ಕೈಲಾಸಂ ಕುರಿತು ಇರುವ ಕತೆಗಳಿಗೆ ಲೆಕ್ಕವಿಲ್ಲ. ಆ ಪೈಕಿ ಸ್ವಾರಸ್ಯಕರ ಎಂಬಂಥ ಒಂದೆರಡು ಸ್ಯಾಂಪಲ್‌ಗಳು ಹೀಗಿವೆ. ಸ್ಯಾಂಪಲ್ ಒಂದು: ಕೈಲಾಸಂ, ಗಣಿತದಲ್ಲಿ ವಿಪರೀತ ಬುದ್ಧಿವಂತ ಆಗಿದ್ದರಂತೆ. ಅವರು ಹಾಸನದಲ್ಲಿ ಪ್ರೌಢಶಾಲೆಯಲ್ಲಿದ್ದ ಸಂದರ್ಭದಲ್ಲಿ, ಪರೀಕ್ಷೆಯಲ್ಲಿ ಹದಿನೈದು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಹತ್ತಕ್ಕೆ ಮಾತ್ರ ಉತ್ತರಿಸಿ ಎಂದು ಸೂಚನೆ ನೀಡಲಾಗಿತ್ತಂತೆ.
ಈ ಕೈಲಾಸಂ ಸಾಹೇಬರು, ಎಲ್ಲ ಹದಿನೈದು ಲೆಕ್ಕಗಳನ್ನೂ ಸರಿಯಾಗಿ ಬಿಡಿಸಿ-ಉತ್ತರ ಪತ್ರಿಕೆಯ ಕೆಳಗೆ-‘ಮಾನ್ಯ ಪರೀಕ್ಷಕರೆ, ಯಾವುದಾದರೂ ಹತ್ತು ಉತ್ತರಗಳಿಗೆ ಮಾರ್ಕ್ಸ್ ಕೊಡಿ’ ಎಂದು ಬರೆದಿದ್ದರಂತೆ!
ಸ್ಯಾಂಪಲ್ ಎರಡು: ಕೈಲಾಸಂ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್‌ಗೆ ಹೋಗಿದ್ದರು. ಅಲ್ಲಿ ಪಾಠ ಕಲಿತಿದ್ದಕ್ಕಿಂತ ಹೆಚ್ಚಾಗಿ ನಾಟಕ, ಸಂಗೀತ ಕಲಿತರು. ಈ ಮಧ್ಯೆಯೇ ಗುಂಡು ಸೇವನೆಯೂ ಆಗುತ್ತಿತ್ತು. ಅದೊಂದು ದಿನ ಕ್ಲಬ್‌ನಲ್ಲಿ ಹಾಡಿದ ಗಾಯಕನೊಬ್ಬ ತನ್ನ ಸಂಗೀತ ಜ್ಞಾನ, ಕಂಠಸಿರಿಯ ಬಗ್ಗೆ ತಾನೇ ಹೆಮ್ಮೆ ಪಡುತ್ತ- ‘ಧೈರ್ಯವಿದ್ದರೆ ಇಲ್ಲಿರುವ ಸಭಿಕರ ಪೈಕಿ ಯಾರಾದ್ರೂ ನನ್ನ ಥರಾನೇ ಹಾಡಿ ನೋಡೋಣ’ ಅಂದನಂತೆ.
ಈ ಛಾಲೆಂಜ್ ಸ್ವೀಕರಿಸಲು ಬ್ರಿಟಿಷರೇ ಹಿಂದೆ ಮುಂದೆ ನೋಡುತ್ತಿದ್ದಾಗ-ಛಕ್ಕನೆ ಮೇಲೆದ್ದ ಕೈಲಾಸಂ-ಒಂದಿಷ್ಟೂ ತಡವರಿಸದೆ ಆತನಂತೆಯೇ ಹಾಡಿ, ಎಲ್ಲರ ಶಹಭಾಷ್‌ಗಿರಿಯ ಜತೆಗೆ ಬಹುಮಾನವನ್ನೂ ಗಿಟ್ಟಿಸಿದರಂತೆ…
ಕೈಲಾಸಂ ಹೇಗಿದ್ದರು ಎಂದು ವಿವರಿಸುತ್ತಾ ಹೀಗೆಲ್ಲ ಹೇಳುವ ಜನರೇ ಮತ್ತೂ ಒಂದು ಸಾಲು ಸೇರಿಸುತ್ತಾರೆ: ‘ಕೈಲಾಸಂ ಒಂದು ಕೈಲಿ ಬುಸಬುಸನೆ ಸಿಗರೇಟು ಸೇದುತ್ತಾ, ಆಕಾಶಕ್ಕೆ ಹೊಗೆ ಬಿಡುತ್ತಾ, ತಮ್ಮ ನಾಟಕದ ಪಾತ್ರಗಳ ಸಂಭಾಷಣೆಯನ್ನು ಹೇಳ್ತಾ ಹೋಗ್ತಿದ್ರು. ಅವರ ಶಿಷ್ಯಂದಿರು ಅದನ್ನು ಬರೆದುಕೊಳ್ತಿದ್ರು. ಕೈಲಾಸಂ ಅವರಿಂದ ಡಿಕ್ಟೇಷನ್ ಪಡೆಯುವುದೇ ಸೌಭಾಗ್ಯ ಎಂದು ನಂಬಿದವರ ದೊಡ್ಡ ಹಿಂಡೇ ಅವರ ಸುತ್ತಮುತ್ತ ಇತ್ತು…’
***
ಈಗ ನಮ್ಮೊಂದಿಗಿಲ್ಲದ ಒಬ್ಬ ವ್ಯಕ್ತಿಯ ಕುರಿತು ಇಂಥದೇ ‘ಕತೆ’ಗಳನ್ನು ಕೇಳಿದಾಗ, ಆತ ಹೀಗಿದ್ದನೇನೋ; ಹೀಗೆ ಮಾತಾಡುತ್ತಿದ್ದನೇನೋ; ಹೀಗೆ ನಡೆದಾಡುತ್ತಿದ್ದನೇನೋ ಎಂಬ ಅಂದಾಜಿನ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಅಂಥ ವ್ಯಕ್ತಿಯೊಬ್ಬನ ಪಾತ್ರವನ್ನು ರಂಗದ ಮೇಲೆ ತರುವುದಿದೆಯಲ್ಲ? ಅದು ನಿಜಕ್ಕೂ ಸವಾಲಿನ ಕೆಲಸ.
ಇಂಥದೊಂದು ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ್ದು ನಟ ಸಿ.ಆರ್. ಸಿಂಹ ಅವರ ಹೆಚ್ಚುಗಾರಿಕೆ. ಕೈಲಾಸಂ ಅವರ ವ್ಯಕ್ತಿಚಿತ್ರವನ್ನು ‘ಟಿಪಿಕಲ್ ಟಿ.ಪಿ. ಕೈಲಾಸಂ’ ಎಂಬ ನಾಟಕದಲ್ಲಿ ಅಕ್ಷರ ರೂಪದಲ್ಲಿ ತೆರೆದಿಟ್ಟವರು ನಾಟಕಕಾರ, ನಿರ್ದೇಶಕ ಟಿ.ಎನ್. ನರಸಿಂಹನ್. ವೇದಿಕೆ ತಂಡದಿಂದ ನಟ ಸಿ.ಆರ್. ಸಿಂಹ ಆ ನಾಟಕವನ್ನು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಪ್ರದರ್ಶಿಸುತ್ತಿದ್ದಾರೆ. ಅದು ಒನ್‌ಮ್ಯಾನ್ ಶೋ. ಎರಡು ಗಂಟೆ ಇಪ್ಪತ್ತು ನಿಮಿಷಗಳ ಕಾಲ ‘ಕೈಲಾಸಂ’ ಆಗಿ ಸಿಂಹ ಇಡೀ ವೇದಿಕೆಯನ್ನೆ ಆಕ್ರಮಿಸಿಕೊಳ್ಳುವ ಪರಿಯಿದೆಯಲ್ಲ? ವಾಹ್, ಅದೊಂದು ಅದ್ಭುತ, ಅದೊಂದು ಸೋಜಿಗ, ಅದೊಂದು ಬೆರಗು ಮತ್ತು ಅದು ವರ್ಣನೆಗೆ ನಿಲುಕಲಾಗದ ಆನಂದ.
ಕೈಲಾಸಂ, ಚಟಪಟ ಮಾತಿನ; ಅಂಥದೇ ಬಿರುಸಿನ ಓಡಾಟದ ಆಸಾಮಿ. ಈ ಇಳಿವಯಸ್ಸಿನಲ್ಲಿ ಆ ಪಾತ್ರ ಮಾಡಲು ಸಿಂಹ ಅವರಿಗೆ ಸಾಧ್ಯವೇ? ಮೊನ್ನೆ, ಮೇ ೧೨ರ ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನಾಟಕಕ್ಕೆ ಬಂದ ಎಲ್ಲರನ್ನೂ ಈ ಅನುಮಾನದ ಮುಳ್ಳು ಕಾಡುತ್ತಲೇ ಇತ್ತು. ವಯಸ್ಸಿನ ಕಾರಣದಿಂದ ಡೈಲಾಗ್ ಹೇಳುವಾಗ, ನಡೆದಾಡುವಾಗ, ಕೈಲಾಸಂ ಶೈಲಿಯಲ್ಲಿ ಡ್ಯಾನ್ಸ್ ಮಾಡಬೇಕಾಗಿ ಬಂದಾಗ ಸಿಂಹ ತಡವರಿಸಬಹುದು. ಈ ಕಾರಣದಿಂದಲೇ ನಾಟಕ ಸ್ವಲ್ಪ ಸಪ್ಪೆ ಅನ್ನಿಸಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು.
ಆದರೆ, ಹಾಗಾಗಲಿಲ್ಲ. ಸಿಂಹ-ಅದ್ಭುತವಾಗಿ ನಟಿಸಿದರು. ಅಲ್ಲಲ್ಲ, ಕೈಲಾಸಂ ಅವರೇ ಸಿಂಹ ಅವರ ವೇಷದಲ್ಲಿ ಬಂದು, ಕಲಾಕ್ಷೇತ್ರದ ಆ ಮೂಲೆಯಿಂದ ಈ ಮೂಲೆಯವರೆಗೂ ಪಾದರಸದಂತೆ ಓಡಾಡಿ, ತಮ್ಮ ಇಂಗ್ಲಿಷ್‌ಗನ್ನಡ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸಿದರು. ಒಂದೊಂದು ದೃಶ್ಯ ಮುಗಿದಾಗಲೂ ಇದೆಲ್ಲಾ ಕೈಲಾಸಂ, ಇದೆಲ್ಲ ಸಿಂಹ ಎಂದು ಖುಷಿಯಿಂದ ಚೀರುವಂತಾಗುತ್ತಿತ್ತು. ಒ ಂದು ವಿಶೇಷವೆಂದರೆ ನಾಟಕ ನಡೆದಷ್ಟೂ ಹೊತ್ತು ಸಿಂಹ ಅವರ ಮೊಗದ ತುಂಬಾ ಕೈಲಾಸಂ ಮುಖದ ಹೋಲಿಕೆಯೇ ಕಾಣುತ್ತಿತ್ತು. ಸಭಿಕರಿಗೆ ಒರಿಜನಲ್ ಸಿಂಹ, ಅವರ ಮುಖಾರವಿಂದ ಕಾಣಿಸಿದ್ದು ನಾಟಕ ಮುಗಿದ ಇಪ್ಪತ್ತು ನಿಮಿಷದ ನಂತರ!
ಅದನ್ನು ಕಂಡು ಪ್ರೇಕ್ಷಕರೊಬ್ಬರು ಖುಷಿಯಿಂದ ಉದ್ಗರಿಸಿದರು: ಕನ್ನಡಕೊಬ್ಬನೇ ಕೈಲಾಸಂ ಮತ್ತು ಕನ್ನಡಕ್ಕೊಬ್ಬರೇ ಸಿಂಹ!
-ಕಾಂತನ್
ನಿಮ್ಮದೊಂದು ಉತ್ತರ