ಆಷಾಢ ಅಂದ್ರೆ ಸುಮ್ನೇನಾ?

ಗೆಳೆಯ, ಯುದ್ಧ ಗೆದ್ದವನ ಸಂಭ್ರಮದಲ್ಲಿದ್ದ.
‘ಏನಾಯ್ತೋ, ಟ್ವೆಂಟಿ-೨೦ ಕ್ರಿಕೆಟ್ ಮುಗಿದು ಆಗಲೇ ತಿಂಗಳಾಗ್ತಾ ಬಂತು. ಹಾಗಾಗಿ ಈಗ ನೀನು ಬೆಟ್ ಗೆದ್ದಿರೋಕೆ ಸಾಧ್ಯವಿಲ್ಲ. ಹಾಗಿದ್ರೂ ನಿಂತನಿಂತಲ್ಲೇ ಥೈಥೈ ಕುಣಿತಾ ಇದೀಯಲ್ಲ, ಏನ್ಸಮಾಚಾರ?’ ಅಂದರೆ- ಒಳಗೊಳಗೇ ನಗುತ್ತ ಹೀಗೆಂದ: ‘ಗೊತ್ತಿದೆಯಲ್ವ ನಿಂಗೂ? ಆಷಾಢ ಶುರುವಾಗಿದೆ. ಅದೇ ಕಾರಣಕ್ಕೆ ಹೆಂಡತಿ ಹೋಗಿ ಅಣ್ಣನ ಮನೆ ಸೇರ್ಕೊಂಡಿದಾಳೆ. ಅವಳ ಜೊತೆ ದಿನಕ್ಕೆ ಒಂದೆರಡಲ್ಲ, ನಲವತ್ತೆಂಟು ಬಾರಿ ಫೋನ್ ಮಾಡಿ ಮಾತಾಡ್ತಿದ್ದೆ ನಿಜ. ಆದ್ರೂ ಸಮಾಧಾನ ಆಗ್ತಾ ಇರಲಿಲ್ಲ. ನಿನ್ನೆ ಸಂಜೆ ಸೀದಾ ಅವಳ ಅಣ್ಣನ ಮನೆಗೇ ಹೋದೆ. ಸಂಪ್ರದಾಯದ ನೆಪದಲ್ಲಿ ಅವರು ಅರ್ಧಗಂಟೆ ವಾಕ್ ಹೋಗೋಕೂ ಬಿಡಲ್ಲ ಅನ್ನಿಸ್ತು. ಅದಕ್ಕೇ ಉಪಾಯ ಮಾಡ್ದೆ, ದೇವಸ್ಥಾನಕ್ಕೆ ಬರುವಂತೆ ಅವಳಿಗೆ ಐಡಿಯಾ ಕೊಟ್ಟೆ. ಅವಳೂ ಖುಷಿಯಿಂದ ಒಪ್ಪಿದ್ಲು. ದೇವಸ್ಥಾನದಲ್ಲಿ ಐದು ನಿಮಿಷ ಇದ್ದು ಸೀದಾ ಮಲ್ಟಿಪ್ಲೆಕ್ಸ್ಗೆ ಸಿನಿಮಾಕ್ಕೆ ಹೋದ್ವಿ. ಅಲ್ಲಿ ಇಬ್ರೂ ಪರಸ್ಪರ ಭೇಟಿಯಾಗಿದ್ದು ಆಯ್ತು. ಬೇಟೆ ಆಡಿದ್ದೂ ಆಯ್ತು! ನಮ್ಮ ಮದುವೆಯಾಗಿ ಇನ್ನೂ ಹದಿನೈದು ದಿನ ಕಳೆದಿಲ್ಲ. ಹಾಗಿರುವಾಗ ಸಂಪ್ರದಾಯದ ನೆಪದಲ್ಲಿ ದೂರ ಮಾಡೋಕೆ ನೋಡಿದ್ರೆ ನಾವಾದ್ರೂ ಹೇಗೆ ಇರೋಕಾಗ್ತದೆ ಹೇಳು…. ಈ ಆಷಾಢದ ಮನೆ ಹಾಳಾಗ!’
ಹೀಗೆಂದವನೇ, ಗೆಳೆಯ ಮಾತು ನಿಲ್ಲಿಸಿದ.
***
‘ಆಷಾಢದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು’ ಎಂಬ ಮಾತು ಗೆಳೆಯನ ನೆಪದಲ್ಲಿ ಮತ್ತೆ ನೆನಪಾಯಿತು. ಹಿಂದೆಯೇ, ನಮ್ಮ ಮಧ್ಯೆ ಇವತ್ತಿಗೂ ವ್ರತದಂತೆ ಆರಣೆಯಲ್ಲಿರುವ- ‘ಆಷಾಢದಲ್ಲಿ ಹೊಸ ಮನೆ ಖರೀದಿಸಬಾರದು, ಮನೆ ಬದಲಿಸಬಾರದು, ವಾಹನ ಕೊಳ್ಳಬಾರದು, ಆಸ್ತಿ ಮಾರಬಾರದು, ಮನೆ ನಿರ್ಮಾಣಕ್ಕೆ ಪಾಯ ಹಾಕಬಾರದು, ಮದುವೆಯೂ ಸೇರಿದಂತೆ ಯಾವೊಂದು ಶುಭ ಕಾರ್ಯವೂ ಆಷಾಢ ಮಾಸದಲ್ಲಿ ನಡೆಯಬಾರದು…’ ಎಂಬಿತ್ಯಾದಿ ಮಾತುಗಳೆಲ್ಲ ಸಾಲು ದೀಪದ ಬೆಳಕಿನಂತೆ ಕಣ್ಮುಂದೆ ಬಂದು ಹೋದವು. ಆಗಲೇ ಹುಟ್ಟಿಕೊಂಡದ್ದು ಈ ಪ್ರಶ್ನೆಗಳ ಗುಚ್ಛ: ಅಲ್ಲ, ಆಷಾಢದಲ್ಲಿ ಅದ್ಯಾಕೆ ಮದುವೆಯಾಗಬಾರದು? ಯಾಕೆ ಹೊಸ ಮನೆ ಕಟ್ಟಿಸಬಾರದು ಖರೀದಿಸಬಾರದು? ಗಂಡ-ಹೆಂಡತಿ ಜೊತೆಯಾಗಿದ್ದರೆ ಈ ಆಷಾಢಕ್ಕೇನು ಕಷ್ಟ? ಈ ಮಾಸದಲ್ಲಿ ಕೂಡ ಅದದೇ ಭಾನುವಾರ, ಸೋಮವಾರ, ಮಂಗಳವಾರ… ವಗೈರೆಗಳೇ ಇದ್ದರೂ ಹೊಸದಾಗಿ ವಾಹನ ಖರೀದಿಸಬಾರದು ಎಂದರೆ ಏನರ್ಥ? ಆಷಾಢದ ನೂರೆಂಟು ಲೆಕ್ಕಾಚಾರಗಳ ಮಧ್ಯೆಯೂ ದಿನಸಿ, ಸಾಂಬಾರ ಪದಾರ್ಥಗಳು ಹಾಗೂ ತರಕಾರಿಯನ್ನು ದಿನದಿನವೂ ಖರೀದಿಸುವ ಜನ, ಆಸ್ತಿ ಖರೀದಿಯ ವಿಷಯ ಬಂದಾಗ ಮಾತ್ರ ಹಾವು ತುಳಿದವರಂತೆ ಬೆಚ್ಚುವುದೇಕೆ? ಒಂದು ವೇಳೆ ಯಾರಾದರೂ ಕಿಲಾಡಿಗಳು, ಈ ಆಷಾಢ ಮಾಸ ತುಂಬಾ ಕೆಟ್ಟದು. ಹಾಗಾಗಿ ಒಂದಿಡೀ ತಿಂಗಳು ಯಾರೂ ಊಟ ಮಾಡಬಾರದು, ಸ್ನಾನ ಮಾಡಬಾರದು ಮತ್ತು ಉಸಿರಾಡಲೂಬಾರದು ಎಂದು ಹೇಳಿಬಿಟ್ಟರೆ…?!
ಇಂಥದೊಂದು ಯೋಚನೆ ಬಂದೊಡನೆ ನಗು ಬಂತು. ಹಿಂದೆಯೇ ಆಷಾಢದ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲ ಜನ ಹಾಗೂ ಪರಿಸರದ ‘ಬದಲಾದ ಚಿತ್ರವೂ’ ಕಣ್ಮುಂದೆ ಹಾದು ಹೋಯಿತು; ಬ್ಲಾಕ್ ಅಂಡ್ ವೈಟ್ ಸಿನಿಮಾದ ದೃಶ್ಯಗಳ ಹಾಗೆ…
ಹೌದಲ್ಲವಾ? ಉಳಿದೆಲ್ಲ ಸಂದರ್ಭಗಳಲ್ಲೂ ಆಕಾಶ ಶುಭ್ರವಾಗಿರುತ್ತದೆ. ಸ್ವಚ್ಛವಾಗಿರುತ್ತದೆ. ಆದರೆ, ಆಷಾಢ ಮಾಸ ಬಂತೆಂದರೆ ಸಾಕು, ಆಕಾಶವೆಂಬೋ ಆಕಾಶ ಕೂಡ ಸ್ವಲ್ಪ ಮಂಕಾಗುತ್ತದೆ, ಮಸುಕಾದಂತೆ ಕಾಣಿಸುತ್ತದೆ. ರೈಲಿನ ಎಂಜಿನ್ನಿಂದ ಹೊರಟ ಹೊಗೆಯಂತೆ ಕಾಣುವ ಕಡುಗಪ್ಪು ಮೋಡಗಳು ಆಕಾಶದ ಚೆಲುವನ್ನೇ ಹಾಳು ಮಾಡಿರುತ್ತವೆ. ಈ ಮೋಡಗಳಲ್ಲಿರುವ ಅಷ್ಟೂ ಮಳೆ ನೀರನ್ನು ಸುರಿಸಿ, ದುಗುಡ, ದುಮ್ಮಾನವನ್ನು ಕಳೆದುಕೊಳ್ಳಬೇಕೆಂಬ ಬಯಕೆ ಆಗಸಕ್ಕಿರುತ್ತದೆ, ನಿಜ. ಆದರೆ, ತುಂಬ ಸಂದರ್ಭದಲ್ಲಿ ಮೋಡಗಳು ಮಳೆ ಸುರಿಸುವುದೇ ಇಲ್ಲ. ಬದಲಿಗೆ, ಅಮ್ಮನೊಂದಿಗೆ ‘ಠೂ’ ಬಿಟ್ಟು ಮನೆಯ ಇನ್ನೊಂದು ಮೂಲೆಗೆ ಬಂದು ಮುಖ ಊದಿಸಿಕೊಂಡು ಕೂರುವ ಮಗುವಿನಂತೆ, ಅದೇ ಆಗಸದ ಇನ್ನೊಂದು ತುದಿಗೆ ಬಂದು ಕೂತುಬಿಡುತ್ತವೆ. ಪರಿಣಾಮ, ಈ ಆಷಾಢದ ಸಂದರ್ಭದಲ್ಲಿ ಆಕಾಶದಂಥ ಆಕಾಶ ಕೂಡ ಎಲ್ಲ ಇದ್ದರೂ ಏನೂ ಇಲ್ಲ ಎಂಬಂಥ ನೋವಿನಿಂದ ಕಂಗಾಲಾಗಿರುತ್ತದೆ. ಅದಕ್ಕೇ ಹೇಳಿದ್ದು- ಆಷಾಢ ಎಂದರೆ ಖಿನ್ನತೆ. ಆಷಾಢ ಎಂದರೆ ಯಾತನೆ, ಆಷಾಢ ಎಂದರೆ ದುಗುಡ ಮತ್ತು ಆಷಾಢವೆಂದರೆ ವಿರಹ!
ಹೀಗೆ ಅಂದುಕೊಂಡಾಕ್ಷಣ ಮನಸ್ಸು ಮತ್ತೆ ಅದೇ ಹಳೆಯ ಪ್ರಶ್ನೆಗೇ ಬಂದು ನಿಲ್ಲುತ್ತದೆ: ‘ಆಷಾಢದಲ್ಲಿ ಗಂಡ-ಹೆಂಡತಿಯನ್ನು ದೂರ ಮಾಡ್ತಾರಲ್ಲ ಯಾಕೆ?’
ಹಿರಿಯರ ಜಾಣತನವನ್ನೇ ಅಂದಾಜು ಮಾಡಿಕೊಂಡು ಹೇಳುವುದಾದರೆ- ಮದುವೆಗಳ ಸೀಜನ್ ಆರಂಭವಾಗುವುದೇ ಜೇಷ್ಠ ಮಾಸದಲ್ಲಿ. ಆ ತಿಂಗಳು- ಮದುವೆ, ನಂತರದ ಒಂದಿಷ್ಟು ಶಾಸ್ತ್ರ, ದೇವಸ್ಥಾನ, ಗೆಳೆಯರ ಮನೆಗಳಿಗೆ ಯಾತ್ರೆ ಇತ್ಯಾದಿಗಳಲ್ಲೇ ಮುಗಿದು ಹೋಗುತ್ತದೆ. ಈ ಮಧ್ಯೆಯೇ ‘ಹೊಸ ಬದುಕಿನ ರಸಮಯ ಕ್ಷಣಗಳ’ ರುಚಿ ಗಂಡ-ಹೆಂಡತಿ, ಇಬ್ಬರಿಗೂ ಆಗಿರುತ್ತದೆ. ಪರಿಣಾಮ, ಇಬ್ಬರೂ ‘ನಿನ್ನ ಅರೆಗಳಿಗೆಯೂ ನಾನು ಬಿಟ್ಟಿರಲಾರೆ…’ ಎಂಬ ಉನ್ಮಾದದ ಸ್ಥಿತಿಗೆ ಬಂದಿರುತ್ತಾರೆ. ಹೀಗಿದ್ದಾಗಲೇ ಕಳ್ಳನಂತೆ, ಒಂದೊಂದೇ ಹೆಜ್ಜೆ ಇಡುತ್ತ ಬಂದೇ ಬಿಡುತ್ತದೆ ಆಷಾಢ. ಒಂದು ವೇಳೆ ಹಸಿಬಿಸಿ ಆಸೆಗಳಿಂದ ಹುಚ್ಚಾದ ನವದಂಪತಿಗಳನ್ನು ಈ ತಿಂಗಳು ಜೊತೆಯಾಗಿರಲು ಬಿಟ್ಟರೆ, ಬಿರು ಬೇಸಿಗೆಯ ಕಾಲಕ್ಕೆ ಹೆರಿಗೆಯಾಗಿ ಬಿಡುವ ಸಾಧ್ಯತೆಗಳಿರುತ್ತವೆ. ಬಿಸಿಲಿನ ತಾಪಕ್ಕೆ ಕೆಲವೊಮ್ಮೆ ದಿಢೀರನೆ ಜ್ವರ ಬಂದುಬಿಡುವ ಸಾಧ್ಯತೆಗಳಿರುತ್ತದೆ. ಈ ಮಧ್ಯೆ ಗರ್ಭದ ಭಾರ, ಹೆರಿಗೆಯ ನೋವು, ಬಾಣಂತನದ ಬಾಧೆಯನ್ನು ತಪ್ಪಿಸಬೇಕೆಂಬ ಆಶಯದಿಂದಲೇ ಒಂದು ತಿಂಗಳ ಮಟ್ಟಿಗೆ ಗಂಡ-ಹೆಂಡತಿಯನ್ನು ತಾತ್ಕಾಲಿಕವಾಗಿ ದೂರ ಇರಿಸಲಾಗುತ್ತದೆ.
ಅಂತೆಯೇ, ಆಷಾಢದ ಸಂದರ್ಭದಲ್ಲಿ, ಆಗಷ್ಟೇ ಮಳೆ ಬಿದ್ದು ಬಿತ್ತನೆ, ಕಳೆ ಕೀಳುವುದೂ ಸೇರಿದಂತೆ ರೈತರಿಗೆ ಕೈ ತುಂಬ ಕೆಲಸ ಸಿಕ್ಕಿರುತ್ತದೆ. ಈ ಸಂದರ್ಭದಲ್ಲಿ ಮನೆ ಕಟ್ಟಿಸುವ/ ಖರೀದಿಸುವ ಕೆಲಸಕ್ಕೆ ನಿಂತರೆ ಮೈಮರೆವಿನ ಕಾರಣಕ್ಕೆ ಕೃಷಿ ಕೆಲಸ ಕೆಡಬಹುದು ಎಂಬ ಇನ್ನೊಂದು ಕಾರಣ ಕೂಡ ‘ಆಷಾಢದಲ್ಲಿ ಶುಭಕಾರ್ಯಗಳಿಗೆ ನಿಷಿದ್ಧ’ ಎಂಬ ಘೋಷಣೆಯ ಹಿಂದಿರಬಹುದೇನೋ ಅನಿಸುತ್ತದೆ.
ಇಂಥದೊಂದು ಸಮಜಾಯಿಷಿ ಕೊಟ್ಟ ನಂತರವೂ ಆಷಾಢ ಎಂದಾಕ್ಷಣ ‘ನವದಂಪತಿಯ’ ಇರುಳಿನ ಸಂಕಟವೇ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ಮನಸ್ಸು, ಹದಿನೈದಿಪ್ಪತ್ತು ವರ್ಷ ಹಿಂದೆ ಚಾಲ್ತಿಯಲ್ಲಿದ್ದ ಆಚರಣೆಗಳ ಹಿಂದೆ ಯಾತ್ರೆ ಹೊರಡುತ್ತದೆ. ತುಂಟ ಕಂಗಳು ಅದನ್ನು ಹಿಂಬಾಲಿಸುತ್ತವೆ.
ಯಾರು ಏನೇ ಹೇಳಲಿ, ಹಳೆಯ ದಿನಗಳ ಆಚರಣೆಯೇ ಚೆಂದವಿತ್ತು. ಆಗೆಲ್ಲ- ಆಷಾಢ ಇನ್ನೂ ನಾಲ್ಕೈದು ದಿನವಿದೆ ಎನ್ನುವಾಗಲೇ ಗಂಡನ ಮನೆಯಿಂದ ತಂಗಿಯನ್ನು ಕರೆ ತರಲು ಅಣ್ಣ ತಯಾರಿ ನಡೆಸುತ್ತಿದ್ದ. ಈ ಕಡೆ- ಆಷಾಢದಲ್ಲಿ ಅತ್ತೆ-ಸೊಸೆ ಒಂದೇ ಮನೇಲಿದ್ರೆ ಕೆಡುಕು ತಪ್ಪಿದ್ದಲ್ಲ ಎಂಬ ಹಳೆಯ ಮಾತನ್ನು ನಂಬಿ, ಸೊಸೆ ಅನ್ನಿಸಿಕೊಂಡಾಕೆ ಕೂಡ ಅಪ್ಪನ ಮನೆಗೆ ಹೊರಟು ನಿಲ್ಲುತ್ತಿದ್ದಳು. ಅಣ್ಣ ಬರುವುದು ಒಂದೆರಡು ದಿನ ತಡವಾದರೂ ಸಾಕು; ಹೆಣ್ಣು ಮಕ್ಕಳಿಗೆ ‘ಆಷಾಢ ಮಾಸ ಬಂದೀತಮ್ಮ/ ತೌರಿಂದ ಅಣ್ಣ ಬರಲಿಲ್ಲ/ ಎಷ್ಟು ನೆನೆಯಲಿ ಅಣ್ಣನ ದಾರಿ/ ಸುವ್ವೋ ಲಾಲಿ ಸುವ್ವಾಲಾಲಿ’ ಎಂಬ ಹಾಡು ನೆನಪಾಗಿಬಿಡುತ್ತಿತ್ತು.
ತಮಾಷೆಯೆಂದರೆ, ಹೀಗೆ- ಕುಣಿದಾಡಿಕೊಂಡೇ ತೌರಿಗೆ ಬಂದವಳ ಸಂಭ್ರಮ ಎರಡೇ ದಿನಗಳಿಗೆ ಮುಗಿದು ಹೋಗುತ್ತಿತ್ತು. ತವರು ಮನೆಯ ನೂರು ಸಂಭ್ರಮದ ಮಧ್ಯೆಯೂ ‘ಗಂಡ’ ನೆನಪಾಗುತ್ತಿದ್ದ. ಅವನೊಂದಿಗೆ ಜಗಳವಾಡಿದ್ದು, ಠೂ ಬಿಟ್ಟಿದ್ದು, ತಲೆ ಮೇಲೆ ಮೊಟಕಿದ್ದು, ಸ್ನಾನದ ಮನೆಯಲ್ಲಿ ಸರಸವಾಡಿದ್ದು, ಒಂದೇ ತಟ್ಟೆಯಲ್ಲಿ ಹಂಚಿಕೊಂಡು ತಿಂದದ್ದು ನೆನಪಾಗಿ ಬಿಡುತ್ತಿತ್ತು. ಪರಿಣಾಮ, ಕೆನ್ನೆಯಲ್ಲಿನ್ನೂ ಅರಿಶಿಣದ ಗುರುತು ಉಳಿಸಿಕೊಂಡಿರುತ್ತಿದ್ದ ಕನ್ಯೆಗೆ- ಹಗಲಲ್ಲಿ ಬೆಳಕೇ ಇರುತ್ತಿರಲಿಲ್ಲ. ರಾತ್ರಿ ನಿದ್ರೆ ಬರುತ್ತಿರಲಿಲ್ಲ!
ಈ ಕಡೆ, ಗಂಡ ಅನ್ನಿಸಿಕೊಂಡವನ ಕಥೆಯೂ ಅದೇ. ಆಗೆಲ್ಲ, ತವರಿಗೆ ಹೋದವಳನ್ನು ಸಂಪರ್ಕಿಸಲು ಇದ್ದ ದಾರಿಯೆಂದರೆ ಕಾಗದ ಬರೆಯುವುದು! ಈ ಪುಣ್ಯಾತ್ಮನ ಕಾಗದವನ್ನು ಹೆಂಡತಿಯ ಮನೆಯಲ್ಲಿ ಎಲ್ಲರೂ ಓದುತ್ತಿದ್ದುದರಿಂದ ಅಲ್ಲಿ ಪೋಲ್ ಪೋಲಿಯಾಗಿ ಬರೆಯುವಂತಿರಲಿಲ್ಲ. ಕಾಗದ ಬಿಟ್ಟರೆ, ಹೆಂಡತಿಯನ್ನು ಸಂಪರ್ಕಿಸಲು ಇದ್ದ ಇನ್ನೊಂದು ದಾರಿಯೆಂದರೆ- ಎಸ್ಟೀಡಿ ಫೋನು! ಆಗೆಲ್ಲ, ಒಂದೂರಿನಲ್ಲಿ ತಲಾ ಇಪ್ಪತ್ತು ಮನೆಗೆ ಒಂದು ಫೋನ್ ಇರುತ್ತಿತ್ತು. ಆ ಮನೆಯ ನಂಬರ್ ಪಡೆದು ಫೋನ್ ಮಾಡಿದರೆ, ಮನೆಯ ಯಜಮಾನರು ಫೋನ್ ಎತ್ತಿಕೊಂಡು ಲೋಕಾಭಿರಾಮ ಹರಟೆಗೇ ನಿಂತುಬಿಡುತ್ತಿದ್ದರು! ಇವನಿಗೋ ಪ್ರಾಣಸಂಕಟ. ಅವರ ಕಾಡು ಹರಟೆಯನ್ನೆಲ್ಲ ತೆಪ್ಪಗೆ ಕೇಳಿಸಿಕೊಂಡು ಕಡೆಗೊಮ್ಮೆ ಸಂಕೋಚದಿಂದ ನಮ್ಮ ‘ರಾಧನ್ನು’ ಕರೀತೀರಾ ಅಂದರೆ- ಕರೆಯೋಣ ಕರೆಯೋಣ ಎಂದು ಅವರು ಹೇಳುತ್ತಿದ್ದಾಗಲೇ ಲೈನ್ ಕಟ್ ಆಗುತ್ತಿತ್ತು! ಇವನು ಇನ್ನೊಂದು ಬಾರಿ ಫೋನ್ ಮಾಡುವ ವೇಳೆಗೆ ‘ಅವಳು’ ಓಡಿ ಬಂದಿರುತ್ತಿದ್ದಳು ನಿಜ. ಆದರೆ, ಆಕೆಯ ಸುತ್ತಲೂ ಗೆಳತಿಯರ, ನೆರೆ ಹೊರೆಯವರ ಗುಂಪಿರುತ್ತಿತ್ತು. ಇವನಿಗೋ ಫೋನ್ನಲ್ಲೇ ಲಲ್ಲೆಗೆರೆಯುವ, ಮುತ್ತಿಡುವ, ಪೋಲಿ ಜೋಕು ಹೇಳುವ ಕಾತುರ! ಆದರೆ, ಇವನ ಸಂಭ್ರಮಕ್ಕೆ ದನಿಯಾಗುವ ಪರಿಸ್ಥಿತಿಯಲ್ಲಿ ಅವಳಿರುತ್ತಿರಲಿಲ್ಲ. ಈತ ಗುರ್ರ ಗುರ್ರ ಎಂದು ರೇಗಿದರೂ, ಸೆಕ್ಸಿಯಾಗಿ ಮಾತಾಡಿದರೂ ಒಂದಿಷ್ಟು ಬೈದರೂ- ಈಕೆ ‘ಹಾ, ಹೂಂ, ಸರಿ ಸರಿ…’ ಎಂದೇ ಮಾತು ಮುಗಿಸುತ್ತಿದ್ದಳು. ಇದರಿಂದ ಸಹಜವಾಗಿಯೇ ಸಿಟ್ಟಾದ ಈ ಗಂಡ ಮಹಾರಾಯ- ‘ತವರಿನ ಸುಖ ಜಾಸ್ತಿ ಆಗಿರಬೇಕು, ಹಾಗಿರುವಾಗ ನನ್ನ ನೆನಪೆಲ್ಲಿ ಬರ್ತದೆ ಹೇಳು?’ ಎಂದು ಚುಚ್ಚಿ ಪತ್ರ ಬರೆಯುತ್ತಿದ್ದ!
ಮರು ಟಪಾಲಿಗೇ ಬರುತ್ತಿದ್ದ ಅವಳ ಉತ್ತರ ಹೀಗಿರುತ್ತಿತ್ತು? ತೌರ ಸುಖದೊಳಗೆನ್ನರೆತಿಹಳು ಎನ್ನದಿರಿ/ ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು/ ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ/ ಇರುಳಿನಲಿ ಕಾಣುವುದು ನಿಮ್ಮ ಕನಸು..’
ಮೊದಲೇ ವಿರಹದ ಮಧ್ಯೆ ಬದುಕುತ್ತಿದ್ದವನಿಗೆ ಇಂಥದೊಂದು ಆರ್ದ್ರ ಭಾಷೆಯ ಪತ್ರ ಬಂದರೆ, ಮನಸು ತಡೆದೀತಾದರೂ ಹೇಗೆ? ಈತ ತಕ್ಷಣವೇ ‘ಕೋಟಿ ಯೋಜನವಿರಲಿ ದಾಟಿ ಬರುವೆನು ಹೆಣ್ಣೆ..’ ಎಂದು ಹಾಡಿಕೊಂಡೇ ಹೆಂಡತಿಯ ಮನೆಗೆ ಬಂದುಬಿಡುತ್ತಿದ್ದ.
ಫಜೀತಿಯೆಂದರೆ, ಅತ್ತೆಯ ಮನೆಯಲ್ಲಿ ಹೊಸದೊಂದು ಬಗೆಯ ಸಂಕಟ ಜೊತೆಯಾಗುತ್ತಿತ್ತು. ‘ಈತ’ ಆಗೊಮ್ಮೆ ಈಗೊಮ್ಮೆ ಅವಕಾಶ ಸಿಕ್ಕರೆ ಅವಳೊಂದಿಗೆ ಸರಸವಾಡಬೇಕು ಎಂಬ ಅವಸರದಲ್ಲಿದ್ದರೆ ಅದಕ್ಕೆ ಅವಕಾಶವೇ ಸಿಗುತ್ತಿರಲಿಲ್ಲ. ಊಟ ಬಡಿಸಲು ಅವಳೊಂದಿಗೆ ಅತ್ತೆಯೂ ಬರುತ್ತಿದ್ದದರಿಂದ ಆಗ ಕೈ ಚಿವುಟಿ ರೋಮಾಂಚನಗೊಳ್ಳುವುದಕ್ಕೆ; ಕಣ್ಣು ಹೊಡೆದು ಖುಷಿ ಪಡುವುದಕ್ಕೆ ಆಗುತ್ತಿರಲಿಲ್ಲ. ಊಟವಾದ ನಂತರ ಹೊರಬಂದು, ಈಗ ಎರಡೇ ನಿಮಿಷದ ಮಟ್ಟಿಗೆ ಕರೆಂಟು ಹೋಗಿಬಿಟ್ಟರೆ ಸಾಕು, ತಬ್ಬಿ ಮುದ್ದಾಡಬಹುದು ಎಂದು ಇಬ್ಬರೂ ಅಂದುಕೊಳ್ಳುತ್ತಿದ್ದರು ನಿಜ. ಆದರೆ ಅವತ್ತು ದರಿದ್ರದ ಕರೆಂಟು ಹೋಗುತ್ತಲೇ ಇರಲಿಲ್ಲ! ಹಾಳಾಗಿ ಹೋಗಲಿ, ಮಲಗುವ ಮುನ್ನವಾದರೂ ಅವಳನ್ನು ತಬ್ಬಿ ಮುದ್ದಾಡಲೇಬೇಕು ಎಂದು ‘ಇವನು’ ಅಂದುಕೊಂಡಿದ್ದಾಗಲೇ- ಹೆಂಡತಿಯ ಅಣ್ಣನೋ, ಮಾವನೋ ಲಗುಬಗೆಯಿಂದ ಬಂದು ಹಾಸಿಗೆ ಹಾಸಿಕೊಡುತ್ತಿದ್ದರು. ‘ಅವಳು’ ಎಲ್ಲವನ್ನೂ ಬಾಗಿಲ ಸಂದಿಯಲ್ಲೇ ನೋಡಿ, ನಕ್ಕು, ಸಾರಿ ಕೇಳಿ, ಗಾಳಿಯಲ್ಲಿ ಹೂಮುತ್ತು ತೇಲಿಬಿಟ್ಟು ಹೋಗಿಬಿಡುತ್ತಿದ್ದಳಿ. ಇಂಥ ಗಡಿಬಿಡಿ, ಸಿಡಿಮಿಡಿ, ಆಸೆ, ಕಾತುರ ಹಾಗೂ ವಿರಹದ ಮಧ್ಯೆಯೇ ಆಷಾಢ ಕಳೆದು ಹೋಗುತ್ತಿತ್ತು.
ಸ್ವಾರಸ್ಯ ಏನೆಂದರೆ- ಈ ಒಂದು ತಿಂಗಳ ಅವಯಲ್ಲಿ ಅವಳಿಗೆ ಇವನ ಮೇಲೆ, ಇವಳಿಗೆ ಅವನ ಮೇಲೆ ‘ಅತೀ’ ಅನ್ನುವಷ್ಟು ಪ್ರೀತಿ ಹುಟ್ಟುತ್ತಿತ್ತು. ಎರಡು ಕುಟುಂಬಗಳ ನಡುವೆ ಇದ್ದ ಸಂಬಂಧದ ಬಂಧ ಗಟ್ಟಿಯಾಗುತ್ತಿತ್ತು!
***
ಹೌದು. ಇದೆಲ್ಲಾ ಹಳೆಯ ಮಧುರ ನೆನಪು. ಈಗ ಆಷಾಢಕ್ಕೆ ಹೆದರುವ ಗಂಡ-ಹೆಂಡಿರಿಲ್ಲ. ‘ಅಯ್ಯೋ, ಆಷಾಢ ಇಲ್ವಾ ನಿಮ್ಗೆ? ಎಂದು ಕೇಳಿದರೆ ಆ ಬೆಡಗಿ ನಕ್ಕು- ‘ಗೊತ್ತಲ್ಲ ನಿಮ್ಗೂ. ಆಷಾಢದಲ್ಲಿ ಅತ್ತೆ-ಸೊಸೆ ಒಂದು ಮನೇಲಿ ಇರಬಾರ್ದಂತೆ. ಗಂಡ-ಹೆಂಡತಿ ಇರಬಹುದಂತೆ! ನಮ್ಮತ್ತೆ ಊರಲಿದ್ದಾರೆ. ಹಾಗಾಗಿ ನಮ್ಗೆ ಆಷಾಢವಿಲ್ಲ’ ಅನ್ನುತ್ತಾಳೆ. ಬೆಂಗಳೂರಿನಲ್ಲೇ ಬದುಕುವ ಜೋಡಿಗಳಂತೂ ಊರಿಗೆ ಹೋಗದೆ, ಅಕ್ಕಪಕ್ಕದ ಏರಿಯಾಗಳಲ್ಲೇ ಇರುವ ಬಂಧುಗಳ ಮನೆ ಸೇರಿಕೊಳ್ಳುತ್ತಾರೆ. ಇನ್ನು ಕೆಲವರು- ಅಯ್ಯೋ ಹೋಗ್ರಿ, ಒಂದಿಡೀ ತಿಂಗಳು ಯಾರು ಒಂಟಿಯಾಗಿ ಬದುಕುತ್ತಾರೆ? ನಮಗೆ ಆಷಾಢವೂ ಬೇಡ, ಗೀಷಾಡವೂ ಬೇಡ’ ಎಂದು ಉತ್ತರ ಕೊಟ್ಟು ದಂಗು ಬಡಿಸುತ್ತಾರೆ. ಒಂದು ವೇಳೆ ಸಂಪ್ರದಾಯದ ನೆಪದಲ್ಲಿ ಆಕೆ ತವರಿಗೆ ಹೋದರೆ, ಎರಡೇ ದಿನಗಳ ನಂತರ ಅವಳ ಪತಿರಾಯರು ಅತ್ತೆ ಮನೆಗೆ ಹೋಗಿಬಿಡುತ್ತಾರೆ. ಒಂದು ರೌಂಡ್ ಸುತ್ತಾಡಿ ಬರೋಣ ಎಂದು ಹೇಳಿ, ಅತ್ತೆಯ ವಿರೋಧಕ್ಕೆ ಗೋಲಿ ಹೊಡೆದು ಹೋಗಿಯೂಬಿಡುತ್ತಾರೆ. ಹೊರಗೆ ಬಂದ ಮೇಲೆ ಇನ್ನೇನಿದೆ? ಪರಸ್ಪರ ಭೇಟಿಯಾಗುತ್ತದೆ. ಬೇಕಿರುವುದೆಲ್ಲ ಲೂಟಿಯಾಗುತ್ತದೆ! ಆಮೇಲೆ, ಏನೂ ನಡೆದೇ ಇಲ್ಲ ಎಂಬಂತೆ ಇಬ್ಬರೂ ಹುಳ್ಳಗೆ ನಗುತ್ತಾ ಮನೆಗೆ ಬರುತ್ತಾರೆ. ಈಗಿನ ದಂಪತಿಯ ಪೈಕಿ ಹೆಚ್ಚಿನವರು ಎರಡು ವರ್ಷದವರೆಗೂ ಮಗು ಬೇಡ ಎಂದು ಮೊದಲೇ ನಿರ್ಧರಿಸುವುದರಿಂದ ಆಷಾಢದಲ್ಲಿ ಒಂದಾದರೆ ಮುಂದೆ ಕಷ್ಟ ಆಗುತ್ತೆ ಎಂಬ ಮಾತೇ ಅರ್ಥ ಕಳೆದುಕೊಂಡಿದೆ.
ಪರಿಣಾಮ ಏನಾಗಿದೆಯೆಂದರೆ, ಈಗ, ಆಷಾಢ ಎಂದರೆ ‘ಅವನಿ(ಳಿ)ಲ್ಲದೆ ಇರಬೇಕಿಲ್ಲ ಎಂಬ ಸಂಕಟವಿಲ್ಲ. ಇಬ್ಬರ ಬಳಿಯೂ ಮೊಬೈಲ್ ಇರುವುದರಿಂದ ಎಸ್ಟೀಡಿ ಫೋನ್ ಮಾಡುವ ಅಗತ್ಯವಿಲ್ಲ. ಪತ್ರ ಬರೆಯುವುದೇ ಇಬ್ಬರಿಗೂ ಮರೆತಿದೆಯಾದ್ದರಿಂದ ಅಕ್ಷರ ಪ್ರೀತಿಯ ರೋಮಾಂಚನ ಕೂಡ ಇಬ್ಬರಿಗೂ ಇಲ್ಲ. ಹೀಗೆ, ಬದಲಾಗಿ ಹೋದ ಕಾಲಮಾನವನ್ನು ಮರೆತು ಹೋಗುತ್ತಿರುವ ಸಂಪ್ರದಾಯವನ್ನು ಕಂಡಾಗ ಅನಿಸುವುದಿಷ್ಟೆ: ಕಾಲಾಯ ತಸ್ಮೈ ನಮಃ

Advertisements

1 Comment »

  1. ಕಾಲೊಗ್ ತಕ್ಕ ಕೋಲ. ಇತ್ತೆ ಪೂರಾ ಜನ ಬದಲಾತೆರ್. ಆಟಿ ಕುಲ್ಲುನಾ ಪೂರಾ ಘಟ್ಟದ ಮಿತ್ತ್ ಪೊತುಂಡು


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: