದ ತನ್ನ ಇಂದ್ರ ಪದವಿಗೆ ಭಂಗ ಉಂಟಾದರೆ ಎಂಬ ಭಯ ಇಂದ್ರನಿಗೆ. ಋಷಿಯ ತಪಸ್ಸು ಕೆಡಿಸಲು ಆತ ಹತ್ತು ಹಲವು ಬಗೆಯಲ್ಲಿ ಪ್ರಯತ್ನಿಸಿ, ವಿಪಲನಾದ. ಕಡೆಯ ಪ್ರಯತ್ನ ಎಂಬಂತೆ- ಸುರ ಸುಂದರಿ ಮೇನಕೆಯನ್ನು ಕಳಿಸಿದ. ತನ್ನೆದುರು ನಿಂತ ಮೇನಕೆಯನ್ನು, ಆಕೆಯ ತುಂಬು ಸೌಂದರ್ಯವನ್ನು ಕಂಡ ವಿಶ್ವಾಮಿತ್ರನಿಗೆ ಮೋಹ ಜತೆಯಾಯಿತು. ಆಸೆ ಕೈ ಹಿಡಿಯಿತು ಆತ ಮರುಕ್ಷಣವೇ ತಪಸ್ಸು ಮರೆತ. ಲೋಕ ಮರೆತ. ಮೈಮರೆತ. ಮೇನಕೆಯ ಮೈಮಾಟ, ಕುಡಿಮಿಂಚಿನ ಕಣ್ಣ ನೋಟ, ತುಂಬು ಲಾವಣ್ಯದ ಚೆಲುವಿಗೆ ವಿಶ್ವಾಮಿತ್ರ ಮನಸೋತ. ದಾಂಪತ್ಯ ಬದುಕು ಆರಂಭಿಸಿದ.
ನಂತರದ ಕೆಲವೇ ದಿನಗಳಲ್ಲಿ ಮೇನಕೆ ಗರ್ಭಿಣಿಯಾದಳು. ಆಕೆಗೆ ಹೆಣ್ಣು ಮಗು ಜನಿಸಿತು ಮಗಳನ್ನು ಕಂಡಾಗ ವಿಶ್ವಾಮಿತ್ರನಿಗೆ ಋಷಿಯಾಗಲಿಲ್ಲವಾ? ಊಹುಂ, ಅಂಥ ಯಾವ ವಿವರಣೆಯೂ ಪುರಾಣ ಕತೆಗಳಲ್ಲಿ ಇರುವಂತೆ ಕಾಣೆ. ಆದರೆ, ‘ಓಹ್, ನನ್ನ ತಪೋಭಂಗವಾಯಿತು’ ಎಂಬ ಅರಿವು ವಿಶ್ವಾಮಿತ್ರನಿಗೆ ಬಂದದ್ದಂತೂ ಆಗಲೇ. ತಕ್ಷಣವೇ ಆತ ಮೇನಕೆಯಿಂದ ದೂರವಾದ. ಈ ಮೇನಕೆ, ನಾನು ಬಂದ ಕೆಲಸವಾಯ್ತು ಅಂದುಕೊಂಡವಳೇ, ತನ್ನ ಮಗುವನ್ನು ಕಾಡಿನಲ್ಲಿ, ಒಂದು ಮರದ ಕೆಳಗೆ ಮಲಗಿಸಿ ಏನಾದ್ರೂ ಮಾಡ್ಕೋ? ಅಂತ ದೇವಲೋಕಕ್ಕೆ ಹೋಗಿಬಿಟ್ಟಳು.
ಮರದ ಕೆಳಗೆ ಅನಾಥವಾಗಿ ಮಲಗಿದ್ದ ಮಗುವಿಗೆ ಅಲ್ಲಿದ್ದ ಶಕುಂತ ಪಕ್ಷಿಗಳೇ ತಾಯ್ತಂದೆಯರಾದವು. ಮಗುವಿಗೆ ಗುಟುಕು ತಿನ್ನಿಸಿದವು. ಹುಶಾರಾಗಿ ನೋಡಿಕೊಂಡವು. ಕೆಲದಿನಗಳ ನಂತರ ಕಾರ್ಯನಿಮಿತ್ತ ಆ ದಾರಿಯಲ್ಲಿ ಬಂದ ಕಣ್ವ ಋಷಿಗಳು ಮುದ್ದಾದ ಆ ಮಗುವನ್ನು ನೋಡಿದರು. ಅದು ವಿಶ್ವಾಮಿತ್ರ-ಮೇನಕೆಯರ ಪ್ರಣಯದ ಫಲ ಎಂದು ದಿವ್ಯದೃಷ್ಟಿಯಿಂದ ತಿಳಿದರು. ಶಕುಂತ ಪಕ್ಷಿಗಳು ಸಾಕುತ್ತಿದ್ದವಲ್ಲ – ಅದೇ ಕಾರಣಕ್ಕೆ ಆಕೆಗೆ ‘ಶಕುಂತಲೆ’ ಎಂದು ಹೆಸರಿಟ್ಟರು. ಆ ಮಗುವನ್ನು ತಾವೇ ಸಾಕಲು ನಿರ್ಧರಿಸಿದರು.
ಆ ನಂತರ ತಮ್ಮ ಜೀವಕ್ಕಿಂತಲೂ ಹೆಚ್ಚಾಗಿ ಶಕುಂತಲೆಯನ್ನು ನೋಡಿಕೊಳ್ಳುತ್ತಾರೆ ಕಣ್ವ ಮಹರ್ಷಿ. ಆಕೆಗೆ ವಿದ್ಯೆ ಕಲಿಸುತ್ತಾರೆ. ನಾಟ್ಯ ಕಲಿಸುತ್ತಾರೆ. ಹಾಡು ಹೇಳಿ ಕೊಡುತ್ತಾರೆ. ಮುಂದೆ ಆಕೆ ಪ್ರಾಪ್ತ ವಯಸ್ಕಳಾಗುತ್ತಾಳೆ. ಮುಂದೊಮ್ಮೆ ಕಣ್ವರು ಆಶ್ರಮದಲ್ಲಿ ಇಲ್ಲದಿದ್ದಾಗ ಅಲ್ಲಿಗೆ ಬಂದ ದುಷ್ಯಂತ ಮಹಾರಾಜ, ಶಕುಂತಲೆಯನ್ನು ಮೋಹಿಸುತ್ತಾನೆ. ಆಕೆಯ ಒಪ್ಪಿಗೆ ಪಡೆದೇ ಗಾಂಧರ್ವ ವಿವಾಹವಾಗುತ್ತಾನೆ. ಆಕೆಯ ಸಂಗಸುಖ ಪಡೆದು, ಶೀಘ್ರವೇ ಆಕೆಯನ್ನು ಕರೆಸಿಕೊಳ್ಳುವುದಾಗಿ ಹೇಳಿ, ತನ್ನ ನೆನಪಿಗೆ ಉಂಗುರವೊಂದನ್ನು ನೀಡಿ ಹೋಗಿಬಿಡುತ್ತಾನೆ.
ಇದೂ ಸಹ ಕಣ್ವ ಮಹರ್ಷಿಗಳಿಗೆ ದಿವ್ಯ ದೃಷ್ಟಿಯಿಂದ ತಿಳಿಯುತ್ತದೆ. ಕೆಲ ದಿನಗಳ ನಂತರ ಶಕುಂತಲೆ ಗರ್ಭವತಿಯಾದಾಗ ಕಣ್ವರು ಆಕೆಯನ್ನು ದುಷ್ಯಂತನ ರಾಜ್ಯಕ್ಕೆ ಕಳಿಸಿಕೊಡುತ್ತಾರೆ. ಆಗ ಶಕುಂತಲೆ ನದಿ ದಾಟುವಾಗ ದುಷ್ಯಂತನ ನೆನಪಿನಲ್ಲೇ ಮೈಮರೆತು, ನದಿಯ ನೀರೊಳಗೆ ಕೈ ಆಡಿಸುತ್ತಾ ಉಂಗುರ ಕಳೆದುಕೊಳ್ಳುವುದು, ಅದನ್ನು ಒಂದು ಮೀನು ನುಂಗುವುದು, ದುಷ್ಯಂತನಿಗೆ ಶಕುಂತಲೆಯ ಗುರುತೇ ಸಿಗದಿರುವುದು, ಆಕೆಯನ್ನು ವಾಪಸ್ ಕಳಿಸುವುದು… ಮತ್ತು ಆನಂತರ ಆಕಸ್ಮಿಕವಾಗಿ ದುಷ್ಯಂತ ಮಹಾರಾಜನಿಗೆ ಉಂಗುರ ಸಿಕ್ಕಿ ಎಲ್ಲವೂ ‘ಶುಭಂ’ ಆಗುವುದು ಲೋಕಕ್ಕೇ ಗೊತ್ತಿರುವ ಕಥೆ.
ಇಲ್ಲಿ ಪ್ರಶ್ನೆಯೆಂದರೆ – ಕಣ್ವರು ಋಷಿಗಳು. ಅವರು ದೈವಾಂಶ ಸಂಭೂತರು. ಹಿಂದೆ ನಡೆದದ್ದು ; ಮುಂದೆ ನಡೆಯಲಿರುವುದು ಎರಡನ್ನೂ ತಿಳಿಯಬಲ್ಲ ಶಕ್ತಿ ಇದ್ದವರು. ಶಕುಂತಲೆಯನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ನೋಡಿಕೊಂಡವರು. ಇಷ್ಟಿದ್ದೂ, ತಮ್ಮ ಮುದ್ದಿನ ಮಗಳಿಗೆ ದುಷ್ಯಂತ ಹೇಗೆ ಅನುಮಾನಿಸಬಹುದು. ನಂತರ ಆಕೆಗೆ ಯಾವ ಯಾವ ಕಷ್ಟ ಎದುರಾಗಬಹುದು ಎಂಬುದು ಅವರಿಗೇಕೆ ಅರ್ಥವಾಗಲಿಲ್ಲ?
ಅಥವಾ, ಕಣ್ವರಿಗೆ ಇದ್ದ ದಿವ್ಯದೃಷ್ಟಿ ಹಿಂದೆ ನಡೆದದ್ದನ್ನು ಅರಿಯುವಷ್ಟರ ಮಟ್ಟಿಗೆ ಮಾತ್ರ ಸೀಮಿತವಾಗಿತ್ತೆ? ಕಣ್ವರೇ ಹಿಂದಿನದು ಮತ್ತು ಮುಂದಿನದನ್ನೆಲ್ಲ ಗ್ರಹಿಸಿ ಬಿಟ್ಟರೆ ದುಷ್ಯಂತ – ಶಕುಂತಲೆಯರ ಅಮರಾ ಮಧುರ ಕತೆ ಲೋಕದ ಮಂದಿಗೆ ಸಿಗಲಾರದು ಎಂಬ ನೆಪದಿಂದಲೇ ‘ಕವಿ’ ಹೀಗೆ ಗೊಂದಲ ಸೃಷ್ಟಿಸಿದನೆ?
ಇದ್ದರೂ ಇರಬಹುದು!!
******

ಅವಳು, ತೊಡೆಯಿಂದ ಹುಟ್ಟಿದವಳು !
ನರ-ನಾರಾಯಣರು ಹಿಮವತ್ ಪರ್ವತದಲ್ಲಿ ತಪಸ್ಸಿಗೆ ಕೂತಿದ್ದರು. ಅವರ ತಪಸ್ಸಿನಿಂದ ಮೊದಲು ಹೆದರಿದವನು ಯಥಾಪ್ರಕಾರ ದೇವೇಂದ್ರ, ಆ ಇಬ್ಬರು ಋಷಿಗಳ ತಪಸ್ಸು ಕೆಡಿಸಿ ಬಾ ಎಂದು ಆeಪಿಸಿ ಆತ ರಂಬೆಯನ್ನು ಕಳಿಸಿದ. ರಂಬೆ, ನರ-ನಾರಾಯಣರ ಮುಂದೆ ಬಂದು ವೈಯ್ಯಾರದಿಂದ ನರ್ತಿಸಲು ಶುರುವಿಟ್ಟಳು. ಆಗ, ನಾರಾಯಣ ಕಣ್ತೆರೆದ. ಅವನನ್ನು ತಪಸ್ಸಿನಿಂದ ಎಬ್ಬಿಸಲು, ಅವನ ಏಕಾಗ್ರತೆಯನ್ನು ಕೆಡಿಸಲು ರಂಬೆ, ತನಗೆ ಗೊತ್ತಿದ್ದ ತಂತ್ರಗಳನ್ನೆಲ್ಲ ಬಳಸಿ, ವಿಫಲಳಾದಳು! ನಾರಾಯಣ, ರಂಬೆಯನ್ನು ತಿರಸ್ಕಾರದಿಂದ ನೋಡಿದ.
ಅವನು ಅಷ್ಟಕ್ಕೇ ಸುಮ್ಮನಾಗಿಲ್ಲ. ಮರುಕ್ಷಣವೇ ತನ್ನ ತೊಡೆಯನ್ನು ಉಜ್ಜಿ, ಕೂದಲೊಂದನ್ನು ಎಳೆದು, ಅದನ್ನೇ ಅತಿ ರೂಪುವಂತಳಾದ ಹೆಣ್ಣಾಗಿಸಿಬಿಟ್ಟ. ಆಕೆ ರಂಬೆಯನ್ನು ನೀವಾಳಿಸಿ ಎಸೆಯಬಲ್ಲಂಥ ಸುಂದರಿಯಾಗಿದ್ದಳು. ( ನಾವು- ನೀವೆಲ್ಲ ತಿಳಿದಿರುವ ಪ್ರಕಾರ, ಒಂದು ಜೀವ ಸೃಷ್ಟಿಯಾಗಬೇಕಾದರೆ ಗಂಡು ಮತ್ತು ಹೆಣ್ಣು ಇರಲೇಬೇಕು ತಾನೆ? ಅಯ್ಯಪ್ಪ ಸ್ವಾಮಿಯ ಸೃಷ್ಟಿಗೆ ವಿಷ್ಣು ಮೋಹಿನಿಯಾಗಿ, ಈಶ್ವರ ತನ್ನನ್ನು ಪ್ರೇಮಿಸುವಂತೆ ಮಾಡಿದ ಪ್ರಸಂಗ ನೆನಪು ಮಾಡಿಕೊಳ್ಳಿ ! ಆದರೆ, ತಪಸ್ಸಿಗೆ ಕೂತಿದ್ದ ಈ ನಾರಾಯಣನ ಪ್ರಸಂಗವೇ ವಿಚಿತ್ರ. ಈ ಪುಣ್ಯಾತ್ಮ ತೊಡೆಯ ಕೂದಲು ಕಿತ್ತು ಅದನ್ನೇ ರೂಪಸಿಯಾಗಿ ಮಾಡಿಬಿಟ್ಟನಂತೆ!) ಆಕೆಯನ್ನು ‘ರಂಬೆಗೆ ತೋರಿಸಿ-ರಂಬೆ, ಇವಳನ್ನು ಇಂದ್ರನಿಗೆ ತಲುಪಿಸು. ದೇವಲೋಕಕ್ಕೆ ಈಕೆ ನನ್ನ ಕೊಡುಗೆ’ ಅಂದನಂತೆ!
ನಾರಾಯಣ ಋಷಿಯ ತೊಡೆಯಿಂದ (ಉರುವಿನಿಂದ) ಹುಟ್ಟಿದಾಕೆ-ಊರ್ವಶಿ ಎಂದು ಹೆಸರಾದಳು. ಈ ಊರ್ವಶಿ ಮುಂದೆ ಭೂಲೋಕದ ರಾಜ ಪುರೂರವನನ್ನು ಮೋಹಿಸುತ್ತಾಳೆ. ಅವನನ್ನೆ ಹಗಲಿರುಳೂ ಧ್ಯಾನಿಸುತ್ತಿರುತ್ತಾಳೆ. ಈ ಕಾರಣದಿಂದಲೇ, ಒಮ್ಮೆ ದೇವಲೋಕದಲ್ಲಿ, ಇಂದ್ರನ ಒಡ್ಡೋಲಗದಲ್ಲಿ ನಡೆಯುತ್ತಿದ್ದ ನಾಟಕದಲ್ಲಿ ‘ವಿಷ್ಣು’ ಅನ್ನಬೇಕಿದ್ದ ಕಡೆ ‘ಪುರೂರವ’ ಅಂದುಬಿಡುತ್ತಾಳೆ. ಆ ಕಾರಣಕ್ಕೇ ಇಂದ್ರನಿಂದ ಶಾಪ ಪಡೆದು ಭೂಲೋಕಕ್ಕೆ ಬರುತ್ತಾಳೆ. ಪುರೂರವನ ಬಳಿಗೆ!
ಊರ್ವಶಿಯನ್ನು ಕಂಡದ್ದೇ ತಡ, ಪುರೂರವ (ಎಷ್ಟೇ ಆಗಲಿ, ಅವನೂ ಮನುಷ್ಯ ನೋಡಿ…) ಮೋಹ ಪರವಶನಾಗುತ್ತಾನೆ. ‘ಸುಂದರೀ, ನನ್ನನ್ನು ಮದುವೆಯಾಗು’ ಎಂದು ಬೇಡುತ್ತಾನೆ. ವರ್ಷಗಟ್ಟಲೆ ಅವನ ಧ್ಯಾನದಲ್ಲೇ ಕಳೆದ, ಅದೇ ಕಾರಣದಿಂದ ಶಾಪವನ್ನೂ ಪಡೆದ ಊವರ್ಶಿ, ತಕ್ಷಣವೇ ಮದುವೆಗೆ ಒಪ್ಪುವುದಿಲ್ಲ, ಬದಲಿಗೆ ಹೇಳುತ್ತಾಳೆ: ‘ರಾಜಾ, ನನ್ನವು ಎರಡು ಷರತ್ತುಗಳಿವೆ. ನನ್ನೊಂದಿಗೆ ಎರಡು ಮೇಕೆ ಮರಿಗಳಿವೆ. ಅವುಗಳನ್ನು ನೀನು ನೋಡಿಕೊಳ್ಳಬೇಕು. ಇದು ಮೊದಲಿನ ಷರತ್ತು. ನಾವಿಬ್ಬರೂ ಜತೆಗಿದ್ದಾಗ ಬಿಟ್ಟರೆ, ಇನ್ಯಾವಾಗಲೂ ನೀನು ಬೆತ್ತಲೆ ಕಾಣಿಸಿಕೊಳ್ಳಬಾರದು, ಇದು ಎರಡನೇ ಷರತ್ತು. ಷರತ್ತು ಮುರಿದಾಕ್ಷಣ ನಾನು ಹೊರಟು ಹೋಗ್ತೀನಿ. ಆಗ ನನ್ನನ್ನು ತಡೆಯಲು ಹಕ್ಕಿರುವುದಿಲ್ಲ’ ಎನ್ನುತ್ತಾಳೆ ಊರ್ವಶಿ. ಪುರೂರವ ಷರತ್ತುಗಳಿಗೆ ಒಪ್ಪುತ್ತಾನೆ. ಅವರ ಮದುವೆಯಾಗುತ್ತದೆ. ಸಂಸಾರ ಶುರುವಾಗುತ್ತದೆ.
ಈ ಕಡೆ, ಊರ್ವಶಿ ಇಲ್ಲದ್ದರಿಂದ ದೇವಲೋಕ ಭಣಗುಣತೊಡಗುತ್ತದೆ. ದೇವೇಂದ್ರ, ಕೂತಲ್ಲಿಯೇ ಒಮ್ಮೆ ನಡೆದಿರುವುದನ್ನೆಲ್ಲ ಅರ್ಥಮಾಡಿಕೊಳ್ಳುತ್ತಾನೆ. ಪುರೂರವ ತನ್ನ ಮಾತಿಗೆ ತಪ್ಪುವಂತೆ ಮಾಡಿದರೆ ಆಕೆ ಮರಳಿ ಬರುತ್ತಾಳೆ ಎಂದುಕೊಂಡು, ಗಂಧರ್ವರನ್ನು ಬಿಟ್ಟು ಮಧ್ಯರಾತ್ರಿಯಲ್ಲಿ ಪುರೂರವನ ಅರಮನೆಯ ಒಂದು ಕೊಠಡಿಯಲ್ಲಿದ್ದ ಮೇಕೆ ಮರಿಗಳನ್ನು ಅಪಹರಿಸುತ್ತಾನೆ. ಆ ಮರಿಗಳು ಒಂದೇ ಸಮನೆ ಅರಚಿಕೊಳ್ಳುತ್ತವೆ.
ಇದನ್ನು ಕೇಳಿಸಿಕೊಂಡ ಊರ್ವಶಿ- ‘ಅಯ್ಯೋ, ನನ್ನ ಮೇಕೆ ಮರಿಗಳು ಕಳುವಾಗುತ್ತಿವೆ. ಅವುಗಳನ್ನು ಕಾಪಾಡಿ’ ಅನ್ನುತ್ತಾಳೆ. ತಕ್ಷಣವೇ ಎದ್ದ ಪುರೂರವ, ಬೆತ್ತಲಾಗಿದ್ದೇನೆ ಎಂಬುದನ್ನೂ ಮರೆತು ಕತ್ತಿ ಹಿಡಿದು ಹೊರಡುತ್ತಾನೆ. ಆತ ಅರಮನೆಯಿಂದ ಹೊರಗೆ ಬಂದ ತಕ್ಷಣ ಗಂಧರ್ವರು ಆತನ ಮೇಲೆ ಬೆಳಕು ಹರಿಸುತ್ತಾರೆ. ಪರಿಣಾಮ, ಅರಮನೆಯ ಹೊರಗೇ ಆತ ಬೆತ್ತಲೆ ಕಂಡಂತೆ ಆಯಿತಲ್ಲ – ಊರ್ವಶಿ, ಎದ್ದು ಹೋಗುತ್ತಾಳೆ!
****
ಎಲ್ಲರೂ ಬಲ್ಲಂತೆ ಇದೂ, ಪುರಾಣದ ಕತೆ. ಆದರೆ ಕತೆ ನಡೆಯುವುದು ಭೂಲೋಕದಲ್ಲಿ! ಹೇಳಿ ಊರ್ವಶಿಯನ್ನು ಮದುವೆಯಾಗುವ ಪುರೂರವ ಒಬ್ಬ ರಾಜ. ಆತ ಹೆಂಡತಿಯ ಮಗ್ಗುಲಿಂದ ಎದ್ದು, ಬಟ್ಟೆಯನ್ನೇ ಹಾಕಿಕೊಳ್ಳದೆ ಕತ್ತಿ ಹಿಡಿದು ಯುದ್ಧಕ್ಕೆ ಹೊರಟ ಅಂದ್ರೆ – ಹೇಗೆ ಸಾಧ್ಯ? ರಾಜ ಅನ್ನಿಸಿಕೊಂಡವ ತನ್ನ ಉಡುಪಿನ ವಿಷಯದಲ್ಲಿ ಅಷ್ಟೊಂದು ಮೈಮರೆಯಲು ಸಾಧ್ಯವೆ? ಜತೆಗೇ, ನಾರಾಯಣನೆಂಬ ಋಷಿಯ ತೊಡೆಯ ರೋಮದಿಂದ ಅಪ್ಸರೆಯೊಬ್ಬಳು ಹುಟ್ಟುವುದು ಸಾಧ್ಯವೇ?
ಕಲ್ಪನೆ ಕವಿಗಿಂತ ದೊಡ್ಡದು ಎಂಬ ಮಾತಿದೆ. ಊರ್ವಶಿ-ಪುರೂರವನ ಕತೆಯಲ್ಲಿ ಊರ್ವಶಿ, ಪುರೂರವ, ಇಂದ್ರ ಮತ್ತು ಕವೀಂದ್ರರನ್ನು ಮೀರಿ- ಕಲ್ಪನೆ ಕತೆಯಾಗಿದೆ. ಅಷ್ಟೆ !
ಏನಂತೀರಿ?

Advertisements

2 Comments »

 1. 1
  ಸ್ವಾಮಿ Says:

  ಇದೊಂದು ಕೊಳಕು ತಲೆಹರಟೆ. ನಿಮ್ಮಂತವರ ಬರೆಯುವ ತೀಟೆಗೆ ಕತೆ ಓದಿ ಸ್ವಾಧವನ್ನೇ ಹಳಿಸಿಹಾಕಿಬಿಡುತ್ತೀರಿ. ಕತೆ ಎಂದರೆ ಕಲ್ಪನೆ. ಕತೆಯಲ್ಲಿರುವ ನೀತಿಯನ್ನು ತೆಗೆದುಕೊಂಡು ಸುಮ್ಮನಿರಲು ನಿಮಗೇನು ದಾಡಿ? ಮೊದಲು ನಿಮಗೆ ನೀವು ಉತ್ತರ ಹುಡಿಕಿಕೊಳ್ಳಿ ಕತೆಯ ಉದ್ದೇಶವೇನು?
  ನಿಮ್ಮಂತ ತಲೆಕೆಟ್ಟ ಬರವಣಿಗೆಗಾರರ ಬಗ್ಗೆ ಕುವೆಂಪು ಒಂದು ಎಚ್ಚರಿಕೆ ಕರೆ ಕೊಟ್ಟಿದ್ದಾರೆ ನೋಡಿ.
  http://www.vicharamantapa.net/content/node/4#.7

  ಸ್ವಾಮಿ

 2. 2
  arun Says:

  cloning annodu saadya endu thorisiruvaaga, kudalininda urvashi huttodu kashtaane?


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: