ನೀನೆ ನೀನೆ ನನಗೆಲ್ಲಾ ನೀನೆ…

ನೀನೆ ನೀನೆ ನನಗೆಲ್ಲಾ ನೀನೆ…
ಚಿತ್ರ: ಆಕಾಶ್, ಗೀತರಚನೆ; ಕೆ. ಕಲ್ಯಾಣ್
ಸಂಗೀತ: ಆರ್.ಪಿ. ಪಟ್ನಾಯಕ್, ಗಾಯನ: ಕುನಾಲ್ ಗಾಂಜಾವಾಲಾ.

ನೀನೆ ನೀನೆ ನನಗೆಲ್ಲಾ ನೀನೆ
ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೆ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ ||ಪ||

ಮಳೆಯಲ್ಲು ನಾ ಬಿಸಿಲಲ್ಲು ನಾ ಚಳಿಯಲ್ಲು ನಾ ಜೊತೆ ನಡೆಯುವೆ
ಹಸಿವಲ್ಲು ನಾ ನೋವಲ್ಲು ನಾ ಸಾವಲ್ಲು ನಾ ಜೊತೆ ನಿಲ್ಲುವೆ
ನಾನಾ ದೇಶ ನಾನಾ ವೇಷ ಯಾವುದಾದರೇನು?
ಒಪ್ಪಿಕೊಂಡ ಈ ಮನಸುಗಳೆರಡೂ ಎಂದೂ ಹಾಲು ಜೇನು ||೧||

ಕ್ಷಣವಾಗಲಿ ದಿನವಾಗಲಿ ಯುಗವಾಗಲಿ ನಾ ಕಾಯುವೆ
ಕಲ್ಲಾಗಲಿ ಮುಳ್ಳಾಗಲಿ ನಿನ ಬದುಕಲಿ ಬೆಳಕಾಗುವೆ
ಏನೇ ಆಗಲಿ ಪ್ರಾಣಾ ಹೋಗಲಿ ನನಗೆ ನೀನೆ ಬೇಕು
ನನ್ನ ನಿನ್ನ ಈ ಪ್ರೀತಿಯಾ ಕಂಡು ಲೋಕ ಮೆಚ್ಚಬೇಕು ||೨||

ಹುಡುಗರಿಗೆ, ಅದರಲ್ಲೂ ಪಡ್ಡೆ ಹುಡುಗರಿಗೆ ‘ಸಾಫ್ಟ್’ ಆಗಿ ಮಾತಾಡಿ ಅಭ್ಯಾಸವಿಲ್ಲ. ಅವರ ಮಾತೇನಿದ್ದರೂ ಗುಂಡು ಹೊಡೆದ ಹಾಗಿರುತ್ತದೆ. ಕಡ್ಡಿಯನ್ನು ಎರಡು ತುಂಡು ಮಾಡಿದ ಹಾಗಿರುತ್ತದೆ. ಬಹುಪಾಲು ಹುಡುಗರಿಗೆ ‘ಆಜ್ಞಾಪಿಸುವ’ ಧಾಟಿಯಲ್ಲಿ ಮಾತಾಡಿ ಅಭ್ಯಾಸವೇ ವಿನಃ ಯಾಚನೆಯ ರೀತಿಯಲ್ಲಿ ಮಾತಾಡಿ ಅಭ್ಯಾಸವೇ ಇರುವುದಿಲ್ಲ. ಅದರಲ್ಲೂ ಪ್ರೀತಿಯ ವಿಷಯಕ್ಕೆ ಬಂದರಂತೂ ಮುಗಿದುಹೋಯಿತು; ಹೌದು, ಆ ಸಂದರ್ಭದಲ್ಲಿ ಹುಡುಗರು ಥೇಟ್ ಉಗ್ರಗಾಮಿಗಳ ಥರವೇ ವರ್ತಿಸುತ್ತಾರೆ. ಒಂದು ಕೈಯಲ್ಲಿ ಗುಲಾಬಿ, ಇನ್ನೊಂದು ಕೈಲಿ ಬ್ಲೇಡ್ ಹಿಡಿದೇ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ: ‘ನನ್ನ ಪ್ರೀತೀನ ಒಪ್ಕೊಂಡ್ರೆ ಬಚಾವಾಗ್ತೀಯ. ಇಲ್ಲ ಅಂದ್ರೆ ಬ್ಲೇಡ್ ಹಾಕಿಬಿಡ್ತೀನಿ, ಹುಷಾರ್!’
ಥತ್ತೇರಿಕೆ, ಈ ಪಡ್ಡೆ ಹುಡುಗರ ಮಾತು- ವರ್ತನೆಯೇ ಹೀಗೆ ಎಂದು ಎಲ್ಲರೂ ಮಾತಾಡಿಕೊಂಡು ಬೇಸರಗೊಂಡಿದ್ದ ಸಂದರ್ಭದಲ್ಲಿಯೇ; ಆಪ್ತ ಅನ್ನಿಸುವಂಥ ಟ್ಯೂನ್ ಹೊಂದಿದ್ದ ಹಾಡೊಂದು ತೇಲಿಬಂತು. ಅದರ ಆರಂಭದ ಸಾಲುಗಳು ಹೀಗಿದ್ದವು: ‘ನೀನೆ ನೀನೆ, ನನಗೆಲ್ಲಾ ನೀನೇ/ ಮಾತು ನೀನೇ ಮನಸೆಲ್ಲಾ ನೀನೇ…’
ಪುನೀತ್ ರಾಜ್ಕುಮಾರ್ ಅಭಿನಯದ, ಕಲ್ಯಾಣ್ ರಚಿಸಿ, ಆರ್.ಪಿ. ಪಟ್ನಾಯಕ್ ಸಂಗೀತವಿದ್ದ ‘ಆಕಾಶ್’ ಚಿತ್ರದ ಈ ಹಾಡು ಕೇಳಿ ಹುಡುಗರಷ್ಟೇ ಅಲ್ಲ, ಹುಡುಗಿಯರೂ ಥ್ರಿಲ್ಲಾಗಿ ಹೋದರು. ‘ಐ ಲವ್ಯೂ’ ಎಂಬ ಮೂರು ಪದಗಳನ್ನು ಒಂದು ಹಾಡಿನ ಮೂಲಕ ಇಷ್ಟೊಂದು ಆಪ್ತವಾಗಿ ಹೇಳಲು ಸಾಧ್ಯ ಎಂಬುದನ್ನು ಬಹುಶಃ ಅದುವರೆಗೂ ಹೆಚ್ಚಿನವರು ಕಲ್ಪಿಸಿಕೊಂಡೂ ಇರಲಿಲ್ಲ. ‘ಆಕಾಶ್’ ಸಿನಿಮಾ ಬಿಡುಗಡೆಯಾದದ್ದೇ ತಡ, ನಂತರದಲ್ಲಿ ಹೆಚ್ಚಿನ ಹುಡುಗರು -‘ನೀನೇ ನೀನೇ…’ ಹಾಡನ್ನೇ ತಮ್ಮ ಮೊಬೈಲ್ನ ರಿಂಗ್ಟೋನ್ ಮಾಡಿಕೊಂಡರು. ಆ ಹಾಡನ್ನು ‘ಅವಳಿಗೆ’ ಪದೇ ಪದೆ’ ಕೇಳಿಸಿ ಖುಷಿಪಟ್ಟರು. ನನ್ನೆದಯ ಹಾಡೂ ಇದೇ ಎಂದು ‘ಧೈರ್ಯಮಾಡಿ’ ಹೇಳಿಯೂ ಬಿಟ್ಟರು!.
ಈ ಕಡೆ ಹುಡುಗಿಯರ ಕಥೆಯೂ ಭಿನ್ನವಾಗಿರಲಿಲ್ಲ. ತಮ್ಮ ಹುಡುಗ ‘ಆಕಾಶ್’ ಚಿತ್ರದ ಹೀರೋ ಥರಾನೇ ಮೊಣಕಾಲೂರಿ ಕುಳಿತು ಪ್ರೇಮಭಿಕ್ಷೆ ಬೇಡಲಿ ಎಂದು ಅವರಿಗೂ ಆಸೆಯಿತ್ತು. ಒಲಿಯದೇ ಹೋದವನಿಗೆ ಈ ಹಾಡು ಕೇಳಿಸಿ-‘ನನ್ ಪ್ರೀತಿ ಅಂದ್ರೆ ಹೀಗೆ ಕಣೋ’ ಎಂದು ವಿವರಿಸುವ ಬಯಕೆಯಿತ್ತು. ಈ ಕಾರಣದಿಂದಲೇ ೨೦೦೫-೦೬ರ ಅವಯಲ್ಲಿ ನಾಡಿನ ಉದ್ದಗಲಕ್ಕೂ ಹುಡುಗ-ಹುಡುಗಿಯರ ಬಳಿಯುದ್ದ ಹೆಚ್ಚಿನ ಮೊಬೈಲುಗಳು ‘ನೀನೇ ನೀನೇ…’ ಗೀತೆಯ ರಿಂಗ್ಟೋನನ್ನೇ ಉಸಿರಾಗಿಸಿಕೊಂಡಿದ್ದವು !
ಒಂದು ಸ್ವಾರಸ್ಯವೆಂದರೆ, ಈ ಹಾಡು ಹದಿಹರೆಯದವರ ಪ್ರೀತಿಯನ್ನು ಪರಸ್ಪರರಿಗೆ ತಿಳಿಸಲು ಮಾತ್ರವಲ್ಲ; ತಂದೆ ತಾಯಿಯರು ಮಕ್ಕಳಿಗೆ, ಅಥವಾ ಮಕ್ಕಳು ಪೋಷಕರಿಗೆ ತಮ್ಮ ಪ್ರೀತಿಯನ್ನು ವಿವರಿಸುವ ಸಂದರ್ಭಕ್ಕೂ ವಾಹ್ ವಾಹ್ ಎಂಬಂತೆ ಹೊಂದಿಕೆಯಾಗುತ್ತಿತ್ತು.
ಈ ಗೀತೆಗೆ ದನಿಯಾದವರು ಕುನಾಲ್ ಗಾಂಜಾವಾಲಾ. ‘ಮರ್ಡರ್’ ಚಿತ್ರದ ‘ಬೀಗೇ ಹಾಂಟ್ ತೇರಿ’ ಹಾಡಿನಿಂದ ರಾತ್ರೋರಾತ್ರಿ ಮನೆಮಾತಾದ ಕುನಾಲ್, ಕನ್ನಡಕ್ಕೆ ಪರಿಚಯವಾದದ್ದು; ನೀನೇ ನೀನೇ ಹಾಡಿಗೆ ದನಿಯಾದ ಸಂದರ್ಭವಿದೆಯಲ್ಲ? ಹೇಳಿದರೆ ಅದೇ ಒಂದು ಚೆಂದದ ಕಥೆ.
ಆ ಕಥೆ ಶುರುವಾಗುವುದು ಹೀಗೆ:
ಬೆಂಗಳೂರಿನ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ‘ಆಕಾಶ್’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಪುನೀತ್ಗೆ ಹಳೆಯ ಗೆಳೆಯರಾದ ‘ಭಾಷಾಲೋಕ’ ಖ್ಯಾತಿಯ ಪ್ರಕೃತಿ ಬನವಾಸಿ, ಅದೊಂದು ಮಧ್ಯಾಹ್ನ ಶೂಟಿಂಗ್ ಜಾಗದಲ್ಲಿ ಪುನೀತ್ ಜತೆ ಮಾತಾಡುತ್ತಾ ಇದ್ದರು. ಭೋಜನವಿರಾಮದ ಸಂದರ್ಭದಲ್ಲಿ ‘ಬೀಗಿ ಹಾಂಟ್ ತೇರಿ’ ಹಾಡನ್ನು ಗುನುಗುತ್ತಿದ್ದ ಪುನೀತ್-ಈ ಹಾಡು ಹೇಳಿರುವ ಗಾಯಕನಿಂದ ನನ್ನ ಸಿನಿಮಾಕ್ಕೈ ಹಾಡಿಸಬೇಕಲ್ಲ? ಆದ್ರೆ ಅವರ ಪರಿಚಯವಿಲ್ಲ ಎಂದು ಪೇಚಾಡಿಕೊಂಡರು. ಸ್ವಾರಸ್ಯವೆಂದರೆ ಅದೇ ಕುನಾಲ್ ಗಾಂಜಾವಾಲಾ ಜತೆ ಪ್ರಕೃತಿ ಬನವಾಸಿ ಅವರಿಗೆ ‘ಹೋಗೋ ಬಾರೋ’ ಎಂಬಂಥ ಗೆಳೆತನವಿತ್ತು. ಅದನ್ನೇ ಪುನೀತ್ಗೆ ವಿವರಿಸಿದ ಪ್ರಕೃತಿ, ಒಂದು ಮಾತು ಅವನನ್ನೇ ಮಾತಾಡಿಸ್ತೀನಿ ಎಂದು ಕುನಾಲ್ ಮೊಬೈಲ್ಗೆ ಪೋನ್ ಮಾಡಿ- ‘ಒಂದು ಕನ್ನಡ ಸಿನಿಮಾಕ್ಕೆ ಹಾಡಬೇಕಿದೆ, ಒಪ್ತೀಯಾ?’ ಎಂದರು. ‘ಫ್ರೆಂಡ್, ನೀನು ಹೇಳಿದ ಮೇಲೆ ಇಲ್ಲ ಅಂತೀನಾ? ಖಂಡಿತ ಹಾಡ್ತೀನಿ ಎಂದರು ಕುನಾಲ್.
ತುಂಬ ಆಸೆಪಟ್ಟಿದ್ದ ಹಾಡುಗಾರನೊಬ್ಬ ಆಕಸ್ಮಿಕವಾಗಿ ಸಿಕ್ಕಿದ್ದೇ ಅಲ್ಲದೆ, ಹಾಡಲು ಒಪ್ಪಿದ್ದನ್ನೂ ತಿಳಿದು ಪುನೀತ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಅವರಿಗೆ ತುಂಬ ಖುಷಿಯಾಯಿತು. ನಂತರ ‘ಓ ಮಾರಿಯಾ’ ಹಾಡನ್ನು ಕುನಾಲ್ ಅವರಿಂದ ಹಾಡಿಸುವುದೆಂದು ನಿರ್ಧರಿಸಿದ್ದಾಯಿತು. ತರಾತುರಿಯಲ್ಲಿ ಒಂದು ದಿನಾಂಕ ನಿಗಪಡಿಸಿ ಕುನಾಲ್ಗೆ ಟ್ಯೂನ್ ಹಾಗೂ ಟ್ರಾಕ್ ಹಾಡನ್ನು ಕಳಿಸಿದ್ದೂ ಆಯಿತು.
ಹಾಡು ಹೇಳಲೆಂದು ಬೆಂಗಳೂರಿಗೆ ಬಂದ ಕುನಾಲ್, ಹೋಟೆಲಿನ ಬದಲು ಗೆಳೆಯ ಪ್ರಕೃತಿ ಬನವಾಸಿಯ ಮನೆಯಲ್ಲೇ ಉಳಿಯಲು ನಿರ್ಧರಿಸಿದರು. ಏರ್ಫೋರ್ಟ್ನಿಂದ ಕರೆತರಲು ಪ್ರಕೃತಿ ಬನವಾಸಿಯೇ ಹೋಗಿದ್ದರು. ಕಾರಿನಲ್ಲಿ ಹಾದಿಯುದ್ದಕ್ಕೂ ‘ಓ ಮಾರಿಯಾ’ ಹಾಡನ್ನು ರಿಹರ್ಸಲ್ ಥರಾ ಮೇಲಿಂದ ಮೇಲೆ ಸತತ ಎರಡು ಗಂಟೆ ಕಾಲ ಜೋರಾಗಿ ಹಾಡಿದ ಕುನಾಲ್, ಪದೇ ಪದೆ ಇದೇ ನನ್ನ ಮೊದಲ ಕನ್ನಡ ಸಾಂಗ್. ಉಚ್ಚಾರಣೆ ಸರಿಯಾಗಿದೆಯಾ ಎಂದು ಗೆಳೆಯನನ್ನು ಕೇಳುತ್ತಿದ್ದರಂತೆ. ಏರ್ಪೋರ್ಟ್ನಿಂದ ಮನೆಗೆ ಬರುವಷ್ಟರಲ್ಲಿ ಹಾಡು ಅವರಿಗೆ ಕಂಠಪಾಠವಾಗಿತ್ತು. ಮರುದಿನ ಒಂದಿಷ್ಟೂ ತಡವರಿಸದೆ ಅವರು -‘ಓ ಮಾರಿಯಾ…’ ಹಾಡು ಹೇಳಿದಾಗ ಪುನೀತ್, ರಾಘಣ್ಣ ಸೇರಿದಂತೆ ಎಲ್ಲರೂ ಬೆರಗಾದರು. ನಂತರ ಡಾ. ರಾಜ್ ಅವರಿಗೆ ಹಾಡು ಕೇಳಿಸಿದಾಗ ಅವರು- ‘ಅಬ್ಬಾ, ಈ ಗಾಯಕನದು ನಿಜಕ್ಕೂ ಸಿರಿಕಂಠ. ಆಕಾಶ್ ಸಿನಿಮಾಕ್ಕೆ ಬರೆದಿರುವ ‘ನೀನೆ ನೀನೆ’ ಹಾಡನ್ನೂ ಇವರಿಂದಲೇ ಹಾಡಿಸೋಣ. ಈ ಧ್ವನಿಯಲ್ಲಿ ಏನೋ ಆಕರ್ಷಣೆ ಇದೆ ಎಂದು ನನ್ನ ಒಳಮನಸ್ಸು ಹೇಳ್ತಾ ಇದೆ’ ಅಂದರಂತೆ !
ಪರಿಣಾಮ, ಹಾಡಿದ ಕೆಲಸ ಮುಗಿದ ನಂತರ ಗೆಳೆಯನ ಮನೆಯಲ್ಲಿ ರಿಲ್ಯಾಕ್ಸ್ ಆಗಲು ನಿರ್ಧರಿಸಿದ್ದ ಕುನಾಲ್, ಅದನ್ನು ರದ್ದು ಮಾಡಿ ಮತ್ತೊಂದು ಹಾಡಿಗೆ ದನಿಯಾಗಲು ನಿರ್ಧರಿಸಿದರು. ನಂತರ- ತರಾತುರಿಯಲ್ಲಿ ‘ನೀನೇ ನೀನೆ’ ಹಾಡನ್ನು ಇಂಗ್ಲಿಷ್ ಹಾಗೂ ಹಿಂದಿ ಅಕ್ಷರಗಳಲ್ಲಿ ಬರೆಯಲಾಯಿತು. (ಕುನಾಲ್ಗೆ ಕನ್ನಡ ಓದಲು ಬರುವುದಿಲ್ಲವಲ್ಲ; ಅದಕ್ಕೆ) ಅದನ್ನು ಕುನಾಲ್ಗೆ ದಾಟಿಸಿ ನಾಳೆ ಬೆಳಗ್ಗೆ ಹಾಡಲು ಸಾಧ್ಯವೆ ಎಂದು ಕೇಳಿದರೆ-‘ಓಯೆಸ್, ನಾನು ರೆಡಿ’ ಎಂದೇ ಬಿಟ್ಟರು ಕುನಾಲ್. ನಂತರ, ಅವರನ್ನು ಎದುರಿಗೆ ಕೂರಿಸಿಕೊಂಡ ರಾಘವೇಂದ್ರ ರಾಜ್ಕುಮಾರ್- ‘ನೀನೆ ನೀನೆ…’ ಹಾಡನ್ನು ಹೇಗೆ ಹಾಡಬೇಕು ಎಂದು ವಿವರಿಸಿದ್ದಲ್ಲದೆ, ಒಂದೆರಡು ಬಾರಿ ತಾವೇ ಹಾಡಿ ತೋರಿಸಿದರು.
ಅವತ್ತು ರಾತ್ರಿ ಗೆಳೆಯ ಪ್ರಕೃತಿ ಬನವಾಸಿಯನ್ನು ಎದುರಿಗೆ ಕೂರಿಸಿಕೊಂಡು ನೀನೇ ನೀನೇ ಹಾಡಿನ ರಿಹರ್ಸಲ್ ಆರಂಭಿಸಿಯೇ ಬಿಟ್ಟರು ಕುನಾಲ್. ಆಗ ಒಂದು ತಮಾಷೆ ನಡೆಯಿತು. ಇಂಗ್ಲಿಷ್ ಹಾಗೂ ಹಿಂದಿ ಅಕ್ಷರಗಳಲ್ಲಿ ಕನ್ನಡದ ಹಾಡು ಬರೆದುಕೊಂಡಿದ್ದ ಕಾರಣದಿಂದ ‘ನೀನೆ ನೀನೆ’ ಎಂಬುದನ್ನು ‘ನಿನ್ನೆ ನಿನ್ನೆ’ ಎಂದು ಹಾಡುತ್ತಿದ್ದರು ಕುನಾಲ್. ತಕ್ಷಣವೇ ಗೆಳೆಯನನ್ನು ತಡೆದ ಪ್ರಕೃತಿ ಬನವಾಸಿ, ನಿನ್ನೆ ಞಛಿZo ಉಖSಉಈಅ. ನೀನೆ ಞಛಿZo uಖಿ. ನೀನು ಹೇಳಬೇಕಿರೋದು ‘uಖಿ’ಎಂಬ ಭಾವದಲ್ಲಿ ಎಂದರಂತೆ. ನಂತರ ಇಡೀ ಹಾಡಿನ ಭಾವವನ್ನು ಒಂದೊಂದೇ ಪದ ಬಿಡಿಸಿ ವಿವರಿಸಿ ಹೇಳಿದರಂತೆ.
ಈವರೆಗೂ ರಿಹರ್ಸಲ್ ಮಾಡಿದ್ದು ತಪ್ಪು ತಪ್ಪು ಉಚ್ಛಾರದೊಂದಿಗೆ ಎಂದು ಗೊತ್ತಾದಾಗ ಒಂದರೆಕ್ಷಣ ಪೆಚ್ಚಾದ ಕುನಾಲ್, ನಂತರ- ಹೊಸದಾಗಿ ಕಲಿತಿದ್ದನ್ನು ಗುನುಗುತ್ತಾ ಮತ್ತೆ ನಡುರಾತ್ರಿ ಒಂದೂವರೆಯತನಕ ಅಭ್ಯಾಸ ಮಾಡಿದರಂತೆ. ಅದರ ಮರುದಿನವೇ ಬೆಳಗ್ಗೆ ೭.೩೦ಗೆ ಆಕಾಶ್ ಸ್ಟುಡಿಯೋದಲ್ಲಿ ಹಾಡಿನ ಧ್ವನಿಮುದ್ರಣವಿತ್ತು. ರಾತ್ರಿ ಸುಸ್ತಾಗುವವರೆಗೂ ಹಾಡಿ ಮಲಗಿದ ಕುನಾಲ್, ಬೆಳಗ್ಗೆ ಎದ್ದ ತಕ್ಷಣ ಎರಡು ಮಗ್ ತುಂಬಾ ಟೀ ತರಿಸಿಕೊಂಡು ಕುಡಿದು-ಪ್ರಕೃತಿಯ ಮುಂದೆ ಮತ್ತೆ ಹಾಡಿದರು. ಆಗಲೇ ಪಲ್ಲವಿಯ ಕಡೆಯ ಸಾಲನ್ನು ‘ನೀನು ಇರಾದ ಮೇಲೆ’ ಎಂದು ಒಮ್ಮೆ, ‘ನೀನು ಇರದ್ ಮೇಲೆ’ ಎಂದು ಮತ್ತೊಮ್ಮೆ ಹೇಳಿದ್ದನ್ನು ಪ್ರಕೃತಿ ಗಮನಿಸಿದರು. ನಂತರ ಆ ಪದದ ಅರ್ಥ ವಿವರಿಸಿ ಅದನ್ನು ಹಿಂದಿಯಲ್ಲಿ ಬರೆದು ತೋರಿಸಿ, ತಾವೂ ಒಂದು ಬಾರಿ ಹಾಡಿ ತೋರಿಸಿ ‘ಹೀಗೆ ಹಾಡ್ಬೇಕಪ್ಪಾ ದೊರೇ’ ಎಂದರಂತೆ.
ಎಲ್ಲವನ್ನೂ ತಾಳ್ಮೆಯಿಂದ ಆಲಿಸಿ, ಗೆಳೆಯನ ಮನೆಯಲ್ಲೇ ಮತ್ತೆ ಮತ್ತೆ ರಿಹರ್ಸಲ್ ನಡೆಸಿದ ಕುನಾಲ್ ಕಡೆಗೊಮ್ಮೆ – ‘ಸ್ಟುಡಿಯೋಗೆ ಹೋಗೋಣ. ಹಾಡಲು ನಾನು ರೆಡಿ’ ಎಂದರು. ಬೆಳಗ್ಗೆ ಏಳೂವರೆಗೆ ಆಕಾಶ್ ಸ್ಟುಡಿಯೋಗೆ ಹೋಗಿದ್ದಾಯ್ತು. ಜತೆಗೇ ಬಂದ ರಾಘವೇಂದ್ರ ರಾಜ್ಕುಮಾರ್ ಒಂದಿಷ್ಟು ಅಮೂಲ್ಯ ಸಲಹೆ ನೀಡಿದರು. ಈ ಹಾಡು ಅದ್ಭುತವಾಗಿ ಮೂಡಿಬರಲು ಈ ಸಲಹೆಯೇ ಮುಖ್ಯ ಕಾರಣವಾಯಿತು. ಒಂಬತ್ತೂವರೆಯ ಹೊತ್ತಿಗೆಲ್ಲಾ ಕನ್ನಡ ಬಾರದವರೂ ಕೂಡ ಚಪ್ಪಾಳೆ ಹೊಡೆಯುವಷ್ಟರ ಮಟ್ಟಿಗೆ-‘ನೀನೇ ನೀನೇ’ ಹಾಡನ್ನು ಕುನಾಲ್ ಹಾಡಿ ಮುಗಿಸಿದ್ದರು.
ಅಮರಾಮಧುರಾ ಎಂಬಂಥ ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ರಾಘವೇಂದ್ರ ರಾಜ್ಕುಮಾರ್, ಒಮ್ಮೆ ಅಪ್ಪಾಜಿಯ ಮುಂದೆ ಹಾಡ್ತೀರಾ ಎಂದರಂತೆ. ಆ ಅವಕಾಶಕ್ಕಾಗಿಯೇ ಕಾದಿದ್ದ ಕುನಾಲ್-‘ ಡಾ. ರಾಜ್ಕುಮಾರ್ ಮುಂದೆ ಹಾಡಬೇಕು ಅನ್ನೋದು ನನ್ನ ಬದುಕಿನ ದೊಡ್ಡ ಕನಸು’ ಎಂದರಂತೆ. ಮುಂದೆ ಸದಾಶಿವನಗರದ ಅಣ್ಣಾವ್ರ ಮನೆಗೇ ಬಂದ ಕುನಾಲ್, ದೇವರ ಮುಂದೆ ನಿಂತ ಭಕ್ತನಂತೆ ಮೈಮರೆತು ಹಾಡಿದರು. ಅವರ ಸಿರಿಕಂಠವನ್ನು ಬಹುವಾಗಿ ಇಷ್ಟಪಟ್ಟ ರಾಜಣ್ಣ, ತಾಳ ಹಾಕುತ್ತಾ ಆನಂದಪಟ್ಟರು ! ಅಷ್ಟೇ ಅಲ್ಲ, ಮನೆಗೆ ಬಂದವರಿಗೆಲ್ಲ ಆ ಹಾಡು ಕೇಳಿಸಿ, ನನಗೆ ತುಂಬಾ ಇಷ್ಟವಾದ ಹಾಡಿದು ಎಂದು ಹೇಳಿ ಸಂಭ್ರಮಿಸಿದರು.
ಮುಂದೆ ಸಿನಿಮಾ ಬಿಡುಗಡೆಯಾದಾಗ, ಈ ಸಂಭ್ರಮ ಸಮಸ್ತ ಕನ್ನಡಿಗರದ್ದೂ ಆಯಿತು !

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: