ಸಂಪಿಗೆ ಮರದ ಹಸಿರೆಲೆ ನಡುವೆ…

ಸಂಪಿಗೆ ಮರದ ಹಸಿರೆಲೆ ನಡುವೆ…
ಚಿತ್ರ: ಉಪಾಸನೆ. ಗೀತೆರಚನೆ: ಆರ್.ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್. ಗಾಯನ : ಬಿ.ಕೆ. ಸುಮಿತ್ರಾ

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ… ಚಿಕ್ಕವ್ವ… ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ ||ಪ||

ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್…
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ ||೧||

ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ…
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ ||೨||
ಎಪ್ಪತ್ತರ ದಶಕದಿಂದ ಆರಂಭಿಸಿ ಈಗಲೂ ಹಲವರನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಗೀತೆ ‘ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು…’ ‘ಉಪಾಸನೆ’ ಚಿತ್ರದ ಈ ಗೀತೆ, ಆರ್.ಎನ್.ಜೆ. ಅವರ ಅನುಪಮ ಸೃಷ್ಟಿಗಳಲ್ಲಿ ಒಂದು. ಈ ಹಾಡು ಕೇಳುತ್ತ ಕೂತರೆ, ಗ್ರಾಮೀಣ ಪ್ರದೇಶದಿಂದ ಬಂದ ಪ್ರತಿಯೊಬ್ಬರಿಗೂ ತಂತಮ್ಮ ಊರು ನೆನಪಾಗುತ್ತದೆ. ಪಲ್ಲವಿ ಮುಗಿದು ಮೊದಲ ಚರಣ ಶುರುವಾದ ತಕ್ಷಣ ಊರಲ್ಲಿರುವ ದೇವಸ್ಥಾನ, ಅದರ ಘಂಟಾನಾದ, ಗರ್ಭಗುಡಿಯಲ್ಲಿರುವ ದೇವರ ವಿಗ್ರಹ, ಅದಕ್ಕೆ ಮಂಗಳಾರತಿ ಶುರುವಾಗುತ್ತಿದ್ದಂತೆಯೇ ಭಕ್ತಾದಿಗಳೆಲ್ಲ ಕೈ ಮುಗಿದು, ಕೆನ್ನೆ ಕೆನ್ನೆ ಬಡಿದುಕೊಂಡು ಮೈಮರೆಯುವ ಕ್ಷಣಗಳೆಲ್ಲ ನೆನಪಿಗೆ ಬರುತ್ತವೆ. ಹಿಂದೆಯೇ-ಈ ಹಾಡು ನನಗೆಂದೇ ಬರೆದಿರುವಂತಿದೆ ಎಂಬ ಭಾವ ಎಲ್ಲರನ್ನೂ ಆವರಿಸಿಕೊಳ್ಳುತ್ತದೆ.
ಕೋಗಿಲೆಯೂ ಅಸೂಯೆ ಪಡುವಂತೆ ಈ ಗೀತೆಯನ್ನು ಹಾಡಿದವರು ಬಿ.ಕೆ. ಸುಮಿತ್ರಾ. ಈ ಹಾಡಿನ ಕಥೆಗೆ ಹೊರಳಿಕೊಳ್ಳುವ ಮುನ್ನ ಸುಮಿತ್ರಾ ಅವರ ಗಾನಯಾನದ ಬಗ್ಗೆಯೂ ನಾಲ್ಕು ಮಾತು. ಚಿಕ್ಕಮಗಳೂರು ಜಿಲ್ಲೆಯ ಬಿಳಿಲುಕೊಪ್ಪ ಗ್ರಾಮದವರು ಸುಮಿತ್ರಾ. ಅವರ ತಂದೆ ಪಟೇಲ್ ಕೃಷ್ಣಯ್ಯ. ಊರ ಪಟೇಲರೂ, ಕಾಫಿ ತೋಟದ ಮಾಲೀಕರೂ ಆಗಿದ್ದ ಕೃಷ್ಣಯ್ಯನವರು, ಅರವತ್ತರ ದಶಕದಲ್ಲಿಯೇ ಆಧುನಿಕ ಮನೋಭಾವ ಪ್ರದರ್ಶಿಸಿದ ಮಂತರು. ಹೆಣ್ಣು ಮಕ್ಕಳೂ ಸಹ ಹುಡುಗರಂತೆಯೇ ಓದಿ ದೊಡ್ಡ ಹೆಸರು ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಮುದ್ದಿನ ಮಗಳು ಸುಮಿತ್ರಾ ಅವರಿಗೂ ಹಾಗೆಯೇ ಹೇಳಿದ್ದರು. ಮಗಳಿಗೆ ಸಂಗೀತ ಕಲಿಕೆಯಲ್ಲಿ ಆಸಕ್ತಿಯಿದೆ ಎಂದು ಗೊತ್ತಾದಾಗ-ನಟಿ ಪಂಢರಿಬಾಯಿ ಅವರ ಸೋದರ ಪ್ರಭಾಕರ ಅವರ ಬಳಿ ಸಂಗೀತ ಕಲಿಕೆಗೆ ವ್ಯವಸ್ಥೆ ಮಾಡಿದರು. ಮಗಳು ಕಾಲೇಜು ಓದಲು ಆಸೆಪಟ್ಟಾಗ ಶಿವಮೊಗ್ಗದಲ್ಲಿ ಓದಿಸಿದ್ದರು.
ಕಾಲೇಜು ಶಿಕ್ಷಣದ ನಂತರ, ಹೇಗಿದ್ದರೂ ಸುಗಮ ಸಂಗೀತ ಕಲಿತಿದ್ದಾಗಿದೆ. ಹಾಗಾಗಿ ಚಿತ್ರರಂಗದಲ್ಲಿ ಹಿನ್ನೆಲೆಗಾಯಕಿಯಾಗಿ ಯಾಕೆ ಅದೃಷ್ಟ ಪರೀಕ್ಷಿಸಬಾರದು ಎನ್ನಿಸಿದಾಗ ಅದನ್ನೇ ತಂದೆಯ ಬಳಿ ಹೇಳಿಕೊಂಡರು ಸುಮಿತ್ರಾ. ಇದು ೧೯೬೦-೭೦ರ ದಶಕದ ಮಾತು. ಆಗ ಕನ್ನಡ ಚಿತ್ರರಂಗದ ಸಮಸ್ತ ಚಟುವಟಿಕೆಯೂ ಮದ್ರಾಸ್‌ನಲ್ಲೇ ನಡೆಯುತ್ತಿತ್ತು. ಹಾಗಾಗಿ ಚಿತ್ರರಂಗ ಸೇರುವ ಆಸೆ ಹೊಂದಿದವರು ಸೀದಾ ಮದ್ರಾಸ್‌ಗೇ ಬರಬೇಕಾಗುತ್ತಿತ್ತು. ಮಗಳ ಮಾತು ಕೇಳಿದ ನಂತರ, ತಾವೇ ಮುಂದಾಗಿ ಮದ್ರಾಸ್‌ಗೆ ಬಂದು ಒಂದು ಬಾಡಿಗೆ ಮನೆಯನ್ನು ಗೊತ್ತುಮಾಡಿದರು ಪಟೇಲ್ ಕೃಷ್ಣಯ್ಯ. ನಂತರ ಮಗಳಿಗೆ ಅಡುಗೆ ಮಾಡಲೆಂದೇ ತಮ್ಮ ಊರಿಂದ ಒಂದು ಹುಡುಗಿಯನ್ನೂ ಕರೆತಂದರು. ನಂತರ ಮಗಳ ಮುಂದೆ ನಿಂತು ಹೇಳಿದರಂತೆ: ‘ನೋಡಮ್ಮಾ, ಒಪ್ಪಿಕೊಂಡ ಕೆಲಸವನ್ನು ಶ್ರದ್ಧೆ, ಭಕ್ತಿಯಿಂದ ಮಾಡು. ಆದರೆ, ಅವಕಾಶ ಕೊಡಿ ಎಂದು ಯಾರಲ್ಲೂ ಕೇಳಿಕೊಂಡು ಹೋಗಬೇಡ. ಇಲ್ಲಿ ಒಂದೆರಡು ವರ್ಷ ಇದ್ದು ನೋಡು. ಈ ಕ್ಷೇತ್ರ ನಿನಗೆ ಹಿಡಿಸದಿದ್ದರೆ ಆರಾಮಾಗಿ ಊರಿಗೆ ಬಂದುಬಿಡು…’
‘ಹಾಗೇ ಆಗಲಿ ಅಪ್ಪಾಜೀ’ ಎಂದರು ಸುಮಿತ್ರಾ. ಆದರೆ, ಒಂದೆರಡು ಸಿನಿಮಾಗಳಿಗೆ ಹಾಡಿದ್ದೇ ತಡ, ಇಡೀ ಚಿತ್ರರಂಗ ಅವರ ಸಿರಿಕಂಠದ ಇಂಪನ್ನು ಗುರ್ತಿಸಿತು. ಮೆಚ್ಚಿಕೊಂಡಿತು. ಹಾಡಿ ಹೊಗಳಿತು. ಪರಿಣಾಮ,ಅದುವರೆಗೂ ಬಿಳಿಲು ಕೊಪ್ಪದ ಜನರಿಗೆ ಮಾತ್ರ ಪರಿಚಯವಿದ್ದ ಸುಮಿತ್ರಾ, ಕರ್ನಾಟಕದಾದ್ಯಂತ ಮನೆ ಮಾತಾದರು.
***
ಈಗ, ‘ಉಪಾಸನೆ’ ಚಿತ್ರದಲ್ಲಿ ಈ ಹಾಡು ಬರುವ ಸಂದರ್ಭ ತಿಳಿದುಕೊಂಡು, ಆನಂತರವೇ ಹಾಡಿನ ಹಿಂದಿರುವ ಕಥೆಗೆ ಹೊರಳಿಕೊಳ್ಳೋಣ.
‘ಉಪಾಸನೆ’ ಚಿತ್ರದ ಕಥಾನಾಯಕಿಯ ಹೆಸರು ಶಾರದೆ. ಆಕೆ, ವಕೀಲ ಭೀಮರಾಯರ ಹಿರಿಯ ಮಗಳು. ಶಾರದೆ ಇದ್ದ ಊರಲ್ಲಿಯೇ ಸಂಗೀತ ವಿದ್ವಾನ್ ಅನಂತಶಾಸ್ತ್ರಿಗಳಿರುತ್ತಾರೆ. ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಶಾರದೆ, ಶಾಲೆಗೆ ಹೋಗುವಾಗ ಮತ್ತು ಬರುವಾಗ, ಅನಂತ ಶಾಸ್ತ್ರಿಗಳ ಮನೆಯ ಬಾಗಿಲ ಬಳಿ ನಿಂತು ಅವರು ವೀಣೆ ನುಡಿಸುವುದನ್ನೇ ನೋಡುತ್ತ ಖುಷಿ ಪಡುತ್ತಿರುತ್ತಾಳೆ. ಈ ಸಂದರ್ಭದಲ್ಲಿಯೇ ಶಾಸ್ತ್ರಿಗಳನ್ನು ಕಾಣುವ ಭೀಮರಾಯರು, ತಮ್ಮ ಮಗಳಿಗೆ ಸಂಗೀತ ಹೇಳಿಕೊಡುವಂತೆ ಪ್ರಾರ್ಥಿಸುತ್ತಾರೆ. ಅದಕ್ಕೆ ಒಪ್ಪದ ಶಾಸ್ತ್ರಿಗಳು- ‘ನಾನು ಯಾರಿಗೂ ಸಂಗೀತ ಹೇಳಿಕೊಡಲಾರೆ, ಕ್ಷಮಿಸಿ’ ಎನ್ನುತ್ತಾರೆ.
ಹೀಗಿದ್ದಾಗಲೇ ಒಂದು ದಿನ ಶಾಸ್ತ್ರಿಯವರು ವೀಣೆ ನುಡಿಸುತ್ತಿದ್ದಾಗ ಅವರ ಮನೆಗೆ ಬರುತ್ತಾಳೆ ಶಾರದೆ. ಬಂದವಳು ನಮಸ್ಕರಿಸಿ, ವೀಣೆಯನ್ನೇ ಆರಾಧನಾ ಭಾವದಿಂದ ನೋಡುತ್ತಾಳೆ. ಅದನ್ನು ಗಮನಿಸಿದ ಶಾಸ್ತ್ರಿಗಳು-’ಮಗೂ, ನಿಂಗೆ ಹಾಡಲು ಬರುತ್ತಾ? ಒಂದು ಹಾಡು ಹಾಡ್ತೀಯಾ?’ ಅನ್ನುತ್ತಾರೆ. ಆಗ, ಶಾಸ್ತ್ರಿಗಳನ್ನೇ ಪ್ರೀತಿ, ಭಯ-ಭಕ್ತಿಯಿಂದ ನೋಡುತ್ತಾ ಶಾರದೆ ಹಾಡುತ್ತಾಳೆ: ‘ಸಂಪಿಗೆ ಮರದಾ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು…’
ಈ ಹಾಡು ಹುಟ್ಟಿದ ಸಂದರ್ಭವನ್ನು, ಅದನ್ನು ತಾವು ಮೈಮರೆತು ಹಾಡಿದ ಕ್ಷಣವನ್ನು ಬಿ.ಕೆ. ಸುಮಿತ್ರಾ ಅವರು ನೆನಪು ಮಾಡಿಕೊಂಡದ್ದು ಹೀಗೆ:
‘ತಮ್ಮ ಸಿನಿಮಾಗಳಿಗೆ ಹಾಡು- ಸಂಭಾಷಣೆ ಬರೆಸುವ ಸಂದರ್ಭದಲ್ಲಿ ಪುಟ್ಟಣ್ಣ ಕಣಗಾಲ್ ಅವರು ಸಂಗೀತ ನಿರ್ದೇಶಕ, ಸಂಭಾಷಣೆಕಾರ ಹಾಗೂ ಗೀತೆರಚನೆಕಾರರೊಂದಿಗೆ ಪಿಕ್‌ನಿಕ್‌ಗೆ ತೆರಳುತ್ತಿದ್ದರು. ಸಿನಿಮಾ ಸಂದರ್ಭದ ತೀವ್ರತೆಯನ್ನು ಹೆಚ್ಚಿಸುವ, ಪದ ಪದದಲ್ಲೂ ಮಾಧುರ್ಯವನ್ನೇ ತುಂಬಿಕೊಂಡ ಹಾಡು ಹಾಗೂ ಎಲ್ಲರನ್ನೂ ಮೋಡಿ ಮಾಡುವಂಥ ಟ್ಯೂನ್ ಸಿದ್ಧವಾಗುವವರೆಗೂ ಬಿಡುತ್ತಿರಲಿಲ್ಲ ಪುಟ್ಟಣ್ಣ.
‘ಉಪಾಸನೆ’ಯಲ್ಲಿ ಶಾಲಾ ಬಾಲಕಿಯೊಬ್ಬಳ ದನಿಯಲ್ಲಿ ನಾನು ಹಾಡಬೇಕಿತ್ತು. ಆರ್.ಎನ್. ಜಯಗೋಪಾಲ್ ಅವರು ಬರೆದಿದ್ದ ಹಾಡನ್ನು ನೋಡಿದಾಗ, ನನಗೆ ಆಶ್ಚರ್ಯವಾಯಿತು. ಏಕೆಂದರೆ- ‘ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು..’ ಎಂದು ಬರೆದಿದ್ದರು ಆರ್.ಎನ್. ಜೆ.
‘ಕೋಗಿಲೆ ಮಾವಿನ ಚಿಗುರನ್ನು ತಿನ್ನುತ್ತದೆ. ಮಾವಿನ ಮರದಲ್ಲಿ ಕೂತು ಕೂಹೂ, ಕೂಹೂ ಎಂದು ಹಾಡುತ್ತದೆ’ ಎಂದಷ್ಟೇ ನಮ್ಮ ಶಾಲೆಯಲ್ಲಿ ಹೇಳಿಕೊಟ್ಟಿದ್ದರು. ನಾನೂ ಅದನ್ನೇ ನಂಬಿಕೊಂಡಿದ್ದೆ. ನಮ್ಮ ಊರಿನ ಮಾವಿನ ತೋಪುಗಳಲ್ಲಿ ಆಗಿಂದಾಗ್ಗೆ ಕೋಗಿಲೆಗಳು ಹಾಡುವುದನ್ನು ಕೇಳಿಸಿಕೊಂಡಿದ್ದೆ. ಅದು ಒಮ್ಮೆ ಕೂಹೂ ಎಂದರೆ ಸಾಕು, ನಾನು ಅದರ ದನಿಯನ್ನೇ ಅನುಕರಿಸಿ-‘ಕೂಹೂ, ಕೂಹೂ’ ಅನ್ನುತ್ತಿದ್ದೆ. ಆ ಸಂದರ್ಭದಲ್ಲಿ ಕೋಗಿಲೆ ಸ್ಪರ್ಧೆಗೆ ಬಿದ್ದಂತೆ-ಕೂಹೂ ಕೂಹೂ ಎಂದು ಏಳೆಂಟು ಬಾರಿ ಕೂಗಿಬಿಡುತ್ತಿತ್ತು…
ಈ ಕಾರಣದಿಂದಲೇ-‘ಕೋಗಿಲೆ, ಮಾವಿನ ಮರದಲ್ಲಿ ಮಾತ್ರ ಇರುತ್ತದೆ’ ಎಂಬುದು ನನ್ನ ಭಾವನೆಯಾಗಿತ್ತು. ಆದರೆ ಆರ್.ಎನ್.ಜೆ. ಅವರ ಹಾಡಿನಲ್ಲಿ- ಸಂಪಿಗೆ ಮರದಲ್ಲಿ ಕೋಗಿಲೆ ಇತ್ತು! ಅನುಮಾನ ಬಂತು ನೋಡಿ; ಸೀದಾ ಆರ್.ಎನ್. ಜೆ. ಬಳಿ ಹೋಗಿ ‘ಸಾರ್, ಕೋಗಿಲೆ ಮಾವಿನ ಮರದಲ್ಲಿ ಹಾಡುತ್ತೆ. ಸಂಪಿಗೆ ಮರದಲ್ಲೂ ಹಾಡುತ್ತಾ?’ ಎಂದು ಪ್ರಶ್ನೆ ಹಾಕಿದೆ.
ಆಗ ಆರ್.ಎನ್.ಜೆ. ‘ಹೌದಮ್ಮಾ, ಕೋಗಿಲೆ ಸಂಪಿಗೆ ಮರದಲ್ಲೂ ಹಾಡುತ್ತೆ. ಈಗ ನೀನು ಹಾಡು. ಮುಂದೆ ಈ ಹಾಡು ಕೂಡ ಕೋಗಿಲೆಯ ದನಿಯಂತೆಯೇ ಪ್ರಸಿದ್ಧಿ ಪಡೆಯುತ್ತದೆ’ ಅಂದರು.
ಆ ದಿನಗಳಲ್ಲಿ ಧ್ವನಿಮುದ್ರಣ ಅಂದರೆ-ಒಂದು ಹಾಡನ್ನು ಗಾಯಕರು ಮೊದಲಿಂದ ಕಡೆಯವರೆಗೂ ಹೇಳಬೇಕಿತ್ತು. ಆರ್ಕೆಸ್ಟ್ರಾದವರ ಹಿನ್ನೆಲೆ ವಾದ್ಯವೂ ಜತೆಗಿರುತ್ತಿತ್ತು. ಹೀಗೆ ಹಾಡುವಾಗ ಮಧ್ಯೆ ವಾದ್ಯದವರು ಅಥವಾ ಗಾಯಕರು ಚಿಕ್ಕದೊಂದು ತಪ್ಪು ಮಾಡಿದರೂ ಮತ್ತೆ ಮೊದಲಿಂದ ಹಾಡಲು ಶುರುಮಾಡಬೇಕಿತ್ತು. ಈ ಕಾರಣದಿಂದಲೇ ಆಗ ಬೆಳಗ್ಗೆ ೯ ರಿಂದ ಮಧ್ಯಾಹ್ನ ೧ರವರೆಗೆ ಒಂದು ಹಾಡು, ೩ ರಿಂದ ರಾತ್ರಿ ೯ರ ವರೆಗೆ ಇನ್ನೊಂದು ಹಾಡು- ಹೀಗೆ ದಿನಕ್ಕೆ ಎರಡು ಹಾಡುಗಳನ್ನು ಮಾತ್ರ ಹಾಡಿಸುತ್ತಿದ್ದರು. ಒಂದು ಹಾಡು ‘ಓ.ಕೆ. ಆಗಬೇಕಾದರೆ ಎಂಟು, ಹತ್ತು, ಹನ್ನೆರಡು ಟೇಕ್‌ಗಳೂ ಆಗುತ್ತಿದ್ದವು…
ಹಾಡುವ ಮುನ್ನ, ಎರಡೆರಡು ಬಾರಿ ಟ್ಯೂನ್ ಕೇಳಿಸಿಕೊಂಡೆ. (ವಿಜಯ ಭಾಸ್ಕರ್ ಅವರ ಸಂಗೀತದ ಇಂಪನ್ನು ವಿವರಿಸಲು ಕ್ಷಮಿಸಿ-ಪದಗಳಿಲ್ಲ.) ನಂತರ, ಆರ್.ಎನ್.ಜೆ.ಯವರ ಹಾಡನ್ನು ಮನದೊಳಗೇ ಓದಿಕೊಂಡೆ. ಪಲ್ಲವಿಯನ್ನು ಮುಗಿಸಿ, ಮೊದಲ ಚರಣಕ್ಕೆ ಬಂದೆ ನೋಡಿ, ತಕ್ಷಣವೇ ನಮ್ಮೂರು ಬಿಳಿಲುಕೊಪ್ಪ ನೆನಪಾಯಿತು. ಆಗ, ನಮ್ಮ ಮನೆಗೆ ತುಂಬ ಹತ್ತಿರದಲ್ಲೇ ಒಂದು ಮರವಿತ್ತು. ಅದಕ್ಕೆ ಹತ್ತಿರದಲ್ಲೇ ಒಂದು ಝರಿ. (ಇವು ಈಗಲೂ ಇವೆ) ಚಿಕ್ಕಂದಿನಲ್ಲಿ ನಾನು ಈ ಝರಿಯಲ್ಲಿ ಕಾಲುಗಳನ್ನು ಇಳಿಬಿಟ್ಟುಕೊಂಡು ವಾರಿಗೆಯ ಗೆಳತಿಯರೊಂದಿಗೆ ಆಟವಾಡುತ್ತಿದ್ದೆ. ಊರಿಗೆ ಹತ್ತಿರದಲ್ಲೇ ಹರಿಯುತ್ತಿದ್ದ ಚಿಕ್ಕ ನದಿಯನ್ನು ನೋಡುತ್ತಾ ಮೈಮರೆಯುತ್ತಿದ್ದೆ. ದೇವಾಲಯದಲ್ಲಿ ಪೂಜೆ ಶುರುವಾದರೆ ಸಾಕು, ಹೂಗಳೊಂದಿಗೆ ಅಲ್ಲಿಗೆ ಓಡಿ ಹೋಗುತ್ತಿದ್ದೆ. ಅಪ್ಪನ ಜತೆಯಲ್ಲಿ ನಿಂತು ಖುಷಿಯಿಂದ ನೆಗೆನೆಗೆದು ಗಂಟೆ ಹೊಡೆಯುತ್ತಿದ್ದೆ. ನಾನು ಒಂದೊಂದು ಸಾರಿ ಗಂಟೆ ಬಾರಿಸಿದಾಗಲೂ ದೇವಾಲಯದಲ್ಲಿದ್ದ ಮಂದಿ ಕಣ್ಮುಚ್ಚಿಕೊಂಡು ಧ್ಯಾನಿಸುತ್ತಿದ್ದರು. ದೇವರಿಗೆ ಕೈ ಮುಗಿಯುತ್ತಿದ್ದರು…
ಹಾಡಿನ ಸಾಲುಗಳ ಮೇಲೆ ಕಣ್ಣು ಹಾಯಿಸಿದ ತಕ್ಷಣವೇ ನನಗೆ ಇಷ್ಟೆಲ್ಲ ನೆನಪಾಗಿ ಬಿಡ್ತು. ಈ ಹಾಡು ಸಿನಿಮಾಕ್ಕಲ್ಲ, ನನಗೋಸ್ಕರ ಬರೆದಿರೋದು ಅನ್ನಿಸಿಬಿಡ್ತು. ಅದೇ ಕಾರಣದಿಂದ, ಒಂದೊಂದು ಪದವನ್ನೂ ಅನುಭವಿಸಿಕೊಂಡು ಹಾಡಿದೆ. ಹಾಡು, ಮನೆಮನೆಯ ಮಾತಾಯಿತು. ಕನ್ನಡದ ಮನೆಮನೆಯಲ್ಲೂ ನನಗೊಂದು ಜಾಗ ಕಲ್ಪಿಸಿತು… ಹೀಗೆ ಹೇಳುತ್ತ ಹೇಳುತ್ತ ಭಾವುಕರಾಗುತ್ತಾರೆ ಬಿ.ಕೆ. ಸುಮಿತ್ರಾ.
ಮುಗಿಸುವ ಮುನ್ನ ಇದನ್ನಿಷ್ಟು ಓದಿಬಿಡಿ: ಅರವತ್ತರ ದಶಕದಲ್ಲಿ ಕನ್ನಡ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದುದು ರೇಡಿಯೊ ಸಿಲೋನ್‌ನಲ್ಲಿ. ಆಗೆಲ್ಲ ನೋಟ್‌ಬುಕ್, ಪೆನ್ ಜತೆಗಿಟ್ಟುಕೊಂಡೇ ರೇಡಿಯೊ ಮುಂದೆ ಕೂರುತ್ತಿದ್ದರಂತೆ ಬಿ.ಕೆ. ಸುಮಿತ್ರಾ. ಹಾಡು ಶುರುವಾದ ತಕ್ಷಣ ಇವರು ಅವಸರದಲ್ಲಿಯೇ ಬರೆದುಕೊಳ್ಳಲು ಆರಂಭಿಸುತ್ತಿದ್ದರು. ಆದರೆ, ಇವರು ಮೂರು ಸಾಲು ಮುಗಿಸುವಷ್ಟರಲ್ಲಿ ಹಾಡು ಮುಗಿದಿರುತ್ತಿತ್ತಂತೆ. ಆಗ, ಮುಂದಿನ ವಾರದವರೆಗೂ ಕಾದಿದ್ದು, ಮತ್ತೆ ಅದೇ ಹಾಡು ಬಂದರೆ ಉಳಿದ ಭಾಗವನ್ನು ಬರೆದುಕೊಂಡು ಅಭ್ಯಾಸ ಮಾಡುತ್ತಿದ್ದರಂತೆ ಸುಮಿತ್ರಾ.
ಗಾನಯಾನದಲ್ಲಿ ಇಂಥ ಕಸರತ್ತು ಮಾಡಿದ್ದರಿಂದಲೇ ಕೋಗಿಲೆಯೂ ಅಸೂಯೆ ಪಡುವಂತೆ ಹಾಡಲಿಕ್ಕೆ ಸುಮಿತ್ರಾ ಅವರಿಗೆ ಸಾಧ್ಯವಾಯಿತು. ಸರಿತಾನೆ?

1 Comment »

  1. wonderfully written, B K Sumitra avara dhwani kogilegoo meeriddu


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: