ಕಣ್ಣಂಚಿನ ಈ ಮಾತಲಿ…

ಚಿತ್ರ: ದಾರಿ ತಪ್ಪಿದ ಮಗ. ಗೀತೆರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ಜಿ.ಕೆ. ವೆಂಕಟೇಶ್, ಗಾಯನ: ಪಿ.ಬಿ. ಶ್ರೀನಿವಾಸ್.

ಕಣ್ಣಂಚಿನ ಈ ಮಾತಲಿ ಏನೇನು ತುಂಬಿದೆ
ಕವಿ ಕಾಣದ ಶೃಂಗಾರದ ರಸಕಾವ್ಯ ಇಲ್ಲಿದೇ ||ಪ||

ನವಯೌವನ ಹೊಂಗನಸಿನ ಮಳೆಬಿಲ್ಲು ತಂದಿದೆ
ನಸು ನಾಚುತ ಹೊಸ ಪ್ರೇಮದ ಕುಡಿಯಿಲ್ಲಿ ಚಿಗುರಿದೇ
ನೂರಾಸೆಯ ನೆಲೆಯಾಗಿದೆ
ಮಧುಚಂದ್ರದ ಮಧುಮೈತ್ರಿಯ ನಿರೀಕ್ಷೆ ಅಲ್ಲಿದೇ ||೧ ||

ಪ್ರತಿ ಪ್ರೇಮಿಯ ಬಾಳಲ್ಲಿಯೂ ಶುಭರಾತ್ರಿ ಒಂದಿದೇ
ಅನುರಾಗದ ಆ ವೇಳೆಗೆ ಮನ ಕಾದು ನಿಂತಿದೇ
ಸರಿಜೋಡಿಯು ಕಣ್ಣರಸಿದೆ
ಹಿರಿಜೋಡಿಯು ಸವಿ ನೆನಪಲಿ ಜಗವನ್ನೆ ಮರೆತಿದೆ ||೨||

ಅದು ಪತ್ರಿಕೋದ್ಯಮ ಇರಬಹುದು, ಚಿತ್ರರಂಗ ಇರಬಹುದು, ಕ್ರೀಡಾ ರಂಗ ಇರಬಹುದು, ಸಾಹಿತ್ಯ ಕ್ಷೇತ್ರವಿರಬಹುದು ಅಥವಾ ಈಗಿನ ಸಾಫ್ಟ್ವೇರ್ ಉದ್ಯಮವೇ ಆಗಿರಬಹುದು. ಈ ಎಲ್ಲ ಕ್ಷೇತ್ರಗಳಲ್ಲೂ ‘ದಿಗ್ಗಜರು’ ಎನಿಸಿಕೊಂಡ ಜನ ಇರುತ್ತಾರೆ. ಅವರ ಮಧ್ಯೆ ಪೈಪೋಟಿ ಇರುತ್ತದೆ. ವ್ಯಕ್ತಿತ್ವ-ವ್ಯವಹಾರದಲ್ಲಿ ವ್ಯತ್ಯಾಸವಿರುತ್ತದೆ. ಅಭಿರುಚಿಗಳೂ ಭಿನ್ನವಾಗಿರುತ್ತವೆ. ಈ ‘ವಿಐಪಿ’ಗಳನ್ನೇ ಬೆರಗಿನಿಂದ ನೋಡುವ ಜನಸಾಮಾನ್ಯರು, ಒಂದೇ ಕ್ಷೇತ್ರದಲ್ಲಿ ಹೆಸರು ಮಾಡಿದ ‘ದಿಗ್ಗಜರ’ ಮಧ್ಯೆ ಮೈಮನಸ್ಸು ಇರಬಹುದೇನೋ ಎಂದೇ ಭಾವಿಸಿರುತ್ತಾರೆ. ಅದನ್ನೇ ನಂಬಿಯೂ ಇರುತ್ತಾರೆ.
