ಆಟೋದವನ ನಿಟ್ಟುಸಿರ ಮಾತು ಈ ಹಾಡಿಗೆ ಪ್ರೇರಣೆಯಾಯಿತು.

JayanthKaikini1

ಚಿತ್ರ: ಗೆಳೆಯ. ಗೀತೆರಚನೆ: ಜಯಂತ ಕಾಯ್ಕಿಣಿ
ಸಂಗೀತ: ಮನೋಮೂರ್ತಿ. ಗಾಯನ: ಸೋನು ನಿಗಮ್.

ಈ ಸಂಜೆ ಯಾಕಾಗಿದೆ ನೀನಿಲ್ಲದೆ, ಈ ಸಂಜೆ ಯಾಕಾಗಿದೆ?
ಈ ಸಂತೆ ಸಾಕಾಗಿದೆ ನೀನಿಲ್ಲದೆ, ಈ ಸಂತೆ ಸಾಕಾಗಿದೆ ||ಪ||
ಏಕಾಂತವೇ ಆಲಾಪವು ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ.. ಓ.. ಈ ಮೌನ ಬಿಸಿಯಾಗಿದೆ
ಈ ಸಂಜೆ ಯಾಕಾಗಿದೆ… ಈ ಸಂಜೆ ಯಾಕಾಗಿದೆ? ||ಅ.ಪ.||

ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನೀ ಕ್ಷಣ
ನೆನಪೆಲ್ಲವೂ ಹೂವಾಗಿದೆ, ಮೈ ಎಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ… ಈ ಜೀವ ಕಸಿಯಾಗಿದೆ ||೧||

ನೀನಿಲ್ಲದೆ ಆ ಚಂದಿರ ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸುನೀಗಿದೆ
ಆಕಾಶದಿ ಕಲೆಯಾಗಿದೆ, ಈ ಸಂಜೆಯಾ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ… ಈ ಗಾಯ ಹಸಿಯಾಗಿದೆ ||೨||
ಗದುಗಿನ ನಾರಣಪ್ಪ, ತುಂಬ ಬೇಗ ಎದ್ದವನೇ ಸ್ನಾನ ಮಾಡಿ, ಒದ್ದೆಬಟ್ಟೆಯಲ್ಲೇ ಗದುಗಿನ ವೀರನಾರಾಯಣನ ದೇವಸ್ಥಾನಕ್ಕೆ ಬರುತ್ತಿದ್ದನಂತೆ. ಅಲ್ಲಿ ಒಂದು ನಿರ್ದಿಷ್ಟ ಕಂಬವನ್ನು ಒರಗಿ ಕೂತು, ಒದ್ದೆಬಟ್ಟೆ ಆರುವವರೆಗೂ ಬರೆಯುತ್ತಿದ್ದನಂತೆ. ಬಟ್ಟೆ ಒಣಗಿದ ನಂತರ ಅವನಿಗೆ ಕಾವ್ಯ ಹೊಳೆಯುತ್ತಿರಲಿಲ್ಲವಂತೆ. ಬಟ್ಟೆ ಒಣಗಿದ ನಂತರ ಒಂದು ಹೊಸ ಸಾಲು ಬೇಕೆಂದರೂ ಆತನೂ ಮರುದಿನ ಬೆಳಗಿನವರೆಗೂ ಕಾಯಬೇಕಿತ್ತಂತೆ!
ಕನ್ನಡದ ಮಹಾಕಾವ್ಯ ಎಂದೇ ಹೆಸರಾಗಿರುವ ‘ಕರ್ಣಾಟಕ ಭಾರತ ಕಥಾಮಂಜರಿ’ಯನ್ನು ಗದುಗಿನ ನಾರಣಪ್ಪ ಹೇಗೆ ಬರೆದ ಎಂಬ ಕುತೂಹಲದ ಪ್ರಶ್ನೆಗೆ ಹಿರಿಯರೆಲ್ಲ ಹೇಳುವ ಜನಜನಿತ ಉತ್ತರದ ಒಂದು ಸ್ಯಾಂಪಲ್ ಇದು.

ಚಲನಚಿತ್ರಗಳಿಗೆ, ತಾವು ಕಾಣದ ದೃಶ್ಯಗಳಿಗೆ, ಹಾಗೇ ಸುಮ್ಮನೆ ಅಂದಾಜು ಮಾಡಿಕೊಂಡು ಹಾಡು ಬರೆಯುವ ಚಿತ್ರಸಾಹಿತಿಗಳ ಬಗ್ಗೆ ಯೋಚಿಸುವಾಗಲೆಲ್ಲ ಗದುಗಿನ ನಾರಣಪ್ಪನ ಕಥೆ ನೆನಪಾಗುತ್ತದೆ. ಹಿಂದೆಯೇ ಒಂದಿಷ್ಟು ಪ್ರಶ್ನೆಗಳು ಎದ್ದುನಿಲ್ಲುತ್ತವೆ. ಏನೆಂದರೆ, ಸಿನಿಮಾಗಳಿಗೆ ಹಾಡು ಬರೆಯುವುದಿದೆಯಲ್ಲ, ಅದೊಂದು ಕಲೆಯಾ? ಮ್ಯಾಜಿಕ್ಕಾ? ಅಕ್ಷರಗಳೊಂದಿಗಿನ ಆಟವಾ? ಪದಕ್ಕೆ ಪದ ಜೋಡಿಸುವ ಹುಡುಗಾಟವಾ? ಅದೊಂದು ಧ್ಯಾನವಾ? ತಪಸ್ಸಾ? ಅಥವಾ, ಹೀಗೆ ಹಾಡು ಬರೆಯುವುದು ಕೆಲವರಿಗಷ್ಟೇ ದೈವದತ್ತವಾಗಿ ಒಲಿದ ವಿಶೇಷ ಸೌಭಾಗ್ಯವಾ? ಇಷ್ಟಕ್ಕೂ ಒಂದು ಹಾಡು ಬರೆಯಬೇಕಾದರೆ- ಪ್ರಶಾಂತ ವಾತಾವರಣ, ಹಾಡು ಬರೆಯಲು ಮೂಡ್ ಬರುವಂಥ (ಬರಿಸುವಂಥ) ವಿಶೇಷ ಅನುಕೂಲಗಳು ಏನಾದರೂ ಇರಲೇಬೇಕಾ?

ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಜಯಂತ ಕಾಯ್ಕಿಣಿಯವರು ಉತ್ತರಿಸಿದ್ದು ಹೀಗೆ: ‘ಹಾಡು ಬರೆಯಲು ಒಳ್ಳೆಯ ಮೂಡ್ ಬೇಕು. ಮೂಡ್ ಚೆನ್ನಾಗಿರಬೇಕು ಅಂದರೆ ಅಲ್ಲಿ ಪ್ರೈವೇಸಿ ಇರಬೇಕು. ಅಂಥದೊಂದು ಏಕಾಂತ ಬೇಕೆಂದರೆ ಹೋಟೆಲಿಗೇ ಹೋಗಬೇಕು. ಅಲ್ಲಿ ಎ.ಸಿ. ರೂಮ್ ಸಿಕ್ಕಿಬಿಟ್ಟರೆ, ಆ ರೂಮಿನಲ್ಲಿ ಸುವಾಸನಾಭರಿತ ಗಂಧದಕಡ್ಡಿಯನ್ನು ಹಚ್ಚಿಟ್ಟರೆ ಹಾಡು ಬರೆಯಲು ಮನಸ್ಸು ಬರುತ್ತೆ’ ಎಂದು ಕೆಲವರು ಹೇಳುವುದುಂಟು. ಆದರೆ ನನಗೆ ಅಂಥ ಯಾವ ಫೆಸಿಲಿಟಿಯ ಅಗತ್ಯವೂ ಇಲ್ಲ ಅನಿಸುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ- ಹಾಡು ಬರೆಯಬೇಕು ಎಂದರೆ, ಮೊದಲಿಗೆ ಟ್ಯೂನ್ ಇಷ್ಟವಾಗಬೇಕು. ಟ್ಯೂನ್ ಇಷ್ಟವಾಗಿಬಿಟ್ಟರೆ, ಎಲ್ಲಿಯಾದರೂ ಸರಿ, ಹಾಡು ಬರೆಯುವ ಉಮೇದಿ ಬರುತ್ತದೆ. ಒಂದು ಉದಾಹರಣೆ ಕೇಳಿ: ಇನ್ನೂ ಬಿಡುಗಡೆಯಾಗದ ‘ಪರಿಚಯ’ ಎಂಬ ಚಿತ್ರಕ್ಕೆ ಒಂದು ಲವ್ ಸಾಂಗ್ ಬೇಕೆಂದು ನಿರ್ದೇಶಕರಾದ ಸಂಜಯ್ ಕೇಳಿದ್ದರು. ಆ ಚಿತ್ರದ ಸಂಗೀತ ನಿರ್ದೇಶಕ ಜೆಸ್ಸಿಗಿಫ್ಟ್. ಅವರು ಕೇಳಿಸಿದ ಟ್ಯೂನ್ ನನಗೆ ತುಂಬ ಇಷ್ಟವಾಯಿತು. ಈ ಸಂದರ್ಭದಲ್ಲಿ ನಮ್ಮ ತಾಯಿಯವರು ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದರು. ಅಮ್ಮನನ್ನು ಆ ಸ್ಥಿತಿಯಲ್ಲಿ ನೋಡಿದಾಗಲೇ ‘ಓ ನನ್ನ ಒಲವೇ’ ಎಂಬ ಸಾಲು ಹೊಳೆಯಿತು. ಅದನ್ನೇ ಜತೆಗಿಟ್ಟುಕೊಂಡು ಹಾಡು ಬರೆದೆ…

ಒಂದು ಹಾಡು ಅಥವಾ ಹಾಡಿನ ಸಾಲು ಚಿತ್ರಸಾಹಿತಿಗೆ ಹೇಗೆಲ್ಲಾ ಹೊಳೆಯುತ್ತದೆ ಎಂಬುದಕ್ಕೆ ‘ಮುಂಗಾರು ಮಳೆ’ ಚಿತ್ರದ ‘ಕುಣಿದು ಕುಣಿದು ಬಾರೆ’ ಹಾಡು ಚೆಂದದ ಉದಾಹರಣೆ. ಆ ಹಾಡು ಸೃಷ್ಟಿಯಾದ ಸಂದರ್ಭ ಹೀಗೆ: ನಾನು ಗದಗ್ಗೆ ಯಾವುದೋ ಕಾರ್ಯಕ್ರಮಕ್ಕೆಂದು ಹೋಗಿದ್ದೆ. ಅಲ್ಲಿನ ರೆಸ್ಟೋರೆಂಟ್ನಲ್ಲಿ ತಿಂಡಿಗೆ ಹೋಗಿದ್ದಾಗಲೇ ಯೋಗರಾಜ ಭಟ್ ಅವರಿಂದ ಫೋನ್ ಬಂತು. ಅವರು ಮೊದಲು ಕಥೆ ವಿವರಿಸಿದರು. ನಂತರ ಟ್ಯೂನ್ ಕೇಳಿಸಿದರು. ಹಿಂದೆಯೇ ‘ಸ್ವಲ್ಪ ಅರ್ಜೆಂಟಿದೆ ಸಾರ್. ಬೇಗ ಹಾಡು ಬೇಕಲ್ಲ?’ ಅಂದರು.
ಟ್ಯೂನ್ ವಿಪರೀತ ಇಷ್ಟವಾಗಿತ್ತಲ್ಲ? ಅದೇ ಕಾರಣದಿಂದ- ‘ಇಡೀ ಹಾಡನ್ನು ಎಸ್ಸೆಮ್ಮೆಸ್ನಲ್ಲಿ ಕಳಿಸ್ತೇನೆ. ಆಗಬಹುದಾ?’ ಅಂದೆ. ಭಟ್ಟರು- ‘ನಿಜಕ್ಕೂ ಇದೊಂದು ಹೊಸ ಪ್ರಯೋಗ. ಆಗೇ ಬಿಡಲಿ ಸಾರ್’ ಎಂದರು. ಗದಗ್ನ ರೆಸ್ಟೋರೆಂಟ್ನಲ್ಲೇ ಪಲ್ಲವಿಯನ್ನು ಎಸ್ಎಂಎಸ್ ಮಾಡಿದೆ. ಮುಂದೆ ಹುಬ್ಬಳ್ಳಿಗೆ, ಸ್ನೇಹಿತರ ಮನೆಗೆಂದು ಹೋದಾಗ ಒಂದು ಚರಣ ಹೊಳೆಯಿತು. ಅದನ್ನೂ ಎಸ್ಸೆಮ್ಮೆಸ್ ಕಳಿಸಿದೆ. ಮುಂದೆ ಗೋಕರ್ಣದ ನಮ್ಮ ಮನೆಗೆ ಬಂದಾಗ ಎರಡನೇ ಚರಣ ಹೊಳೆಯಿತು. ಅದನ್ನೂ ಎಸ್ಸೆಮ್ಮೆಸ್ ಮಾಡಿದೆ. ಹೀಗೆ ಗೋಕರ್ಣದಿಂದ ಕಳಿಸಿದ ಎಸ್ಸೆಮ್ಮೆಸ್ನಲ್ಲಿ- ‘ಹೂವಿಗೆ ಬಣ್ಣ ತಂದವನೇ, ಪರಿಮಳದಲ್ಲಿ ಅರಳುವ ಬಾರೋ’ ಎಂಬ ಸಾಲಿನ ನಂತರ ‘ನನ್ನನು ಹುಡುಕಿ ತೆಗೆದವನೇ ಜತೆಗೆ ಕಳೆದು ಹೋಗುವ ಬಾರೋ’ ಎಂಬ ಸಾಲಿನ ಎಸ್ಸೆಮ್ಮೆಸ್ಸು ಯೋಗರಾಜ ಭಟ್ ಅವರಿಗೆ ಸಿಗಲೇ ಇಲ್ಲ! ಅವರು ಹಾಡು ಇಷ್ಟೇ ಇರಬೇಕು ಎಂದುಕೊಂಡು- ತಮಗೆ ಎಷ್ಟು ಎಸ್ಸೆಮ್ಮೆಸ್ ಬಂದಿತ್ತೋ ಅಷ್ಟನ್ನೇ ಶೂಟ್ ಮಾಡಿಕೊಂಡು ಬಂದುಬಿಟ್ಟರು!
ಸರ್, ‘ಗೆಳೆಯ’ ಚಿತ್ರದ ‘ಈ ಸಂಜೆ ಯಾಕಾಗಿದೇ’ ಹಾಡಿನ ಹಿಂದಿರುವ ಕಥೆ ಬೇಕು ಎಂದಾಗ ಕಾಯ್ಕಿಣಿಯವರು ಅಚಾನಕ್ಕಾಗಿ ಹೇಳಿದ ಎರಡು ಸ್ವಾರಸ್ಯಕರ ಪ್ರಸಂಗಗಳಿವು.
ಇರಲಿ. ಈಗ ‘ಗೆಳೆಯ’ ಚಿತ್ರದ ವಿಷಯಕ್ಕೆ ಬರೋಣ. ೨೦೦೭ರಲ್ಲಿ ತೆರೆಕಂಡ ಈ ಸಿನಿಮಾದ ಹೈಲೈಟ್ ಎಂದರೆ- ‘ಈ ಸಂಜೆ ಯಾಕಾಗಿದೇ’ ಹಾಡು. ಆ ಸಿನಿಮಾ ಗೆದ್ದಿದ್ದೇ ಈ ಹಾಡಿನಿಂದ ಎಂದು ಇವತ್ತಿಗೂ ಹಲವರು ವಾದಿಸುವುದುಂಟು. ಅದು ಉತ್ಪ್ರೇಕ್ಷೆಯ ಮಾತಲ್ಲ. ಈ ಹಾಡಿನ ಸಂದರ್ಭ ಹೀಗಿದೆ: ‘ಗೆಳೆಯ’ದ ನಾಯಕರುಗಳಾದ ತರುಣ್ ಸುರ್ ಹಾಗೂ ಪ್ರಜ್ವಲ್ ದೇವರಾಜ್ ಆಪ್ತಮಿತ್ರರು. ತರುಣ್ ಒಂದು ಗ್ಯಾರೇಜ್ ಇಟ್ಟಿರುತ್ತಾನೆ. ಅಲ್ಲಿಗೆ, ಊರ ಗೌಡನ ಕಾರು ರಿಪೇರಿಗೆ ಬಂದಿರುತ್ತೆ. ರಿಪೇರಿ ಮುಗಿದ ವೇಳೆಗೇ ಅಲ್ಲಿಗೆ ಬಂದ ಪ್ರಜ್ವಲ್- ‘ಒಂದೇ ಒಂದ್ಸಲ ಇದನ್ನು ಡ್ರೈವ್ ಮಾಡ್ತೇನೆ’ ಅನ್ನುತ್ತಾನೆ. ಗೆಳೆಯನಿಗೆ ‘ಇಲ್ಲ’ ಅನ್ನಲಾಗದ ತರುಣ್ ‘ಆಗಲಿ’ ಅನ್ನುತ್ತಾನೆ. ಪ್ರಜ್ವಲ್ ಡ್ರೈವ್ ಮಾಡುವಾಗ ಆ ಕಾರು ದುರಾದೃಷ್ಟವಶಾತ್ ಅಪಘಾತಕ್ಕೆ ಈಡಾಗುತ್ತೆ. ಕಾರ್ ರಿಪೇರಿಗೆಂದು ಪ್ರಜ್ವಲ್ ಸಾಲ ಮಾಡುತ್ತಾನೆ. ಮುಂದೆ ಸಾಲ ತೀರಿಸಲಾಗದೆ ಅವನು ಒದ್ದಾಡುವುದನ್ನು ಕಂಡ ತರುಣ್, ಹಳ್ಳಿಯನ್ನು ಬಿಟ್ಟು ಗೆಳೆಯನೊಂದಿಗೆ ಬೆಂಗಳೂರಿಗೆ ಬರುತ್ತಾನೆ. ಬೆಂಗಳೂರಿನಲ್ಲಿ ಇಬ್ಬರೂ ಒಂದೊಂದು ರೌಡಿಗುಂಪು ಸೇರಿಕೊಳ್ಳುತ್ತಾರೆ. ಬೆಂಗಳೂರಿಗೆ ಬಂದ ನಂತರವೂ ತರುಣ್ಗೆ ಹಳ್ಳಿಯಲ್ಲಿದ್ದ ಪ್ರೇಯಸಿಯ ನೆನಪು ಬಿಟ್ಟೂಬಿಡದೆ ಕಾಡುತ್ತದೆ. ಅವಳೊಂದಿಗೆ ಕುಣಿದದ್ದು,ನಲಿದದ್ದು, ಟೂ ಬಿಟ್ಟಿದ್ದು, ಜಗಳವಾಡಿದ್ದು, ರಾಜಿ ಮಾಡಿಕೊಂಡಿದ್ದು, ಆಣೆ-ಪ್ರಮಾಣ ಮಾಡಿದ್ದು… ಎಲ್ಲವೂ ಕ್ಷಣಕ್ಷಣವೂ ನೆನಪಾಗುತ್ತದೆ. ಅದರಲ್ಲೂ ಸಂಜೆಯ ವೇಳೆಯಲ್ಲಂತೂ ಅವಳ ನೆನಪು ಧುತ್ ಧುತ್.
ಹೀಗಿರುವಾಗಲೇ ಅದೊಂದು ಸಂಜೆ ಇವನು ತನ್ನಷ್ಟಕ್ಕೆ ತಾನೇ- ‘ಈ ಅಪರಿಚಿತ ಊರಲ್ಲಿ ಯಾರದೋ ತಲೆಯೊಡೆದು ಬದುಕುವುದಕ್ಕಿಂತ, ಊರಲ್ಲಿ ಅವಳೊಂದಿಗೆ ಇದ್ದಿದ್ರೆ ಎಷ್ಟು ಚೆಂದ ಇರ್ತಿತ್ತಲ್ವ?’ ಎಂದುಕೊಳ್ಳುತ್ತಾನೆ. ಆಗಲೇ ಅವನ ನಿಟ್ಟುಸಿರಿನಂತೆ, ಎಲ್ಲ ಪ್ರೇಮಿಗಳ ಪ್ರಾರ್ಥನೆಯಂತೆ, ಕರುಳಿಂದ ನುಗ್ಗಿ ಬಂದ ಸಂಗೀತದಂತೆ; ವಿರಹದ ಹೊಸ ರೂಪಿನಂತೆ ಹಾಡು ಕೇಳಿಸುತ್ತದೆ: ‘ಈ ಸಂಜೆ ಯಾಕಾಗಿದೇ, ನೀನಿಲ್ಲದೆ…’
ಈ ಹಾಡಿನ ಮೊದಲ ಸಾಲು ಹೊಳೆದದ್ದು ಹೇಗೆ? ನೀವು ಅದನ್ನು ಬರೆದದ್ದು ಎಲ್ಲಿ? ಆಗ ಹಗಲೋ ಇಲ್ಲ ರಾತ್ರಿಯೋ? ಅಥವಾ ಮುಸ್ಸಂಜೆಯಲ್ಲೇ ನೀವು ಹಾಡು ಬರೆದಿರೋ ಹೇಗೆ? ಎಂಬ ಪ್ರಶ್ನೆಗೆ ಜಯಂತ್ ಉತ್ತರಿಸಿದ್ದು ಹೀಗೆ: ‘ಗೆಳೆಯ’ ಚಿತ್ರಕ್ಕೆ ‘ಮನಸಲ್ಲಿ ಮಾತಾಡುವೆ’ ಎಂಬ ಹಾಡು ಬರೆದು ಆಗಿತ್ತು. ಆಕಾಶ್ ಸ್ಟುಡಿಯೋದಲ್ಲಿ ಅದರ ರೆಕಾರ್ಡಿಂಗ್ ಇತ್ತು. ಆಟೊದಲ್ಲಿ ಸ್ಟುಡಿಯೋಗೆ ಹೊರಟೆ. ಆಗಲೇ ಸಂಜೆಯಾಗುತ್ತಿತ್ತು. ಉದ್ದಕ್ಕೂ ಗಿಜಿಗಿಜಿ ಟ್ರಾಫಿಕ್ಕು. ಆಟೊ ಓಡಲಾರದೆ ಓಡುತ್ತಿತ್ತು. ಈ ಸಂದರ್ಭದಲ್ಲಿಯೇ ಡ್ರೈವರ್ ಮಾತಿಗಿಳಿದು ಹೇಳಿದ: ‘ಸಾರ್, ಈ ಆಟೋ ಡ್ರೈವರ್ ಬದುಕು ಸಾಕಾಗಿ ಹೋಗಿದೆ. ಆಟೊಗೆ ಹತ್ತಿದ ಜನ ಬೇಗ ಹೋಗಪ್ಪಾ, ಬೇಗ ಹೋಗಪ್ಪಾ’ ಅಂತಾರೆ. ಆದರೆ ‘ಸಾರ್, ಉದ್ದಕ್ಕೂ ಟ್ರಾಫಿಕ್ಕು. ಹೇಗೆ ಬೇಗ ಹೋಗುವುದು? ಕೆಲವರು ಸಿಗ್ನಲ್ ಲೈಟ್ ಕಂಡ ನಂತರವೂ ಬೇಗ ಹೋಗಪ್ಪಾ ಅನ್ನುತ್ತಾರೆ. ರೋಡ್ ಫ್ರೀ ಇದ್ರೆ ನಾವೇ ಹೋಗ್ತೇವೆ. ಉದ್ದಕ್ಕೂ ಟ್ರಾಫಿಕ್ ಕಂಡ ನಂತರವೂ ಹಾಗೆ ಹೇಳಿದ್ರೆ ಹೇಗೆ ಸಾರ್? ನನಗಂತೂ ಈ ಸಂಜೆ ಯಾಕಾದ್ರೂ ಆಗುತ್ತೋ? ಪ್ರತಿ ದಿನವೂ ಸಂಜೆಯಾದ ತಕ್ಷಣ ಸಂತೆಗೆ ಬಂದವರ ಹಾಗೆ ಜನ ಯಾಕಾದ್ರೂ ರಸ್ತೆಗೆ ಬಂದುಬಿಡ್ತಾರೊ ಅನ್ನಿಸ್ತದೆ. ಈ ಸಂಜೆಯ ರಗಳೆಯಿಂದ ನನಗಂತೂ ಸಾಕಾಗಿ ಹೋಗಿದೆ’ ಅಂದ.
ಆಟೊ ಡ್ರೈವರ್ನ ಮಾತುಗಳನ್ನೇ ಮೆಲುಕು ಹಾಕುತ್ತಾ ಸ್ಟುಡಿಯೊಗೆ ಬಂದೆ. ಆಗ ‘ಗೆಳೆಯ’ ಚಿತ್ರದ ನಿರ್ದೇಶಕ ಹರ್ಷ- ‘ಸರ್, ಸಂಜೆಯ ಹೊತ್ತು ‘ಅವಳ ನೆನಪಲ್ಲಿ’ ಹೀರೊ ತೇಲಿ ಹೋದ ಸಂದರ್ಭಕ್ಕೆ ಒಂದು ವಿರಹಗೀತೆ ಬೇಕು ಅಂದರು. ಹಿಂದೆಯೇ ಟ್ಯೂನ್ ಕೇಳಿಸಿದರು. ತಕ್ಷಣವೇ ನನಗೆ ಆಟೊದವನ- ‘ಈ ಸಂಜೆ ಯಾಕಾದ್ರೂ ಆಗುತ್ತೋ? ಜನ ಸಂಜೆ ಹೊತ್ತು ಸಂತೆಗೆ ಬಂದವರ ಹಾಗೆ ಯಾಕಾದ್ರೂ ಬರ್ತಾರೋ’ ಎಂಬ ಮಾತುಗಳು ನೆನಪಾದವು. ಅವುಗಳನ್ನೇ ಇಟ್ಟುಕೊಂಡು- ‘ಈ ಸಂಜೆ ಯಾಕಾಗಿದೇ, ಈ ಸಂತೆ ಸಾಕಾಗಿದೆ’ ಎಂದು ಬರೆದೆ. ಗೆಳತಿಯ ಧ್ಯಾನದಲ್ಲಿ ಅವನು ಹಾಡ್ತಾನಲ್ಲ? ಅದಕ್ಕೇ ಈ ಸಾಲುಗಳ ಮಧ್ಯೆ ‘ನೀನಿಲ್ಲದೆ’ ಎಂಬ ಹೊಸ ಪದ ಸೇರಿಸಿದೆ. ಆಗ ಇಡೀ ಹಾಡಿಗೆ ಒಂದು ಹೊಸತನ ಬಂದಂತಾಯ್ತು. ನಂತರ, ಪ್ರೇಮದ ಆಲಾಪಕ್ಕೆ ಸಾಕ್ಷಿಯಾಗುವ ಕಾಡು, ಬೆಟ್ಟ, ಬೆಳದಿಂಗಳು, ನಕ್ಷತ್ರ, ತಂಗಾಳಿ, ಹೂವು, ಚಂದಿರ… ಇವೆಲ್ಲ, ಅದೇ ಪ್ರೇಮಿಯನ್ನು ಆತ ವಿರಹಿಯಾದಾಗ ಬಿಟ್ಟೂಬಿಡದೆ ಕಾಡುತ್ತವೆ. ಮೇಲಿಂದ ಮೇಲೆ ಅಣಕಿಕಸುತ್ತವೆ ಅಂದುಕೊಂಡೆ. ಆಗಲೇ ಎರಡೂ ಚರಣಗಳು ಒಂದರ ಹಿಂದೊಂದು ಹೊಳೆದುಬಿಟ್ಟವು…’
ಹಾಡುಗಳ ಕಥೆ ಇಷ್ಟೇ ಎಂಬಂತೆ ಮೌನವಾದರು ಜಯಂತ್. ಕಾಕತಾಳೀಯವೆಂಬಂತೆ ಅವರ ಮಾತು ಮುಗಿದಾಗ ಸಂಜೆಯಾಗಿತ್ತು. ಹೊರಡುವ ಮುನ್ನ ಗೆಳೆಯನ ಮೊಬೈಲು ಹಾಡಲು ಶುರುಮಾಡಿತು: ‘ಈ ಸಂಜೆ ಯಾಕಾಗಿದೇ…’

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: