ಯಾರು ತಿಳಿಯರು ನಿನ್ನ..


ಚಿತ್ರ: ಬಭ್ರುವಾಹನ. ಗೀತೆರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಟಿ.ಜಿ. ಲಿಂಗಪ್ಪ. ಗಾಯನ: ಡಾ. ರಾಜ್‌ಕುಮಾರ್-ಪಿ.ಬಿ. ಶ್ರೀನಿವಾಸ್.

ಬಭ್ರುವಾಹನ: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ
ಸಮರದೋಳ್ ಗರ್ಜಿಸಿದ ಆ ನಿನ್ನ ವಿಜಯಗಳ ಮರ್ಮಾ
ಎಲ್ಲದಕು ಕಾರಣನು ಶ್ರೀ ಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನಾ
ಅವನಿಲ್ಲದೇ ಬಂದ ನೀನು ತೃಣಕ್ಕೆ ಸಮಾನ

ಅರ್ಜುನ: ಅಸಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೊ ವ್ಯಾಘ್ರನಿವನೋ
ಉಗ್ರಪ್ರತಾಪೀ….

ಬಭ್ರುವಾಹನ: ಓಹೊಹೊಹೊ… ಉಗ್ರಪ್ರತಾಪಿ…. ಆ…
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ
ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈ ಎಂದು
ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ
ಮಗನನ್ನು ಬಲಿಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೊ
ಖಂಡಿಸದೆ ಉಳಿಸುವೆ ಹೋಗೊ ಹೋಗೆಲೊ ಶಿಖಂಡೀ…

ಅರ್ಜುನ : ಫಡಫಡಾ ಶಿಖಂಡಿಯೆಂದಡಿಗಡಿಗೆ ನುಡಿಯ ಬೇಡಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತೆ ರಣಚಂಡಿ ಗೌತಣವೀವ ಈ ಗಾಂಢೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡಾ

ಬಭ್ರುವಾಹನ: ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಭಂಗ

ಅರ್ಜುನ: ಕದನದೊಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಬಭ್ರುವಾಹನ: ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ

ಅರ್ಜುನ: ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ
ಬಭ್ರುವಾಹನ: ಅಂತಕನಿಗೇ ಅಂತಕನು ಈ ಬಭ್ರುವಾಹನಾ

ಚಲನಚಿತ್ರ ಸಾಹಿತ್ಯದಲ್ಲಿ ಒಂದು ಸಿದ್ಧ ಸೂತ್ರವಿದೆ. ಏನೆಂದರೆ, ಚಿತ್ರಗೀತೆಗಳಲ್ಲಿ ಒಂದು ಚರಣ ಮುಗಿಯುತ್ತಿದ್ದಂತೆಯೇ ಮತ್ತೆ ಪಲ್ಲವಿ ಹಾಡಲಾಗುತ್ತದೆ. ನಂತರವೇ ಎರಡನೇ ಚರಣ ಆರಂಭವಾಗುತ್ತದೆ. ಆ ಚರಣ ಮುಗಿಯುತ್ತಿದ್ದಂತೆಯೇ ಮತ್ತೆ ಪಲ್ಲವಿ ಹಾಡಿ, ಮೂರನೇ ಚರಣ ಹಾಡಲಾಗುತ್ತದೆ.
ಇಂಥದೊಂದು ಸಿದ್ಧಸೂತ್ರವನ್ನು ಮುರಿದುಹಾಕಿದ್ದು ‘ಬಭ್ರುವಾಹನ’ ಚಿತ್ರದ ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ’ ಗೀತೆಯ ಹೆಗ್ಗಳಿಕೆ. ಇನ್ನೂ ಒಂದು ವಿಶೇಷವೆಂದರೆ ಎದುರಾಳಿಗಳಿಬ್ಬರು ತಮ್ಮ ಬಣ್ಣಿಸಿಕೊಂಡು, ಇದಿರ ಹಳಿದುಕೊಂಡು ಹಾಡುವ ಗೀತೆ ಕೂಡ ಬಹುಶಃ ಇದೊಂದೇ. ನಮ್ಮ ಸಿನಿಮಾ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ ಇಬ್ಬಿಬ್ಬರು ನಾಯಕರಿರುವ ಸಿನಿಮಾಗಳಲ್ಲಿ ಹೆಚ್ಚಿನ ಸಂದರ್ಭದಲ್ಲಿ ಕಥೆ ಹೀಗಿರುತ್ತದೆ: ವಿಯಾಟದ ಕಾರಣದಿಂದಲೋ ಅಥವಾ ಖಳನಾಯಕನ ಷಡ್ಯಂತ್ರದಿಂದಲೋ ನಾಯಕರು ಬೇರೆಯಾಗಿರುತ್ತಾರೆ. ಮುಂದೆ ಆಕಸ್ಮಿಕ ಸಂದರ್ಭದಲ್ಲಿ ಪರಸ್ಪರ ಭೇಟಿಯಾಗುತ್ತಾರೆ. ಆ ಖುಷಿಗೆ ಒಂದು ಹಾಡು ಶುರುವಾಗುತ್ತದೆ ಅಥವಾ ನಾಯಕರು ಜತೆಯಲ್ಲೇ ಇರುವ ಸಂದರ್ಭದಲ್ಲಿ ಇಬ್ಬರೂ ಅಮ್ಮನ ಹುಟ್ಟುಹಬ್ಬದ ದಿನ ಜತೆಯಲ್ಲಿ ಹಾಡು ಹೇಳುತ್ತಾರೆ. ಈ ಮಾತುಗಳಿಗೆ ಉದಾಹರಣೆಯಾಗಿ ‘ಕಳ್ಳ-ಕುಳ್ಳ’ದಲ್ಲಿ ದ್ವಾರಕೀಶ್-ವಿಷ್ಣುವರ್ಧನ್, ‘ಬೆಂಕಿ-ಬಿರುಗಾಳಿ’ಯಲ್ಲಿ ಶಂಕರ್‌ನಾಗ್-ವಿಷ್ಣುವರ್ಧನ್, ‘ಅಪೂರ್ವ ಸಂಗಮ’ದಲ್ಲಿ ಶಂಕರ್‌ನಾಗ್-ಡಾ. ರಾಜ್, ಶಂಕರ್‌ಗುರು ಚಿತ್ರದಲ್ಲಿ ಡಾ. ರಾಜ್ (ದ್ವಿಪಾತ್ರ), ‘ಕೆರಳಿದ ಸಿಂಹ’ ಚಿತ್ರದಲ್ಲಿ ರಾಜ್-ಶ್ರೀನಿವಾಸಮೂರ್ತಿ, ಹಾಗೂ ‘ಪಟ್ಟಣಕ್ಕೆ ಬಂದ ಪತ್ನಿಯರು’ ಸಿನಿಮಾದಲ್ಲಿ ಡಿಫರೆಂಟ್ ಎಂಬಂತಿರುವ ಲೋಕೇಶ್- ಶ್ರೀನಾಥ್ ಅಭಿನಯದಲ್ಲಿ ಇರುವ ಹಾಡುಗಳನ್ನು ನೆನಪುಮಾಡಿಕೊಳ್ಳಬಹುದು.
ಬಭ್ರುವಾಹನದ ಹಾಡಿನ ಪರಿಣಾಮವೇ ಬೇರೆ: ಇಲ್ಲಿ ಪರಸ್ಪರರ ಹೊಗಳಿಕೆ-ಟೀಕೆಗೆ ಈ ಹಾಡು ಬಳಕೆಯಾಗಿದೆ.
ಮಹಾಭಾರತದ ಅಶ್ವಮೇಧ ಪರ್ವದಲ್ಲಿ ಬಭ್ರುವಾಹನನ ಕಥೆ ಬರುತ್ತದೆ. ಈ ಕಥೆ ಎತ್ತಿಕೊಂಡು ೭೦ರ ದಶಕದಲ್ಲಿ ಬಭ್ರುವಾಹನ ಸಿನಿಮಾದ ಕಥೆ ಬರೆದು, ನಿರ್ದೇಶಿಸಿದವರು ಹುಣಸೂರು ಕೃಷ್ಣಮೂರ್ತಿ. ಆ ಚಿತ್ರದ ಪಾತ್ರ ಪೋಷಣೆ, ವೀರಾವೇಶದ ಡೈಲಾಗ್‌ಗಳು ಅದೆಷ್ಟು ಅದ್ಭುತವಾಗಿವೆ ಎಂದರೆ ಬಭ್ರುವಾಹನ-ಅರ್ಜುನರ ಕಾಳಗ ನಿಜಕ್ಕೂ ಹೀಗೆಯೇ ನಡೆದಿರಬಹುದು ಎಂಬ ಭಾವನೆ ಸಿನಿಮಾ ನೋಡಿದ ಎಲ್ಲರನ್ನೂ ಪದೇ ಪದೆ ಕಾಡುತ್ತದೆ. ಅದರಲ್ಲೂ ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ…’ ಹಾಡು-ವಾಹ್, ಅದೊಂದು ವಂಡರ್.
ಸ್ವಾರಸ್ಯ ಕೇಳಿ: ಬಭ್ರುವಾಹನ ಚಿತ್ರ ತಯಾರಿಕೆಗೆ ನಿರ್ಧರಿಸಿದಾಗ-‘ಯಾರು ತಿಳಿಯರು ನಿನ್ನ…’ ಹಾಡು ಅಳವಡಿಕೆಯ ಐಡಿಯಾ ಹುಣಸೂರು ಕೃಷ್ಣಮೂರ್ತಿಯವರಿಗೆ ಇರಲೇ ಇಲ್ಲ. ಯುದ್ಧರಂಗದಲ್ಲಿ ಅರ್ಜುನ-ಬಭ್ರುವಾಹನರು ಮುಖಾಮುಖಿಯಾದಾಗ ಒಂದೆರಡು ಡೈಲಾಗ್ ಹೇಳಿ ನಂತರ ಯುದ್ಧ ಆರಂಭಿಸುವ ಸಂದರ್ಭ ಹೆಣೆಯಲಾಗಿತ್ತು. ಆದರೆ, ಯುದ್ಧ ಸನ್ನಿವೇಶದ ಶೂಟಿಂಗ್ ವೇಳೆಯಲ್ಲಿ ‘ಅಲ್ಲಿಗೆ ಒಂದು ಹಾಡು ಹಾಕಿದರೆ ಚೆಂದ’ ಎಂಬ ಐಡಿಯಾ ಕೊಟ್ಟವರು ಡಾ. ರಾಜ್‌ಕುಮಾರ್! ಆನಂತರದಲ್ಲಿ ಹಾಡು ಹೇಗೆ ಸೃಷ್ಟಿಯಾಯ್ತು? ಗಾಯನದ ಸಂದರ್ಭದಲ್ಲಿ ಪೈಫೋಟಿಗೆ ಬಿದ್ದವರಂತೆ ಹಾಡಲು ಡಾ. ರಾಜ್ ಹಾಗೂ ಪಿ.ವಿ. ಶ್ರೀನಿವಾಸ್ ಅವರಿಗೆ ಹೇಗೆ ಸಾಧ್ಯವಾಯಿತು? ಸೀಸ ಪದ್ಯದಂಥ ಹಾಡನ್ನು ಹುಣಸೂರು ಕೃಷ್ಣಮೂರ್ತಿಯವರು ಹೇಗೆ ಬರೆದರು?
ಇಂಥವೇ ಕುತೂಹಲದ ಪ್ರಶ್ನೆಗಳಿಗೆ-ಬಭ್ರುವಾಹನ ಚಿತ್ರಕ್ಕೆ ಸಹಾಯಕ ನಿರ್ದೇಶಕರೂ; ಈ ಹಾಡು ಹುಟ್ಟಿದ ಸಂದರ್ಭಕ್ಕೆ ಸಾಕ್ಷಿಯೂ ಆಗಿರುವ ಭಾರ್ಗವ ಅವರು ಉತ್ತರಿಸಿದ್ದು ಹೀಗೆ:
‘ಬಭ್ರುವಾಹನ’ ಚಿತ್ರದ ಮುಖ್ಯವಾದ ಯುದ್ಧದ ಸನ್ನಿವೇಶಗಳ ಶೂಟಿಂಗ್ ನಡೆದದ್ದು ಮದ್ರಾಸಿನಲ್ಲಿ. ಅಲ್ಲಿ ಒಂದು ಒಣಗಿದ ಕೆರೆಯ ವಿಶಾಲವಾದ ಜಾಗ ಇತ್ತು. ಅಲ್ಲಿಯೇ ಎರಡೂ ಕಡೆಯ ಸೈನಿಕರ ಸೆಣೆಸಾಟದ ಶೂಟಿಂಗ್ ಆಯಿತು. ಅರ್ಜುನ ಮತ್ತು ಬಭ್ರುವಾಹನರ ಮುಖಾಮುಖಿ ಸಂದರ್ಭದಲ್ಲಿ ಕ್ಲೋಸಪ್ ದೃಶ್ಯಗಳಿದ್ದರೆ ಚನ್ನಾಗಿರುತ್ತೆ ಅನಿಸಿತು. ಹಾಗಾಗಿ ಅವರಿಬ್ಬರೂ ಎದುರಾಗುವ ಸಂದರ್ಭವನ್ನು ಕಂಠೀರವ ಸ್ಟುಡಿಯೋದಲ್ಲಿ ಲೈಟಿಂಗ್ ಬಳಸಿ ಶೂಟ್ ಮಾಡುವುದೆಂದು ನಿರ್ಧರಿಸಲಾಯಿತು.
ಅಂದುಕೊಂಡಂತೆಯೇ ಕಂಠೀರವದಲ್ಲಿ ಶೂಟಿಂಗ್ ಶುರುವಾಯಿತು. ಹೀಗಿದ್ದಾಗಲೇ ನನ್ನ ಬಳಿ ಬಂದ ಡಾ. ರಾಜ್- ‘ಭಾರ್ಗವ ಅವರೆ, ಇದು ಪೌರಾಣಿಕ ಸಿನಿಮಾ ನೋಡಿ; ಹಾಗಾಗಿ ಯುದ್ಧದ ಸಂದರ್ಭದಲ್ಲಿ ನಾಟಕದಲ್ಲಿ ಬರುವಂಥ ಸೀಸ ಪದ್ಯಗಳನ್ನು ಹಾಕಿದ್ರೆ ಆ ಸಂದರ್ಭ ಇನ್ನಷ್ಟು ಕಳೆಗಟ್ಟುತ್ತೆ. ಇದು ಕೇವಲ ಸಲಹೆ ಅಷ್ಟೆ. ಈ ವಿಷಯವನ್ನು ಒಮ್ಮೆ ಹುಣಸೂರು ಅವರ ಗಮನಕ್ಕೆ ತರ್ತೀ್ರಾ?’ ಎಂದರು.
(ಇಲ್ಲಿ ಇಂದು ಮಾತು ಹೇಳಬೇಕು. ಏನೆಂದರೆ-ತಮ್ಮ ಚಿತ್ರಗಳ ನಿರ್ದೇಶಕರ ಬಗ್ಗೆ ಡಾ. ರಾಜ್ ಅವರಿಗೆ ವಿಪರೀತ ಗೌರವವಿತ್ತು. ಅವರು ಯಾವ ಸಂದರ್ಭದಲ್ಲೂ ನಿರ್ದೇಶಕರಿಗೆ ಸೂಚನೆ ಕೊಡುತ್ತಿರಲಿಲ್ಲ. ಒಂದು ವೇಳೆ ಸಲಹೆ ನೀಡಬೇಕಾದರೆ, ಅದನ್ನು ಸಹಾಯಕ ನಿರ್ದೇಶಕರಿಗೆ ಮಾತ್ರ ಹೇಳುತ್ತಿದ್ದರು. ಇತ್ತ, ಹುಣಸೂರು ಕೃಷ್ಣಮೂರ್ತಿಯವರ ಕಥೆಯೂ ಅದೇ. ರಾಜ್‌ಕುಮಾರ್ ಅವರಂಥ ಮೇರು ನಟನಿಗೆ ಸಲಹೆ- ಸೂಚನೆ ನೀಡುವುದು ಹೇಗೆ ಎಂಬ ಸಂದಿಗ್ಧ ಅವರದು. ಇಂಥ ಸಂದರ್ಭಗಳಲ್ಲಿ ರಾಜ್-ಹುಣಸೂರು ಇಬ್ಬರೂ ಭಾರ್ಗವ ಅವರನ್ನು ಕರೆಯುತ್ತಿದ್ದರು. ಪರಸ್ಪರರ ಅನಿಸಿಕೆಗಳನ್ನು ತಿಳಿಸುತ್ತಿದ್ದರು. ಭಾರ್ಗವ ಅವರಿಗೆ ಒಂದು ರೀತಿಯಲ್ಲಿ ಸಂದೇಶವಾಹಕನ ಕೆಲಸ!)
ಸರಿ. ರಾಜ್ ಅವರ ಸಲಹೆಯನ್ನು ನಮ್ಮ ಚಿಕ್ಕಪ್ಪ ಹುಣಸೂರು ಅವರಿಗೆ ಹೇಳಿದೆ. ಈ ಸಲಹೆ ಅವರಿಗೆ ತುಂಬಾ ಹಿಡಿಸಿತು. ‘ನಿಜ. ರಾಜ್‌ಕುಮಾರ್ ಹೇಳಿರೋದು ಸರಿ. ಈ ಸನ್ನಿವೇಶಕ್ಕೆ ಒಂದು ಹಾಡು ಹಾಕಿದ್ರೇ ಚೆಂದ ಹಾಗೇ ಮಾಡೋಣ’ ಅಂದರು. ನಂತರ ಎರಡು ದಿನದ ಮಟ್ಟಿಗೆ ಶೂಟಿಂಗ್ ರದ್ದು ಪಡಿಸಿ ಹಾಡು ಬರೆಯಲೆಂದು ಮದ್ರಾಸಿಗೆ ಹೋಗಿಬಿಟ್ಟರು. ಅವರೊಂದಿಗೆ ನಾನೂ ಹೊರಟೆ. ರಾಜ್‌ಕುಮಾರ್ ಕೂಡ ಬಂದರು.
ಮರುದಿನವೇ ಹಾಡು ಬರೆಯಲು, ಅರ್ಜುನ-ಬಭ್ರುವಾಹನರ ವೀರಾವೇಶದ ಮಾತುಗಳಿಗೆ ಅಕ್ಷರ ರೂಪ ಕೊಡಲು ಮಾನಸಿಕವಾಗಿ ಸಿದ್ಧರಾದರು ಹುಣಸೂರು. ಅದೇ ವೇಳೆಗೆ ಡಾ. ರಾಜ್ ಹಾಗೂ ಪಿ.ಬಿ. ಶ್ರೀನಿವಾಸ್ ಕೂಡ ಅಲ್ಲಿಗೆ ಬಂದರು. ನಾವು ಮೂವರೂ ಒಂದು ಕಡೆ ಕೂತಿದ್ದಾಗಲೇ ಒಂದು ಚೀಟಿಯಲ್ಲಿ ಆರು ಸಾಲುಗಳ ಸೀಸ ಪದ್ಯ ಬರೆದ ಹುಣಸೂರು-‘ತಗೊಳ್ಳಿ, ಇದು ಬಭ್ರುವಾಹನ ಹಾಡುವಂಥಾದ್ದು’ ಎಂದರು. ಆ ಚೀಟಿಯನ್ನು ನಾನು ರಾಜ್‌ಕುಮಾರ್ ಅವರಿಗೆ ದಾಟಿಸಿದೆ. ಅದನ್ನು ರಾಜ್ ಒಮ್ಮೆ ಹಾಡಿ ತೋರಿಸಿದರು. ಐದಾರು ನಿಮಿಷಗಳ ನಂತರ ಇನ್ನೊಂದು ಚೀಟಿ ನೀಡಿದ ಹುಣಸೂರು-‘ಇದು ಅರ್ಜುನ ಹಾಡುವ ಸಾಲು’ ಎಂದರು. ಆ ಚೀಟಿ ಪಡೆದ ಪಿ.ಬಿ. ಶ್ರೀನಿವಾಸ್ ಅದನ್ನು ಹಾಡಿ ತೋರಿಸಿದರು.
ಆ ನಂತರದಲ್ಲಿ ಇದು ಅರ್ಜುನನದ್ದು; ಇದು ಬಭ್ರುವಾಹನನದ್ದು ಎಂದು ಹುಣಸೂರು ಅವರು ಚೀಟಿ ಕೊಡುವುದು; ಅದನ್ನು ಪಿ.ಬಿ.ಎಸ್. ಹಾಗೂ ರಾಜ್ ಹಾಡುವುದು- ತುಂಬಾ ಹೊತ್ತು ಹೀಗೇ ನಡೆಯಿತು. ನಡುನಡುವೆ ಹೀಗೆ ಹಾಡಿದರೆ ಚೆಂದ ಎಂದು ಮೂವರೂ ಚರ್ಚಿಸುತ್ತಿದ್ದರು. ಹೀಗೆ ಚರ್ಚಿಸುತ್ತಾ, ಹಾಡುತ್ತ ಹಾಡುತ್ತಲೇ ರಾಜ್ ಹಾಗೂ ಪಿ.ಬಿ.ಎಸ್.ಗೆ ಹಾಡಿನ ಮೇಲೆ ಹಿಡಿತ ಸಿಕ್ಕಿ ಹೋಯಿತು. ಧ್ವನಿಯ ಏರಿಳಿತ ಹೇಗಿದ್ದರೆ ಚೆಂದ ಎಂದು ಪರಸ್ಪರ ಚರ್ಚೆ ಮಾಡಿಕೊಂಡೇ ಹಾಡಿದ್ದರಿಂದ ಪಾತ್ರದ ಪರಕಾಯ ಪ್ರವೇಶ ಮಾಡಿದಂತೆ ಹಾಡುವುದೂ ಸಾಧ್ಯವಾಯಿತು. ಹೀಗೆ, ಹಾಡಿನ ರಚನೆ ಮುಗಿದ ನಂತರ ಮತ್ತೆ ಬೆಂಗಳೂರಿಗೆ ಬಂದು ಕ್ಲೋಸಪ್ ದೃಶ್ಯದ ಚಿತ್ರೀಕರಣ ನಡೆಸಲಾಯಿತು.
ಚಿತ್ರಗೀತೆಗಳ ಸಾಹಿತ್ಯದಲ್ಲಿ ಅತೀ ಎನ್ನಿಸುವಷ್ಟು ಒತ್ತಕ್ಷರಗಳು ಬಂದರೆ, ಮೇಲಿಂದ ಮೇಲೆ ಅರ್ಧಾಕ್ಷರಗಳು ಬಂದರೆ ಸಂಗೀತ ಸಂಯೋಜನೆ ಮಾಡುವುದು ಸ್ವಲ್ಪ ಕಷ್ಟ. ‘ಯಾರು ತಿಳಿಯರು ನಿನ್ನ…’ ಹಾಡಿನ ವಿಷಯದಲ್ಲೂ ಸಾಹಿತ್ಯ ಹೀಗೇ ಇದೆ. ಆದರೆ, ಇದನ್ನು ಛಾಲೆಂಜ್ ಎಂದು ತೆಗೆದುಕೊಂಡ ಟಿ.ಜಿ. ಲಿಂಗಪ್ಪ, ಹುಣಸೂರು ಅವರ ಸಾಹಿತ್ಯದ ಒಂದೇ ಅಕ್ಷರವನ್ನೂ ಬದಲಿಸಲು ಹೇಳದೆ ಅದ್ಭುತ ಎಂಬಂಥ ಸಂಗೀತ ಸಂಯೋಜಿಸಿದರು. ಹೀಗೆ ಎಲ್ಲರೂ ಸದಾಶಯದಿಂದ ಯೋಚಿಸಿ ಕೆಲಸ ಮಾಡಿದ್ದರಿಂದ ಎಂದೆಂದಿಗೂ ಅಮರವಾಗಿ ಉಳಿಯುವಂಥ ಹಾಡೊಂದು ಸೃಷ್ಟಿಯಾಯಿತು…’
ಇಷ್ಟು ಹೇಳಿ ನಸುನಕ್ಕರು ಭಾರ್ಗವ. ಅಲ್ಲಿ ಹಾಡಿನ ಕಥೆ ಹೇಳಿದವರ ಸಂಭ್ರಮವಿತ್ತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: