,ಕಾಲವಳಿಸದ ನೆಲದ ಚೆಲುವಿಗೆ…

null

ನಕ್ಕ ಹಾಗೆ ನಟಿಸಬೇಡ, ನಕ್ಕು ಬಿಡು ಸುಮ್ಮನೆ/ ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ
ನಿನ್ನೊಲವಿನ ತೆರೆಗಳಲ್ಲಿ ಬೆಳ್ದಿಂಗಳು ಹೊರಳಲಿ/ ನಿನ್ನ ಹಸಿರು ಕನಸಿನಲ್ಲಿ ಮಲ್ಲಿಗೆ ಹೂವರಳಲಿ!
ಮೈಸೂರು ಅನಂತಸ್ವಾಮಿಯವರ ಇಂಪಿಂಪು ದನಿಯಲ್ಲಿ ಈ ಹಾಡು ಕೇಳುತ್ತಿದ್ದರೆ ಮನಸ್ಸು ತಲ್ಲಣಗೊಳ್ಳುತ್ತದೆ. ನೆನಪೆಂಬುದು ಯೌವನದ ದಿನಗಳಿಗೆ ಹಾರಿ ಹೋಗುತ್ತದೆ.
ಹೌದಲ್ಲವಾ! ಆ ದಿನಗಳಲ್ಲಿ ನಮಗೆ ಒಬ್ಬಳು (ಒಬ್ಬಳೇನಾ?) ಗೆಳತಿ ಇದ್ದಳು. ಅವಳೊಂದಿಗೆ ಸಲುಗೆಯಿತ್ತು. ಅದು ಪ್ರೀತಿಯೂ ಆಗಿತ್ತು. ಅದೇ ಖುಷಿಯಲ್ಲಿ ಗೆಳತಿಯೊಂದಿಗೆ ಮಾತಿಗೆ ಕೂತು-‘ಸಾಯುವವರೆಗೂ ನಾವು ಜತೆಯಾಗಿಯೇ ಇರೋಣ. ಒಂದಾಗಿ ಬಾಳೋಣ. ಸುಖ-ದುಃಖ ಹಂಚಿಕೊಳ್ಳೋಣ. ಹುಸಿಮುನಿಸು ದೂರವಿಡೋಣ ಮತ್ತು ಜಗಳವನ್ನು ಆಡದೇ ಇರೋಣ ಎಂದು ಆಣೆ-ಪ್ರಮಾಣ ಮಾಡುತ್ತಿದ್ದೆವಲ್ಲ? ಹೀಗೆ ಮಾತಾಡಿಕೊಂಡ ತಾಸೆರಡು ತಾಸಿಗೇ ಯಾವುದೋ ಕಾರಣಕ್ಕೆ ಗೆಳತಿ ಮುನಿದು ಕೂತಾಗ, ರಾಜಿಗೆ ನಿಂತಿದ್ದೆವಲ್ಲ? ಕಡೆಗೂ ಆ ಗೆಳತಿ ಮುನಿಸು ಮರೆತು, ಹುಸಿಮುನಿಸು ತೋರುತ್ತಲೇ ಎದುರು ನಿಂತಾಗ ನಾವೆಲ್ಲರೂ ಹಾಡಿದ್ದ ಹಾಡೇ ಅದು-ನಕ್ಕ ಹಾಗೆ ನಟಿಸಬೇಡ, ನಕ್ಕು ಬಿಡು ಸುಮ್ಮನೆ, ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ!
ಜಗತ್ತಿಗೇ ಗೊತ್ತಿರುವ ಹಾಗೆ-‘ನಕ್ಕ ಹಾಗೆ ನಟಿಸಬೇಡ’ ಹಾಡು ಬರೆದವರು ಕೆ.ಎಸ್. ನರಸಿಂಹಸ್ವಾಮಿ. ಆದರೆ, ಅವರ ಬಹುಪಾಲು ಪದ್ಯಗಳನ್ನು ಓದಿದಾಗೆಲ್ಲ-ಅರೆ, ಇದು ನಮ್ಮೆದೆಯ ಪಿಸುಮಾತೇ ಅಲ್ಲವೇ? ಅದೆಷ್ಟೋ ಸಂದರ್ಭಗಳಲ್ಲಿ ‘ಒಲಿದು ಬಂದವಳ ನೆನಪಲ್ಲಿ’ ನಾವೆಲ್ಲ ಅಂಥ ಹಾಡುಗಳಲ್ಲೇ ತೇಲಿಬಂದವರಲ್ಲವೆ? ‘ಅವಳ’ ಮುಂದೆ ಮಂಡಿಯೂರಿ ಕೂತು ಬೇಡಿಕೊಂಡವರೇ ಅಲ್ಲವೆ? ನಮ್ಮೊಳಗಿನ ಹಾಡು ಅಲ್ಲೆಲ್ಲೋ ಕೂತು ಪದ್ಯ ಬರೆದ ನರಸಿಂಹಸ್ವಾಮಿಯವರಿಗೆ ಹೇಗೆ ಕೇಳಿಸಿತು? ಅಥವಾ ನಮ್ಮೊಳಗೆ ಬಂದಂಥ ಭಾವನೆ ಕೆ.ಎಸ್.ನ. ಅವರನ್ನೂ ಕಾಡಿತ್ತೇ? ಅವರು ಪ್ರತಿಯೊಂದನ್ನೂ ಅನುಭವಿಸಿ ಬರೆದರೋ ಅಥವಾ ಯಾರನ್ನೋ ಅವಾಹಿಸಿಕೊಂಡು ಬರೆದರೋ…? ಎಂಬ ಪ್ರಶ್ನೆಗಳು ಬಿಡದೆ ಕಾಡುತ್ತವೆ.
ಹೌದು. ಕೆ.ಎಸ್.ನ. ಅವರ ನಂತರ ಅವರನ್ನು ಸರಿಗಟ್ಟುವಂಥ ಇನ್ನೊಬ್ಬ ಕವಿ ಬರಲೇ ಇಲ್ಲ ಅನಿಸಿದಾಗ ಮಾತ್ರ ಅವರ ಪದ್ಯಗಳೆಲ್ಲ ‘ಅನುಭವದ ಮಲ್ಲಿಗೆಯ ತೋಟದಲ್ಲಿ’ ಅರಳಿದಂಥವೇ ಎಂಬುದು ಖಚಿತವಾಗುತ್ತದೆ. ಅವರ ಪದ್ಯಗಳು ಈಗಲೂ ನಮ್ಮ ಬದುಕಿನ ಹಾಡುಗಳೇ ಆಗಿವೆ ಎಂಬುದು ಸ್ಪಷ್ಟವಾಗುತ್ತದೆ. ಹಾಗೆ- ಅವರ ಪದ್ಯಗಳು ನಮ್ಮ ಬದುಕಿನ ಹಾಡುಗಳೇ ಆಗಿವೆ ಎಂಬುದು ನೆನಪಾದಾಗ ಮಾತ್ರ ಮನಸ್ಸು ಅನಿರ್ವಚನೀಯ ಆನಂದದ ಕಡಲಲ್ಲಿ ಮಿಂದು ಉದ್ಗರಿಸುತ್ತದೆ: ಕೆ.ಎಸ್.ನ. ಅವರಿಗೆ ನಮಸ್ಕಾರ!
***
ದೀಪವೂ ನಿನ್ನದೆ, ಗಾಳಿಯೂ ನಿನ್ನದೆ- ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ-ಮುಳುಗದಿರಲಿ ಬದುಕು
ಎಂದು ಬರೆದವರು ಕೆಎಸ್ನ. ಸ್ವಾರಸ್ಯದ ಸಂಗತಿ ಎಂದರೆ ತಮ್ಮ ಎಲ್ಲ ಪದ್ಯಗಳಿಗೂ ಅವರು ಪತ್ನಿ ವೆಂಕಮ್ಮ ಅವರನ್ನೇ ‘ನಾಯಕಿ’ ಮಾಡಿಕೊಂಡು ಬರೆದರು. ಪದ್ಯಗಳ ಸಂಖ್ಯೆ ಹೆಚ್ಚುತ್ತ ಹೋದಂತೆಲ್ಲ ಕವಿಗೂ, ಅವರ ಪತ್ನಿಗೂ ವಯಸ್ಸಾಯಿತು. ಆದರೆ ಅವರ ಪ್ರೀತಿಗೆ ವಯಸ್ಸಾಗಲಿಲ್ಲ! ಅವರ ಕಥಾನಾಯಕಿಗೂ ವಯಸ್ಸಾಗಲಿಲ್ಲ! ೮೦ರ ದಶಕದಲ್ಲಿ ಅನಂತನಾಗ್-ಲಕ್ಷ್ಮಿ ಜೋಡಿಯ ‘ಅಮರಾ ಮಧುರಾ ಪ್ರೇಮ’ದ ಸಿನಿಮಾಗಳಿದ್ದವಲ್ಲ? ಬಹುಶಃ ಬದುಕಿಡೀ ಕೆಎಸ್ನ-ವೆಂಕಮ್ಮ ದಂಪತಿ ಹಾಗೇ ಬದುಕಿದರು.
ಅವರು ಪರಸ್ಪರರ ಮೇಲೆ ಸಿಡುಕಿದ್ದು ಯಾರಿಗೂ ಗೊತ್ತಾಗಲಿಲ್ಲ. ಸಂಕಟದ ಸಂದರ್ಭದಲ್ಲಿ ಇಬ್ಬರೂ ಬಿಕ್ಕಳಿಸಿದರು ನಿಜ. ಆಗಲೂ ಸದ್ದಾಗಲಿಲ್ಲ. ಆದರೆ, ಒಂದೊಂದು ಹೊಸ ಪದ್ಯದಲ್ಲೂ ಅವರ ದಾಂಪತ್ಯದ ನರುಗಂಪಿತ್ತು. ಕೆಎಸ್ನ ಅವರಿಗೆ ತಮ್ಮ ಪತ್ನಿಯ ಮೇಲೆ ಅದೆಂಥ ಮೋಹವಿತ್ತೆಂದರೆ-ಅವರು ಕನಸಿನಲ್ಲಿ ಸಹ ಆಕೆಯನ್ನೇ ಬಯಸಿದರು.
ಆಕೆಯೊಂದಿಗೇ ಮಾತಾಡಿದರು. ಅದನ್ನೇ ‘ಒಂದಿರುಳ ಕನಸಿನಲಿ ನನ್ನವಳ ಕೇಳಿದೆನು’ ಎಂದು ಬರೆದೂ ಬಿಟ್ಟರು! ಅದೊಂದು ಸಂದರ್ಭದಲ್ಲಿ, ಮಾಸ್ತಿ ಅವರ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ಕೆ.ಎಸ್.ನ.-‘ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು’ ಕವನ ಓದಿದಾಗ ಮಾಸ್ತಿ ‘ಎಂಥ ಮುಗ್ಧನಪ್ಪಾ ನೀನು? ಕನಸಿನಲ್ಲೂ ನಿನ್ನ ಹೆಂಡತಿಯೇ ಬೇಕೆ?’ ಎಂದು ತಮಾಷೆ ಮಾಡಿದ್ದರಂತೆ!
ಪ್ರಾಮಾಣಿಕವಾಗಿ ಒಪ್ಪಿಕೊಳ್ಳೋಣ: ಕನಸಿನಲ್ಲಿ ಹೆಂಡತಿಯ ಬದಲು ಬೇರೆ ಹೆಂಗಸೇ ಬರಲಿ ಎಂಬುದು ನಮ್ಮ ನಿಮ್ಮೆಲ್ಲರ ಕಳ್ಳ ಆಸೆ. ಆದರೆ ಕನಸಿನಲ್ಲೂ ಹೆಂಡತಿಯನ್ನೇ ಬಯಸಿದರಲ್ಲ ಕೆಎಸ್ನ? ಅವರು ಗ್ರೇಟ್ ಮತ್ತು ಗ್ರೇಟೆಸ್ಟ್ ಅನ್ನಲು ಮತ್ಯಾವ ಸಾಕ್ಷಿ ಬೇಕು?
ಕವಿಯಾಗಿದ್ದ ಅಷ್ಟೂ ದಿನ ಕೆಎಸ್ನ ಯಾವ ಪಂಥಕ್ಕೂ ಸೇರಲಿಲ್ಲ. ಯಾರನ್ನೋ ಮೆಚ್ಚಿಸಲು ಬರೆಯಲಿಲ್ಲ. ಅಷ್ಟೇ ಅಲ್ಲ, ಆರು ದಶಕಗಳ ಕಾವ್ಯಯಾತ್ರೆಯಲ್ಲಿ ಪ್ರೀತಿಯ ವಿಷಯ ಬಿಟ್ಟು ಬೇರೇನನ್ನೂ ಬರೆಯಲಿಲ್ಲ. ಒಂದೆರಡು ಸಂದರ್ಭಗಳಲ್ಲಿ ಅವರ ವಾರಿಗೆಯ ಕವಿಮಿತ್ರರು, ಗಂಡ-ಹೆಂಡತಿಯ ಸರಸ-ಸಲ್ಲಾಪವನ್ನೇ ಅದೆಷ್ಟು ದಿನಾಂತ ಬರೀತೀರಿ? ಬೇರೆ ಏನಾದ್ರೂ ಯೋಚಿಸಿ ಅಂದರಂತೆ! ಆಗ ಕೂಡ ಕೆಎಸ್ನರ ಕಾವ್ಯಸ ವಸ್ತು-ಧಾಟಿ ಬದಲಾಗಲಿಲ್ಲ.
ಇತ್ತ, ಬುದ್ಧಿ ಹೇಳಿದವರೂ ತೆಪ್ಪಗಿರಲಿಲ್ಲ. ಕೆಎಸ್ನರನ್ನು ರೇಗಿಸಿದರು. ಪದ್ಯ ಬರೆದು ಟೀಕಿಸಿದರು. ‘ಯಾವಾಗ್ಲೂ ಅದೇ ಹೂವು, ಚಂದ್ರ, ಮಲ್ಲಿಗೆಯ ಕುರಿತೇ ಬರೀತಾನಲ್ಲಪಾ, ಅವನ ಅನುಭವ ತೆಳವು’ ಅಂದೂಬಿಟ್ಟರು. ಈವಾಗಿನ ಕವಿಗಳಾಗಿದ್ದರೆ ಒಂದು ಪತ್ರಿಕಾಗೋಷ್ಠಿ ಕರೆದು ಟೀಕಿಸಿದವರ ಜನ್ಮ ಜಾಲಾಡುತ್ತಿದ್ದರೋ ಏನೋ?
ಆದರೆ ಕೆಎಸ್ನ ಹಾಗೆ ಮಾಡಲಿಲ್ಲ, ಬದಲಿಗೆ-‘ಇವನ ಅನುಭವ ತೆಳುವು’ ಎಂದ ಟೀಕೆಗೆ ನಕ್ಕೆ/ ಎಂಟು ಮಕ್ಕಳು ನನಗೆ, ಉತ್ತರಿಸಿದೆ/ ಅಂದವರ ಬಾಯಿಗಿದೊ ನಾನು ಬೇವಿನ ಚಕ್ಕೆ/ ನನ್ನ ದನಿಯನು ಕೂಡ ಎತ್ತರಿಸಿದೆ’ ಎಂದು ಬರೆದರು!
****
ಬದುಕಿದ್ದಿದ್ದರೆ ಜನವರಿ ೨೬ಕ್ಕೆ ಕೆಎಸ್ನ ಅವರಿಗೆ ೯೫ ತುಂಬುತ್ತಿತ್ತು. ಪ್ರತಿ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲೂ ‘ನನ್ನ ಬರ್ತ್ಡೇನ ಇಡೀ ದೇಶವೇ ಆಚರಿಸುತ್ತೆ’ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಅವರು, ಒಂದು ಒಳ್ಳೆಯ ಪದ್ಯ ಬರೆದು ಮರುಕ್ಷಣವೇ ಇನ್ನೊಂದು ಪದ್ಯ ಕುರಿತು ಧ್ಯಾನಿಸುತ್ತಿದ್ದರು. ಕೆಎಸ್ನ ಅವರೊಳಗಿದ್ದ ಕವಿ ಅದೆಷ್ಟು ದೂರದೃಷ್ಟಿ ಹೊಂದಿದ್ದ ಅಂದರೆ- ಅವರು ನಾಲ್ಕು ದಶಕಗಳ ಹಿಂದೆ ಬರೆದ ಪದ್ಯಗಳೇ ಇಂದಿನ ತರುಣ-ತರುಣಿಯರ ಎದೆಯಾಳದ ಹಾಡಾಗಿವೆ. ಅವರ ದಾಂಪತ್ಯ ಗೀತೆ ಮನೆ ಮನೆಯ ಮಾತಾಗಿದೆ. ಅವರ ಕವನಗಳಲ್ಲಿನ ಕೋರಿಕೆ ಎಲ್ಲ ಪ್ರೇಮಾತ್ಮಗಳ ಮನದ ಬೇಡಿಕೆಯೂ ಆಗಿದೆ!
ಕೆಎಸ್ನ ಈಗ ನಮ್ಮೊಂದಿಗಿಲ್ಲ ಅಂದರೆ, ಲೋಕ ಒಪ್ಪುವುದಿಲ್ಲ. ಎಲ್ಲಿಯವರೆಗೆ ಈ ಜಗತ್ತಿನಲ್ಲಿ ಮಲ್ಲಿಗೆಯ ಕಂಪು, ಒಲವಿನ ಮಾಧುರ್ಯ, ಪಿಸುಮಾತಿನ ಸಂವೇದನೆ, ಪ್ರೀತಿಯ ಮನಸುಗಳ ಕಲರವ ಇರುತ್ತದೋ ಅಲ್ಲಿಯವರೆಗೂ ಕೆಎಸ್ನ ಇದ್ದೇ ಇರುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಹೆಂಡತಿಯನ್ನು ನೆನೆದು-‘ನೆನೆಯುತ್ತ ನಿನಗಲ್ಲಿ ತುಂಬು ನಿದ್ದೆಯು ಬರಲಿ/ ಹೊಂಗನಸು ನಿದ್ದೆಯಲಿ ಕಂಡು ಬರಲಿ/ ನೀ ಮುಡಿದ ಹೂವು ಬಾಡದೆ ಇರಲಿ, ಸುಖವಿರಲಿ/ ನಿನ್ನೊಲವೆ ನಿನ್ನನ್ನು ಕಾಪಾಡಲಿ’ ಎಂದು ಬರೆದವರು ಅವರು.
ಅವರನ್ನು ‘ನಿನ್ನ ಪ್ರೀತಿಗೆ ಅದರ ರೀತಿಗೆ/ ಕಣ್ಣ ಹನಿಗಳೆ ಕಾಣಿಕೆ/ ಕಾಲವಳಿಸದ ನೆಲದ ಚಲುವಿಗೆ/ ನಿನ್ನ ಪ್ರೀತಿಯೆ ಹೋಲಿಕೆ’ ಎಂಬ ಅವರದೇ ಪದ್ಯದೊಂದಿಗೆ ನೆನಪಿಸಿಕೊಂಡು ನಮಸ್ಕರಿಸೋಣ…

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: