ಮಕಾಡೆ ಬೀಳದ ಗೊಂಬೆಯನ್ನು ಕಂಡಾಗ ‘ಕಸ್ತೂರಿ ನಿವಾಸ’ದ ಹಾಡು ಹುಟ್ಟಿತು!

kasthuri-nivasa~3269123
ಆಡಿಸಿ ನೋಡು ಬೀಳಿಸಿ ನೋಡು…
ಚಿತ್ರ: ಕಸ್ತೂರಿ ನಿವಾಸ. ಗೀತೆರಚನೆ: ಚಿ. ಉದಯಶಂಕರ್
ಗಾಯನ: ಪಿ.ಬಿ. ಶ್ರೀನಿವಾಸ್. ಸಂಗೀತ: ಜಿ.ಕೆ. ವೆಂಕಟೇಶ್.

ಆಡಿಸಿನೋಡು ಬೀಳಿಸಿನೋಡು
ಉರುಳಿಹೋಗದು ||ಪ||
ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು
ಎಂದಿಗು ನಾನು ಹೀಗೇ ಇರುವೆ ಎಂದು ನಗುವುದು
ಹೀಗೇ ನಗುತಲಿರುವುದು ||ಆ.ಪ||

ಗುಡಿಸಲೆ ಆಗಲಿ ಅರಮನೆಯಾಗಲಿ ಆಟ ನಿಲ್ಲದೂ
ಹಿರಿಯರೆ ಇರಲಿ ಕಿರಿಯರೆ ಬರಲಿ ಬೇಧ ತೋರದು
ಕಷ್ಟವೊ ಸುಖವೊ ಅಳುಕದೆ ಆಡಿ ತೂಗುತಿರುವುದು
ಹೀಗೇ ತೂಗುತಿರುವುದು ||೧||

ಮೈಯನೆ ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು
ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು
ದೀಪ ಬೆಳಕ ತರುವುದು ||೨||

ಆಡಿಸುವಾತನ ಕೈಚಳಕದಲಿ ಎಲ್ಲ ಅಡಗಿದೆ
ಆತನ ಕರುಣೆಯು ಜೀವವ ತುಂಬಿ ಕುಣಿಸಿ ನಲಿಸಿದೆ
ಆ ಕೈ ಸೋತರೆ ಗೊಂಬೆಯ ಕತೆಯೂ ಕೊನೆಯಾಗುವುದೆ
ಕೊನೆಯಾಗುವುದೇ… ||೩||

ಕನ್ನಡ ಚಿತ್ರರಂಗದ ‘ದೆಸೆ’ಯನ್ನೇ ತಿರುಗಿಸಿದ ಚಿತ್ರ ‘ಕಸ್ತೂರಿ ನಿವಾಸ’. ಈ ಸಿನಿಮಾ ತೆರೆಕಾಣುವವರೆಗೂ ಚಿತ್ರರಂಗ ಒಂದು ಸಿದ್ಧಸೂತ್ರದ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಅಂದರೆ, ಒಂದು ಕಥೆ ಕಡೆಯಲ್ಲಿ ಸುಖಾಂತ್ಯದಲ್ಲೇ ಕೊನೆಯಾ ಗುತ್ತಿತ್ತು. ತ್ಯಾಗಿ ಅನ್ನಿಸಿಕೊಂಡ ಕಥಾನಾಯಕನ ಮುಂದೆ ಕಡೆಗೆ ಎಲ್ಲರೂ ಶರಣಾಗುತ್ತಿತ್ತು. ಆಗ ಕಥಾನಾಯಕ, ನಿಂತಲ್ಲೇ ಕಣ್ತುಂಬಿಕೊಂಡು, ಎಲ್ಲವೂ ಭಗವಂತನ ಲೀಲೆ ಎಂಬರ್ಥದ ಮುಖಭಾವ ಪ್ರದರ್ಶಿಸಿ, ಎಲ್ಲರನ್ನೂ ಗ್ರೂಪ್ ಫೋಟೊಗೆ ನಿಲ್ಲಿಸಿ ಕೊಂಡು ಕೈಮುಗಿಯುತ್ತಿದ್ದ!
ಸ್ವಾರಸ್ಯವೆಂದರೆ, ಆ ದಿನಗಳಲ್ಲಿ ಪ್ರೇಕ್ಷಕರು ಕೂಡ, ಒಂದು ಸಿನಿಮಾ ಹೀಗೇ ಇರಬೇಕು ಎಂದು ನಂಬಿದ್ದರು. ಈ ನಂಬಿಕೆಯನ್ನು ಪಲ್ಲಟಗೊಳಿಸಿದ್ದು; ‘ಕಸ್ತೂರಿ ನಿವಾಸ’ದ ಹೆಚ್ಚುಗಾರಿಕೆ.
ಈಗ ಸುಮ್ಮನೇ ಒಮ್ಮೆ ‘ಕಸ್ತೂರಿ ನಿವಾಸ’ದ ಕಥೆಯನ್ನು ನೆನಪು ಮಾಡಿಕೊಳ್ಳಿ. ಕಥಾನಾಯಕ, ಕೊಡುಗೈ ದಾನಿಗಳ ವಂಶಕ್ಕೆ ಸೇರಿದವನು. ಅವರ ಕುಟುಂಬದವರಿಗೆ ಕೇಳಿದವರಿಗೆಲ್ಲ ದಾನ ಮಾಡಿ ಅಭ್ಯಾಸವೇ ಹೊರತು ಯಾರಿಂದಲೂ ‘ಪಡೆದು’ ಗೊತ್ತಿರುವುದಿಲ್ಲ. ಇಂಥ ಹಿನ್ನೆಲೆಯಿಂದ ಬಂದ ಕಥಾನಾಯಕನೊಂದಿಗೆ ಒಂದು ಪಾರಿವಾಳವೂ ಇರುತ್ತದೆ. ಆತ ಬೆಂಕಿಪೊಟ್ಟಣ ತಯಾರಿಕೆಯ ಫ್ಯಾಕ್ಟರಿ ನಡೆಸುತ್ತಿರುತ್ತಾನೆ. ಅನಿರೀಕ್ಷಿತವಾಗಿ ಆತನ ಹೆಂಡತಿ ತೀರಿಹೋಗುತ್ತಾಳೆ. ಅವಳ ನೆನಪಿಗೆ ಮಗು ಇರುತ್ತೆ. ಮುಂದೆ, ತನ್ನ ಕಂಪನಿಯಲ್ಲಿ ಕೆಲಸಕ್ಕೆ ಬರುವ ಯುವತಿಯನ್ನು ಈತ ಇಷ್ಟಪಡುತ್ತಾನೆ. ಅವಳೋ, ಅದೇ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿದ್ದವನನ್ನು ಪ್ರೀತಿಸುತ್ತಾಳೆ! ವಿಷಯ ತಿಳಿದ ನಾಯಕ, ತಾನೇ ಅವರಿಬ್ಬರ ಮದುವೆ ಮಾಡಿಸುತ್ತಾನೆ. ನಂತರ ತನ್ನ ಫ್ಯಾಕ್ಟರಿಯನ್ನು ಮ್ಯಾನೇಜರ್ ಹೆಸರಿಗೇ ಬರೆದುಕೊಡುತ್ತಾನೆ. ಈ ಮಧ್ಯೆ ನಾಯಕನ ಮಗು ಸತ್ತುಹೋಗುತ್ತದೆ. ಈ ನೋವು ಮರೆಯಲು ಆತ ನಾಯಕಿಯ ಮಗುವನ್ನೇ ಹಚ್ಚಿಕೊಳ್ಳುತ್ತಾನೆ. ಈ ವೇಳೆಗೆ, ನಾಯಕಿಯ ಗಂಡನಿಗೆ ‘ತನ್ನ ಹೆಂಡತಿ ಹಾಗೂ ತನ್ನ ಹಳೆ ಬಾಸ್ ಮಧ್ಯೆ ಏನೋ ಇದೆ’ ಎಂಬ ಅನುಮಾನ ಶುರುವಾಗುತ್ತದೆ. ಆತ ಕಿಡಿಕಿಡಿಯಾಗುತ್ತಾನೆ.
ಸುದ್ದಿ ತಿಳಿದ ಕಥಾನಾಯಕ, ಬಂಗಲೆ ಬಿಟ್ಟು ಗುಡಿಸಲಿಗೆ ಬರುತ್ತಾನೆ. ಆಗ ಅವನಲ್ಲಿ ಖರ್ಚಿಗೂ ಕಾಸಿರುವುದಿಲ್ಲ. ಪಾರಿವಾಳ ಮಾತ್ರ ಜತೆಗಿರುತ್ತೆ. ಹೀಗಿದ್ದಾಗಲೇ ಅವನ ಮನೆಗೆ ಬಂದ ನಾಯಕಿ, ‘ಊಟ ಹಾಕಿ’ ಅನ್ನುತ್ತಾಳೆ. ಕೈಲಿ ಕಾಸಿರಲ್ಲವಲ್ಲ? ಅದೇ ಕಾರಣದಿಂದ ತನ್ನ ಪ್ರೀತಿಪಾತ್ರ ಪಾರಿವಾಳವನ್ನೇ ಕೊಂದು ಊಟ ಹಾಕುತ್ತಾನೆ ನಾಯಕ. ಈಕೆ ಊಟದ ನಂತರ- ‘ಮಗೂಗೆ ಪಾರಿವಾಳ ಬೇಕಂತೆ ಕೊಡಿ’ ಅನ್ನುತ್ತಾಳೆ. ಅದಕ್ಕೆ ಉತ್ತರಿಸಲು ಸಾಧ್ಯವಾಗದೆ ಕಥಾನಾಯಕ ಸತ್ತುಹೋಗುತ್ತಾನೆ…
ಇದಿಷ್ಟು, ‘ಕಸ್ತೂರಿ ನಿವಾಸ’ದ ಸಂಕ್ಷಿಪ್ತ ಕಥೆ. ಈ ಕಥೆಯನ್ನು ೧೯೭೦ರಲ್ಲಿ ತಮಿಳಿನ ಜಿ. ಬಾಲಸುಬ್ರಹ್ಮಣ್ಯಂ ಅವರು, ಅಂದಿನ ಪ್ರಸಿದ್ಧ ನಟ ಶಿವಾಜಿಗಣೇಶನ್ಗೆ ಅಂತಾನೇ ಬರೆದರಂತೆ. ಆದರೆ, ಕಥೆ ಕೇಳಿದ ಶಿವಾಜಿ ‘ಕಥೆಯೇನೋ ಚೆನ್ನಾಗಿದೆ. ಆದರೆ ಕಡೇಲಿ ಟ್ರ್ಯಾಜಿಡಿ ಇದೆ. ಅದನ್ನು ನನ್ನ ಅಭಿಮಾನಿಗಳು ಇಷ್ಟಪಡಲ್ಲ. ಕಥಾನಾಯಕ ಸಾಯೋದು ನನಗೂ ಇಷ್ಟವಿಲ್ಲ’ ಅಂದರಂತೆ.
ಮುಂದೊಂದು ದಿನ ಈ ಕಥೆ ಕೇಳಿದ ಚಿ. ಉದಯಶಂಕರ್, ತಕ್ಷಣವೇ ದೊರೆ-ಭಗವಾನ್ರನ್ನು ಕಂಡು ನಿರ್ಮಾಣ-ನಿರ್ದೇಶನ ಎರಡೂ ನಿಮ್ಮದೇ ಇರಲಿ. ನಾನು ಸಂಭಾಷಣೆ, ಹಾಡು ಬರೆದುಕೊಡ್ತೇನೆ ಅಂದರಂತೆ. ಮುಂದೆ, ರಾಜ್ಕುಮಾರ್ ಅವರಿಗೆ ಈ ಕಥೆ ಹೇಳಿದಾಗ- ‘ಕಥೆಯೇನೋ ಚೆನ್ನಾಗಿದೆ ಉದಯಶಂಕರ್ ಅವರೇ. ಆದ್ರೆ ಟ್ರಾಜಿಡಿ ಎಂಡಿಂಗ್ ಇದೆ. ಅದನ್ನು ನನ್ನ ಅಭಿಮಾನಿಗಳು ಒಪ್ಪೋದಿಲ್ಲ. ನನಗೂ ಕ್ಲೈಮ್ಯಾಕ್ಸ್ ಇಷ್ಟವಾಗಿಲ್ಲ. ಶಿವಾಜಿಗಣೇಶನ್ ಅವರಂಥ ನಟರೇ ಬೇಡ ಅಂದ ಮೇಲೆ ನಾನು ಹೇಗೆ ಮಾಡಲಿ? ಕಥೇನ ಸುಖಾಂತ ಆಗುವಂತೆ ಬದಲಾಯಿಸಿ. ಆಗ ನೋಡೋಣ’ ಎಂದರಂತೆ.
ಆದರೆ, ಚಿ. ಉದಯಶಂಕರ್ದು ಒಂದೇ ಹಟ. ‘ಕಥೆ-ಅಂತ್ಯ ಎರಡೂ ತುಂಬಾ ಚೆನ್ನಾಗಿದೆ. ಏನೂ ಬದಲಿಸುವುದು ಬೇಡ..’ ಈ ಸಂದರ್ಭದಲ್ಲೇ ತಾವೂ ಕಥೆ ಕೇಳಿದ ರಾಜ್ ಸೋದರ ವರದಪ್ಪ ಹೇಳಿದರಂತೆ: ‘ಅಣ್ಣಾ, ಕಥೆ ಸೂಪರ್ರಾಗಿದೆ. ಒಪ್ಕೊ. ನಿಂಗೆ ದೊಡ್ಡ ಹೆಸರು ಬರುತ್ತೆ’. ಈ ಮಾತಿಗೆ ರಾಜ್- ‘ನನ್ನ ತಮ್ಮ ಇಷ್ಟಪಟ್ಟಿದ್ದಾನೆ. ಇಮೇಜಿನ ರಕ್ಷ ಣೆಗೆ ಉದಯಶಂಕರ್ ಇದ್ದಾರೆ. ಅಂದಮೇಲೆ ತಡವೇಕೆ? ಶೂಟಿಂಗ್ ಶುರುಮಾಡಿ, ಶಿವಾ ಅಂತ ಜಮಾಯಿಸ್ ಬಿಡೋಣ’ ಅಂದರಂತೆ…
‘ಕಸ್ತೂರಿ ನಿವಾಸ’ದ ಚಿತ್ರಕಥೆ ರಚನೆಯ ಸಂದರ್ಭದಲ್ಲಿ- ನಾಯಕ, ಬರಿಗೈದಾಸನಾಗಿ ಗುಡಿಸಲಲ್ಲಿ ಇದ್ದ ಸಂದರ್ಭದಲ್ಲಿ ಒಂದು ಹಾಡು ಇದ್ದರೆ ಚೆಂದ ಅನ್ನಿಸಿತಂತೆ. ‘ಗುಡಿಸಿಲಿನಲ್ಲಿ ಮಗುವಿನೊಂದಿಗೆ ಆಡುತ್ತ ಕೂತಿದ್ದಾಗ, ತನ್ನ ಆ ಕ್ಷಣದ ಸ್ಥಿತಿಯ ಬಗ್ಗೆ ತಾನೇ ಮರುಕಪಡುತ್ತ, ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳುತ್ತಾ, ವಿಯಾಟದ ಮುಂದೆ ನಾವೆಲ್ಲಾ ದಾಳಗಳು ಎಂದು ವಿವರಿಸುತ್ತಾ; ‘ಎಂಥ ಸಂದರ್ಭವೇ ಎದುರಾದರೂ ನಾನು ದೇಹಿ ಅನ್ನಲಾರೆ. ಅಳುತ್ತ ಕೂರಲಾರೆ’ ಎಂದು ಕಥಾನಾಯಕ ಹಾಡಬೇಕು. ಆ ಹಾಡು ಮಗುವಿನ ಆಟಕ್ಕೂ ಅನ್ವಯಿಸುವಂಥ ಹಾಡು ಬರೆಯಿರಿ ಅಂದರಂತೆ ದೊರೆ-ಭಗವಾನ್.
ಈ ಚರ್ಚೆ ನಡೆದದ್ದು ಚೆನ್ನೈನ ಸ್ವಾಗತ್ ಹೋಟೆಲಿನಲ್ಲಿ. ಗುಡಿಸಲಿಗೆ ಬಂದು ಮಗು ಆಡ್ತಾ ಇರುತ್ತೆ ಅಂದಮೇಲೆ, ಈ ಸಂದರ್ಭಕ್ಕೆ ಒಂದು ಗೊಂಬೇನ ಇಟ್ಕೊಳ್ಳೋಣ. ವಿಯ ಮುಂದೆ ಮನುಷ್ಯ ಕೂಡ ಒಂದು ಗೊಂಬೆ ಎಂದೂ ಆ ಮೂಲಕ ಹೇಳಿದಂತಾಗುತ್ತೆ ಎಂದು ಚರ್ಚೆಯಲ್ಲಿ ಮಾತಾಗಿದೆ. ನಂತರ, ತಂಜಾವೂರ್ನ ಕುರುಲಗಂ ಹ್ಯಾಂಡಿಕ್ರಾಫ್ಟ್ನಿಂದ ಒಂದು ಗೊಂಬೆಯನ್ನೂ ತರಿಸಿದ್ದಾರೆ.
ತಂಜಾವೂರಿನ ಮಣ್ಣಿನ ಗೊಂಬೆಗಳ ವಿಶೇಷವೆಂದರೆ, ನಗುಮೊಗದ ಆ ಗೊಂಬೆಗಳು ತಳಭಾಗದಲ್ಲಿ ಭಾರವಿರುತ್ತವೆ. ಹಾಗಾಗಿ, ನೆಲದ ಮೇಲೋ, ಟೇಬಲ್ನ ಮೇಲೋ ಇಟ್ಟು ನೂಕಿದರೆ, ಅವು ಎಡಕ್ಕೂ ಬಲಕ್ಕೂ ವಾಲಾಡುತ್ತವೆಯೇ ವಿನಃ ಮಕಾಡೆ ಬೀಳುವುದಿಲ್ಲ. ಸ್ವಾಗತ್ ಹೋಟೆಲ್ನ ಟೇಬಲ್ ಮೇಲೆ ಗೊಂಬೆಯಿಟ್ಟು ಅದನ್ನೇ ಒಮ್ಮೆ ನೂಕಿದ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್- ‘ಯಾರು ಹೇಗೇ ನೂಕಿದ್ರೂ ಇದು ವಾಲಾಡುತ್ತೇ ವಿನಃ ಉರುಳಿಹೋಗಲ್ಲ. ಇದನ್ನು ತಯಾರಿಸಿದನಲ್ಲ ಶಿಲ್ಪಿ? ಅವನ ಕೈಚಳಕ ದೊಡ್ಡದು’ ಅಂದರಂತೆ. ಈ ಮಾತನ್ನೇ ಮತ್ತೆ ಮತ್ತೆ ಮೆಲುಕು ಹಾಕಿದ ಚಿ. ಉದಯಶಂಕರ್, ಮುಂದಿನ ಐದೇ ನಿಮಿಷದಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು ಬರೆದೇಬಿಟ್ಟರು. ಅದರಲ್ಲಿ ಮಗುವಿನ ಸಂಭ್ರಮವಿತ್ತು. ನಾಯಕನ ಸಂಕಟವಿತ್ತು. ಒಂದು ಸಂದೇಶವಿತ್ತು. ಎಚ್ಚರಿಕೆಯಿತ್ತು. ನಾವೆಲ್ಲರೂ ವಿಯಾಡಿಸುವ ಗೊಂಬೆಗಳು ಎಂಬ ವಿವರಣೆಯಿತ್ತು. ‘ಆಡಿಸಿದಾತನ ಕೈಚಳಕದಲಿ ಎಲ್ಲ ಅಡಗಿದೆ’ ಎಂಬ ಸಾಲಿನಲ್ಲಿ ಗೊಂಬೆಯೊಂದಿಗೆ, ನಾಯಕನ ಬದುಕಿನ ಕಥೆಯೂ ತಳಕುಹಾಕಿಕೊಂಡಿತ್ತು.
‘ಕಸ್ತೂರಿ ನಿವಾಸ’ದಲ್ಲಿ ಈ ಹಾಡು ಎರಡು ಬಾರಿ ಬರುತ್ತದೆ. ‘ಆಡಿಸಿ ನೋಡು, ಬೀಳಿಸಿ ನೋಡು…’ವನ್ನು ಪಿ.ಬಿ. ಶ್ರೀನಿವಾಸ್ ಅವರೂ; ‘ಆಡಿಸಿದಾತ ಬೇಸರಮೂಡಿ ಆಟ ನಿಲಿಸಿದ…’ ಶೋಕಗೀತೆಯನ್ನು ಜಿ.ಕೆ. ವೆಂಕಟೇಶ್ ಅವರೂ ಹಾಡಿದ್ದಾರೆ. ‘ಆಡಿಸಿ ನೋಡು’ವಿನ ಟ್ಯೂನ್ನಲ್ಲೇ ‘ಆಡಿಸಿದಾತ…’ ಕೂಡ ಇದೆ. ಅದರ ಹಿನ್ನೆಲೆ ಕೂಡ ಸ್ವಾರಸ್ಯಕರವಾಗಿದೆ. ಮೊದಲಿಗೆ ಆ ಚಿತ್ರದಲ್ಲಿ ಶೋಕಗೀತೆಯ ಪ್ರಸ್ತಾಪವೇ ಇರಲಿಲ್ಲ. ಹಾಗಾಗಿ ‘ಆಡಿಸಿನೋಡು..’ವನ್ನು ಹಾಡಿ ಪಿ.ಬಿ.ಎಸ್. ಹೋಗಿಬಿಟ್ಟಿದ್ದರು. ಕಡೆಯಲ್ಲಿ ಕಥಾನಾಯಕನ ಕುಡಿ ಸತ್ತಾಗ, ಹಿನ್ನೆಲೆ ಸಂಗೀತದ ರೂಪದಲ್ಲಿ ಜಿ.ಕೆ. ವೆಂಕಟೇಶ್ ಅವರ ಸಹಾಯಕರಾಗಿದ್ದ ಎಲ್. ವೈದ್ಯನಾಥನ್, ವಯಲಿನ್ನಲ್ಲಿ ಶೋಕರಾಗ ನುಡಿಸಿದರಂತೆ. ಅದನ್ನು ಉದಯಶಂಕರ್ಗೆ ಕೇಳಿಸಿದಾಗ- ಅವರು- ‘ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ…’ ಎಂದು ಬರೆದರು. ಈಗಾಗಲೇ ಹಾಡಿ ಹೋಗಿರುವ ಪಿ.ಬಿ.ಎಸ್. ಅವರನ್ನೇ ಮತ್ತೆ ಕರೆಸಲು ಮುಜುಗರಗೊಂಡ ದೊರೆ-ಭಗವಾನ್- ‘ಸರ್, ನೀವೇ ಹಾಡಿಬಿಡಿ’ ಎಂದು ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಗೆ ಕೇಳಿಕೊಂಡರಂತೆ.
* * *
ಮುಂದೆ, ಉದಯಶಂಕರ್ ಅವರ ೬೦ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ೨೫೦ಗೀತೆಗಳ ಸಂಕಲನವೊಂದನ್ನು ತರಲು ಮೈಸೂರಿನ ಕಾವ್ಯಾಲಯ ಸಂಸ್ಥೆ ನಿರ್ಧರಿಸಿತು. ಹಾಡುಗಳ ಆಯ್ಕೆಗೆಂದು ಚಿ. ಉದಯಶಂಕರ್ ಜತೆಯೇ ಈಗಿನ ‘ಮಲ್ಲಿಗೆ’ ಮಾಸಿಕದ ಸಂಪಾದಕ ಎನ್.ಎಸ್. ಶ್ರೀಧರಮೂರ್ತಿ ಕುಳಿತಿದ್ದರು. ಆಗ ಮೂರ್ತಿಯವರು- ‘ಸರ್, ಸಂಕಲನಕ್ಕೆ ‘ಕಸ್ತೂರಿ ನಿವಾಸ’ದ ಹಾಡು ಸೇರಿಸೋಣ. ಅದು ಬಹಳ ಚೆನ್ನಾಗಿದೆ’ ಅಂದರಂತೆ. ಅದಕ್ಕೆ ಉದಯಶಂಕರ್- ನಾನು ಸತ್ತಾಗ ಎಲ್ರೂ ಅದನ್ನು ಖಂಡಿತ ನೆನಪು ಮಾಡ್ಕೋತಾರೆ’ ಅಂದರಂತೆ! ಈ ಮಾತಿಂದ ಮೂರ್ತಿಯವರು ತುಂಬಾ ಬೇಸರಿಸಿಕೊಂಡರಂತೆ.
ಮುಂದೆ, ಆ ಗೀತಗುಚ್ಛ ಬರುವ ಮೊದಲೇ ಉದಯಶಂಕರ್ ತೀರಿಕೊಂಡರು. ಆಗ ಪತ್ರಿಕೆಗಳು ನೀಡಿದ್ದ ಹೆಡ್ಲೈನ್: ‘ಆಡಿಸಿದಾತ ಬೇಸರಮೂಡಿ ಆಟ ಮುಗಿಸಿದ!’
* * *
ಅಂದಹಾಗೆ, ನಾಳೆ ಡಾ. ರಾಜ್ ಜನ್ಮದಿನ. ರಾಜ್ ಅಂದಾಕ್ಷಣ ‘ಆಡಿಸಿ ನೋಡು’ ಹಾಡು ನೆನಪಾಗುತ್ತದೆ. ಹಾಡು ಎಂದಾಕ್ಷಣ ಉದಯಶಂಕರ್ರ ನಗುಮೊಗ ಕಣ್ಮುಂದೆ ಬಂದು ನಿಲ್ಲುತ್ತದೆ. ಒಂದು ರೀತಿಯಲ್ಲಿ ಇದೂ ಕೂಡ ವಿವಿಲಾಸ. ಹೌದಲ್ಲವೆ?

2 Comments »

  1. 2
    ವಿನಾಯಕ Says:

    ರೀ ಚೆನ್ನಾಗೆ ಬರೆದಿದ್ದೀರಿ… ಆದರೆ ನೀವು ಹೇಳಿದಂತೆ ಪಾರಿವಾಳವನ್ನು ಕೊಂದು ಅದನ್ನೆ ಊಟ ಹಾಕುವಂತ ಕೆಟ್ಟ ಕೆಲಸ ಅಲ್ಲಿ ನಡೆದಿಲ್ಲ… ಇನ್ನೊಮ್ಮೆ ಸರಿಯಾಗಿ ಚಿತ್ರ ನೋಡಿ… ಅಲ್ಲಿ ಜೀವಕ್ಕಿಂತಲ್ಲೂ ಹೆಚ್ಚಾದ ಪಾರಿವಾಳವನ್ನು ಮಾರಿ ಅದರಿಂದ ಬಂದ ಹಣದಲ್ಲಿ ಜಯಂತಿಯವರಿಗೆ ಉಣಬಡಿಸಿರ್ತಾರೆ…


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: