ಆಟೊಗ್ರಾಫ್ ಪ್ಲೀಸ್…

೭೦ ರಿಂದ ೯೦ರ ದಶಕದ ದಿನಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಆಗೆಲ್ಲ ಮಾರ್ಚ್ ತಿಂಗಳು ಬಂತು ಅಂದರೆ, ವಿದ್ಯಾರ್ಥಿ- ಶಿಕ್ಷಕರ ಬಳಗಕ್ಕೆ ಏನೋ ಧಾವಂತ, ಸಂಕಟ. ಅದರಲ್ಲೂ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಡಿಗ್ರಿ ಕಡೆಯ ವರ್ಷದಲ್ಲಿ ಇದ್ದವರಿಗೆ ಅದು ವಿದಾಯದ ಸಂದರ್ಭವಾಗಿರುತ್ತಿತ್ತು. ಇಷ್ಟು ದಿನ ಜತೆಗಿದ್ದವರನ್ನು ಬಿಟ್ಟು ಹೋಗಬೇಕಲ್ಲ ಎಂಬ ನೋವು ಅವರನ್ನು ಕಂಗಾಲು ಮಾಡುತ್ತಿತ್ತು. ಭಾವುಕ ಮನಸ್ಥಿತಿಯ ಹುಡುಗ-ಹುಡುಗಿಯರಂತೂ ಕೊನೆಯ ದಿನ ಗೊಳೋ ಎಂದು ಅಳುತ್ತಾ ನಿಂತುಬಿಡುತ್ತಿದ್ದರು. ಇಂಥ ಸಂದರ್ಭದಲ್ಲಿಯೇ ಗೆಳೆತನದ ಸವಿನೆನಪನ್ನು ಜತೆಗೇ ಉಳಿಸಿಕೊಳ್ಳಲು ‘ಆಟೊಗ್ರಾಫ್ ಪ್ಲೀಸ್’ ಎಂಬ ಕೋರಸ್ದನಿ ಎಲ್ಲ ಶಾಲೆ-ಕಾಲೇಜುಗಳ ಅಂಗಳದಲ್ಲಿ ಕೇಳಿಬರುತ್ತಲೇ ಇತ್ತು.
ಆ ದಿನಗಳಲ್ಲಿ ‘ಆಟೊಗ್ರಾಫ್’ ಹಾಕಿಸಬೇಕು ಎಂಬುದು ಒಂದು ಜ್ವರದಂತೆ, ಒಂದು ಪ್ರೇಮದಂತೆ, ಒಂದು ಹವ್ಯಾಸದಂತೆ, ಫ್ಯಾಷನ್ನಂತೆ, ದೊಡ್ಡಸ್ತಿಕೆಯಂತೆ, ಹೆಮ್ಮೆಯಂತೆ, ಸಂತೋಷದಂತೆ ಮತ್ತು ಕರ್ತವ್ಯದಂತೆ ಕಾಣುತ್ತಿತ್ತು. ‘ಆಟೊಗ್ರಾಫ್’ ಹಾಕಿಸುವ ಕೆಲಸವನ್ನೂ, ಅಂಗೈಯಗಲದ ಹಾಳೆಯಲ್ಲಿ ತುಂಬಿಕೊಳ್ಳುತ್ತಿದ್ದ ಅಕ್ಷರಗಳ ರಂಗವಲ್ಲಿಯನ್ನೂ; ಅವುಗಳ ತರಹೇವಾರಿ ವೆರೈಟಿಯನ್ನು ಈಗ ನೆನಪು ಮಾಡಿಕೊಂಡರೆ ಒಮ್ಮೊಮ್ಮೆ ನಗು ಬರುತ್ತದೆ. ಮುಜುಗರವಾಗುತ್ತದೆ. ಸಂಕೋಚ ಕೈ ಹಿಡಿಯುತ್ತದೆ. ನಾಚಿಕೆ ಜತೆಯಾಗುತ್ತದೆ. ಇವತ್ತಿಗೆ ಮುಖವೇ ನೆನಪಿರದ ಗೆಳತಿಯ ಆಟೊಗ್ರಾಫ್ನ ಸಾಲು ಬೆಚ್ಚಿ ಬೀಳುವಂತೆ ಮಾಡುತ್ತದೆ. ಆ ದಿನಗಳಲ್ಲಿ ಆಟೊಗ್ರಾಫ್ನಿಂದ ಆದ ಒಂದೆರಡು ಅನಾಹುತಗಳನ್ನು ನೆನಪು ಮಾಡಿಕೊಂಡರೆ ಅಸಹ್ಯವಾಗುತ್ತದೆ. ಸಂಕಟವಾಗುತ್ತದೆ. ಸಿಟ್ಟೂ ಬರುತ್ತದೆ. ಹಾಗೆಯೇ, ಕೆಲವೊಂದನ್ನು ಓದಿದಾಗ, ಛೆ- ಇದು ಎಷ್ಟೊಂದು ಬಾಲಿಶ ಬರಹವಲ್ಲವೇ ಎಂದೂ ಅನಿಸಿಬಿಡುತ್ತದೆ.
***
ನಿಜ ಹೇಳಬೇಕೆಂದರೆ- ೭೦ ಹಾಗೂ ೮೦ರ ದಶಕದಲ್ಲಿ ವಿದ್ಯಾರ್ಥಿಗಳಾಗಿದ್ದವರಿಗೆ ಆಟೊಗ್ರಾಫ್ ಪುಸ್ತಕ ಖರೀದಿಸುವುದೇ ಕಷ್ಟದ ಕೆಲಸವಾಗಿತ್ತು. ಏಕೆಂದರೆ, ಆಗ ಮನೆಮನೆಯ ಅಪ್ಪಂದಿರು ಮಕ್ಕಳಿಗೆ ಪಾಕೆಟ್ ಮನಿ ಕೊಡುತ್ತಿರಲಿಲ್ಲ. ಪಾಕೆಟ್ ಮನಿಯ ಮಾತಿರಲಿ, ಕೆಲವರ ಶರ್ಟುಗಳಿಗೆ ಪಾಕೇಟುಗಳೇ ಇರುತ್ತಿರಲಿಲ್ಲ! ಹಾಗಿದ್ದರೂ ಆಟೊಗ್ರಾಫ್ ಪುಸ್ತಕ ತಗೋಬೇಕು ಅನ್ನಿಸಿದರೆ ಅಪ್ಪ-ಅಮ್ಮನ ಹಿಂದೆ ಹಿಂದೆಯೇ ಸುತ್ತಾಡಬೇಕಿತ್ತು. ಹಟ ಹಿಡಿಯಬೇಕಿತ್ತು. ಆಗಲೂ ಕೆಲಸ ಆಗದಿದ್ದರೆ- ನಂಗೆ ಅದು ಬೇಕೇ ಬೇಕು ಎಂದು ಗೋಗರೆಯುತ್ತಾ ಕಣ್ಣೀರು ಹಾಕಬೇಕಿತ್ತು.
ಆಟೊಗ್ರಾಫ್ ಪುಸ್ತಕಗಳಲ್ಲೂ ವೆರೈಟಿಗಳಿದ್ದವು. ಹೆಚ್ಚಿನವಕ್ಕೆ ಚರ್ಮದ ಹೊದಿಕೆ ಇರುತ್ತಿತ್ತು. ಬೆಳಗಿನ ಪುಟಗಳು ಕೆಂಪು, ನೀಲಿ, ಹಸಿರು, ಬಿಳಿಯ ಬಣ್ಣದಿಂದ ಕೂಡಿರುತ್ತಿದ್ದವು. ಜಾಸ್ತಿ ದುಡ್ಡು ನೀಡಿದರೆ ಹತ್ತು ಮಂದಿ ‘ವಾಹ್ ವಾಹ್’ ಎಂದು ಉದ್ಗರಿಸುವಂತೆ ಮಾಡುವ ಒಳಪುಟಗಳ ಕೊನೆಯಲ್ಲಿ ಹೂವಿನ ಚಿತ್ರವಿರುವ; ಮಿಕ್ಕಿ ಮೌಸ್ನ ಸ್ಟಿಕ್ಕರ್ ಇರುವ ಆಟೊಗ್ರಾಫ್ ಪುಸ್ತಕ ಸಿಗುತ್ತಿತ್ತು. ಆ ಪುಸ್ತಕದ ಮೊದಲ ಹಾಳೆಯಲ್ಲಿ ಹೆಸರು, ವಿಳಾಸ ಬರೆದು, ನಂತರ- ‘ವಿದಾಯದ ಈ ಸಂದರ್ಭದಲ್ಲಿ ನಿಮ್ಮ ನೆನಪಿರಲಿ; ಒಂದು ಸಂದೇಶವಿರಲಿ, ವಿಳಾಸವೂ ಜತೆಗಿರಲಿ’ ಎಂದು ಬರೆದು ಗೆಳೆಯ, ಗೆಳತಿಯರಿಗೆ; ಅಧ್ಯಾಪಕರಿಗೆ ಕೊಟ್ಟರೆ-
ವಾಹ್, ಆಗ ಆಟೊಗ್ರಾಫ್ ಪುಸ್ತಕದಲ್ಲಿ ಅರಳಿಕೊಳ್ಳುತ್ತಿದ್ದ ಅಕ್ಷರದ ಸುಗಂಧವಿತ್ತಲ್ಲ; ಅದು ವರ್ಣನೆಗೆ ನಿಲುಕದ್ದು. ಹುಡುಗಿಯರು, ಗೆಳತಿಯರಿಗೇ ಬರೆಯಬೇಕಾದ ಸಂದರ್ಭದಲ್ಲಿ – ‘ಮಲ್ಲಿಗೆ ಕಾಲದಲ್ಲಿ ಮದುವೆಯಾಗಿ, ಸಂಪಿಗೆ ಕಾಲದಲ್ಲಿ ಸಂಸಾರ ಹೂಡಿ, ಕನಕಾಂಬರದಂಥ ಕಂದನನ್ನು ಪಡೆದು, ಸುಖವಾಗಿ ಬಾಳು’ ಎಂದು ಮುಗಿಸುತ್ತಿದ್ದರು. ಹಾಗೆಯೇ ಹುಡುಗರು- ‘ಮರೆಯದಿರು ಮಿತ್ರ, ಬರೆಯುತಿರು ಪತ್ರ, ಮರೆಯದೇ ಕಳುಹಿಸು ನಿನ್ನ, ಮದುವೆಯ ಪತ್ರ’ ಎಂದು ಬರೆದು ಸಹಿ ಜಡಿಯುತ್ತಿದ್ದರು. ಇನ್ನು ಹುಡುಗ-ಹುಡುಗಿ ಇಬ್ಬರೂ ಪರಸ್ಪರರಿಗೆ ಬರೆಯಬೇಕಾಗಿ ಬಂದಾಗ ‘ಸ್ನೇಹ ಆಕಸ್ಮಿಕ, ಅಗಲಿಕೆ ಅನಿವಾರ್ಯ, ನೆನಪೊಂದೇ ಶಾಶ್ವತ’ ಎಂದು ಬರೆದು ವೇದಾಂತದ ಫೋಸ್ ಕೊಡುತ್ತಿದ್ದರು. ಕೆಲವರಂತೂ ಕಾಲಾತೀತರಂತೆ- ‘ಬಳ್ಳಿಯ ಹೂವು ಬಾಡಿದರೂ, ಬಾವಿಯ ನೀರು ಬತ್ತಿದರೂ, ನೀನು ನನ್ನನ್ನು ಮರೆತರೂ ನಾನು ನಿನ್ನನ್ನು ಮರೆಯಲಾರೆ’ ಎಂದು ಬರೆದು ಬಿಡುತ್ತಿದ್ದರು. ತಮಾಷೆಯೆಂದರೆ, ಹೀಗೆ ಗೆಳೆಯ- ಗೆಳತಿಯರ ತಳಮಳಕ್ಕೆ, ನಿಟ್ಟುಸಿರಿಗೆ, ಗೆಳೆತನದ ಸವಿಗೆ, ಬುದ್ಧಿವಂತಿಕೆಯ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಿದ್ದ ಆಟೊಗ್ರಾಫ್ ಪುಸ್ತಕ, ನಂತರದ ಕೆಲವೇ ದಿನಗಳಲ್ಲಿ ಹಳೆಯ ಪುಸ್ತಕಗಳ ಜತೆ ಕಸದ ಮೂಲೆ ಸೇರುತ್ತಿತ್ತು. (ಆದರೆ, ಕೆಲವರು ಆಟೊಗ್ರಾಫ್ ಪುಸ್ತಕಗಳನ್ನು ಒಂದು ಆಸ್ತಿಯಂತೆ ಕಾಪಾಡಿಕೊಳ್ಳುತ್ತಿದ್ದರು.)
ಒಂದು ಸಣ್ಣ ಹೆದರಿಕೆ, ಹಿಂಜರಿಕೆಯೊಂದಿಗೇ ಆಟೊಗ್ರಾಫ್ ಪುಸ್ತಕವನ್ನು ಅಧ್ಯಾಪಕರ ಮುಂದಿಟ್ಟರೆ ಅಲ್ಲಿ ಕೂಡ ಒಂದು ಹೊಸ ಭಾವಲೋಕ ತೆರೆದುಕೊಳ್ಳುತ್ತಿತ್ತು. ಗಣಿತ, ವಿಜ್ಞಾನ ಹಾಗೂ ಸಮಾಜ ಶಾಸ್ತ್ರ ಬೋಧಿಸುತ್ತಿದ್ದ ಅಧ್ಯಾಪಕರುಗಳಲ್ಲಿ ಹೆಚ್ಚಿನವರು – “ಂಟಟ ಣhe besಣ, geಣ suಛಿಛಿess iಟಿ ಥಿouಡಿ ಟiಜಿe’ ಎಂದು ಬರೆದು ಸುಮ್ಮನಾಗುತ್ತಿದ್ದರು. (ಒಂದು ವೈಯಕ್ತಿಕ ಪ್ರಸಂಗವನ್ನೇ ಹೇಳುವುದಾದರೆ ನಮಗೆ ಸೈನ್ಸ್ ಹೇಳಿಕೊಡುತ್ತಿದ್ದ ಮೇಸ್ಟ್ರು, ೯ನೇ ತರಗತಿಯಲ್ಲಿ ಆಟೊಗ್ರಾಫ್ ಕೇಳಿದಾಗ ಇ=mಛಿ೨ ಎಂದು ಹೈಡ್ರೋಜನ್ ಬಾಂಬ್ನ ಸೂತ್ರ ಬರೆದು ಸಹಿ ಮಾಡಿಬಿಟ್ಟಿದ್ದರು! ಅವರೇನಾದರೂ ಆಟೊಗ್ರಾಫ್ನ ಹಾಳೆಯ ಮೇಲ್ಭಾಗದಲ್ಲಿ ಆeಚಿಡಿ Sಚಿಟಿಣhosh ಎಂದೋ ಆeಚಿಡಿ ಗಿiಜಥಿಚಿ ಎಂದೋ ಬರೆದುಬಿಟ್ಟಿದ್ದರೆ, ಆ ವಿದ್ಯಾರ್ಥಿ/ವಿದ್ಯಾರ್ಥಿನಿಗೆ ಕೋಡು ಮೂಡಿದಂತಾಗುತ್ತಿತ್ತು. ಕನ್ನಡ-ಇಂಗ್ಲಿಷ್ ಪಾಠ ಹೇಳುತ್ತಿದ್ದ ಅಧ್ಯಾಪಕರುಗಳು ಮಾತ್ರ ಕಾವ್ಯಾತ್ಮಕ ಶೈಲಿಯ, ಪಸಂದ್ ಎನ್ನುವಂಥ ಸಂದೇಶಗಳನ್ನು ಬರೆಯುತ್ತಿದ್ದರು. ಕೆಲವರಂತೂ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಸಂದೇಶ ಬರೆದು- ‘ಶುಭವಾಗಲಿ’ ಎಂದು ಹಾರೈಸುತ್ತಿದ್ದರು.
ಆಟೊಗ್ರಾಫ್ ಎಂದರೆ ಈಗಲೂ ಮೇಲಿಂದ ಮೇಲೆ ನೆನಪಾಗುವುದು ಗೆಳೆಯ-ಗೆಳತಿಯರ ಅಕ್ಷರ ವಿಹಾರದ ಪ್ರಸಂಗಗಳೇ. ಕೆಲವರಂತೂ ‘ನೀ ನಡೆವ ಹಾದಿಯಲ್ಲಿ/ನಗೆಹೂವು ಬಾಡದಿರಲಿ/ ಈ ಬಾಳ ಬುತ್ತಿಯಲಿ/ಸಿಹಿ ಪಾಲು ನಿನಗಿರಲಿ, ಕಹಿ ಎಲ್ಲ ನನಗಿರಲಿ’ ಎಂಬ ಸಿನಿಮಾದ ಹಾಡನ್ನೇ ಬರೆದು ಬಿಡುತ್ತಿದ್ದರು. ಮತ್ತೆ ಕೆಲವರು ‘ಸರ್ವಜ್ಞನ ವಚನ’ಕ್ಕೆ ಶರಣಾಗುತ್ತಿದ್ದರು. ಕೆಲವರು ಮನೆಯಲ್ಲಿ ಅಣ್ಣನೋ, ಅಕ್ಕನೋ ಮೊದಲೇ ಬರೆಸಿಕೊಂಡ ಆಟೊಗ್ರಾಫ್ ಪುಸ್ತಕವಿದ್ದರೆ ಅದರಿಂದ ಚೆನ್ನಾಗಿರುವುದನ್ನು ಕದ್ದು, ಗೆಳೆಯನ ಆಟೊಗ್ರಾಫ್ ಪುಸ್ತಕದಲ್ಲಿ ಬರೆದು ಸ್ಕೋಪ್ ತೆಗೆದುಕೊಳ್ಳುತ್ತಿದ್ದರು. ಇನ್ನು ಕೆಲವರು ಆಟೊಗ್ರಾಫ್ನಲ್ಲಿ ಕೂಡ ‘ಶ್ರೀ ಗಣೇಶಾಯ ನಮಃ; ಶ್ರೀ ರಾಘವೇಂದ್ರಾಯ ನಮಃ’ ಎಂದು ಬರೆದೇ ಮುಂದುವರಿಸುತ್ತಿದ್ದರು. ಮತ್ತೆ ಕೆಲವರು, ಬರೆಯುವ ಮೊದಲು ಉಳಿದ ಎಲ್ಲವನ್ನೂ ಓದಿ- ‘ಛೆ, ನಾನು ಬರೀಬೇಕು ಅಂದುಕೊಂಡಿದ್ದುದನ್ನು ಬೇರೆ ಯಾರೋ ಬರೆದಿದ್ದಾರೆ’ ಎಂದು ಬೇಸರಿಸಿಕೊಂಡು ಸಹಿ ಮಾಡಿ ಸುಮ್ಮನಾಗುತ್ತಿದ್ದರು. ಮತ್ತೊಂದಷ್ಟು ಜನ- ನನಗೆ ಚೆನ್ನಾಗಿರೋ ಸಾಲು ಹೊಳೀತಾ ಇಲ್ಲ. ಹೊಳೆದ ತಕ್ಷಣ ಬರೆದುಕೊಡ್ತೀನಿ’ ಎಂದು ವಾರವಿಡೀ ಕೈಗೇ ಸಿಗದೆ ಆಟ ಆಡಿಸುತ್ತಿದ್ದರು!
ಸ್ವಾರಸ್ವವೆಂದರೆ, ಆಟೊಗ್ರಾಫ್ ಎಂಬುದು ಹುಡುಗ- ಹುಡುಗಿಯರ ಗೆಳೆತನಕ್ಕೆ, ಪಿಸುಮಾತಿಗೆ ಮತ್ತು ಕೆಲವೊಮ್ಮೆ ಪ್ರೇಮಕ್ಕೆ ವೇದಿಕೆಯೂ ಆಗುತ್ತಿತ್ತು. ಇಡೀ ವರ್ಷ ಒಂದೇ ಒಂದು ಮಾತೂ ಆಡಿರದಿದ್ದ ಹುಡುಗಿಯರು, ಆಟೊಗ್ರಾಫ್ನ ನೆಪದಲ್ಲಿ ಮಾತಾಡುತ್ತಿದ್ದರು. ಸ್ವಲ್ಪ ಫ್ರೆಂಡ್ಲಿ ಎಂಬಂತಿದ್ದ ಹುಡುಗಿಯರು ಥೇಟ್ ಹುಡುಗರ ಭಾಷೆಯಲ್ಲಿ- ‘ಭೂಮಿ ಅಳಿದರೂ, ಆಕಾಶ ಮುರಿದರೂ ನಮ್ಮಿಬ್ಬರ ಗೆಳೆತನ ಮುರಿಯಲಾರದು’ ಎಂದು ಬರೆದುಬಿಡುತ್ತಿದ್ದರು. ಹುಡುಗರನ್ನು ಕಿಚಾಯಿಸಬೇಕು ಅಂದುಕೊಂಡವರಂತೂ- ‘ಅಣ್ಣಾ, ನೀನು ನೂರು ಮಕ್ಕಳ ತಂದೆಯಾಗಿ ಸುಖವಾಗಿ ಬಾಳು’ ಎಂದು ಬರೆದು ಕಿಸಕ್ಕನೆ ನಗುತ್ತಿದ್ದರು’.
ಹಾಗೆಯೇ ಹುಡುಗಿಯರಿಂದ ಆಟೊಗ್ರಾಫ್ ಪುಸ್ತಕ ಪಡೆದ ಫಟಿಂಗರು ನಾಲ್ಕು ಸಾಲು ಏನೋ ಬರೆದು, ಕಡೆಯಲ್ಲಿ ತನ್ನ ಹೆಸರಿನೊಂದಿಗೆ ಒಂದು ಲವ್ ಸಿಂಬಲ್ ಕೂಡ ಹಾಕಿ ಬಿಡುತ್ತಿದ್ದರು. ಅದು ಹತ್ತಾರು ಅಪಾರ್ಥಗಳಿಗೆ ಕಾರಣವಾಗುತ್ತಿತ್ತು.
ಈಗ ಸುಮ್ಮನೇ ಯೋಚಿಸಿ ನೋಡಿ; ಒಬ್ಬ ಮನುಷ್ಯ ಬದುಕುವುದೇ ಅಮ್ಮಮ್ಮಾ ಅಂದರೆ ನೂರು ವರ್ಷ. ಹಾಗಿರುವಾಗ, ಆಕಾಶ ಮುರಿಯುವುದು; ಭೂಮಿ ಬಿರಿಯುವುದು, ಇವನು ನೂರು ಮಕ್ಕಳ ತಂದೆಯಾಗಿ ಸುಖವಾಗಿ(?) ಬಾಳುವುದು ಎಂದಾದರೂ ಸಾಧ್ಯವೇ? ಉಹುಂ, ಆಟೊಗ್ರಾಫ್ಗಳಲ್ಲಿ ಬರೆಯಲು ನಿಲ್ಲುತ್ತಿದ್ದರಲ್ಲ; ಆಗ ಯಾರೂ ಇಂಥ ತರ್ಕದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ!
ಆಟೊಗ್ರಾಫ್ ಹಾಕುವ ನೆಪದಲ್ಲಿ ಇನ್ನಿಲ್ಲದ ಇxiಣemeಟಿಣ ಗೆ, ಒಂದು ಬೆರಗಿಗೆ ಈಡಾದ ಹುಡುಗಿಯರ ಬಗ್ಗೆಯೂ ಹೇಳಬೇಕು. ಆಗ ತಾನೆ ಎಸ್ಸೆಸ್ಸೆಲ್ಸಿ ಮುಗಿಸಿರುತ್ತಿದ್ದ, ಪಿಯುಸಿ ದಾಟುತ್ತಿದ್ದ ಕೆಲವು ಹುಡುಗಿಯರು ಆಗಷ್ಟೇ ‘ದೊಡ್ಡವರಾಗಿರುತ್ತಿದ್ದರು’. ಅವರಿಗೆಲ್ಲ ಮನೆಯಲ್ಲಿ ‘ಹುಡುಗರೊಂದಿಗೆ ಮಾತಾಡುವಂತಿಲ್ಲ’ ಎಂಬ ಷರತ್ತು ವಿಧಿಸಲಾಗಿರುತ್ತಿತ್ತು. ಹೀಗಿದ್ದಾಗಲೇ ಅವಳ ಮುಂದೆ ರೋಮಿಯೋನ ಗೆಟಪ್ಪಿನಲ್ಲಿ ಹುಡುಗ ನಿಂತಿರುತ್ತಿದ್ದ. ಅವನ ಕಂಗಳಲ್ಲಿ ವಿನಂತಿಯಿರುತ್ತಿತ್ತು. ಕೆಲವರ ಕಂಗಳಲ್ಲಿ ಆಸೆ ತುಂಬಿರುತ್ತಿತ್ತು. ಅಂಥ ಸಂದರ್ಭದಲ್ಲಿ ಉಹುಂ ಎಂದರೆ ಅವನು ನೊಂದುಕೊಂಡಾನೆಂದು ಭಾವಿಸಿ ಯಾರಿಗೂ ಗೊತ್ತಾಗದಂತೆ ಆಟೊಗ್ರಾಫ್ ಪುಸ್ತಕ ಪಡೆದು, ಅದನ್ನು ಎದೆಯ ಮಿದುವಿನೊಳಗೆ ಅಡಗಿಸಿಟ್ಟು, ರಾತ್ರಿ ಮನೆಯಲ್ಲಿ ಎಲ್ಲರೂ ಮಲಗುವುದನ್ನೇ ಕಾಯುತ್ತಿದ್ದ ಹುಡುಗಿ ನಂತರ ಢವಗುಡುವ ಎದೆಯ ಮೇಲೆ ಎಡಗೈ ಇಟ್ಟುಕೊಂಡೇ ನಾಲ್ಕು ಸಾಲು ಬರೆಯುತ್ತಿದ್ದಳು. ಮರುದಿನ ನಾಚಿಕೊಳ್ಳುತ್ತಲೇ ಹುಡುಗನಿಗೆ ಅದನ್ನು ದಾಟಿಸಿಬಿಡುತ್ತಿದ್ದಳು. ಅದನ್ನು ಪಡೆದಾಕ್ಷಣ ಈ ಭೂಪನಿಗೆ ಎದೆಯೊಳಗೆ ಸಾವಿರ ದೀಪಗಳು ಒಮ್ಮೆಗೇ ಝಗ್ ಎಂದ ಅನುಭವ. ಆತ ಅಷ್ಟು ದೂರಕ್ಕೆ ಹೋಗಿ ಉದ್ವೇಗದಿಂದಲೇ ತೆರೆದು ನೋಡಿದರೆ- ‘ಪ್ರೀತಿಯ ಸಹೋದರ, ನಿನ್ನ ಸೋದರಿಯನ್ನು ಮರೆಯಬೇಡ’ ಎಂದು ಬರೆದಿರುವುದನ್ನು ಕಂಡು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದ!
ಹಾಗೆಯೇ ಒಂದು ವೇಳೆ, ಆ ಹುಡುಗಿಯೇನಾದರೂ- ನೀನು ನನ್ನ ಉಸಿರು..’ ಎಂಬರ್ಥದ ಸಾಲುಗಳನ್ನು ತಮಾಷೆಗೆಂದೇ ಬರೆದಿದ್ದರೂ ಅದನ್ನು ಹತ್ತು ಮಂದಿಗೆ ತೋರಿಸಿ ಖುಷಿ ಪಡುತ್ತಿದ್ದ! ಕೆಲವೊಂದು ಸಂಪ್ರದಾಯಸ್ತ/ಮಡಿವಂತ ಮನೆತನದ ಜನರಂತೂ ಹೀಗೊಂದು ಸಂದೇಶ ಬರೆದ ಕಾರಣಕ್ಕೇ – ‘ಹುಡುಗಿ ವಿಪರೀತ ಮುಂದುವರಿದಿದ್ದಾಳೆ ಎಂದು ಭಾವಿಸಿ ಮನೆಯಲ್ಲಿ ರಂಪರಾಮಾಯಣ ಮಾಡಿಬಿಡುತ್ತಿದ್ದರು. ಕೆಲವರಂತೂ ನೀನು ಓದಿ ಉದ್ಧಾರ ಆಗಿದ್ದು ಸಾಕು. ಸುಮ್ನೆ ಮನೇಲಿರು ಎಂದು ಗದರಿಸಿ ಸ್ಕೂಲು ಬಿಡಿಸುತ್ತಿದ್ದರು.
ಹೀಗೆ ಆಟೊಗ್ರಾಫ್ನ ಮಾಯಾಲೋಕವನ್ನೇ ನೆನಪು ಮಾಡಿಕೊಂಡಾಗಲೇ ನೆನಪಿಗೆ ಬರುವ ಇನ್ನಷ್ಟು ಸಾಲುಗಳು: (ಬಹುಶಃ ಇವನ್ನು ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಓದಿರುತ್ತಾರೆ ಅಥವಾ ಬರೆದಿರುತ್ತಾರೆ.) ಪರೀಕ್ಷೆ ಎಂಬ ಯುದ್ಧದಲ್ಲಿ/ಪೆನ್ನು ಎಂಬ ಖಡ್ಗ ಹಿಡಿದು/ಇಂಕು ಎಂಬ ರಕ್ತ ಚೆಲ್ಲಿ/ಜಯಶೀಲನಾಗಿ ಬಾ… ಮತ್ತೊಂದು: lf wealth is lost, nothing is lost. If health is lost, something is lost, If character is lost, Everything is lost. So be good always…
***
ಈಗ, ಕಾಲ ಬದಲಾಗಿದೆ. ಮೊಬೈಲ್ ಎಂಬ ಮಾಯಾಂಗನೆ ಎಲ್ಲರ ಜತೆಯಾಗಿದೆ. ಆಟೊಗ್ರಾಫ್ ಹಾಕಿಸಿಕೊಲ್ಳುವ ಆಸೆಯಾಗಲಿ, ಹಾಕುವ ಉಮ್ಮೇದಿಯಾಗಲಿ ಯಾರಿಗೂ ಇಲ್ಲ. ಏಕೆಂದರೆ ಎಲ್ಲರ ಬಳಿಯೂ ಲೈಫ್ ಟೈಮ್ ಕರೆನ್ಸಿಯ ಮೊಬೈಲ್ ಇದೆ. ಪರಿಣಾಮ ಏನಾಗಿದೆ ಅಂದರೆ, ಯಾವುದೋ ಸಮಾರಂಭಗಳಲ್ಲಿ ಸಿಗುವ ಚಿತ್ರನಟ-ನಟಿಯರು, ಕ್ರಿಕೆಟ್ ಆಟಗಾರರು, ಇತರ ಕ್ಷೇತ್ರಗಳ ಪ್ರಮುಖರ ಸಹಿ ಸಂಗ್ರಹಣೆಯನ್ನೇ ಆಟೊಗ್ರಾಫ್ ಎಂದು ಕರೆಯಬೇಕಾಗಿ ಬಂದಿದೆ. ಇದನ್ನೇ ನೆಪ ಮಾಡಿಕೊಂಡು ಮೊಬೈಲ್ಗೆ ಛೀಮಾರಿ ಹಾಕಬೇಕು; ಕಾಲ ಕೆಟ್ಟು ಹೋಯ್ತು ಎಂದು ನಿಟ್ಟುಸಿರು ಬಿಡಬೇಕು ಅಂದುಕೊಂಡಾಗಲೇ ಚಿಂತಕ ಜೀನ್ ಪಾಲ್ ಸಾತ್ರೆ ಬರೆದ ಆಟೊಗ್ರಾಫ್ನ ಸಾಲುಗಳು ನೆನಪಾಗುತ್ತವೆ: ಆತ ಹೀಗೆ ಬರೆದಿದ್ದ: The flood carries you away. That is life. We can’t Judge or understand. We can only our selves drift.
ಎಂಥ ನಿಷ್ಠುರ ಸತ್ಯ, ಅಲ್ಲವೇ?

Advertisements

3 Comments »

 1. 1
  ವಿಜಯರಾಜ್ ಕನ್ನಂತ Says:

  really gud write-up Mani

 2. 2
  ಮಿಥುನ Says:

  ರವಿ ಬೆಳಗೆರೆ ಹೇಳಿದ್ದು;
  ಅವರ ದಾರಾವಾಢದ ಕಾಲೇಜು ದಿನಗಳಲ್ಲಿ ಒಂದು ದಿನ ಶಿವರಾಮ ಕಾರಂತರ ಉಪನ್ಯಾಸ ಕಾರ್ಯಕ್ರಮ ಇತ್ತಂತೆ.
  ಶಿವರಾಮ ಕಾರಂತ ಮಾತನಾಡುತ್ತಿದ್ದಾಗ ಒಬ್ಬಾಕೆ ವಿದ್ಯಾರ್ಥಿನಿ ಕೀಟಲೆ ಮಾಡುತ್ತಲೋ, ಅಕ್ಕಪಕ್ಕದವರಲ್ಲಿ ಮಾತನಾಡುತ್ತಲೋ ಇದ್ದಳಂತೆ. ಕೊನೆಗೆ ಕಾರ್ಯಕ್ರಮ ಮುಗಿದ ಬಳಿಕ ಆಕೆ ಕಾರಂತರಲ್ಲಿ ಅಟೋಗ್ರಾಫ್ ಕೊಡಿ ಪ್ಲೀಸ್ ಎಂದು ಕೇಳಿದಾಗ ಕಾರ್ಯಕ್ರಮದುದಕ್ಕೂ ಆಕೆಯ ಚಟುವಟಿಕೆಯನ್ನು ಗಮನಿಸಿದ್ದ ಕಾರಂತರು ಬರೆದದ್ದು; ‘ನನ್ನ ಕೈಬರೆಹದಿಂದ ನಿನ್ನ ಹಣೆ ಬರೆಹವನ್ನು ತಿದ್ದಲಾಗದು!’
  -ನಿಮ್ಮ ಬರೆಹ ಓದಿ ನೆನಪಾಯಿತು.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: