ವಿಧಾನಸೌಧ ಕಟ್ಟುತ್ತಿದ್ದ ಕಾರ್ಮಿಕರ ಸಂಕಟವೂ ಈ ಹಾಡಿನ ಹಿಂದಿತ್ತು!

ghantasala

ದೇವ ನಿನ್ನ ರಾಜ್ಯದ ನ್ಯಾಯವಿದೇನಾ?
ಚಿತ್ರ: ಭಾಗ್ಯಚಕ್ರ. ಗೀತೆ ರಚನೆ: ಗೀತಪ್ರಿಯ.
ಸಂಗೀತ: ವಿಜಯಭಾಸ್ಕರ್. ಗಾಯನ: ಘಂಟಸಾಲ.

ದೇವ ನಿನ್ನ ರಾಜ್ಯದ ನ್ಯಾಯವಿದೇನಾ
ನ್ಯಾಯ ವಿದೇನಾ, ಧರ್ಮವಿದೇನಾ
ಲೋಕದಲ್ಲಿ ಒಬ್ಬ ಸೂರ್ಯ ಒಬ್ಬನೇ ಚಂದಿರ
ಒಬ್ಬನೇ ಚಂದಿರ
ಎಲ್ಲರಿಗೂ ಒಂದೇ ಭೂಮಿ,
ಒಂದೇ ಇಹುದು ಅಂಬರಾ
ಆದರೇಕೆ ಜಗದಲಿ ಬೇಧಭಾವನಾ? ||ಪ||

ಲೋಕದ ಈ ಗೋಳು ನೋಡಿ ಗುಡಿಗಳಲ್ಲಿ ಅವಿತೆಯಾ
ಕಲ್ಲು ಮಾಡಿ ಹೃದಯವಾ ಕಲ್ಲಾಗಿ ಕುಳಿತೆಯಾ
ಮರೆತೆಯೇನು ಬಡವರಾ ಶೋಕಜೀವನಾ ||೧||

ತುಂಬಿಹುದು ಸುತ್ತಲೂ ಪಾಪಿಗಳ ಪಂಗಡ
ವಂಚನೆಯು ಮುತ್ತಿರಲು ಸ್ವಾರ್ಥತೆಯ ಸಂಗಡ
ಲೋಕದಲ್ಲಿ ಎಲ್ಲೆಲ್ಲೂ ಕತ್ತಲೆಯೇನಾ ||೨||
ಶ್ರಮಕ್ಕೆ ಪ್ರತಿಫಲ ದೊರಕದೆ ಹೋದಾಗ, ಸಂಕಟದ ಸಂದರ್ಭದಲ್ಲಿ ಯಾರೂ ನೆರವಿಗೆ ಬಾರದೆ ಹೋದಾಗ, ನ್ಯಾಯ ಸಿಗದೆ ಹೋದಾಗ, ಒಂದರ ಹಿಂದೊಂದು ಕಷ್ಟಗಳು ಜತೆಯಾದಾಗ ಏನಾಗುತ್ತದೆ ಹೇಳಿ? ಸಹಜವಾಗಿಯೇ ಕಾಣದ ಆ ದೇವರ ಮೇಲೆ ಸಿಟ್ಟು ಬರುತ್ತದೆ. ‘ನಾವು ಇಷ್ಟೆಲ್ಲ ಕಷ್ಟ ಪಡ್ತಾ ಇದ್ರೂ ಆ ದೇವರು ನೆರವಿಗೆ ಬರಲಿಲ್ಲವಲ್ಲ ಎನ್ನಿಸಿ ಸಂಕಟವಾಗುತ್ತದೆ. ಹಗಲು ರಾತ್ರಿ ನಿನ್ನ ಧ್ಯಾನದಲ್ಲೇ ಇದ್ದರೂ ನಮಗೆ ಒಳ್ಳೆಯದು ಮಾಡಲಿಲ್ವಲ್ಲಪ್ಪಾ ದೇವರೆ, ಇದೇನಾ ನಿನ್ನ ನ್ಯಾಯ? ಎಂದು ಜಬರಿಸಿ ಕೇಳುವ ಮನಸ್ಸಾಗುತ್ತದೆ. ಇಂಥದೊಂದು ಭಾವ ಜತೆಯಾದಾಗ ನೆನಪಿಗೆ ಬರುವುದೇ, ಭಾಗ್ಯಚಕ್ರ ಸಿನಿಮಾದ ಹಾಡು: ‘ದೇವ ನಿನ್ನ ರಾಜ್ಯದ ನ್ಯಾಯವಿದೇನಾ?’
೬೦ರ ದಶಕದಲ್ಲಿ ಮಾತ್ರವಲ್ಲ, ಈಗಲೂ ಆಕಾಶವಾಣಿಯಲ್ಲಿ ಮೇಲಿಂದ ಮೇಲೆ ಮೆಚ್ಚಿನ ಗೀತೆಯಾಗಿ ಪ್ರಸಾರವಾಗುವುದು ಈ ಗೀತೆಯ ಹೆಚ್ಚುಗಾರಿಕೆ. ಇದು ನೊಂದವರ ಎದೆಯ ಹಾಡು. ಅಸಹಾಯಕರ ಕರುಳಿನ ಹಾಡು. ಮಾತಿಲ್ಲದವರ ಮನಸ್ಸಿನ ಹಾಡು. ಭಿಕ್ಷುಕರ ಪಾಲಿಗೆ ಹಸಿವಿನ ಹಾಡು. ದೇವರಿಗೆ ಛಾಲೆಂಜ್ ಎಸೆಯುತ್ತಾರಲ್ಲ? ಅವರ ಪಾಲಿನ ಆಕ್ರೋಶದ ಹಾಡು.
ನೊಂದವರೆಲ್ಲರೂ ಪದೇ ಪದೆ ನೆನಪು ಮಾಡಿಕೊಳ್ಳುವ ಈ ಹಾಡು ಬರೆದವರು ಗೀತಪ್ರಿಯ. ಅವರ ಒರಿಜಿನಲ್ ಹೆಸರು ಲಕ್ಷ್ಮಣರಾವ್ ಮೋಹಿತೆ. ಮಿಲಿಟರಿ ಪರಂಪರೆಯ ಕುಟುಂಬದಿಂದ ಬಂದವರು ಮೋಹಿತೆ. ಅವರ ತಂದೆ, ತಾತ, ಮುತ್ತಾತ ಕೂಡ ಸೇನೆಯಲ್ಲಿದ್ದವರೇ. ಮೋಹಿತೆಯವರ ತಂದೆ, ಮೊದಲನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ರ ಸೇನಾನಿ. ಸ್ವಾರಸ್ಯವೆಂದರೆ, ಲಕ್ಷ್ಮಣರಾವ್ ಮೋಹಿತೆಯವರ ತಂದೆ ಇದ್ದರಲ್ಲ? ಅದೇ ಮಿಲಿಟರಿ ಕ್ಯಾಂಪ್ನಲ್ಲಿ ಹಿರಿಯ ಕವಿ ಪು.ತಿ.ನ. ಅವರಿದ್ದರು. ಅವರ ಸಖ್ಯ ಮೋಹಿತೆಯವರನ್ನು ಪದ್ಯ ಬರೆಯುವಂತೆ, ನಾಟಕ ಬರೆಯುವಂತೆ ಪ್ರೇರೇಪಿಸಿತು.
ಹೀಗೆ, ನಾಟಕ-ಪದ್ಯ ಬರೆದುಕೊಂಡಿದ್ದ ಲಕ್ಷ್ಮಣರಾವ್ ಮೋಹಿತೆಯವರು ‘ಗೀತಪ್ರಿಯ’ ಎಂದು ಹೆಸರು ಬದಲಿಸಿಕೊಂಡಿದ್ದೇಕೆ? ಮಿಲಿಟರಿ ಕ್ಯಾಂಪು ಬಿಟ್ಟು ಚಿತ್ರರಂಗಕ್ಕೆ ಬಂದದ್ದೇಕೆ? ಹಾಗೆ ಬಂದವರು, ದೇವರನ್ನೇ ಪ್ರಶ್ನಿಸುವಂಥ ಸವಾಲಿನ ಹಾಡು ಬರೆದಿದ್ದೇಕೆ ಎಂಬ ಪ್ರಶ್ನೆಗೆ ಗೀತಪ್ರಿಯ ಅವರು ಉತ್ತರಿಸಿದ್ದು ಹೀಗೆ: ‘ನನಗಾಗ ಹದಿನೇಳು ವರ್ಷ. ನಾನಾಗ ಸೆಕೆಂಡ್ ಪಿಯೂಸಿಯಲ್ಲಿದ್ದೆ. ಡಿಗ್ರಿ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಅದು ನಮ್ಮ ತಂದೆಯವರ ಆಸೆಯೂ ಆಗಿತ್ತು.
ಹೀಗಿದ್ದಾಗಲೇ ನನ್ನ ತಂದೆಯವರು ಕಾಯಿಲೆ ಬಿದ್ದು ದಿಢೀರ್ ತೀರಿಕೊಂಡರು. ಮನೆಯಲ್ಲಿ ಒಟ್ಟು ಎಂಟು ಜನರಿದ್ದೆವು. ಎಲ್ಲರಿಗೂ ಅಪ್ಪನ ದುಡಿಮೆಯೇ ಆಧಾರವಾಗಿತ್ತು. ಅಪ್ಪನಿಲ್ಲದ ಸಂದರ್ಭದಲ್ಲಿ ಉಳಿದವರನ್ನು ಸಾಕಬೇಕಿತ್ತಲ್ಲ? ಅದೇ ಕಾರಣದಿಂದ, ನಾನು ಅನಿವಾರ್ಯವಾಗಿ ಓದು ನಿಲ್ಲಿಸಿದೆ. ಮೈಸೂರು ಲ್ಯಾನ್ಸರ್ ಕಂಪನಿಯಲ್ಲಿ ಕ್ಲರ್ಕ್ ಕೆಲಸಕ್ಕೆ ಸೇರಿಕೊಂಡೆ. ಒಂದೆರಡು ವರ್ಷದ ನಂತರ ಆ ಕಂಪನಿ ಕೂಡ ಮುಚ್ಚಿಹೋಯಿತು. ಪರಿಣಾಮ, ನಮ್ಮ ಕುಟುಂಬ, ಅಕ್ಷರಶಃ ಬೀದಿಗೆ ಬಿತ್ತು. ನನ್ನ ತಂಗಿಯರು ಊದುಬತ್ತಿ ಹೊಸೆಯುವ ಕೆಲಸಕ್ಕೆ ಹೋಗತೊಡಗಿದರು. ಇಂಥ ಸಂಕಟದ ಸಂದರ್ಭದಲ್ಲಿ ಹೀರಾಲಾಲ್ ಎಂಬ ಆತ್ಮೀಯರು ನನ್ನನ್ನು ಮದ್ರಾಸಿಗೆ ಆಹ್ವಾನಿಸಿದರು. ಸೋದರಮಾವ ನಾರಾಯಣರಾವ್ ರೈಲ್ವೆ ಪಾಸ್ ಕೊಡಿಸಿದರು. ಪದ್ಯ ಬರೆಯಲು ಗೊತ್ತಿತ್ತಲ್ಲ? ಅದೇ ಧೈರ್ಯದಿಂದ ಸಿನಿಮಾಕ್ಕೆ ಹಾಡು ಬರೆದೇ ಬದುಕಬಹುದು ಎಂದು ನಾನೂ ಲೆಕ್ಕಹಾಕಿದ್ದೆ. ಹಾಗೆ ಹೋದವನು ವಿಜಯಭಾಸ್ಕರ್ ಅವರ ಶಿಫಾರಸಿನ ಮೆಲೆ ‘ಶ್ರೀರಾಮ ಪೂಜಾ’ ಚಿತ್ರಕ್ಕೆ ಚಿತ್ರಕತೆ-ಹಾಡು ಬರೆದೆ.
ಈ ಸಂದರ್ಭದಲ್ಲಿ ನನ್ನ ಮುದ್ದಾದ ಅಕ್ಷರ ಹಾಗೂ ನಾನು ಹಾಡು ಬರೆಯುವಾಗ ತೋರಿಸುವ ಶ್ರದ್ಧೆಯನ್ನು ಗಮನಿಸಿದ ವಿಜಯಭಾಸ್ಕರ್- ನೀನು ಮನಸ್ಸಿಗೆ ಒಪ್ಪಿಗೆಯಾಗುವಂತೆ ಬರೀತೀಯ. ಹಾಗಾಗಿ ಇನ್ನು ಮುಂದೆ ನಿನ್ನ ಹೆಸರನ್ನು ‘ಗೀತಪ್ರಿಯ’ ಅಂತಾನೇ ಇಟ್ಕೋ ಅಂದರು. ಅವತ್ತಿನಿಂದಲೇ ನಾನು ಗೀತಪ್ರಿಯ ಎಂದು ಹೆಸರಾದೆ.
‘ಶ್ರೀರಾಮ ಪೂಜಾ’ ಚಿತ್ರಕ್ಕೆ ಹಾಡು ಬರೆದೆನಲ್ಲ? ನಂತರ ಅಂಥ ಅವಕಾಶಗಳು ಸಿಗಲೇ ಇಲ್ಲ. ಆಗೆಲ್ಲಾ ವರ್ಷಕ್ಕೆ ತಯಾರಾಗುತ್ತಿದ್ದುದೇ ನಾಲ್ಕೈದು ಚಿತ್ರಗಳು. ಹಾಗಾಗಿ ಅದನ್ನೇ ನಂಬಿ ಕೂರುವಂತೆಯೂ ಇರಲಿಲ್ಲ. ತಕ್ಷಣವೇ ಮದ್ರಾಸಿನಿಂದ ಬೆಂಗಳೂರಿಗೆ ಬಂದೆ. ನನ್ನ ಹಿತೈಷಿಯಾಗಿದ್ದ ಶಂಕರನಾರಾಯಣ್ ಎಂಬುವವರು ಕಬ್ಬನ್ಪಾರ್ಕ್ನಲ್ಲಿದ್ದ ರೆಸ್ಟೊರೆಂಟ್ನಲ್ಲಿ ಬಿಲ್ ರೈಟರ್ ಕೆಲಸ ಕೊಡಿಸಿದರು.
ನಮ್ಮ ಮನೆ ಆಗ ಮುನಿರೆಡ್ಡಿ ಪಾಳ್ಯದಲ್ಲಿತ್ತು. ಬೆಳಗಿನ ಜಾವ ಐದಕ್ಕೇ ಮನೆಬಿಟ್ಟು ನಡೆದುಕೊಂಡೇ ಹೋಗಿ ರೆಸ್ಟೊರೆಂಟ್ ತಲುಪಿದರೆ ರಾತ್ರಿ ಹತ್ತರವರೆಗೆ ಕೆಲಸ. ಮಧ್ಯದಲ್ಲಿ ಎಲ್ಲೂ ಹೊರಗಡೆ ಹೋಗುವಂತಿರಲಿಲ್ಲ. ಉಳಿದವರಿಗೆಲ್ಲ ದಿನಕ್ಕೆ ಎಂಟು ಗಂಟೆ ಕೆಲಸ. ನನಗೋ ಸಮಯದ ಲೆಕ್ಕವಿಲ್ಲದ ಚಾಕರಿಕೆ. ಅಲ್ಲಿ ಕೊಡುತ್ತಿದ್ದುದು ಕೆಲವೇ ರೂಪಾಯಿಗಳ ಸಂಬಳ. ಅದಕ್ಕಾಗಿ ಹನ್ನೆರಡು ಗಂಟೆಗೂ ಹೆಚ್ಚು ಅವ ದುಡಿಯಬೇಕಿತ್ತು. ದಿನವೂ ರಾತ್ರಿ ಹತ್ತಕ್ಕೆ, ಅವತ್ತವತ್ತಿನ ಅಕೌಂಟ್ ಕೊಟ್ಟು, ನಂತರ ಕಾಲ್ನಡಿಗೆಯಲ್ಲಿ, ಗವ್ವೆನ್ನುವ ಕತ್ತಲಲ್ಲಿ ಮನೆಗೆ ನಡೆದೇ ಹೋಗುತ್ತಿದ್ದೆ.
ಆಗಷ್ಟೇ ವಿಧಾನಸೌಧ ನಿರ್ಮಾಣದ ಕೆಲಸ ಶುರುವಾಗಿತ್ತು. ಸುತ್ತಲೂ ಕಾಂಪೌಂಡ್ ಹಾಕಿಕೊಂಡು ಕೆಲಸ ಮಾಡುತ್ತಿದ್ದರು. ನಾನು ದಿನಾಲೂ ಬೆಳಗ್ಗೆ ಮತ್ತು ರಾತ್ರಿ ಆದೇ ದಾರಿಯಲ್ಲಿ ಓಡಾಡುತ್ತಿದ್ದೆನಲ್ಲ? ಆಗೆಲ್ಲ ಕೂಲಿ ಕಾರ್ಮಿಕರ ಸಂಕಟದ ಮಾತು ಕಿವಿಗೆ ಬೀಳುತ್ತಲೇ ಇತ್ತು. ಆಕಸ್ಮಿಕವಾಗಿ ಯಾವತ್ತಾದರೂ ಮಧ್ಯಾಹ್ನದ ವೇಳೆ ಅತ್ತ ಬಂದರೆ, ಕೆಲಸ ಮಾಡಿಸುತ್ತಿದ್ದ ಮೇಸ್ತ್ರಿಗಳ ದರ್ಪದ ಮಾತು, ಕೂಲಿಗಳ ಅಸಹಾಯಕತೆ, ಮೈತುಂಬಾ ಹರಿಯುತ್ತಿದ್ದ ಬೆವರು ಎದ್ದು ಕಾಣುತ್ತಿತ್ತು. ಅದನ್ನೆಲ್ಲ ಕಂಡಾಗ, ಈ ದೇಶದಲ್ಲಿ ಪುಂಡರು, ಕೇಡಿಗರೆಲ್ಲ ಆರಾಮಾಗೇ ಇದ್ದಾರೆ. ಬಡವರು, ಪ್ರಾಮಾಣಿಕರು ಮಾತ್ರ ಸಂಕಟದಲ್ಲಿಯೇ ಕೈತೊಳೀತಾ ಇದ್ದಾರೆ. ಆ ದೇವರು, ಇದನ್ನೆಲ್ಲ ಕಂಡೂ ಕಾಣದವನಂತೆ ದೇವಸ್ಥಾನದೊಳಗೆ ಕೂತುಬಿಟ್ಟಿದ್ದಾನೆ ಅನ್ನಿಸ್ತಾ ಇತ್ತು.
ಈ ಮಧ್ಯೆ ನನ್ನ ಬದುಕೂ ಕಷ್ಟದ ಮಧ್ಯೆಯೇ ಸಾಗ್ತಾ ಇತ್ತು. ನನ್ನ ಸಿನಿಮಾ ಗೀಳು ಕಂಡು ಬಂಧುಗಳೆಲ್ಲ ಗೇಲಿ ಮಾಡ್ತಿದ್ರು. ಇವನು ಹಾಳಾಗಿ ಹೋಗ್ತಾನೆ. ಉದ್ಧಾರ ಆಗಲ್ಲ ಅಂತಿದ್ರು. ಏಳು ಜನರ ಸಂಸಾರದ ಹೊಣೆ ನನ್ನ ಮೇಲಿತ್ತಲ್ಲ? ಆ ಕಾರಣದಿಂದ ಎಲ್ಲ ಅವಮಾನವನ್ನೂ ಸಹಿಸಿಕೊಂಡು ಮುಂದುವರಿಯುತ್ತಿದ್ದೆ. ನಾನು ಪಡುತ್ತಿದ್ದ ಕಷ್ಟ ಕಂಡು ನಮ್ಮ ತಾಯಿ ಬಿಕ್ಕಳಿಸಿ ಅಳುತ್ತಿದ್ದರು. ಬೆಳಗ್ಗೆ ಮತ್ತು ರಾತ್ರಿಯ ವೇಳೆ ಒಬ್ಬಂಟಿಯಾಗಿ ನಡೆದು ಬರುತ್ತಿದ್ದ ಸಂದರ್ಭದಲ್ಲಿ ಈ ಸಂಕಟದ ಬದುಕು ನೆನಪಾಗಿ ದುಃಖ ಉಮ್ಮಳಿಸಿ ಬರುತ್ತಿತ್ತು. ಮೌನವಾಗಿ ಅತ್ತು ಹಗುರಾಗುತ್ತಿದ್ದೆ.
ಹೀಗಿದ್ದಾಗಲೇ ಅದೊಂದು ರಾತ್ರಿ- ‘ದೇವರಿಗೆ ನನ್ನ ಮೇಲೆ ಇನ್ನೂ ಕರುಣೆ ಬರಲಿಲ್ಲವಲ್ಲ? ಅವನಿಗೆ ಇದೆಲ್ಲ ಕಾಣಿಸುವುದೇ ಇಲ್ಲವೆ’ ಅನ್ನಿಸಿದಾಗ, ಹಾಡಿನ ಸಾಲುಗಳು ಒಂದರ ಹಿಂದೊಂದು ಹೊಳೆದವು. ತಕ್ಷಣವೇ- ‘ದೇವ ನಿನ್ನ ರಾಜ್ಯದ ನ್ಯಾಯವಿದೇನಾ?/ ಬಡವರ ಈ ಗೋಳು ನೋಡಿ ಗುಡಿಗಳಲ್ಲಿ ಅವಿತೆಯಾ/ ಕಲ್ಲು ಮಾಡಿ ಹೃದಯವ ಕಲ್ಲಾಗಿ ಕುಳಿತೆಯಾ/ ಅರ್ಚಕರ ಆಶ್ರಯದಿ ಸ್ವೀಕರಿಸಿ ಪೂಜೆಯಾ/ ಮರೆತೆಯೇನು ಬಡವರ ಶೋಕ ಜೀವನಾ’ ಎಂದು ಬರೆದಿಟ್ಟೆ.
ಮುಂದೆ- ‘ಭಾಗ್ಯಚಕ್ರ’ ಸಿನಿಮಾಕ್ಕೆ ಹಾಡು ಬರೆಯಲು ಕರೆಬಂತು. ಮದ್ರಾಸಿಗೆ ಹೋದೆ. ‘ಶ್ರೀಮಂತ ಯುವಕನೊಬ್ಬ ಅವಿವೇಕದಿಂದ ಕಷ್ಟದಲ್ಲಿ ಸಿಲುಕುತ್ತಾನೆ. ಅಂಥ ಸಂದರ್ಭದಲ್ಲಿ ನಾಯಕಿ ಅಸಹಾಯಕತೆಯಿಂದ ದೇವರ ಮುಂದೆ ನಿಂತು ನ್ಯಾಯ ಕೇಳಬೇಕು. ಅದಕ್ಕೆ ಹೊಂದಿಕೆಯಾಗುವಂಥ ಹಿನ್ನೆಲೆ ಹಾಡು ಬರೆದು ಕೊಡಿ’ ಎಂದರು.
ತಕ್ಷಣವೇ ನನಗೆ ನನ್ನ ಸಂಕಟದ ಬದುಕು ನೆನಪಿಗೆ ಬಂತು. ಹಿಂದೆಯೇ ವಿಧಾನಸೌಧದ ಕಾಂಪೌಂಡಿನ ಹಿಂದೆ ಹಸಿವು, ಬಡತನ ಹಾಗೂ ಸುಸ್ತಿನಿಂದ ಬಿಕ್ಕಳಿಸುತ್ತಿದ್ದ ಕಾರ್ಮಿಕರ ನೋವೂ ನೆನಪಾಯಿತು. ಈ ಜಗತ್ತಿಗೆ ಒಬ್ಬನೇ ಸೂರ್ಯ, ಒಬ್ಬನೇ ಚಂದ್ರ, ಎಲ್ಲರೂ ಉಸಿರಾಡುವುದು ಒಂದೇ ಗಾಳಿ, ಕುಡಿಯುವುದೂ ಒಂದೇ ನೀರು. ಹಾಗಿದ್ದರೂ ಬೇಧ-ಭಾವ ತೋರುವುದೇಕೆ? ಕಣ್ಣೆದುರೇ; ದೇವಾಲಯಗಳಲ್ಲೇ ಅನ್ಯಾಯ ನಡೆದರೂ ದೇವರು ಸುಮ್ಮನಿರ್ತಾನಲ್ಲ ಏಕೆ ಅನ್ನಿಸಿತು. ಆಮೇಲೆ, ಹಿಂದೊಂದು ರಾತ್ರಿ ಬಿಕ್ಕಳಿಸುತ್ತ ಬರೆದಿದ್ದ ಹಾಡನ್ನೇ ಸ್ವಲ್ಪ ಬದಲಾಯಿಸಿ ಬರೆದೆ. ಆ ಹಾಡನ್ನು ಜನ ಹೇಗೆ ಸ್ವೀಕರಿಸುತ್ತಾರೋ ಏನೋ ಎಂಬ ಭಯವಿತ್ತು. ಆದರೆ, ಅದನ್ನು ‘ನಮ್ಮೆದೆಯ ಹಾಡು’ ಎಂದು ಜನ ಸ್ವೀಕರಿಸಿದರು…’
* * *
ಇಷ್ಟು ಹೇಳಿ ಕ್ಷಣ ಮೌನವಾಗಿದ್ದ ಗೀತಪ್ರಿಯ ಮುಂದುವರಿದು ಹೀಗೆಂದರು: ನಾನು ಬರೆದ ನೋವಿನ ಹಾಡುಗಳಲ್ಲಿ ನನ್ನ ಸಂಕಟವಿದೆ. ಬದುಕಿನ ಕಥೆಯಿದೆ. ಅದನ್ನು ತಮ್ಮೆಲ್ಲರ ಸಂಕಟದ ಹಾಡೆಂದು ಒಪ್ಪಿಕೊಂಡದ್ದು ಕನ್ನಡಿಗರ ಹೆಚ್ಚುಗಾರಿಕೆ. ಅವರ ಪ್ರೀತಿಗೆ ನಾನು ಚಿರಋಣಿ…

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: