ಹೃದಯ ಸಮುದ್ರ ಕಲಕಿ…

180px-Doddarangegowda

ಚಿತ್ರ : ಆಶ್ವಮೇಧ ಗೀತ ರಚನೆ : ಡಾ. ದೊಡ್ಡರಂಗೇಗೌಡ
ಗಾಯನ : ಡಾ. ರಾಜ್‌ಕುಮಾರ್ ಸಂಗೀತ : ಸಂಗೀತ ರಾಜಾ

ಹೃದಯ ಸಮುದ್ರ ಕಲಕಿ
ಹೊತ್ತಿದೆ ದ್ವೇಷದ ಬೆಂಕಿ
ರೋಷಾಗ್ನಿ ಜ್ವಾಲೆ ಉರಿದುರಿದು
ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ
ಪ್ರಾಣ ಒತ್ತೆ ಇಟ್ಟು ಹೋರಾಡುವೆ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ… ಅಶ್ವಮೇಧ… ಅಶ್ವಮೇಧ ||ಪ||

ಸೂರ್ಯ ಚಂದ್ರರೇ ನಿನ್ನ ಕಂಗಳು
ಗಿರಿಶೃಂಗವೇ ನಿನ್ನ ಅಂಗವೂ
ದಿಕ್ಪಾಲಕರೇ ನಿನ್ನ ಕಾಲ್ಗಳು
ಮಿಂಚು ಸಿಡಿಲೂ ನಿನ್ನ ವೇಗವು
ಜೀವಜೀವದಲಿ ಬೆರೆತು ಹೋದ
ಭಾವಭಾವದಲಿ ಕರಗೀ ಹೋದ
ಜೀವಾಶ್ವವೇ ದೂರಾದೆಯಾ, ಪ್ರಾಣಾಶ್ವವೇ ಮರೆಯಾದೆಯಾ
ದಿಟ್ಟ ಹೆಜ್ಜೆ ಇಟ್ಟು, ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ… ಅಶ್ವಮೇಧ… ಅಶ್ವಮೇಧ… || ೧ ||

ವಿಷವ್ಯೂಹವಾ ಕುಟ್ಟಿ ಕೆಡವಲು
ವೀರ ಪೌರುಷ ಎತ್ತಿ ಹಿಡಿದು
ಛದ್ಮವೇಷವಾ ಹೊರಗೆಳೆಯಲು
ಕ್ಷಾತ್ರ ತೇಜದಾ ಕತ್ತಿ ಹಿಡಿದು
ಖೂಳ ರಾಕ್ಷಸರ ಕೊಚ್ಚಿ ಕಡಿವೆ
ನೀತಿ ನೇಮಗಳ ಬಿತ್ತಿ ಬೆಳೆವೆ
ಆಕಾಶವೇ ಮೇಲ್ಬೀಳಲಿ, ಭೂತಾಯಿಯೇ ಬಾಯ್ಬಿರಿಯಲಿ
ದಿಟ್ಟ ಹೆಜ್ಜೆ ಇಟ್ಟು, ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ… ಅಶ್ವಮೇಧ… ಅಶ್ವಮೇಧ… || ೨ ||

ಇವತ್ತಿಗೂ ಎಲ್ಲ ಗಾಯಕರಿಗೂ ಸವಾಲಾಗಿರುವ; ಕೇಳುಗರಿಗೆ ತುಂಬ ಪ್ರಿಯವಾಗಿರುವ ಗೀತೆ – ‘ಹೃದಯ ಸಮುದ್ರ ಕಲಕಿ…’ ಈ ಮಧುರ ಹಾಡಿನ ಹಿಂದಿರುವ ಕಥೆಯಾದರೂ ಎಂಥಾದ್ದು ಎಂಬ ಕುತೂಹಲದಿಂದಲೇ ಅಶ್ವಮೇಧದ ನಿರ್ದೇಶಕ ಸಿ.ಆರ್. ಸಿಂಹ ಅವರನ್ನು ಭೇಟಿಯಾದರೆ, ಈ ಮಧುರ ಗೀತೆ ಸೃಷ್ಟಿಯಾದ ಸಂದರ್ಭವನ್ನು ಅಷ್ಟೇ ಮಧುರವಾಗಿ ವಿವರಿಸಿದರು ಸಿಂಹ. ಅದನ್ನೆಲ್ಲ ಅವರ ಮಾತುಗಳಲ್ಲಿ ಕೇಳಿದರೇ ಚೆಂದ. ಓವರ್ ಟು ಸಿ.ಆರ್. ಸಿಂಹ :
ಇದು ೧೯೯೦-೯೧ರ ಮಾತು. ಕುಮಾರ್ ಬಂಗಾರಪ್ಪ ಅಭಿನಯದ ‘ಅಶ್ವಮೇಧ’ ಚಿತ್ರದ ಪೂರ್ವಸಿದ್ಧತೆ ನಡೆದಿತ್ತು. ಕಥೆ-ಚಿತ್ರಕಥೆ-ನಿರ್ದೇಶನದ ಜವಾಬ್ದಾರಿ ನನ್ನದಾಗಿತ್ತು. ಚಿತ್ರದಲ್ಲಿ ಎಷ್ಟು ಹಾಡುಗಳಿರಬೇಕು ಹಾಗೂ ಅವು ಯಾವ ಸಂದರ್ಭದಲ್ಲಿ ಬರಬೇಕು ಎಂಬ ಚರ್ಚೆ ನಡೆಯಿತು. ನಾಯಕನಿಗೆ ಕುದುರೆಯೆಂದರೆ ಇಷ್ಟ. ಆತ ಆ ಕಾರಣದಿಂದಲೇ ಒಂದು ಮಜಭೂತಾದ ಕುದುರೆಯನ್ನು ಸಾಕಿಕೊಂಡಿರುತ್ತಾನೆ. ಅದಕ್ಕೆ ಜೀವದ ಗೆಳೆಯನ ಸ್ಥಾನ ನೀಡಿರುತ್ತಾನೆ. ನಾಯಕನ ಮನೆ-ಮನ ಎರಡರಲ್ಲೂ ಅದಕ್ಕೆ ತುಂಬ ಪ್ರಾಮುಖ್ಯತೆ ಇರುತ್ತದೆ. ಹೀಗಿರುವಾಗ, ನಾಯಕನನ್ನು ‘ಮುಗಿಸುವ’ ಉದ್ದೇಶದಿಂದ ಖಳನಾಯಕ ಹಾರಿಸಿದ ಗುಂಡು, ಆಕಸ್ಮಾತ್ತಾಗಿ ಕುದುರೆಗೆ ತಗುಲಿ ಅದು ಅಸುನೀಗುತ್ತದೆ. ತನ್ನ ಜೀವದ ಜೀವವೇ ಆಗಿದ್ದ ಕುದುರೆಯ ಆಗ್ನಿ ಸಂಸ್ಕಾರ ಮುಗಿದಾಕ್ಷಣವೇ ಅದರ ಸಾವಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾಯಕ ನಿರ್ಧರಿಸುತ್ತಾನೆ. ಆ ಸಂದರ್ಭಕ್ಕೆ ಕ್ರೋಧ, ಆವೇಶ ಹಾಗೂ ದುಃಖಭರಿತ ಹಾಡೊಂದನ್ನು ಹಾಕಬೇಕು; ಅದನ್ನೇ ಟೈಟಲ್ ಸಾಂಗ್ ಮಾಡಬೇಕು ಅನ್ನಿಸಿತು.
ಇದನ್ನೇ ಸಂಗೀತ ನಿರ್ದೇಶಕರಾಗಿದ್ದ ಸಂಗೀತ ರಾಜಾ ಹಾಗೂ ಗೀತ ರಚನೆಕಾರ ದೊಡ್ಡ ರಂಗೇಗೌಡರಿಗೆ ತಿಳಿಸಿದೆ. ಮೂವರೂ ನಂದಿ ಬೆಟ್ಟಕ್ಕೆ ಹೋಗಿ ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಟ್ಯೂನ್ ಹಾಗೂ ಹಾಡು ಸಿದ್ಧಪಡಿಸುವುದೆಂದು ನಿರ್ಧರಿಸಿದೆವು. ಹಾಗೆಯೇ ಮಾಡಿದೆವು. ಸಂಗೀತ ರಾಜಾ, ನನಗೆ ಹತ್ತಾರು ಟ್ಯೂನ್‌ಗಳನ್ನು ಕೇಳಿಸಿದರು. ಯಾವುದೂ ಇಷ್ಟವಾಗಲಿಲ್ಲ. ಆಗಲೇ ಅವರಿಗೆ ಮತ್ತೆ ನೆನಪಿಸಿದೆ. ‘ನಿಮ್ಮ ಟ್ಯೂನ್‌ನಲ್ಲಿ ಶೋಕರಸ, ಕ್ರೋಧರಸ ಮತ್ತು ರೌದ್ರರಸ ಇರಬೇಕು. ಅಂಥ ಟ್ಯೂನ್ ಕೊಡಿ…’
ಸ್ವಲ್ಪ ಹೊತ್ತಿನ ನಂತರ ಸಂಗೀತ ರಾಜಾ, ಹೊಸದೊಂದು ಟ್ಯೂನ್ ಕೇಳಿಸಿದರು. ಅದು ನನಗೆ ಬಹಳ ಹಿಡಿಸಿತು. ತಕ್ಷಣವೇ ಅದನ್ನು ದೊಡ್ಡರಂಗೇಗೌಡರಿಗೆ ಕೇಳಿಸಿ- ‘ಸಾರ್, ಈ ಹಾಡನ್ನು ನೀವು ವಿಶೇಷ ಮುತುವರ್ಜಿ ವಹಿಸಿ ಬರೀಬೇಕು ಅನ್ನೋದು ನನ್ನಾಸೆ. ಹಾಡಿನಲ್ಲಿ ನಾಯಕನಿಗೆ ಕುದುರೆಯ ಮೇಲಿನ ಪ್ರೀತಿ, ಅದರ ವರ್ಣನೆ, ಅದರ ಅಗಲಿಕೆಯಿಂದ ಆದ ನೋವು ಹಾಗೂ ಖಳನಾಯಕರ ಮೇಲಿನ ರೊಚ್ಚು… ಇದೆಲ್ಲ ಬರಬೇಕು’ ಎಂದೆ.
‘ಸರಿ, ಸರಿ’ ಎಂದ ಗೌಡರು ಕೆಲ ಸಮಯದ ಬಳಿಕ ಹಾಡಿನೊಂದಿಗೆ ಬಂದು ಹೇಳಿದರು : ‘ಬಹಳ ಯೋಚಿಸಿ, ಒಳ್ಳೆಯ ವಿಷಯಗಳನ್ನು ಬಳಸಿ ಈ ಹಾಡು ಬರೆದಿದ್ದೇನೆ. ಕುದುರೆಯ ಕಂಗಳು ಸೂರ್ಯ-ಚಂದ್ರರ ಹಾಗೆ, ಅದರ ಒಡಲು ಗಿರಿಶೃಂಗದ ಹಾಗೆ, ವೇಗ-ಮಿಂಚು ಸಿಡಿಲಿನ ಹಾಗೆ ಎಂದು ವಿವರಿಸಿದರು. ಕುಮಾರ್ ಬಂಗಾರಪ್ಪ ಸೇರಿದಂತೆ ಎಲ್ಲರಿಗೂ ಹಾಡಿನ ಸಾಹಿತ್ಯ ಇಷ್ಟವಾಯಿತು. ನಂತರ, ಈ ಹಾಡನ್ನು ಯಾರಿಂದ ಹಾಡಿಸುವುದು ಎಂಬ ವಿಷಯ ಚರ್ಚೆಗೆ ಬಂತು. ಹಾಡಿನ ಸಾಹಿತ್ಯ ಓದಿದಾಗಲೇ ಇದನ್ನು ರಾಜ್‌ಕುಮಾರ್ ಅವರಿಂದಲೇ ಹಾಡಿಸಬೇಕೆಂಬ ಐಡಿಯಾ ಬಂದಿತ್ತು. ಅದನ್ನೇ ಕುಮಾರ್ ಬಂಗಾರಪ್ಪ ಅವರಿಗೆ ತಿಳಿಸಿ- ಹೇಗಾದರೂ ಮಾಡಿ ಅಣ್ಣಾವ್ರ ಬಳಿ ಈ ವಿಷಯ ಪ್ರಸ್ತಾಪಿಸಿ. ಅವರು ಒಪ್ಪಿಬಿಟ್ಟರೆ ನಮ್ಮ ಸಿನಿಮಾಕ್ಕೆ ಒಂದು ತೂಕ ಇರುತ್ತೆ. ಈ ಹಾಡು ಅಮರವಾಗುತ್ತೆ’ ಎಂದೆ.
ಈ ಮಾತು ಕೇಳಿದ ಕುಮಾರ್ ಬಂಗಾರಪ್ಪ ಹೌಹಾರಿ- ‘ಸಾರ್, ಅಣ್ಣಾವ್ರು ಮಹಾನ್ ನಟರು. ಅವರೆಲ್ಲಿ, ನಾನೆಲ್ಲಿ? ಅಂಥವರನ್ನು ನನ್ನ ಪಾತ್ರಕ್ಕೆ ಹಿನ್ನೆಲೆಯಾಗಿ ಬರುವ ಹಾಡಿಗೆ ಧ್ವನಿಯಾಗಿ ಎಂದು ಕೇಳುವುದು ಹೇಗೆ? ಇಲ್ಲ, ಇಲ್ಲ. ಅಂಥ ಮಹಾನ್ ನಟನ ಮುಂದೆ ನಿಂತು ಮಾತಾಡಲು ನನಗೆ ಧೈರ್ಯವಿಲ್ಲ’ ಅಂದುಬಿಟ್ಟರು.
‘ಹಾಗಲ್ಲ ಸಾರ್, ಈ ಹಾಡನ್ನು ಅಣ್ಣಾವ್ರು ಹಾಡಿದ್ರೆ ಮಾತ್ರ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯ. ನೀವು ದಯವಿಟ್ಟು ಪ್ರಯತ್ನಿಸಿ’ ಎಂದು ಕುಮಾರ್ ಬಂಗಾರಪ್ಪ ಅವರಿಗೆ ಮತ್ತೆ ಒತ್ತಾಯಿಸಿದೆ. ಅವರು ಹಿಂಜರಿಯುತ್ತಲೇ ಒಪ್ಪಿದರು. ಅಷ್ಟೇ ಅಲ್ಲ, ಅದೊಂದು ದಿನ ಸಮಯ ನೋಡಿ ಡಾ. ರಾಜ್ ಅವರಿಗೆ ಈ ವಿಷಯ ತಿಳಿಸಿಯೂಬಿಟ್ಟರು. ಒಂದೆರಡು ನಿಮಿಷ ಯೋಚಿಸಿದ ಅಣ್ಣಾವ್ರು ‘ಸರಿಯಪ್ಪಾ, ಹಾಡ್ತೀನಿ’ ಅಂದರಂತೆ.
ಈ ಸುದ್ದಿ ಕೇಳಿ ನಮಗೆಲ್ಲ ಆದ ಸಂತೋಷಕ್ಕೆ ಪಾರವೇ ಇಲ್ಲ. ಸಾಮಾನ್ಯವಾಗಿ ಎಲ್ಲ ಸಂದರ್ಭಗಳಲ್ಲೂ ಟ್ರ್ಯಾಕ್ ಸಿಂಗರ್ ಒಬ್ಬರಿಂದ ಹಾಡಿಸಿ ಅದನ್ನೇ ಹಿನ್ನೆಲೆ ಗಾಯಕರಿಗೆ ಕೇಳಿಸಲಾಗುತ್ತದೆ. ನಂತರ ಹಾಡಿನ ರೆಕಾರ್ಡಿಂಗ್ ಆಗುತ್ತದೆ. ಟ್ರ್ಯಾಕ್ ಸಿಂಗರ್‌ನಿಂದ ಹಾಡಿಸಿದರೆ – ಅದೇ ಧ್ವನಿ ಉಳಿದುಹೋಗುತ್ತದೆ ಅನ್ನಿಸಿತು. ಹಾಗಾಗಿ ಟ್ರ್ಯಾಕ್ ಸಿಂಗರ್‌ನಿಂದ ಹಾಡಿಸಲೇ ಇಲ್ಲ. ಬದಲಿಗೆ ವಾಯ್ಸ್ ಬರುವ ಕಡೆಯಲ್ಲೆಲ್ಲ ವಯಲಿನ್ ವಾದನ ಬಳಸಿ ಹಾಡನ್ನು ಸಿದ್ಧಗೊಳಿಸಲಾಗಿತ್ತು. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್ ನಡೆಸಲು ನಿರ್ಧರಿಸಿ, ಟ್ಯೂನ್ ಹಾಗೂ ಹಾಡಿನ ಸಾಹಿತ್ಯವನ್ನು ಟೇಪ್ ಮಾಡಿಸಿ ಡಾ|| ರಾಜ್ ಅವರಿಗೆ ತಲುಪಿಸಲಾಗಿತ್ತು.
ಕಡೆಗೂ ನಾವೆಲ್ಲ ಅಂದುಕೊಂಡ ದಿನ ಬಂದೇಬಂತು. ಅವತ್ತು ಸಂಜೆ ಸೋದರ ವರದಪ್ಪ ಅವರೊಂದಿಗೆ ರಾಜ್ ಸ್ಟುಡಿಯೋಗೆ ಬಂದರು. ತಕ್ಷಣವೇ ರಾಜ್ ಅವರ ಬಳಿ ಹೋಗಿ ಮೆಲುದನಿಯಲ್ಲಿ ಹೀಗೆ ವಿನಂತಿಸಿದೆ : ‘ಸಾರ್, ರೆಕಾರ್ಡಿಂಗ್‌ಗೆ ಎಲ್ಲ ಸಿದ್ಧವಿದೆ. ಆದರೆ ಒಂದು ವಿನಂತಿ. ನೀವು ಈ ಹಾಡನ್ನು ನಿಮ್ಮ ಎಂದಿನ ಧ್ವನಿಯಲ್ಲಿ ಹಾಡುವ ಬದಲು, ಹಿಂದೆ ನಾಟಕವಾಡುತ್ತಿದ್ದ ಸಂದರ್ಭದಲ್ಲಿ ಸ್ಟೇಜಿನ ಮೇಲೆ ಭಾವಾವೇಶದಿಂದ ಹಾಡ್ತಿದ್ರಲ್ಲ? ಹಾಗೆ ಹಾಡಿ…’
ಅದಕ್ಕೆ ರಾಜ್- ಇಲ್ಲ ಸಿಂಹ ಅವರೇ, ಅದು ಆಗಿನ ಕಾಲ. ನನಗೂ ಆಗ ಚಿಕ್ಕ ವಯಸ್ಸಿತ್ತು. ಹಾಡ್ತಿದ್ದೆ. ಈಗ ಅದೆಲ್ಲ ಹೇಗೆ ಸಾಧ್ಯ? ಹಾಗೆ ಹಾಡಲು ಸಾಧ್ಯವಿಲ್ಲ’ ಎಂದುಬಿಟ್ಟರು. ಇದೇ ಸಂದರ್ಭಕ್ಕೆ ವರದಪ್ಪನವರೂ ನಮ್ಮ ಬಳಿ ಬಂದರು. ಆಗ ರಾಜ್- ‘ನೋಡು ವರದಪ್ಪಾ, ಹಿಂದೆ ಬೇಡರ ಕಣ್ಣಪ್ಪ, ಸಾಹುಕಾರ ನಾಟಕಗಳಲ್ಲಿ ಹಾಡ್ತಿದ್ದೆನಲ್ಲ? ಆ ಕಂಠದ, ಆ ಧಾಟಿಯ ಹಾಡು ಬೇಕಂತೆ ಇವರಿಗೆ…’ ಎಂದರು. ಆ ವೇಳೆಗಾಗಲೇ ಹಾಡಿನ ಸಾಹಿತ್ಯ ಹಾಗೂ ಟ್ಯೂನ್ ಕೇಳಿಸಿಕೊಂಡಿದ್ದ ವರದಪ್ಪನವರು- ‘ಹೌದು, ಸಿಂಹ ಹೇಳ್ತಿರೋದು ಸರಿಯಾಗಿದೆ. ಹಾಗೇ ಹಾಡಿ’ ಎಂದುಬಿಟ್ಟರು! ಇದೇ ಸಂದರ್ಭಕ್ಕೆ ನನ್ನ ಇಂಗಿತದಂತೆ ಅಲ್ಲಿಗೆ ಬಂದ ಸೌಂಡ್ ಎಂಜಿನಿಯರ್ ರಾಮನಾಥನ್, ರಾಜ್ ಅವರನ್ನು ಉದ್ದೇಶಿಸಿ- ‘ಸಾರ್, ನಮ್ಮ ನೆರವಿಗೆ ಈಗ ಕಂಪ್ಯೂಟರ್ ತಂತ್ರeನವಿದೆ. ಇಡೀ ಹಾಡನ್ನು ಒಮ್ಮೆಗೇ ಹೇಳಬೇಕಿಲ್ಲ. ಸಮಯ ತಗೊಂಡು ಹಾಡಿ. ನಂತರ ನಾನು ಎಲ್ಲವನ್ನೂ ಒಟ್ಟಿಗೆ ಜೋಡಿಸಿಕೊಳ್ತೇನೆ ಸಾರ್. ಆದರೆ, ಸಿಂಹ ಅವರ ಬೇಡಿಕೆಯ ಧ್ವನಿಯಲ್ಲೇ ಹಾಡಿ ಸಾರ್’ ಎಂದು ವಿನಂತಿಸಿಕೊಂಡರು.
ಎಲ್ಲರ ಬೇಡಿಕೆಗೆ ಒಪ್ಪಿದವರಂತೆ ಒಮ್ಮೆ ನಸುನಕ್ಕ ರಾಜ್- ‘ಸರಿ, ನೋಡೋಣ’ ಎಂದರು. ನಂತರ ಸ್ಟುಡಿಯೋದೊಳಗೆ ಹೋಗಿ ಹಾಡಲು ನಿಂತರು. ಸಂಗೀತ ಶುರುವಾಯಿತು. ನಾವು ಬಯಸಿದಂತೆಯೇ ವಿಶೇಷ ದನಿಯಲ್ಲಿ ರಾಜ್ ಹಾಡಲು ಆರಂಭಿಸಿದಾಗ ಕೇಳುತ್ತ ಕೂತವರಿಗೆಲ್ಲ ರೋಮಾಂಚನ.
ಎರಡನೇ ಚರಣದಲ್ಲಿ ‘ಕ್ರೂರ ರಾಕ್ಷಸರ ಕೊಚ್ಚಿ ಕಡಿವೆ’ ಎಂಬ ಸಾಲಿದೆ. ಆ ಸಾಲು ಬರುವ ಮೊದಲು ರಾಜ್ ಅವರಿದ್ದ ಕ್ಯಾಬಿನ್‌ಗೆ ನುಸುಳಿದ ನಾನು- ‘ಸಾರ್, ಈಗ ಬರುವ ಒಂದು ಸಾಲನ್ನು ನೀವು ಆಂಗಿಕ ಪ್ರದರ್ಶನದೊಂದಿಗೆ ಅನುಭವಿಸಿಕೊಂಡು ಹಾಡಿ’ ಎಂದು ವಿನಂತಿಸಿದೆ. ಡಾ. ರಾಜ್ ಅದಾಗಲೇ ಆ ಹಾಡಿನಲ್ಲಿ ಎಷ್ಟೊಂದು ತಲ್ಲೀನರಾಗಿದ್ದರೆಂದರೆ- ‘ಗೊತ್ತಾಯ್ತು ಬಿಡಿ, ಗೊತ್ತಾಯ್ತು. ಹಾಗೇ ಹಾಡ್ತೀನಿ, ಕೇಳಿ ಹೋಗಿ’ ಎಂದರು. ನಂತರ, ಹಿರಣ್ಯಕಶಿಪುವಿನ ಹೊಟ್ಟೆ ಬಗೆಯುವ ನರಸಿಂಹನ ಭಾವಾವೇಶದಲ್ಲಿ ಎರಡನೇ ಚರಣವನ್ನು ಹಾಡಿ ಮುಗಿಸಿದರು.
ನಂತರ, ಸ್ಟುಡಿಯೋದಲ್ಲಿರುವ ದೊಡ್ಡ ಥಿಯೇಟರ್ ಹಾಲ್‌ನಲ್ಲಿ ಎಲ್ಲರೂ ಕೂತು ಹಾಡು ಕೇಳಿದೆವು. ಹಾಡು ಮುಗಿದ ನಂತರ ರಾಜ್- ‘ಇನ್ನೊಂದ್ಸಲ ಹಾಕಿ’ ಎಂದರು. ಎರಡನೇ ಬಾರಿ ಹಾಡು ಕೇಳಿದವರೇ ಸ್ವಲ್ಪ ಸಮಯ ನನ್ನನ್ನೇ ದಿಟ್ಟಿಸಿ ನೋಡಿದರು. ಇಬ್ಬರಲ್ಲೂ ಮಾತಿಲ್ಲ. ನಂತರ ತಮ್ಮ ಮುಷ್ಟಿಯಿಂದ ನನ್ನ ಭುಜವನ್ನು ಗುದ್ದಿ- ‘ಅಂತೂ ಹಾಡಿಸಿಬಿಟ್ರಿ ನೀವು’ ಎಂದರು ಅಭಿಮಾನದಿಂದ. ಆಗಿನ ಸಂತೋಷದಲ್ಲಿ ನನಗೆ ಮಾತೇ ಹೊರಡಲಿಲ್ಲ. ನಂತರ ಸಾವರಿಸಿಕೊಂಡು- ‘ಹೌದು ಸಾರ್, ಇದು ಬಹುದಿನದ ಕನಸು. ಇಂದು ನನಸಾಯಿತು’ ಎಂದೆ.
ಮುಂದೆ ನಡೆದದ್ದು ಈಗ ಇತಿಹಾಸ. ಅಣ್ಣಾವ್ರ ಹಾಡಿನಿಂದ, ಅಶ್ವಮೇಧ ಸಿನಿಮಾ ಸೂಪರ್‌ಹಿಟ್ ಆಯಿತು. ಈಗ ಹದಿನೆಂಟು ವರ್ಷಗಳ ನಂತರ ಕೂಡ ಚಿತ್ರಪ್ರೇಮಿಗಳು ಈ ಹಾಡನ್ನು ಕೊಂಡಾಡುವುದನ್ನು ಕಂಡಾಗ ‘ನನ್ನ ಪ್ರಯತ್ನ ಮೆಚ್ಚಿ ಡಾ. ರಾಜ್ ಕೂಡಾ ಮೇಲಿನಿಂದ ನನ್ನನ್ನು ಹರಸುತ್ತಿದ್ದಾರೆ ಎಂದು ಭಾಸವಾಗುತ್ತದೆ. ಈ ಹಾಡು ಸೃಷ್ಟಿಯಾದ ಸಂದರ್ಭ ಈಗಷ್ಟೇ ನಡೆಯಿತೇನೋ ಎಂಬಂತೆ ನನ್ನ ಕಣ್ಮುಂದೆ ಹಾದುಹೋಗುತ್ತದೆ…’
ಇಷ್ಟು ಹೇಳಿ ಕ್ಷಣ ಮೌನವಾದರು ಸಿಂಹ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: