ಭಾವುಕರಾದ ಮನ್ನಾಡೇ ಒಂದು ಗೀತೆಯನ್ನು ಉಚಿತವಾಗಿ ಹಾಡಿದರು!

manna_pic

ಕಣ್ಣಿಲ್ಲವೇನೋ, ನಿಜ ಕಾಣದೇನೋ…
ಚಿತ್ರ: ಮಾರ್ಗದರ್ಶಿ. ಗೀತೆರಚನೆ: ವಿಜಯ ನಾರಸಿಂಹ
ಗಾಯನ: ಮನ್ನಾಡೇ. ಸಂಗೀತ: ಎಂ. ರಂಗರಾವ್.

ಕಣ್ಣಿಲ್ಲವೇನೋ, ನಿಜ ಕಾಣದೇನೋ
ಈ ಕುರುಡು ಲೋಕದಲ್ಲಿ ಸರಿದಾರಿ ಎಲ್ಲೋ
ಈ ಕಳ್ಳ ಸಂತೆಯಲ್ಲಿ ಆದರ್ಶವೇನೋ
ದಯೆ ಸತ್ತ ಮೇಲೆ ಧರ್ಮ ದೂರಾಗದೇನೋ ||ಪ||

ನೀ ಅಂಜದಂತೆ ನಿಜಕಾಗಿ ಹೋದೆ
ಮುಳ್ಳಾಗಿ ಬಾಳ ಹಾದಿ ನೀ ನಿಂತೆ ಬೇರೆ
ಈ ಅಂಧಕಾರ ನೀಗಿ ಮಾರ್ಗದರ್ಶಿ ಯಾರೋ
ಈ ಸುಳ್ಳಿಗಾಗಿ ಸೋಲೆ ಸತ್ಯ ಗೆಲ್ಲದೋ ||೧||

ಹಿಡಿಮಣ್ಣೇ ಈ ಕಾಯ ಇದರಲ್ಲಿ ಅನ್ಯಾಯ
ಸುಖ-ದುಃಖ ಕಂದಾಯ, ಯಾರಲ್ಲೋ ಸಂದಾಯ ||೨||

ಕಳೆದ ಒಂದು ತಿಂಗಳಿಂದ ಮೇಲಿಂದ ಮೇಲೆ ಸುದ್ದಿಯಾಗುತ್ತಿರುವವರು ಗಾಯಕ ಮನ್ನಾಡೇ. ಅವರಿಗೆ ಫಾಲ್ಕೆ ಪ್ರಶಸ್ತಿ ಬಂದಿದ್ದು; ಕಳೆದ ಹತ್ತು ವರ್ಷಗಳಿಂದಲೂ ಅವರು ಬೆಂಗಳೂರಿನಲ್ಲಿಯೇ ವಾಸವಿರುವುದು; ತೊಂಬತ್ತೊಂದರ ಈ ಇಳಿವಯಸ್ಸಿನಲ್ಲೂ ಅವರು ಆಲ್ಟೋ ಕಾರು ಓಡಿಸುವುದು… ಇವೆಲ್ಲಾ ಮನ್ನಾಡೇಯವರು ಪದೇಪದೆ ಸುದ್ದಿಯಾಗಲು ಕಾರಣಗಳಾದವು.
ಬಹುಮಂದಿಗೆ ಗೊತ್ತಿರಲಿಕ್ಕಿಲ್ಲ. ಒಂದು ಪ್ರಾರ್ಥನೆಯಂತಿರುವ ‘ಜಯತೆ ಜಯತೆ ಸತ್ಯಮೇವ ಜಯತೆ’ಯನ್ನು ಹಾಡಿರುವವರು ಇದೇ ಮನ್ನಾಡೇ. ಅವರೊಂದಿಗಿರುವ ಹೆಣ್ಣುದನಿ ಸುಮನ್ ಕಲ್ಯಾಣ್ಪುರ್ ಅವರದು. ಅಂದಹಾಗೆ, ‘ಜಯತೆ ಜಯತೆ’ ಹಾಡಿರುವುದು ಕಲ್ಪವೃಕ್ಷ ಚಿತ್ರದಲ್ಲಿ. ಅದನ್ನು ಬರೆದವರು ಕು.ರಾ. ಸೀತಾರಾಮ ಶಾಸ್ತ್ರಿ.
ಇಲ್ಲಿ, ಮನ್ನಾಡೇ ಬಗ್ಗೆ ನಾಲ್ಕು ಮಾತು. ಮನ್ನಾಡೇ ಉತ್ತರ ಕೋಲ್ಕೊತಾದವರು. ಅವರ ಒರಿಜಿನಲ್ ಹೆಸರು ಪ್ರಬೋದ್ ಚಂದ್ರ ಡೇ. ಬಾಲ್ಯದಲ್ಲಿ ಮಾತ್ರವಲ್ಲ, ಕಾಲೇಜು ದಿನಗಳಲ್ಲಿ ಕೂಡ ಮನ್ನಾಡೇ ಅವರಿಗೆ ಸಂಗೀತದಲ್ಲಿ, ಹಾಡುಗಾರಿಕೆಯಲ್ಲಿ ಅಂಥ ವಿಶೇಷ ಒಲವೇನೂ ಇರಲಿಲ್ಲ. ಕಾಲೇಜಿನಲ್ಲಂತೂ, ಅವರು ಕುಸ್ತಿ ಹಾಗೂ ಬಾಕ್ಸಿಂಗ್ ಪಟುವಾಗಿ ದೊಡ್ಡ ಹೆಸರು ಮಾಡಿದ್ದರು.
ಆದರೆ, ಪದವಿ ಮುಗಿಯುತ್ತಿದ್ದಂತೆಯೇ ಉದ್ಯೋಗದ ಅನ್ವೇಷಣೆಗೆ ನಿಂತರಲ್ಲ? ಆ ದಿನಗಳಲ್ಲಿ ಅವರಿಗಿದ್ದ ದೊಡ್ಡ ಆಸರೆಯೆಂದರೆ ಚಿಕ್ಕಪ್ಪ ಕೃಷ್ಣ ಚಂದ್ರಡೇ ಅವರದ್ದು. ಅವರು ಬಾಂಬೆಯಲ್ಲಿ ಸಂಗೀತ ನಿರ್ದೇಶಕರಾಗಿದ್ದರು. ಚಿಕ್ಕಪ್ಪನ ನೆರಳಿಗೆ ಬಂದ ಮನ್ನಾಡೇ, ತುಂಬ ಬೇಗನೆ ಸಂಗೀತ ಕಲಿತರು. ಹಾಡುಗಾರಿಕೆಯಲ್ಲಿ ಪಳಗಿದರು. ಮುಂದೆ, ತಮ್ಮ ೨೨ನೇ ವಯಸ್ಸಿನಲ್ಲಿ ‘ತಮನ್ನಾ’ ಸಿನಿಮಾಕ್ಕಾಗಿ ‘ಸುರಯ್ಯಾ’ ಅವರೊಂದಿಗೆ ಡ್ಯೂಯೆಟ್ ಸಾಂಗ್ ಹಾಡಿದರು ಮನ್ನಾಡೇ. ಸಿನಿಮಾ ಹಿಟ್ ಆಯಿತು.
ಇಂಥ ಹಿನ್ನೆಲೆಯ ಮನ್ನಾಡೇ- ‘ಜಯತೆ ಜಯತೆ…’ ಸೇರಿದಂತೆ ಕನ್ನಡದಲ್ಲಿ ಒಟ್ಟು ಏಳು ಹಾಡುಗಳನ್ನು ಹಾಡಿದ್ದಾರೆ. ಅವುಗಳೆಂದರೆ ‘ಸಂಗೊಳ್ಳಿ ರಾಯಣ್ಣ’ ಚಿತ್ರದ ‘ಜಗವಿದು ಸೋಜಿಗ’, ‘ನೀರೆ ನೀನು ಬಾರೆ’, ಕಲಾವತಿ ಚಿತ್ರದ ‘ಕುಹು ಕುಹೂ ಎನ್ನುತ ಹಾಡುವ…’ (ರಚನೆ: ಕುವೆಂಪು), ಮಾರ್ಗದರ್ಶಿ ಚಿತ್ರದ ಎರಡು ಹಾಡುಗಳು ಹಾಗೂ ಇನ್ನೊಂದು.
ಅದು, ಮಹಮದ್ ರಫಿಯವರು ಖ್ಯಾತಿಯ ತುತ್ತ ತುದಿಯಲ್ಲಿದ್ದ ಸಂದರ್ಭ. ಆಗ ಅವರನ್ನು ಸಂದರ್ಶಿಸಿದ ಪತ್ರಕರ್ತರೊಬ್ಬರು- ‘ಈಗ ನೀವೇ ಖ್ಯಾತಿಯ ಗೌರಿಶಂಕರದಲ್ಲಿ ಕುಳಿತಿದ್ದೀರಿ. ಈ ಸಂದರ್ಭದಲ್ಲೂ ನಿಮ್ಮನ್ನು ಕಾಡುವ ಧ್ವನಿ ಯಾರದು? ನಿಮ್ಮ ಫೇವರಿಟ್ ಗಾಯಕ ಯಾರು’ ಎಂದು ಪ್ರಶ್ನಿಸಿದರು.
ಆಗ ಮಹಮ್ಮದ್ ರಫಿ ಹೇಳಿದ್ದರು: ‘ಇವತ್ತು ಜಗತ್ತು ನನ್ನ ಹಾಡು ಕೇಳುವ ಮೂಡ್ನಲ್ಲಿದೆ ನಿಜ. ಆದರೆ ನಾನು ಮನ್ನಾಡೇಯವರ ಹಾಡು ಕೇಳುವುದಕ್ಕೆ ಹಪಹಪಿಸ್ತಾ ಇದೀನಿ. ನನ್ನ ಫೇವರಿಟ್ ಗಾಯಕ ಅಂದ್ರೆ ಅವರೇ. ಅವರೊಬ್ಬರೇ…’
* * *
ಇಂಥ ಜಬರ್ದಸ್ತ್ ಹಿನ್ನೆಲೆಯ ಮನ್ನಾಡೇ ಅವರು, ‘ಮಾರ್ಗದರ್ಶಿ’ ಸಿನಿಮಾಕ್ಕೆ ಹಾಡಿದರಲ್ಲ? ಅದೂ ಒಂದು ಸ್ವಾರಸ್ಯಕರ ಕಥೆ. ಅದನ್ನು ತಿಳಿಯುವ ಮೊದಲು ’ಮಾರ್ಗದರ್ಶಿ’ ಸಿನಿಮಾದ ಕಥೆ ಹಾಗೂ ‘ಕಣ್ಣಿಲ್ಲವೇನೋ ನಿಜ ಕಾಣದೇನೋ’ ಹಾಡಿನ ಹಿನ್ನೆಲೆ ತಿಳಿಯೋಣ.
ದೇಶಕ್ಕೆ ಸ್ವಾತಂತ್ರ್ಯ ಬಂತಲ್ಲ? ಆ ನಂತರದಲ್ಲಿ ನೆಹರೂ ಅವರು ಕೈಗಾರಿಕೆಗೆ ಮಹತ್ವ ನೀಡಿದರು. ಬಹಳಷ್ಟು ಮಹಾನಗರಗಳಲ್ಲಿ ಒಂದರ ಹಿಂದೊಂದು ಕೈಗಾರಿಕೆಗಳು ಆರಂಭವಾದವು. ನೌಕರಿಯ ಆಸೆಯಿಂದ ಜನ ನಗರಗಳಿಗೆ ದುಗುಡ ಹೋಗತೊಡಗಿದರು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಗ್ರಾಮಗಳಲ್ಲಿ ಜನರೇ ಇಲ್ಲವಾಗಬಹುದು. ಗ್ರಾಮಗಳಿಲ್ಲದೆ ಭಾರತವಿಲ್ಲ ಎಂಬ ಗಾಂಜಿಯ ಆತಂಕ ನಿಜವಾಗಬಹುದು ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದ್ದ ಸಂದರ್ಭ ಅದು. ಹೀಗಿದ್ದಾಗಲೇ ಹಳ್ಳಿಗಳ ಜನರಿಗೆ ಶಿಸ್ತು, ಸ್ವಚ್ಛತೆ, ಕಾನೂನು ಪಾಲನೆ, ವಿದ್ಯೆಯ ಮಹತ್ವ, ನೈರ್ಮಲ್ಯ, ಹಳ್ಳಿಗಳಿಗೆ ಅಗತ್ಯವಾಗಿ ಬೇಕಿರುವ ಮೂಲಭೂತ ಸೌಲಭ್ಯಗಳ ಬಗ್ಗೆ ತಿಳಿಹೇಳುವ ಸಂದೇಶದ ಸಿನಿಮಾ ಒಂದನ್ನು ನಿರ್ಮಿಸಲು ಶ್ರೀಕಾಂತ್ ಅಂಡ್ ಶ್ರೀಕಾಂತ್ ಪ್ರೊಡಕ್ಷನ್ಸ್ ಸಂಸ್ಥೆ ಮುಂದೆ ಬಂತು. ಎಂ.ಆರ್. ವಿಠಲ್ಗೆ ನಿರ್ದೇಶನದ ಹೊಣೆ ಹೊರಿಸಿತು. ಆಗ ವಿಠಲ್ ಕಣ್ಣಿಗೆ ಬಿದ್ದ ಕಾದಂಬರಿಯೇ ತ.ರಾ.ಸು. ಅವರ ಮಾರ್ಗದರ್ಶಿ ಕಾದಂಬರಿ.
ಕಾದಂಬರಿಯನ್ನು, ತುಂಬ ಇಷ್ಟಪಟ್ಟ ವಿಠಲ್, ಈ ಸಿನಿಮಾಕ್ಕೆ ನೀವೇ ಸಂಭಾಷಣೆ, ಚಿತ್ರಕಥೆ ಬರೀಬೇಕು ಎಂದು ತ.ರಾ.ಸು. ಅವರನ್ನು ಒತ್ತಾಯಿಸಿ, ಒಪ್ಪಿಸಿದರು. ಸಂಕ್ಷಿಪ್ತವಾಗಿ ಹೇಳುವುದಾದರೆ ಆ ಸಿನಿಮಾದ ಕಥೆ ಇಷ್ಟು- ಅದೊಂದು ಹಳ್ಳಿ. ಅದು ನಗರದ ನಾಗರಿಕತೆಯಿಂದ ದೂರ ದೂರ. ಅದು ಕಳ್ಳರ ಕಾರಸ್ಥಾನವೇ ಆಗಿರುತ್ತದೆ. ಆ ಹಳ್ಳಿಯ ಒಂದಷ್ಟು ಮಂದಿ ಕೂಡ ಕಳ್ಳರ ಕಡೆಗೆ ಸೇರಿಕೊಂಡಿರುತ್ತಾರೆ. ಆ ಊರಿಗೆ ರಸ್ತೆ ಸಂಪರ್ಕವೇ ಇರುವುದಿಲ್ಲ. ಒಂದು ವೇಳೆ ರಸ್ತೆ ಮಾಡಿಸಿದರೆ, ಅದರಿಂದ ಪೊಲೀಸರು ಊರಿಗೆ ಬರಬಹುದು. ತಮ್ಮ ಕಳ್ಳ ವ್ಯವಹಾರ ಎಲ್ಲರಿಗೂ ಗೊತ್ತಾಗಬಹುದು. ನಂತರ ತಮ್ಮ ದಂಧೆಗೆ ಕಡಿವಾಣ ಬೀಳಬಹುದು ಎಂಬ ಕಾರಣಕ್ಕೆ, ಹಳ್ಳಿಗೆ ರಸ್ತೆ ಮಾಡುವುದಕ್ಕೇ ಕಳ್ಳರು ಅವಕಾಶ ಕೊಡುವುದಿಲ್ಲ.
ಹೀಗಿರುವಾಗ, ಅದೇ ಹಳ್ಳಿಯ ಯುವಕನೊಬ್ಬ ಮೈಸೂರಿಗೆ ಬಂದು ಪದವೀಧರನಾಗುತ್ತಾನೆ. ನಂತರ ತನ್ನ ಜತೆಗಾರರ ನೆರವಿನಿಂದ ಊರಿಗೆ ರಸ್ತೆ ಸಂಪರ್ಕ ಒದಗಿಸಲು; ನಾಗರಿಕ ಸಂಪರ್ಕ ಕಲ್ಪಿಸಲು ಶ್ರಮಿಸುತ್ತಾನೆ. ಆಗ ಊರಲ್ಲಿದ್ದ ಕೇಡಿಗರ ಗುಂಪು ಅವನಿಗೆ ಹೆಜ್ಜೆ ಹೆಜ್ಜೆಗೂ ಕಾಟ ಕೊಡುತ್ತದೆ. ಆ ಸಂದರ್ಭದಲ್ಲಿ ಅಶರೀರವಾಣಿಯ ಮಾತಿನಂತೆ ಈ ಹಾಡು ಕೇಳಿಬರುತ್ತದೆ: ‘ಕಣ್ಣಿಲ್ಲವೇನೋ, ನಿಜ ಕಾಣದೇನೋ…’
ಹಾಡು ಬರಬೇಕಾದ ಸಂದರ್ಭವನ್ನು ವಿಠಲ್ ವಿವರಿಸಿದರು: ‘ಹೊರಜಗತ್ತಿನ ಸಂಪರ್ಕವೇ ಇರಲ್ಲವಲ್ಲ? ಹಾಗಾಗಿ ಆ ಹಳ್ಳಿಯಲ್ಲಿ ರಾತ್ರಿಯಷ್ಟೇ ಅಲ್ಲ, ಹಗಲೂ ಕತ್ತಲು ಕವಿದಿರುತ್ತೆ. ಎಂದರು. ಹೇಳಿ ಕೇಳಿ, ಅದು ಕಳ್ಳರ ಸಂತೆಯಂತಿರುತ್ತೆ. ಅಲ್ಲಿ ಸುಳ್ಳಿನದೇ ದರ್ಬಾರು. ಆದರ್ಶ, ಸತ್ಯ, ದಯೆ, ಧರ್ಮ ಯಾವುದೂ ಆ ಊರಲ್ಲಿ ಇರಲ್ಲ. ಕಳ್ಳತನವೇ ಬದುಕು ಅಂದುಕೊಂಡವರನ್ನು ಸರಿದಾರಿಯಲ್ಲಿ ಮುನ್ನಡೆಸುವ ಒಬ್ಬ ಲೀಡರ್ ಇರುವುದೇ ಇಲ್ಲ’ ಎಂದರು.
ಈ ಮಾತುಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕಿದ ವಿಜಯ ನಾರಸಿಂಹ ‘ಕಣ್ಣಿಲ್ಲವೇನೋ, ನಿಜ ಕಾಣದೇನೋ… ಈ ಕುರುಡು ಲೋಕದಲ್ಲಿ ಸರಿದಾರಿ ಎಲ್ಲೋ…’ ಎಂದು ಆರಂಭಿಸಿ ಹತ್ತು ನಿಮಿಷದಲ್ಲಿ ಇಡೀ ಹಾಡು ಬರೆದು ಮುಗಿಸಿದರು. ಚಿತ್ರದ ಕ್ಲೈಮ್ಯಾಕ್ಸ್ಗೆ ಕುವೆಂಪು ಅವರ ‘ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ’ ಗೀತೆ ಅಳವಡಿಸಲು ವಿಠಲ್ ನಿರ್ಧರಿಸಿದ್ದರು. ಮೊದಲಿಂದಲೂ ಮನ್ನಾಡೇ ಅಭಿಮಾನಿಯಾಗಿದ್ದ ವಿಠಲ್, ಕ್ಲೈಮ್ಯಾಕ್ಸ್ ಗೀತೆಯನ್ನು ಅವರಿಂದಲೇ ಹಾಡಿಸಲು ನಿರ್ಧರಿಸಿದ್ದರು. ಮೊದಲು ಈ ಮಾತಿಗೆ ಮನ್ನಾಡೇ ಕೂಡ ಒಪ್ಪಿದ್ದರು. ಮದ್ರಾಸಿನಲ್ಲಿ ಹಾಡುಗಳ ರೆಕಾರ್ಡಿಂಗ್ ಎಂದೂ ನಿರ್ಧರಿಸಲಾಗಿತ್ತು. ಆದರೆ, ಕೆಲಸದ ಒತ್ತಡದಿಂದ ಮದ್ರಾಸಿಗೆ ಬರುವ ಕಾರ್ಯಕ್ರಮ ರದ್ದಾಯಿತು. ಆಗ ವಿಠಲ್ರನ್ನು ಸಂಪರ್ಕಿಸಿದ ಮನ್ನಾಡೇ- ‘ಒಂದು ಕೆಲ್ಸ ಮಾಡಿ. ನೀವೆಲ್ಲ ಬಾಂಬೆಗೇ ಬನ್ನಿ. ಇಲ್ಲಿನ ಆರ್ಕೆಸ್ಟ್ರಾ ಟೀಂ ಇಟ್ಕೊಂಡೇ ಹಾಡ್ತೇನೆ. ರೆಕಾರ್ಡ್ ಮಾಡಿಕೊಂಡು ಹೋಗಿ’ ಎಂದರು.
ಆ ದಿನಗಳಲ್ಲಿ ಬಾಂಬೆ ಆರ್ಕೆಸ್ಟ್ರಾ ತುಂಬಾ ದುಬಾರಿ ಎಂದೇ ಹೆಸರಾಗಿತ್ತು. ‘ನಡೆ ಮುಂದೆ…’ಯಲ್ಲಿ ಕೋರಸು ಹಾಡುಗಾರರೂ ಇದ್ದರು. ಅವರನ್ನು ಬಾಂಬೆಗೆ ಕರೆದೊಯ್ದು ಹಾಡಿಸುವಂಥ ಆರ್ಥಿಕ ಚೈತನ್ಯ ನಿರ್ಮಾಪಕರಿಗೆ ಇರಲಿಲ್ಲ. ತಕ್ಷಣವೇ ತಲೆ ಓಡಿಸಿದ ನಿರ್ದೇಶಕ ವಿಠಲ್ ’ನಡೆ ಮುಂದೆ ನಡೆ ಮುಂದೆ…’ ಗೀತೆಯನ್ನು ಪಿ.ಬಿ. ಶ್ರೀನಿವಾಸ್ರಿಂದ ಹಾಡಿಸಿಬಿಟ್ಟರು. ಕೋರಸ್ ಇಲ್ಲದ ‘ಕಣ್ಣಿಲ್ಲವೇನೋ..’ ಗೀತೆಯನ್ನು ಮನ್ನಾಡೇಗೆ ಮೀಸಲಿಟ್ಟರು. ನಂತರ ಮದ್ರಾಸ್ನಲ್ಲಿಯೇ ವಾದ್ಯ ಸಂಗೀತ ಕಲಾವಿದರನ್ನು ಸೇರಿಸಿ- ಎಂ. ರಂಗರಾವ್ ಅವರಿಂದಲೇ ಟ್ರ್ಯಾಕ್ನಲ್ಲಿ ಹಾಡಿಸಿದರು. ನಂತರ ರೆಕಾರ್ಡಿಂಗ್ ತಟ್ಟೆಯ ಒಂದು ಬದಿಯಲ್ಲಿ ಟ್ರ್ಯಾಕ್ನಲ್ಲಿ ಹಾಡಿದ್ದನ್ನು ಧ್ವನಿಮುದ್ರಿಸಿಕೊಂಡು, ಇನ್ನೊಂದು ಬದಿಯಲ್ಲಿ ಕೇವಲ ಹಿನ್ನೆಲೆ ಸಂಗೀತವನ್ನಷ್ಟೇ ಟೇಪ್ ಮಾಡಿಕೊಂಡರು. (ಮೂರೂವರೆ ದಶಕಗಳ ಹಿಂದೆಯೇ ಇಂಥ ಸಾಹಸ ಮಾಡಿದ್ದು ಅದ್ಭುತವೆಂದೇ ಹೇಳಬೇಕು!) ನಂತರ ನಿರ್ಮಾಪಕ ಶ್ರೀಕಾಂತ್, ಸಂಗೀತ ನಿರ್ದೇಶಕ ರಂಗರಾವ್, ಗೀತೆರಚನೆಕಾರ ವಿಜಯ ನಾರಸಿಂಹ ಅವರೊಂದಿಗೆ ಬಾಂಬೆಗೆ ಹೋಗಿ ಮನ್ನಾಡೇ ಅವರಿಗೆ ಎಲ್ಲವನ್ನೂ ವಿವರಿಸಿದರು.
ಒಂದು ಹಾಡಿಗಾಗಿ ಇಷ್ಟೆಲ್ಲ ಕಷ್ಟಪಟ್ಟಿದ್ದು ತಿಳಿದು, ಭಾವುಕರಾದ ಮನ್ನಾಡೇ-‘ನನ್ನ ವಿಷಯವಾಗಿ ನಿಮಗಿರುವ ಪ್ರೀತಿ-ಅಭಿಮಾನ ದೊಡ್ಡದು. ನೀವೆಲ್ಲ ಒಂದು ಹಾಡಿಗಾಗಿ ಅಷ್ಟು ದೂರದಿಂದ ಬಂದಿದ್ದೀರಿ. ನಿಮಗೆ ಇನ್ನೊಂದು ಹಾಡನ್ನು ಉಚಿತವಾಗಿ ಹಾಡ್ತೇನೆ’ ಎಂದರಂತೆ. ನಂತರ ಟ್ರ್ಯಾಕ್ಸಾಂಗ್ ಕೇಳಿಸಿಕೊಂಡು ಎಲ್ಲರೂ ವಾಹ್ವಾಹ್ ಎನ್ನುವಂತೆ ‘ಕಣ್ಣಿಲ್ಲವೇನೋ… ನಿಜ ಕಾಣದೇನೋ…’ ಹಾಡಿದರು. ಅದು ಮುಗಿದ ತಕ್ಷಣವೇ- ಇನ್ನೊಂದನ್ನು ಹಾಡ್ತೀನಿ ಅಂದೆನಲ್ಲ? ಅದೂ ಕೊಡಿ’ ಅಂದರಂತೆ. ಈ ಮಾತಿಂದ ಎಲ್ಲರಿಗೂ ಖುಷಿಯಾಯಿತು. ತಕ್ಷಣ ವಿಜಯ ನಾರಸಿಂಹ ಬರೆದಿದ್ದ ’ಅಣು ಅಣುವಿನಲ್ಲಿ ವಿಷ ದ್ವೇಷ ಜ್ವಾಲೆ, ಭೈರವನ ರುದ್ರಲೀಲೆ’ ಹಾಡು ತೋರಿಸಿದ ವಿಠಲ್- ‘ಇದನ್ನೂ ಹಾಡಿ ಸರ್’ ಎಂದರಂತೆ. ಪರಿಣಾಮ, ಮನ್ನಾಡೇ ಅವರ ಸಿರಿಕಂಠದಿಂದ ಬೋನಸ್ ರೂಪದಲ್ಲಿ ‘ಅಣು ಅಣುವಿನಲ್ಲೂ…’ ಗೀತೆ ಕನ್ನಡಕ್ಕೆ ದಕ್ಕಿತು.
ಈ ಹಾಡಿನ ಪ್ರಸಂಗದೊಂದಿಗೆ ಹೇಳಲೇಬೇಕಾದ ಇನ್ನೊಂದು ಮಾತೆಂದರೆ- ನಟ ಬಾಲಕೃಷ್ಣ ಅವರ ಅಭಿಮಾನ್ ಸ್ಟುಡಿಯೋಗೆ ಶುಕ್ರದೆಸೆ ಆರಂಭವಾದದ್ದು ಕೂಡ ‘ಮಾರ್ಗದರ್ಶಿ’ ಸಿನಿಮಾದ ಚಿತ್ರೀಕರಣದ ಮೂಲಕವೇ.
ಅಲ್ಲ, ಹಾಡಿನ ಕಥೆಗೆ ಕೈಹಾಕಿದರೆ, ಸ್ಟುಡಿಯೋದ ಕಥೆಯೂ ಜತೆಯಾಯಿತಲ್ಲ? ಅದಲ್ಲವೆ ಸ್ವಾರಸ್ಯ?

Advertisements

1 Comment »

  1. 1

    ಮನ್ನಾಡೇ ಅವರ ಬಗೆಗೆ ಕೇಳಿದ್ದೆ, ಆದರೆ ಇಷ್ಟೊಂದು ಗೊತ್ತಿರಲಿಲ್ಲ
    ಸುಂದರ ವಿವರಣೆ,
    ಥ್ಯಾಂಕ್ಸ್
    ,


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: