ಯಾವ್ಯಾವ ತಿಂಗಳಲ್ಲಿ ಹುಟ್ಟಿದ ಮಗುವಿನ ವರ್ತನೆ ಹೇಗಿರುತ್ತೆ ಅಂದ್ರೆ ?

ರಾಶಿಯ ಆಧಾರದ ಮೇಲೆ, ಜನ್ಮದಿನಾಂಕದ ಲೆಕ್ಕಾಚಾರದ ಮೇಲೆ ಮಕ್ಕಳ ಭವಿಷ್ಯ ತಿಳಿಯುವ ಪದ್ಧತಿ ಹಳೆಯದಾಯಿತು. ಇಲ್ಲಿರೋದು ಯಾವ್ಯಾವ ತಿಂಗಳಲ್ಲಿ ಹುಟ್ಟಿದ ಮಗುವಿನ ವರ್ತನೆ ಹೇಗಿರುತ್ತೆ ಎಂಬ ವಿವರಣೆ. ನಿಮ್ಮ ಮಗು ಕೂಡ ಇಲ್ಲಿರುವ ವಿವರಣೆಯ ಗುಣ ಹೊಂದಿರಬಹುದು; ಸುಮ್ನೆ ಗಮನಿಸಿ…

ಜನವರಿ: ಹೇಳಿ ಕೇಳಿ ಇದು ಮೊದಲ ತಿಂಗಳು ತಾನೆ? ಇದೇ ಕಾರಣಕ್ಕೆ ಇರಬೇಕು: ಜನವರಿಯಲ್ಲಿ ಹುಟ್ಟಿದ ಬಹುಪಾಲು ಮಕ್ಕಳಿಗೆ, ಜತೆಗಿರುವ ಎಲ್ಲರಿಗಿಂತ ನಾನೇ ತುಂಬಾ ಚೆನ್ನಾಗಿದ್ದೀನಿ ಅನ್ನೋ ಭ್ರಮೆ. ಹಾಗಾಗಿ, ಸಾಧಾರಣ ಸೌಂದರ್ಯದ ಮಗು ಕೂಡ ಮನೆಯವರ ಮುಂದೆ ನಿಂತು- ‘ನಾನು ಚಂದಾಗಿದೀನಿ ಗೊತ್ತಾ?’ ಎನ್ನುತ್ತಾ ಸ್ಕೋಪ್ ತೆಗೆದುಕೊಳ್ಳುತ್ತದೆ. ತನ್ನ ಮಾತನ್ನು ಎಲ್ಲರೂ ಒಪ್ಪಲಿ ಎಂದು ಆಸೆ ಪಡುತ್ತದೆ. ಶ್ರೀಮಂತರ ಮಕ್ಕಳ ಥರಾ ಬದುಕೋದನ್ನ ಇಷ್ಟ ಪಡುತ್ತದೆ. ಯಾವಾಗ್ಲೂ ‘ನಾನೇ ನಂಬರ್ ಒನ್’ ಅಂತ ಇರ್ತದಲ್ಲ; ಅದೇ ಕಾರಣದಿಂದ ಜ್ಯೂಸ್, ಬಿಸ್ಕತ್, ತಿಂಡಿ, ಚಪ್ಪಲಿ… ಹೀಗೆ ಯಾವುದೇ ಆಗಿರಲಿ; ಬ್ರ್ಯಾಂಡೆಡ್ ಆಗಿರೋದೇ ಬೇಕು ಅಂತ ಹಠ ಹಿಡಿಯುತ್ತೆ. ಕಂಡ ಕಂಡವರನ್ನೆಲ್ಲ ಫ್ರೆಂಡ್ಸ್ ಮಾಡಿಕೊಳ್ಳಲ್ಲ. ಅಪ್ಪ-ಅಮ್ಮ ಭವಿಷ್ಯದ ಬಗ್ಗೆ ಮಾತಾಡ್ತಾ ಕೂತಿದ್ರೆ ಅದಕ್ಕೂ ನನಗೂ ಸಂಬಂಧವೇ ಇಲ್ಲ ಅಂತ ಫ್ರೆಂಡ್ಸ್ ಜತೆ ಮೈದಾನಕ್ಕೆ ಹೋಗಿ ಆಟ ಆಡ್ತಾ ಕಾಲ ಕಳೀತಿರುತ್ತೆ. ಅಂದಹಾಗೆ, ಜನವರಿಯಲ್ಲಿ ಹುಟ್ಟಿದ ಮಕ್ಕಳಿಗೆ ಶ್ರದ್ಧೆ, ಶಿಸ್ತು ವಿಪರೀತ. ಮನೇಲಿ ಯಾವುದಾದ್ರೂ ಕೆಲಸ ಹೇಳಿದ್ರೆ ಎಷ್ಟೇ ಕಷ್ಟವಾದ್ರೂ ಮಾಡಿ ಮುಗಿಸಿ ಎಲ್ಲರಿಂದ ವೆರಿಗುಡ್ ಅನ್ನಿಸಿಕೊಳ್ತವೆ.

ಫೆಬ್ರವರಿ: ‘ಆನೆ ನಡೆದದ್ದೇ ದಾರಿ’ ಅಂತೀವಲ್ಲ- ಹಾಗಿರ್ತವೆ ಫೆಬ್ರವರೀಲಿ ಹುಟ್ಟಿದ ಮಕ್ಕಳು. ಅವು ಯಾವ ಶಿಸ್ತಿಗೂ ಒಳಪಡೋದಿಲ್ಲ. ಸ್ಕೂಲಲ್ಲಿ ಕೂಡ ಹಾಗೇ ಇರ್ತವೆ. ಅದೇ ಕಾರಣಕ್ಕೆ- ‘ನಿಮ್ಮ ಮಕ್ಕಳಿಗೆ ಸ್ವಲ್ಪ ಡಿಸಿಪ್ಲೀನ್ ಹೇಳ್ಕೊಡಿ’ ಅಂತ ಸ್ಕೂಲಿಂದ ನೋಟಿಸ್ ಬರುತ್ತೆ. ತುಂಬಾ ಬೇಗ, ತೀರಾ ಸಣ್ಣ ವಿಷಯಕ್ಕೂ ಸಿಟ್ಟಿಗೇಳ್ತವೆ. ಸಿಟ್ಟು ಬಂದಾಗ ಮುಖ ಊದಿಸಿಕೊಂಡು ಕೂತಿರ್ತವೆ. ಮಾತೇ ಆಡಲ್ಲ. ಹತ್ತಿರ ಹೋಗಿ ಮಾತಾಡಿಸಿದಾಗ ಮಾತ್ರ ಪರಚಿಬಿಡ್ತವೆ. ಕಂಡೀಷನ್ ಹಾಕಿದಷ್ಟೂ ಅದನ್ನ ವಿರೋಧಿಸ್ತವೆ. ಇಷ್ಟವಾಗದ ವಸ್ತುಗಳನ್ನು ತೆಗೆದು ಬೀದಿಗೇ ಎಸೆದು ಬಿಡ್ತವೆ. ತಮ್ಮಷ್ಟಕ್ಕೆ ತಾವೇ ಮಾತಾಡಿಕೊಳ್ತವೆ. ಒಬ್ಬರೇ ಇದ್ದಾಗ ಡ್ಯಾನ್ಸು ಮಾಡ್ತವೆ. ಆದರೆ ಹತ್ತು ಮಂದಿಯ ಮುಂದೆ ‘ಸಾವಿರ ರೂಪಾಯಿ ಕೊಡ್ತೀನಿ’ ಅಂದ್ರೂ ಡ್ಯಾನ್ಸು ಮಾಡಲು ಒಪ್ಪಲ್ಲ. ಕಂಡದ್ದೆಲ್ಲಾ ಬೇಕು ಅನ್ನುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನಿಷ್ಟದಂತೆ ಬದುಕೋಕೆ ಆಸೆಪಡ್ತವೆ. ಅಪ್ಪ-ಅಮ್ಮನ ಕಂಟ್ರೋಲ್ನಲ್ಲಿ ಇರೋಕೂ ಇಷ್ಟಪಡಲ್ಲ.

ಮಾರ್ಚ್: ಅದು ಸ್ಕೂಲ್ ಇರಬಹುದು, ಮನೆ ಇರಬಹುದು. ಬಸ್ ಆಗಿರಬಹುದು. ಅಲ್ಲೆಲ್ಲ ಸೈಲೆಂಟಾಗಿರಬೇಕು ಅನ್ನೋದು ಮಾರ್ಚ್ ತಿಂಗಳಲ್ಲಿ ಹುಟ್ಟಿದ್ದ ಮಕ್ಕಳ ಅಪೇಕ್ಷೆ ಆಗಿರುತ್ತೆ. ಏನಾದ್ರೂ ಗದ್ದಲ ಆದ್ರೆ ಅವು ಕೂತಲ್ಲೇ ಮುಖ ಕಿವಿಚುತ್ತವೆ. ಲಘು ಸಂಗೀತ ಅಂದ್ರೆ ಈ ಮಕ್ಕಳಿಗೆ ಸಖತ್ ಇಷ್ಟ. ಮಾರ್ಚ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಯೋಚನೆಯೇ ವಿಚಿತ್ರ. ಅಪ್ಪನೋ, ಅಮ್ಮನೋ ಕತೆ ಹೇಳಲು ನಿಂತರೆ, ಅವರಿಗೆ ಬೇರೇನೋ ಪ್ರಶ್ನೆ ಕೇಳಿ ಪೇಚಿಗೆ ಸಿಕ್ಕಿಸ್ತವೆ. ಕೆಲವೊಮ್ಮೆಯಂತೂ ತಾವೇ ಕತೆ ಕಟ್ಟಿ ಹೇಳ್ತವೆ. ದೂರದಲ್ಲಿ ಯಾವುದೋ ಹಾಡು, ನಾಟಕದ ಡೈಲಾಗ್ ಕೇಳಿಬಂದ್ರೆ ಅದನ್ನೇ ಕೇಳ್ತಾ ಮೈಮರೆಯೋದು; ಬೇರೆಯವರ ವಿಷಯ ಅತ್ಲಾಗಿರಲಿ, ಮೊದಲು ನಾನು ಉದ್ಧಾರ ಆಗಬೇಕು ಅಂತ ಯೋಚಿಸೋದು, ಹಾಗೆಯೇ ಬದುಕೋದು ಈ ಮಕ್ಕಳ ಗುಣ. ಇದನ್ನೇ ಅಪಾರ್ಥ ಮಾಡಿಕೊಳ್ಳುವ ಜನ ‘ಸ್ವಾರ್ಥಿ, ನೀನು ಅನ್ನೋದುಂಟು. ಆದರೆ, ಅಂಥ ಟೀಕೆಗಳತ್ತ ತಿರುಗಿಯೂ ನೋಡದೆ ಬದುಕುವುದೂ ಮಾರ್ಚ್ ತಿಂಗಳಲ್ಲಿ ಹುಟ್ಟಿದ ಮಕ್ಕಳಿಗೆ ಅಭ್ಯಾಸ ಆಗಿಬಿಟ್ಟಿರ್ತದೆ.

ಏಪ್ರಿಲ್: ಯಾವಾಗ್ಲೂ ಚಟಪಟ ಮಾತಾಡ್ತಾನೇ ಇರೋದು, ತಮಾಷೆಯಾಗಿ ಮಾತಾಡಿ ಜತೆಗಿದ್ದವರನ್ನು ನಗಿಸೋದು ಏಪ್ರಿಲ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಗುಣ ವಿಶೇಷ. ಈ ಮಕ್ಕಳಿಗೆ ಕೆಟ್ಟ ಕುತೂಹಲ ಜಾಸ್ತಿ. ಅನ್ನ ಹೇಗೆ ಆಗುತ್ತೆ? ಅಲಾರಾಂ ಹೇಗೆ ಹೊಡೆಯುತ್ತೆ? ಬಸ್ಸು ಹೇಗೆ ಓಡುತ್ತೆ ಎಂದೆಲ್ಲಾ ಪ್ರಶ್ನೆ ಕೇಳಿ ಸುಸ್ತು ಮಾಡ್ತವೆ. ಪ್ರಯಾಣ ಅಂದ್ರೆ ಸಖತ್ ಇಷ್ಟ. ಹೊರಗೆ ಹೋಗೋಣ್ವಾ ಅಂತ ಸುಮ್ನೆ ಕೇಳಿದ್ರೂ ಸಾಕು; ಅಪ್ಪ-ಅಮ್ಮನಿಗಿಂತ ಮೊದಲೇ ರೆಡಿ ಆಗಿರ್ತವೆ. ಚಿಕ್ಕಚಿಕ್ಕ ವಿಷಯವನ್ನೂ ನೆನಪಲ್ಲಿ ಇಟ್ಕೊಂಡಿರ್ತವೆ. ಜತೆಗಿದ್ದವರನ್ನು ಅನುಕರಿಸುವುದು, ಅಣಕಿಸುವುದು ಈ ಮಕ್ಕಳ ಪ್ರಿಯವಾದ ಹವ್ಯಾಸ. ಆಟದ ಸಾಮಾನು ತಂದುಕೊಟ್ರೆ ಅದನ್ನು ತಗೊಂಡು ಆಟ ಆಡೋದಿಲ್ಲ. ಬದಲಿಗೆ, ಒಂದೇ ದಿನದಲ್ಲಿ ಅದನ್ನೆಲ್ಲ ಬಿಚ್ಚಿ, ಒಡೆದು ಹಾಕಿ, ರಿಪೇರಿಗೂ ಟ್ರೈಮಾಡಿ ಹಾಳು ಮಾಡಿಬಿಡ್ತವೆ. ಮನೆ, ಸ್ಕೂಲು, ಮದುವೆ ಮನೆ… ಹೀಗೆ ಎಲ್ಲೇ ಆಗಲಿ; ಯಾರು ಸಿಕ್ತಾರೋ ಅವರನ್ನು ಫ್ರೆಂಡ್ ಮಾಡಿಕೊಂಡು ಖುಷಿಯಾಗಿರ್ತವೆ. ಕುಟುಂಬದವರು ಮಾತ್ರವಲ್ಲ; ಅಪರಿಚಿತರಿಂದ ಕೂಡ ಹೊಗಳಿಸಿಕೊಳ್ಳೋದು ಏಪ್ರಿಲ್ನಲ್ಲಿ ಹುಟ್ಟುವ ಮಕ್ಕಳ ಹೆಚ್ಚುಗಾರಿಕೆ.

ಮೇ: ಕಾಲಿಗೆ ಚಕ್ರ ಕಟ್ಟಿಕೊಂಡ ಥರಾ ಮನೆಯೆಲ್ಲಾ ರೌಂಡ್ ಹೊಡೆಯೋದು ಮೇ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸ್ಪೆಷಾಲಿಟಿ. ಅಷ್ಟೆಲ್ಲ ಸುತ್ತಿದ್ರೂ ಸುಸ್ತಾಯ್ತು ಅನ್ನಲ್ಲ. ಮನೇಲಿ ಇರೋದಕ್ಕಿಂತ ಹೊರಗೆ ಇರೋದನ್ನೇ ತುಂಬಾ ಇಷ್ಟ ಪಡ್ತವೆ. ಕಲಿಕೆಯಲ್ಲಿ ವಿಪರೀತ ಕುತೂಹಲ, ಆಸಕ್ತಿ. ಜತೆಗೆ ಸ್ವಲ್ಪ ಸೋಂಬೇರಿತನವೂ ಇರುತ್ತೆ. ಸ್ವಲ್ಪ ಪೊಸೆಸೀವ್ನೆಸ್. ನಮ್ಮ ಅಪ್ಪ-ಅಮ್ಮನೇ ಗ್ರೇಟು. ಅವರನ್ನು ಬಿಟ್ರೆ ಇಲ್ಲ ಅಂತ ವಾದಿಸ್ತವೆ. ಮುಂದೆ ನಾನು ಅಪ್ಪನ ಥರಾನೇ ಇಲ್ಲಾಂದ್ರೆ ಅಮ್ಮನ ಥರಾನೇ ಆಗ್ತೇನೆ ಅಂತ ಹಟ ಹಿಡೀತವೆ. ಅತಿ ಭಾವುಕತೆ ಈ ಮಕ್ಕಳ ನೆಗೆಟಿವ್ ಪಾಯಿಂಟ್. ತುಂಬ ಚಿಕ್ಕ ವಿಷಯಕ್ಕೂ ಅರ್ಧ ಗಂಟೆ, ಅತ್ತುಬಿಡ್ತವೆ. ಆಮೇಲೆ ಕೂq ನೆನಪಿಸಿಕೊಂಡು ಅಳ್ತವೆ. ನಾನು ತಪ್ಪು ಮಾಡಿಲ್ಲ ಅನ್ನುವಾಗಂತೂ ಎರಡನೇ ಮಾತಿಗೇ ‘ಕಾವೇರಿ’ ಪ್ರತ್ಯಕ್ಷ ಆಗಿಬಿಡ್ತಾಳೆ! ಮನೆಗೆ ನಾನೊಬ್ಳೇ ಸಾಕು, ಬೇರೆ ಯಾರೂ ಬೇಡ ಅಂತಿರ್ತವೆ. ಬೈಕ್/ಕಾರ್ನಲ್ಲಿ ಇಂಥವರು ಇಲ್ಲೇ ಕೂತ್ಕೋಬೇಕು ಅಂತ ಕೂಡ ತಾವೇ ಹೇಳಿಬಿಡ್ತವೆ.

ಜೂನ್: ೬೦ನೇ ವರ್ಷಕ್ಕೆ ಬರಬೇಕಾದ ತಾಳ್ಮೆ, ೬ನೇ ವರ್ಷಕ್ಕೇ ಸಿದ್ಧಿಸಿರುತ್ತೆ. ಎಂಥ ಸಂದರ್ಭದಲ್ಲೂ ಸಂಯಮ ಕಳೆದುಕೊಳ್ಳಲ್ಲ. ‘ಅರೆ, ಈ ಮಗೂಗೆ ಸಿಟ್ಟೇ ಬರಲ್ವ’ ಅನ್ಕೋಬೇಕು, ಹಾಗಿರ್ತವೆ. ಯಾವುದೇ ಕೆಲಸ ಆಗ್ಲಿ; ಮನಸ್ಸು ಬಂದ್ರೆ ಮಾತ್ರ ಮಾಡ್ತವೆ. ಸ್ವಾರಸ್ಯ ಏನಪಾ ಅಂದ್ರೆ, ಏಕಕಾಲಕ್ಕೆ ಎರಡ್ಮೂರು ಕೆಲಸ ಮಾಡೋಕೆ ಹೋಗ್ತವೆ. ಅಂದ್ರೆ ಓದೋಕೆ ಕೂತಾಗ ಕೂಡ ಲೈಟ್ ಮ್ಯೂಸಿಕ್ ಇರಲಿ ಅನ್ನೋದು; ಟಿ.ವಿ. ನೋಡಿಕೊಂಡೇ ಹೋಂ ವರ್ಕ್ ಮುಗಿಸೋದು; ಮ್ಯಾಚ್/ಕಾರ್ಟೂನ್ ನೆಟ್ವರ್ಕ್ ನೋಡ್ತಾ ಊಟ ಮಾಡೋದು… ಹೀಗೇ. ಜತೆಗೆ, ನಾನು ಅವರ ಥರಾ ಆಗಬೇಕು, ಇವರ ಥರಾ ಆಗಬೇಕು ಅಂತ ಕನಸು ಕಾಣೋದು; ಅದನ್ನೇ ಅಪ್ಪ-ಅಮ್ಮ, ಬಂಧುಗಳ ಜತೆ ಹೇಳಿಕೊಳ್ಳೋದು-ಜೂನ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಇನ್ನೊಂದು ಗುಣ. ಹೀಗೆ, ಚಿಕ್ಕಂದಿನಿಂದಲೇ ಒಂದು ಕನಸನ್ನು ಅಂಗೈಲಿ ಹಿಡಿದುಕೊಂಡೇ ಬೆಳೆಯುವ ಮಕ್ಕಳು ತುಂಬಾ ಸಂದರ್ಭದಲ್ಲಿ ಅದನ್ನು ನನಸು ಮಾಡಿಕೊಳ್ಳುವುದೂ ಉಂಟು.

ಜುಲೈ: ಹೊಡೆದ್ರೆ ಹೊಡೆಸ್ಕೊಳ್ತವೆ. ಬೈತೀರಾ? ಬೈಸ್ಕೋತವೆ. ಗೆಟ್ ಔಟ್ ಅಂದ್ರೆ-ಮನೆಯಿಂದ ಹೊರಗೆ ಹೋಗಿ ಸಪ್ಪೆ ಮೋರೆಯಲ್ಲಿ ನಿಂತುಬಿಡ್ತವೆ. ಯಾರೊಂದಿಗೆ ಬೇಕಾದ್ರೂ ಫ್ರೆಂಡ್ಶಿಪ್ ಬೆಳೆಸಿಕೊಳ್ತವೆ. ತುಂಬಾ ಹಾರ್ಡ್ವರ್ಕ್ ಮಾಡ್ತವೆ ನಿಜ. ಆದ್ರೆ ಉಡಾಫೆ ವರ್ತನೆಯಿಂದ ಬೈಸಿಕೊಳ್ತವೆ. ಸ್ಕೂಲಲ್ಲಿ, ಜತೆಗಿದ್ದವರು ಹೊಡೆದ್ರೆ ಹೊಡೆಸಿಕೊಂಡು ಬರ್ತವೇ ವಿನಃ ತಿರುಗಿ ಬಾರಿಸೋದಿಲ್ಲ. ಸೇಡು ತೀರಿಸ್ಕೋಬೇಕು ಅನ್ನೋ ಹಟ ಜುಲೈನಲ್ಲಿ ಹುಟ್ಟುವ ಮಕ್ಕಳಿಗೆ ಇರೋದಿಲ್ಲ. ಜತೆಗಿರುವ ಹಿರಿ, ಕಿರಿಯರ ನಡವಳಿಕೆಯನ್ನು ಹುಶಾರಾಗಿ ಗಮನಿಸ್ತಾ ಇರ್ತವೆ. ಅಗತ್ಯ ಬಂದಾಗ- ‘ನೀವು ಮಾಡ್ತಿರೋದು ಸರಿಯಲ್ಲ’ ಎಂದು ಜಡ್ಜ್ ಥರಾ ತೀರ್ಪು ಕೊಡ್ತವೆ! ಹಳೆಯ ಫ್ರೆಂಡ್ಸ್, ಯಾವತ್ತೋ ತಿಂದಿದ್ದ ರವೆ ಉಂಡೆ, ಅಜ್ಜಿ ಹೇಳಿದ್ದ ಕತೆ, ಚಿಕ್ಕಪ್ಪ ಕೊಟ್ಟ ಏಟು, ಹಳೆಯ ಮೊಬೈಲ್ನ ಕಲರ್, ನಾಯಿಮರಿ ಸತ್ತ ಸಂದರ್ಭ, ಒಂದನೇ ಕ್ಲಾಸಲ್ಲಿ ನೋಡಿದ್ದ ಸಿನಿಮಾ… ಹೀಗೆ ಪ್ರತಿಯೊಂದನ್ನೂ ನೆನಪಿಟ್ಟಿರ್ತವೆ. ವಿಪರೀತ ಸೆಂಟಿಮೆಂಟ್. ಮನೆಗೆ ನೆಂಟರು ಬಂದ್ರೆ- ಅವರು ನನ್ನ ಜತೆಗೇ ಇರಲಿ ಅಂತ ಹಟ ಹಿಡೀತವೆ. ಮನೇಲಿ ಯಾರಿಗಾದ್ರೂ ಹುಶಾರಿಲ್ಲ ಅಂದ್ರೆ ವಿಪರೀತ ಕೇರ್ ತಗೊಳ್ಳೋದು; ಇನ್ನೊಬ್ಬರ ಸಂಕಟಕ್ಕೆ ಕರಗುವುದು, ನನಗೆ ಕಷ್ಟ ಆದ್ರೂ ಪರ್ವಾಗಿಲ್ಲ. ಸುತ್ತಲಿನ ಜನ ಚೆನ್ನಾಗಿರ್ಲಿ ಎಂದು ಯೋಚಿಸುವುದು-ಜುಲೈನಲ್ಲಿ ಹುಟ್ಟಿದ ಮಕ್ಕಳ ಹೆಚ್ಚುಗಾರಿಕೆ.

ಆಗಸ್ಟ್: ಆಗಸ್ಟ್ನಲ್ಲಿ ಹುಟ್ಟಿದ ಮಕ್ಕಳಿಗೆ ವಿಪರೀತ ಆತ್ಮವಿಶ್ವಾಸ, ಮುಳ್ಳನ್ನು ಮುಳ್ಳಿಂದ್ಲೇ ತೆಗೀಬೇಕು ಅನ್ನೋದು ಇವರ ವಾದ. ಸೇಡಿನ ಮನೋಭಾವ ಜಾಸ್ತಿ. ಜತೆಗಿರುವ ಎಲ್ಲರನ್ನೂ ಗುಮಾನಿಯಿಂದ ನೋಡ್ತವೆ. ಯಾರ ಹಂಗಿಗೂ ಒಳಪಡದೆ ಸ್ವತಂತ್ರವಾಗಿರೋಕೆ ಇಷ್ಟಪಡ್ತವೆ. ಹಗಲು ಗನಸಿನಲ್ಲಿ ವಿಹರಿಸೋದು ಜಾಸ್ತಿ. ಒಂದೇ ದಿನದಲ್ಲಿ ಇಡೀ ಜಗತ್ತನ್ಣೇ ಬದಲಿಸಿಬಿಡ್ತೀನಿ ಅಂತ ಕೊಚ್ಚಿಕೊಳ್ಳೋದೂ ಜಾಸ್ತಿ. ಸುಳ್ಳು ಹೇಳೋರ್ನ ಕಂಡರೆ, ಹಿಡ್ಕೊಂಡು ಹೊಡೆದೇ ಬಿಡ್ತವೆ! ಒಂದು ಚೌಕಟ್ಟಿಗೆ, ಶಿಸ್ತಿಗೆ ಕಟ್ಟುಪಾಡಿಗೆ ಸಿಕ್ಕಿಬೀಳೊಲ್ಲ. ಭವಿಷ್ಯದಲ್ಲಿ ಹೀಗಿರಬೇಕು, ಹಾಗಿರಬೇಕು ಎಂದೆಲ್ಲಾ ಅಂದಾಜು ಮಾಡ್ತಾ ಇರ್ತವೆ. ತಮ್ಮನ್ನು ತಾವೇ ಮಹಾನ್ ಸಾಹಸಿ ಎಂದು ಹೊಗಳಿಕೊಂಡು ಖುಷಿಪಡ್ತವೆ.

ಸೆಪ್ಟೆಂಬರ್: ಸೆಪ್ಟೆಂಬರ್ನಲ್ಲಿ ಹುಟ್ಟಿದ ಮಕ್ಕಳಿಗೆ ಭಂಡ ಧೈರ್ಯ ಜಾಸ್ತಿ. ಭಯ ಆಗ್ತಿರುತ್ತೆ. ಆದ್ರೆ ತೋರಿಸಿಕೊಳ್ಳಲ್ಲ. ಮನೆ ಮುಂದೆ ಹಾವಾಡಿಗ ಬಂದ್ರೆ- ಹಾವು ಹಿಡ್ಕೋತೀನಿ ಅಂದು ಎಲ್ಲರನ್ನೂ ಬೆಚ್ಚಿ ಬೀಳಿಸ್ತವೆ. ಪ್ರೈವೇಸಿ ಈ ಮಕ್ಕಳಿಗಿಷ್ಟ. ತಮ್ಮ ಪಾಡಿಗೆ ತಾವು ಓದ್ತಾ, ಹೋಂವರ್ಕ್ ಮಾಡ್ತಾ ಇದ್ದಾಗ ಅಪ್ಪನೋ ಅಮ್ಮನೋ ಮಧ್ಯೆ ಪ್ರವೇಶಿಸಿದರೆ ಕೂತಲ್ಲೇ ಸಿಡಿಸಿಡಿ ಅಂದುಬಿಡ್ತವೆ. ಅನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳಿಬಿಡುವುದು; ಇನ್ನೊಬ್ಬರ ತಪ್ಪನ್ನು ಎತ್ತಿ ತೋರಿಸುವುದು ಈ ತಿಂಗಳಲ್ಲಿ ಹುಟ್ಟಿದ ಮಕ್ಕಳ ಗುಣ ವಿಶೇಷ. ತುಂಬ ಪ್ರಾಮಾಣಿಕವಾಗಿರ್ತವೆ. ಅದನ್ನೇ ಉಳಿದವರಿಂದ ಕೂಡ ಬಯಸುತ್ತವೆ. ಈ ಕಾರಣದಿಂದಲೇ ಜತೆಗಿದ್ದವರೊಂದಿಗೆ ಮೇಲಿಂದ ಮೇಲೆ ಜಗಳ ಆಡ್ತಾ ಇರ್ತವೆ. ಆದರೆ, ಈ ಮಕ್ಕಳ ಉದಾರಮನೋಭಾವ, ಪ್ರಾಮಾಣಿಕತೆಯೇ ಅವರನ್ನು ಗುಂಪಿನಲ್ಲಿ ದೊಡ್ಡವರನ್ನಾಗಿ ಮಾಡುತ್ತೆ.

ಅಕ್ಟೋಬರ್: ತನ್ನದೇ ವಾರಿಗೆಯ ಒಂದು ಹಿಂಡು ಮಕ್ಕಳೊಂದಿಗೆ ಸುತ್ತುವುದು, ಅವರನ್ನೆಲ್ಲ ಮನೆಗೆ ಕರೆತರುವುದು ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದ ಮಕ್ಕಳ ಸ್ಪೆಷಾಲಿಟಿ. ಅಪ್ಪ ಅಥವಾ ಅಮ್ಮ-ಇಬ್ಬರಲ್ಲಿ ಒಬ್ಬರನ್ನು ವಿಪರೀತ ಹಚ್ಚಿಕೊಂಡಿರ್ತವೆ. ದೊಡ್ಡವರು ಗದರಿಸಿದ್ರೆ ಕೇರೇ ಮಾಡಲ್ಲ. ಒಂದೊಂದ್ಸಲ ಅವರನ್ಣೇ ಗುರಾಯಿಸಿಕೊಂಡು ನೋಡ್ತವೆ. ಈ ಕಂದಮ್ಮಗಳಿಗೆ ಎರಡೇ ನಿಮಿಷಕ್ಕೆ ಸಿಟ್ಟು ಬರುತ್ತೆ. ಆಗ ಕೈಗೆ ಏನು ಸಿಕ್ಕುತ್ತೋ ಅದನ್ನ ಎಸೆದು ಕೋಪದ ಪರಿಚಯ ಮಾಡಿಕೊಡ್ತವೆ. ಓದಪ್ಪಾ ಅಂತ ಕೂರಿಸಿದ್ರೆ ಚಿತ್ರ ನೋಡೋಕೆ ಶುರು ಮಾಡ್ತವೆ. ಬರೆಯೋ ಅಂದ್ರೆ- ಕುಂಬಳಕಾಯಿ ಸುತ್ತುತ್ತವೆ. ಓದಿಗಿಂತ ಬೇರೆ ಚಟುವಟಿಕೇಲಿ ಆಸಕ್ತಿ ಜಾಸ್ತಿ. ಅದೇ ಕಾರಣಕ್ಕೆ – ‘ಮುಂದೆ ಅದೇನಾಗ್ತಾನೋ/ಳೋ ಗೊತ್ತಿಲ್ಲ’ ಎಂದು ಅಪ್ಪ- ಅಮ್ಮ; ಬಂಧುಗಳೆಲ್ಲ ಚಿಂತೆಯಿಂದ ಹೇಳ್ತಾನೇ ಇರ್ತಾರೆ. ಸತ್ಯದ ತಲೆಯ ಮೇಲೆ ಹೊಡೆದಂಗೆ ಸುಳ್ಳು ಹೇಳಿ, ಅದೇ ನಿಜ ಅಂತ ಸಾಧಿಸ್ತವೆ. ಹರಾಶಿವಾ ಅಂದ್ರೂ ತಪ್ಪು ಒಪ್ಪಿಕೊಳ್ಳಲ್ಲ! ಬೀದಿ ತುಂಬಾ ಫ್ರೆಂಡ್ಸ್ ಮಾಡಿಕೊಂಡಿರ್ತವೆ. ಸಿಟ್ಟು ಬಂದಾಗ; ಖುಷಿಯಾದಾಗ ಎದುರಿಗೆ ಇರೋರನ್ನ ಕೇರ್ ಮಾಡದೆ ತಮಗೆ ಅನಿಸಿದ್ದು ಹೇಳಿಬಿಡ್ತವೆ.

ನವೆಂಬರ್: ‘ಗ್ಯಾನ ಬಂದ ಗಿರಾಕಿ’ ಎಂಬ ಮಾತಿದೆಯಲ್ಲ? ಆ ಮಾತಿಗೆ ಉದಾಹರಣೆಯಾಗಿ ನವೆಂಬರ್ನಲ್ಲಿ ಹುಟ್ಟಿದ ಮಕ್ಕಳನ್ನು ಸೇರಿಸಬಹುದು. ಈ ಮಕ್ಕಳದು ಎಲ್ಲವೂ ಅತೀ. ಅದೇ ಕಾರಣದಿಂದ ಸ್ವಲ್ಪ ಮಟ್ಟಿಗೆ ಇವು ಡೇಂಜರಸ್ ಕಂದಮ್ಮಗಳು. ಇಷ್ಟಾದರೂ, ಈ ಮಕ್ಕಳು ಗಲಾಟೆ, ಗಿಜಿಗಿಜಿ ಗದ್ದಲದಿಂದ ಮಾರು ದೂರ. ಹತ್ತು ಜನರ ಜತೆ ಸೇರಿ ಕೆಲಸ ಮಾಡೋದ್ರಲ್ಲ ಇವಕ್ಕೆ ನಂಬಿಕೆಯಿಲ್ಲ. ಹಾಗಾಗಿ ಎಲ್ಲವನ್ನೂ ನಾನೇ ಮಾಡ್ತೀನಿ ಅಂತ ನಿಂತು ಬಿಡ್ತವೆ. ಜತೆಗಿದ್ದವರಿಗೆ ಹೇಗೆ ಪ್ಲೀಸ್ ಮಾಡಬೇಕು, ಅವರನ್ನು ಹೇಗೆ ಆಟ ಆಡಿಸಬೇಕು, ಹೇಗೆ ನಗಿಸಬೇಕು ಅನ್ನೋದೆಲ್ಲ ಈ ಮಕ್ಕಳಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತೆ. ಕೆಲವೊಂದು ವಿಷಯವನ್ನು ಚಿಕ್ಕವಯಸ್ಸಲ್ಲೇ ಗುಟ್ಟಾಗಿ ಇಟ್ಟುಕೊಳ್ಳುವುದು ಈ ಮಕ್ಕಳ ಸ್ವಭಾವ. ಏನೇ ಗದರಿಸಿ ಕೇಳಿದರೂ ತುಟಿ ಬಿಚ್ಚೋದಿಲ್ಲ. ‘ಅಯ್ಯೋ, ಏನೂ ಇಲ್ಲ’ ಎಂದು ತೇಲಿಸಿ ಮಾತಾಡಿ ಎಲ್ಲರನ್ನೂ ಪಿಗ್ಗಿ ಬೀಳಿಸಿಬಿಡುತ್ತವೆ. ನಂಬಿಕೆ ದ್ರೋಹ ಮಾಡದಿರುವುದು ಹಾಗೂ ಯಾರನ್ನೂ ವಂಚಿಸದಿರುವುದು- ಈ ಮಕ್ಕಳ ಹೆಚ್ಚುಗಾರಿಕೆ.

ಡಿಸೆಂಬರ್: ಈ ತಿಂಗಳಲ್ಲಿ ಹುಟ್ಟಿದ ಮಕ್ಕಳಲ್ಲಿ ಹೆಚ್ಚಿನವು- ಮೊಂಡುವಾದ ಹೂಡುತ್ತವೆ. ಮಾತು ಮಾತಿಗೂ ಪ್ರಾಮಿಸ್ ಮಾಡುತ್ತವೆ. ಬೆಟ್ ಕಟ್ತವೆ. ನಾನು ಹೇಳಿದ್ದೇ ಸರಿ ಎಂದು ಹಟ ಹಿಡೀತವೆ. ಅದನ್ನು ಯಾರಾದ್ರೂ ವಿರೋಧಿಸಿದ್ರೆ ಜಗಳಕ್ಕೇ ನಿಂತುಬಿಡ್ತವೆ. ಪ್ರತಿಯೊಂದು ವಿಷಯದಲ್ಲೂ ನಾನು ಎಲ್ಲರಿಗಿಂತ ಮುಂದಿರಬೇಕು ಅಂತ ಆಸೆ ಪಡ್ತವೆ. ಸ್ವಲ್ಪ ಜಾಸ್ತಿ ಅನ್ನುವಷ್ಟು ಹೊಟ್ಟೆಕಿಚ್ಚು ಹೊಂದಿರ್ತವೆ. ಪಾಠದಲ್ಲಿ ಹಿಂದಿರಬಹುದು; ಆದರೆ ಆಟ ಅಂದಾಕ್ಷಣ ಜಿಂಕೆಮರಿಯ ಥರಾ ಆಕ್ಟೀವ್ ಆಗಿರ್ತವೆ. ಈ ಮಕ್ಕಳ ಮಾತು, ಸಮಸ್ಯೆ, ಬುದ್ಧಿವಾದವನ್ನು ಕೇಳೋದು ಸುಲಭ. ಆದರೆ ಅರ್ಥಮಾಡಿಕೊಳ್ಳೋದು ಕಷ್ಟ. ಕಂಡವರನ್ನೆಲ್ಲ ಫ್ರೆಂಡ್ಸ್ ಮಾಡಿಕೊಳ್ಳಲ್ಲ. ಎಲ್ಲರ ಜತೆಗೆ ವಾದ ಮಾಡ್ತವಲ್ಲ; ಹಾಗಾಗಿ ಫ್ರೆಂಡ್ಸ್ ಕೂಡ ಬದಲಾಗ್ತಾ ಹೋಗ್ತಾರೆ. ತುಂಬಾ ಭಾವುಕವಾಗಿ ಯೋಚಿಸೋದು; ಜೋರಾಗಿ ಅಳೋದು ಅಪರೂಪ. ಆದರೆ, ಯಾವಾಗಾದ್ರೂ ಡಿಪ್ರೆಷನ್ಗೆ ಈಡಾದರೆ ಅದರಿಂದ ಚೇತರಿಸಿಕೊಳ್ಳಲಿಕ್ಕೆ ತುಂಬಾ ಟೈಮ್ ತಗೊಳ್ತವೆ. ಯಾವುದೇ ಕೆಲಸ ಮಾಡಿದ್ರೂ ಅದೆಲ್ಲಾ ಒಂಥರಾ ಜೋರಾಗೇ ಇರಬೇಕು ಅಂತ ಆಸೆ ಪಡ್ತವೆ. ಹಾಗಾಗಿ ‘ಆಕಾಶಕ್ಕೇ ಏಣಿ ಹಾಕೋ ಆಸಾಮಿ’ ಅಂತ ಕರೆಸಿಕೊಳ್ತವೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: