ಸಿಗರೇಟಿನ ಬೆಂಕಿ ಕೈ ಸುಟ್ಟಾಗ ತತ್ತ್ವಪದದಂಥ ಹಾಡು ಹುಟ್ಟಿತು!

G_K_Venkatesh

ಚಿತ್ರ: ಭಕ್ತ ಕುಂಬಾರ. ಗೀತೆರಚನೆ: ಹುಣಸೂರು ಕೃಷ್ಣಮೂರ್ತಿ.
ಸಂಗೀತ: ಜಿ.ಕೆ. ವೆಂಕಟೇಶ್. ಗಾಯಕ: ಪಿ.ಬಿ. ಶ್ರೀನಿವಾಸ್

ಪರತತ್ತ್ವವನು ಬಲ್ಲ ಪಂಡಿತನು ನಾನಲ್ಲ
ಹರಿನಾಮವೊಂದುಳಿದು ನನಗೇನೂ ತಿಳಿದಿಲ್ಲ ||ಪ||
ಮಾನವಾ ದೇಹವು ಮೂಳೆ ಮಾಂಸದ ತಡಿಕೆ
ಇದರ ಮೇಲಿದೆ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ ||ಅ.ಪ.||

ನವಮಾಸಗಳು ಹೊಲಸಲಿ ಕಳೆದು
ನವರಂಧ್ರಗಳಾ ತಳೆದು ಬೆಳೆದು
ಬಂದಿದೆ ಭುವಿಗೆ ಈ ನರ ಬೊಂಬೆ
ನಂಬಲು ಏನಿದೆ ಸೌಭಾಗ್ಯವೆಂಬೆ ||೧||

ಉಸಿರಾಡುವ ತನಕ ನಾನು ನನದೆಂಬ ಮಮಕಾರ
ನಿಂತ ಮರುಘಳಿಗೆಯೇ ಮಸಣದೆ ಸಂಸ್ಕಾರ
ಮಣ್ಣಲಿ ಬೆರೆತು ಮೆಲ್ಲಗೆ ಕೊಳೆತು
ಮುಗಿಯುವ ದೇಹಕೆ ವ್ಯಾಮೋಹವೇಕೆ? ||೨||

ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಬಂದು ಹೋಗುವ ನಡುವೆ ಬರೀ ಕತ್ತಲೆ
ಭಕ್ತಿಯ ಬೆಳಕು ಬಾಳಿಗೆ ಬೇಕು
ಮುಕ್ತಿಗೆ ವಿಠಲನಾ ಕೊಂಡಾಡಬೇಕು ||೩||
ವಿಠಲಾ ವಿಠಲಾ ಪಾಂಡುರಂಗ ವಿಠಲಾ
ವಿಠಲಾ ವಿಠಲಾ ಪಾಂಡುರಂಗ ವಿಠಲಾ
ಪಾಂಡುರಂಗ ವಿಠಲಾ ಜೈ ಪಾಂಡುರಂಗ ವಿಠಲಾ.
ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಗೀತೆರಚನೆಕಾರರು ಎಂದಾಕ್ಷಣ ಬೆಳ್ಳಾವೆ ನರಹರಿ ಶಾಸ್ತ್ರಿಗಳು, ವಿದ್ವಾನ್ ಲಾವಣಿ ಎಸ್. ನಂಜಪ್ಪ, ಜಿ.ವಿ. ಅಯ್ಯರ್, ಚಿ. ಸದಾಶಿವಯ್ಯ, ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಚ್.ಎಲ್.ಎನ್. ಸಿಂಹ, ಎಸ್.ಕೆ. ಕರೀಂಖಾನ್, ಕು.ರಾ. ಸೀತಾರಾಮ ಶಾಸ್ತ್ರಿಗಳು ನೆನಪಾಗುತ್ತಾರೆ. ಈ ಸಂದರ್ಭದಲ್ಲಿಯೇ ನೆನಪಾಗುವ ಇನ್ನೊಂದು ಮುಖ್ಯ ಹೆಸರೇ ಹುಣಸೂರು ಕೃಷ್ಣಮೂರ್ತಿ ಅವರದು.
‘ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ/ಇಂಪನು ಇಟ್ಟವನ್ಯಾರೆ/ಹೂವಿನ ಎದೆಯಲಿ ಜೇನನು ತುಂಬಿ/ದುಂಬಿಯ ಕರೆದವನ್ಯಾರೆ’, ‘ಹಾಡು ಬಾ ಕೋಗಿಲೆ, ನಲಿದಾಡು ಬಾರೆ ನವಿಲೆ/ಸಿರಿಗನ್ನಡಾಂಬೆಯಾ ಜಯಧ್ವನಿ ಮೊಳಗಲಿ/ ಹಾಡು ಬಾ ಕೋಗಿಲೆ…’, ‘ನನ್ನ ನೀನು ನಿನ್ನ ನಾನು/ಕಾದುಕೊಂಡು ಕೂತುಕೊಂಡ್ರೆ/ಆಸೇಯು ತೀರದೆಂದು ಚಂದಮಾಮ/ಬೇಸಾರ ಕಳೆಯೋದೆಂತು ಚಂದಮಾಮ’
ಇಂಥವೇ ಮಧುರ ಗೀತೆಗಳ ಗೊಂಚಲು ಚೊಂಚಲನ್ನೇ ಕೊಟ್ಟವರು ಹುಣಸೂರು ಕೃಷ್ಣಮೂರ್ತಿ. ಚಿತ್ರಕಥಾ ಲೇಖಕನಾಗಿ ಚಿತ್ರರಂಗಕ್ಕೆ ಬಂದ ಅವರು ನಂತರ ಹಾಡು ಬರೆದರು. ಸಂಭಾಷಣೆ ಬರೆದರು. ನಟಿಸಿದರು. ನಿರ್ದೇಶನದ ಹೊಣೆ ಹೊತ್ತರು. ಜತೆಗೆ ನಿರ್ಮಾಪಕನಾಗುವ ಸಾಹಸಕ್ಕೂ ಮುಂದಾಗಿ, ಗೆದ್ದರು.
ವೀರಸಂಕಲ್ಪ, ರತ್ನಮಂಜರಿ, ಕನ್ನಿಕಾ ಪರಮೇಶ್ವರಿ ಕಥಾ, ಮಂತ್ರಶಕ್ತಿ ಹಾಗೂ ಅಡ್ಡದಾರಿ ಚಿತ್ರಗಳನ್ನು ನಿರ್ಮಿಸಿದ ಹುಣಸೂರು ಕೃಷ್ಣಮೂರ್ತಿಯವರು ನಿರ್ಮಾಪಕರಾಗಿ ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಆದರೆ ನಿರ್ದೇಶಕನಾಗಿ, ಚಿತ್ರಸಾಹಿತಿಯಾಗಿ ಗೆದ್ದರು. ಅದರಲ್ಲೂ ೬೦ರ ದಶಕದಿಂದ ಆರಂಭಿಸಿ ೮೦ರ ದಶಕದ ಕಡೆಯವರೆಗೂ (ಅಂದರೆ, ಬದುಕಿದ್ದಷ್ಟೂ ದಿನ- ಹುಣಸೂರು ಕೃಷ್ಣಮೂರ್ತಿಯವರು ನಿಧನರಾದದ್ದು ೧೯೮೯ರ ಜನವರಿ ೧೩ರಂದು) ಪೌರಾಣಿಕ ಚಿತ್ರಗಳ ಏಕಮೇವಾದ್ವಿತೀಯ ನಿರ್ದೇಶಕ ಎನಿಸಿಕೊಂಡದ್ದು ಹುಣಸೂರು ಕೃಷ್ಣಮೂರ್ತಿ ಅವರ ಹೆಚ್ಚುಗಾರಿಕೆ. ಅವರು ನಿರ್ದೇಶಿಸಿದ ಪೌರಾಣಿಕ ಚಿತ್ರಗಳಾದರೂ ಯಾವ್ಯಾವುವು ಗೊತ್ತೆ?- ಶ್ರೀಕೃಷ್ಣ ಗಾರುಡಿ, ಭಕ್ತ ಕುಂಬಾರ, ಸತ್ಯ ಹರಿಶ್ಚಂದ್ರ, ಬಭ್ರುವಾಹನ, ಭಕ್ತ ಸಿರಿಯಾಳ, ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ, ನಂಜುಂಡೇಶ್ವರ ಮಹಿಮೆ… ಹೀಗೇ…
ಹುಣಸೂರು ಕೃಷ್ಣಮೂರ್ತಿಗಳು ಚಿತ್ರಂಗಕ್ಕೆ ಬಂದರಲ್ಲ? ಅದೂ ಸ್ವಾರಸ್ಯಕರವೇ. ಕೃಷ್ಣಮೂರ್ತಿಗಳ ತಂದೆ ಪಿಡಬ್ಲ್ಯುಡಿಯಲ್ಲಿ ನೌಕರಿಗಿದ್ದರು. ಮಗನೂ ತಮ್ಮಂತೆಯೇ ಸರಕಾರಿ ನೌಕರಿ ಸೇರಲಿ ಎಂಬುದು ಅವರಿಚ್ಛೆಯಾಗಿತ್ತು. ಆದರೆ, ಹೈಸ್ಕೂಲು ವ್ಯಾಸಂಗದ ವೇಳೆಗೇ ನಾಟಕ, ಏಕಪಾತ್ರಾಭಿನಯದ ಹುಚ್ಚು ಅಂಟಿಸಿಕೊಂಡಿದ್ದ ಹುಣಸೂರರು, ಅದೊಮ್ಮೆ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಷೇಕ್ಸ್ಪಿಯರ್ನ ‘ಒಥೆಲೊ’ ನಾಟಕದಲ್ಲಿ ಖಳನಾಯಕನ ಪಾತ್ರ ಮಾಡಿದರು. ಇವರ ಅಬ್ಬರದ ಮಾತು, ಠಾಕು ಠೀಕು ನಡೆಯನ್ನು ಕಂಡು ದಂಗಾದವರು, ಅದೇ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಹಿಂದಿ ಚಿತ್ರರಂಗದ ದೊಡ್ಡ ನಿರ್ದೇಶಕ ಕಪಾಡಿಯಾ. ನಾಟಕ ಮುಗಿದ ಕೂಡಲೇ ಹುಣಸೂರು ಕೃಷ್ಣಮೂರ್ತಿಯವರಿಗೆ ೧೦೦ ರೂ. ಬಹುಮಾನ ನೀಡಿದ ಕಪಾಡಿಯಾ, ನನ್ನ ಜತೆ ಬಾ. ಸಿನಿಮಾದಲ್ಲಿ ಕೊಡ್ತೇನೆ ಎಂದು ಹೇಳಿ ಬಾಂಬೆಗೆ ಕರೆದೊಯ್ದೇಬಿಟ್ಟರು.
ಅಲ್ಲಿ ಕೆಲವು ದಿನವಿದ್ದು ಒಂದಷ್ಟು ಅನುಭವದೊಂದಿಗೆ ಮದ್ರಾಸಿಗೆ, ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು ಹುಣಸೂರು. ಮುಂದೆ ಅವರಿಗೆ ಕೃಷ್ಣಲೀಲಾ, ರಾಜಾವಿಕ್ರಮ, ನಳದಮಯಂತಿ, ಸೋದರಿ… ಮುಂತಾದ ಚಿತ್ರಗಳಲ್ಲಿ ಸಾಹಿತ್ಯ ರಚನೆಯ ಅವಕಾಶವೇನೋ ಸಿಕ್ಕಿತು ನಿಜ. ಆದರೆ, ಅದರಿಂದ ವಿಪರೀತ ಎಂಬಂಥ ಸಂಪಾದನೆ ಖಂಡಿತ ಇರಲಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗುತ್ತಿತ್ತಂತೆ.
ಹುಣಸೂರು ಕೃಷ್ಣಮೂರ್ತಿಯವರಿಗೆ ಇದ್ದ ಕೆಟ್ಟ ಚಟವೆಂದರೆ ಸಿಗರೇಟು. ಅದರಲ್ಲೂ ೫೫೫ ಬ್ರ್ಯಾಂಡಿನ ಸಿಗರೇಟು ಇದ್ದರಂತೂ ಅದರ ಖುಷಿಯೇ ಬೇರೆ. ಈ ‘ರಹಸ್ಯ’ ತಿಳಿದಿದ್ದ ಕೆಲವು ನಿರ್ಮಾಪಕರು, ಹುಣಸೂರರ ಬಳಿ ಕಥೆ-ಚಿತ್ರಕಥೆ-ಸಂಭಾಷಣೆ ಬರೆಸಿಕೊಳ್ಳಲು ಬಂದು, ಮುಂಗಡ ಅಡ್ವಾನ್ಸ್ಗೆ ಹಣದ ಬದಲು ಒಂದು ಪ್ಯಾಕ್ ಸಿಗರೇಟು ಕೊಟ್ಟು- ‘ಒಂದು ವಾರದ ನಂತರ ಶೂಟಿಂಗ್ ಶುರುಮಾಡೋಣ ಸ್ವಾಮೀ. ಎಲ್ಲಾ ನಿಮ್ಮ ಕೈಲಿದೆ. ಈ ಬಡವರನ್ನು ಮರೀಬೇಡಿ’ ಎಂದು ಪೂಸಿ ಹೊಡೆದು ಹೋಗಿಬಿಡುತ್ತಿದ್ದರಂತೆ. ಪಾಪ, ನಿಷ್ಠುರವಾಗಿ ಮಾತಾಡಿ ಅಭ್ಯಾಸವೇ ಇರದ ಹುಣಸೂರು ಕೃಷ್ಣಮೂರ್ತಿಗಳು- ಆ ಸಿಗರೇಟ್ ಪ್ಯಾಕನ್ನು ಒಡೆಯದೆ, ಅದನ್ನು ಮತ್ತೆ ಅಂಗಡಿಗೆ ಒಯ್ದು, ಮೂಲಬೆಲೆಗಿಂತ ಕಡಿಮೆ ದುಡ್ಡಿಗೆ ಅದನ್ನು ಮಾರಿ ಮನೆಗೆ ಅಗತ್ಯವಿದ್ದ ದಿನಸಿ ಸಾಮಾನು ತರುತ್ತಿದ್ದರಂತೆ! ಇಲ್ಲವಾದರೆ ಆ ಕೆಲಸವನ್ನು ಹುಣಸೂರು ಕೃಷ್ಣಮೂರ್ತಿಗಳ ಮನೆಯಲ್ಲಿದ್ದು ಅವರ ಮಕ್ಕಳಿಗೆ ಪಾಠ ಹೇಳುತ್ತಿದ್ದ ಸಿ.ವಿ. ಶಿವಶಂಕರ್ ಮಾಡುತ್ತಿದ್ದರಂತೆ.
ಸ್ವಾರಸ್ಯವೆಂದರೆ, ಹುಣಸೂರು ಅವರಿಗಿದ್ದ ಈ ‘ಅತೀ’ ಎಂಬಂಥ ಸಿಗರೇಟಿನ ಹುಚ್ಚೇ ‘ಭಕ್ತ ಕುಂಬಾರ’ದ ಸೂಪರ್ಹಿಟ್ ಗೀತೆ ‘ಮಾನವಾ ದೇಹವು ಮೂಳೆ ಮಾಂಸದ ತಡಿಕೆ’ ಹಾಡಿನ ಸೃಷ್ಟಿಗೆ ಕಾರಣವಾಯಿತು! ಈ ಹಾಡು ಹುಟ್ಟಿದ ಸಂದರ್ಭ ತಿಳಿಯುವ ಮುನ್ನ, ಭಕ್ತಕುಂಬಾರ ಚಿತ್ರದಲ್ಲಿ ಈ ಹಾಡು ಬರುವ ಸಂದರ್ಭವನ್ನು ನೆನಪು ಮಾಡಿಕೊಳ್ಳಿ: ‘ಆ ಕಾಲದ ಶ್ರೇಷ್ಠ ಭಕ್ತರು ಕುಂಬಾರನ ಮನೆಗೆ ಬಂದಿರುತ್ತಾರೆ. ನಮ್ಮೆಲ್ಲರ ದೈವ ಪಾಂಡುರಂಗ ವಿಠಲನ ಮಹಿಮೆಯ ಬಗ್ಗೆ ಹೇಳಿ’ ಎಂದು ಅವರೆಲ್ಲ ಕುಂಬಾರನನ್ನು ವಿನಂತಿಸುತ್ತಾರೆ. ಎದುರಿಗೆ ಕೂತವರೋ ಮಹಾಮಹಿಮರು, ಸಕಲವಿದ್ಯಾಪಾರಂಗತರು. ಅಂಥವರ ಮುಂದೆ ನಾನೆಷ್ಟರವನು ಎಂಬ ಹಿಂಜರಿಕೆಯಿಂದಲೇ ಭಕ್ತಕುಂಬಾರನ ಹಾಡು ಶುರುವಾಗಬೇಕು. ಅದು ಏಕಕಾಲಕ್ಕೆ ಪ್ರಾರ್ಥನೆಯೂ, ಕೀರ್ತನೆಯೂ, ಸಾಮಾನ್ಯನೊಬ್ಬನ ಅಸಾಮಾನ್ಯ ತಿಳಿವಳಿಕೆಯ ಗೀತೆಯೂ ಆಗಿರಬೇಕು. ಅಂಥದೊಂದು ಹಾಡು ಬರೆಯಲೆಂದು ಹುಣಸೂರು ಕೃಷ್ಣಮೂರ್ತಿಗಳು ನಿರ್ಧರಿಸಿದರು. ಪಲ್ಲವಿಯ ಸಾಲುಗಳೇನೋ ಆ ಕ್ಷಣದಲ್ಲೇ ಅವರಿಗೆ ಹೊಳೆದುಬಿಟ್ಟವು. ಆದರೆ ಎರಡು ಸಾಲು ಬರೆದ ನಂತರ ಜಪ್ಪಯ್ಯಾ ಅಂದರೂ ನಂತರದ ಸಾಲು ಹೊಳೆಯಲೇ ಇಲ್ಲ.
ಹೀಗೇ ಹತ್ತು ನಿಮಿಷ ಕಳೆದುಹೋದಾಗ- ‘ಒಂದು ಸಿಗರೇಟು ಸೇದೋಣ. ಆಗಲಾದರೂ ಏನಾದ್ರೂ ಹೊಳೆಯುತ್ತೇನೋ’ ಎಂದುಕೊಂಡು ಸಿಗರೇಟು ಹಚ್ಚಿದರು ಹುಣಸೂರು. ಎರಡು ಧಮ್ ಎಳೆದವರು ಮತ್ತೆ ಹಾಡನ್ನು ಹೇಗೆ ಮುಂದುವರಿಸುವುದು ಎಂದು ಯೋಚಿಸುತ್ತಾ ಹಾಗೇ ಮೈಮರೆತು ನಿಂತುಬಿಟ್ಟರು. ಹೀಗೇ ಐದು ನಿಮಿಷ ಕಳೆದುಹೋಯಿತು. ಉರಿಯುತ್ತಿದ್ದ ಸಿಗರೇಟು ಖಾಲಿಯಾಗಿ ಇನ್ನೊಂದು ತುದಿಯ ಬೆಂಕಿ ಬೆರಳು ತಾಕಿದಾಗಲೇ ಇವರಿಗೆ ಎಚ್ಚರ! ಬೆಂಕಿ ತಾಕಿದ ಜಾಗದ ಚರ್ಮ ಚುರುಕ್ ಎಂದಿತಲ್ಲ? ಆ ಕ್ಷಣವೇ ಸುಟ್ಟ ಜಾಗವನ್ನು ಉಜ್ಜಿಕೊಂಡರು. ಇವರು ಉಜ್ಜಿದ ರಭಸಕ್ಕೆ ಆ ಭಾಗದ ಚರ್ಮ ಕಿತ್ತುಬಂತು. ಜತೆಗೆ ಅಲ್ಲಿದ್ದ ನರ, ಮೂಳೆಗಳ ಸ್ಪರ್ಶವೂ ಆಯಿತು. ಇಷ್ಟಾದ ತಕ್ಷಣವೇ- ‘ಹಾ, ಹೊಳೆಯಿತು ಹೊಳೆಯಿತು’ ಎಂದು ಉದ್ಗರಿಸಿದ ಹುಣಸೂರು- ‘ಮನುಷ್ಯ ದೇಹ ಅಂದ್ರೆ ಇಷ್ಟೇ, ನಾವು ನಶ್ವರ ಅಂತ ಗೊತ್ತಿದ್ರೂ ಅದನ್ನು ಬಗೆಬಗೆಯಲ್ಲಿ ಅಲಂಕಾರ ಮಾಡ್ತೀವಿ. ಬೆತ್ತಲಾಗಿ ಬಂದು ಬೆತ್ತಲಾಗಿಯೇ ಹೋಗುವ ಮೊದಲು ಹೇಗೆಲ್ಲಾ ಮೆರೀತೀವಿ’ ಎಂದು ಸ್ವಗತವೆಂಬಂತೆ ಹೇಳಿಕೊಂಡರು. ಮರುಕ್ಷಣವೇ ಪೆನ್ನು-ಹಾಳೆ ತೆಗೆದುಕೊಂಡು ‘ಮಾನವಾ ಮೂಳೆ ಮಾಂಸದ ತಡಿಕೆ’ ಹಾಡು ಬರೆದೇಬಿಟ್ಟರು.
ಸುಮ್ಮನೆ ಗಮನಿಸಿ ನೋಡಿ: ‘ಭಕ್ತ ಕುಂಬಾರ’ದ ಈ ಹಾಡಿನಲ್ಲಿ ಭಕ್ತಿಯಿದೆ. ಪ್ರೀತಿಯಿದೆ. ಶರಣಾಗತಿಯಿದೆ. ಸಂದೇಶವಿದೆ. ಜೀವನದರ್ಶನವಿದೆ. ಬದುಕೆಂದರೆ ಏನು ಎಂಬ ಪ್ರಶ್ನೆಗೆ ಸರಳ ಉತ್ತರವಿದೆ. ಭಕ್ತಿಯೇ ಬದುಕಾದಾಗ ಮಾತ್ರ ಮುಕ್ತಿ ಸಾಧ್ಯ ಎಂಬ ಬುದ್ಧಿಮಾತೂ ಇದೆ. ಸ್ವಾರಸ್ಯವೆಂದರೆ, ಇವೆಲ್ಲವನ್ನೂ ಹುಣಸೂರು ಕೃಷ್ಣಮೂರ್ತಿಯವರು ಒಂದೇ ಒಂದು ಹಾಡಿನಲ್ಲಿ ಹೇಳಿಬಿಟ್ಟಿದ್ದಾರೆ.
ಅಂದಹಾಗೆ, ಹುಣಸೂರು ಕೃಷ್ಣಮೂರ್ತಿಯವರು ಒಂದು ಹಾಡಿನ ನೆಪದಲ್ಲಿ ಇಡೀ ಬದುಕಿನ ಕಥೆಯನ್ನು ‘ಬಂಗಾರದ ಮನುಷ್ಯ’ ಚಿತ್ರದ ‘ನಗುನಗುತಾ ನಲೀ ನಲೀ’ ಹಾಗೂ ಭಕ್ತ ಸಿರಿಯಾಳ ಚಿತ್ರದ ‘ಶಿವ ಶಿವ ಎಂದರೆ ಭಯವಿಲ್ಲ’ ಹಾಡುಗಳಲ್ಲೂ ಹೇಳಿದರು.
ಹೀಗೆ ತತ್ತ್ವಪದಗಳಂಥ ಹಾಡುಗಳಿಂದಲೇ ಎಲ್ಲರನ್ನೂ ಕಾಡುವ ಹುಣಸೂರರು ‘ಬಭ್ರುವಾಹನ’ಕ್ಕೆ ‘ಆರಾಸುವೆ ಮದನಾರಿ’ ಎಂಬ ಸರಸದ ಹಾಡನ್ನೂ; ರತ್ನಮಂಜರಿ ಚಿತ್ರಕ್ಕಾಗಿ ‘ಗಿಲ್ ಗಿಲ್ ಗಿಲಿ ಗಿಲಕ್ಕ/ ಕಾಲು ಗೆಜ್ಜೆ ಝಣಕ್ಕ/ ಕೈಯ ಬಳೆ ಠಣಕ್ಕ ರಂಗೆದ್ದಿತೊ, ನಿನ್ನ ಕಂಡು ಹಾರಿ ಕುಣಿಯೊ ಗುಂಗೆದ್ದಿತೋ’ ಎಂಬ ತಮಾಷೆ ಹಾಡುಗಳನ್ನೂ ಬರೆದರು.
ಈ ಹಾಡುಗಳನ್ನು ಬರೆದ ಸಂದರ್ಭದಲ್ಲಿ ಕೂಡ ಹುಣಸೂರು ಅವರಿಗೆ ಸೂರ್ತಿ ನೀಡಿದ್ದು- ಹೊಸ ಹೊಸ ಪದಗಳನ್ನು ಜತೆಮಾಡಿಕೊಟ್ಟಿದ್ದು- ಅವರ ಪ್ರೀತಿಪಾತ್ರ ಸಿಗರೇಟೇ!
ಈಗ ಹೇಳಿ, ಎಲ್ಲಿಯ ಮಧುರ ಹಾಡು, ಇದೆಲ್ಲಿಯ ಕಮಟುವಾಸನೆಯ ಸಿಗರೇಟು?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: