ಚಿಕ್ಕಿಕೇಳವ್ವಾ…ಯಂತಾಕಿ ಅಕ್ಕಾ !

ashwath

ಚಿತ್ರ: ನಾಗಮಂಡಲ. ಗೀತೆರಚನೆ: ಗೋಪಾಲ ಯಾಜ್ಞಿಕ್.

ಸಂಗೀತ: ಸಿ. ಅಶ್ವತ್ಥ್. ಗಾಯನ: ಶಿವಾನಂದ ಪಾಟೀಲ ಮತ್ತು ಮೇಳ.

 

ಚಿಕ್ಕಿಯಂತಾಕಿ ಅಕ್ಕಾ ಕೇಳವ್ವ

ನಿಟ್ಟುಸಿರ ನಿನಗಿನ್ನ ಸಖಿಯವ್ವಾ

ಬಿಕ್ಕು ಯಾತಕ ಬಾಲಿ? ದುಃಖ ಯಾಕವ್ವಾ?

ಬಿಟ್ಟುಸಿರ ನಿನ್ನ ಮರಿತಾವ…

 

ನೋವ ನಿನ್ನದು ಈ ಜೀವ ನಿನ್ನದು, ಈ

ನೋವ ನಿನ್ನನ್ನ ಇರಿತಾವ

ಇರಿತಾವ ಎದಿಯು ಉರಿತಾವ

ಉರಿತಾವ ಮನಸ ಮುರಿತಾವ

 

ವೇಸಗಾರ ಹೆಣ್ಣಿನಾ ನಗಿಗೆ ದಾಸನಾಗಿ ನಿಲ್ಲತಾನ

ಧ್ಯಾಸ ಇಲ್ಲದ ಮೆಲ್ಲತಾನ… ಚೆಲ್ಲತಾನ.. ಗೆಲ್ಲತಾನ

 

ಮತ್ತ ಮತ್ತ ನೋಡತಾಳ ಅತ್ತ ಇತ್ತ ಓಡತಾಳ

ಹುತ್ತುತ್ತು ಆಡಿಧಾಂಗ ಮತ್ತಷ್ಟು ಕಾಡತಾಳ

ಸುತ್ತಮುತ್ತ ಸುಳೀತಾಳ ಕೈಯ ತಾನ ಎಳೀತಾಳ

ಮುತ್ತಿಮೈಯ ನಿಲ್ಲತಾಳ ಕಣ್ಣಿನಾಗ ಕೊಲ್ಲತಾಳ

 

ಚೆಲ್ಲು ಚೆಲ್ಲು ಮಾತನಾಡಿ ಮುತ್ತರಾಶಿ ಚೆಲ್ಲತಾಳ

ನಲ್ಲನನ್ನ ಕಾಡಿ ಕೂಡಿ ಮಲ್ಲನನ್ನ ಗೆಲ್ಲತಾಳ

ನಗತಾಳ ಕೈಗಿ ಸಿಗತಾಳ, ಸಿಗಧಾಂಗ ತಾ ಸಾಗತಾಳ

ಮೆರಿತಾಳ ಸುಖ ಸುರಿತಾಳ, ಸುರಿತಾಳ ಮತ್ತು ಕರಿತಾಳ

 

ಸುರಿತಾಳ ಮತ್ತ ಕರಿತಾಳ

ಸುರಿತಾಳ ಮತ್ತ ಕರಿತಾಳ

‘ನಾಗಮಂಡಲ’ ಎಂದಾಕ್ಷಣ ಎಲ್ಲರಿಗೂ, ನಟ ಪ್ರಕಾಶ್ ರೈ ಅವರ ಅಬ್ಬಬ್ಬಬ್ಬಬ್ಬಾ ಎಂಬಂಥ ಅದ್ಭುತ ನಟನೆ, ನಟಿ ವಿಜಯಲಕ್ಷ್ಮಿಯ ಆಗಷ್ಟೇ ಅರಳಿದ ಹೂವಂಥ ಚೆಲುವು, ಬಿ. ಜಯಶ್ರೀ ಅವರ ದಿಲ್‌ಪಸಂದ್ ಅಭಿನಯ, ಹಾಡು: ನಾಗಾಭರಣರ ಸಮರ್ಥ ನಿರ್ದೇಶನ, ಜೋಗುಳದಂತಿರುವ ಸಿ. ಅಶ್ವತ್ಥ್ ಅವರ ಸಂಗೀತ ನೆನಪಾಗುತ್ತದೆ. ಈ ಸಂದರ್ಭದಲ್ಲಿಯೇ ಚಿತ್ರದುದ್ದಕ್ಕೂ ಬಿಟ್ಟೂ ಬಿಡದೆ ನೆನಪಾಗುವ ಇನ್ನೊಬ್ಬರೆಂದರೆ ಗೋಪಾಲ ಯಾಜ್ಞಿಕ್ ಅಲಿಯಾಸ್ ಗೋಪಾಲ ವಾಜಪೇಯಿ. ‘ನಾಗಮಂಡಲ’ಕ್ಕೆ ಉತ್ತರ ಕರ್ನಾಟಕ ಸೀಮೆಯ ದೇಸೀ ಸೊಗಡಿನ ಸಂಭಾಷಣೆಯನ್ನು ಮಾತ್ರವಲ್ಲ; ಅದ್ಭುತ ಅದ್ಭುತ ಎಂಬಂಥ ಹದಿನಾರು ಹಾಡುಗಳನ್ನು ಬರೆದವರೂ ವಾಜಪೇಯಿ. ಇನ್ನೂ ವಿವರಿಸಿ ಹೇಳಬೇಕೆಂದರೆ, ‘ನಾಗಮಂಡಲ’ದ ನಿಜವಾದ ಹೀರೊ ಅಂದರೆ- ತೆರೆಮರೆಯಲ್ಲೇ ಉಳಿದುಹೋದ ವಾಜಪೇಯಿಯವರೇ.

ಗೆಳೆಯರ ಬಳಗದಲ್ಲಿ ‘ಗೋವಾ’ ಎಂದೇ ಹೆಸರಾಗಿರುವ ಗೋಪಾಲ ವಾಜಪೇಯಿಯವರು- ‘ನಾಗಮಂಡಲ’ಕ್ಕೆ ಹಾಡು-ಸಂಭಾಷಣೆ ಬರೆದು ತಮ್ಮ ಹೆಸರನ್ನು ‘ಗೋಪಾಲ ಯಾಜ್ಞಿಕ್’ ಎಂದು ಬದಲಿಸಿಕೊಂಡದ್ದು ಒಂದು ವಿಚಿತ್ರ, ಅನಿವಾರ್ಯ ಸಂದರ್ಭದಲ್ಲಿ. ‘ನಾಗಮಂಡಲ’ಕ್ಕೆ ಸಂಭಾಷಣೆ-ಹಾಡು ಬರೆಯುವುದಕ್ಕೆ ಒಪ್ಪಿಕೊಂಡರಲ್ಲ? ಆಗ ವಾಜಪೇಯಿಯವರು ‘ಕರ್ಮವೀರ’ ವಾರಪತ್ರಿಕೆಯ ಸಂಪಾದಕರಾಗಿದ್ದರು. ‘ಸಂಪಾದಕ’ ಅನ್ನಿಸಿಕೊಂಡರೂ ಅಂಥ ದೊಡ್ಡ ಸಂಬಳವೇನೂ ಇರಲಿಲ್ಲ. ಅಷ್ಟೇ ಅಲ್ಲ, ನೌಕರಿಯ ಗ್ಯಾರಂಟಿ ಕೂಡ ಇರಲಿಲ್ಲ. ಏಕೆಂದರೆ ಆಗ ‘ಸಂಯುಕ್ತ ಕರ್ನಾಟಕ-ಕರ್ಮವೀರ-ಕಸ್ತೂರಿ’ ಪತ್ರಿಕೆಗಳ ಒಡೆತನದ ಲೋಕಶಿಕ್ಷಣ ಟ್ರಸ್ಟ್‌ಗೆ ಕಾರ್ಯದರ್ಶಿಯಾಗಿದ್ದವರು ಸರ್ವಾಕಾರಿ ಕೆ. ಶಾಮರಾವ್. ತಮ್ಮ ಸಂಸ್ಥೆಯ ನೌಕರನೊಬ್ಬ ಬಂದು ಚಿತ್ರಕ್ಕೆ ಸಂಭಾಷಣೆ-ಹಾಡು ಬರೆಯುತ್ತಿದ್ದಾನೆ ಎಂದು ಸಣ್ಣ ಸುಳಿವು ಸಿಕ್ಕಿದ್ದರೂ, ಅವತ್ತೇ ನೌಕರಿಯಿಂದ ವಜಾ ಮಾಡಿಬಿಡುತ್ತಿದ್ದರು ಶಾಮರಾವ್.

‘ನಾಗಮಂಡಲ’ಕ್ಕೆ ಹಾಡು-ಚಿತ್ರಕಥೆ ಬರೆಯಿರಿ ಎಂದು ಪ್ರೀತಿಯಿಂದ ಗಂಟುಬಿದ್ದ ನಾಗಾಭರಣ-ಅಶ್ವತ್ಥ್‌ಗೆ ಈ ಸಂಗತಿ ವಿವರಿಸಿದ ವಾಜಪೇಯಿ ‘ನಿಮ್ಮ ಪ್ರೀತಿ-ವಿಶ್ವಾಸಕ್ಕೆ ಕಟ್ಟುಬಿದ್ದು ಬರೆದುಕೊಡ್ತೇನೆ. ಆದರೆ ಯಾವುದೇ ಕಾರಣಕ್ಕೂ ನನ್ನ ಹೆಸರು ಹಾಕಬಾರದು’ ಎಂದು ಕಂಡೀಷನ್ ಹಾಕಿದರು. ಮುಂದೆ, ಪತ್ರಿಕೆಯವರ ಮುಂದೆ ಸಿನಿಮಾಕ್ಕೆ ದುಡಿದ ತಾಂತ್ರಿಕ ವರ್ಗದವರ ಪರಿಚಯ ಮಾಡಿಕೊಡಬೇಕಾಗಿ ಬಂದಾಗ ಸಾಹಿತ್ಯ-ಸಂಗೀತ ಒದಗಿಸಿದವರ ಹೆಸರು ಹೇಳಲೇಬೇಕಾದ ಸಂದರ್ಭ ಬಂತು. ‘ಏನ್ರೀ ಮಾಡೋದು ಈಗ? ನಿಮ್ಮ ಹೆಸರು ಹೇಳಬೇಕಾಗುತ್ತೆ, ಏನು ಮಾಡೋದು?’ ಅಂದರಂತೆ ಅಶ್ವತ್ಥ್. ‘ಸರ್, ನೀವೇನಾದ್ರೂ ನನ್ನ ಹೆಸರು ಹೇಳಿದರೆ, ನಾಳೆಯೇ ಕೆಲಸ ಹೋಗುತ್ತೆ. ಈಗ ತಿನ್ನುತ್ತಿರುವ ಅನ್ನಕ್ಕೂ ಕಲ್ಲು ಬೀಳುತ್ತೆ’ ಅಂದರಂತೆ ವಾಜಪೇಯಿ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದು ವಾಜಪೇಯಿ-ಅಶ್ವತ್ಥ್ ಇಬ್ಬರ ಸಂಕಟವನ್ನೂ ಅವರಿಂದಲೇ ಕೇಳಿ ತಿಳಿದ ಗಿರೀಶ್ ಕಾರ್ನಾಡರು ಒಂದು ನಿಮಿಷ ಯೋಚಿಸಿ- ‘ವಾಜಪೇಯಿ ಎಂಬುದು ಒಂದು ಯಾಗ. ಅದನ್ನು ಮಾಡಿದ ಯಾಜ್ಞಿಕರೇ ವಾಜಪೇಯಿಗಳು. ಒಂದು ಕೆಲಸ ಮಾಡ್ರೀ ಅಶ್ವತ್ಥ್. ಹಾಡು-ಸಂಭಾಷಣೆ ಬರೆದವರ ಹೆಸರನ್ನು ‘ಗೋಪಾಲ ಯಾಜ್ಞಿಕ್’ ಅಂತ ಹೇಳಿಬಿಡಿ’ ಅಂದರಂತೆ. ಪರಿಣಾಮ, ಗೋಪಾಲ ವಾಜಪೇಯಿ ಎಂಬುದು ಗೋಪಾಲ ಯಾಜ್ಞಿಕ್ ಆಗಿಹೋಯಿತು!

* * *

ಈಗ ‘ನಾಗಮಂಡಲ’ದ ಕಥೆಯನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಕಥಾನಾಯಕಿಯ ಹೆಸರು ರಾಣಿ. ಆಕೆ-ಮಲ್ಲಿಗೆಯಂಥ ಮೈನ, ಮೃದು ಮನಸ್ಸಿನ ಮಲೆನಾಡಿನ ಹುಡುಗಿ. ಆಕೆ, ಗಿಡ-ಮರ, ನದಿ-ತೊರೆ, ಗಿಳಿ-ಅಳಿಲುಗಳ ಜತೆ ಆಡಿಕೊಂಡು ಹಸಿರ ಸಿರಿಯ ಮಧ್ಯೆ ಬೆಳೆದವಳು. ಆಕೆಯ ನಗೆ, ಮಾತು ಎಲ್ಲವೂ ತಂಪು ತಂಪು.

ಅಂಥ ರಾಣಿಯನ್ನು ಬಯಲುಸೀಮೆಯ ಒರಟ ಅಪ್ಪಣ್ಣ ಮದುವೆಯಾಗುತ್ತಾನೆ. ಮಾತು, ನಡೆ, ವ್ಯವಹಾರ- ಈ ಎಲ್ಲದರಲ್ಲೂ ಒರಟೊರಟು ಎಂಬಂತಿದ್ದ ಅವನಿಗೆ ಮದುವೆಗೆ ಮೊದಲೇ ಅದೇ ಊರಿನ ವೇಶ್ಯೆಯೊಂದಿಗೆ ಸಂಬಂಧವೂ ಇರುತ್ತದೆ.

ಇಂಥ ಅಪ್ಪಣ್ಣನನ್ನು ಮದುವೆಯಾದ ರಾಣಿ, ಮೊದಲ ರಾತ್ರಿಯಂದು ಸಿಂಗರಿಸಿಕೊಂಡು ಕೋಣೆಗೆ ಬಂದರೆ- ‘ಕಾಮಾತುರಾಣಾಂ ನ ಭಯಂ ನ ಲಜ್ಜಾ’ ಎಂಬ ಮಾತಿನ ವ್ಯಕ್ತಿರೂಪದಂತಿದ್ದ ಅಪ್ಪಣ್ಣ, ರಾಣಿಯ ಮೇಲೆ ಕರಡಿಯಂತೆ ಬೀಳುತ್ತಾನೆ. ಅವಳನ್ನು ಅನಾಮತ್ತಾಗಿ ಎತ್ತಿ ಹಾಸಿಗೆಗೆ ಎಸೆದು, ಆಕ್ರಮಣಕ್ಕೆ ಮುಂದಾಗುತ್ತಾನೆ. ಗಂಡನ ‘ಅತೀ’ ಎಂಬಂಥ ಈ ವರ್ತನೆಯಿಂದ ಬೆದರಿದ ರಾಣಿ, ಅವನಿಂದ ತಪ್ಪಿಸಿಕೊಂಡು ಓಡಿಹೋಗಿ ದೇವರಮನೆ ಸೇರಿ ಬಾಗಿಲು ಹಾಕಿಕೊಳ್ಳುತ್ತಾಳೆ. ಅವಳನ್ನು ಹೆದರಿಸಿ, ಬೆದರಿಸಿ ಬಾಗಿಲು ತೆರೆಯಿಸಲು ಅಪ್ಪಣ್ಣ ಪ್ರಯತ್ನಿಸುತ್ತಾನೆ. ಆದರೆ ಅದಕ್ಕೆಲ್ಲಾ ರಾಣಿ ಮಣಿಯುವುದಿಲ್ಲ. ಆಗ- ‘ಹೆಂಗಸಾದ ಅವಳಿಗೇ ಅಷ್ಟು ಹಟವಿರುವಾಗ, ಗಂಡಸಾದ ನಾನೇನು ಕಮ್ಮಿ?’ ಎಂದುಕೊಂಡ ಅಪ್ಪಣ್ಣ, ಸಿಟ್ಟಿನ ಕೈಗೆ ಬುದ್ಧಿಕೊಟ್ಟು- ಇನ್ ಮುಂದೆಲ್ಲಾ, ಹೀಂಗ ಒಬ್ಬಳೇ ನಾಲ್ಕ್ ಗ್ವಾಡೀ ನಡುವೆ ಬಿದ್ಕಂಡಿರು. ಅಂದ್ರಽ ಇಳೀತೈತಿ ನಿನ್ ಸೊಕ್ಕು’ ಎಂದು ಮುಂಬಾಗಿಲಿಗೆ ಬೀಗ ಹಾಕಿಕೊಂಡು, ಸೀದಾ ತಾನು ‘ಇಟ್ಟುಕೊಂಡಿದ್ದವಳ’ ಮನೆಗೆ ಬಂದು ಬಿಡುತ್ತಾನೆ. ಒಂದು ಕಡೆಯಲ್ಲಿ ‘ಕಟ್ಟಿಕೊಂಡಾಕೆ ಬಿಚ್ಚಿಕೊಳ್ಳದೇ, ಬೆದರಿ ಬಚ್ಚಿಟ್ಟುಕೊಂಡು ಬಾಗಿಲು ಮುಚ್ಚಿಕೊಳ್ಳುತ್ತಾಳೆ. ಇನ್ನೊಂದು ಕಡೆಯಲ್ಲಿ ಇಟ್ಟುಕೊಂಡಾಕೆ- ಕದ ತೆರೆದು, ಕರೆದು, ಅಪ್ಪಣ್ಣನೆದುರು ತನ್ನನ್ನೇ ಇಡಿಯಾಗಿ ಬಿಚ್ಚಿಟ್ಟುಕೊಳ್ಳುತ್ತಾಳೆ.

ಈ ಸಂದರ್ಭವನ್ನು ಇನ್ನಿಲ್ಲದಷ್ಟು ಅದ್ಭುತವಾಗಿ ಹೇಳಿರುವುದು ‘ಚಿಕ್ಕಿಯಂತಾಕಿ ಅಕ್ಕಾ ಕೇಳವ್ವಾ…’ ಹಾಡು. ಈ ಹಾಡೊಳಗೆ ರಾಣಿಯ ವಿರಹ, ದುಃಖ-ಒಂಟಿತನ; ಅಪ್ಪಣ್ಣ ಮತ್ತು ಆತನ ‘ರಖಾವು’ ಅನ್ನಿಸಿಕೊಂಡವಳ ಹಸಿಹಸಿ ಬಿಸಿಬಿಸಿ ಎಂಬಂಥ ಸರಸ-ಶೃಂಗಾರದಾಟ ಬಾಪ್‌ರೇಬಾಪ್ ಎನ್ನುವಂತಿದೆ. ‘ಅಶ್ಲೀಲದ ಗಡಿ ದಾಟದೆಯೇ ಎಲ್ಲವನ್ನೂ ಹೇಳುವಂಥ, ಎಲ್ಲರೂ ಕೇಳುವಂಥ ಈ ಹಾಡನ್ನು ನೀವು ಬರೆದದ್ದು ಹೇಗೆ? ಈ ಹಾಡು ಸೃಷ್ಟಿಯಾಗಲು ನಿಮಗೆ ಸೂರ್ತಿ ಒದಗಿಸಿದ ಸಂದರ್ಭವಾದರೂ ಯಾವುದು? ಈ ಹಾಡಿನ ಹಿಂದೆಯೂ ಒಂದು ಕಥೆ ಇದೆಯಾ? ಎಂಬ ಕುತೂಹಲದ ಪ್ರಶ್ನೆಗೆ ವಾಜಪೇಯಿಯವರು ಉತ್ತರಿಸಿದ್ದು ಹೀಗೆ. ಮುಂದಿನ ಮಾತುಗಳನ್ನು ಅವರಿಂದಲೇ ಕೇಳೋಣ. ಓವರ್ ಟು ಗೋಪಾಲ ವಾಜಪೇಯಿ…

*************************

ನಾನಾಗ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ನಾಲ್ಕಾರು ಸಹಪಾಠಿ ಹುಡುಗರು ಸೇರಿ ದೇಸಾಯರೊಬ್ಬರ ವಾಡೆಯ ಮೇಲಿನ ಒಂದು ಕೋಣೆಯಲ್ಲಿ ಓದಿಕೊಳ್ಳುತ್ತಿದ್ದೆವು. ಅಲ್ಲಿ, ರಾತ್ರಿ ಇನ್ನೇನು ಕಣ್ಣಿಗೆ ಕಣ್ಣು ಹತ್ತಬೇಕೆಂಬಷ್ಟರಲ್ಲಿ ಧಪ ಧಪ ಬಾಗಿಲು ಬಡಿದ ಸದ್ದು, ಧಡ ಧಡ ಓಡಿ ಹೋದ ಸದ್ದು, ‘ಹೊಂಯ್…’ ಎಂದು ಅಳುವ ಸದ್ದು, ಬಿಕ್ಕುವ ಸದ್ದುಗಳ ಜತೆಗೆ ಗೆಜ್ಜೆ ಕಾಲುಗಳ ಸದ್ದು, ಕೈಬಳೆಗಳ ಸದ್ದು, ನಗುವಿನ ಸದ್ದು ಕೇಳಿಬರತೊಡಗಿ, ಒಂದು ವಿಚಿತ್ರ ಭಯದ ವಾತಾವರಣ ಸೃಷ್ಟಿಯಾಗುತ್ತಿತ್ತು. ನಾವೆಲ್ಲ ಗಾಬರಿಯಾಗಿ ಮುಸುಕೆಳೆದು ಮಲಗಿಬಿಡುತ್ತಿದ್ದೆವು. ಮರುದಿನ ಓಣಿಯ ಹೆಂಗಸರು ಬಾಯಿಗೆ ಸೆರಗು ಅಡ್ಡಹಿಡಿದು, ಏನೇನೋ ಪಿಸಪಿಸ ಮಾತಾಡಿಕೊಂಡು ಕಿಸಕ್ಕನೇ ನಗುತ್ತಿದ್ದುದೂ ಕಣ್ಣಿಗೆ ಬೀಳುತ್ತಿತ್ತು. ‘ದೇಸಾಯರ ಮನ್ಯಾಗ ದೆವ್ವ ಐತಿ, ಹೆಣ್ ದೆವ್ವಾ…’ ಅಂತ ಅವರೆಲ್ಲ ಮಾತಾಡಿಕೊಳ್ಳುತ್ತಿದ್ದರು. ವಾಸ್ತವವಾಗಿ ಆ ಅಳು ದೇಸಾಯರ ಹಿರಿಸೊಸೆಯ ಆರ್ತನಾದವಾಗಿರುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಬಹಳಷ್ಟು ಮೆರೆದವರು, ಉರಿದವರು ಆ ದೇಸಾಯರು. ಅಕ್ಷರಶಃ ಹೆಣ್ಣು-ಮಣ್ಣುಗಳನ್ನು ಆಳಿದವರು.

ಅವರಿಗೆ ಇಬ್ಬರು ಗಂಡುಮಕ್ಕಳು. ಆದರೆ ಇಬ್ಬರ ಸ್ವಭಾವದಲ್ಲೂ ಅಜಗಜಾಂತರ ವ್ಯತ್ಯಾಸ. ದೊಡ್ಡವ ಅಪ್ಪನಂತೆಯೇ ಮೆರೆಯುತ್ತಿದ್ದವ. ಚಿಕ್ಕವ ಸಜ್ಜನಿಕೆಗಳ ಸಾಕಾರ. ಇಬ್ಬರೂ ಮದುವೆಯ ವಯಸ್ಸಿಗೆ ಬಂದಾಗ ಶುರುವಾಯಿತು ಸಮಸ್ಯೆ. ದೊಡ್ಡವನಿಗೆ ಹೆಣ್ಣು ಕೊಡಲು ದೇಸಾಯರ ಸಮ ಅಂತಸ್ತಿನ ಜನ ಹಿಂದೇಟು ಹಾಕತೊಡಗಿದ್ದರು. ಅದಾಗಲೇ ಆತ ಒಬ್ಬಳನ್ನು ಇಟ್ಟುಕೊಂಡಿದ್ದುದೇ ಅದಕ್ಕೆ ಕಾರಣವಾಗಿತ್ತು.

ಅದು ಗೊತ್ತಿದ್ದೂ ದೇಸಾಯರು ಮಗನಿಗೆ ಬುದ್ಧಿ ಹೇಳುವ ಗೋಜಿಗೆ ಹೋಗಿರಲಿಲ್ಲ. ಮಗನಿಗೆ ಬುದ್ಧಿ ಹೇಳುವಷ್ಟು ನೈತಿಕ ಬಲ ಅವರಲ್ಲಿ ಇರಲಿಲ್ಲ. ಅವರೇ ಒಂದು ಕಾಲಕ್ಕೆ ನಡೆದ ಹಾದಿಯಲ್ಲಿ ಈಗ ಮಗ ಸಾಗಿದ್ದನಲ್ಲ?

ಇಂಥ ಸಂದರ್ಭದಲ್ಲಿ-ದೇಸಾಯರು ತಮ್ಮ ಮನೆತನದ ಗುರುಗಳ ಬಳಿ ಸಲಹೆ ಕೇಳಿದರು. ‘ಇಲ್ಲಿ ಹೆಣ್ಣು ಸಿಗದಿದ್ದರೇನು, ಅಲ್ಲೆಲ್ಲಾದ್ರೂ ದಕ್ಷಿಣ ಸೀಮಿಯಿಂದ ಒಂದು ಹೆಣ್ಣು ತಂದು ಗಂಟ್ ಹಾಕ್ರಿ,, ಎಲ್ಲಾ ಸರಿ ಆಗತೈತಿ,’ ಅಂದಿದ್ದರಂತೆ-ಗುರುಗಳು. ಸರಿ, ದೇಸಾಯರು ಹಾಗೇ ಮಾಡಿದರು. ಗುರುಗಳು ಬಂದು ನವದಂಪತಿಯನ್ನು ಹರಸಿದರು. ಆದರೆ ಅವರು ಹೇಳಿದ್ದಂತೆ ‘ಸರಿ ಆಗಬೇಕಾದ್ದು’ ಆಗಲೇ ಇಲ್ಲ. ಮದುವೆಗೆ ಮೊದಲೇ ಬಹಳ ಆಟ ಆಡಿದ್ದ ದೇಸಾಯರ ದೊಡ್ಡಮಗ, ಥೇಟ್ ‘ನಾಗಮಂಡಲ’ದ ಅಪ್ಪಣ್ಣನಂತೆಯೇ ಆಡಿಬಿಟ್ಟಿದ್ದ. ಗಂಡನ ವಿಕೃತಿಗೆ ಹೆದರಿದ ಹುಡುಗಿಗೆ ಆತನ ಇತರೆ ಸಂಬಂಧದ ಬಗ್ಗೆಯೂ ಗೊತ್ತಾಗಿ, ಸಹಕರಿಸದೇ ಉಳಿದಳು. ಇದರಿಂದ ಸಿಟ್ಟಾದ ಆತ ಇಟ್ಟುಕೊಂಡವಳನ್ನು ವಾಡೆಯ ಹಿತ್ತಲಲ್ಲಿದ್ದ ನಾಲ್ಕಂಕಣದ ಮನೆಗೇ ತಂದಿಟ್ಟುಕೊಂಡುಬಿಟ್ಟಿದ್ದ.

ಅಂತೂ, ಅಲ್ಲಿ ಪ್ರತಿ ರಾತ್ರಿ ಶುರುವಾಗುತ್ತಿತ್ತು ದೊಡ್ಡಾಟ!

ಹೀಗಿದ್ದಾಗಲೇ ಅದೊಂದು ರಾತ್ರಿ ದೇಸಾಯರ ಸೊಸೆ, ಮನೆಯೆದುರಿನ ಬಾವಿಗೆ ಬೀಳಲು ಹೊರಟದ್ದು ಕಂಡು ತಡೆದ ಜೋಗತಿ ಎಲ್ಲವ್ವ, ‘ಛೀ ಹುಚ್ಚಿ, ಇಷ್ಟಕ್ಕo ಸಾಯೂದo? ನಿಟ್ಟುಸರಂದ್ರ ಹೆಣಮಗಳಿಗೆ ಹುಟ್ಟೂತ್ಲೇ ಹಚಿಗೊಂಡ ಗೆಳತ್ಯಾರಿದ್ದಂಗ… ಸೈಸಿಕೋ ಹುಡಗೀ… ಆ ತಾಯಿ ಎಲ್ಲವ್ವ ಒಳ್ಳೇದ ಮಾಡತಾಳ,’ ಎಂದು ಹೇಳಿ ತಾನೇ ಆ ಹುಡುಗಿಗೆ ಮಾರ್ಗದರ್ಶಿಯಾಗಿ ನಿಂತಳು.

**************

ಹಾಡು ಬರೆಯಲೆಂದು ಭರಣ-ಅಶ್ವತ್ಥ್ ಜೋಡಿ ಬೆಂಗಳೂರಿನ ಮಿನರ್ವ ಸರ್ಕಲ್‌ನ ಕಾಮತ್ ಹೋಟೆಲಿನಲ್ಲಿ ರೂಮು ಮಾಡಿಕೊಟ್ಟಿದ್ದರು. ರೂಮಲ್ಲಿ ಕೂತು ಹೇಗೆ ಹಾಡು ಬರೆಯಲಿ ಎಂದು ಯೋಚಿಸುತ್ತಿದ್ದವನಿಗೆ-ಈ ಪ್ರಸಂಗ ನೆನಪಾದದ್ದೇ ತಡ, ಜೋಗತಿಯ ಮಾತುಗಳೇ ಹಾಡಿನ ಆರಂಭದ ಸಾಲುಗಳಾದವು. ಆ ಮರಿದೇಸಾಯಿ ಮತ್ತು ಆ ವೇಶ್ಯೆಯ ಆಟಗಳೇ ಹಾಡಿನ ಮುಂದುವರಿಕೆಗೆ ಕಾರಣವಾದವು….

ಇಷ್ಟು ಹೇಳಿ ಕ್ಷಣ ಮೌನವಾದರು ವಾಜಪೇಯಿ.

ಅಲ್ಲಿಗೆ, ಕಾಡುವ ಹಾಡುಗಳ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ ಎಂಬ ಮಾತು ನೂರಾ ಒಂದನೇ ಬಾರಿಗೂ ನಿಜವಾದಂತಾಯಿತು!

Advertisements

1 Comment »

  1. 1
    Aharnishi Says:

    ಮಣಿಕಾ೦ತ್ ಸರ್,

    ನಿಮ್ಮ ಬ್ಲಾಗಿಗೆ ಬಹಳ ಲೇಟಾಗಿ ಬ೦ದದ್ದಕ್ಕೆ ವಿಷಾದಿಸುತ್ತೇನೆ.ನಿಮ್ಮ ಎಲ್ಲಾ ಹಾಡುಗಳ ಜನ್ಮದ ಹಿ೦ದಿನ ಬ್ಲಾಗ್ ಬರಹಗಳನ್ನ ಓದಿ,ಕಾಮೆ೦ಟಿಸದೇ ಇರಲಾಗಲಿಲ್ಲ.”ಹಾಡು ಹುಟ್ಟಿದ ಸಮಯ” ಬಹಳ ಚೆನ್ನಾಗಿ ಬರ್ತಾ ಇದೆ.ಓದ್ತಾ ಓದ್ತಾ ಒ೦ದು ವಿಶಿಷ್ಟ ಅನುಭವವಾದ೦ತಾಯಿತು.ಇನ್ನೂ ಹತ್ತು ಹಲವು ಹಾಡು ಹುಟ್ಟಿದ ಸಮಯಕ್ಕಾಗಿ ಕಾಯುತ್ತಿರುವೆ.ನನ್ನ ಬ್ಲಾಗಿಗೊಮ್ಮೆ ಭೇಟಿ ನೀಡಿ ಬೆನ್ನು ತಟ್ಟಿ.


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: