ಹಾಡು ಬರೆದ ಕವಿಯನ್ನು ಎತ್ತಿಕೊಂಡು ಮುದ್ದಾಡಿದ್ದರು ಪುಟ್ಟಣ್ಣ!

ಚಿತ್ರ: ಪಡುವಾರಹಳ್ಳಿ ಪಾಂಡವರು. ಗೀತೆರಚನೆ: ದೊಡ್ಡರಂಗೇಗೌಡ.
ಸಂಗೀತ: ವಿಜಯ ಭಾಸ್ಕರ್. ಗಾಯನ: ಎಸ್ಪಿ. ಬಾಲಸುಬ್ರಹ್ಮಣ್ಯಂ.

ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ಮರೆಯಲಿ
ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ ||ಪ||

ಈ ಗಾಳಿ ಈ ನೀರು ನನ್ನ ಒಡಲು
ಈ ಬೀದಿ ಈ ಮನೆಯೆ ನನ್ನ ತೊಟ್ಟಿಲು
ಈ ಕೆಂಚ ಈ ಮಾಚ ಎಲ್ಲಾ ಹೆಸರು
ಎಂದೆಂದು ನನ್ನೆದೆಯ ಹಚ್ಚನೆಯ ಹಸಿರು ||೧||

ಈ ಗೌರಿ ಈ ಗಂಗೆ ಹಾಲ ಕುಡಿದೆ
ಓಡೋಡಿ ನಲಿದೆ ಊರೆಲ್ಲಾ ಕುಣಿದೆ
ಕಾಳವ್ವ ಸುಬ್ಬವ್ವ ನನ್ನ ಎತ್ತಾಡಿ
ಹರಸಿದ ತಾಯಿಯರ ಹೇಗೆ ಮರೆಯಲಿ? ||೨||

ಈ ಜೀವ ಈ ದೇಹ ಅರೆದು ಅರೆದು
ಹೊಸ ಆಸೆ ಹೊಸ ಹಾದಿ ಕನಸೆಂದೂ ತಿಳಿದು
ಬಾನತ್ತ ಭುವಿಯತ್ತ ಪೆಚ್ಚಾಗಿ ನೋಡುವ
ಪಂಜರದ ಹಕ್ಕಿಗಳ ಹೇಗೆ ಮರೆಯಲಿ ||೩||
‘ಅವರ ಪ್ರತಿಯೊಂದು ಚಿತ್ರದಲ್ಲೂ ಹೊಸತನವಿರುತ್ತದೆ. ಅಪರೂಪದ ಕಥೆ ಇರುತ್ತದೆ. ಮಧುರ ಹಾಡುಗಳಿರುತ್ತವೆ. ಒಂದು ಸಂದೇಶವಿರುತ್ತದೆ. ಚಿತ್ರಪ್ರೇಮಿಗಳನ್ನು ಥಿಯೇಟರಿಗೆ ಕರೆತರಬಲ್ಲ ‘ಶಕ್ತಿ’ ಇರುತ್ತದೆ. ಆದರೆ, ಪುಟ್ಟಣ್ಣ ಕಣಗಾಲರ ಪ್ರತಿಯೊಂದು ಸಿನಿಮಾದಲ್ಲೂ ಅತೀ ಅನ್ನಿಸುವಷ್ಟು ಮೆಲೋಡ್ರಾಮಾ ಇರುತ್ತೆ. ಹೆಣ್ಣನ್ನು ಅವರು ವೈಭವೀಕರಿಸಿ ತೋರಿಸ್ತಾರೆ. ಬೆಳ್ಳಿಮೋಡ, ಗೆಜ್ಜೆಪೂಜೆ, ಶರಪಂಜರ, ಉಪಾಸನೆ, ಎಡಕಲ್ಲು ಗುಡ್ಡದ ಮೇಲೆ, ಶುಭಮಂಗಳ, ಬಿಳೀ ಹೆಂಡ್ತಿ… ಈ ಎಲ್ಲ ಸಿನಿಮಾಗಳಲ್ಲೂ ಆಗಿರುವುದೇ ಅದು. ಅದರರ್ಥ ಇಷ್ಟೆ: ಹೆಣ್ಣನ್ನು ವೈಭವೀಕರಿಸದೆ ಸಿನಿಮಾ ಮಾಡೋಕೆ ಪುಟ್ಟಣ್ಣನಿಗೆ ಬಹುಶಃ ಬರೋದಿಲ್ಲ…’
ಇಂಥದೊಂದು ಆರೋಪ ಪುಟ್ಟಣ್ಣ ಕಣಗಾಲ್ ಅವರ ಮೇಲಿತ್ತು. ಇದಕ್ಕೆ ಉತ್ತರವೆಂಬಂತೆ ಗ್ರಾಮೀಣ ಹಿನ್ನೆಲೆಯ ಕಥೆ ಹೊಂದಿರುವ ಸಿನಿಮಾ ನಿರ್ದೇಶಿಸಬೇಕು ಅಂದುಕೊಂಡಿದ್ದರು ಪುಟ್ಟಣ್ಣ. ಇದೇ ಸಂದರ್ಭಕ್ಕೆ ಸರಿಯಾಗಿ, ೧೯೭೭ರ ಮಹಾಚುನಾವಣೆಯಲ್ಲಿ ಇಂದಿರಾಗಾಂ ಸೋತರು. ಅಕಾರ ಕಳೆದುಕೊಂಡರು. ಭಾರತೀಯ ಜನಸಂಘದ ಮೇಲೆ ಒಲವು ಹೊಂದಿದ್ದ ಪುಟ್ಟಣ್ಣ, ಹಲವು ಪಕ್ಷಗಳು ಸೇರಿ ಒಂದು ಸರ್ವಾಕಾರಿ ಆಡಳಿತವನ್ನು ಕೊನೆಗಾಣಿಸಿದವು ಎಂದೇ ನಂಬಿದ್ದರು, ಪರಿಚಿತರೆಲ್ಲರ ಬಳಿ ಅದನ್ನೇ ಹೇಳುತ್ತಿದ್ದರು. ಈ ಸಂದರ್ಭದಲ್ಲಿಯೇ- ಹಳ್ಳಿಯೊಂದರಲ್ಲಿ ಕೊಬ್ಬಿಹೋಗಿದ್ದ ಪಟೇಲನೊಬ್ಬನ ಕಥೆ ಇಟ್ಟುಕೊಂಡು, ಅವನನ್ನು ಬಗ್ಗುಬಡಿಯುವ ಯುವಕರ ಕಥಾವಸ್ತುವಿನ ಸಿನಿಮಾ ಮಾಡಬಾರದೇಕೆ ಎಂಬ ಯೋಚನೆ ಅವರಿಗೆ ಬಂತು. ತಕ್ಷಣವೇ ‘ಗ್ರಾಮಾಯಣ’ ಕಾದಂಬರಿಯಿಂದ ದೊಡ್ಡ ಹೆಸರು ಮಾಡಿದ್ದ ರಾವ್‌ಬಹದ್ದೂರ್ ಅವರನ್ನು ಸಂಪರ್ಕಿಸಿದರು. ಅವರಿಂದ ಗ್ರಾಮೀಣ ಹಿನ್ನೆಲೆಯ ಕಥೆಯೊಂದನ್ನು ಬರೆಸಿದರು. ಕೌರವ ಪಾಂಡವರ ಗುಣಗಳು ಮಹಾಭಾರತದ ನಂತರವೂ ಅಸ್ತಿತ್ವದಲ್ಲಿವೆ ಎಂದು ಸೂಚ್ಯವಾಗಿ ಹೇಳಲು ಆ ಚಿತ್ರಕ್ಕೆ ‘ಪಡುವಾರಹಳ್ಳಿ ಪಾಂಡವರು’ ಎಂದು ಹೆಸರಿಟ್ಟರು.
ಇದೇ ಸಂದರ್ಭದಲ್ಲಿ ದೊಡ್ಡರಂಗೇಗೌಡ ಅವರ ಹದಿನಾಲ್ಕು ಕವಿತೆಗಳ ಸಂಕಲನ ‘ನಾಡಾಡಿ’ ಬಿಡುಗಡೆಯಾಗಿತ್ತು. ಅದು, ಮಾರ್ಕ್ಸ್‌ವಾದ ಎಲ್ಲರನ್ನೂ ಆವರಿಸಿಕೊಂಡಿದ್ದ ಕಾಲ. ಕವನಗಳಿಂದಲೇ ಕ್ರಾಂತಿ ಮಾಡಬಹುದು ಎಂಬ ಭ್ರಮೆ ಎಲ್ಲ ಕವಿಗಳನ್ನೂ ಮುತ್ತಿಕೊಂಡಿದ್ದ ಕಾಲ. ಈ ಕಾರಣದಿಂದಲೇ ‘ನಾಡಾಡಿ’ ಸಂಕಲನದಲ್ಲಿ ಹೆಚ್ಚಾಗಿ ಕ್ರಾಂತಿಗೀತೆಗಳೇ ಇದ್ದವು. ಆ ಪೈಕಿ ‘ಧಣಿ ಪುರಾಣ’ ಎಂಬ ಕವಿತೆ ಪುಟ್ಟಣ್ಣ ಕಣಗಾಲರಿಗೆ ತುಂಬಾ ಹಿಡಿಸಿತ್ತು. ಆ ಕವಿತೆಯಲ್ಲಿ ಶ್ರೀಮಂತ ಪಟೇಲನ ದೌರ್ಜನ್ಯದ ವಿರುದ್ಧ ಸಿಡಿದೆದ್ದ ನಾಲ್ಕೈದು ಕ್ರಾಂತಿಕಾರಿ ತರುಣರ ಹೋರಾಟದ ವಿವರವಿತ್ತು. ಅದನ್ನು ಓದಿ ಖುಷಿಯಾದ ಪುಟ್ಟಣ್ಣ, ತಮ್ಮ ಹೊಸ ಚಿತ್ರಕ್ಕೆ ಗೌಡರಿಂದಲೇ ಹಾಡು ಬರೆಸಲು ನಿರ್ಧರಿಸಿದರು. ಈ ಕುರಿತು ಮಾತುಕತೆ ನಡೆಸಲು ಕಾವೇರಿ ಕಾಂಟಿನೆಂಟಲ್ ಹೋಟೆಲ್‌ಗೆ ದೊಡ್ಡರಂಗೇಗೌಡರನ್ನು ಕರೆಸಿಕೊಂಡು ಹೇಳಿದರು:
‘ನೋಡಿ ಗೌಡ್ರೆ, ಪುಟ್ಟಣ್ಣ ಕಣಗಾಲ್ ಬರೀ ಹೆಣ್ಣಿನ ವೈಭವೀಕರಣದ ಸಿನಿಮಾ ಮಾಡ್ತಾನೆ ಅನ್ನೋ ಆರೋಪ ನನ್ನ ಮೇಲಿದೆ. ಅದು ಸುಳ್ಳು. ಗ್ರಾಮೀಣ ಹಿನ್ನೆಲೆಯ ಸಿನಿಮಾಗಳನ್ನೂ ನಾನು ಮಾಡಬಲ್ಲೆ ಅಂತ ತೋರಿಸಬೇಕು. ಹಾಗೆಂದೇ ಈಗ ‘ಪಡುವಾರಹಳ್ಳಿ ಪಾಂಡವರು’ ಸಿನಿಮಾ ತೆಗೀತಾ ಇದೀನಿ. ‘ನಾಡಾಡಿ’ ಕವನ ಸಂಕಲನ ಓದಿದ ಮೇಲೆ ನಿಮ್ಮಿಂದಲೇ ಹಾಡು ಬರೆಸಬೇಕು ಅನ್ನಿಸ್ತು. ಅದರಲ್ಲಿರುವ ‘ಧಣಿ ಪುರಾಣ’ ಕವಿತೆಯ ವಿಷಯವೇ ನಮ್ಮ ಸಿನಿಮಾದ ಕಥಾವಸ್ತು ಅಂದರೂ ತಪ್ಪೇನಿಲ್ಲ. ಗೀತೆಯ ಸನ್ನಿವೇಶದ ಬಗ್ಗೆ ಹೇಳ್ತೇನೆ. ನಿಮ್ಮ ಮೇಸ್ಟ್ರ ಕೆಲಸಕ್ಕೆ ಐದು ದಿನ ರಜೆ ಹಾಕಿ, ನಾಡಿದ್ದು ಗುರುವಾರ, ಬೆಳಗ್ಗೆ ಒಂಬತ್ತು ಗಂಟೆಗೆ ಜಯಮಹಲ್ ಪ್ಯಾಲೇಸ್ ಹೋಟೆಲ್‌ಗೆ ಬರ‍್ತೀರಾ?’
ಮುಂದೆ ಏನಾಯಿತು ಸಾರ್? ಎಂದರೆ, ಅದನ್ನು ದೊಡ್ಡರಂಗೇಗೌಡರು ತುಂಬ ಉತ್ಸಾಹದಿಂದ ಬಣ್ಣಿಸುವುದು ಹೀಗೆ: ‘ಅವತ್ತಿನ ದಿನಗಳಲ್ಲಿ ಪುಟ್ಟಣ್ಣ ಕಣಗಾಲ್ ಅವರ ಸಿನಿಮಾಕ್ಕೆ ಹಾಡು ಬರೆಯುವುದು ಎಲ್ಲರ ಕನಸಾಗಿತ್ತು. ಪುಟ್ಟಣ್ಣನ ಸಿನಿಮಾಕ್ಕೆ ಹಾಡು ಬರೆದೆ ಅನ್ನೋದು ಒಂದು ಹೆಚ್ಚುಗಾರಿಕೆ ಕೂಡ ಆಗಿತ್ತು. ಅನಿರೀಕ್ಷಿತವಾಗಿ ಸಿಕ್ಕಿದ ಅವಕಾಶದಿಂದ ನಾನೂ ಥ್ರಿಲ್ ಆದೆ. ಪುಟ್ಟಣ್ಣ ಹೇಳಿದ ಸಮಯಕ್ಕಿಂತ ಮೊದಲೇ ಜಯಮಹಲ್ ಪ್ಯಾಲೇಸ್‌ಗೆ ಹೋದೆ…
ಒಂದು ದೊಡ್ಡ ಹಾಲ್‌ನಲ್ಲಿ ಕುಳಿತಿದ್ದರು ಪುಟ್ಟಣ್ಣ. ಅವರ ಪಕ್ಕದಲ್ಲಿ ಹಾರ‍್ಮೋನಿಯಂ ಜತೆ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಕುಳಿತಿದ್ದರು. ಈ ಇಬ್ಬರ ಮುಂದೆ ಒಂದು ದೊಡ್ಡ ಹಿತ್ತಾಳೆ ತಟ್ಟೆಯಿತ್ತು. ಅದರ ತುಂಬ ಸಾವಿರಕ್ಕೂ ಹೆಚ್ಚು ದಾಸವಾಳದ ಹೂಗಳಿದ್ದವು. ಅವುಗಳಿಗೆ ಘಮಘಮಘಮಾ ಎನ್ನುವಂಥ ಪರ್‌ಫ್ಯೂಮ್ ಸಿಂಪಡಿಸಲಾಗಿತ್ತು. ಕವಿಯ ಕೋಮಲ ಮನಸ್ಸಿಗೆ ಪೂರಕ ಅನ್ನಿಸುವಂಥ ಆ ವಾತಾವರಣ ನೋಡಿ ನನಗಂತೂ ಹಿಡಿಸಲಾರದಷ್ಟು ಆನಂದವಾಯಿತು.
ಐದಾರು ನಿಮಿಷದ ಉಭಯ ಕುಶಲೋಪರಿಯ ನಂತರ, ಪುಟ್ಟಣ್ಣನವರು ಸನ್ನಿವೇಶ ವಿವರಿಸುತ್ತಾ ಹೀಗೆಂದರು: ‘ಪಡುವಾರಹಳ್ಳಿಯ ಪಟೇಲ, ತನ್ನ ವಿರುದ್ಧ ನಿಂತ ವಿದ್ಯಾವಂತ ನಾಯಕನ ಮೇಲೆ ಒಂದು ಅಪವಾದ ಹೊರಿಸಿ, ಆತನಿಗೆ ಊರಿಂದ ಬಹಿಷ್ಕಾರ ಹಾಕಿಸುತ್ತಾನೆ. ಕಥಾನಾಯಕ, ಹೆಗಲಿಗೆ ಒಂದು ಬ್ಯಾಗ್ ನೇತುಹಾಕಿಕೊಂಡು ಮನೆಯಿಂದ ಹೊರಬಂದು, ಹತ್ತಿಪ್ಪತ್ತು ಹೆಜ್ಜೆ ನಡೆದು ಬಂದು, ಒಮ್ಮೆ ಹಿಂದಿರುಗಿ ನೋಡುತ್ತಾನೆ. ಆಗ, ಅವನಿಗೆ ತಾನು ಬಿಟ್ಟು ಹೋಗುತ್ತಿರುವ ಊರು, ಅಲ್ಲಿರುವ ಜನ, ಪರಿಸರ, ಅವರೊಂದಿಗಿನ ಕರುಳುಬಳ್ಳಿ ಸಂಬಂಧ… ಎಲ್ಲವೂ ನೆನಪಾಗಿ ನಿಂತಲ್ಲೇ ಭಾವುಕನಾಗುತ್ತಾನೆ. ಕಣ್ತುಂಬಿಕೊಳ್ಳುತ್ತಾನೆ. ಅದಕ್ಕೆ ಹಿನ್ನೆಲೆಯಾಗಿ ಒಂದು ಹಾಡು ಬೇಕು. ಒಂದು ಕೆಲ್ಸ ಮಾಡಿ ಗೌಡ್ರೆ. ನೀವು ನಿಮ್ಮ ಊರು/ಹಳ್ಳಿ ತೊರೆದು ಮೊದಲ ಬಾರಿಗೆ ಬೆಂಗಳೂರಿಗೆ ಬಂದ್ರಿ ನೋಡಿ, ಆಗ ನಿಮಗೆ ಏನನ್ನಿಸಿತ್ತೋ ಅದನ್ನೇ ಬರೀರಿ…’
ಪುಟ್ಟಣ್ಣನವರು ಹೀಗೆಂದ ಮರುಕ್ಷಣವೇ ನನ್ನ ಬಾಲ್ಯ ನೆನಪಾಯಿತು. ಅದೇ ಮೊದಲ ಬಾರಿಗೆ ಓದಲಿಕ್ಕೆಂದು ಬೆಂಗಳೂರಿಗೆ ಬರಲು ನಿರ್ಧರಿಸಿದಾಗ- ಊರಲ್ಲಿ, ಮನೆಮುಂದೆ ನಿಂತು ಗೋಳೋ ಎಂದು ಅತ್ತದ್ದು ನೆನಪಾಯಿತು. ನಮ್ಮ ಮನೆ, ಅದರ ಗೋಡೆಗೆ ಮೆತ್ತುತ್ತಿದ್ದ ಮಣ್ಣು, ನಾವಿದ್ದ ಬೀದಿ, ಅಲ್ಲಿನ ಗಾಳಿ, ನೀರು, ಹಾಲು ನೀಡಿದ ಗೌರಿ ಹಸು ಎಲ್ಲವೂ ನೆನಪಿಗೆ ಬಂತು. ಬಾಲ್ಯದಲ್ಲಿ ನನ್ನನ್ನು ಎತ್ತಿ ಆಡಿಸಿದ ಕಾಳವ್ವ, ಲಕ್ಕವ್ವರ ಚಿತ್ರ ಕಣ್ಮುಂದೆ ಬಂತು. ಅನಕ್ಷರಸ್ಥ ಗೆಳೆಯರಾದ ಮಾಚ, ಕೆಂಚರ ಮುಗ್ಧ ನಡೆ, ನುಡಿ ನೆನಪಾಯಿತು. ಆಗಲೇ- ಬೆಂಗಳೂರಿಗೆ ಬಂದು ಈಗಾಗಲೇ ದಶಕವೇ ಕಳೆದುಹೋಗಿದ್ದರೂ ಎಲ್ಲರ ನೆನಪೂ ಹಸಿರಾಗಿದೆಯಲ್ಲ? ಅನ್ನಿಸಿತು. ಹಿಂದೆಯೇ, ನಮ್ಮೂರಿನ ಚೆಲುವಿನ ಮುಂದೆ, ಈ ಬೆಂಗ್ಳೂರು ಏನೇನೂ ಅಲ್ಲ ಅನ್ನಿಸಿಬಿಡ್ತು. ಆ ಖುಷಿಯಲ್ಲಿಯೇ- ‘ಜನ್ಮ ನೀಡಿದ ಭೂಮಿ ತಾಯಿಯ ಹೇಗೆ ನಾನು ಮರೆಯಲಿ’ ಎಂಬ ಸಾಲು ಹೊಳೆಯಿತು. ಅದನ್ನೇ ಪಲ್ಲವಿಯನ್ನಾಗಿಸಿಕೊಂಡು ನನ್ನ ಬಾಲ್ಯದ ಅನುಭವ, ನನ್ನ ಗೆಳೆಯರು, ನಮ್ಮೂರ ಹೆಂಗಸರ ಹೆಸರನ್ನೆಲ್ಲ ಹಾಡಲ್ಲಿ ತಂದೆ.
ಮೂರನೇ ಚರಣ ಬರೆಯುವ ವೇಳೆಗೆ ನನ್ನ ಊರಲ್ಲಿ ಪಟೇಲರ ಕುಮ್ಮಕ್ಕಿನಿಂದ ನಡೆದ ಜಗಳ, ಹೊಡೆದಾಟ, ಊರಲ್ಲಿ ಚಾಲ್ತಿಯಲ್ಲಿದ್ದ ಜೀತಪದ್ಧತಿ, ಅದರಿಂದ ಬಡವರು, ಅನಕ್ಷರಸ್ಥರು ಅನುಭವಿಸುತ್ತಿದ್ದ ಕಷ್ಟ… ಎಲ್ಲವೂ ಒಂದೊಂದಾಗಿ ನೆನಪಿಗೆ ಬಂತು. ಲೋಕದಲ್ಲಿ ಎಷ್ಟೇ ಬದಲಾವಣೆಯಾದರೂ ಅವರಿಗೆ ಜೀತದಿಂದ, ಶೋಷಣೆಯಿಂದ ಮುಕ್ತಿಯೇ ದೊರೆತಿಲ್ಲವಲ್ಲ ಅನ್ನಿಸಿದಾಗ ಅದೆಲ್ಲವನ್ನೂ ಮೂರನೇ ಚರಣದಲ್ಲಿ ತಂದೆ. ಶೋಷಿತರನ್ನು ‘ಪಂಜರದ ಹಕ್ಕಿಗಳು’ ಎಂದು ಕರೆದೆ. ನಿಜ ಹೇಳಬೇಕೆಂದರೆ, ನನ್ನ ಆತ್ಮಚರಿತ್ರೆಯ ಒಂದು ಭಾಗವೇ ಹಾಡಾಗಿಬಿಡ್ತು…
ಹಾಡು ಬರೆಯೋದು, ಅದಕ್ಕೆ ಸಂಗೀತ ಸಂಯೋಜಿಸುವುದು, ನಂತರ ಒಮ್ಮೆ ಹಾಡಿಸಿ ಫೈನಲ್ ಮಾಡುವುದು. ಇದಕ್ಕೆ ಪುಟ್ಟಣ್ಣ ಮೂರು ದಿನಗಳನ್ನು ಮೀಸಲಿಟ್ಟಿದ್ದರು. ಮೂರನೇ ದಿನ ಸಂಜೆ ಹಾಡು ಕೇಳಿದ ಪುಟ್ಟಣ್ಣ- ‘ಗೌಡ್ರೆ, ಈ ಹಾಡಿಂದ ನನ್ನ ಮನಸ್ಸು ಗೆದ್ದುಬಿಟ್ರಿ. ನನ್ನ ಸಿನಿಮಾ ಖಂಡಿತ ಗೆಲ್ಲುತ್ತೆ. ನಿಮ್ಮ ಹಾಡು ಹಳ್ಳಿಯಲ್ಲಿ ಕಳೆದ ದಿನಗಳನ್ನು ಮಾತ್ರವಲ್ಲ; ದೇಶಪ್ರೇಮದ ಅರಿವನ್ನೂ ಮೂಡಿಸುವಂತಿದೆ…’ ಎಂದು ಖುಷಿಯಿಂದ ಹೇಳಿದರಂತೆ. ನಂತರ ಹೋಟೆಲಿನಲ್ಲಿದ್ದ ಅಷ್ಟೂ ಜನರ ಮುಂದೆ, ಆಗ ಸಣಕಲರಂತಿದ್ದ ದೊಡ್ಡರಂಗೇಗೌಡರನ್ನು ಅನಾಮತ್ತಾಗಿ ಮೇಲೆತ್ತಿ ಮುದ್ದಾಡಿದರಂತೆ. ನಂತರ, ಕ್ಯಾಮರಾಮನ್ ಆಗಿದ್ದ ನಟಿ ಆರತಿಯವರ ತಮ್ಮ ದತ್ತುವನ್ನು ಕರೆದು- ‘ಇವರ ಫೊಟೊ ತಗೊಳಪ್ಪಾ. ಅ ಛಿZ ಔqsಜ್ಚಿಜಿoಠಿ ಜಿo ಆಟ್ಟ್ಞ’ ಎಂದೆಲ್ಲ ಹೊಗಳಿದರಂತೆ.
ಅಷ್ಟಕ್ಕೇ ಸುಮ್ಮನಾಗದೆ, ಅಂದಿನ ಕನ್ನಡಪ್ರಭದ ಸಿನಿಮಾ ವಿಭಾಗದ ಮುಖ್ಯಸ್ಥರಾಗಿದ್ದ ನಾರಾಯಣಸ್ವಾಮಿಯವರಿಗೆ ಹೇಳಿ ಗೌಡರ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತುಗಳನ್ನೂ ಬರೆಸಿದರಂತೆ.
ಈ ಎಲ್ಲ ಬೆಳವಣಿಗೆಗಳಿಂದ ಉಬ್ಬಿಹೋಗಿದ್ದ ಗೌಡರು- ‘ಸರ್, ನಿಮಗೆ ನನ್ನ ಹಾಡು ಇಷ್ಟವಾದದ್ದು ಸಂತೋಷ. ನಾನು ಹೋಗಿ ಬರ‍್ತೀನಿ’ ಎಂದರಂತೆ. ತಕ್ಷಣವೇ ಅವರನ್ನು ತಡೆದ ಪುಟ್ಟಣ್ಣ- ‘ಅಯ್ಯೋ ಕವಿಗಳೇ, ನೀವು ಹೀಗೇ ಹೋಗೋದಾ? ಬೇಡ ಬೇಡ, ನಾನೇ ನಿಮ್ಗೆ ಡ್ರಾಪ್ ಕೊಡ್ತೇನೆ’ ಎಂದು ಹೇಳಿ ಸ್ವತಃ ಅವರೇ ಕಾರು ಓಡಿಸಿಕೊಂಡು ಬಂದು ಡ್ರಾಪ್ ಕೊಟ್ಟರಂತೆ…
* * *
ಇದನ್ನೆಲ್ಲ ನೆನಪು ಮಾಡಿಕೊಂಡು ದೊಡ್ಡರಂಗೇಗೌಡರು ಈಗಲೂ ಹೇಳುತ್ತಾರೆ. ಒಂದು ಹಾಡು ಮೆಚ್ಚಿಕೊಂಡು ಗೀತೆರಚನೆಕಾರನಿಗೆ ಡ್ರಾಪ್ ಕೊಡುವಂಥ ದೊಡ್ಡ ಮನಸ್ಸು ಪುಟ್ಟಣ್ಣನಿಗಿತ್ತು. ಅವತ್ತು ನಮ್ಮ ಬೀದಿಯ ಜನರೆಲ್ಲ ಇಡೀ ದಿನ ಸಂಭ್ರಮಿಸಿದ್ದು ಈಗಲೂ ನನ್ನ ಕಣ್ಣಮುಂದಿನ ಚಿತ್ರದಂತಿದೆ…

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: