ಹಲವರನ್ನು ಕಾಯ್ದ ಶಿವ ಹಾಡು ಬರೆದವನಿಗೆ ಹಸಿವೆ ನೀಡಿದ!

untitled1

ಶಿವಪ್ಪ ಕಾಯೋ ತಂದೆ…
ಚಿತ್ರ: ಬೇಡರ ಕಣ್ಣಪ್ಪ. ಗೀತೆರಚನೆ: ಲಾವಣಿ ನಂಜಪ್ಪ
ಗಾಯನ: ಸಿ.ಎಸ್. ಜಯರಾಮನ್, ಸಂಗೀತ: ಆರ್. ಸುದರ್ಶನಂ.

ಶರಣು ಶಂಕರ ಶಂಭೋ… ಓಂಕಾರ ನಾದ ರೂಪಾ…
ಮೊರೆಯ ನೀ ಆಲಿಸೀ ಪಾಲಿಸೋ ಸರ್ವೇಶಾ…

ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ ಕಾಪಾಡೆಯಾ- ಹರನೇ
ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವಾ
ಹಸಿವೆಯನ್ನು ತಾಳಲಾರೆ ಕಾಪಾಡೆಯಾ ||ಪ||

ಭಕ್ತಿಯಂತೆ ಪೂಜೆಯಂತೆ ಒಂದು ಅರಿಯೆ ನಾ
ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ ||೧||

ಶುದ್ಧನಾಗಿ ಪೂಜೆಗೈಯೆ ಒಲಿವೆಯಂತೆ ನೀ
ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ
ನಾದವಂತೆ ವೇದವಂತೆ ಒಂದೂ ತಿಳಿಯೆ ನಾ
ಬೆಂದ ಜೀವ ನೊಂದು ಕೂಗೆ ಬಂದು ನೋಡೆಯಾ ||೨||

ಏಕಚಿತ್ತದಿ ನಂಬಿದವರ ನೀ ಸಾಕಿ ಸಲಹುವೆಯಂತಪ್ಪ
ಶೋಕವ ಹರಿಸುವ ದೇವ ನೀನಾದರೆ
ಬೇಟೆಯ ತೋರೋ ಎನ್ನಪ್ಪ
ಲೋಕವನಾಳುವ ನೀನಪ್ಪ
ಬೇಟೆಯ ತೋರೋ ಎನ್ನಪ್ಪ
ಬೇಟೆಯ ತೋರೋ ಎನ್ನಪ್ಪ
ಬೇಟೆಯ ತೋರೋ ಎನ್ನಪ್ಪ

‘ಹಸಿದವರ ಹಾಡು’ ಎಂದಾಕ್ಷಣ ನೆನಪಿಗೆ ಬರುವುದೇ ‘ಬೇಡರ ಕಣ್ಣಪ್ಪ’ ಸಿನಿಮಾದ ‘ಶಿವಪ್ಪ ಕಾಯೋ ತಂದೆ…’ ಈ ಹಾಡಿನಲ್ಲಿ ಪ್ರಾರ್ಥನೆಯಿದೆ. ಯಾಚನೆಯಿದೆ. ಹಸಿವೆಯಿದೆ. ಸಂಕಟವಿದೆ. ಕಂಡೂ ಕಾಣದಂಥ ಆಗ್ರಹವಿದೆ. ಹಸಿದವರ ನಿಟ್ಟುಸಿರಿದೆ. ಬಹಳಷ್ಟು ಸಂದರ್ಭದಲ್ಲಿ- ಈ ಹಾಡಿನಲ್ಲಿ ನಮ್ಮೆಲ್ಲರ ದನಿಯೂ ಇದೆಯಲ್ಲ ಅನ್ನಿಸಿ, ಖುಷಿಯೂ, ಅಚ್ಚರಿಯೂ, ದುಃಖವೂ ಏಕಕಾಲಕ್ಕೇ ಆಗಿಬಿಡುತ್ತದೆ. ಈ ಕಾರಣದಿಂದಲೇ ಈ ಹಾಡು ಹೇಳಿದವರಿಗೆ ‘ಭಿಕ್ಷೆ’ ಹಾಕಬೇಕು ಎಂದು ಮನಸ್ಸಾಗುತ್ತದೆ.
ಇವತ್ತಿಗೂ ಅದೆಷ್ಟೋ ಸಾವಿರ ಭಿಕ್ಷುಕರ ಹೊಟ್ಟೆ ತುಂಬಿಸುತ್ತಿರುವುದು ‘ಶಿವಪ್ಪ ಕಾಯೋ ತಂದೆ…’ ಹಾಡಿನ ಹೆಚ್ಚುಗಾರಿಕೆ. ರಾಜ್ಕುಮಾರ್ ಅಭಿನಯದ ಮೊದಲ ಚಿತ್ರದ ಹಾಡು ಎಂಬುದು ಇನ್ನೊಂದು ಅಗ್ಗಳಿಕೆ. ಈ ಹಾಡು ಮಾತ್ರವಲ್ಲ; ‘ಬೇಡರ ಕಣ್ಣಪ್ಪ’ ಸಿನಿಮಾ ಕೂಡ ಸೂಪರ್ಹಿಟ್ ಆಯಿತು. ರಾಷ್ಟ್ರಪ್ರಶಸ್ತಿ ಪಡೆಯಿತು. ಮುಂದೆ, ಇದೇ ಸಿನಿಮಾ ತೆಲುಗಿನಲ್ಲಿ ‘ಶ್ರೀ ಕಾಳಹಸ್ತಿ ಮಹಾತ್ಮಂ’ ಎಂಬ ಹೆಸರಲ್ಲಿ ತಯಾರಾಯಿತು. ಅದರಲ್ಲಿ ಕೂಡ ಡಾ. ರಾಜ್ಕುಮಾರ್ ಹೀರೊ ಆಗಿ ನಟಿಸಿದರು. (ರಾಜ್ಕುಮಾರ್ ನಟಿಸಿದ ಏಕೈಕ ತೆಲುಗು ಚಿತ್ರ ಇದು.) ಒಟ್ಟಾರೆ, ‘ಬೇಡರ ಕಣ್ಣಪ್ಪ’ ಸಿನಿಮಾ ನೆಪದಲ್ಲಿ- ಆ ಚಿತ್ರತಂಡದಲ್ಲಿದ್ದ ಎಲ್ಲರೂ ಉಚ್ಛ್ರಾಯಸ್ಥಿತಿ ತಲುಪಿಕೊಂಡರು- ಹಾಡು ಬರೆದವನನ್ನು ಬಿಟ್ಟು!
ಅರೆ, ಯಾಕೆ ಹೀಗಾಯಿತು? ಹಲವರನ್ನು ಕಾಯ್ದ ಶಿವ ಹಾಡು ಬರೆದವನನ್ನೇ ಏಕೆ ಮರೆತ? ‘ಶಿವಪ್ಪ ಕಾಯೋ ತಂದೆ…’ ಹಾಡು ಬರೆದ ಚಿತ್ರ ಸಾಹಿತಿ ಯಾರು? ಅವರು ಹೇಗಿದ್ದರು? ಈ ಹಾಡು ಬರೆಯಲು ಎಷ್ಟು ದಿನ ಬೇಕಾಯಿತು? ಈ ಸೂಪರ್ ಡ್ಯೂಪರ್ ಹಾಡು ಬರೆದದ್ದಕ್ಕೆ ಅವರಿಗೆ ಸಿಕ್ಕಿದ ಸಂಭಾವನೆ ಎಷ್ಟು? ಇಂಥವೇ ಹತ್ತು ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಅಂದಹಾಗೆ, ಇಂದಿನ ಹಾಡು ಹುಟ್ಟಿದ ಸಮಯ- ಕೆಲವು ಕ್ಷಣಗಳದ್ದೊ, ಕೆಲವು ದಿನಗಳದ್ದೊ ಅಲ್ಲ; ಅದು ಒಬ್ಬ ವ್ಯಕ್ತಿಯ ಒಟ್ಟು ಜೀವಿತಾವಧಿಯದ್ದು!
ಆನೇಕಲ್ನ ಲಾವಣಿ ವಿದ್ವಾನ್ ನಂಜಪ್ಪ ಅಲಿಯಾಸ್ ನಂಜುಕವಿ ಎಂಬ ನಿಸ್ಪೃಹ, ಅಮಾಯಕ, ಅಸಹಾಯಕ ಭಕ್ತನ ಅಕ್ಷರಪೂಜೆಯೇ ‘ಬೇಡರ ಕಣ್ಣಪ್ಪ’ ಸಿನಿಮಾದ ಹಾಡುಗಳು. ಈಗ ‘ಶಿವಪ್ಪ ಕಾಯೊ ತಂದೆ…’ ಹಾಡಿನ ಹಿನ್ನೆಲೆಯನ್ನು ಒಮ್ಮೆ ನೆನಪಿಸಿಕೊಳ್ಳಿ: ಬೇಡರ ದಿಣ್ಣ (ಶಿವನಿಗೆ ಕಣ್ಣು ನಿಇಡಿದ ಮೆಲೆ ಕಣ್ಣಪ್ಪ ಆಗುತ್ತಾನೆ.) ಬೇಟೆಗೆ ಹೋಗಿರುತ್ತಾನೆ. ಬೇಟೆ ಸಿಗುವುದಿಲ್ಲ. ಆಗ, ಹಸಿವಿನಿಂದ ಕಂಗಾಲಾಗಿ, ಶಿವನ ಗುಡಿಗೆ, ನೇರವಾಗಿ ಗರ್ಭಗುಡಿಗೇ ಬರುತ್ತಾನೆ. ಬೇಟೆ ಸಿಗಲಿಲ್ಲ ಎಂಬ ಕಾರಣಕ್ಕೆ ಶಿವನನ್ನೇ ನಿಂದಿಸುತ್ತಿರುತ್ತಾನೆ. ಅದೇ ಸಮಯಕ್ಕೆ ಪೂಜೆಗೆಂದು ಅಲ್ಲಿಗೆ ಬಂದ ಪೂಜಾರಿಯ ಮಗ, ಕಣ್ಣಪ್ಪನ ವೇಷ-ಭೂಷಣ, ಒರಟೊರಟು ವರ್ತನೆ, ಶಿವನಿಂದನೆಯ ಮಾತು ಕೇಳಿ ಗಾಬರಿಯಾಗುತ್ತಾನೆ. ‘ಶಿವನನ್ನು ಭಕ್ತಿಯಿಂದ ಬೇಡಿಕೊ. ಆಗ ನಿನ್ನ ಇಷ್ಟಾರ್ಥ ಸಿದ್ಧಿಸುತ್ತದೆ’ ಎಂಬ ಕಿವಿಮಾತನ್ನೂ ಹೇಳಿ ಹೋಗುತ್ತಾನೆ. ಆತ ಎದ್ದುಹೋದ ಮರುಕ್ಷಣವೇ ಪ್ರಾರ್ಥನೆಯಂತೆ, ವೇದನೆಯಂತೆ, ಕಂದನ ಅಳುವಿನಂತೆ, ಹಸಿದವನ ಆರ್ತನಾದದಂತೆ ಕಣ್ಣಪ್ಪ ಹಾಡುತ್ತಾನೆ; ‘ಶಿವಪ್ಪ ಕಾಯೋ ತಂದೆ…’ ಕೊನೆಯ ಸಾಲಿಗೆ ಬರುವ ವೇಳೆಗೆ ಎರಡು ಮೊಲಗಳು ಕಾಣಿಸುತ್ತವೆ. ಅವನ್ನೇ ಬೇಟೆಯಾಡುವ ಕಣ್ಣಪ್ಪ, ಒಂದನ್ನು ಶಿವನಿಗೆ ಕೊಟ್ಟು, ಇನ್ನೊಂದನ್ನು ತಾನಿಟ್ಟುಕೊಳ್ಳುತ್ತಾನೆ.
ಈ ಹಾಡು ಬರೆದರಲ್ಲ ಆನೇಕಲ್ನ ನಂಜುಕವಿ? ಅವರು ಸ್ವಾತಂತ್ರ್ಯ ಹೋರಾಟಗಾರರು. ಸೇವಾದಳದಲ್ಲಿದ್ದವರು. ಚಿತ್ರರಂಗದ ನಂಟು ಬೆಳೆಯುವ ಮುನ್ನ ಗರಡಿಮನೆ ನಡೆಸ್ತಿದ್ರು. ಲಾವಣಿ ಹಾಡುವುದರಲ್ಲಿ ರಾಜ್ಯದಾದ್ಯಂತ ದೊಡ್ಡ ಹೆಸರು ಮಾಡಿದ್ದರು. ಸ್ವಾತಂತ್ರ್ಯ ಚಳವಳಿ ವಿಷಯವಾಗಿ ಲಾವಣಿ ಕಟ್ಟಿ ಅದನ್ನು ಊರುಗಳಲ್ಲಿ ಹಾಡುವುದು; ಆ ಮೂಲಕ ಜನಜಾಗೃತಿ ಮೂಡಿಸುವುದು ಅವರ ಕೆಲಸವೇ ಆಗಿಹೋಗಿತ್ತು. ಈ ಕಾರಣದಿಂದಲೇ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಜೈಲು ಸೇರಿದರು.
ಲಾವಣಿ ನಂಜಪ್ಪನವರ ತಂದೆ ದಫೇದಾರ್ ಆಗಿದ್ದರು. ಮಗ ಜೈಲು ಸೇರಿದನಲ್ಲ ಎಂಬ ಸಿಟ್ಟಿನಲ್ಲಿ ಮನೆಯಿಂದ ಹೊರಹಾಕಿದರಂತೆ. ಈ ವೇಳೆಗೆ ಲಾವಣಿಗಳ ಮೂಲಕವೇ ನಂಜಪ್ಪ ಮನೆಮನೆಯ ಮಾತಾಗಿದ್ದರು. ಕ್ಷಣಮಾತ್ರದಲ್ಲಿ ಪದ್ಯ ರಚಿಸುವುದು, ಅದನ್ನು ಸುಶ್ರಾವ್ಯವಾಗಿ ಹಾಡುವುದು ಅವರಿಗೆ ಕರಗತವಾಗಿತ್ತು. ಇದನ್ನು ಉಳಿದೆಲ್ಲರಿಗಿಂತ ಮೊದಲೇ ಗಮನಿಸಿದ್ದ ಗುಬ್ಬಿ ವೀರಣ್ಣನವರು, ತಮ್ಮ ಕಂಪನಿಯ ನಾಟಕಗಳಿಗೆ ಸಾಹಿತ್ಯ ಒದಗಿಸಲು ನಂಜಪ್ಪ ಅವರನ್ನು ಕೇಳಿಕೊಂಡರು. ಗುಬ್ಬಿ ಕಂಪನಿಯ ಯಶಸ್ವಿ ನಾಟಕಗಳಲ್ಲಿ ಒಂದಾದ ‘ಬೇಡರ ಕಣ್ಣಪ್ಪ’ನಿಗೂ ನಂಜಪ್ಪನವರು ರಂಗಗೀತೆಗಳನ್ನು ಬರೆದುಕೊಟ್ಟಿದ್ದರು.
ಮುಂದೆ, ೧೯೫೪ರಲ್ಲಿ ಗುಬ್ಬಿ ಕರ್ನಾಟಕ ಫಿಲ್ಮ್ ಲಾಂಛನದಲ್ಲಿ ವೀರಣ್ಣನವರು ‘ಬೇಡರ ಕಣ್ಣಪ್ಪ’ ಚಿತ್ರ ನಿರ್ಮಿಸಲು ಮುಂದಾದರಲ್ಲ? ಆಗ ಸಹಜವಾಗಿಯೇ ಹಾಡುಗಳನ್ನು ಯಾರಿಂದ ಬರೆಸಬೇಕು ಎಂಬ ಪ್ರಶ್ನೆ ಎದುರಾಯಿತು. ಆಗ ಗುಬ್ಬಿ ಕಂಪನಿಯವರೇ ಆಗಿದ್ದ ನಿರ್ದೇಶಕ ಎಚ್.ಎಲ್.ಎನ್. ಸಿಂಹ- ‘ನಮ್ಮ ನಂಜಪ್ಪ ಅವರಿಂದಲೇ ಬರೆಸೋಣ ಸಾರ್’ ಎಂದರಂತೆ.
ತಕ್ಷಣವೇ ಪತ್ರ ಬರೆದು, ನಂಜಪ್ಪ ಅವರನ್ನು ಮದರಾಸಿಗೆ ಕರೆಸಿಕೊಂಡರು ವೀರಣ್ಣ. ನಾಟಕಕ್ಕೆ ಹಾಡು ಬರೆಯುವ ವಿಧಾನವೇ ಬೇರೆ. ಸಿನಿಮಾ ಸಾಹಿತ್ಯ ರಚನೆಯೇ ಬೇರೆ ಎಂಬುದು ನಂಜಪ್ಪನವರಿಗೆ ತುಂಬ ಬೇಗ ಅರ್ಥವಾಗಿಹೋಯಿತು. ಆಗ ಕೂಡ ಅವರು ಅಂಜಲಿಲ್ಲ, ಹಿಂಜರಿಯಲಿಲ್ಲ. ಇದು ತುಂಬಾ ಸುಲಭದ ಕೆಲಸ ಎಂಬಂತೆ ಚಿತ್ರಕ್ಕೆ ಅಗತ್ಯವಿದ್ದ ಎಲ್ಲ ಹಾಡುಗಳನ್ನೂ ಬರೆದು ಮುಗಿಸಿದರು. ಮುಂದೆ ಆರ್. ಸುದರ್ಶನಂ ಅವರ ಸಂಗೀತದ ಮೋಡಿ; ಸಿ.ಎಸ್. ಜಯರಾಮನ್ ಅವರ ತಾರಕಕ್ಕೆ ಹೋಗಿ ಹೇಳಿದ ಧಾಟಿ ಹಾಡುಗಳನ್ನು ಮುಗಿಲೆತ್ತರಕ್ಕೆ ತಂದು ನಿಲ್ಲಿಸಿತು.
ಇಲ್ಲಿ ಒಂದು ವಿಷಯ ಹೇಳಿಬಿಡಬೇಕು. ಲಾವಣಿ ನಂಜಪ್ಪ ಇದ್ದರಲ್ಲ, ಆತ ಮಹಾ ಸ್ವಾಭಿಮಾನಿ. ಸಿನಿಮಾಕ್ಕೆ ಹಾಡು ಬರೆಯುವುದನ್ನು ಅವರು ‘ಸರಸ್ವತಿ ಸೇವೆ’ ಅನ್ನುತ್ತಿದ್ದರು. ಈ ಕಾರಣದಿಂದಲೇ ಹಾಡು ಬರೆದ ನಂತರ ‘ಸಂಭಾವನೆ’ ಪಡೆಯುತ್ತಿರಲಿಲ್ಲ. ‘ನಿಮ್ಮ ಬದುಕಿಗೆ ಬೇಕಾಗುತ್ತೆ ತಗೊಳ್ಳಿ’ ಅಂದರೆ- ‘ನಂಬಿದ ದೇವರು ಕೈಬಿಡಲಾರ. ದೇವರ ಕೆಲಸಕ್ಕೆ ನನಗೆ ದುಡ್ಡು ಬೇಡ. ಸರಸ್ವತಿ ನನಗೆ ಮೋಸ ಮಾಡೋದಿಲ್ಲ’ ಎನ್ನುತ್ತಿದ್ದರು! ಮುಂದೆ ‘ಹೆಳವನಕಟ್ಟೆ ಗಿರಿಯಮ್ಮ’ ಎಂಬ ಸಿನಿಮಾಕ್ಕೆ ಇವರು ಹಾಡು ಬರೆದಾಗ ನಿರ್ಮಾಪಕರು ತುಂಬ ಒತ್ತಾಯದಿಂದ ಬೆಳ್ಳಿಯ ಲಕ್ಷ್ಮಿ ವಿಗ್ರಹ ಕೊಟ್ಟರೆ, ಅದನ್ನು ಮಗಳಿಗೆ ಕಾಣಿಕೆಯಾಗಿ ಕೊಟ್ಟು- ‘ಶಿವ ನಿನ್ನ ಕೈಬಿಡಲ್ಲಮ್ಮಾ’ ಅಂದಿದ್ದರಂತೆ!
ಇಂಥ ಆಪ್ತ, ಅಮಾಯಕ ಹಿನ್ನೆಲೆಯ ನಂಜು ಕವಿಗಳ ಬದುಕಲ್ಲಿ ಕೂಡ ನಂಜು ತುಂಬಿತ್ತು ಎಂಬುದು ಸಂಕಟದ ವಿಚಾರ. ಮದ್ರಾಸಿನಲ್ಲಿ ಇದ್ದರಲ್ಲ ನಂಜಪ್ಪ? ಅಷ್ಟೂ ದಿನ ಯಾರಾದ್ರೂ ಕೊಟ್ಟರೆ ಮಾತ್ರ ಊಟ, ತಿಂಡಿ, ಕಾಫಿ. ಇಲ್ಲವಾದರೆ ಉಪವಾಸವೇ ಗತಿ. ಈ ನಡುವೆ ಮದುವೆಯಾಗಿತ್ತು. ಇಬ್ಬರು ಮಕ್ಕಳೂ ಇದ್ದರು. ಆದರೆ ಕ್ಷಣಕ್ಷಣವೂ ಬಡತನ ಕೈ ಜಗ್ಗುತ್ತಲೇ ಇತ್ತು. ಯಾರೊಂದಿಗೂ ತಮ್ಮ ಸಂಕಟ ಹೇಳಿಕೊಳ್ಳದ ನಂಜಪ್ಪ, ದೇವರೊಂದಿಗೆ ಕಷ್ಟ ಹೇಳಿಕೊಂಡರಂತೆ. ಆ ಸಂದರ್ಭದಲ್ಲಿ ಅಕ್ಷರಗಳ ರಂಗೋಲಿಯಾಗಿ ಬರೆದದ್ದೇ- ‘ಶಿವಪ್ಪ ಕಾಯೋ ತಂದೆ…’ ಹಾಡು!
ವಾಸ್ತವವಾಗಿ, ‘ಬೇಡರ ಕಣ್ಣಪ್ಪ’ನ ನಂತರ ನಂಜಪ್ಪನವರ ಬದುಕಿನ ನಕಾಶೆಯ ಚಿತ್ರ ಬದಲಾಗಬೇಕಿತ್ತು. ಚಿತ್ರ ಸಾಹಿತಿಯಾಗಿ ಅವರು ‘ಬ್ಯುಸಿ’ ಆಗಬೇಕಿತ್ತು. ಹಾಗಾಗಲೇ ಇಲ್ಲ. ‘ಕಣ್ಣಪ್ಪ’ನ ನಂತರ ಆರ್. ನಾಗೇಂದ್ರರಾವ್ ನಿರ್ದೇಶನದ ‘ನಾಡಿನ ಭಾಗ್ಯ’ ಚಿತ್ರಕ್ಕಾಗಿ ನಂಜಪ್ಪನವರು ಆಂಜನೇಯನ ಮೇಲೆ ಇಡೀ ರಾಮಾಯಣದ ಸಾರವನ್ನೇ ಹೇಳುವ ಹಾಡೊಂದನ್ನು ಬರೆದರು. ಆ ಹಾಡಿನ ಶ್ರೀಮಂತ ಸಾಹಿತ್ಯ ಕಂಡು ಬೆರಗಾದ ಗುತ್ತಿಗೆದಾರ ಗೋಪಾಲ್ ಎಂಬುವರು, ನೂರು ರೂ.ಗಳನ್ನು ಬಹುಮಾನವಾಗಿ ಕೊಟ್ಟು ನಂಜಪ್ಪನವರ ಕಾಲು ಮುಟ್ಟಿ ನಮಸ್ಕರಿಸಿದ್ದರಂತೆ.
ಮುಂದಿನದೆಲ್ಲವೂ ಸಂಕಟದ ಬದುಕೇ. ಅಂಥ ಸಂಕಟದ ಸಂದರ್ಭದಲ್ಲೂ ತಮ್ಮ ಮಕ್ಕಳಿಗೆ- ‘ಯಾವತ್ತೂ ಸ್ವಾಭಿಮಾನ ಬಿಡಬಾರದು. ಶಿವನಲ್ಲಿ ನಂಬಿಕೆ ಕಳೆದುಕೊಳ್ಳಬಾರದು’ ಎಂದು ಹೇಳಿಕೊಂಡೇ ಬಂದರು ನಂಜಪ್ಪ. ವಿಪರ್ಯಾಸವೆಂದರೆ, ‘ಶಿವಪ್ಪ ಕಾಯೋ ತಂದೆ…’ ಎಂದು ಹಾಡುವ ಕಣ್ಣಪ್ಪನನ್ನು; ಆ ನಂತರದ ದಿನಗಳಲ್ಲಿ ಲಕ್ಷಲಕ್ಷ ಭಿಕ್ಷುಕರನ್ನು ಶಿವ ಕಾಪಾಡಿದ. ಆದರೆ ಹಾಡು ಬರೆದ ಅಮಾಯಕ ಕವಿ ನಂಜಪ್ಪನವರನ್ನು ಮಾತ್ರ ಮರೆತೇಬಿಟ್ಟ!
ಹೌದು, ಕಾಡುವ ಹಾಡುಗಳ ಹಿಂದೆ ಇಂಥ ಕರುಣ ಕಥೆಯೂ ಇರುತ್ತೆ…

Advertisements

1 Comment »

  1. 1

    Well ! struggling to find words to comment on this story


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: