ಹಂಸಲೇಖಾರ ಕೈಕುಲುಕಿದ ಎಸ್ಪಿ- ಮೀರು ಪಾಟು ಚಾಲಾ ಭಾಗಾ ರಾಸಾರು ಎಂದಿದ್ದರು!

photos

ಈ ಭೂಮಿ ಬಣ್ಣದ ಬುಗುರಿ…
ಚಿತ್ರ: ಮಹಾಕ್ಷತ್ರಿಯ, ಸಾಹಿತ್ಯ-ಸಂಗೀತ: ಹಂಸಲೇಖ,
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ.

ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೋ
ಈ ಬಾಳು ಸುಂದರ ನಗರಿ
ನೀನದರ ಮೇಟಿ ಕಣೋ…
ನಿಂತಾಗ ಬುಗುರಿಯ ಆಟ
ಎಲ್ಲಾರೂ ಒಂದೇ ಓಟ
ಕಾಲ ಕ್ಷಣಿಕ ಕಣೋ… ||ಪ||

ಮರಿಬೇಡ ತಾಯಿಯ ಋಣವ
ಮರಿಬೇಡ ತಂದೆಯ ಒಲವ
ಹಡೆದವರೆ ದೈವ ಕಣೋ
ಸುಖವಾದ ಭಾಷೆಯ ಕಲಿಸೊ
ಸರಿಯಾದ ದಾರಿಗೆ ನಡೆಸೊ
ಸಂಸ್ಕೃತಿಯೇ ಗುರುವು ಕಣೋ
ಮರೆತಾಗ ಜೀವನ ಪಾಠ
ಕೊಡುತಾನೆ ಚಾಟಿಯ ಏಟ
ಕಾಲ ಕ್ಷಣಿಕ ಕಣೋ ||೧||

ಮರಿಬೇಡ ಮಗುವಿನ ನಗುವ
ಕಳಿಬೇಡ ನಗುವಿನ ಸುಖವ
ಭರವಸೆಯೆ ಮಗುವು ಕಣೊ
ಕಳಬೇಡ ಕೊಲ್ಲಲು ಬೇಡ
ನೀ ಹಾಡು ಶಾಂತಿಯ ಹಾಡ
ಜೀವನವೇ ಪ್ರೀತಿ ಕಣೋ
ನಿಂತಾಗ ಬುಗುರಿಯ ಆಟ
ಎಲ್ಲಾರೂ ಒಂದೇ ಓಟ
ಕಾಲ ಕ್ಷಣಿಕ ಕಣೋ ||೨||
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಮಹಾಕ್ಷತ್ರಿಯ’ ಚಿತ್ರದ ಆ ಸನ್ನಿವೇಶವನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ವ್ಯವಸ್ಥೆಯ ವಿರುದ್ಧ ಆಲೋಚಿಸುವ ನಾಲ್ವರು ಪ್ರಧಾನಮಂತ್ರಿಯ ಮಗಳನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿ ವಿಫಲರಾಗಿರುತ್ತಾರೆ. ಈ ಕಾರಣಕ್ಕೇ ಜೈಲು ಪಾಲಾಗಿರುತ್ತಾರೆ. ಅವರಿಗೆ ಪ್ರೀತಿ, ಮಮತೆ, ಬಾಂಧವ್ಯ, ಅನುಕಂಪ, ಸ್ನೇಹ, ಬದುಕಿನ ನಶ್ವರತೆ… ಉಹುಂ, ಈ ಯಾವುದರ ಪರಿಚಯವೂ ಇರುವುದಿಲ್ಲ.
ಇಂಥವರ ಮನಸ್ಥಿತಿಯನ್ನು ಬದಲಿಸುವ ದೃಷ್ಟಿಯಿಂದ ನಾಯಕ, ಅವರನ್ನು ಜೈಲಿನಿಂದ ತಪ್ಪಿಸಿಕೊಳ್ಳುವಂತೆ ಮಾಡುತ್ತಾನೆ. ನಂತರ ಎಲ್ಲರನ್ನೂ ಒಂದು ಪ್ರಶಾಂತ ವಾತಾವರಣದ ಜಾಗಕ್ಕೆ ಕರೆತರುತ್ತಾನೆ. ಅದೇ ಜಾಗಕ್ಕೆ ಆ ನಾಲ್ವರ ತಾಯಿ-ತಂದೆಯರನ್ನೂ ಕರೆಸಿ, ಈ ಜನ ಕಳೆದುಕೊಂಡಿದ್ದ ಕೌಟುಂಬಿಕ ಪ್ರೀತಿಯನ್ನು ಮತ್ತೆ ದೊರಕಿಸುವ ಮೂಲಕ ಅವರಲ್ಲಿ ಬದಲಾವಣೆ ತರಲು ಯತ್ನಿಸುತ್ತಿರುತ್ತಾನೆ. ಆ ಸಂದರ್ಭದಲ್ಲಿ, ಬಾಳಿನ ಪಾಠವನ್ನು, ಕೆಡುಕಿನಿಂದಾಗುವ ಅನಾಹುತವನ್ನು, ತಂದೆ-ತಾಯಿ, ಬದುಕು-ಬಾಂಧವ್ಯದ ಮಹತ್ವವನ್ನು ಅವರಿಗೆ ತಿಳಿಸಬೇಕು ಅಂದುಕೊಂಡಾಗಲೇ ಈ ಅಮರಾ ಮಧುರಾ ಹಾಡು ಕೇಳಿಬರುತ್ತದೆ: ‘ಈ ಭೂಮಿ ಬಣ್ಣದ ಬುಗುರಿ/ ಆ ಶಿವನೇ ಚಾಟಿ ಕಣೋ/ ಈ ಬಾಳು ಸುಂದರ ನಗರಿ/ ನೀನದರ ಮೇಟಿ ಕಣೋ…’
ಹೌದಲ್ಲವಾ? ಈ ಹಾಡಿನಲ್ಲಿ ಬುದ್ಧಿಮಾತಿದೆ. ವೇದಾಂತವಿದೆ. ತಿಳಿವಳಿಕೆಯಿದೆ. ತಪ್ಪು ಮಾಡಬಾರದು ಎಂಬ ಎಚ್ಚರಿಕೆಯಿದೆ. ಈ ಬದುಕೆಂಬುದೇ ಒಂದು ಮಾಯಾ ಬಜಾರ್. ಇದ್ದಷ್ಟು ದಿನ ಹತ್ತು ಮಂದಿಗೆ ಉಪಕಾರಿಯಾಗಿ ಬದುಕಬೇಕು ಎಂಬ ಸಂದೇಶವೂ ಇದೆ. ಇಂಥದೊಂದು ಹಾಡನ್ನು ಹಂಸಲೇಖ, ಒಂದು ಹೋಟೆಲಿನಲ್ಲಿ ನಿಂತು, ಕೇವಲ ಐದೇ ನಿಮಿಷದಲ್ಲಿ ಹೇಳುತ್ತ ಹೇಳುತ್ತಲೇ ಬರೆದುಬಿಟ್ಟರು ಎಂದರೆ ನಂಬುತ್ತೀರಾ?
ನಂಬಲೇಬೇಕು. ಏಕೆಂದರೆ ನಿಜ. ಸ್ವಾರಸ್ಯವೆಂದರೆ, ಹಾಡು ಸೃಷ್ಟಿಯಾದ ಸಂದರ್ಭಕ್ಕೆ ಸಾಕ್ಷಿಯಾಗಿದ್ದವರು ‘ಲಹರಿ’ ರೆಕಾರ್ಡಿಂಗ್ ಕಂಪನಿಯ ಮಾಲೀಕರಾದ ಮನೋಹರ ನಾಯ್ಡು ಹಾಗೂ ವೇಲು. ಈ ‘ಹಾಡು ಹುಟ್ಟಿದ ಸಮಯ’ವನ್ನು ವೇಲು ರಸವತ್ತಾಗಿ ವರ್ಣಿಸುತ್ತಾರೆ. ಅದನ್ನೆಲ್ಲ ಅವರಿಂದಲೇ ಕೇಳಿದರೆ ಚೆಂದ. ಓವರ್ ಟು ವೇಲು.
* * *
‘ಅದು ೧೯೯೨ರ ಮಾತು. ಹಂಸಲೇಖಾ ಆಗ ಖ್ಯಾತಿಯ ತುತ್ತತುದಿಯಲ್ಲಿದ್ದರು. ಅವರು ಬರೆದ ಹಾಡುಗಳೆಲ್ಲಾ ಸೂಪರ್ ಹಿಟ್ಟೇ ಎನ್ನುವಂತಿದ್ದ ಕಾಲ ಅದು. ಅದೇ ಸಮಯಕ್ಕೆ ನಮ್ಮ ಅಣ್ಣ ಮನೋಹರ ನಾಯ್ಡು ಅವರು ‘ಇನ್ಮುಂದೆ ನಾವೂ ವರ್ಷಕ್ಕೆ ಮೂರು ಸಿನಿಮಾ ನಿರ್ಮಿಸೋಣ’ ಅಂದರು. ಆ ಪ್ರಕಾರ ಲಹರಿ ಸಂಸ್ಥೆ ನಿರ್ಮಿಸಲು ಹೊರಟ ಮೊದಲ ಚಿತ್ರವೇ ‘ಮಹಾಕ್ಷತ್ರಿಯ’. ಕಥೆಯ ಚರ್ಚೆ ನಡೆಯಿತು. ಅದನ್ನು ಒಪ್ಪಿದ್ದೂ ಆಯ್ತು. ಹಾಡುಗಳ ಧ್ವನಿಮುದ್ರಣ ಆಗಬೇಕಿತ್ತು. ಅದಕ್ಕೂ ಮುಂಚೆ ಹಂಸಲೇಖಾ ಅವರೊಂದಿಗೆ ಇದೇ ವಿಷಯವಾಗಿ ಮಾತಾಡಲು ರೇಸ್ಕೋರ್ಸ್ ರಸ್ತೆಯಲ್ಲಿರುವ ರೇಸ್ವ್ಯೂ ಹೋಟೆಲ್ಲಿಗೆ ಹೋದ್ವಿ. ಅಲ್ಲಿ ಹಂಸಲೇಖ, ಯಾವುದೋ ಹಾಡಿನ ಚರ್ಚೆಯಲ್ಲಿದ್ರು.
ಮಾತಿಗೆ ಕುಳಿತಾಗ ನಮ್ಮಣ್ಣ ಮನೋಹರ ನಾಯ್ಡು ಹೇಳಿದರು: ‘ಸಾರ್, ‘ಮಹಾಕ್ಷತ್ರಿಯ’ ಚಿತ್ರದ ಹಾಡುಗಳ ಬಗ್ಗೆ ಮಾತಾಡಲು ಬಂದಿದೀವಿ. ನಮ್ದು ಮೊದಲೇ ಆಡಿಯೋ ಕಂಪನಿ. ಲಹರಿ ಅಂದ್ರೇನೇ ಮಧುರ ಹಾಡುಗಳು ಅಂತ ಹೆಸರಿದೆ. ಈಗ ನಾವೇ ನಿರ್ಮಾಣಕ್ಕೂ ಇಳಿದಿದ್ದೀವಲ್ಲ, ಜನರ ನಿರೀಕ್ಷೆ ಕೂಡ ದೊಡ್ಡದಿರುತ್ತೆ. ಹಾಗಾಗಿ ತುಂಬ ಆಸೆಯಿಂದ ಕೇಳ್ತಾ ಇದೀನಿ. ಹಾಡುಗಳು ಮತ್ತು ಸಂಗೀತ- ಎರಡೂ ಅದ್ಭುತವಾಗಿರಬೇಕು ಸಾರ್. ನಾವು ಎಷ್ಟು ವರ್ಷ ಇರ್ತೀವೋ ಗೊತ್ತಿಲ್ಲ. ಆದ್ರೆ ನಮ್ಮ ನಂತರ ಕೂಡ ನಮ್ಮ ಸಿನಿಮಾದ ಹಾಡು ಇರಬೇಕು’ ಅಂದರು. ನಾನು ಮಧ್ಯೆ ಬಾಯಿ ಹಾಕಿ ‘ಸಾಹೇಬರೆ, ಅಣ್ಣಾವ್ರು ನಟಿಸಿರುವ ‘ಕಸ್ತೂರಿ ನಿವಾಸ’ದ ‘ಆಡಿಸಿ ನೋಡು ಬೀಳಿಸಿ ನೋಡು…’ ಹಾಡಿದೆಯಲ್ಲ? ಅಂಥದೊಂದು ಹಾಡು ನಮಗೆ ಬೇಕು’ ಅಂದೆ..
ನಮ್ಮ ಮಾತು ಕೇಳಿದ ಹಂಸಲೇಖ ಕುಳಿತಲ್ಲಿಂದ ಮೇಲೆದ್ದರು. ನಂತರ ತಮ್ಮಷ್ಟಕ್ಕೆ ತಾವೇ, ಈ ಬೆಂಗಳೂರೆಂಬುದು ಉದ್ಯಾನನಗರಿ, ಟ್ರಾಫಿಕ್ ನಗರಿ, ಶಬ್ದ ನಗರಿ ಎಂದು ತಮಾಷೆಯಾಗಿ ಹೇಳುತ್ತ ಹೋಟೆಲ್ ರೂಮಿನ ಕರ್ಟನ್ ಸರಿಸಿದರು. ಎದುರಿಗೆ ಕಂಡದ್ದು ಹಚ್ಚ ಹಸುರಿನ ರೇಸ್ಕೋರ್ಸ್. ಆ ಕ್ಷಣದಲ್ಲೇ ತಮ್ಮಷ್ಟಕ್ಕೆ ತಾವೇ ಏನೋ ಗುನುಗಿಕೊಂಡ ಹಂಸಲೇಖ, ಎರಡು ನಿಮಿಷದ ನಂತರ- ‘ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ…’ ಎಂದರು. ನಂತರ ನನ್ನತ್ತ ನೋಡಿ- ಈ ಬಾಳು ಸುಂದರ ನಗರಿ, ನೀನದರ ಮೇಟಿ ಕಣೋ’ ಅಂದರು. ಹಾಗೇ ನಮ್ಮ ಅಣ್ಣನ ಕಡೆ ನೊಡ್ತಾ- ‘ನಿಂತಾಗ ಬುಗುರಿಯ ಆಟ, ಎಲ್ಲಾರೂ ಒಂದೇ ಓಟ, ಕಾಲ ಕ್ಷಣಿಕ ಕಣೋ…’ ಅಂದುಬಿಟ್ಟರು. ಅವರ ದಿಢೀರ್ ಹಾಡುಗಾರಿಕೆಯಿಂದ ನಾವಿಬ್ಬರೂ ಬೆರಗಾಗಿ ನಿಂತಿದ್ದಾಗಲೇ ಅದೇ ಲಹರಿಯಲ್ಲಿ ತೇಲಿಹೋಗಿ ಇಡೀ ಹಾಡಿನ ಒಂದೊಂದೇ ಸಾಲು ಹೇಳಿಬಿಟ್ಟರು!
ನಾವಿಬ್ಬರೂ ಬೆಕ್ಕಸಬೆರಗಾಗಿ ನಿಂತೇ ಇದ್ದೆವು. ಆಗಲೇ- ‘ಹೇಗಿದೆ ಹಾಡು’ ಅಂದರು ಹಂಸಲೇಖ. ನಾನು ಭಾವೋದ್ವೇಗದಿಂದ- ’ಸಾರ್, ಹಾಡು ಸೂಪರ್ ಹಿಟ್ ಆಗುತ್ತೆ’ ಅಂದೆ. ಹಂಸಲೇಖ ನಗುತ್ತ- ‘ಅರೆ, ಇದೇನಯ್ಯ ಹೀಗೆ ಹೇಳ್ತಿದೀಯ? ಇನ್ನೂ ನಾನು ಹಾಡಿಗೆ ಫೈನಲ್ ಶೇಪ್ ನೀಡಿಲ್ಲ. ಟ್ಯೂನ್ ಹಾಕಿಲ್ಲ. ಮ್ಯೂಸಿಕ್ ಕೊಟ್ಟಿಲ್ಲ. ಟ್ರಾಕ್ನಲ್ಲೂ ಹಾಡಿಸಿಲ್ಲ. ಹಾಗಿದ್ರೂ ನೀನು ಸೂಪರ್ಹಿಟ್ ಆಗುತ್ತೆ ಅಂತಿದೀಯಲ್ಲ?’ ಅಂದರು. ‘ನನ್ನ ಕಿವಿ ನನಗೆ ಭವಿಷ್ಯ ಹೇಳಿದೆ ಸಾಹೇಬ್ರೇ’ ಅಂದೆ. ನಕ್ಕು ಸುಮ್ಮನಾದರು ಹಂಸಲೇಖ.
ಮುಂದೆ ಬೆಂಗಳೂರಿನ ಪ್ರಸಾದ್ ಸ್ಟುಡಿಯೋದಲ್ಲಿ ಹಾಡಿನ ಧ್ವನಿಮುದ್ರಣ ಆಯ್ತು. ಹಾಡಿ ಮುಗಿಸಿದ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಹಂಸಲೇಖ- ಚಾಲಾ ಬಾಗುಂದಿ ಗುರುಗಾರು (ಬಹಳ ಚನ್ನಾಗಿದೆ ಗುರುಗಳೆ) ಅಂದರು. ಅದಕ್ಕೆ ಎಸ್ಪಿ- ಮೀರು ಪಾಟು ಚಾಲಾ ಭಾಗಾ ರಾಸಾರು’ (ನೀವು ಚೆನ್ನಾಗಿ ಹಾಡು ಬರೆದಿದ್ದೀರಿ) ಅಂದರು. ತಕ್ಷಣವೇ ನನ್ನತ್ತ ಕೈ ಮಾಡಿದ ಹಂಸಲೇಖ- ‘ಎಲ್ಲಾ ಇವನ ಬಲವಂತಕ್ಕಪ್ಪಾ’ ಅಂದರು.
ಸ್ವಾರಸ್ಯವೆಂದರೆ, ಈ ಹಾಡಿನ ದೃಶ್ಯಕ್ಕೆ ಮೊದಲು ವಿಷ್ಣುವರ್ಧನ್ ಅವರು ಬುಗುರಿ ಆಡಿಸುವ ಸನ್ನಿವೇಶ ಇರಲಿಲ್ಲ. ಬರೀ ಹಾಡಿತ್ತು. ಆದರೆ, ಹಾಡಿನಲ್ಲಿ ’ಈ ಭೂಮಿ ಬಣ್ಣದ ಬುಗುರಿ’ ಎಂಬ ಸಾಲು ನೋಡಿದ ರಾಜೇಂದ್ರ ಸಿಂಗ್ ಬಾಬು ವಿಷ್ಣುವರ್ಧನ್ ಅವರಿಂದ ಬುಗುರಿ ಆಡಿಸುವ ದೃಶ್ಯ ಅಳವಡಿಸಿದರು. (ಬಹುಶಃ ವಿಷ್ಣುವರ್ಧನ್ ಅವರು ಸಿನಿಮಾಕ್ಕಾಗಿ ಬುಗುರಿ ಆಡಿಸಿರೋದು ಇದೊಂದೇ ಚಿತ್ರವೇನೋ) ಮೊದಲು ಗಿರಗಿರಗಿರನೆ ತಿರುಗುವ ಬುಗುರಿ- ‘ನಿಂತಾಗ ಬುಗುರಿಯ ಆಟ’ ಎಂಬ ಸಾಲು ಬರುವ ವೇಳೆಗೆ ಕುಂಬಳಕಾಯಿ ಥರಾ ವಾಲಾಡಿಕೊಂಡು ನಿಂತು ಹೋಗುವಂತೆ ಚಿತ್ರಿಸಿ, ಬುಗುರಿಯ ‘ತಿರುಗಾಟ’ ಯೌವನ ಮತ್ತು ಮುಪ್ಪಿನ ಸಂಕೇತವೆಂಬಂತೆ ತೋರಿಸಿ, ಆ ದೃಶ್ಯದ ತೀವ್ರತೆಯನ್ನು ಹೆಚ್ಚಿಸಿದರು.
ಈ ಹಾಡಿನ ಶೂಟಿಂಗ್ ನಡೆದದ್ದು ಮಡಿಕೇರಿಯಲ್ಲಿ. ಶೂಟಿಂಗ್ ನಡೆದ ಅಷ್ಟೂ ದಿನ ಚಿತ್ರತಂಡದವರೆಲ್ಲ ನಿಂತಲ್ಲಿ ಕೂತಲ್ಲಿ ಗುನುಗಿದ್ದು ಇದೇ ಹಾಡನ್ನು. ಇದನ್ನು ಗಮನಿಸಿದ ವಿಷ್ಣುವರ್ಧನ್ ಅವರು: ‘ವೇಲು, Definetly this song will be superhit I say..’ ಎಂದು ಭವಿಷ್ಯ ನುಡಿದಿದ್ದರು. ಮುಂದೆ ಅವರ ಮಾತು ನಿಜವಾಯ್ತು. ‘ಮಹಾಕ್ಷತ್ರಿಯ’ ಸೂಪರ್ಹಿಟ್ ಆಗಲಿಲ್ಲ ನಿಜ. ಆದರೆ ಆ ಹಾಡು ಸೂಪರ್ಹಿಟ್ ಆಯ್ತು. ‘ಬದುಕೆಂದರೆ ಏನು, ನಾವು ಹೇಗೆ ಬದುಕಬೇಕು’ ಎಂಬ ಪಶೆಗೆ ಒಂದು ಹಾಡಿನಿಂದ ಉತ್ತರ ಕೊಡಿಸಿದ ಸಂಭ್ರಮ ನಮ್ಮದಾಯ್ತು…’ ಇಷ್ಟು ಹೇಳಿ, ಮೌನವಾದರು ವೇಲು.
ಒಂದೆರಡು ನಿಮಿಷದ ನಂತರ ಎಫ್ಎಂನಲ್ಲಿ ಅದೇ ಹಾಡು ಅಮ್ಮನ ಜೋಗುಳದಂತೆ, ಕಂದನ ಕಿಲಕಿಲದಂತೆ, ಗೆಳತಿಯ ಮುಗುಳ್ನಗೆಯಂತೆ ಕೇಳತೊಡಗಿತು: ‘ಈ ಭೂಮಿ ಬಣ್ಣದ ಬುಗುರಿ…’

Advertisements

4 Comments »

 1. 2
  guru Says:

  namaskara sir,

  nimma blog tumba chennagide.. nanage beegara pandya chitrada,
  ” MANASU HELA BAYASIDE NOORONDU” e haadina bagge tiliyuva kootohala.. e haadu nanna achchu mechchina haadu, P. Susheela amma avru tumba chennag haadidare.. dayavittu e haadina bagge nimma blognalli tilisikodabekagi vinanthisuthene.. saahityavannu bareyabekagi vinanthi…

  dhanyavaadagalu,

  guru

  • 3
   umesh vl Says:

   Haadina sahitya illide…. Haadina hinnale nanagu astu sariyagi thilidilla

   — Umesh vl

   manasu hela bayaside noorondu
   tutiya mele baaradide maathondu
   nenapu nooru edeyali
   agalikeya novali
   vidaaya geleyane, vidaaya gelathiye
   vidaaya hela bandiruve naanindu…

   hagalu raatri hakkiya haage haari meredevu
   nagu ennuva aleya mele teli nalidevu
   hrudayagala besugeyaagi
   sneha bandha amaravaagi
   naale ennuva chinte maretu haadi kunidevu
   aa kaala kaledide… doorago samayade…
   vidaaya hela bandiruve naanindu…

   neenu bere, naanu bere, hego berethevu
   namma namma oppu tappu ella arithevu
   e dinava mareyabeda, namma sneha toreyabeda
   daari bereyaadarenu preeti uliyali
   naa elle iddaru, nee hege iddaru
   nee naale kelabeda nanna yaarendu….

   manasu haela bayaside noorondu
   tutiya mele baaradide maathondu….


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: