ಉರಿಯುತ್ತಿದ್ದ ಕರ್ಪೂರದ ನೆಪದಲ್ಲಿ ಕುಣಿದಾಡುವಂಥ ಹಾಡು ಹುಟ್ಟಿತು!

null

ಕರ್ಪೂರದಾ ಗೊಂಬೆ ನಾನು…
ಚಿತ್ರ: ನಾಗರಹಾವು. ಗೀತೆ ರಚನೆ: ಆರ್.ಎನ್. ಜಯಗೋಪಾಲ್. ಗಾಯನ: ಪಿ. ಸುಶೀಲ, ಸಂಗೀತ: ವಿಜಯಭಾಸ್ಕರ್

ಕರ್ಪೂರದಾ ಗೊಂಬೆ ನಾನು
ಮಿಂಚಂತೆ ಬಳಿ ಬಂದೆ ನೀನು
ನಿನ್ನ ಪ್ರೇಮ ಜ್ವಾಲೆ ಸೋಕಿ ನನ್ನ ಮೇಲೆ
ಕರಗಿ ಕರಗಿ ನೀರಾದೆ ನಾನು ||ಪ||

ಹೂವಲಿ ಬೆರೆತ ಗಂಧದ ರೀತಿ
ಶ್ರುತಿಯಲಿ ಕಲೆತ ನಾದದ ರೀತಿ
ದೇಹದಿ ಪ್ರಾಣವು ಕಲೆತಿಹ ರೀತಿ
ನಿನ್ನಲೇ ಬೆರೆತೆ ನನ್ನನೇ ಮರೆತೆ ಆ ಆ ಆ ಆ ||೧||

ದೇವನ ಸೇರಿದ ಹೂವದು ಧನ್ಯ
ಪೂಜೆಯ ಮಾಡಿದ ಕೈಗಳೆ ಧನ್ಯ
ಒಲವನು ಅರಿತ ಹೃದಯವೆ ಧನ್ಯ
ನಿನ್ನ ನಾ ಪಡೆದೆ ಧನ್ಯೆ ನಾ ನಿಜದೆ ಆ ಆ ಆ ಆ ||೨||
ಒಂದು ಸಿನಿಮಾ ನಿರ್ಮಾಣದ ಯೋಜನೆ ಆರಂಭವಾಗುತ್ತದಲ್ಲ? ಆಗ ಮೊದಲು ಕಥೆಯ ಬಗ್ಗೆ ಚರ್ಚೆಯಾಗುತ್ತದೆ. ನಿರ್ಮಾಪಕ, ನಿರ್ದೇಶಕ- ಈ ಇಬ್ಬರಿಗೂ ಕಥೆ ಒಪ್ಪಿಗೆಯಾದ ನಂತರ ಇಂತಿಷ್ಟೇ ಬಜೆಟ್ನಲ್ಲಿ ಚಿತ್ರ ನಿರ್ಮಾಣವಾಗಬೇಕು ಎಂದು ನಿರ್ಧರಿಸಲಾಗುತ್ತದೆ. ಆನಂತರ ನಾಯಕ, ನಾಯಕಿ, ಸಹನಟರು ಹಾಗೂ ತಾಂತ್ರಿಕ ವರ್ಗದವರ ಆಯ್ಕೆ ನಡೆಯುತ್ತದೆ. ನಂತರ ಚಿತ್ರಕತೆ ಬರೆವ ಕೆಲಸ ಮೊದಲಾಗುತ್ತದೆ. ಒಂದು ದೃಶ್ಯದ ಅವಧಿ ಎಷ್ಟು ನಿಮಿಷ ಇರಬೇಕು? ಯಾವ್ಯಾವ ಸೀನ್ನಲ್ಲಿ ಏನೇನಿರಬೇಕು? ಎಲ್ಲಿ ಫೈಟಿಂಗ್ ಇರಬೇಕು? ಹಾಡುಗಳು ಯಾವಾಗ ಬರಬೇಕು? ಇಡೀ ಕತೆಗೆ ಎಲ್ಲಿ ಟರ್ನಿಂಗ್ ಪಾಯಿಂಟ್ ಸಿಗಬೇಕು ಎಂಬುದೆಲ್ಲಾ ಚಿತ್ರಕತೆ ಬರೆಯುವ ಸಂದರ್ಭದಲ್ಲಿಯೇ ನಿರ್ಧಾರವಾಗಿಬಿಡುತ್ತದೆ.
ಒಂದು ಸಿನಿಮಾದಲ್ಲಿ ಸಾಮಾನ್ಯವಾಗಿ ನಾಲ್ಕು ಹಾಡುಗಳನ್ನು ಅಳವಡಿಸಲಾಗುತ್ತದೆ. ಅಷ್ಟಾದ ನಂತರವೂ, ಮಾತುಗಳಲ್ಲಿ ವಿವರಿಸಲಾಗದಂಥ ಸಂದರ್ಭವಿದೆ ಅಂದರೆ ಆ ಸಂದರ್ಭಕ್ಕೆ ಮತ್ತೊಂದು ಹಾಡನ್ನು ಹಾಕಲಾಗುತ್ತದೆ. ಒಂದು ಹಾಡು ಆರಂಭವಾಗಿ ಮುಕ್ತಾಯವಾಗುವ ವೇಳೆಗೆ ನಾಯಕ-ನಾಯಕಿಯರು ಕನಿಷ್ಠ ಐದಾರು ಪ್ರದೇಶಗಳಲ್ಲಾದರೂ ಕಾಣಿಸಿಕೊಳ್ಳುವುದರಿಂದ ಅಷ್ಟೂ ಕಡೆಗೆ ಹೋಗಿ ಚಿತ್ರೀಕರಣ ನಡೆಸಬೇಕಾಗುತ್ತದೆ. ಹಾಡಿನಲ್ಲಿ ಜಾಗ ಬದಲಾದಂತೆಲ್ಲ ಉಡುಗೆ-ತೊಡುಗೆ ಕೂಡ ಬದಲಾಗುತ್ತದೆ. ಹಾಗಾಗಿ ನಿರ್ಮಾಪಕರು ನಾಯಕ-ನಾಯಕಿಯ ಉಡುಗೆ-ತೊಡುಗೆಗಳ ಖರ್ಚನ್ನೂ ವಹಿಸಿಕೊಳ್ಳಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದಲೂ ಒಂದು ಚಿತ್ರಕ್ಕೆ ನಾಲ್ಕು ಹಾಡೇ ಸಾಕು ಎಂಬ ಅಲಿಖಿತ ನಿಯಮ ಇವತ್ತಿಗೂ ಚಾಲ್ತಿಯಲ್ಲಿದೆ.
ಹಾಗಿದ್ದರೂ, ಕೆಲವೊಂದು ಸಂದರ್ಭಗಳಲ್ಲಿ ನಿರ್ಮಾಪಕ-ನಿರ್ದೇಶಕರ ಲೆಕ್ಕಾಚಾರಗಳನ್ನು ಮೀರಿ ಹೆಚ್ಚುವರಿಯಾಗಿ ಒಂದೆರಡು ಹಾಡುಗಳು ಸೇರಿಬಿಡುವುದುಂಟು. ಅವುಗಳನ್ನು ಚಿತ್ರರಂಗದ ಭಾಷೆಯಲ್ಲಿ ‘ಪ್ಯಾಚ್ಅಪ್’ ಹಾಡುಗಳು ಎನ್ನುತ್ತಾರೆ. ‘ಶುಭಮಂಗಳ’ದ ‘ಹೂವೊಂದು ಬಳಿ ಬಂದು ತಾಕಿತು ಎನ್ನದೆಯಾ’, ‘ಗೆಜ್ಜೆಪೂಜೆ’ ಚಿತ್ರದ ‘ಗಗನವು ಎಲ್ಲೋ ಭೂಮಿಯು ಎಲ್ಲೋ…’ದಂಥ ಸೂಪರ್ಹಿಟ್ ಹಾಡುಗಳು ಕೂಡ ಆಯಾ ಚಿತ್ರಗಳಿಗೆ ಹೆಚ್ಚುವರಿಯಾಗಿ ಸೇರಿಸಲಾದಂಥವು! ಅದೇ ಸಾಲಿಗೆ ಸೇರುವ ಜನಪ್ರಿಯ ಗೀತೆಯೇ ‘ಕರ್ಪೂರದಾ ಗೊಂಬೆ ನಾನು, ಮಿಂಚಂತೆ ಬಳಿ ಬಂದೆ ನೀನು…’ ‘ನಾಗರಹಾವು’ ಸಿನಿಮಾ ನೋಡಿದವರಿಗೆಲ್ಲ ಚೆನ್ನಾಗಿ ನೆನಪಿರುತ್ತದೆ; ಏನೆಂದರೆ, ಆ ಸಿನಿಮಾದಲ್ಲಿ ಈ ಹಾಡು ದಿಢೀರನೆ ಬರುತ್ತದೆ! ತನ್ನ ಮನಸ್ಸು ಕದ್ದ ಮತ್ತು ಹೃದಯ ಗೆದ್ದ ಕಥಾನಾಯಕನ ಮೋಹದಲ್ಲಿ ತೇಲಿಹೋದ ನಾಯಕಿ ಆ ಸಂಭ್ರಮದಲ್ಲಿಯೇ ಥೇಟ್ ಜಿಂಕೆಮರಿಯ ಥರಾ ಬೆಟ್ಟದ ಮೆಟ್ಟಿಲುಗಳನ್ನು ಜಿಗಿಜಿಗಿಯುತ್ತಾ, ತನ್ನಷ್ಟಕ್ಕೆ ತಾನೇ ಹಾಡುತ್ತಾ ಬರುತ್ತಾಳೆ. ತನ್ನನ್ನು ತಾನೇ ಕರ್ಪೂರದ ಗೊಂಬೆಗೆ ಹೋಲಿಸಿಕೊಂಡು ಬೀಗುತ್ತಾಳೆ. ಅವನು ಸುಳಿಮಿಂಚಿನಂತೆ ಬಳಿ ಬಂದಾಗ, ಅವನ ಬಿಸಿಯುಸಿರು ತಾಕಿದಾಗ, ಚಿಗುರು ಮೀಸೆಯ ಚೆಲುವು ಬಯಕೆಗೆ ಕಿಚ್ಚಿಟ್ಟಾಗ ಹೇಗೆಲ್ಲಾ ಅನಿಸಿತು ಎಂದು ಹಾಡುತ್ತಲೇ ಹೂವಾಗಿ ಅರಳುತ್ತಾಳೆ. ನವಿಲಂತೆ ಕುಣಿಯುತ್ತಾಳೆ ಮತ್ತು ನಾಚುತ್ತ ನಾಚುತ್ತಲೇ ನಗುತ್ತಾಳೆ. ಈ ಖುಷಿಯ ಗಾನಯಾತ್ರೆಯಲ್ಲಿ ಅವಳೊಂದಿಗೆ ಕೋಗಿಲೆಯೂ ದನಿ ಸೇರಿಸುತ್ತದೆ!
ಮುಂದಿನ ಮೂರು ದಶಕಗಳವರೆಗೂ ಸೂಪರ್ಹಿಟ್ ಹಾಡಾಗಿಯೇ ಉಳಿಯಬಲ್ಲಂಥ ಮಾಧುರ್ಯವಿರುವ ಈ ಗೀತೆಯ ಸೃಷ್ಟಿಯ ಹಿಂದಿನ ಕಥೆ ಹೀಗಿದೆ: ಪುಟ್ಟಣ್ಣ ಕಣಗಾಲ್ ಅವರು ಸ್ವತಂತ್ರ ನಿರ್ದೇಶಕನಾಗುವ ಮೊದಲು ಬಿ.ಆರ್. ಪಂತುಲು ಬಳಿ ಸಹಾಯಕ ನಿರ್ದೇಶಕರಾಗಿದ್ದರು. ಅದೇ ದಿನಗಳಲ್ಲಿ ಆರ್.ಎನ್. ಜಯಗೋಪಾಲ್, ಪಂತುಲು ನಿರ್ಮಾಣದ ಚಿತ್ರಗಳಿಗೆ ಹಾಡು ಹಾಗೂ ಸಂಭಾಷಣೆ ಬರೆಯುತ್ತಿದ್ದರು. ಪುಟ್ಟಣ್ಣ ಹಾಗೂ ಆರ್.ಎನ್.ಜೆ. ಆಗಿನಿಂದಲೇ ‘ಹೋಗೋ ಬಾರೋ’ ಗೆಳೆಯರು. ಮುಂದೆ ಪುಟ್ಟಣ್ಣ ಸ್ವತಂತ್ರನಿರ್ದೇಶಕನಾಗಿ ‘ಬೆಳ್ಳಿಮೋಡ’ ಸಿನಿಮಾ ನಿರ್ದೇಶಿಸಿದರಲ್ಲ? ಅದಕ್ಕೆ ಸಂಭಾಷಣೆ, ಹಾಡುಗಳನ್ನು ಬರೆದದ್ದು ಆರ್.ಎನ್.ಜೆ. ಮುಂದೆ ಪುಟ್ಟಣ್ಣ ನಿರ್ದೇಶನದ ‘ಕಪ್ಪು ಬಿಳುಪು’, ‘ಕರುಳಿನ ಕರೆ’ ಚಿತ್ರಗಳಿಗೂ ಜಯಗೋಪಾಲ್ ಅವರೇ ಸಂಭಾಷಣೆ-ಹಾಡು ಬರೆದರು.
ಆ ನಂತರದಲ್ಲಿ ಯಶಸ್ಸಿನ, ಜನಪ್ರಿಯತೆಯ ಒಂದೊಂದೇ ಮೆಟ್ಟಿಲೇರಿ ‘ನಾಗರಹಾವು’ ಸಿನಿಮಾ ನಿರ್ದೇಶನಕ್ಕೆ ಮುಂದಾದಾಗ, ಅದಕ್ಕೂ ಜಯಗೋಪಾಲ್ರಿಂದ ಹಾಡುಗಳನ್ನು ಬರೆಸಬೇಕೆಂಬ ಮಹದಾಸೆ ಪುಟ್ಟಣ್ಣ ಅವರಿಗಿತ್ತು. ಆದರೆ, ಅದೇ ಸಂದರ್ಭದಲ್ಲಿ ಆರ್.ಎನ್.ಜೆ- ‘ನಾ ಮೆಚ್ಚಿದ ಹುಡುಗ’ ಚಿತ್ರದ ನಿರ್ದೇಶನದಲ್ಲಿ ಬಿಜಿಯಾಗಿದ್ದರು. ಇದನ್ನು ಗಮನಿಸಿದ ಪುಟ್ಟಣ್ಣ, ಚಿ. ಉದಯಶಂಕರ್ ಹಾಗೂ ವಿಜಯನಾರಸಿಂಹ ಅವರಿಂದ ಹಾಡುಗಳನ್ನು ಬರೆಸಿದರು.
ಈ ಚಿತ್ರದ ಮುಹೂರ್ತ ನಡೆದಾಗ- ಗೆಳೆಯನಿಗೆ ಶುಭಹಾರೈಸಲೆಂದು ಹೂಮಾಲೆ ಹಿಡಿದುಕೊಂಡೇ ಬಂದರು ಜಯಗೋಪಾಲ್. ಆಗ ಪುಟ್ಟಣ್ಣ ಹೇಳಿದರಂತೆ: ‘ನನ್ನ ಹಿಂದಿನ ಚಿತ್ರಗಳಿಗೆಲ್ಲ ಹಾಡು ಬರೆದಿದ್ದೀ. ಈ ಬಾಂಧವ್ಯ ಮುಂದುವರಿಯಬೇಕು. ಈ ಚಿತ್ರಕ್ಕೆ ನಾಯಕಿಯ ಸಂಭ್ರಮವನ್ನು ವರ್ಣಿಸಿ ಒಂದು ಹಾಡು ಬರೆದು ಕೊಡು. ಅದನ್ನು ಬಳಸಿಕೊಳ್ತೇನೆ..’
ಈಗಿನ ಜನರಾಗಿದ್ದರೆ- ‘ಸರಿ ಸರಿ, ನಾಳೆ ಬರೆದುಕೊಡ್ತೀನಿ’ ಅನ್ನುತ್ತಿದ್ದರೇನೋ. ಆರ್.ಎನ್.ಜೆ. ಹಾಗೆ ಹೇಳಲಿಲ್ಲ. ಬದಲಿಗೆ ‘ಸರಿ, ಬರೀತೇನೆ’ ಎಂದವರೇ ಒಮ್ಮೆ ಸುತ್ತಲೂ ನೋಡಿದರು. ಮುಹೂರ್ತದಲ್ಲಿ ಪೂಜೆಗೆಂದು ಹಚ್ಚಿಟ್ಟಿದ್ದ ಕರ್ಪೂರದ ಹೊಗೆ ಆಗೊಮ್ಮೆ ಈಗೊಮ್ಮೆ ಬೀಸಿ ಬರುತ್ತಿದ್ದ ಗಾಳಿಗೆ ಅತ್ತಿತ್ತ ಬಳುಕುತ್ತಾ ಮೇಲೆ ಹೋಗುತ್ತಿತ್ತು. ಕರ್ಪೂರದ ಸುವಾಸನೆಯೊಂದಿಗೆ, ಗಂಧದ ಕಡ್ಡಿಯ ಘಮವೂ ಸೇರಿಕೊಂಡಿತ್ತು.
ಆ ವೇಳೆಗೆ,ನಾಗರಹಾವು ಸಿನಿಮಾದ ಕಥೆ ಏನೆಂದು ಜಯಗೋಪಾಲ್ಗೆ ಕೂಡ ಗೊತ್ತಾಗಿತ್ತು. ಆ ಚಿತ್ರದ ಕಥಾನಾಯಕಿ ಕೂಡ ಕರ್ಪೂರದ ಗೊಂಬೆಯಂಥವಳು. ಆಕೆಯ ‘ಪ್ರೇಮ’ದ ಉನ್ಮಾದ ಅಲ್ಪಾವಧಿಯದು ನಿಜ. ಆದರೂ, ತನ್ನ ಮನಸ್ಸು ಗೆದ್ದವನನ್ನು ದೇವರೆಂದೇ ಭಾವಿಸಿ ಆರಾಧಿಸುವವಳು. ಆತನ ಜತೆಗಿದ್ದಾಗ ಮಾತ್ರ ಈ ಬದುಕು ಧನ್ಯ ಎಂದು ನಂಬಿದ್ದಂಥವಳು. ಆದರೆ, ಪರಿಸ್ಥಿತಿಯ ಒತ್ತಡದಿಂದಾಗಿ ಬೇರೆಯವನನ್ನು ಮದುವೆಯಾಗಲು ಒಪ್ಪಿದಂಥವಳು. ನಂತರದಲ್ಲಿ, ಥೇಟ್ ಕರ್ಫೂರದಂತೆಯೇ ಅವಳ ಬದುಕೂ ಉರಿದುಹೋಗುತ್ತದೆ…
ದೇವರ ಪಟದ ಮುಂದೆ ಉರಿಯುತ್ತಿದ್ದ ಕರ್ಪೂರವನ್ನೂ, ಅದರಿಂದ ಎದ್ದ ಹೊಗೆಯಲ್ಲಿ ಅಚಾನಕ್ಕಾಗಿ ಮೂಡಿದ ಹೆಣ್ಣಿನಂಥ(?) ಚಿತ್ರವನ್ನು ಕಂಡಾಕ್ಷಣ ಜಯಗೋಪಾಲ್ ಅವರಿಗೆ ಮಿಂಚೊಂದು ಹೊಳೆದಂತಾಯಿತು. ಕರ್ಪೂರವನ್ನೇ ಮತ್ತೆ ಮತ್ತೆ ನೋಡುತ್ತ- ‘ಕರ್ಪೂರದ ಗೊಂಬೆ ನಾನು, ಮಿಂಚಂತೆ ಬಳಿ ಬಂದೆ ನೀನು’ ಎಂದು ಪಲ್ಲವಿ ಬರೆದೇಬಿಟ್ಟರು. ನಂತರ, ನಾಯಕಿಯ ಆಸೆ, ಕನಸು, ತಲ್ಲಣ, ತಹತಹವನ್ನೆಲ್ಲ ನೆನಪು ಮಾಡಿಕೊಂಡರು. ಮೊದಲ ಭೇಟಿ, ಮೊದಲ ನೋಟ, ಮೊದಲ ಮೌನ, ಮೊದಲ ಸಿಡಿಮಿಡಿ, ಮೊದಲ ರೋಮಾಂಚನ ನೆನಪಾದಾಗ ಹೆಣ್ಣು ಹೇಗೆಲ್ಲ ಖುಷಿಪಡುತ್ತಾಳಲ್ಲ ಎಂದು ಅವರು ಅಂದಾಜು ಮಾಡಿಕೊಳ್ಳುತ್ತಾ ಹೋದಂತೆಲ್ಲ ಹಾಡೆಂಬುದು ಬೆಳೆಯುತ್ತಾ ಹೋಯಿತು- ಹುಡುಗಿಯ ಮಾತಿನಂತೆ!
ಈಗ, ಹುಶಾರಾಗಿ ಗಮನಿಸಿ ನೋಡಿ: ‘ಕರ್ಪೂರದಾ ಗೊಂಬೆ ನಾನು…’ ಭಕ್ತಿಯಿದೆ, ಧ್ಯಾನವಿದೆ, ಪ್ರೀತಿಯಿದೆ, ಅರ್ಪಣಾ ಮನೋಭಾವವಿದೆ. ಈ ಹಾಡಿನಲ್ಲಿ ಮೊದಲ ಎರಡು ಸಾಲುಗಳು ದೇವರ ಮುಂದೆ ನಿಂತು ಕರ್ಪೂರವೇ ಧನ್ಯತಾಭಾವದಿಂದ ಹಾಡಿದಂತಿವೆ. ಉಳಿದ ಎರಡು ಸಾಲುಗಳು ನಾಯಕನಿಗೆ, ಪ್ರೀತಿ ತುಂಬಿದ ಆರಾಧನಾ ಭಾವದಿಂದ ನಾಯಕಿ ಹೇಳಿದಂತಿದೆ!
ಈ ಹಾಡು ಕಂಡು ಪುಟ್ಟಣ್ಣ ಸಹಜವಾಗಿಯೇ ಖುಷಿಯಾದರು. ನಂತರ, ಈ ಹೊಸ ಹಾಡಿಗಾಗಿ ನಾಯಕಿ, ರಾಮಾಚಾರಿಯ ಧ್ಯಾನದಲ್ಲಿ ಖುಷಿಯಿಂದ ಕುಣಿಯುತ್ತಾ ಚಿತ್ರದುರ್ಗದೊಳಗಿನ ಪುಟ್ಟ ಬೆಟ್ಟದ ಮೆಟ್ಟಲುಗಳನ್ನು ಜಿಗಿಯುತ್ತಾ ಬರುವ ಒಂದು ದೃಶ್ಯವನ್ನು ಸೃಷ್ಟಿಸಿದರು. ಮುಂದೆ ಈ ಹಾಡಿನ ಧ್ವನಿಮುದ್ರಣದ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಹೇಳಿದರಂತೆ: ‘ನಮ್ಮ ಪಾಡಿಗೆ ನಾವು ಬೆಟ್ಟ-ಗುಡ್ಡದ ಜಾಗದಲ್ಲಿ ಖುಷಿಯಿಂದ ಹಾಡುತ್ತಾ ಓಡಾಡಿದರೆ, ಅಲ್ಲಿರುವ ಪಕ್ಷಿಗಳು-ಕೋಗಿಲೆಗಳೂ ಹಿಮ್ಮೇಳ ಸೇರಿಸುವುದುಂಟು. ಹಾಗಾಗಿ, ಚರಣಗಳ ಕೊನೆಗೆ ಪಕ್ಷಿಯೊಂದರ ದನಿಯ ಸದ್ದು ಸೇರಿಸೋಣ…’
ಪರಿಣಾಮ ಏನಾಯಿತೆಂದರೆ, ಹಾಡಿನೊಳಗೆ ಪಕ್ಷಿಯ ಸದ್ದು ಜಾಗ ಪಡೆದುಕೊಂಡಿತು. ಆ ಮೂಲಕ ಹಾಡಿನ ಸೊಬಗು ಹೆಚ್ಚಿಸಿತು!
ಅಂದಹಾಗೆ, ಉರಿಯುತ್ತಿದ್ದ ಕರ್ಪೂರವನ್ನು ಕಂಡು ಇಂಥದೊಂದು ಮಧುರ ಹಾಡು ನೀಡಿದ ಆರ್ಎನ್ಜೆ ಜಾಣ. ಈ ಹಾಡಿನ ಹಿನ್ನೆಲೆಯ ಕಥೆ ಕೇಳಿದವರೂ ಕೂಡ ಅದನ್ನು ನಂಬಲು ಸಾಧ್ಯವಾಗದಂತೆ ಈ ಹೆಚ್ಚುವರಿ ಹಾಡನ್ನು ಅದ್ಭುತ ಎಂಬಂತೆ ಚಿತ್ರಿಸಿದ ಪುಟ್ಟಣ್ಣ ಕಣಗಾಲ್- ಜಾಣರ ಜಾಣ. ಹೌದಲ್ಲವೆ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: