ಚಿತ್ರ: ಬಭ್ರುವಾಹನ. ಗೀತೆರಚನೆ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ಟಿ.ಜಿ. ಲಿಂಗಪ್ಪ. ಗಾಯನ: ಡಾ. ರಾಜ್‌ಕುಮಾರ್
ಆರಾಧಿಸುವೆ ಮದನಾರಿ
ಆರಾಧಿಸುವೆ ಮದನಾರಿ
ಆದರಿಸು ನೀ ದಯೆತೋರಿ, ಆರಾಧಿಸುವೆ ಮದನಾರಿ ||ಪ||
ಅಂತರಂಗದಲ್ಲಿ ನೆಲೆಸಿರುವೇ
ಅಂತರ್ಯ ತಿಳಿಯದೆ ಏಕಿರುವೆ?
ಸಂತತ ನಿನ್ನ ಸಹವಾಸ ನೀಡಿ
ಸಂತತ ನಿನ್ನ ಸಹವಾಸ ನೀಡಿ
ಸಂತೋಷದಿಂದೆನ್ನ ನಲಿಸೆಂದು ಕೋರುವೆ ||೧||
ಮೈದೋರಿ ಮುಂದೆ ಸಹಕರಿಸು
ಆಮಾರ ನೊಲವಣೆ ಪರಿಹರಿಸು
ಪ್ರೇಮಾಮೃತವನು ನೀನುಣಿಸು
ಪ್ರೇಮಾಮೃತವನು ನೀನುಣಿಸು
ತನ್ಮಯಗೊಳಿಸು ಮೈಮರೆಸೂ
ಚಿನ್ಮಯ ಭಾವ ತುಂಬುತ ಜೀವ
ಆನಂದ ಆನಂದ ಆನಂದವಾಗಲಿ
ಆರಾಧಿಸುವೆ ಮದನಾರಿ, ಆರಾಧಿಸುವೆ ಮದನಾರಿ
ಸನಿದಪಮ ಆರಾಧಿಸುವೆ ಮದನಾರಿ
೬೦-೭೦ರ ದಶಕದಲ್ಲಿ ಕನ್ನಡ, ತೆಲುಗು ಹಾಗೂ ತಮಿಳು ಚಿತ್ರರಂಗದ ಎಲ್ಲ ಕೆಲಸವೂ ನಡೆಯುತ್ತಿದ್ದುದು ಮದ್ರಾಸಿನಲ್ಲಿ. ಆ ದಿನಗಳಲ್ಲಿ ತೆಲುಗಿನಲ್ಲಿ ಎನ್.ಟಿ.ಆರ್. ಕೃಷ್ಣ, ಅಕ್ಕಿನೇನಿ ನಾಗೇಶ್ವರರಾವ್ ಇದ್ದರು. ತಮಿಳಿನಲ್ಲಿ ಎಂಜಿಆರ್, ಶಿವಾಜಿ ಗಣೇಶನ್ ಇದ್ದರು. ಕನ್ನಡದ ಪಾಲಿಗೆ ಡಾ. ರಾಜ್‌ಕುಮಾರ್, ಆರ್. ನಾಗೇಂದ್ರರಾವ್, ಕಲ್ಯಾಣ್ ಕುಮಾರ್ ಮುಂತಾದವರಿದ್ದರು.
ಆ ದಿನಗಳಲ್ಲಿ ಕಲಾವಿದರ ಮಧ್ಯೆ ಅಪರೂಪದ ಹೊಂದಾಣಿಕೆಯಿತ್ತು. ಪರಸ್ಪರ ಪ್ರೀತಿ, ವಿಶ್ವಾಸ- ಗೌರವವಿತ್ತು. ಒಂದು ಭಾಷೆಯ ಸಿನಿಮಾ ಬಿಡುಗಡೆಯಾದರೆ, ಅದನ್ನು ಎಲ್ಲ ಕಲಾವಿದರೂ ಒಟ್ಟಿಗೇ ಕೂತು ನೋಡುತ್ತಿದ್ದರು. ಆ ಚಿತ್ರದಲ್ಲಿರುವ ತಾಂತ್ರಿಕ ವೈಭವವನ್ನು, ಸಂದೇಶವನ್ನು ತಮ್ಮ ಚಿತ್ರದಲ್ಲೂ ತರುವ ಪ್ರಯತ್ನ ಮಾಡುತ್ತಿದ್ದರು.
‘ಬಭ್ರವಾಹನ’ ಚಿತ್ರದ ಆರಾಧಿಸುವೆ ಮದನಾರಿ… ಹಾಡಿನಲ್ಲಿ ಡಾ. ರಾಜ್‌ಕುಮಾರ್ ಅವರನ್ನು ಐದು ವಿವಿಧ ಭಂಗಿಗಳಲ್ಲಿ ತೋರಿರುವ ಅಪರೂಪದ ದೃಶ್ಯವೊಂದಿದೆ. ಆ ದೃಶ್ಯದ ಕಲ್ಪನೆ ಬಂದದ್ದು ಹೇಗೆ ಎಂಬುದಕ್ಕೆ ಪೂರಕವಾಗಿ ಮೇಲಿನ ಮಾತುಗಳನ್ನು ಹೇಳಬೇಕಾಯಿತು.
ಹುಣಸೂರು ಕೃಷ್ಣಮೂರ್ತಿಯವರು ತುಂಬ ಇಷ್ಟಪಟ್ಟು ಮಾಡಿದ ಚಿತ್ರ ಬಭ್ರುವಾಹನ. ಅರ್ಜುನನಿಂದ ಆರಂಭವಾಗಿ, ಬಭ್ರುವಾಹನನ ಕಥೆಯನ್ನು ಸಂಪೂರ್ಣವಾಗಿ ತೋರಿಸಿದ ಚಿತ್ರ ಇದು. ಉಲೂಚಿ, ಚಿತ್ರಾಂಗದಾ ಮತ್ತು ಸುಭದ್ರೆಯರೊಂದಿಗೆ ಅರ್ಜುನ ನಡೆಸಿದ ಪ್ರಣಯ ಪ್ರಸಂಗ, ಶೃಂಗಾರ ಲೀಲೆಗಳನ್ನು ಅರಸಿಕನೂ ಮೆಚ್ಚುವಂತೆ ಬೆಳ್ಳಿತೆರೆಯ ಮೇಲೆ ತೋರಿಸಿದ ಸಿನಿಮಾ ಇದು.
ಸಿನಿಮಾದ ಹೆಸರು ‘ಬಭ್ರುವಾಹನ’ ಎಂದಿದ್ದರೂ, ಅರ್ಜುನನ ಪಾತ್ರವನ್ನೂ ಹೈಲೈಟ್ ಮಾಡಬೇಕು ಎಂಬುದು ಹುಣಸೂರು ಕೃಷ್ಣಮೂರ್ತಿಯವರ ಆಸೆಯಾಗಿತ್ತು. ಅರ್ಜುನ ಎಂದರೆ ಕೇವಲ ಬಿಲ್ವಿದ್ಯಾ ಪ್ರವೀಣ ಮಾತ್ರವಲ್ಲ, ಅವನೊಬ್ಬ ಅಪ್ರತಿಮ ಗಾಯಕ, ಸಂಗೀತಗಾರ. ಚೆಲುವಾಂತ ಚೆನ್ನಿಗ, ಮಹಾ ಪ್ರೇಮಿ ಮತ್ತು ರಸಿಕ. ಈ ಎಲ್ಲಾ ವೇಷದಲ್ಲಿಯೂ ಅವನನ್ನು ತೋರಿಸಬೇಕು ಎಂದು ಹುಣಸೂರು ನಿರ್ಧರಿಸಿದ್ದರು. ಉಲೂಚಿ, ಚಿತ್ರಾಂಗದಾ, ಸುಭದ್ರೆಯರೊಂದಿಗಿನ ಪ್ರಣಯದ ಸಂದರ್ಭಗಳಿಗೆಂದೇ ‘ನಿನ್ನ ಕಣ್ಣ ನೋಟದಲ್ಲಿ’, ‘ಈ ಸಮಯಾ ಶೃಂಗಾರಮಯ’, ‘ಆರಾಧಿಸುವೆ ಮದನಾರಿ..’ ಹಾಡುಗಳನ್ನು ಬರೆದಿದ್ದರು.
ಒಂದೊಂದು ಹಾಡನ್ನೂ ತುಂಬ ಭಿನ್ನವಾಗಿ ಚಿತ್ರೀಕರಿಸಬೇಕು ಎಂಬುದು ಹುಣಸೂರು ಅವರ ಅಪೇಕ್ಷೆಯಾಗಿತ್ತು. ಅದನ್ನೇ ಡಾ. ರಾಜ್‌ಕುಮಾರ್ ಅವರಿಗೂ ಹೇಳಿದರು. ಮುಂದುವರಿದು-‘ಅರ್ಜುನ ಸುಭದ್ರೆಯನ್ನು ಮರೆತು, ನಾಗಲೋಕದಲ್ಲಿ ಉಲೂಚಿಯ ಮೋಹದಲ್ಲಿ ಮೈಮರೆತಿರುತ್ತಾನೆ. ಆಗ ಕೃಷ್ಣ ಘಟೋತ್ಕಚನನ್ನು ಕರೆಸಿ, ಅರ್ಜುನನನ್ನು ಮಾಯೆಯಿಂದ ಎತ್ತಿಕೊಂಡು ಬಾ ಎನ್ನುತ್ತಾನೆ. ಘಟೋತ್ಕಚ ಹಾಗೇ ಮಾಡಿದಾಗ, ಮತ್ತೆ ತನ್ನ ‘ಪ್ರಭಾವ’ ತೋರಿ ನಾಗಲೋಕದ ನೆನಪೇ ಅರ್ಜುನನಿಗೆ ಹೋಗಿಬಿಡುವಂತೆ ಮಾಡುತ್ತಾನೆ ಕೃಷ್ಣ. ಜತೆಗೆ, ಅರ್ಜುನನನ್ನು ಕಾವಿಧಾರಿಯನ್ನಾಗಿ ಮಾಡಿಬಿಡುತ್ತಾನೆ. ನಂತರ, ಸುಭದ್ರೆಯನ್ನು ಕರೆದು-‘ಸೋದರಿ, ನಮ್ಮ ಅರಮನೆಗೆ ಸ್ವಾಮೀಜಿಯೊಬ್ಬರು ಬಂದಿದ್ದಾರೆ. ಅವರ ಅಶೀವಾದ ತಗೋ, ಒಳ್ಳೆಯದಾಗುತ್ತೆ’ ಎನ್ನುತ್ತಾನೆ. ಕೃಷ್ಣನ ಸಲಹೆಯಂತೆ ಸುಭದ್ರೆ ಸನ್ಯಾಸಿ ವೇಷದಲ್ಲಿದ್ದ ಅರ್ಜುನನ ಬಳಿ ಬರುತ್ತಾಳೆ. ಆಗ ದೇವರ ಪೂಜೆಗೆ ಸಿದ್ಧವಾಗಿದ್ದ ಅರ್ಜುನ, ಸುಭದ್ರೆಯನ್ನು ಕಂಡು ಮೋಹಗೊಳ್ಳುತ್ತಾನೆ. ದೇವರಿಗೆ ಪುಷ್ಪಾರ್ಚನೆ ಮಾಡುತ್ತಲೇ ಹಾಡಲು ಶುರುಮಾಡುತ್ತಾನೆ. ಆ ಸಂದರ್ಭಕ್ಕೆ ‘ ಆರಾಧಿಸುವೆ ಮದನಾರಿ’ ಹಾಡು ಹಾಕೋಣ ಎಂದೂ ರಾಜ್ ಕುಮಾರ್ ಅವರಿಗೆ ಹೇಳಿದರು.
ಮುಂದೆ ಏನಾಯಿತು? ಒಂದೇ ದೃಶ್ಯದಲ್ಲಿ ಐದು ಭಿನ್ನ ಗೆಟಪ್‌ನಲ್ಲಿ ರಾಜ್‌ಕುಮಾರ್ ಅವರನ್ನು ತೋರಿಸಬೇಕೆಂಬ ಐಡಿಯಾ ಹೇಗೆ ಬಂತು ಎಂಬುದನ್ನು ‘ಬಭ್ರುವಾಹನ’ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಭಾರ್ಗವ ಅವರು ವಿವರಿಸಿದ್ದು ಹೀಗೆ:
ಹುಣಸೂರು ಕೃಷ್ಣಮೂರ್ತಿಯವರು ನನ್ನ ಚಿಕ್ಕಪ್ಪ. ಅವರ ನಿರ್ದೇಶನದ ಚಿತ್ರಗಳಲ್ಲಿ ನಾನು ಸಹಾಯಕ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿರುತ್ತಿದ್ದೆ. ಬಭ್ರುವಾಹನ ಚಿತ್ರಕ್ಕೆ ಯಾವ ಹಾಡನ್ನು ಹೇಗೆ ಚಿತ್ರಿಸಬೇಕು ಎಂದೆಲ್ಲ ಅವರು ತಲೆಕೆಡಿಸಿಕೊಂಡಿದ್ದರಲ್ಲ? ಅದೇ ಸಂದರ್ಭದಲ್ಲಿ ನನಗೆ ಶಿವಾಜಿ ಗಣೇಶನ್ ಅಭಿನಯದ ತಮಿಳಿನ ಹಳೆಯ ಚಿತ್ರವೊಂದು ನೆನಪಾಯಿತು. ಅದರಲ್ಲಿ ಒಂದು ಹಾಡಿನ ಸನ್ನಿವೇಶದಲ್ಲಿ ಶಿವಾಜಿಯವರು ಐದು ಸಂಗೀತವಾದ್ಯಗಳನ್ನು ನುಡಿಸುವ ದೃಶ್ಯವಿತ್ತು. ಈ ದೃಶ್ಯವನ್ನೇ ‘ಬಭ್ರುವಾಹನ’ದಲ್ಲಿ ಏಕೆ ತರಬಾರದು ಎನ್ನಿಸಿತು. ತಕ್ಷಣವೇ ಇದನ್ನೇ ಹುಣಸೂರು ಅವರಿಗೆ ಹೇಳಿದೆ. ಅವರು- ಅಲ್ಲಯ್ಯಾ, ಇಂಥ ಸಂದರ್ಭ ಆಗಲೇ ತಮಿಳು ಸಿನಿಮಾದಲ್ಲಿ ಬಂದಿದೆ ಅಂತ ನೀನೇ ಹೇಳ್ತಾ ಇದೀಯ. ಅದನ್ನೇ ನಾವು ರಿಪೀಟ್ ಮಾಡೋದು ಸರಿಯಾ? ಅದನ್ನು ಜನ ಒಪ್ತಾರಾ? ಅದಕ್ಕಿಂತ ಮುಖ್ಯವಾಗಿ ಆ ದೃಶ್ಯ ಈ ಪೌರಾಣಿಕ ಸಿನಿಮಾಕ್ಕೆ ಹೊಂದಿಕೆಯಾಗುತ್ತಾ?’ ಎಂದರು.
‘ಅಪ್ಪಾಜಿ, ಆ ದೃಶ್ಯವನ್ನು ಬೇಸ್ ಆಗಿ ಇಟ್ಟುಕೊಳ್ಳೋಣ. ನಾವು ಬೇರೆಯದೇ ರೀತಿಯಲ್ಲಿ ತೆಗೆಯೋಣ. ಆಗ ಜನ ಖಂಡಿತ ಇಷ್ಟಪಡ್ತಾರೆ’ ಅಂದೆ. ಈ ಮಾತು ಹುಣಸೂರು ಅವರಿಗೆ ಒಪ್ಪಿಗೆಯಾಯಿತು. ತಕ್ಷಣವೇ ತಲೆ ಓಡಿಸಿ, ಮೃದಂಗ, ವೀಣೆ, ಕೊಳಲು ಹಾಗೂ ಘಟಂ ನುಡಿಸುವ ನಾಲ್ಕು ಭಿನ್ನ ವೇಷ ಹಾಗೂ ಈ ನಾಲ್ಕೂ ಜನರ ಮಧ್ಯೆ ಸಂಗೀತಗಾರನನ್ನು ಕೂರಿಸಲು; ಅವನು ಹಾಡುತ್ತಾ ಸ್ವರಗಳ ತಾಳ ಹಾಕುತ್ತಾ ಹೋದಂತೆಲ್ಲ ಉಳಿದ ಪಾತ್ರಗಳು ವಾದ್ಯ ಮೇಳದ ಸಾಥ್ ಕೊಡುವಂತೆ ಚಿತ್ರಿಸಲು ಹುಣಸೂರು ನಿರ್ಧರಿಸಿದರು. ರಾಜ್‌ಕುಮಾರ್ ಅವರಿಗೂ ಈ ವಿಷಯ ತಿಳಿಸಿದರು.
ಈ ಪಾತ್ರಗಳ ನಿರ್ವಹಣೆಗೆ ರಾಜ್‌ಕುಮಾರ್ ಅವರು ಮಾಡಿಕೊಂಡ ಸಿದ್ಧತೆಯ ಬಗ್ಗೆ ನಾಲ್ಕು ಮಾತು. ರಾಜ್ ಅವರಿಗೆ ಸಂಗೀತದ ಬಗ್ಗೆ ತುಂಬ ಚನ್ನಾಗಿ ಗೊತ್ತಿತ್ತು. ಆದರೆ ಅವರು ನನಗೆಲ್ಲಾ ಗೊತ್ತಿದೆ ಎಂದು ಸುಮ್ಮನಾಗಲಿಲ್ಲ. ಬದಲಿಗೆ, ಘಟಂ, ಮೃದಂಗ, ವೀಣೆ ಹಾಗೂ ಕೊಳಲು ನುಡಿಸುವವರನ್ನು ಹತ್ತಾರು ಬಾರಿ ಗಮನಿಸಿದರು. ವಾದ್ಯಗಳನ್ನು ಬಾರಿಸುವ ಸಂದರ್ಭದಲ್ಲಿ ಕಣ್ಣಿನ ಚಲನೆ, ಹಣೆಯ ನಿರಿಗೆ ಹಾಗೂ ಕೆನ್ನೆಯ ಅದುರುವಿಕೆಯಲ್ಲಿ ಕಲಾವಿದರು ತೋರಿಸುವ ಭಾವನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಆಯಾ ವಾದ್ಯಗಳಿಗೆ ತಕ್ಕಂತೆ ಮುಖ ಭಾವ ಪ್ರದರ್ಶನಕ್ಕೆ ತಮ್ಮನ್ನು ಸಿದ್ಧಮಾಡಿಕೊಂಡರು. ನಂತರ -‘ಗುರುಗಳೇ ನಾನೀಗ ರೆಡಿ’ ಎಂದರು. ಆರಾಸುವೆ ಮದನಾರಿ… ಹಾಡಿಗೆ, ಒಂದೊಂದು ಪಾತ್ರಕ್ಕೆ ಒಂದೊಂದು ಬಗೆಯ ಮಾಸ್ಕ್ ತಯಾರಿಸಲಾಗಿತ್ತು. ಬಭ್ರುವಾಹನ ತಯಾರಾಗಿದ್ದು ೧೯೭೪ರಲ್ಲಿ. ಆ ದಿನಗಳಲ್ಲಿ ಕಟ್ ಅಂಡ್ ಪೇಸ್ಟ್ ವಿದ್ಯೆಯಾಗಲಿ, ಗ್ರಾಫಿಕ್ ತಂತ್ರಜ್ಞಾನದ ಹೆಸರಾಗಲಿ ಯಾರಿಗೂ ಗೊತ್ತಿರಲಿಲ್ಲ. ಆಗ ಐದು ಪಾತ್ರದಾರಿಗಳ ಐದು ಮಾಸ್ಕ್ ತಯಾರಿಸಿಕೊಂಡು ಮೂರು ಕ್ಯಾಮರಾ ಬಳಸಿ ಮೂರು ದಿಕ್ಕುಗಳಿಂದ ಶೂಟ್ ಮಾಡಬೇಕಾಗಿತ್ತು.
ಇಷ್ಟೆಲ್ಲ ಸಿದ್ಧತೆಯ ನಂತರ ಒಂದು ದಿನ ಬೆಳಗ್ಗೆ ಎಂಟು ಗಂಟೆಗೇ ಶೂಟಿಂಗ್ ಶುರುವಾಯಿತು. ಆರಂಭದಿಂದಲೂ ಅಪಾರ ಉತ್ಸಾಹದಿಂದ ರಾಜ್ ಅವರು-‘ಗುರುಗಳೇ, ಈ ದೃಶ್ಯ ಬಹಳ ಚನ್ನಾಗಿ ಬರ್‍ತಾ ಇದೆ. ಮುಂದುವರಿಸೋಣ’ ಎನ್ನುತ್ತಲೇ ಎಲ್ಲರನ್ನೂ ಉತ್ತೇಜಿಸಿದರು. ಮಧ್ಯಾಹ್ನ ೧೨ರವರೆಗೂ ನಿರಂತರವಾಗಿ ಶೂಟಿಂಗ್ ನಡೆಸಿ ಸ್ವಲ್ಪ ಹೊತ್ತು ವಿರಾಮ ಘೋಷಿಸಲಾಯಿತು. ನಮಗೋ, ಬೆಳಗಿನಿಂದ ಚಿತ್ರೀಕರಿಸಿದ ದೃಶ್ಯಗಳು ಹೇಗೆ ಬಂದಿವೆಯೋ ಎಂದು ನೋಡುವ ಅವಸರ. ಈ ಆಸೆಯಿಂದಲೇ ರಶಸ್ ನೋಡಲು ಕುಳಿತೆವು.
ಆ ಮಟಮಟ ಮಧ್ಯಾಹ್ನದಲ್ಲಿ ಬಿಟ್ಟಕಣ್ಣು ಬಿಟ್ಟಂತೆಯೇ ರಶಸ್ ನೋಡಲು ಕೂತವರಿಗೆ ಎದೆಯೊಡೆದವಂತಾಯಿತು. ಏಕೆಂದರೆ, ಎಲ್ಲಿ ತಪ್ಪಾಗಿತ್ತೋ ಗೊತ್ತಿಲ್ಲ. ಬೆಳಗಿಂದ ಚಿತ್ರೀಕರಿಸಿದ್ದೆವಲ್ಲ? ಆ ಪೈಕಿ ಒಂದು ದೃಶ್ಯವೂ ಬಂದಿರಲಿಲ್ಲ. ಅಷ್ಟೂ ಹಾಳಾಗಿಹೋಗಿತ್ತು. ಮತ್ತೆ ಮೊದಲಿನಿಂದ ಕೆಲಸ ಶುರುಮಾಡಲೇಬೇಕಿತ್ತು.
ವಿಷಯ ತಿಳಿದ ಹುಣಸೂರು ಕೃಷ್ಣಮೂರ್ತಿಗಳು ಬೇಸರದಿಂದ ಕೂತುಬಿಟ್ಟರು. ರಾಜ್‌ಕುಮಾರ್ ಅವರಿಗೆ ಈ ವಿಷಯ ತಿಳಿಸುವುದು ಹೇಗೆ ಎಂಬುದು ಎಲ್ಲರ ಸಂಕಟವಾಗಿತ್ತು. ನಾನು ಸಂಕೋಚದಿಂದಲೇ ರಾಜ್ ಅವರ ಬಳಿ ಹೋಗಿ ಎಲ್ಲ ವಿಷಯ ತಿಳಿಸಿದೆ. ‘ಸಾರ್, ಹೀಗಾಗಿರುವುದಕ್ಕೆ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ’ಎಂದೂ ಸೇರಿಸಿದೆ.
ಅದಕ್ಕೆ ಅಣ್ಣಾವ್ರು ಹೇಳಿದ್ದೇನು ಗೊತ್ತೆ? ‘ಭಾರ್ಗವ ಅವರೇ, ಕೆಲಸ ಅಂದ ಮೇಲೆ ಇಂಥ ತಪ್ಪುಗಳೆಲ್ಲ ಆಗೋದು ಸಹಜ. ಆಗೋದು ಆಗಿಹೋಗಿದೆ. ಈಗ ನಾನು ಬೇಸರ ಮಾಡಿಕೊಂಡ್ರೂ ಅಷ್ಟೆ. ಮಾಡಿಕೊಳ್ಳದಿದ್ರೂ ಅಷ್ಟೆ. ಅಲ್ಲವೆ? ಈಗ ಹೇಗಿದ್ರೂ ಈ ದೃಶ್ಯದ ಚಿತ್ರೀಕರಣ ಚನ್ನಾಗಿ ಬರ್‍ತಾ ಇದೆ ತಾನೆ? ಅದನ್ನೇ ಇನ್ನೊಮ್ಮೆ ತೆಗೆಯೋಣ. ಬೆಳಗ್ಗೆ ಆಕಸ್ಮಿಕವಾಗಿ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಈಗ ಒಂದು ಅವಕಾಶ ತಂತಾನೇ ಸಿಕ್ಕಿದೆ. ಅದನ್ನು ಬಳಸಿಕೊಳ್ಳೊಣ. ಮಧ್ಯಾಹ್ನ ಊಟವಾದ ನಂತರ ಬೆಳಗ್ಗೆ ಹಾಕ್ಕೊಂಡು ಬಂದಿದ್ದ ಮಾಸ್ಕ್ ಅನ್ನೇ ಮತ್ತೆ ಹಾಕ್ಕೊಂಡು ಬರ್‍ತೇನೆ. ನೀವೂ ಸಿದ್ಧರಾಗಿ. ಶಿವಾ ಅಂತ ಜಮಾಯಿಸ್‌ಬಿಡೋಣ’ ಎಂದರು.
ರಾಜ್‌ಕುಮಾರ್ ಅವರೇ ಹೀಗೆ ಹೇಳಿದ್ದು ಕೇಳಿ ನಮ್ಮ ಚಿಕ್ಕಪ್ಪನವರಿಗೂ ಉತ್ಸಾಹ ಬಂತು. ಅವರೂ ಗೆಲುವಿನಿಂದ ಎದ್ದು ನಿಂತರು.
ನೋಡನೋಡುತ್ತಲೇ ಶೂಟಿಂಗ್ ಮತ್ತೆ ಶುರುವಾಯಿತು. ಬೆಳಗ್ಗೆ ಆಗಿಹೋದ ಪ್ರಮಾದದ ಬಗ್ಗೆ ಏನೇನೂ ಗೊತ್ತಿಲ್ಲದವರಂತೆ ರಾಜ್‌ಕುಮಾರ್ ಪಾತ್ರದಲ್ಲಿ ಲೀನವಾಗಿ ಹೋದರು. ಮಧ್ಯಾಹ್ನ ಶುರುವಾದ ಹಾಡಿನ ಚಿತ್ರೀಕರಣ ಮುಗಿದಾಗ ರಾತ್ರಿ ಎಂಟುಗಂಟೆಯಾಗಿತ್ತು… ಕಡೆಗೊಮ್ಮೆ ರಶಸ್ ನೋಡಿದಾಗ ಎಲ್ಲರಿಗೂ ಕಣ್ತುಂಬಿಬಂದಿತ್ತು…
ಹಳೆಯ ನೆನಪುಗಳಲ್ಲಿ ಹೀಗೆ ತೇಲಿ ಹೋಗಿ ಖುಷಿಪಟ್ಟರು ಭಾರ್ಗವ…
***
ಹೇಳಲೇಬೇಕಾದ ಮಾತು: ‘ಆರಾಧಿಸುವೆ ಮದನಾರಿ’ ಗೀತೆಯಲ್ಲಿ ರಾಜ್‌ಕುಮಾರ್ ಐದು ಭಿನ್ನ ಗೇಟಪ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಐದೂ ಪಾತ್ರಗಳ ಮುಖಭಾವ ಪ್ರದರ್ಶನವನ್ನು ಪದಗಳಲ್ಲಿ ಹಿಡಿದಿಟಿರುವುದು ಸಾಧ್ಯವೇ ಇಲ್ಲ. ರಾಜ್ ಅವರ ಪರಿಪೂರ್ಣ ನಟನೆ ಸಾಕ್ಷತ್ ಅರ್ಜುನನೂ ಬೆರಗಿನಿಂದ ಚಪ್ಪಾಳೆ ಹೊಡೆದು ವಾಹ್‌ವಾಹ್ ಎಂದು ಉದ್ಗರಿಸುವ ಮಟ್ಟಕ್ಕಿದೆ. ಇಂಥದೊಂದು ಅಪರೂಪದ ದೃಶ್ಯ ಭಾರತದ ಬೇರಾವುದೇ ಭಾಷೆಯ ಚಿತ್ರಗಳಲ್ಲೂ ಈವರೆಗೆ ಬಂದಿಲ್ಲ. ಮುಂದೆ ಬರುತ್ತಾ?ಬಹುಶ: ಇಲ್ಲ.
ತೆಲುಗಿನಲ್ಲಿ ಎನ್. ಟಿ. ಆರ್ ಅವರ ಅದ್ಭುತ ಅಭಿನಯವಿರುವ ಜಗದೆಕವೀರುನಿ ಕಥಾ ಚಿತ್ರಸಲ್ಲಿ ಶಿವಶಂಕರಿ ಶಿವಾನಂದಲಹರಿ ಎನ್ನುವ ಹಾಡಿನಲ್ಲೂ ಇದೇ ರೀತಿಯ ಪ್ರಯೋಗವಿದೆ.
Akkareya Shaamala,
namaskara.
haadina bagge bareyuvaagale nange ee anumaana ittu.aadre cinema da hesaru nenapige barale illa.haagaagi aa bagge bareyade haage bitte…maahithi tilisiddakke thanx.
Manikanth.
ಆ ದೃಶ್ಯಕ್ಕೆ ಭಾರ್ಗವ ಅವರು ಹೇಳಿದ ಸ್ಫೂರ್ತಿ – ಶಿವಾಜಿ ಗಣೇಶನ್ ಅಭಿನಯಿಸಿದ್ದ ತಮಿಳು ಚಿತ್ರ “ತಿರುವಿಳ್ಳೈಯ್ಯಾಡಲ್”ನಲ್ಲಿರುವ “ಪಾಟ್ಟುಂ ನಾನೇ…..” ಎಂಬ ಹಾಡು.
– ಕೇಶವ ಮೈಸೂರು
ಅಣ್ಣಾವ್ರು ಮಹಾನ್ ಕಲಾವಿದರು, ಅವರಿಗೆ ಅವರೇ ಸಾಟಿ, ಕೃಷ್ಣಮೂತಿ{ಯಂಥವರು ಮುಂದೆ ಹುಟ್ಟೊಲ್ಲ ಬಿಡಿ.
[…] Aaraadhisuve Madanaari aaraadhisuve aradisuve Madhanaari madanari […]
ಆಮಾರ ನೊಲವಣೆ ಪರಿಹರಿಸು ……ಈ ಶಬ್ದಗಳು ಸರಿಯಾಗಿದೆಯೇ ಎಂದು ಅನುಮಾನ. ” ಆ ಮಾರ ನುರವನೇ ” ಎಂದಾಗಬೇಕಲ್ಲವೇ? ಆಮಾರ ನೊಲವಣೆ ಎಂದರೇನು? ಆ ಮಾರ ಎಂದರೆ ಮನ್ಮಥ, ಉರ ಎಂದರೆ ಬಾಣ. ಹಾಗಾಗಿ ಇದು ಆ ಮಾರನುರವನೆ ಎಂದಾಗಬೇಕು.