ಕಾವೇರಿಯಲ್ಲಿ ಪ್ರೇಯಸಿಯನ್ನು ಕಂಡು ಹೊಸಹಾಡು ಬರೆಸಿದರು ಪುಟ್ಟಣ್ಣ!

p-b-srinivas

ಕೊಡಗಿನ ಕಾವೇರಿ…
ಚಿತ್ರ: ಶರಪಂಜರ, ಗೀತರಚನೆ: ಕಣಗಾಲ್ ಪ್ರಭಾಕರ ಶಾಸ್ತ್ರಿ,
ಸಂಗೀತ: ವಿಜಯ ಭಾಸ್ಕರ್, ಗಾಯನ: ಪಿ.ಬಿ. ಶ್ರೀನಿವಾಸ್-ಪಿ. ಸುಶೀಲ.

ಕೊಡಗಿನ ಕಾವೇರಿ ನೀ ಬೆಡಗಿನ ವೈಯಾರಿ
ಕನ್ನಡ ಕುಲನಾರಿ ಕಾವೇರಿ ನೀ ಒಲವಿನ ಸಿಂಗಾರಿ ||ಪ||

ಋಷಿಜನ ಜೀವನ ತಪೋನಿಧಿ
ಕಾವೇರಿ, ನೀನೇ ಜೇನಿನ ಜೀವನದಿ
ರೈತರ ಬಾಳಿನ ಭಾಗ್ಯನಿಧಿ
ಕಾವೇರಿ, ನೀ ನಡೆಯುವ ನೆಲವೆಲ್ಲ ಪುಣ್ಯದ ಸನ್ನಿಧಿ ||೧||

ಹಾಲಿನ ಹೊಳೆಯಾಗಿ ಹಾಡೋಳೆ
ಕಾವೇರಿ, ನೀ ಬಾಳಿನ ಸುವ್ವಾಲಿ ಹಾಡೋಳೆ
ಚಿನ್ನದ ನಾಡಿನ ಹೊನ್ನಾಲೆ
ಕಾವೇರಿ, ನೀ ನವರಸವಾಹಿನಿ ಗಿರಿಬಾಲೆ ||೨||

ಗಂಧದ ಸೀಮೆಯ ಸೌಂದರ್ಯ ಲಹರಿ
ಕಾವೇರಿ, ನೀ ಗಂಧರ್ವ ಗಾನದ ಆನಂದ ಲಹರಿ
ಪತಿತ ಪಾವನ ಅಮೃತ ಲಹರಿ
ಕಾವೇರಿ, ನೀ ಲಲಿತ ಲತಾವನ ಶೃಂಗಾರ ಲಹರಿ ||೩||
ಯಾವುದೇ ಡ್ಯುಯೆಟ್ ಸಾಂಗ್ ತೆಗೆದುಕೊಂಡರೂ ಅಲ್ಲಿ ಒಂದು ಸಿದ್ಧ ಸೂತ್ರವಿರುತ್ತದೆ. ಏನೆಂದರೆ- ಅಲ್ಲಿ ನಾಯಕಿ ನಾಯಕನನ್ನು ಹೊಗಳಿ, ವರ್ಣಿಸಿ ಹಾಡುತ್ತಾಳೆ. ನಂತರದ ಕ್ಷಣದಲ್ಲಿ ನಾಯಕ ಕೂಡ ಅವಳನ್ನು ಮೆಚ್ಚಿಸಲೆಂದೇ, ಅವಳ ಚೆಲುವು, ಒಲವು, ತ್ಯಾಗ, ಕಣ್ಣುಮಿಂಚು… ಇತ್ಯಾದಿಯನ್ನು ವರ್ಣಿಸಿ ಹಾಡಲು ತೊಡಗುತ್ತಾನೆ. ಈ ಸಿದ್ಧ ಸೂತ್ರವನ್ನು ಮುರಿದದ್ದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಶರಪಂಜರ’ ಚಿತ್ರದ ‘ಕೊಡಗಿನ ಕಾವೇರಿ…’ ಗೀತೆಯ ಹೆಚ್ಚುಗಾರಿಕೆ. ಹನಿಮೂನ್ಗೆಂದು ಮಡಿಕೇರಿಗೆ ಬರುವ ನವದಂಪತಿ ಹಾಡುವ ಹಾಡಿದು. ಸಹಜವಾಗಿಯೇ, ನಾಯಕನಿಗೆ ಮಡದಿಯ ಮೇಲೆ ಅತಿಯಾದ ಮೋಹವಿರುತ್ತದೆ. ಆತ ಅದನ್ನೆಲ್ಲ ಹಾಡಾಗಿಸುತ್ತಾನೆ. ಆದರೆ ನಾಯಕಿ, ಅವನನ್ನು ಹೊಗಳುವ, ಉಬ್ಬಿಸುವ, ಪೂಸಿ ಹೊಡೆವ ಸಾಲುಗಳನ್ನು ಹೇಳುವುದೇ ಇಲ್ಲ!
ಈ ಹಾಡಿನಲ್ಲಿ ನಾಯಕಿ- ‘ಋಷಿಜನ ಜೀವನ ತಪೋನಿಧಿ’ ಎಂದರೆ, ನಾಯಕ ‘ಕಾವೇರಿ, ನೀನೇ ಜೇನಿನ ಜೀವನದಿ’ ಅನ್ನುತ್ತಾನೆ! ನಾಯಕಿ ಮುಂದುವರಿದು- ‘ಗಂಧದ ಸೀಮೆಯ ಸೌಂದರ್ಯ ಲಹರಿ’ ಎಂದರೆ, ಈ ನಾಯಕನೆಂಬ ಮಹರಾಯ- ‘ಕಾವೇರಿ, ನೀ ನವರಸ ವಾಹಿನಿ ಗಿರಿಬಾಲೆ’ ಎನ್ನುತ್ತಾನೆ! ತಕ್ಷಣಕ್ಕೆ ನೋಡಿದರೆ, ಈ ಹಾಡೇಕೆ ಹೀಗಿದೆ? ಅವರಲ್ಲಿರುವ ಕೆಲವು ಸಾಲುಗಳಿಗೆ ಅರ್ಥವೇ ಸಿಗುವುದಿಲ್ಲವಲ್ಲ ಅನಿಸುತ್ತದೆ ನಿಜ.
ಆದರೆ, ಹುಶಾರಾಗಿ ಗಮನಿಸಿದರೆ, ಈ ಹಾಡಿನೊಳಗಿರುವ ಎರಡೆರಡು ಅರ್ಥ ಕಂಡು ಖುಷಿಯೂ, ಅಚ್ಚರಿಯೂ ಒಟ್ಟಿಗೇ ಆಗುತ್ತದೆ. ಏಕೆಂದರೆ, ಈ ಹಾಡಿನಲ್ಲಿ ಒಂದು ಸಾಲು ಕಾವೇರಿ ನದಿಯ ಹಿರಿಮೆಯನ್ನು ಸಾರಿದರೆ, ಮತ್ತೊಂದು ಸಾಲು ನಾಯಕಿಯ (ಶರಪಂಜರ ಚಿತ್ರದಲ್ಲಿ ನಾಯಕಿಯ ಹೆಸರೂ ಕಾವೇರಿ!) ಚೆಲುವನ್ನು ವರ್ಣಿಸುತ್ತದೆ! ಕಾವೇರಿ ನದಿಯ ವರ್ಣನೆಯಲ್ಲಿ ಆಕೆ ಮೈಮರೆತಿದ್ದಾಗಲೇ, ನಾಯಕ ಆಸೆಯಿಂದ ಓಡೋಡಿ ಬಂದು ಆಕೆಯ ಮೇಲೆ ಹಾಡು ಹೇಳಿಬಿಡುತ್ತಾನೆ. ಆ ಮೂಲಕ ಹಾಡಿಗೊಂದು ತಿರುವು ಕೊಡುತ್ತಾನೆ! ಅವಳು ಹಾಡುವ ಸಂದರ್ಭದಲ್ಲಿ ಬೆಳ್ಳಿ ತೆರೆಯ ಮೇಲೆ ಕಾವೇರಿ ನದೀಬಯಲು, ಅದು ಧುಮ್ಮಿಕ್ಕಿ ಹರಿಯುವಾಗಿನ ಸೊಗಸು, ತೀಥದ್ಭವದ ಸಂದರ್ಭ, ತಲಕಾವೇರಿಯ ಹಸಿರು ವೈಭವ ತೆರೆದುಕೊಳ್ಳುತ್ತದೆ. ನಾಯಕ ಹಾಡಲು ಆರಂಭಿಸಿದಾಗ ಮಾತ್ರ, ನಾಯಕಿಯ ಬೆಳದಿಂಗಳಂಥ ಸೊಬಗು, ಬಿನ್ನಾಣ, ಅವಳ ಥೈಥೈಥೈ ನೃತ್ಯ, ಜತೆಗಿರುವ ನರ್ತಕಿಯರ ಒನಪು, ವೈಯ್ಯಾರ, ನಾಚಿಕೆ ಕಣ್ತುಂಬುತ್ತದೆ.
ಒಗಟನ್ನೂ ಮೀರಿಸಿದ ಒಗಟಿನಂತಿರುವ ಈ ಹಾಡು ಬರೆದವರು ಕಣಗಾಲ್ ಪ್ರಭಾಕರ ಶಾಸ್ತ್ರಿ. ಇಂಥದೊಂದು ಹಾಡು ಬರೆಯಲು ಅವರಿಗೆ ಪ್ರೇರಣೆ ಏನು? ಈ ಹಾಡಿನ ಹಿಂದಿರುವ ಕಥೆ ಏನು ಎಂಬುದನ್ನು ತಿಳಿಯುವ ಮೊದಲು ಕಣಗಾಲ್ ಪ್ರಭಾಕರ ಶಾಸ್ತ್ರಿಗಳ ವ್ಯಕ್ತಿತ್ವದ ಬಗ್ಗೆ ಒಂದಷ್ಟು ಹೇಳಿಬಿಡಬೇಕು.
ಪ್ರಭಾಕರ ಶಾಸ್ತ್ರಿಗಳು, ನಿರ್ದೇಶಕ ಪುಟ್ಟಣ್ಣ ಕಣಗಾಲರ ಅಣ್ಣ. ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ರಂಗಭೂಮಿಯಲ್ಲಿ ನಾಟಕ, ಗೀತೆರಚನೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಶಾಸ್ತ್ರಿಗಳು ಬಿ.ಆರ್. ಪಂತುಲು ಅವರ ಬಲಗೈ ಎಂಬಂತಿದ್ದರು. ಆ ದಿನಗಳಲ್ಲೇ ’ಪ್ರಚಂಡ ರಾವಣ’ ಎಂಬ ನಾಟಕ ಬರೆದರು. ಆ ನಾಟಕದಲ್ಲಿ ರಾವಣನ ಪಾತ್ರ ಮಾಡಿದ ಯುವಕನ ಹೆಸರು ಸದಾನಂದ ಸಾಗರ್. ರಾವಣನ ಪಾತ್ರದಲ್ಲಿ ಆತ ಅದೆಷ್ಟು ಪ್ರಚಂಡ ಅಭಿನಯ ನೀಡಿದನೆಂದರೆ, ಆ ಅಬ್ಬರದ ಅಭಿನಯ ಕಂಡು ಬೆರಗಾದ ಪುಟ್ಟಣ್ಣ ಕಣಗಾಲ್, ಆತನನ್ನು ಕರೆದು, ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದರು. ರಾವಣನ ಪಾತ್ರದಲ್ಲಿ ಮೆರೆದ ಸದಾನಂದ ಸಾಗರ್ ಬೇರೆ ಯಾರೂ ಅಲ್ಲ, ‘ನಟಭೈರವ’ ಎಂದು ಹೆಸರು ಮಾಡಿದ ವಜ್ರಮುನಿ! ವಜ್ರಮುನಿಯವರಿಗೆ ಪ್ರಭಾಕರ ಶಾಸ್ತ್ರಿಗಳ ಮೇಲೆ ಅದೆಂಥ ಗೌರವವಿತ್ತೆಂದರೆ, ಖಳನಾಯಕನಾಗಿ ಖ್ಯಾತಿಯ ತುತ್ತತುದಿಯಲ್ಲಿ ಇದ್ದಾಗ ಕೂಡ- ‘ನಾನು ಪ್ರಭಾಕರ ಶಾಸ್ತ್ರಿಗಳ ಶಿಷ್ಯ. ಅವರು ನನ್ನ ಮಹಾಗುರು’ ಎಂದು ಭಾವುಕರಾಗಿ ಹೇಳಿಕೊಳ್ಳುತ್ತಿದ್ದರು.
ನಾಟಕರಂಗದಲ್ಲಿ ಹೆಸರು ಪಡೆದಿದ್ದರಲ್ಲ? ಅಷ್ಟೇ ಜನಪ್ರಿಯತೆಯನ್ನು ಪ್ರಭಾಕರ ಶಾಸ್ತ್ರಿಗಳು ಗೀತೆರಚನೆಕಾರರಾಗಿಯೂ ಪಡೆದರು. ಸಾಕ್ಷಾತ್ಕಾರ ಚಿತ್ರದ ‘ಒಲವೆ ಜೀವನ ಸಾಕ್ಷಾತ್ಕಾರ’, ‘ಫಲಿಸಿತು ಒಲವಿನ ಪೂಜಾಫಲ’, ‘ಜನ್ಮ ಜನ್ಮದಾ ಅನುಬಂಧ’, ‘ರತ್ನಗಿರಿ ರಹಸ್ಯ’ದ ‘ಅಮರಾ ಮಧುರಾ ಪ್ರೇಮ’, ‘ಆಡೋಣ ಒಲವಿನ ರಾಗಮಾಲೆ’ ಗೀತೆಗಳೆಲ್ಲ ಪ್ರಭಾಕರ ಶಾಸ್ತ್ರಿ ಅವರವೇ. ಗೀತೆರಚನೆಯಲ್ಲಿ ನಂಬರ್ ಒನ್ ಅನಿಸಿಕೊಂಡಿದ್ದಾಗಲೇ ಶಾಸ್ತ್ರಿಗಳು ನಿರ್ದೇಶನಕ್ಕೂ ಮುಂದಾದರು. ವರನಟ ಡಾ. ರಾಜ್ಕುಮಾರ್ ಅವರು ನಾಯಕ ಹಾಗೂ ಖಳನಾಯಕನಾಗಿ ನಟಿಸಿರುವ ಸತಿ-ಶಕ್ತಿ ಚಿತ್ರ ನಿರ್ದೇಶಿಸಿದ್ದು ಇದೇ ಪ್ರಭಾಕರ ಶಾಸ್ತ್ರಿಗಳು. ಮುಂದೆ ’ಸುಭದ್ರಾ ಕಲ್ಯಾಣ’ ಹಾಗೂ ‘ಭಲೇ ಭಟ್ಟ’ ಎಂಬ ಚಿತ್ರಗಳನ್ನೂ ಶಾಸ್ತ್ರಿಗಳು ನಿರ್ದೇಶಿಸಿದರು. ಆದರೆ ಅವು ದಯನೀಯ ಸೋಲು ಕಂಡವು. ಹಾಗಾಗಿ ಪ್ರಭಾಕರ ಶಾಸ್ತ್ರಿಗಳಿಗೆ ಯಶಸ್ವಿ ಗೀತರಚನೆಕಾರ ಮತ್ತು ವಿಫಲ ನಿರ್ದೇಶಕ ಎಂಬ ಹಣೆಪಟ್ಟಿ ಅಂಟಿಕೊಂಡಿತು.
‘ಶರಪಂಜರ’ ಚಿತ್ರ ಬಿಡುಗಡೆಯಾಯಿತಲ್ಲ? ಆಗ ‘ಕೊಡಗಿನ ಕಾವೇರಿ’ ಹಾಡು ಕೇಳಿದವರಿಗೆಲ್ಲ- ಇದೇನಿದು ಒಗಟಿನಂಥ ಹಾಡು ಎಂಬ ಅನುಮಾನ ಕಾಡಿತು. ಎಲ್ಲರೂ ಶಾಸ್ತ್ರಿಗಳಿಗೇ ಆ ಪ್ರಶ್ನೆ ದಾಟಿಸಿದರು. ಆದರೆ ಉತ್ತರ ನೀಡಿದ್ದು ಶಾಸ್ತ್ರಿಗಳಲ್ಲ; ಪುಟ್ಟಣ್ಣ ಕಣಗಾಲ್! ಈ ಹಾಡಿನಲ್ಲಿ ಒಂದು ಸಾಲು ಕಾವೇರಿ ನದಿಯ ಬಗ್ಗೆ, ಇನ್ನೊಂದು ಸಾಲು ನಾಯಕಿಯ ಚೆಲುವು-ಒಲವಿನ ಬಗ್ಗೆ ಇರುವುದೇಕೆ ಎಂಬುದಕ್ಕೆ ಪುಟ್ಟಣ್ಣ ಹೀಗೆ ಉತ್ತರಿಸಿದ್ದರು:
‘ನನ್ನ ಊರು ಕಣಗಾಲು. ಅದು ಕಾವೇರಿ ನದಿಯ ತೀರದಲ್ಲಿದೆ. ನಮ್ಮ ಊರಿನ ಬಳಿ ಕಾವೇರಿ ಅದೆಷ್ಟು ಸೊಗಸಾಗಿ ಹರಿಯುತ್ತಾಳೆ ಎಂದರೆ, ಬೇಸಿಗೆ ಬಂದರೆ ಸಾಕು, ನದಿಯೊಳಗೆ ಅಲ್ಲಲ್ಲಿ ಮರಳ ದಿಣ್ಣೆಗಳು ಸೃಷ್ಟಿಯಾಗುತ್ತವೆ. ಅದರ ಮೇಲೆಲ್ಲ ಓಡಾಡಬಹುದು. ಉರುಳಾಡಬಹುದು. ಸುಡು ಬೇಸಿಗೆಯಲ್ಲಿ ಕೂಡ ಕಲ್ಲುಗಳ ಮಧ್ಯೆ ನೀರು ಜುಳುಜುಳು ಅಂತ ಹರೀತಾ ಇರುತ್ತೆ. ಚಿಕ್ಕವನಿದ್ದಾಗ ಕಾವೇರಿಯಲ್ಲಿ ಈಜುವುದು, ಆ ನದೀ ತೀರದಲ್ಲಿ ಖುಷಿಯಿಂದ ಓಡಾಡುವುದು, ಮರಳ ದಂಡೆಯಲ್ಲಿ ಮನೆ ಕಟ್ಟಿಕೊಂಡು ಆಡುವುದು ನನ್ನ ಪ್ರೀತಿಯ ಹವ್ಯಾಸವಾಗಿತ್ತು. ರಜೆಯ ದಿನಗಳಲ್ಲಂತೂ ನದಿ ನೀರಿನಲ್ಲಿ ಆಡಿಕೊಂಡು, ಹಾಡಿಕೊಂಡೇ ನನ್ನ ಬದುಕಿನ ಸಂತೋಷದ ದಿನಗಳನ್ನು ಕಳೆದೆ… ಆ ಕಾವೇರಿ ನದಿ, ಆ ಪ್ರದೇಶದ ಸೊಬಗು ನನಗೆ ಸದಾ eಪಕಕ್ಕೆ ಬರುತ್ತೆ. ನಾನು ಅವಳನ್ನು ತಾಯಿಯಾಗಿ ಪೂಜಿಸ್ತೀನಿ. ಎಷ್ಟೋ ಸಾರಿ ಅವಳಲ್ಲಿ ಗೆಳತಿಯನ್ನೂ, ಪ್ರೇಯಸಿಯನ್ನೂ ಕಂಡಿದ್ದೀನಿ. ಹಾಗಾಗಿ, ಕಾವೇರಿಯನ್ನು ಗುಟ್ಟಾಗಿ ಪ್ರೀತಿಸ್ತೀನಿ. ಸೋದರಿಯಾಗಿ ಕೂಡ ಭಾವಿಸ್ತೀನಿ. ಹೀಗೆ ಕಾವೇರಿಯನ್ನು ನಾನು ಹಲವಾರು ವಿಧಗಳಲ್ಲಿ ನೋಡಿದ್ದೀನಿ, ಸಂತೋಷ ಪಟ್ಟಿದ್ದೀನಿ. ಭಗವಂತ ನನಗೆ ಚಿತ್ರಮಾದ್ಯಮದಂಥ ಒಂದು ಅವಕಾಶ ಕೊಟ್ಟಿರುವಾಗ- ನನ್ನ ಪಾಲಿಗೆ ಮಾತೆ, ಮಮತೆ, ಗೆಳತಿ, ಪ್ರೇಯಸಿ, ಅಕ್ಕ-ತಂಗಿ, ಬಂಧು-ಬಳಗ ಹೀಗೆ ಎಲ್ಲವೂ ಆಗಿರುವ ಕಾವೇರಿ ಮಾತೆಯ ಹಿರಿಮೆಯನ್ನು ಒಂದು ಹಾಡಿನ ಮೂಲಕ ಯಾಕೆ ಹೇಳಬಾರದು ಅನ್ನಿಸಿತ್ತು. ಇದನ್ನೇ ನಮ್ಮ ಅಣ್ಣ ಪ್ರಭಾಕರ ಶಾಸ್ತ್ರಿಗಳಿಗೆ ಹೇಳಿ ಹೊಸ ಬಗೆಯ ಹಾಡು ಬರೆಸಿದೆ. ಒಂದು ಡ್ಯುಯೆಟ್ ಸಾಂಗ್ ಅಂದ ತಕ್ಷಣ ಅದರಲ್ಲಿ ನಾಯಕ-ನಾಯಕಿ ಪರಸ್ಪರರನ್ನು ಹೊಗಳಿಕೊಳ್ಳುವ, ಮೆಚ್ಚಿಕೊಳ್ಳುವ ಪದಪುಂಜಗಳೇ ಇರಬೇಕು ಎಂಬ ಹಟ ಯಾಕೆ? ಈ ಹಾಡಿನಿಂದ ಆ ಏಕತಾನವನ್ನು ಮುರಿದ ಹಾಗಾಯ್ತು ಅಲ್ಲವೆ? ಈ ಹಾಡಿನಿಂದ ಸನ್ನಿವೇಶದ ತೀವ್ರತೆ ಹೆಚ್ಚಿದೆಯಲ್ಲ? ಅಂದ ಮೇಲೆ ಹಾಡು ಹೇಗಿದ್ರೇನು… ಎಂದೆಲ್ಲ ಮಾತಾಡಿ ವಿವರಣೆ ನೀಡಿದ್ದರು.
ಇಲ್ಲಿ ಮತ್ತೊಂದು ಪ್ರಸಂಗದ ಬಗ್ಗೆಯೂ ಹೇಳಿಬಿಡಬೇಕು. ಕಾವೇರಿ ನದೀತೀರದ ಸೊಬಗನ್ನೆಲ್ಲ ಸೆರೆಹಿಡಿಯಬೇಕು ಎಂದು ಹಟತೊಟ್ಟ ಪುಟ್ಟಣ್ಣ, ಆ ಕಾಯಕದಲ್ಲಿದ್ದಾಗಲೇ, ಒಂದು ದಿನ ಶೂಟಿಂಗ್ ನಡೆಯುತ್ತಿದ್ದಾಗಲೇ ಕಾಡ್ಗಿಚ್ಚು ಕಾಣಿಸಿಕೊಂಡಿತು. ತಕ್ಷಣವೇ ಚಿತ್ರತಂಡದ ಎಲ್ಲರೂ ಹೇಳದೇ ಕೇಳದೇ ಪರಾರಿಯಾದರು. ಆದರೆ ಪುಟ್ಟಣ್ಣ ಕಣಗಾಲ್ ನಿಂತಲ್ಲಿಂದ ಕದಲಲಿಲ್ಲ. ಬದಲಿಗೆ, ಛಾಯಾಗ್ರಹಕ ಡಿ.ವಿ. ರಾಜಾರಾಂ ಅವರಿಗೆ- ‘ಈ ಕಾಡ್ಗಿಚ್ಚಿನ ದೃಶ್ಯವನ್ನು ಸೆರೆಹಿಡಿ’ ಎಂದರು. ನಂತರ ಅದನ್ನು ‘ಬಿಳಿಗಿರೀ ರಂಗಯ್ಯಾ’ ಹಾಡಿನಲ್ಲಿ- ‘ಬೆಟ್ಟದಾ ಕಾಡ್ಗಿಚ್ಚು ದೀಪವೇ, ಬಿರುಗಾಳಿ ಕೆಂಧೂಳಿ ಧೂಪವೇ’ ಎಂಬ ಸಾಲು ಬಂದಾಗ ತೋರಿಸಿದರು!
ಮಧುರ ಹಾಡುಗಳ ಕಥೆಯೇ ಹಾಗೆ. ಯಾವುದೋ ನೆಪದಲ್ಲಿ ಅವುಗಳ ಹಿಂದೆ ಹೊರಟರೆ, ಅಲ್ಲಿ ಕಾವೇರಿಯ ತಂಪು ಮೈ ತೋಯಿಸುತ್ತದೆ; ಕಾಡ್ಗಿಚ್ಚು ಉಗುರು ಬೆಚ್ಚಗಿನ ಬಿಸಿಯಾಗಿ ಮೈಸೋಕುತ್ತದೆ.
ಈ ಹಾಡುಗಳು ಕಟ್ಟಿಕೊಡುವ ಬೆರಗಿನ ಕಥೆಗಳಿಗೆ- ಹೇಳಿ, ಏನೆಂದು ಹೆಸರಿಡೋಣ?

Advertisements

1 Comment »

  1. 1
    ಕಟ್ಟಿಮನಿ 45E Says:

    ಪ್ರಿಯ ಮಣಿಕಾಂತ್ ಸರ್. ಪ್ರತಿ ಹಾಡು ತನ್ನೊಳಗೆ ಹುದಗಿಸಿಕೊಂಡಿರುವ ಸ್ವಾರಸ್ಯಕರ ಮಾಹಿತಿಗೆ ಶರಣೊ ಶರಣು…ಚಿತ್ರಸಾಹಿತಿ ಶಿವಶಂಕರ್ ಅವರ ಬೆಳದಿದೆ ನೋಡ ಬೆಂಗಳೂರು…. ಈ ಹಾಡಿನ ಕುರಿತು ಬರೆಯಿರಿ..
    ಕಟ್ಟಿಮನಿ 45E


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: