ನಿರ್ದೇಶಕರು ರೇಗಿಸುತ್ತಾ ಹೇಳಿದ ಮಾತೇ ಸೂರ್ತಿ ಸೆಲೆಯಂಥಾ ಹಾಡಿಗೆ ಕಾರಣವಾಯಿತು!

78px-G_K_Venkatesh

ಆಗದು ಎಂದು… ಕೈಲಾಗದು ಎಂದು…
ಚಿತ್ರ: ಬಂಗಾರದ ಮನುಷ್ಯ. ಗೀತೆ ರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ: ಪಿ.ಬಿ. ಶ್ರೀನಿವಾಸ್

ಆಗದು ಎಂದು… ಕೈಲಾಗದು ಎಂದು
ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ
ಸಾಗದು ಕೆಲಸವು ಮುಂದೆ ||ಪ||
ಮನಸೊಂದಿದ್ದರೆ ಮಾರ್ಗವು ಉಂಟು
ಕೆಚ್ಚೆದೆ ಇರಬೇಕೆಂದು
ಕೆಚ್ಚೆದೆ ಇರಬೇಕೆಂದೆಂದು ||ಅ.ಪ.||

ಕೆತ್ತಲಾಗದು ಕಗ್ಗಲ್ಲೆಂದು ಎದೆಗುಂದಿದ್ದರೆ ಶಿಲ್ಪಿ
ಆಗುತಿತ್ತೆ ಕಲೆಗಳ ಬೀಡು, ಗೊಮ್ಮಟೇಶನ ನೆಲೆ ನಾಡು
ಬೇಲೂರು, ಹಳೆಬೀಡು
ಬೇಲೂರು, ಹಳೆಬೀಡು ||೧||

ಕಾವೇರಿಯನು ಹರಿಯಲು ಬಿಟ್ಟು
ವಿಶ್ವೇಶ್ವರಯ್ಯ ಶ್ರಮಪಡದಿದ್ದರೇ
ಕನ್ನಂಬಾಡಿಯ ಕಟ್ಟದಿದ್ದರೇ
ಬಂಗಾರ ಬೆಳೆವ ಹೊನ್ನಾಡು… ಅಹ
ಬಂಗಾರ ಬೆಳೆವ ಹೊನ್ನಾಡು
ಆಗುತಿತ್ತೇ ಈ ನಾಡು ಕನ್ನಡ ಸಿರಿನಾಡು
ನಮ್ಮ ಕನ್ನಡ ಸಿರಿನಾಡು ||೨||

ಕೈಕೆಸರಾದರೆ ಬಾಯ್ ಮೊಸರೆಂಬ
ಹಿರಿಯರ ಅನುಭವ ಸತ್ಯ
ಇದ ನೆನಪಿಡಬೇಕು ನಿತ್ಯ
ದುಡಿಮೆಯ ನಂಬಿ ಬದುಕು
ಅದರಲೇ ದೇವರ ಹುಡುಕು
ಬಾಳಲಿ ಬರುವುದು ಬೆಳಕು,
ನಮ್ಮ ಬಾಳಲಿ ಬರುವುದು ಬೆಳಕು ||೩||
‘ಚಿತ್ರಗೀತೆ ಏನ್ ಮಹಾ ಬಿಡ್ರಿ, ಅದು ಬರೀ ಪದಗಳ ಸಮೂಹ. ಅದೊಂದು ಅಗ್ಗದ ಕವಿತೆ. ಪ್ರಾಸಗಳಿಂದ ಶುರುವಾಗಿ ಪ್ರಾಸದಿಂದಲೇ ಕೊನೆಯಾಗುವ ಹಾಡು ಅದು. ಅದರಲ್ಲೇನಿದೆ ಮಹಾ?’ ಎಂದು ಟೀಕಿಸುವ ಮಂದಿ ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಸತ್ಯ ಏನೆಂದರೆ, ಚಿತ್ರಗೀತೆ ಎಂಬುದು- ಎಲ್ಲ ವರ್ಗದವರನ್ನೂ ಸುಲಭವಾಗಿ ಮತ್ತು ಖಚಿತವಾಗಿ ತಲುಪಬಲ್ಲ ಒಂದು ಸಾಹಿತ್ಯ ಪ್ರಕಾರ. ಒಂದು ಚಿತ್ರಗೀತೆ, ಕವಿತೆಗಿಂತ ಬೇಗ ಜನಸಾಮಾನ್ಯರನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದೆ ಎಂಬುದು ಎಲ್ಲರೂ ಒಪ್ಪಲೇಬೇಕಾದ ಸತ್ಯ.
ಸಿನಿಮಾಗಳಿಗೆ ಹಾಡು ಬರೆಯುವ ಗೀತೆರಚನೆಕಾರನಿಗೆ ಒಂದು ‘ವಿಶೇಷ ಶಕ್ತಿ’ ಇದ್ದರೆ; ಆತ ಜಾಣನಾಗಿದ್ದರೆ; ಪದಗಳೊಂದಿಗೆ ಆಟವಾಡುವ ಕುಶಲಕಲೆ ಬಲ್ಲವನಾಗಿದ್ದರೆ ವಿeನದ ವಿಷಯವನ್ನೂ ಒಂದು ಜನಪ್ರಿಯ ಚಿತ್ರಗೀತೆಯಾಗಿ ಕೇಳಿಸಬಲ್ಲ. ಇತಿಹಾಸದ ಪುಟಗಳನ್ನೇ ಗೀತೆಯೊಂದರಲ್ಲಿ ತೆರೆದಿಡಬಲ್ಲ. ರಾಮಾಯಣ/ಮಹಾಭಾರತದ ಇಡೀ ಕಥೆಯನ್ನು ಒಂದು ಹಾಡಿನಲ್ಲಿ ಹೇಳಿಬಿಡಬಲ್ಲ. ಅದು ಚಿತ್ರಗೀತೆ ಮತ್ತು ಗೀತೆರಚನೆಕಾರನ ಶಕ್ತಿ.
ಉದಾಹರಣೆಗೆ, ‘ಬೇಡಿ ಬಂದವಳು’ ಚಿತ್ರದ ‘ಏಳು ಸ್ವರವು ಸೇರಿ ಸಂಗೀತವಾಯಿತು’ ಗೀತೆಯನ್ನು ಗಮನಿಸಿ. ವಿeನದ ವಿಚಾರ ಈ ಹಾಡಿನ ಪ್ರತಿ ಸಾಲಿನಲ್ಲೂ ಇದೆ. ಪಾಠದ ಅಥವಾ ಸಂಭಾಷಣೆಯ ರೂಪದಲ್ಲಿ ಹೇಳುತ್ತ ಹೋಗಿದ್ದರೆ ಒಂದೊಂದು ಪ್ಯಾರಾ ಆಗಬಹುದಾಗಿದ್ದ ವಿಚಾರ, ಕೇವಲ ಒಂದೇ ಸಾಲಿನ ಹಾಡಿನಲ್ಲಿ ಮುಗಿದುಹೋಗುತ್ತದೆ. ಉದಾಹರಣೆ, ಆ ಹಾಡಿನ ಸಾಲು ಗಮನಿಸಿ: ‘ಕಡಲಿನಿಂದ ನೀರ ಆವಿ ಮೋಡವಾಯಿತು, ಮೋಡ ಗಿರಿಗೆ ಮುತ್ತನಿಡೆ ಮಳೆಯು ಆಯಿತು…’
ಆರ್.ಎನ್. ಜಯಗೋಪಾಲ್ ಅವರೊಳಗೆ ಎಂಥ ಕವಿಯಿದ್ದ ಗೊತ್ತೆ ಎಂಬುದಕ್ಕೆ ಒಂದು ಉದಾಹರಣೆಯಾಗಿ ಮೇಲಿನ ಮಾತುಗಳನ್ನು ಹೇಳಬೇಕಾಯಿತು.
* * *
ಎಪ್ಪತ್ತೈದು ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಉಳಿದೆಲ್ಲ ಚಿತ್ರಗಳದ್ದು ಒಂದು ತೂಕವಾದರೆ ‘ಬಂಗಾರದ ಮನುಷ್ಯ’ ಚಿತ್ರದ್ದೇ ಒಂದು ತೂಕ. ಈ ಸಿನಿಮಾ ಉಂಟುಮಾಡಿದ ಸಾಮಾಜಿಕ ಪರಿಣಾಮಗಳಿಗೆ ಲೆಕ್ಕವಿಲ್ಲ. ಈ ಚಿತ್ರ ಸೃಷ್ಟಿಸಿದ ದಾಖಲೆಗಳಿಗೆ ಕೊನೆಮೊದಲಿಲ್ಲ. ಮೂವತ್ತೇಳು ವರ್ಷಗಳ ಹಿಂದೆ; ಅಂದರೆ ೧೯೭೨ರಲ್ಲಿ ತೆರೆಕಂಡು ಸತತ ಎರಡು ವರ್ಷ ಓಡಿ ದಾಖಲೆ ಸ್ಥಾಪಿಸಿದ ಚಿತ್ರ ‘ಬಂಗಾರದ ಮನುಷ್ಯ’. ಈಗ ತೆರೆಕಂಡರೂ ಕೂಡ ನಿರಾಯಾಸವಾಗಿ ಹೌಸ್ಫುಲ್ ಪ್ರದರ್ಶನದಲ್ಲಿ ನೂರು ದಿನ ಓಡುತ್ತದೆ ಎಂಬುದು ಆ ಚಿತ್ರದ ಹೆಚ್ಚುಗಾರಿಕೆ.
ಟಿ.ಕೆ. ರಾಮರಾವ್ ಅವರ ಕಾದಂಬರಿ ಆಧರಿಸಿದ ‘ಬಂಗಾರದ ಮನುಷ್ಯ’ ಚಿತ್ರಕ್ಕೆ ಹಾಡು ಬರೆದಾಗ ಆರ್.ಎನ್. ಜಯಗೋಪಾಲ್ ಎದುರಿಸಿದ ಸವಾಲು; ಅವರೊಳಗೆ ಹಾಡಿನ ಮೊದಲ ಸಾಲು ಸೃಷ್ಟಿಯಾದ ಘಳಿಗೆಯಿದೆಯಲ್ಲ? ಅದೂ ಸ್ವಾರಸ್ಯಕರವೇ.
ಹೇಗೆಂದರೆ, ತಮ್ಮ ಚಿತ್ರ ಎಲ್ಲ ರೀತಿಯಿಂದಲೂ ಶ್ರೀಮಂತವಾಗಿರಬೇಕು ಎಂದು ಆಸೆಪಟ್ಟಿದ್ದ ನಿರ್ದೇಶಕ ಸಿದ್ಧಲಿಂಗಯ್ಯ, ಗೀತೆರಚನೆಯ ಜವಾಬ್ದಾರಿಯನ್ನು ಹುಣಸೂರು ಕೃಷ್ಣಮೂರ್ತಿ, ಚಿ. ಉದಯಶಂಕರ್ ಹಾಗೂ ಆರ್.ಎನ್. ಜಯಗೋಪಾಲ್ ಅವರಿಗೆ ವಹಿಸಿದ್ದರು. ಒಂದು ಸಿನಿಮಾದ ಎಲ್ಲ ಹಾಡುಗಳನ್ನೂ ಒಬ್ಬನೇ ಗೀತೆರಚನೆಕಾರ ಬರೆದಾಗ, ಅವನಿಗೆ ಒಂದು ಛಾಲೆಂಜಿಂಗ್ ಮೂಡ್ ಖಂಡಿತ ಇರುವುದಿಲ್ಲ. ಆದರೆ, ಒಂದೇ ಸಿನಿಮಾಕ್ಕೆ ಇಬ್ಬರು ಅಥವಾ ಮೂರು ಮಂದಿ ಬರೆದಾಗ ಮಾತ್ರ- ಉಳಿದವರಿಗಿಂತ ಚೆನ್ನಾಗಿ ಬರೆಯಬೇಕು ಎಂಬ ಹಟ ತಂತಾನೇ ಬಂದುಬಿಡುತ್ತದೆ. ‘ಬಂಗಾರದ ಮನುಷ್ಯ’ ಚಿತ್ರಕ್ಕೆ ಹಾಡು ಬರೆಯುವ ಸಂದರ್ಭದಲ್ಲಿ ಜಯಗೋಪಾಲ್ ಅವರ ಮನದಲ್ಲೂ ಅಂಥದೊಂದು ಭಾವ ಇದ್ದೇ ಇತ್ತು.
‘ಬಂಗಾರದ ಮನುಷ್ಯ’ ಚಿತ್ರದ ನಾಯಕ ವಿದ್ಯಾವಂತ. ಆತ ಪದವಿ ಮುಗಿಸಿದೊಡನೆ ಸರಕಾರಿ ನೌಕರಿಯ ಮೋಹಕ್ಕೆ ಬೀಳದೆ ಊರಿಗೆ ಬರುತ್ತಾನೆ. ಅಲ್ಲಿದ್ದ ರಾಚೂಟಪ್ಪ ಎಂಬಾತನ ನೆರವಿನಿಂದ ಜಮೀನು ಖರೀದಿಸಿ ಕೃಷಿ ಕೆಲಸಕ್ಕೆ ಮುಂದಾಗುತ್ತಾನೆ. ಈ ಸಂದರ್ಭ ವಿವರಿಸಿದ ಸಿದ್ಧಲಿಂಗಯ್ಯ ಹೇಳಿದರಂತೆ: ‘ನೋಡಿ ಜಯಗೋಪಾಲ್, ಈ ಹಾಡಲ್ಲಿ ಒಂದು ಸಂದೇಶ ಇರಬೇಕು, ಈ ಹಾಡು ಕೇಳಿದವರಿಗೆ ಒಂದು ಸೂರ್ತಿ ಸಿಗಬೇಕು. ವ್ಯವಸಾಯದ ಮೇಲೆ ಪ್ರೀತಿ ಹುಟ್ಟಬೇಕು. ಈ ಚಿತ್ರದಲ್ಲಿ ನಾಯಕ ಬರಡುಭೂಮಿ ಖರೀದಿಸಿ ಅಲ್ಲಿ ಕೃಷಿ ಮಾಡಲು ಹೊರಟಿರುತ್ತಾನೆ. ಅವನ ಬಳಿ ಬಂದ ರಾಚೂಟಪ್ಪ- ‘ಈ ಬರಡು ಭೂಮಿಯನ್ನು ಕಲ್ಲು ಒಡೆಯೋಕೆ ಅಂತ ತಗೊಂಡ್ಯಾ? ಈ ಜಮೀನಿನಲ್ಲಿ ವ್ಯವಸಾಯ ಮಾಡಲು ಆಗಲ್ಲ ಬಿಡಪ್ಪ’ ಎನ್ನುತ್ತಾನೆ. ಈ ಸಂದರ್ಭದಲ್ಲಿ ನಾಯಕ- ‘ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ’ ಎಂದು ಹೇಳಬೇಕು. ಅದನ್ನು ಸಂಭಾಷಣೆಯ ರೂಪದಲ್ಲಿ ಹೇಳಲು ಹೋದರೆ- ‘ಅದು ಜಂಭ ಕೊಚ್ಚಿಕೊಂಡ ಧಾಟಿ ಆಗಿಬಿಡುತ್ತೆ. ಹಾಗಾಗಿ, ಈ ಸಂದರ್ಭದ ಒಟ್ಟು ಸಾರವನ್ನು ಹೇಳುವಂಥ ಒಂದು ಹಾಡು ಬರೆದುಕೊಡಿ.ಅದು ಸರಳವಾಗಿರಬೇಕು. ತಕ್ಷಣ ಅರ್ಥವಾಗುವಂತಿರಬೇಕು ಎಂಬುದಷ್ಟೇ ನನ್ನ ಕಂಡೀಷನ್’ ಅಂದರಂತೆ.
‘ಸರಿ, ಬರೆದುಕೊಡ್ತೇನೆ’ ಎಂದರು ಜಯಗೋಪಾಲ್. ಆದರೆ ಹತ್ತು ನಿಮಿಷ ಕಳೆದರೂ ಅವರಿಗೆ ಮೊದಲ ಸಾಲು ಹೊಳೆಯಲಿಲ್ಲ. ಆಗ ಪ್ಯಾಡ್ ಮುಂದಿಟ್ಟುಕೊಂಡು, ಕೈಕಟ್ಟಿಕೊಂಡು ಕೂತ ಆರ್.ಎನ್.ಜೆ. ಆಗೊಮ್ಮೆ ಈಗೊಮ್ಮೆ ತೋರುಬೆರಳಿನಿಂದ ಕೆನ್ನೆ ತಟ್ಟಿಕೊಳ್ಳುತ್ತಾ- ‘ಛೆ, ಕೆಲಸ ಮುಂದುವರೀತಾನೇ ಇಲ್ವಲ್ಲ, ಹಾಡಿನ ಮೊದಲ ಸಾಲು ಹೊಳೀತಾನೇ ಇಲ್ವಲ್ಲ?’ ಎಂದು ತಮ್ಮಷ್ಟಕ್ಕೆ ತಾವೇ ಹೇಳಿಕೊಂಡರಂತೆ. ಅದೇ ವೇಳೆಗೆ ಅಲ್ಲಿಗೆ ಬಂದ ನಿರ್ದೇಶಕ ಸಿದ್ಧಲಿಂಗಯ್ಯನವರು, ರೇಗಿಸುವ ದನಿಯಲ್ಲಿ- ಆಗಲ್ಲ ಎಂದು ಕೂತರೆ ಏನೂ ಆಗಲ್ಲ ಜಯಗೋಪಾಲ್ ಅವರೇ. ಪ್ರಯತ್ನಪಟ್ರೆ ಎಲ್ಲವೂ ಆಗುತ್ತೆ. ವಿಶ್ವೇಶ್ವರಯ್ಯನವರು ಆಗಲ್ಲ ಅಂತ ಕೂತಿದ್ರೆ ಅಣೆಕಟ್ಟಾಗ್ತಾ ಇತ್ತೆ? ಶಿಲ್ಪಿಗಳು ಆಗಲ್ಲ ಅಂತ ಕೂತಿದ್ರೆ ಬೇಲೂರಾಗ್ತಿತ್ತೆ’ ಅಂದರು.
ಮರುಕ್ಷಣವೇ ಆರ್.ಎನ್.ಜೆ.ಯವರ ಕಣ್ಮುಂದೆ ಸಾವಿರ ವೋಲ್ಟ್ನ ಬಲ್ಬ್ ಝಗ್ಗನೆ ಮಿಂಚಿದಂತಾಯಿತು. ತಕ್ಷಣವೇ, ತಮ್ಮ ಆ ಕ್ಷಣದ ಸ್ಥಿತಿಯನ್ನೇ ಜತೆಗಿಟ್ಟುಕೊಂಡು ‘ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಎಂದು ಬರೆದೇಬಿಟ್ಟರು. ನಂತರ, ಸಿದ್ಧಲಿಂಗಯ್ಯನವರು ನೀಡಿದ ಉದಾಹರಣೆಗಳನ್ನೇ ಜತೆಗಿಟ್ಟುಕೊಂಡು ಮುಂದಿನ ಇಪ್ಪತ್ತು ನಿಮಿಷಗಳಲ್ಲೇ ಎರಡು ಚರಣ ಬರೆದರು. ನಂತರ, ತಮ್ಮ ತಂದೆ ನಾಗೇಂದ್ರರಾಯರು ಮೇಲಿಂದ ಮೇಲೆ ಹೇಳುತ್ತಿದ್ದ- ದುಡಿಮೆಯೇ ದೇವರು, ದುಡಿಮೆಯಲ್ಲೇ ದೇವರನ್ನು ಕಾಣಬೇಕು ಎಂಬ ಮಾತು ನೆನಪಾಯಿತು. ಅದನ್ನೂ ಜತೆಗಿಟ್ಟುಕೊಂಡು- ಕೈ ಕೆಸರಾದರೆ ಬಾಯಿ ಮೊಸರು ಎಂಬ ನಾಣ್ನುಡಿಯನ್ನೂ ಸೇರಿಸಿ ಮೂರನೇ ಚರಣ ಬರೆದು ಸಿದ್ಧಲಿಂಗಯ್ಯನವರಿಗೆ ಕೊಟ್ಟೇಬಿಟ್ಟರು.
ಅದನ್ನು ಕಂಡು ತುಂಬ ಖುಷಿಪಟ್ಟ ಸಿದ್ಧಲಿಂಗಯ್ಯನವರು- ‘ನನ್ನ ಮನಸಲ್ಲಿ ಇದ್ದುದನ್ನೆಲ್ಲ ಹಾಡಲ್ಲಿ ತಂದಿದ್ದೀರಿ. ಥ್ಯಾಂಕ್ಯೂ’ ಎಂದರಂತೆ. ನಂತರ ಚಿತ್ರೀಕರಣದ ಸಂದರ್ಭದಲ್ಲಿ ವಿಶ್ವೇಶ್ವರಯ್ಯನವರು ಭಾರತರತ್ನ ಪ್ರಶಸ್ತಿ ಪಡೆವ ಸಂದರ್ಭ; ಕಾವೇರಿಯಿಂದ ಕೃಷಿಭೂಮಿಯೆಲ್ಲಾ ಹಚ್ಚ ಹಸುರಿನಿಂದ ಕಂಗೊಳಿಸುವ ರಮಣೀಯ ದೃಶ್ಯವನ್ನೆಲ್ಲ ಸೇರಿಸಿ ಆ ಸನ್ನಿವೇಶದ ತೀವ್ರತೆಯನ್ನು ಹೆಚ್ಚಿಸಿದರು. ಓದುತ್ತ ಹೋದರೆ ಒಂದು ಗದ್ಯದಂತೆ ಕಾಣುವ ಈ ಹಾಡನ್ನು ತಮ್ಮ ಇಂಪಿಂಪಿಂಪಿಂಪು ಸಂಗೀತದಿಂದ ಜಿ.ಕೆ. ವೆಂಕಟೇಶ್ ಒಂದು ಸ್ಮರಣೀಯ ಹಾಡಾಗಿ ಬದಲಿಸಿಬಿಟ್ಟರು.
‘ಛೆ, ನನ್ನಿಂದ ಏನಾಗುತ್ತೆ ಬಿಡು’ ಎಂಬ ಹತಾಶೆಗೆ ಒಳಗಾಗುವ ಎಲ್ಲರಿಗೂ ಈಗಲೂ ಕೂಡ ಈ ಹಾಡೊಂದು ಸೂರ್ತಿ ಸೆಲೆ. ಇಷ್ಟೆಲ್ಲ ವಿವರಿಸಿದ ಮೇಲೆ ‘ಆಗದು ಎಂದು…’ ಹಾಡು ಮತ್ತು ‘ಬಂಗಾರದ ಮನುಷ್ಯ’ ಸಿನಿಮಾ ಉಂಟುಮಾಡಿದ ಸಾಮಾಜಿಕ ಪರಿಣಾಮದ ಬಗ್ಗೆಯೂ ಹೇಳಿಬಿಡಬೇಕು: ಏನೆಂದರೆ, ಬಂಗಾರದ ಮನುಷ್ಯ ಚಿತ್ರದಿಂದ ಸೂರ್ತಿ ಪಡೆದ ಅದೆಷ್ಟೋ ಮಂದಿ ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಸರಕಾರಿ ನೌಕರಿಯನ್ನು ಬಿಟ್ಟು ಕೃಷಿ ಆರಂಭಿಸಿದರು. ತಮ್ಮ ಪ್ರಯತ್ನದಲ್ಲಿ ಗೆದ್ದರು. ಹೀಗೆ ಗೆದ್ದ ಕೆಲವರಂತೂ ತಮ್ಮ ತೋಟಕ್ಕೆ ‘ಬಂಗಾರದ ಮನುಷ್ಯ’ ಎಸ್ಟೇಟ್ ಎಂದೇ ಹೆಸರಿಟ್ಟರು. ಹಲವಾರು ಸೋಲುಗಳಿಂದ ಕಂಗೆಟ್ಟು ಬದುಕಿಗೆ ಗುಡ್ಬೈ ಹೇಳಲು ಹೊರಟಿದ್ದ ಅದೆಷ್ಟೋ ಮಂದಿ ‘ಕೈ ಕಟ್ಟಿ ಕೂರುವುದು ಬೇಡ. ಏನಾದ್ರೂ ಸಾಸೋಣ’ ಎಂಬ ಉತ್ಸಾಹದಲ್ಲಿ ಹೊಸ ಬದುಕಿನ ಕನಸಿಗೆ ತೆರೆದುಕೊಂಡರು.
ಹಾಗೆ ನೋಡಿದರೆ, ಕಾಡುವ ಹಾಡುಗಳು ಕಟ್ಟಿಕೊಡುವ ಬೆರಗಿನ ಲೋಕಕ್ಕೆ ಕೊನೆಯೆಂಬುದೇ ಇಲ್ಲವೇನೋ…

4 Comments »

  1. 1

    Hi Mani,

    Bangaradha Manushya chitra estu sundaravagitho agadhuyendhu haadu kooda asthe sundara. E Haadu hutidha sandarbhavannu neevu vivarisiruva reeti kooda asthe adbutha. Nijavagalu naavu RNJ, Chi Udayshankar haagu Dr.Raj anthavaranna kaledukondevalla antha bahala vyathe aguthe. Adharu intha haadu kelidhaga, sahithya odidagha, Dr.Raj avara abhinaya nenapisikondaga namage arivilladha haage kannu thevavaguthe. Inondhu vishya Bangaradha Manushya modala bhaari bidugade ada mele sathathavagi adhu mooru varsha odidu nenapu, Bangalore haagu Mysorenalli. Yaarigadharu sariyagi gothidhare post madi vivaravanna hanchikollali.

  2. 2
    ಪರಶು.., Says:

    ಹಾಯ್..
    ಮಣಿಕಾಂತ ಸಾರ್, ಕೆಲಸದ ನಡುವಿನ ಬಿಡುವಿನ ವೇಳೆಯಲ್ಲಿ ಕನ್ನಡ ಬರಹಗಳ ಬಗ್ಗೆ ತಡಕಾಡುತ್ತಿದ್ದಾಗ ಆಕಸ್ಮಿಕವಾಗಿ ನಿಮ್ಮ ಬ್ಲಾಗ್ ಸಿಕ್ಕಿತು. ಸಂತೋಷವಾಯಿತು. ಮೊನ್ನೆಯಷ್ಟೆ ನಿಮ್ಮ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದೆ, ಅಲ್ಲಿಕೊಂಡ ಪುಸ್ತಕವನ್ನು, ಮಗುವೊಂದು ಒಂದೇ ಗುಕ್ಕಿಗೆ ತಿಂದರೆ ಎಲ್ಲಿ ರುಚಿ ಮರೆತು ಹೋಗುತ್ತದೋ ಎಂದು ಚೀಪಿ ಚೀಪಿ ಚಾಕೋಲೇಟ್ ತಿನ್ನುವಂತೆ ಓದುತಿದ್ದೇನೆ..
    ಇದೇ ಸಮಯಕ್ಕೆ ಬರಹಗಳ ದೊಡ್ಡ ಬುಟ್ಟಿಯೇ ಕೈ ಬೆರಳ ತುದಿಯಲ್ಲಿ ಸಿಕ್ಕಂತಾಗಿದೆ.. ದಿನಾ ದಿನ ಬೇಟಿ ಕೊಡುತ್ತೇನೆ…

  3. 3
    ಸುಬ್ರಾವ್ Says:

    ಈ ಲಿಂಕ್ ನೋಡಿ. ಈ ಸಂದರ್ಭವೂ ಯಾವುದೋ ನಿಜವಾದ ಘಟನೆಯಿಂದ ಪ್ರೇರಿತವಾಗಿರಬೇಕು!

  4. 4
    Pradeep Says:

    ನಮಸ್ತೆ,
    ನಿಮ್ಮ ಈ ಬರವಣಿಗೆಯನ್ನು ಓದಿ ನನ್ನ ಮನಸ್ಸು ಜುಮ್ಮೆಂದಿತು. ನಿಮ್ಮ ಎಲ್ಲಾ ಬರಹಗಳನ್ನು ಓದಿದ್ದೇನೆ, ತುಂಭಾ ಸಂತೋಷವಾಗಿದೆ.
    ಪ್ರದೀಪ್


RSS Feed for this entry

Leave a reply to ಸುಬ್ರಾವ್ ಪ್ರತ್ಯುತ್ತರವನ್ನು ರದ್ದುಮಾಡಿ