ಹೀಗಿದ್ದಾಗಲೇ ‘ಒಂದೇ ಕ್ಷೇತ್ರದ ದಿಗ್ಗಜರು’ ಅಕ್ಕ ಪಕ್ಕ ಕೂತು ತಿಂಡಿ ತಿಂದರೆ; ಪರಸ್ಪರ ಕೈ ಕುಲುಕಿ ಶುಭಾಶಯ ಹೇಳಿಕೊಂಡರೆ ಅದು ವಿಶೇಷ ಸುದ್ದಿ ಅನಿಸುವುದು ಇದೇ ಕಾರಣಕ್ಕೆ. ಭಿನ್ನ ಯೋಚನೆಯ ಕುವೆಂಪು-ಬೇಂದ್ರೆ; ಭಿನ್ನ ಚಿಂತನೆಯ ಲಂಕೇಶ್- ಅನಂತಮೂರ್ತಿ; ವಿಭಿನ್ನ ಹಾದಿಯ ಇಂದಿರಾ-ಲೋಹಿಯಾ; ರಾಜ್ಕುಮಾರ್- ಪುಟ್ಟಣ್ಣ ಕಣಗಾಲ್, ಕೆ. ಶಾಮರಾವ್-ವೈಯೆನ್ಕೆ; ನಾರಾಯಣಮೂರ್ತಿ ಅಜೀಮ್ಪ್ರೇಮ್ಜಿ ಜತೆಗಿರುವ ಫೋಟೋಗಳು ಕಂಡಾಗ, ವಾಹ್ ಈ ಅಪರೂಪದ ದೃಶ್ಯವನ್ನು ಯಾವಾಗ, ಎಲ್ಲಿ ಸೆರೆಹಿಡಿದರು ಎಂದು ಖುಷಿ ಹಾಗೂ ಬೆರಗಿನಿಂದ ಉದ್ಗರಿಸುವಂತಾಗುತ್ತದೆ. ಒಂದೇ ಕ್ಷೇತ್ರದ ಪ್ರಖ್ಯಾತರ ಮಧ್ಯೆ ಗಳಸ್ಯ ಕಂಠಸ್ಯ ಎಂಬಂಥ ಗೆಳೆತನವಿದೆ ಎಂದು ಗೊತ್ತಾದರೆ ಒಂಥರಾ ಖುಷಿಯಾಗುತ್ತದೆ. ಯಾಕೋ…
೭೦ ಹಾಗೂ ೮೦ರ ದಶಕದ ಬ್ಯುಸಿ ಬ್ಯುಸಿ ಗೀತೆರಚನೆಕಾರರು ಎಂದೇ ಹೆಸರಾಗಿದ್ದ ವಿಜಯನಾರಸಿಂಹ, ಆರ್.ಎನ್. ಜಯಗೋಪಾಲ್ ಹಾಗೂ ಚಿ. ಉದಯಶಂಕರ್ರ ಗೆಳೆತನ ಎಂಥದಿತ್ತು ಎಂದು ವಿವರಿಸುವ ಮುನ್ನ ಮೇಲಿನ ಮಾತುಗಳನ್ನು ಹೇಳಬೇಕಾಯಿತು. ಎಲ್ಲರೂ ಬಲ್ಲಂತೆ, ವಿಜಯ ನಾರಸಿಂಹ ಹಾಗೂ ಜಯಗೋಪಾಲ್ ಅವರು, ಹೆಚ್ಚಾಗಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳಿಗೆ ಹಾಡು ಬರೆದರು. ಇತ್ತ ಉದಯಶಂಕರ್, ರಾಜ್ ಅಭಿನಯದ ಎಲ್ಲ ಚಿತ್ರಗಳ ಜೀವನಾಡಿಯಂತಿದ್ದರು. ಬೇರೆ ನಟರ ಅಭಿನಯದ ಚಿತ್ರಗಳಿಗೆ ಈ ಮೂವರ ಪೈಕಿಯೇ ಯಾರಾದರೂ ಒಬ್ಬರಿಗೆ ಹಾಡು ಬರೆವ ಅವಕಾಶ ಸಿಗುತ್ತಿತ್ತು. ಸ್ವಾರಸ್ಯವೇನೆಂದರೆ, ಯಾವುದೇ ಸಂದರ್ಭದಲ್ಲೂ ವಿಜಯನಾರಸಿಂಹ, ಆರ್.ಎನ್.ಜೆ. ಹಾಗೂ ಚಿ. ಉದಯಶಂಕರ್ ಮಧ್ಯೆ ವೃತ್ತಿ ಮಾತ್ಸರ್ಯ ಬೆಳೆಯಲಿಲ್ಲ. ಬದಲಿಗೆ, ಮೂವರೂ ಒಂದೇ ಕುಟುಂಬದವರಂತೆ ಬದುಕಿಬಿಟ್ಟರು.
ಈ ಮೂವರೂ ಚಿತ್ರಸಾಹಿತಿಗಳೊಂದಿಗೆ ಆಪ್ತ ಒಡನಾಟ ಹೊಂದಿದ್ದವರು ‘ಮಲ್ಲಿಗೆ’ ಮಾಸಿಕದ ಸಂಪಾದಕರಾದ ಶ್ರೀಧರಮೂರ್ತಿ. ಒಂದು ಕಡೆಯಲ್ಲಿ ಅವರು ಹೀಗೆ ಬರೆದಿದ್ದಾರೆ: ಆರ್ಎನ್ಜೆ, ಉದಯಶಂಕರ್ ಹಾಗೂ ವಿಜಯ ನಾರಸಿಂಹ ಅವರ ಮಧ್ಯೆ ತಮಾಷೆಗೂ ಒಂದೇ ಒಂದು ಭಿನ್ನಾಭಿಪ್ರಾಯ ಬರಲಿಲ್ಲ. ಅವರು ಸದಾ ಪರಸ್ಪರರನ್ನು ಪ್ರೋತ್ಸಾಹಿಸಲು, ಅವರ ಕಷ್ಟಕ್ಕೆ ಸ್ಪಂದಿಸಲು ತುದಿಗಾಲ ಮೇಲೆ ನಿಂತಿರುತ್ತಿದ್ದರು. ವಿಜಯ ನಾರಸಿಂಹ ಅವರು ‘ಮಾಂಗಲ್ಯ ಭಾಗ್ಯ’ ಚಿತ್ರಕ್ಕೆ ‘ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ’ ಎಂಬ ಅಪರೂಪದ ಹಾಡು ಬರೆದಾಗ, ಅವರಿಗೆ ಅಭಿನಂದನೆ ಹೇಳಲೆಂದು ಪೋನ್ ಮಾಡಿದರು ಉದಯಶಂಕರ್. ಆ ಕಡೆಯಿಂದ ‘ಹಲೋ’ ಎಂದವರು, ವಿಜಯನಾರಸಿಂಹರ ಪತ್ನಿ ಸರಸ್ವತಿ. ಉದಯಶಂಕರ್ ತಕ್ಷಣವೇ-‘ಅಮ್ಮಾ, ಆಸೆಯ ಭಾವ ಇದ್ದಾರಾ?’ ಎಂದು ಕೇಳಿದ್ದರಂತೆ. ಆಸೆಯ ಭಾವ ಅಂದ್ರೆ ಯಾರು ಎಂಬುದು ಸರಸ್ವತಿಯವರ ಮರುಪ್ರಶ್ನೆ. ಆಸೆಯ ಭಾವ ಅಂದ್ರೆ ಅವರೇ ಆಸೆಯ ಭಾವ ಎಂದ ಉದಯ ಶಂಕರ್, ನಂತರ ಹೀಗೇ ನಾಲ್ಕಾರು ನಿಮಿಷ ಸತಾಯಿಸಿ, ನಂತರವೇ ವಿಷಯ ತಿಳಿಸಿ, ಘೊಳ್ಳನೆ ನಕ್ಕರಂತೆ.
ಇನ್ನು ಆರ್ಎನ್ಜೆ ಹಾಗೂ ಉದಯಶಂಕರ್ರ ಗೆಳೆತನದ ಬಗ್ಗೆ ಕೇಳಿ: ನಾವಿಬ್ಬರೂ ಜತೆಯಾಗಿಯೇ ಬೆಳೆಯೋಣ ಎಂಬ ಭಾವವೊಂದು ಇಬ್ಬರಲ್ಲೂ ಇತ್ತು. ಮೊದಲಿಗೆ, ‘ಗೆಜ್ಜೆ ಪೂಜೆ’ ಚಿತ್ರಕ್ಕೆ ಹಾಡು ಬರೆಯಲು ಗೊತ್ತಾಗಿದ್ದವರು ಆರ್. ಎನ್.ಕೆ. ಅವರು ‘ಗಗನವು ಎಲ್ಲೋ ಭೂಮಿಯು ಎಲ್ಲೋ…‘ ಹಾಡು ಬರೆದ ನಂತರ, ಒಂದು ಸಂಭ್ರಮದ ಹಾಡು ಬೇಕು. ಬರೆದುಕೊಡಿ ಅಂದರಂತೆ ಪುಟ್ಟಣ್ಣ. ಅದಕ್ಕೆ ಆರ್ಎನ್ಜೆ- ‘ನಾನಿನ್ನೂ ಗಗನವು ಎಲ್ಲೋ ಹಾಡಿನ ಹ್ಯಾಂಗೋವರ್ನಲ್ಲೇ ಇದೀನಿ. ಹಾಗಾಗಿ ಸಂಭ್ರಮದ ಹಾಡನ್ನು ಉದಯಶಂಕರ್ ಕೈಲಿ ಬರೆಸೋಣ’ ಅಂದರಂತೆ. ಪರಿಣಾಮ- ‘ಹೆಜ್ಜೆ ಹೆಜ್ಜೆಗು ಹೊನ್ನೇ ಸುರಿಯಲಿ…’ ಹಾಡು ಬರೆದರು ಚಿ.ಉ. ಹಾಗೆಯೇ ‘ಬಯಸದೇ ಬಂದ ಭಾಗ್ಯ’ ಚಿತ್ರಕ್ಕೆ ಆರ್ಎನ್ಜೆ ಬಾಂಬೆಯಲ್ಲಿ ಬರೆದಿದ್ದ ‘ಮುತ್ತಿನಾ ಹನಿಗಳೂ, ಸುತ್ತಲೂ ಮುತ್ತಲೂ…’ ಹಾಡು ಹೊಂದುತ್ತೆ ಅನ್ನಿಸಿದಾಗ-‘ಆ ಹಾಡು ಕೊಡಯ್ಯಾ’ ಎಂದಿದ್ದರು ಉದಯಶಂಕರ್.
ಕೆ.ಸಿ.ಎನ್. ಮೂವೀಸ್ ನಿರ್ಮಾಣದ, ಪೆಕೇಟಿ ಶಿವರಾಂ ನಿರ್ದೇಶನದ ‘ದಾರಿ ತಪ್ಪಿದ ಮಗ’ ಚಿತ್ರದ ಸಾಹಿತ್ಯ ರಚನೆಯ ಕೆಲಸ ಶುರುವಾಯಿತಲ್ಲ? ಆಗ ಒಂದು ಸಂದರ್ಭಕ್ಕೆ ಭಕ್ತಿಗೀತೆ, ಆರತಕ್ಷತೆಯಲ್ಲಿ ನಾಯಕ ಹಾಡುವ ಸಂದರ್ಭಕ್ಕೆ ಇನ್ನೊಂದು ಗೀತೆ ಬೇಕು ಎಂದರಂತೆ ಶಿವರಾಂ. ತಕ್ಷಣವೇ- ಭಕ್ತಿಗೀತೆಯನ್ನು ವಿಜಯ ನಾರಸಿಂಹ ಅವರಿಂದ, ಆರತಕ್ಷತೆಯ ಹಾಡನ್ನು ಜಯಗೋಪಾಲ್ ಅವರಿಂದ ಬರೆಸೋಣ. ಉಳಿದವನ್ನು ನಾನು ಬರೀತೀನಿ. ಆಗ ವೆರೈಟಿ ಇರುತ್ತೆ’ ಎಂದರಂತೆ ಉದಯಶಂಕರ್.
ತತಲವಾಗಿ- ‘ಕಾಪಾಡು ಶ್ರೀ ಸತ್ಯ ನಾರಾಯಣಾ’ ಗೀತೆಯನ್ನು ವಿಜಯನಾರಸಿಂಹ ರಚಿಸಿದರು. ‘ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ…’ ಗೀತೆಯನ್ನು ಜಯಗೋಪಾಲ್ ಬರೆದರು. ಸ್ವಾರಸ್ಯ ಕೇಳಿ: ‘ಕಣ್ಣಂಚಿನ ಈ ಮಾತಲಿ…’ ಹಾಡಿಗೂ ಮೊದಲೇ ಆರತಕ್ಷತೆಯ ದೃಶ್ಯಕ್ಕೆಂದೇ ಜಯಗೋಪಾಲ್ ಬೇರೊಂದು ಹಾಡು ಬರೆದಿದ್ದರು. ಅದನ್ನು ಡಾ. ರಾಜ್ಕುಮಾರ್, ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಹಾಗೂ ನಿರ್ಮಾಪಕ-ನಿರ್ದೇಶಕರಿಗೂ ತೋರಿಸಿದ್ದರು. ಹಾಡಿನ ಸಾಹಿತ್ಯ ಗಮನಿಸಿದ ನಿರ್ದೇಶಕರು-‘ಸರ್, ಇದರ ಬದಲು ಬೇರೊಂದು ಹಾಡು ಕೊಡಲು ಸಾಧ್ಯವೆ?’ ಅಂದಿದ್ದಾರೆ. ಅವತ್ತೇ ಸಂಜೆ ಆರ್ಎನ್ಜೆ ಅವರನ್ನು ಸಂಪರ್ಕಿಸಿದ ಬೇರೊಬ್ಬ ನಿರ್ಮಾಪಕರು ಒಂದು ಸಂದರ್ಭ ಹೇಳಿ, ಇದಕ್ಕೆ ಹೊಂದುವಂಥ ಹಾಡು ಬೇಕು ಅಂದರಂತೆ. ಕಾಕತಾಳೀಯ ಎಂಬಂತೆ ‘ದಾರಿ ತಪ್ಪಿದ ಮಗ’ ಚಿತ್ರದ ಆರತಕ್ಷತೆ ಸಂದರ್ಭಕ್ಕೆಂದು ಮೊದಲು ಬರೆದಿದ್ದರಲ್ಲ? ಆ ಹಾಡು ಖಡಕ್ ಎಂಬಂತೆ ಬೇರೆ ನಿರ್ಮಾಪಕರು ಹೇಳಿದ ಸಂದರ್ಭಕ್ಕೂ ಹೊಂದಿಕೆಯಾಗುತ್ತಿತ್ತು. ಹಾಗಾಗಿ ಹೇಗಿದ್ದರೂ ನಿರ್ದೇಶಕರು ಬೇಡ ಎಂದಿದ್ದಾರಲ್ಲ ಎಂದು ಯೋಚಿಸಿದ ಆರ್ಎನ್ಜೆ ಅದನ್ನು ಕೊಟ್ಟೂಬಿಟ್ಟರು.
ಮರುದಿನ, ದೊಡ್ಡಬಳ್ಳಾಪುರದ ಬಳಿ ಶೂಟಿಂಗ್ ಸ್ಥಳಕ್ಕೆ ಹೋದ ಆರ್.ಎನ್.ಜೆ. ಎಲ್ಲ ವಿಷಯ ತಿಳಿಸಿದರಂತೆ. ಅದನ್ನು ಕೇಳಿದ ರಾಜ್, ಏನೊಂದೂ ಮಾತಾಡದೆ ಪೆಚ್ಚಾಗಿ ನಿಂತುಬಿಟ್ಟರಂತೆ. ಆನಂತರ ತಿಳಿದುಬಂದದ್ದೇನೆಂದರೆ -ಕೈ ತಪ್ಪಿ ಹೋದ ಆ ಗೀತೆಯ ಸಾಹಿತ್ಯವನ್ನು ರಾಜ್ಕುಮಾರ್ ವಿಪರೀತ ಇಷ್ಟಪಟ್ಟಿದ್ದರು ! ಎಂದೂ ಯಾರಿಗೂ ರೇಗಿ ಅಭ್ಯಾಸವಿರದ ರಾಜ್- ಛೆ, ಒಂದು ಒಳ್ಳೆಯ ಹಾಡು ಕೈ ತಪ್ಪಿ ಹೋಯ್ತಲ್ಲ ಎಂದು ತಮ್ಮಷ್ಟಕ್ಕೆ ತಾವೇ ಹೇಳಿಕೊಂಡೇ ಶಥಪಥ ತಿರುಗಾಡುತ್ತಿದ್ದರಂತೆ.
ಇದನ್ನು ಗಮನಿಸಿದ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್, ಸೀದಾ ರಾಜ್ ಬಳಿ ಬಂದು-’ಯೋಚನೆ ಮಾಡಬೇಡ ತಮ್ಮಯ್ಯಾ. ಬೇರೆ ಟ್ಯೂನ್ ಕೊಡ್ತೇನೆ. ಆರ್ಎನ್ಜೆ ಅವರಿಂದಲೇ ಇನ್ನೊಂದು ಒಳ್ಳೆಯ ಹಾಡು ಬರೆಸೋಣ’ ಎಂದರಂತೆ. ನಂತರ, ಒಟ್ಟು ಎಂಟು ಟ್ಯೂನ್ಗಳನ್ನೂ ಕೇಳಿಸಿದರಂತೆ. ಆ ಪೈಕಿ ಒಂದು ಟ್ಯೂನ್ ರಾಜ್ಗೆ ವಿಪರೀತ ಇಷ್ಟವಾಯಿತಂತೆ. ಅವರು ಆರ್ಎನ್ಜೆ ಬಳಿ ಬಂದು, ತುಂಬ ವಿನಯದಿಂದ ಈ ಟ್ಯೂನ್ ನನಗೆ ಇಷ್ಟ ಆಯ್ತು ಸಾರ್’ ಅಂದರಂತೆ.
ಹೀಗೆ ಹೇಳುವಾಗ ರಾಜ್ ಅವರ ಮಾತು-ನೋಟದಲ್ಲಿ ಒಂದು ಒಳ್ಳೆಯ ಹಾಡು ಕಳೆದುಕೊಂಡ ಬೇಸರ ಹಾಗೂ ಹೊಸ ಹಾಡು ನಿರೀಕ್ಷಿಸಿದವರ ಕಾತರ ಎರಡೂ ಇತ್ತು. ಹೇಳಬೇಕಿದ್ದ ಎಲ್ಲ ಮಾತುಗಳನ್ನೂ ಅವರ ಕಂಗಳೇ ಹೇಳುತ್ತಿದ್ದವು ಆ ಕ್ಷಣಕ್ಕೆ ಹೊಸದೊಂದು ಆಟಿಕೆ ಕಳೆದುಕೊಂಡ ಮಗುವಿನಂತೆ ನಿಂತಿದ್ದ ರಾಜ್ ಅವರನ್ನೇ ಮತ್ತೊಮ್ಮೆ ದಿಟ್ಟಿಸಿ ನೋಡಿದರು ಆರ್ಎನ್ಜೆ. ರಾಜ್ಕುಮಾರ್ ಅವರ ಕಂಗಳು, ಮಾತಿಗೆ ಮೀರಿದ್ದನ್ನು ಹೇಳುತ್ತಿವೆ ಅನ್ನಿಸಿತು. ಮರುಕ್ಷಣವೇ ಆರ್ಎನ್ಜೆ ಅವರಿಗೆ ‘ಕಣ್ಣಂಚಿನ ಈ ಮಾತಲಿ ಏನೆನೋ ತುಂಬಿದೆ’ ಎಂಬ ಭವ್ಯದಿವ್ಯ ಸಾಲು ಹೊಳೆದುಬಿಟ್ಟಿತು.
ಈ ಸಾಲು ಗೀಚಿಕೊಂಡ ಆರ್ಎನ್ಜೆ, ಆರತಕ್ಷತೆಯ ಸಂದರ್ಭದಲ್ಲಿ ಮನುಷ್ಯರ ಯೋಚನೆ, ಭಾವನೆಗಳು ಹೇಗೆಲ್ಲಾ ಇರ್ತವೆ ಎಂದು ಅಂದಾಜು ಮಾಡಿಕೊಂಡರು. ಕೆಲವರು ಅವಸರದಲ್ಲಿ ಮದುವೆಯಾಗಿ, ಪ್ರಸ್ತದ ಶಾಸ್ತ್ರವನ್ನೂ ಅವಸರದಲ್ಲೇ ಮುಗಿಸಿಕೊಂಡು ಆನಂತರ ಆರತಕ್ಷತೆ ಇಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಆರತಕ್ಷತೆಯಂದೇ ‘ಪ್ರಸ್ತ’ದ ಸಂಭ್ರಮವನ್ನೂ ಇಟ್ಟುಕೊಂಡಿರುತ್ತಾರೆ ಎಂಬ ತುಂಟ ಯೋಚನೆಯೊಂದು ಆರ್ಎನ್ಜೆಗೆ ಬಂತು. ಅದನ್ನೇ ಮೊದಲ ಚರಣದಲ್ಲಿ ತಂದರು. ಅಷ್ಟೇ ಅಲ್ಲ, ಆರತಕ್ಷತೆ ಎಂಬುದು ಹಿರಿಯರಿಗೆ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುವ; ಬ್ರಹ್ಮಚಾರಿಗಳಿಗೆ ‘ಜೋಡಿ’ ಹುಡುಕುವ ಸಂದರ್ಭ ಕೂಡ ಹೌದು ಎಂಬ ಇನ್ನೊಂದು ಸತ್ಯವೂ ಆಗಲೇ ಹೊಳೆಯಿತು. ಅದನ್ನು ಎರಡನೇ ಚರಣದಲ್ಲಿ ತಂದು ನಿಂತಲ್ಲೇ ನಸುನಕ್ಕರು ಜಯಗೋಪಾಲ್. ಹೀಗೆ, ತೀರಾ ಆಕಸ್ಮಿಕವಾಗಿ ಹುಟ್ಟಿಕೊಂಡ ಹಾಡು- ‘ದಾರಿ ತಪ್ಪಿದ ಮಗ’ ಚಿತ್ರಕ್ಕೆ ಒಂದು ವಿಚಿತ್ರ ಶೋಭೆ ನೀಡಿತು.
ಈ ವಿವರವನ್ನೆಲ್ಲ ತಿಳಿದ ನಂತರ ಈಗ ಮತ್ತೊಮ್ಮೆ ಆ ಹಾಡು ಕೇಳಿ. ಹಾಡು ಶುರುವಾದ ಕ್ಷಣದಿಂದಲೇ ಎದುರು ನಿಂತ (ಕೂತ)ವರ ಕಣ್ಣಲ್ಲಿ ನೂರು ಭಾವ ಕಾಣದಿದ್ದರೆ ಕೇಳಿ…

3 Comments »

  1. 2
    vinayak Says:

    ರಾಜ್ಕುಮಾರ್ ಕೈ ತಪ್ಪಿದ, ಜಯಗೋಪಾಲ್ ಬರೆದ ಆ ಗೀತೆ ಯಾವುದು ಹೇಳ್ತೀರಾ…

  2. 3
    ಶಶಿಧರ್ Says:

    ದಯವಿಟ್ಟು ನಮ್ಮ ಕುತೂಹಲ ತಣಿಸಿ, ಆ ಮೊದಲು ಬರೆದ ತಪ್ಪಿಹೋದ ಆರತಕ್ಷತೆಯ ಗೀತೆ ಯಾವುದು?


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: