ಹೂವೂ ನಾಚುವಂಥ ಈ ಹಾಡಿನ ಹಿಂದಿರುವ ಸ್ವಾರಸ್ಯವೇನು ಗೊತ್ತಾ?

p-susheela

ಚಿತ್ರ: ಹಣ್ಣೆಲೆ ಚಿಗುರಿದಾಗ. ಗಾಯಕಿ: ಪಿ. ಸುಶೀಲ, ಗೀತರಚನೆ: ಆರ್.ಎನ್. ಜಯಗೋಪಾಲ್, ಸಂಗೀತ: ಎಂ. ರಂಗರಾವ್.
ಹೂವೂ… ಚೆಲುವೆಲ್ಲಾ ನಂದೆಂದಿತು
ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು ||ಪ||

ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು
ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು
ಹೆಣ್ಣೂ ವೀಣೆ ಹಿಡಿದ ಶಾರದೆಯ ಹೆಣ್ಣೆಂದಿತು ||೧||

ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು
ಕೆದರುತ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು
ಹೆಣ್ಣೂ… ನಾಟ್ಯದರಸಿ ಪಾರ್ವತಿಯ ಹೆಣ್ಣೆಂದಿತು ||೨||

ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು
ನೀಡುವೆ ಮಳೆ… ತೊಳೆಯುವೆ ಕೊಳೆ, ಸಮನಾರೆನಗೆಂತು
ಹೆಣ್ಣೂ… ಪಾಪ ತೊಳೆವ ಸುರಗಂಗೆ ಹೆಣ್ಣೆಂದಿತು ||೩||

ಬೆಳ್ಳಿ ತೆರೆಯ ಮೇಲೆ ನಾವೆಲ್ಲ ನೋಡುತ್ತೇವಲ್ಲ? ಆ ಎಲ್ಲ ಹಾಡುಗಳಿಗೂ ಒಂದೊಂದು ಸಂದರ್ಭವಿರುತ್ತದೆ; ಹಿನ್ನೆಲೆಯಿರುತ್ತದೆ. ಚಲನಚಿತ್ರಗಳಲ್ಲಿ ಮಧ್ಯೆ ಮಧ್ಯೆ ಬರುವ ಹಾಡುಗಳಿಂದ ಆ ಸನ್ನಿವೇಶದ ತೀವ್ರತೆ ಹೆಚ್ಚುತ್ತದೆ. ಅಷ್ಟೇ ಅಲ್ಲ, ಹಾಡಿನ ನೆಪದಲ್ಲಿ ಮಧುರ ಸಂಗೀತ ಕೇಳುವ; ಕಲ್ಪನೆಯ ಲೋಕದಲ್ಲಿ ವಿಹರಿಸುವ ಸಂತೋಷ ಪ್ರೇಕ್ಷಕನದ್ದಾಗುತ್ತದೆ. ಸ್ವಾರಸ್ಯವೆಂದರೆ, ಇವತ್ತು ‘ಸೂಪರ್ ಹಿಟ್ ಸಾಂಗ್ಸ್’ ಎಂದು ಕರೆಸಿಕೊಂಡಿರುವ ಬಹುತೇಕ ಹಾಡುಗಳು ತೀರಾ ಆಕಸ್ಮಿಕವಾಗಿ ಸೃಷ್ಟಿಯಾದಂಥವು. ಆ ಪೈಕಿ ಕೆಲವು ನಿರ್ದೇಶಕರ ಆಸಕ್ತಿಯ ಕಾರಣದಿಂದ ಚಿತ್ರದಲ್ಲಿ `ಹಾಗೇ ಸುಮ್ಮನೆ’ ಸೇರಿಸಿದಂಥವು (ತುರುಕಿದಂಥವು ಎಂದರೇ ಸರಿಯೇನೋ…)
ಆದರೆ ತೆರೆಯ ಹಿಂದೆ ನಡೆವ ಈ ಪ್ರಸಂಗಗಳು ಚಿತ್ರಪ್ರೇಮಿಗಳಿಗೆ ಹಾಗಿರಲಿ; ಹೆಚ್ಚಿನ ಸಂದರ್ಭದಲ್ಲಿ ಚಿತ್ರರಂಗದ ಮಂದಿಗೂ ಗೊತ್ತಿರುವುದಿಲ್ಲ. `ಶುಭಮಂಗಳ’ ಚಿತ್ರದ `ಹೂವೊಂದು ಬಳಿ ಬಂದು ತಾಕಿತು ನನ್ನೆದೆಯಾ’, `ನಾಗರಹಾವು’ ಚಿತ್ರದ `ಕರ್ಪೂರದಾ ಗೊಂಬೆ ನಾನು’ `ಗೆಜ್ಜೆಪೂಜೆ’ಯ `ಗಗನವು ಎಲ್ಲೋ…’ ಗೀತೆಗಳೆಲ್ಲ ಹಾಗೇ ಸುಮ್ಮನೆ ಸೇರಿಸಿದಂಥವು. ಈಗ, ಮೇಲೆ ವಿವರಿಸಿದ ಹಾಡುಗಳಿಲ್ಲದ ಆ ಚಿತ್ರಗಳನ್ನು ಕಲ್ಪಿಸಿಕೊಳ್ಳುವುದಕ್ಕೂ ಕಷ್ಟವಾಗುತ್ತದೆ. ಈ ಮಾತು ಹೇಳುವಾಗಲೇ ನೆನಪಿಗೆ ಬಂದದ್ದು- `ಹೂವೂ ಚೆಲುವೆಲ್ಲಾ ನಂದೆಂದಿತು…’ ಗೀತೆ.
ಈ ಹಾಡು ಸೃಷ್ಟಿಯಾದ ಸಂದರ್ಭ ಕೇಳಿದರೆ- ಬೆರಗು, ಸಂತೋಷ, ಆಶ್ಚರ್ಯ, ನಗು ಎಲ್ಲವೂ ಒಟ್ಟೊಟ್ಟಿಗೇ ಆಗುತ್ತದೆ.
ಅದು ೧೯೬೮ರ ಮಾತು. ಮದ್ರಾಸಿನ ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‌ಪ್ರೈಸಸ್ ಅವರಿಗಾಗಿ `ಹಣ್ಣೆಲೆ ಚಿಗುರಿದಾಗ’ ಚಿತ್ರ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಎಂ.ಆರ್. ವಿಠಲ್ ನಿರ್ದೇಶನದ ಹೊಣೆ ಹೊತ್ತಿದ್ದರು. ತಮ್ಮ ಪ್ರತಿಯೊಂದು ಚಿತ್ರದಲ್ಲೂ ಏನಾದರೂ ವಿಶೇಷ, ಹೊಸತನ ಇರಬೇಕೆಂದು ಬಯಸುತ್ತಿದ್ದ ವಿಠಲ್, ಈ ಸಿನಿಮಾಕ್ಕಾಗಿ ಪಂಡಿತ್ ಬಾಲಮುರುಳಿಕೃಷ್ಣ ಅವರಿಂದ ಒಂದು ಹಾಡು ಹೇಳಿಸುವ; ಅದನ್ನೇ ಸಿನಿಮಾದ ಹೈಲೈಟ್ ಆಗಿ ಚಿತ್ರಿಸುವ ಹೆಬ್ಬಯಕೆ ಹೊಂದಿದ್ದರು. ವಿಠಲ್ ಅವರೊಂದಿಗೆ `ಜಿಗ್ರಿ ದೋಸ್’ ಎಂಬಂತಿದ್ದ ಬಾಲಮುರುಳಿಕೃಷ್ಣ ಕೂಡ ಸಂತೋಷದಿಂದ ಹಾಡಲು ಒಪ್ಪಿಕೊಂಡರು. ನಂತರ `ಹಾಲಲಿ ಮಿಂದವಳೆ’ ಎಂದು ಆರಂಭವಾಗುವ ಹಾಡು ಬರೆಸಿದ್ದಾಯಿತು. ಅದನ್ನು ಬಾಲಮುರುಳಿಕೃಷ್ಣ ಅವರು ಮಧುರವಾಗಿ ಹಾಡಿದ್ದೂ ಆಯಿತು. ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದ ಅರುಣ್‌ಕುಮಾರ್ (ಮುಂದೆ ಇವರು ಗುರುರಾಜುಲು ನಾಯ್ಡು ಎಂಬ ಹೆಸರಿನಿಂದ ಹರಿಕತೆ ಕ್ಷೇತ್ರದಲ್ಲಿ ಪ್ರಸಿದ್ಧರಾದರು) ನೃತ್ಯಗಾರ್ತಿಯ ಜತೆಯಲ್ಲಿ ಹೇಳುವ ಹಾಡು ಇದಾಗಿತ್ತು.
ಸರಿ. ಈ ಹಾಡಿಗೆ ನೃತ್ಯಗಾರ್ತಿ ಬೇಕಲ್ಲ? ಮುದ್ದುಮುದ್ದಾದ ಹುಡುಗಿಯೊಬ್ಬಳನ್ನು ಹುಡುಕಲು ಮದ್ರಾಸ್‌ನ (ಆಗೆಲ್ಲ ಕನ್ನಡ ಚಿತ್ರಗಳ ಶೂಟಿಂಗ್ ಹೆಚ್ಚಾಗಿ ನಡೆಯುತ್ತಿದ್ದುದು ಮದ್ರಾಸ್‌ನಲ್ಲೇ.) ಮಲ್ಲಾಪುರದಲ್ಲಿದ್ದ ಮೊದಲಿಯಾರ್ ನೃತ್ಯಶಾಲೆಗೆ ಸಹಾಯಕ ನಿರ್ದೇಶಕರನ್ನು ಕಳುಹಿಸಿಕೊಡಲಾಯಿತು. ಅಲ್ಲಿ ಚೆಲುವಾದ ಹುಡುಗಿಯೊಬ್ಬಳನ್ನು ಕಂಡ ಸಹಾಯಕ ನಿರ್ದೇಶಕರು, ಅವಸರದಲ್ಲಿಯೇ ಆಕೆಗೆ ವಿಷಯ ತಿಳಿಸಿ, ಶೂಟಿಂಗ್ ದಿನವನ್ನೂ ತಿಳಿಸಿದರು. ನಮ್ಮ ಚಿತ್ರದಲ್ಲಿ ನಟಿಸಲು ಒಪ್ಪಿಗೆ ತಾನೆ ಎಂದೂ ಕೇಳಿದರು.
ಸಿನಿಮಾದಲ್ಲಿ ನಟಿಸಲು ಅಯಾಚಿತವಾಗಿ ಅವಕಾಶ ಬಂದರೆ ಯಾರಾದ್ರೂ ಬಿಡುತ್ತಾರಾ? ಆ ಹುಡುಗಿ ಕೂಡ ಎರಡನೇ ಮಾತಿಲ್ಲದೆ ‘ಯೆಸ್’ ಅಂದೇಬಿಟ್ಟಳು. ಈ ಸಹಾಯಕ ನಿರ್ದೇಶಕರು ಆಕೆಯ ಎರಡು ಭಾವಚಿತ್ರಗಳನ್ನು ತಂದು ನಿರ್ದೇಶಕ ವಿಠಲ್ ಅವರಿಗೆ ತೋರಿಸಿದರು. ಹುಡುಗಿ-ಎರಡೆರಡು ಸಲ ಕೈತೊಳೆದು ಮುಟ್ಟಬೇಕು- ಹಾಗಿದ್ದಳು. ಈ ಹಾಡಿಗೆ ಆಕೆ ಹೇಳಿ ಮಾಡಿಸಿದಂತಿದ್ದಾಳೆ ಎಂದುಕೊಂಡ ವಿಠಲ್- ಈ ಹಾಡಿನ ಚಿತ್ರೀಕರಣಕ್ಕೆ ದಿನಾಂಕ ಗೊತ್ತು ಮಾಡಿದರು.
ಕಡೆಗೂ ಆ ದಿನ ಬಂತು. ಆ ಸುಂದರಿಯನ್ನು ಮದ್ರಾಸಿನಿಂದ, ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ಕರೆತಂದದ್ದಾಯಿತು. ಮೇಕಪ್ ಮಾಡಿ ಕ್ಯಾಮರಾ ಮುಂದೆ ನಿಲ್ಲಿಸಿದ ನಂತರ ಯಾರಿಗೂ ನಂಬುವುದಕ್ಕೇ ಸಾಧ್ಯವಿಲ್ಲ ಎಂಬಂಥ ಸಂಗತಿಯೊಂದು ಗೊತ್ತಾಯಿತು; ಏನೆಂದರೆ, ಆ ಹುಡುಗಿಗೆ ನೃತ್ಯದ ಮಾತು ಹಾಗಿರಲಿ, ಒಂದೆರಡು ಸ್ಟೆಪ್ಸ್ ಹಾಕುವುದಕ್ಕೂ ಬರುತ್ತಿರಲಿಲ್ಲ! ಹಿನ್ನೆಲೆ ಹಾಡಿಗೆ ತುಟಿ ಅಲುಗಿಸುವುದೂ ಗೊತ್ತಿರಲಿಲ್ಲ! ಆಕೆ ಆಗಷ್ಟೇ ಸಂಗೀತ-ನೃತ್ಯದ ತರಗತಿಗೆ ಸೇರಿಕೊಂಡಿದ್ದವಳು. ಸಿನಿಮಾದಲ್ಲಿ ನಟಿಸಲು ಛಾನ್ಸ್ ಸಿಕ್ಕಿತಲ್ಲ? ಆ ಕಾರಣಕ್ಕೆ ತಕ್ಷಣವೇ ಒಪ್ಪಿಬಿಟ್ಟಿದ್ದಳು. ಆಕೆಯ ರೂಪಿಗೇ ಮಾರುಹೋಗಿದ್ದ ಸಹಾಯಕ ನಿರ್ದೇಶಕ, ಇಡೀ ಚಿತ್ರತಂಡವನ್ನೇ ಇಕ್ಕಟ್ಟಿನಲ್ಲಿ ಸಿಕ್ಕಿಸಿದ್ದ.
ವಿಷಯ ತಿಳಿದಾಗ ನೃತ್ಯ ನಿರ್ದೇಶಕ ಉಡುಪಿ ಜಯರಾಂ, ಮುಂದೇನು ಮಾಡಬೇಕೋ ಗೊತ್ತಾಗದೆ ತಲೆಮೇಲೆ ಕೈಹೊತ್ತು ಕೂತರು. ಆಗ ನಿರ್ದೇಶಕ ವಿಠಲ್ ಧೈರ್ಯಗುಂದದೆ, ಛಾಯಾಗ್ರಾಹಕ ಶ್ರೀಕಾಂತ್ ಜತೆ ಚರ್ಚೆಸಿ, ಆ ಹುಡುಗಿಗೆ ನೃತ್ಯದ ವಿವಿಧ ಭಂಗಿಗಳಲ್ಲಿ ನಿಲ್ಲುವಂತೆ ಸೂಚಿಸಿದರು. ಅದನ್ನೇ ಕ್ಲೋಸಪ್ ಹಾಗೂ ಲಾಂಗ್‌ಶಾಟ್‌ನಲ್ಲಿ- ಮುಖ್ಯ ಪಾತ್ರಧಾರಿ ಅರುಣ್‌ಕುಮಾರ್ ಹಾಡು ಹೇಳಿದಂತೆ, ಅದಕ್ಕೆ ಈಕೆ ನೃತ್ಯ ಮಾಡಿದಂತೆ ಚಿತ್ರಿಸಿಕೊಂಡಿದ್ದಾಯಿತು.
ಈ ದೃಶ್ಯದ ಚಿತ್ರೀಕರಣಕ್ಕೆ ನಾಲ್ಕು ಸಾವಿರ ಅಡಿಗಳಷ್ಟು ರೀಲ್ ಖರ್ಚಾಗಿತ್ತು. ಈ ವೇಳೆಗೆ ಚಿತ್ರಕ್ಕೆ ನಿಗದಿಪಡಿಸಿದ್ದ ಬಜೆಟ್‌ನ ದುಡ್ಡು ಮುಗಿಯುತ್ತಾ ಬಂದಿತ್ತು. ಆದರೆ ಮಹತ್ವದ್ದು ಎನಿಸಿದ ಇನ್ನೊಂದು ಹಾಡಿನ ಚಿತ್ರೀಕರಣವೇ ಆಗಿರಲಿಲ್ಲ. ಹಾಡನ್ನೂ ಬರೆದಿರಲಿಲ್ಲ. ಆ ಸನ್ನಿವೇಶ ಹೀಗೆ: ನಾಯಕಿಯನ್ನು ಹುಡುಗನೊಬ್ಬ ಬಂದು ನೋಡಿ, ಮದುವೆಯಾಗಲು ಒಪ್ಪಿಕೊಂಡು ಹೋಗುತ್ತಾನೆ. ಈ ಖುಷಿಗೆ ನಾಯಕಿಯ ಮನಸ್ಸು ನವಿಲಾಗುತ್ತದೆ. ಆಕೆ ಸಂತೋಷದಿಂದ ಕುಣಿದಾಡುತ್ತಾ ಹಾಡುತ್ತಾಳೆ. ಅವಳ ಸಂಭ್ರಮಕ್ಕೆ ಅವಳ ಅಣ್ಣನೂ ಜತೆಯಾಗಿ ಸಾಥ್ ಕೊಡುತ್ತಾನೆ.. ಈ ಹಾಡಿನ ಚಿತ್ರೀಕರಣ ನಡೆಸಲು ಬಜೆಟ್‌ನ ಕೊರತೆಯಿದೆಯಲ್ಲ? ‘ಈಗ ಏನಪ್ಪಾ ಮಾಡಲಿ? ಈ ಹಾಡಿಗೆ ಎಲ್ಲಿಂದಪ್ಪಾ ಶ್ರೀಮಂತಿಕೆ ತರಲಿ?’ ಎನ್ನುತ್ತಾ ವಿಠಲ್, ಗೀತರಚನೆಕಾರ ಆರ್.ಎನ್. ಜಯಗೋಪಾಲ್ ಅವರ ಮುಖ ನೋಡಿದರು.
ಆಗ ಆರ್.ಎನ್.ಜೆ. ನಸುನಕ್ಕು ತಮ್ಮಲ್ಲಿದ್ದ ಪೆನ್ ತೋರಿಸುತ್ತಾ ‘ಇದರಿಂದಲೇ ಆ ಹಾಡಿಗೊಂದು ವೈಭವ ತರೋಣ ಸಾರ್’ ಎಂದರಂತೆ. ನಂತರ- ಮದುವೆಯಾಗಲು ಹುಡುಗ ಒಪ್ಪಿಕೊಂಡನೆಂದು ತಿಳಿದ ಮೇಲೆ ಹುಡುಗಿಯರು ತಮ್ಮನ್ನು ತಾವು ಹೇಗೆಲ್ಲ ಹೊಗಳಿಕೊಳ್ಳಬಹುದು; ಎಲ್ಲರಿಗಿಂತ ನಾನು ಚೆನ್ನಾಗಿದ್ದೇನೆ ಎಂದು ಹೇಗೆಲ್ಲ ಕೊಚ್ಚಿಕೊಳ್ಳಬಹುದು ಎಂಬುದನ್ನು ಕಲ್ಪಿಸಿಕೊಂಡು `ಹೂವೂ ಚೆಲುವೆಲ್ಲಾ ನಂದೆಂದಿತು’ ಹಾಡು ಬರೆದೇಬಿಟ್ಟರು. ಈ ಹಾಡಿಗೆ ಸಂಗೀತ ನಿರ್ದೇಶಕ ಎಂ. ರಂಗರಾವ್ ತಮ್ಮ ಫೇವರಿಟ್ `ಭೀಮ್‌ಪಲಾಸ್’ ರಾಗದ ಸ್ವರಪ್ರಸ್ತಾರ ಕೊಟ್ಟರು. ಹಾಗೆ ಸಿದ್ಧವಾದ ಹಾಡನ್ನು ಗಾಯಕಿ ಪಿ. ಸುಶೀಲ ಅವರು, ಕಥಾನಾಯಕಿಯೇ ನಾಚುವಂತೆ ಮಧುರ ಮಧುರ ಮಧುರವಾಗಿ ಹಾಡಿಬಿಟ್ಟರು.
ಸ್ವಾರಸ್ಯವೆಂದರೆ, ತೆರೆಯ ಮೆಲೆ ಈ ಹಾಡನ್ನು ಅಷ್ಟೇನೂ ಶ್ರೀಮಂತವಾಗಿ ಚಿತ್ರೀಕರಿಸಿಲ್ಲ. ಆದರೆ, ಹಾಡು, ಇಂಪಿಂಪು ಅನ್ನುವಂಥ ಟ್ಯೂನ್, ಹಿನ್ನೆಲೆ ವಾದ್ಯಗಳ ಹಿತಮಿತ ಬಳಕೆ ಇಡೀ ಹಾಡಿಗೆ ಒಂದು ಸುವರ್ಣ ಚೌಕಟ್ಟು ಹಾಕಿಬಿಟ್ಟಿತು. ಇಡೀ ಚಿತ್ರದಲ್ಲಿ ಜನಪ್ರಿಯವಾಗಿದ್ದು ಈ ಗೀತೆಯೇ.
ಮುಂದಿನ ಸ್ವಾರಸ್ಯ ಕೇಳಿ: ಅದೇ ವರ್ಷ ಆರ್.ಎನ್. ಜಯಗೋಪಾಲ್ ಅವರ ಮದುವೆಯಾಯಿತು. ರಿಸೆಪ್ಷನ್‌ಗೆ ಬಂದ ಗಾಯಕಿ ಪಿ. ಸುಶೀಲ, ಆರ್.ಎನ್.ಜೆ.ಯವರ ಪತ್ನಿಯ ಆ ಕ್ಷಣದ ಸಂಭ್ರಮ ಹೆಚ್ಚಿಸಲೆಂಬಂತೆ-`ಹೂವೂ ಚೆಲುವೆಲ್ಲಾ ನಂದೆಂದಿತು’ ಗೀತೆಯನ್ನೇ ಅಲ್ಲಿಯೂ ಹಾಡಿ ಆ ಕ್ಷಣದ ಸಂಭ್ರಮವನ್ನು ಹೆಚ್ಚಿಸಿದರಂತೆ!
ಈಗ `ಹೂವಿನಂಥ’ ಈ ಹಾಡೇ ಇಲ್ಲದ `ಹಣ್ಣೆಲೆ ಚಿಗುರಿದಾಗ’ ಚಿತ್ರವನ್ನು ಕಲ್ಪಿಸಿಕೊಳ್ಳಿ ನೋಡೋಣ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: